ADVERTISEMENT

ದಿಲ್ಲಿಯೆಂಬ ನಾಯಕಸಾನಿಗೆ

ಕವಿತೆ

ಡಾ.ಎಚ್.ಎಲ್.ಪುಷ್ಪ
Published 11 ಮೇ 2013, 20:00 IST
Last Updated 11 ಮೇ 2013, 20:00 IST
ದಿಲ್ಲಿಯೆಂಬ ನಾಯಕಸಾನಿಗೆ
ದಿಲ್ಲಿಯೆಂಬ ನಾಯಕಸಾನಿಗೆ   

ಕೆಂಪು ಹೂವ ಹಾಸಿಗೆ
ಕೆಂಪು, ಕೆಂಪು ಕಡುಗೆಂಪು ಗುಲಾಬಿ
ಕೆಂಪು ಬಣ್ಣದ ಕೋಟೆ ಕೊತ್ತಳಗಳೊಡತಿ
ಎಲೆ ದಿಲ್ಲಿಯೆಂಬ ನಾಯಕಸಾನಿ
ನಿನ್ನ ಸೆರಗಿನ ನೂಲುಗಳ ಬಿಡಿಸಿದರೆ
ರಕ್ತಸಿಕ್ತ ಎಳೆಗಳು ಒಂದೊಂದೆ ಕಳಚಿ ಕೆಳಗಿಳಿದು
ಈ ಇಂಡಿಯಾದ ಚರಿತ್ರೆಯ ಪುಟಗಳು
ಸರಸರನೆ ತೆರೆದುಕೊಳ್ಳುತ್ತವೆ ಕಿರ್ರನೆ
ಮುರಿದ ಮಾಯಾದಿಡ್ಡಿಗಳಂತೆ.

ನಿನ್ನನ್ನೇ ಏಕಪತ್ನಿಯೆಂದು ನಂಬಿ ಕೂಡಲೇ ಇಲ್ಲ
ಯಾವ ಗಂಡನೂ ದಿಲ್ಲಿಯೆಂಬ ದರ್ಬಾರಲ್ಲಿ.
ನೀನೂ ಯಾವನನ್ನೂ ನಂಬಿ ಗೆಜ್ಜೆ ಕಟ್ಟಲಿಲ್ಲ
ಮತ್ತೆ ಮತ್ತೆ ಕತ್ತಿವರಸೆ, ಫಿರಂಗಿ ಗುಂಡು
ನೆತ್ತಿಯ ಮೇಲೆ ನುಂಗಿ ನೀರು ಕುಡಿವ ಬಾಂಬುಗಳಿವೆ
ವಿಷಮ ದಾಂಪತ್ಯದಲ್ಲಿ ಜಾರುವ ಪಿಂಡಗಳಂತೆ.

ಇತಿಹಾಸವೆಂದರೆ ಮುಖ ಮೈ ಮೊಲೆ ಕೆತ್ತಿಸಿಕೊಂಡ
ಭಗ್ನಮೂರ್ತಿಗಳು, ರಾತ್ರಿ ಜೀವ ತಳೆಯುವ ಭೂತ ಪ್ರೇತಗಳು
ಎಲ್ಲಿ ನಿನ್ನ ಕೋಮಲತೆ ಕುಡಿಯೊಡೆಯುತ್ತಿತ್ತೋ
ಅಲ್ಲೇ ಚಿಮ್ಮುತ್ತಿತ್ತು ಅಂಬುಗಳೆಂಬ ರಕ್ತತೀರ್ಥ
ಎಲ್ಲಿ ನಿನ್ನ ಸರದಿ ಆರಂಭವಾಗುತ್ತಿತ್ತೋ
ಅಲ್ಲೇ ದಿನ ಮುಗಿಯುತ್ತಿತ್ತು ಅತ್ಯಾಚಾರದೊಂದಿಗೆ.

ADVERTISEMENT

ಇತಿಹಾಸವೆಂದರೆ ನಿನ್ನ ಪ್ರಣಯ ಲೀಲೆಗಳು
ನಿನ್ನ ಕಾಡಿದ, ತುಳಿದ, ಕನ್ನೆತನ ಕಳಕೊಂಡ
ಅತ್ಯಾಚಾರದ ಸರಮಾಲೆಗಳು.

ಗೆಲ್ಲಲು ಬಂದವನಿಗೆ ಮೋಹವುಕ್ಕಿಸಿದ ಸ್ತನದಾಯಿನಿಯೇ
ಹಸಿದು ಬಂದ ಕಂದಮ್ಮನಿಗೆ ಮೊಲೆಯೂಡಿಸಿದ ಮಾತೃವಾತ್ಸಲ್ಯವೇ
ಕಾಮನೆಂದರು, ಕರುಳೆಂದರೂ ಮತ್ತೆ ಮತ್ತೆ ದಾಳಿಯಲಿ ನಲುಗಿ
ಮಾಟಗಾತಿಯಂತೆ ಮದ್ದು ಅರೆದವಳೇ
ಒಡಲಲ್ಲಿ ಇಂಗಿಹೋದದ ರಕ್ತಕೂಪವನ್ನು ಅಡಗಿಸಿಕೊಂಡವಳೇ.

ಸೀತೆಗಾಗಿ, ದ್ರೌಪದಿಗಾಗಿ ಯುದ್ಧವೇ ಯುದ್ಧ
ಜಗತ್ತಿನಾದ್ಯಂತ ಮಾನಿನಿಗಾಗಿಯೇ ಚರಿತ್ರೆ ಕಟ್ಟಲ್ಪಟ್ಟಿದೆ
ಎಳೆಬಾಳೆ ಸುಳಿಯಂಥ ಕನ್ನೆಯರ ಕನ್ನೆತನವನ್ನು
ಸುಲಿಸುಲಿದು ಬೀದಿಗೆಸೆಯುತ್ತಿದ್ದಾರೆ
ತಿಂದಾದ ಮೇಲೆ ಹಣ್ಣನು ಮೂಲೆಗೆಸೆವ ತಿಪ್ಪೆಯಂತೆ.

ಹೆಣ್ಣು ಹಣ್ಣಾಗಿ, ರಾಜಕಾರಣದ ವ್ಯಂಜನವಾಗಿ
ನಾಲಿಗೆಯ ಮೇಲೂ, ಚರಿತ್ರೆಯ ಪುಟಗಳ ಮೇಲೂ ಹೊರಳುತ್ತಿದ್ದಾಳೆ

ದಿಲ್ಲಿಯೆಂಬ ನಾಯಕಸಾನಿಯ ಕೆಂಪು ಮಣ್ಣಿನಲಿ
ನಿರಂತರ ರಕ್ತಪಾತ, ಗಂಡಮಿಂಡರೆಂಬ ಜಗಭಂಡರ
ಬೇಟೆಯೆಂಬ ಕೊಂದು ತಣಿಯುವ ಆಟ
ಈ ಮಾಟಗಾತಿ ಮುದಿ ನಾಯಕಸಾನಿ ಎದೆ ಮುಚ್ಚಿದ ಕಣ್ಣಲ್ಲೇ
ಅರೆಯುತ್ತಿದ್ದಾಳೆ ಮದ್ದು ಅತ್ಯಾಚಾರವೆಂಬ ಗಂಡಾಟಕ್ಕೆ

ಅಂದು ನೀನು ನೀನೆಂಬ ನಾಯಕಸಾನಿ
ಹಸ್ತದ, ಕಮಲದ, ನೇಗಿಲಿನ ಘಾತಕ್ಕೆ ಒಳಗಾಗಿಯೂ
ಮತ್ತೆ ಮತ್ತೆ ಗದ್ದುಗೆಯ ಪೊರೆಯುತ್ತಾ ಹೋದೆ
ಇಂದು ಅಭಯಗಳಿಲ್ಲದ ನಿರ್ಭಯಗಳೆಂಬ
ಕುಸುಮಗಳು ಪಕಳೆ ಕಳೆದು ಉದುರುತ್ತಿವೆ ಮಣ್ಣ ಮಡಿಲಿಗೆ.

ಇತಿಹಾಸವೆಂದರೆ ಇಷ್ಟೇ
ಮುಖ ಮೈ ಮೊಲೆ ಕೆತ್ತಿಸಿಕೊಂಡ ಭಗ್ನಮೂರ್ತಿಗಳು
ಕೊಳೆತು ನಾರುವ ಕೂಪದೊಳಗಿನ ಹೆಣಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.