ತಾನಿರುವ ಜಗವರಿತ ಜಗದೊಳಗಿನ ತನ್ನನರಿತ
ಹಠಯೋಗಿ; ಪುಟವಿಟ್ಟ ಮನಸುಗಳ ತೇವ ಮಣ್ಣಲ್ಲಿ
ಚಿಗಿತ ವಿರಾಗಿ
ದಹಿಸುವ ಸೂರ್ಯ ಕಿರಣಗಳು ತಾಕಲೂ ಹೇಸುತ್ತಿದ್ದ
ಚಂದಿಮರೆದೆಯಲ್ಲಿ ಮಾಂತ್ರಿಕ ಕೋಲನ್ನೂರಿದ ಕನಸ ಕೋವಿದ
ಯುಗಗಳ ಕಿಲುಬು ಬಾಗಿಲಿನಾಚೆಯ ಎಲುಬು ಲೋಕ ಮೆಲ್ಲ ಮೆಲ್ಲ
ಸಂಕೋಲೆಗಳ ಸರಿಸಿ ಗವಗತ್ತಲಂತೆ ಇಣುಕಿಣುಕಿ ಇನಿತಿನಿತೇ
ಕೊನೆಬಣ್ಣಗಳೆರಡೂ ಕೊರೆಯಿಲ್ಲದಂತೆ ಕಲಸಿ
ಹನಿಗಣ್ಣುಗಳು ಕಸಿಗೊಂಡವು ಹಸಿಹಸಿದಂತೆ!
ಕೆಂಪು ಹೊಳೆ ಕಪ್ಪು ಸಮುದ್ರಕ್ಕೆ ಹರಿದು
ಆದಿ ಚರ್ಮಗಳು ತಟ್ಟಾಡಿ ಮುಟ್ಟಾಡಿ ಇತಿಹಾಸದ ಹುಬ್ಬೇರಿತು
ಕಾಲು ಹಾದಿಗಳಲ್ಲಿ ಹಾಲು ಬೆತ್ತಿಂಗಳ ಮಳೆಯ ಮೊರೆತ
ಅಲೋಮವ ವಿಲೋಮವಾಗಿಸಿದ ಕಾಯಕದಲ್ಲಿ ಲೋಪವಿನಿತಿಲ್ಲ
ಅಂಬರವನ್ನು ಶಂಬರರ ಕಾಲುಬುಡಕ್ಕಿಳಿಸಿದ್ದೇ ಜನಜನಿತವಾಯಿತಲ್ಲ!
ಮೌನದ ಬಡಿಗೆಯಲ್ಲೇ ಕೋಟ್ಯಂತರ ಮನಸ್ಸುಗಳನ್ನು
ಮಣಿಸುವ ಕಾವ್ಯ ಶಾಸನ ಕೆತ್ತಿದೆ
ಕಣ್ಣಿಗೆ ಕಣ್ಣೆಂದ ಹಮುರಬಿಯ ಅಂಧತ್ವಕ್ಕೆ ಬುದ್ಧಗಣ್ಣಾದೆ
ಇದು ಗಾರುಡಿ, ಇದು ಗಾರುಡಿಯೆಂದು ಗೀತಾಂಜಲಿಯಿತ್ತರು ಕಬ್ಬಿಗರು
ಆದರೂ ಆಕಾಶಕ್ಕೆ ಎರಡು ಗೇಣು ಕಮ್ಮಿಯೆಂದು
ಅವಮಾನಿತ– ದಮನಿತ ಪೂರ್ವೀಕವು ಝಂಕಿಸಿ
ಮೆಚ್ಚಿತು!
ಪೊಳ್ಳು ಪುರಾಣವನ್ನು ನಂಬಿ
ನಿಜ ಹರಿಶ್ಚಂದ್ರನಾದವನು ನೀನು
ನಿನ್ನಂತೇ ಪುರಾಣ ನಂಬುವ ಸೈಬರ್‌ಸ್ಕಂದರಿಂದು
ನಂಬುತ್ತಿಲ್ಲ ನಿನ್ನನ್ನು; ಗಾಂಧಿಯೆಂಬ ಗಾರುಡಿಯನ್ನು
ಈ ಈ ಕ್ಷಣ ಪುರಾಣವೇ ಸತ್ಯ; ಇತಿಹಾಸವೇ ಮಿಥ್ಯ!
ನನ್ನಿಯ ಹುಡುಕಾಟದಲ್ಲಿ ನೀನು ನೆಲಕ್ಕೊರಗಿದೆ
ನನ್ನಿಯೂ ನೆಲಕ್ಕೊರಗಿತು ಬೆನ್ನಿಗೇ! ಹೇ ರಾಮ್!
ಚಿರನಿದ್ರೆಯಲ್ಲೂ ಇಲ್ಲವಾಗಿದೆ ಶಾಂತಿ
ನಿನಗೂ, ನನ್ನಿಗೂ – ಈ ಪ್ರಾಚೀನ ಮಣ್ಣಿಗೂ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.