ADVERTISEMENT

ಧರೆಗೆ ದೊಡ್ಡವಳು

ಮಂಜುಳಾ ಹುಲ್ಲಹಳ್ಳಿ
Published 8 ನವೆಂಬರ್ 2014, 19:30 IST
Last Updated 8 ನವೆಂಬರ್ 2014, 19:30 IST
ಧರೆಗೆ ದೊಡ್ಡವಳು
ಧರೆಗೆ ದೊಡ್ಡವಳು   

1
ಮೇಡಂ ಎಲ್ಲ ರೆಡಿ ಆಗಿದೆ. ನಾಳೆ ಬೆಳಿಗ್ಗೆ ಐದು ಗಂಟೆಗೆ ಟ್ರೈನ್. ಮಕ್ಕಳೆಲ್ಲ ಉತ್ಸಾಹದಲ್ಲಿರುವರು. ಏನೂ ಚಿಂತೆಯಿಲ್ಲ. ದೂರವಾಣಿಯಲ್ಲಿ ಕೋಚ್ ರವಿಪ್ರಕಾಶ್ ಧ್ವನಿ; ನನಗೂ ಸಮಾಧಾನ.

ನಮ್ಮ ಕ್ರೀಡಾ ವಸತಿ ಶಾಲೆಯ ಮಕ್ಕಳು ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿ ಹದಿನೈದು ದಿನಗಳ ತರಬೇತಿಗಾಗಿ ಬೆಂಗಳೂರಿಗೆ ತೆರಳುತ್ತಿದ್ದರು. ನಮ್ಮ ತರಬೇತುದಾರರ ನಿರಂತರ ಶ್ರಮಕ್ಕೆ ದಕ್ಕಿದ ಮೊದಲ ಉಡುಗೊರೆ ಇದು. ಇನ್ನು ರಾಷ್ಟ್ರಮಟ್ಟದಲ್ಲಿ ಪದಕವೂ ಬಂದರೆ ಶ್ರಮ ಸಾರ್ಥಕ ಎಂದೆಲ್ಲಾ ಮನಸ್ಸು ಹರುಷದ ಕಡಲಿನಲಾಡುತಿತ್ತು. ಆದರೆ, ಸ್ವಲ್ಪ ಹೊತ್ತಿನಲ್ಲಿ  ಮತ್ತೆ ರವಿಯಿಂದಲೇ ದೂರವಾಣಿ. ‘ಮೇಡಂ.., ಕಾವ್ಯ ದೊಡ್ಡವಳಾದಳಂತೆ’. ಧ್ವನಿಯಲ್ಲಿನ ನಿರಾಸೆ ನನ್ನ ಉತ್ಸಾಹವನ್ನೆಲ್ಲ ಬತ್ತಿಸಿಬಿಟ್ಟಿತ್ತು. ನಾಳೆ ನಮ್ಮ ಟೀಂ ಅವಳನ್ನು ಬಿಟ್ಟೇ ಹೋಗಬೇಕು... ತಂಡದ ಬಲ ಕುಗ್ಗಿಹೋಗುತ್ತದೆ. ವಿಧಿಯಿಲ್ಲ, ಕಾವ್ಯಳನ್ನ ಮನೆಗೆ ಕಳಿಸಿಕೊಡುವ ವ್ಯವಸ್ಥೆ ನೋಡಲು ಹಾಸ್ಟೆಲ್ ಕಡೆಗೆ ನಡೆದೆ. ಮನ ಮತ್ತೆ ಆಲೋಚನೆಯಲ್ಲಿ ಮುಳುಗಿತು. 

ಐದನೇ ತರಗತಿಯಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್ ಕ್ರೀಡೆಗಳಲ್ಲಿ ತರಬೇತಿ ನೀಡಲೆಂದೇ ಆರಂಭವಾಗಿದ್ದದ್ದು, ನಮ್ಮ ಮಂಡ್ಯ ಕ್ರೀಡಾ ವಸತಿ ನಿಲಯ. ಆರಂಭದ ದಿನಗಳಲ್ಲಿ ಬಹಳ ಸವಾಲುಗಳಿದ್ದವು. ಕ್ರೀಡಾ ತರಬೇತಿ ವಿಷಯದಲ್ಲಿ ಬಿಗಿ ನಿಲುವು ಹೊಂದಿರುವ ಕ್ರೀಡಾ ವಸತಿ ನಿಲಯಕ್ಕೆ ಮಕ್ಕಳನ್ನು ಸೇರಿಸಲು ಪೋಷಕರಿಗೆ ಹಿಂಜರಿಕೆ... ವಸತಿ ನಿಲಯಕ್ಕೆ ಮಕ್ಕಳನ್ನು ಸೇರಿಸಲು ಮುಂದೆ ಬರುವ ಪೋಷಕರು ಸಾಧಾರಣವಾಗಿ ಮಧ್ಯಮ ವರ್ಗದವರು ಇಲ್ಲವೇ ಬಡತನವನ್ನೇ ಹಾಸಿ ಹೊದ್ದ ಗ್ರಾಮೀಣ ಪ್ರದೇಶದವರು.

ಇವರಲ್ಲಿ ಹೆಚ್ಚಿನವರಿಗೆ ತಮ್ಮ ಮಕ್ಕಳು ಕ್ರೀಡೆಯಲ್ಲಿ ಏನೋ ಸಾಧನೆ ಮಾಡುತ್ತಾರೆಂಬ ನಿರೀಕ್ಷೆಗಿಂತ ನಗರದಲ್ಲಿ ಉತ್ತಮ ಶಾಲೆಯಲ್ಲಿ ಓದುವ ಅವಕಾಶ ಸಿಕ್ಕಿದೆ, ಊಟ ವಸತಿ ಉಚಿತವಾಗಿದೆ, ತಮ್ಮ ಮನೆಗಿಂತ ಉತ್ತಮ ವಾತಾವರಣವಿದೆ, ಓದಲೇಳು ಎಂಬ ಧೋರಣೆಯೇ ಹೆಚ್ಚು. ಆದರೂ  ಹನ್ನೊಂದರ ಆಸುಪಾಸಿನ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಕ್ರೀಡಾ ವಸತಿನಿಲಯದಲ್ಲಿ ಬಿಟ್ಟುಹೋಗುವುದೆಂದರೆ ಎಂಥ ಪೋಷಕರಿಗೂ ದಿಗಿಲು, ಆತಂಕ, ತಳಮಳ... ಒಬ್ಬೊಬ್ಬರನ್ನೂ ಸಾಂತ್ವನಗೊಳಿಸಿ ಮಕ್ಕಳನ್ನು ಉಳಿಸಿಕೊಳ್ಳುವುದು ಹರಸಾಹಸ.

ಹೆಣ್ಣು ಮಕ್ಕಳನ್ನು ಬಿಟ್ಟು ಹೋಗಬೇಕೆಂಬ ಅಳಲಿಗಿಂತ, ಇನ್ನಾರು ತಿಂಗಳೋ ವರ್ಷಾನೋ... ದೊಡ್ಡೋಳಾಗ್ಬಿಟ್ರೆ ಏನ್ ಮಾಡೋದು? ಹೇಗೆ ಮಾಡೋದು? ಮನೆ ಹಿರೀಕ್ರು ಒಪ್ಪಲ್ಲ... ಅಕ್ಕಪಕ್ಕದೋರು ಆಡಿಕೋತಾರೆ... ಆ ಟೈಮ್ನಲ್ಲಿ ಸರಿಯಾಗಿ ಆರೈಕೆ ಆಗ್ಲಿಲ್ಲಾಂದ್ರೆ ಮುಂದಕ್ಕೆ ಕಷ್ಟ ಆಗ್ತದೆ... ಎಂಬ ಆತಂಕ, ಪೋಷಕರಿಗೆ. ಈ ದೊಡ್ಡವಳಾಗುವ ಕಾರಣದಿಂದಲೇ, ಆರಂಭದ ಮೂರು ನಾಲ್ಕು ತಿಂಗಳುಗಳಲ್ಲಿ, ಆಟದಲ್ಲಿ ಚೆನ್ನಾಗಿ ಪಳಗುತ್ತಿದ್ದ ಹೆಣ್ಣುಮಕ್ಕಳಲ್ಲಿ ಒಂದಿಬ್ಬರನ್ನು ಅವರ ಹೆತ್ತವರು ಹಾಸ್ಟೆಲ್ ಬಿಡಿಸಿಬಿಟ್ಟರು.

ಕೋಚ್ ಜತೆಗೆ ಅವರ ಹಳ್ಳಿಗೇ ಹೋಗಿ ಪರಿಪರಿಯಾಗಿ ಕೇಳಿಕೊಂಡರೂ ಅವರನ್ನು ಹಿಂದಕ್ಕೆ ಕರೆತರಲು ಆಗಿರಲಿಲ್ಲ. ಈ ಬಗೆಗೆ ಪೋಷಕರು ಕೋಚ್ ಜತೆ ಗಲಾಟೆ ಮಾಡಿಕೊಂಡುದೂ ಉಂಟು. ದೊಡ್ಡವಳಾದ ಕಾರಣಕ್ಕೆ ಮನೆಗೆ ಹೋಗಿ ಪ್ರೀತಿಯ ಸವಿ, ಬಿಡುವಿನ ನಲಿವನ್ನು ಮನಸಾ ಅನುಭವಿಸಿದ್ದ ಆ ಮಕ್ಕಳಿಗೆ ಮತ್ತೆ ಹಾಸ್ಟೆಲ್‌ಗೆ ಬರಬೇಕೆನಿಸಲಿಲ್ಲ. ಇಂಥಾ ಹಲವು ಹೆಸರುಗಳೊಂದಿಗೆ ಈಗ ಕಾವ್ಯಾ...           

ಅರ್ಧ ಗಂಟೆಯಲ್ಲಿ ಕಾವ್ಯಾ ಹೆತ್ತವರು ಬಂದರು. ಮಗಳ ಉತ್ತಮ ಅವಕಾಶ ತಪ್ಪಿ ಹೋಗುತ್ತಿರುವ ನೋವು ಅವರಿಗೂ ಇದ್ದುದು ಮಾತಲ್ಲೇ ತಿಳಿಯಿತು. ಐದು ದಿನಗಳ ಆರೈಕೆ ಸಾಕು. ನೀವು ಧೈರ್ಯ ಮಾಡಿದರೆ ಅವಳಿಗೂ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಧೈರ್ಯ ಕೊಟ್ಟೆವು. ನಮ್ಮ ಮಹಿಳಾ ವೈದ್ಯರೊಡನೆಯೂ ಮಾತನಾಡಿಸಿದೆವು.

ಕಾವ್ಯಾಳನ್ನು ಬಿಟ್ಟುಹೋಗಬೇಕೆಂಬ ಕೋಚ್ ಮತ್ತು ಗೆಳತಿಯರ ಸಂಕಟ... ಎಲ್ಲಕ್ಕಿಂತ ಹೆಚ್ಚಾಗಿ ಹೋಗಲೇಬೇಕೆಂಬ ಕಾವ್ಯಾಳ ಹಂಬಲ... ತಾಯಿಕರುಳನ್ನು ಕೊನೆಗೂ ಕರಗಿಸಿಬಿಟ್ಟಿತು. ತಂದೆಯೂ ತಲೆ ಆಡಿಸಿದರು. ದಿಗ್ವಿಜಯ ಸಾಧಿಸಿದ ಹೆಮ್ಮೆ ನಮ್ಮೆಲ್ಲರ ಮುಖದಲ್ಲಿ. ರವಿ ಐದೇ ದಿನಗಳಲ್ಲಿ ಕಾವ್ಯಳನ್ನು ತರಬೇತಿ ಶಿಬಿರಕ್ಕೆ ಬಿಟ್ಟು ಬಂದರು. ಆ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಪಡೆದ ಹೆಮ್ಮೆ ನಮ್ಮದಾಯಿತು. ಇದರಲ್ಲಿ ಕಾವ್ಯಾಳ ಪಾಲೇ ಅಧಿಕವಿತ್ತು. ಆ ಗೆಲುವು ಕಾವ್ಯಳ ತಾಯ್ತಂದೆಯರದಾಗಿತ್ತು.

2

ಪ್ರಭಾ ನಮ್ಮ ಕ್ರೀಡಾನಿಲಯದ ಭರವಸೆಯ ಆಟಗಾತಿ. ನಿಲಯಕ್ಕೆ ಬಂದ ವರ್ಷದಲ್ಲೇ ತಾಯಿಯನ್ನು ಕಳೆದುಕೊಂಡು ನೊಂದ ಹುಡುಗಿ. ಹನ್ನೆರಡು ವರ್ಷದ ಅವಳು ದೆಹಲಿಯಲ್ಲಿ ಮೂವತ್ತು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸಬ್ ಜೂನಿಯರ್ ತರಬೇತಿ ಶಿಬಿರಕ್ಕೆ ಆಯ್ಕೆ ಆದುದು ನಮ್ಮ ಹೆಮ್ಮೆಗೆ ಕೋಡು ಮೂಡಿಸಿತ್ತು. ಕೋಚ್ ರವಿ ಜತೆಗೆ ದೆಹಲಿಗೆ ಕಳುಹಿಸಿಕೊಡುವ ವ್ಯವಸ್ಥೆ ಆಗಿತ್ತು. ಹೊರಡುವ ದಿನಗಳಲ್ಲಿ ದೆಹಲಿಯಲ್ಲಿ ‘ನಿರ್ಭಯಾ ಪ್ರಕರಣ’. ಪೋಷಕರಿಗೆ, ನಮಗೆ, ಅವಳಿಗೆ ಹೇಳಿಕೊಳ್ಳಲಾಗದ ತಲ್ಲಣ. ಕಾಯ್ದಿರಿಸಿದ್ದ ರೈಲೂ ರದ್ದಾಯಿತು. ಆದರೆ ಪ್ರಭಾ ಭವಿಷ್ಯ ನಿರ್ಧರಿಸುವ ಅಮೂಲ್ಯ ಅವಕಾಶ. ಅವಳನ್ನು ಕಳಿಸಿಕೊಡಲೇಬೇಕಿತ್ತು. ಈ ಹಂತದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಕೋಚ್ ಆಸರೆಯಾದರು. ಹಿರಿಯ ಅಧಿಕಾರಿಗಳೂ ಬೆಂಬಲಿಸಿದರು. ವಿಮಾನದಲ್ಲೇ ಕರೆದೊಯ್ದು ಬಿಟ್ಟು ಬಂದರು ರವಿ. 

ನಾಲ್ಕು ದಿನಗಳು ಕಳೆದಿದ್ದುವು. ಪ್ರಭಾ ತಂದೆ ಲಿವರ್ ತೊಂದರೆಯಿಂದ ಮರಣ ಹೊಂದಿದ ಸುದ್ದಿ ಬರಸಿಡಿಲಿನಂತೆ ಎರಗಿತು. ಆ ಕ್ಷಣ ಎದುರಾದ ಪ್ರಶ್ನೆ, ಪ್ರಭಾಳನ್ನು ಕರೆಸುವುದು ಹೇಗೆ? ಹಿರಿಯ ಅಧಿಕಾರಿಗಳದೂ ಕರೆಸುವುದು ಸೂಕ್ತ ಎಂಬ ಅಭಿಪ್ರಾಯ. ಆದರೆ ಹೇಗೆ?
ಕೋಚ್ ಆ ರಾತ್ರಿಯೇ ಅವಳ ಹಳ್ಳಿಗೆ ಧಾವಿಸಿದರು. ನಾವು ಮುಂಜಾವದಲ್ಲಿ, ಅವಳ ಬಂಧುಗಳು, ಗ್ರಾಮದ ಹಿರಿಯರು ಎಲ್ಲರೊಡನೆ ಪರಿಸ್ಥಿತಿ ಚರ್ಚಿಸಿದೆವು. ಅವರು ಒಪ್ಪಿದರು. ಆದರೆ, ಅವಳಿಗೆ ವಿಷಯ ಮುಟ್ಟಿಸುವ ಜವಾಬ್ದಾರಿಯನ್ನು ನಮಗೇ ಬಿಟ್ಟರು. 

ದೂರವಾಣಿಯಲ್ಲಿ ಸುದ್ದಿ ಹೋಗುವುದು ಬೇಡ. ಅಘಾತ ಆದೀತು. ನೀವು ಹೋಗಿ ಮಾತನಾಡುತ್ತಾ ಕ್ರಮೇಣ ಸೂಕ್ಷ್ಮವಾಗಿ ವಿಷಯ ತಿಳಿಸಿ. ಅವಳ ಮನಸ್ಥಿತಿ ನೋಡಿ ಕರೆತರುವ ಬಗೆಗೆ ಯೋಚನೆ ಮಾಡಿ ಎಂದು ಮತ್ತೆ ರವಿಯನ್ನು ದೆಹಲಿಯ ಕಡೆ ಮುಖ ಮಾಡಿಸಿದೆವು.
ಇವರಿನ್ನೂ ಬೆಂಗಳೂರನ್ನೇ ತಲುಪಿಲ್ಲ, ಆಗಲೇ ಮತ್ತೊಂದು ಸುದ್ದಿ– ಪ್ರಭಾ ದೊಡ್ಡವಳಾದಳು.

‘ಹೇಗೆ ಮಾಡೋದು ಮೇಡಂ’ ರವಿಯ ಕಳಕಳಿಯ ಧ್ವನಿ. ನಾನೇನು ಹೇಳಬಹುದಿತ್ತು? ತಾಯಿ ತಂದೆಯರಿದ್ದಿದ್ದರೆ ಏನಾದರೂ ಕೇಳಬಹುದಿತ್ತು. ಬಂಧುಗಳೂ ಶೋಕದಲ್ಲಿದ್ದಾರೆ. ಕರೆ ತಂದರೆ ಅತ್ತ ಅವಳ ಭವಿಷ್ಯವೂ ಹಾಳು, ಇತ್ತ ನೋಡಿಕೊಳ್ಳುವವರೂ ಇಲ್ಲ. ರವಿಗೆ ಹೇಳಿದೆ, ‘ಅವಳ ತಂದೆಯ ವಿಷಯ ಸದ್ಯಕ್ಕೆ ಅವಳಿಗೆ ಹೇಳುವುದು ಬೇಡ. ಅವಳ ವಿಷಯವನ್ನೂ ಇಲ್ಲಿನ ಅವರ ಬಂಧುಗಳಿಗೆ ತಿಳಿಸುವುದು ಬೇಡ. ಅವಳು ತರಬೇತಿ ಮುಗಿಸಿಬಿಡಲಿ. ಹಿಂದಿರುಗಿ ಬಂದ ಮೇಲೆ ಸಂದರ್ಭೋಚಿತವಾಗಿ ಅವರನ್ನು ಎದುರಿಸೋಣ. ಈಗ ಅವಳನ್ನು ಸೂಕ್ತವಾಗಿ ಮಾತನಾಡಿಸಿ ಅಗತ್ಯದ ವ್ಯವಸ್ಥೆ ಮಾಡಿ ಬನ್ನಿ’.

ಈ ಸಂದರ್ಭದಲ್ಲಿ ಕೋಚ್ ತೆಗೆದುಕೊಂಡ ನಿಲುವುಗಳಿಂದ ಪ್ರಭಾ ಈಗ ಬ್ಯಾಸ್ಕೆಟ್ ಬಾಲ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಆಟಗಾರ್ತಿಯಾಗಿದ್ದಾಳೆ.

3

ಸೌಮ್ಯ ದಿಟ್ಟ ನಿಲುವಿನ ಕೆಚ್ಚೆದೆಯ ಕ್ರೀಡಾಳು. ಅವಳೂ ತರಬೇತಿ ಮುಗಿಸಿ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಛತ್ತೀಸ್‌ಗಢ್‌ಗೆ ತೆರಳಿದ್ದವಳೂ ಅಲ್ಲಿ ದೊಡ್ಡವಳಾದಳು. ಆ ಸಂದರ್ಭದಲ್ಲಿ ಅವಳ ತಂದೆ ಎದೆ ನೋವಿಗೆ ಆಸ್ಪತ್ರೆಯಲ್ಲಿದ್ದರು. ತಾಯಿಯದೂ ಅಸಹಾಯಕ ಸ್ಥಿತಿ. 
‘ಬರಲಿ ಬಿಡಿ ಮೇಡಂ. ಈಗ ಏನು ಮಾಡೋದು? ಅವಳ ಹಣೇಲಿ ಬರೆದಂಗಾಗ್ಲಿ. ಚನ್ನಾಗ್ ನೋಡ್ಕೊಳ್ಳೀ ಅಷ್ಟೇ’ ಅಂದರು. ರವಿ ಚೆನ್ನಾಗಿಯೇ ನೋಡಿಕೊಂಡು ಕರೆತಂದರು. ಈಗ ಅವಳು ಭಾರತ ತಂಡದ ಆಟಗಾರ್ತಿಯಾಗಿ ಚೀನಾ, ಶ್ರೀಲಂಕಾ, ಜೋರ್ಡಾನ್‌ ದೇಶಗಳನೆಲ್ಲ ಸುತ್ತಿ ಬಂದಿದ್ದಾಳೆ. ಅವಳ ಹಣೆಬರಹ ಬರೆದ ಪೋಷಕರೀಗ ಹೆಮ್ಮೆಯಿಂದಿದ್ದಾರೆ.

ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಕಾಲಿಡುವ ಹೆಣ್ಣುಮಕ್ಕಳಿಗೆ ಆರೈಕೆ ಬೇಕು ನಿಜ. ಆದರೆ ಅದಕ್ಕಿಂತ ಹೆಚ್ಚಿನದು ಅವರಲ್ಲಿ ಆತ್ಮವಿಶ್ವಾಸ ತುಂಬುವುದು. ಏನೋ ಆಗಿಹೋಯಿತು ಎಂದು ಮೂಲೆಯಲ್ಲಿ ಕುಳ್ಳಿರಿಸಿ ಅವಳಲ್ಲಿ ಆತಂಕ, ಭಯ, ಕೀಳರಿಮೆಯನ್ನು ಹೇರುವುದಕ್ಕಿಂತ ಅದೂ ಒಂದು ಸಾಮಾನ್ಯ ದೈಹಿಕ ಪ್ರಕ್ರಿಯೆ ಎಂಬ ಧೈರ್ಯ ಮೂಡಿಸಿದರೆ ಆ ಮಕ್ಕಳ ಸಾಧನೆಗಳೇ ವಿಶಿಷ್ಟವಾಗುತ್ತವೆ. ಇದಕ್ಕೆ ಜೀವಂತ ಸಾಕ್ಷಿ ನಮ್ಮ ಕ್ರೀಡಾ ನಿಲಯದ ಹೆಣ್ಣುಮಕ್ಕಳು.

ಈ ಆತಂಕದ ದಿನಗಳಲ್ಲಿ ತೀರಾ ನೋವುಗಳಿದ್ದರೆ ರೆಸ್ಟ್ ಟೈಂ ಎಂದು ವಿಶ್ರಾಂತಿ ಪಡೆಯುತ್ತಾರೆ. ಆಟ ಆಡುವ ಕಸುವಿದ್ದರೆ ಆಟಕ್ಕೂ ನಿಲ್ಲುತ್ತಾರೆ. ಈ ಮನೋಭಾವ ಅವರು ರಾಜ್ಯ, ರಾಷ್ಟ್ರೀಯ ಕ್ರೀಡಾಕೂಟಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಧೈರ್ಯ ಕೊಟ್ಟಿದೆ. ಪದಕಗಳ ಹಿರಿಮೆಯನ್ನು ಕಟ್ಟಿದೆ. ಇದನ್ನು ಸಾಧ್ಯವಾಗಿಸಿದವರು ನಮ್ಮ ಕೋಚ್ ರವಿಪ್ರಕಾಶ್ ಎಂಬುದು ನನ್ನ ಮತ್ತು ನಮ್ಮ ನಿಲಯದ ಕ್ರೀಡಾಪಟುಗಳ ಹೆಮ್ಮೆ. ಜತೆಗೆ ನಮ್ಮ ಸಲಹಾ ವೈದ್ಯರು, ಶಾಲಾ ಶಿಕ್ಷಕರು, ಸಹವರ್ತಿಗಳ ಸಹಕಾರವೂ ಇದೆ. ಆದರೆ ಆ ಆತಂಕದ ದಿನಗಳ ಒತ್ತಡಕ್ಕೆ ಬಲಿಯಾಗಿ ಮನೆ ಸೇರಿಬಿಟ್ಟ ಹೆಣ್ಣುಮಕ್ಕಳು ನಮ್ಮಲ್ಲಿಗೆ ಬಂದಾಗ ತಾವು ಕಳೆದುಕೊಂಡ ಭಾಗ್ಯಕ್ಕೆ ಕಣ್ಣಾಲಿ ತುಂಬಿಕೊಂಡಾಗ ನಮ್ಮ ವ್ಯವಸ್ಥೆಯ  ಜಡತ್ವದ ಬಗೆಗೆ ಅಪಾರ ನೋವೂ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.