ಮಕ್ಕಳಿಗೆ ರಜೆ ಇದ್ದುದರಿಂದ ಅವರೆಲ್ಲ ಒಂದಾಗಿ ಪುಟ್ಟಜ್ಜಿಯ ಮನೆಗೆ ಬಂದರು. ಅಜ್ಜಿ ಅಂಗಳದಲ್ಲಿ ಕುಳಿತು ಅಕ್ಕಿ ಆರಿಸುತ್ತಿದ್ದವಳು ಮಕ್ಕಳನ್ನ ನೋಡಿ ‘ಬನ್ನಿ ಮಕ್ಕಳೇ ನಿಮ್ಮನ್ನೇ ನೆನೆಸಿಕೊಳ್ಳುತ್ತಿದ್ದೆ’ ಎಂದಳು.
ಮಕ್ಕಳ ಕುತೂಹಲ ಹೆಚ್ಚಿತು. ‘ಯಾಕಜ್ಜಿ ನಮ್ಮ ನೆನಪು?’ ಎಂದು ಕೇಳಿದವು ಮಕ್ಕಳು. ’ ಒಂದು ಕತೆ ನೆನಪಿಗೆ ಬಂತು ಹಾಗೇ ನಿಮ್ಮ ನೆನಪು’ ಎಂದಳು ಅಜ್ಜಿ ನಸು ನಕ್ಕು.
‘ಹಾಗಾದರೆ ಕತೆ ಹೇಳಜ್ಜಿ’ ಎಂದು ಮಕ್ಕಳು ಅಜ್ಜಿಯ ಸುತ್ತ ಕುಳಿತವು. ಅಜ್ಜಿ ಮಕ್ಕಳ ಮುಖ ನೋಡಿ ನಿಧಾನವಾಗಿ ಕತೆ ಹೇಳತೊಡಗಿದಳು–
ಶ್ರೀಮಂತನೊಬ್ಬನ ಭಾರೀ ಮನೆ. ಮನೆಯ ಸುತ್ತ ತೋಟ, ಗಿಡ, ಪೊದೆ, ಸಾಲು ಸಾಲು ಮರ.
ಶ್ರೀಮಂತನ ಮನೆಯಲ್ಲಿ ಒಂದು ಗಡವಾ ಬೆಕ್ಕು. ಈ ಬೆಕ್ಕು ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮುಗಿಸಿ, ದೇವರ ಪೂಜೆ ಮುಗಿಸಿ, ಒಂದು ಬಿಳಿ ಶಾಲು ಹೊದ್ದು ಮನೆಯಿಂದ ಹೊರ ಬೀಳುತ್ತಿತ್ತು. ಹೀಗೆ ಹೊರಬಿದ್ದ ಮಾರ್ಜಾಲ ನಿಧಾನವಾಗಿ ಇಡೀ ತೋಟದಲ್ಲಿ ಸುತ್ತಾಡುತ್ತಿತ್ತು. ಹೀಗೆ ಸುತ್ತಾಡುತ್ತ ಯಾವ ಮರದ ಹಿಂದೆ ಹಕ್ಕಿ ಮರಿ ಹಾಕಿದೆ, ಗೂಡು ಕಟ್ಟಿದೆ, ಮೊಟ್ಟೆ ಇಟ್ಟಿದೆ, ಅನ್ನುವುದನ್ನ ನೋಡುತ್ತಿತ್ತು. ಬೇರೆ ಕೆಲ ಪ್ರಾಣಿಗಳು ಕೂಡ ಅದರ ಕಣ್ಣಿಗೆ ಬೀಳುತ್ತಿದ್ದವು. ಬೆಕ್ಕು ಬೆಳಗಿನ ಉಪಾಹಾರ ಅಲ್ಲಿ ಮುಗಿಸಿಕೊಂಡು ಮತ್ತೆ ತನ್ನ ಮನೆಗೆ ಹಿಂತಿರುಗುತ್ತಿತ್ತು ಡರ್ ಎಂದು ತೇಗುತ್ತ.
ಒಂದು ದಿನ ಈ ಬೆಕ್ಕು ತೋಟದ ಸುತ್ತಾಟಕ್ಕೆ ಬಂದಿದೆ. ಪೊದೆ, ಗಿಡ, ಮರ ಎಂದೆಲ್ಲ ನೋಡುತ್ತ ಹೋಗುತ್ತಿದೆ. ಆಗ ಅದರ ಕಣ್ಣಿಗೆ ಪೊದೆಯೊಂದರ ಹಿಂದೆ ಒಂದು ಹಕ್ಕಿ ಕಂಡಿದೆ. ಹಕ್ಕಿಯ ಮುಂದೆ ಅದೇ ಹಾಕಿದ ಒಂದು ಮೊಟ್ಟೆ. ದುಂಡನೆಯ ಮೊಟ್ಟೆ ನೋಡಿ ಬೆಕ್ಕಿಗಾಯ್ತು ಸಂತಸ ಬೆಳಕು ಹರಿಯೆ ತನ್ನ ಪಾಲಿಗೊದಗಿ ಬಂತು ಗ್ರಾಸ ತಾನು ಈಗ ತೃಪ್ತಿಯಿಂದ ಇದನು ತಿಂದು ತೇಗುವೆ ಎಂದು ಬೆಕ್ಕು ಪೊದೆಯ ಬಳಿಗೆ ಧಾವಿಸಿ ತಾ ಬಂದಿದೆ.
‘ನಿಲ್ಲು ನಿಲ್ಲು ಮಾರ್ಜಾಲವೇ ತಿನ್ನಬೇಡ ಮೊಟ್ಟೆಯ’ ಹಕ್ಕಿಯೊಂದು ಓಡಿ ಬಂದು ಅದನು ಬೇಡಿಕೊಂಡಿತು. ‘ಒಂದೇ ದಿನದ ಮೊಟ್ಟೆಯಲ್ಲಿ ಇಲ್ಲ ರಕ್ತ ಮಾಂಸವು ನಾಲ್ಕು ದಿನ ಬಿಟ್ಟರದು ಕೊಬ್ಬಿಕೊಂಡು ಬೆಳೆವುದು. ‘ಆಗ ಅದನು ನಾನು ನಿನಗೆ ಕೊಟ್ಟೆ ಕೊಡುವೆ’ ಎಂದಿತು. ಹಕ್ಕಿ ಮಾತ ಕೇಳಿ ಬೆಕ್ಕು ‘ಅದೂ ಸರಿ’ ಎಂದಿತು...ಹತ್ತು ದಿನ ಬಿಟ್ಟು ಬರುವೆ ಕಾದಿರಿಸು ಇದನು’. ಬೆಕ್ಕು ಹಕ್ಕಿಗೆ ಹೇಳಿ ತನ್ನ ಮನೆಗೆ ಸಾಗಿತು. ಎಂಟು ಹತ್ತು ದಿನಗಳುರುಳೆ ಮೊಟ್ಟೆ ದೊಡ್ಡದಾಯಿತು. ಬೆಕ್ಕು ನಿತ್ಯ ಬಂದು ಮೊಟ್ಟೆಯನ್ನ ನೋಡುತ್ತಿತ್ತು. ಮೊಟ್ಟೆಯಲ್ಲಿ ಏನು ಇಲ್ಲ ಲೋಳೆ ಲೋಳೆ ದ್ರಾವಕ. ಮೊಟ್ಟೆ ಒಡೆದು ಹೊರ ಬರಲಿ ಅದುವೆ ನಿನ್ನ ಊಟಕ’
ಹಕ್ಕಿ ಮಾತ ಕೇಳಿ ಬೆಕ್ಕ ಬಾಯಲಿ ನೀರೂರಿತು. ಮಾಂಸ ರಕ್ತ ಎಲುಬು ಮಜ್ಜೆ ಎಲ್ಲ ತಿನ್ನಬಹುದೆಂದಿತು. ಈ ಕನಸ ಕಾಣುತ ಅದು ಕೆಲ ದಿನಗಳ ನೂಕಿತು. ಮೊಟ್ಟೆ ಒಡೆದು ಹಕ್ಕಿ ಮರಿ ಆದಿನ ಹೊರಬಂದಿತು.
ಹಾಡು ನಿಲ್ಲಿಸಿ ಪುಟ್ಟಜ್ಜಿ ಕತೆಯನ್ನ ಮುಂದುವರೆಸಿದಳು. ಬೆಕ್ಕು ದಿನಾ ಬಂದು ಬಂದು ಹಕ್ಕಿಯನ್ನ ನೋಡಿಕೊಂಡು ಹೋಗುತ್ತಲಿತ್ತು. ಹಕ್ಕಿ ಮರಿ ದೊಡ್ಡದಾದಷ್ಟೂ ಬೆಕ್ಕಿಗೆ ಸಂತೋಷ.
ಅಂದಿನ ದಿನದ ಪುಷ್ಕಳ ಊಟ ನೆನಪಿಸಿಕೊಂಡು ಅದು ಸಂಭ್ರಮ ಪಡುತ್ತಲಿತ್ತು. ದಿನ ಉರುಳಿ ಹಕ್ಕಿ ಮರಿ ದಷ್ಟಪುಷ್ಟವಾಗಿ ಬೆಳೆಯಿತು. ಒಂದು ದಿನ ಬಂದ ಬೆಕ್ಕು ಹಕ್ಕಿಗೆ ಹೇಳಿತು. ‘ನಾಳೆ ದಿನ ಬೆಳಿಗ್ಗೆ ನಾನು ಬರುತ್ತೇನೆ. ನಿನ್ನ ಹಕ್ಕಿ ಮರಿ ಸಿದ್ಧವಾಗಿರಲಿ. ನಾಳೆ ನನಗೆ ಇದು ಆಹಾರ ತಿಳಿಯಿತೇ?’ ಎಂದು. ಆಯಿತು ಪ್ರಭು ಎಂದಿತು ಹಕ್ಕಿ.
ಮಾರನೆಯ ದಿನ ಮುಂಜಾನೆ ಬೆಳಕು ಹರಿದು ಬರಲು ಸಂಭ್ರಮದಿ ಬೆಕ್ಕು ಬಂತು ಹಕ್ಕಿ ಮರಿಯ ತಿನ್ನಲು ದೊಡ್ಡ ಹಕ್ಕಿ, ಮರಿ ಹಕ್ಕಿಯ ಬೆಕ್ಕಿಗೆ ತಂದು ಒಪ್ಪಿಸಿ ‘ನಮ್ಮದೊಂದು ಪದ್ಧತಿ ಇದೆ ಕೇಳಿ ಸ್ವಾಮಿ’ ಎಂದಿತು. ‘ಹಕ್ಕಿ ಮರಿಯ ನಿಮ್ಮ ಬಾಯಿಗೆ ಹಾಕಿಕೊಳ್ಳುವಾಗ ಅಂಗೈ ಮೇಲೆ ಹಕ್ಕಿಯನ್ನ ಕೂರಿಸಿಕೊಳ್ಳಿ ದಯವಿಟ್ಟು ‘ಒಂದು, ಎರಡು, ಮೂರು ಎಂದು ಗಾಳಿಯಲ್ಲಿ ತೂಗಿ ಆನಂತರವೇ ಹಕ್ಕಿ ಮರಿಯ ಬಾಯಿಗೆ ಹಾಕಿಕೊಳ್ಳಿ’ ‘ಅಷ್ಟೆ ತಾನೆ, ಆ ಕೆಲಸವ ನಾನು ಮಾಡುವೆ ಬಿಡು’ ಬೆಕ್ಕು ಹಕ್ಕಿ ಮರಿಯ ಅಂಗೈಯಲ್ಲಿ ಎತ್ತಿ ಕೊಂಡಿತು.
ಒಂದು ಎರಡು ಎಣಿಸೆ, ಮರಿ ಸುತ್ತ ಮುತ್ತ ನೋಡಿತು ಯಾವ ಮರ ಎಲ್ಲಿದೆ ಎಂಬುದನ್ನ ಹಕ್ಕಿ ಅರಿಯಿತು. ಬೆಕ್ಕಿನ ಅಂಗೈಲಿ ಕುಳಿತ ಮರಿ ತನ್ನ ಮೈ ಕೊಡವಿತು ಪುಕ್ಕಗಳನು ಸಡಿಲ ಬಿಟ್ಟು ಹಾರಲು ಸಿದ್ಧವಾಯಿತು. ಬೆಕ್ಕು ಸಂಭ್ರಮದಲಿ ಒಂದು ಎರಡು ಎಣಿಸಿತು. ಬೆಕ್ಕು ಮೂರು ಅನ್ನುತಿರಲು ಹಕ್ಕಿ ’ಪುರ್’ ಹಾರಿತು.
ಅಂಗೈಯಲಿ ಕುಳಿತ ಹಕ್ಕಿ ಬಾಯಿಗೇನೂ ಎಟುಕಲಿಲ್ಲ. ಬಯಸಿದಂತ ಭೋಜನ ಬೆಕ್ಕಿಗೇನು ದೊರಕಲಿಲ್ಲ. ಮರದ ನಡುವೆ ದಾರಿ ಕಂಡ ಹಕ್ಕಿ ಹಾರಿ ಹೋಯಿತು ನೀಲಿ ಆಕಾಶದಲ್ಲಿ ಹಕ್ಕಿ ಹಾರಿ ಕಾಣೆಯಾಯಿತು. ಅಂಗಳದಲ್ಲಿ ಕುಳಿತ ಮಕ್ಕಳು ಮನೆಯ ಹಂಚು ಹಾರಿ ಹೋಗುವ ಹಾಗೆ ನಕ್ಕವು. ಅಜ್ಜಿ ಆರಿಸಿದ ಅಕ್ಕಿಯ ಮೊರ ಹಿಡಿದಕೊಂಡು ಒಳ ಹೋದಳು.
(ಮಕ್ಕಳ ನಾಟಕವೊಂದನ್ನು ಆಧರಿಸಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.