2016ರಲ್ಲಿ ಪ್ರಕಟಗೊಂಡ ಕೃತಿಗಳಲ್ಲಿ ತಮ್ಮ ಗಮನಸೆಳೆದ ಪ್ರಮುಖ ಪುಸ್ತಕವೊಂದರ ಕುರಿತು ವಿವಿಧ ಲೇಖಕರ ಟಿಪ್ಪಣಿಗಳು ಇಲ್ಲಿವೆ. ಇದು ಜನಪ್ರಿಯ ಪುಸ್ತಕಗಳ ಯಾದಿ ಅಥವಾ ‘ಟಾಪ್ 10’ ಮಾದರಿಯ ಪಟ್ಟಿಯಲ್ಲ. ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ಗಮನಸೆಳೆಯುವುದು ಈ ಕಿರುಬರಹಗಳ ಉದ್ದೇಶ. ಈ ಕಿರುಬರಹಗಳನ್ನು ಸಂದೀಪ ನಾಯಕ ಕಲೆಹಾಕಿದ್ದಾರೆ.
***
ಕಸುಬುದಾರನ ಅಧಿಕೃತತೆ ಮತ್ತು ಒಳನೋಟ
‘ಕಥನ ತಂತ್ರ’ದ ಹಲವು ಆಯಾಮಗಳನ್ನು ವಿಶ್ಲೇಷಿಸುವ ಕತೆಗಾರ ಎಂ.ಎಸ್. ಶ್ರೀರಾಮ್ ಅವರ ಕಥನ ಕುತೂಹಲ ಕೃತಿಯು ನಮ್ಮ ಆಸಕ್ತಿಯನ್ನು ಸೆಳೆಯುವುದು ಸ್ವತಃ ತನ್ನ ಕಥನಕ್ರಮದ ಮೂಲಕವೇ. ಕನ್ನಡದಲ್ಲಿ ಕಥನತಂತ್ರದ ಸ್ವರೂಪವನ್ನು ಕುರಿತ ಬರವಣಿಗೆ ಕಡಿಮೆ. ಶ್ರೀರಾಮ್ ಒಳ್ಳೆಯ ಕತೆಗಾರರು, ಕತೆ ಮತ್ತು ಕಥನದ ಅಂತರವನ್ನು ಬಲ್ಲವರು. ಕತೆಗಾರನ ಪ್ರಯೋಗಶೀಲತೆಯೇ ಇಲ್ಲಿನ ಪ್ರಬಂಧಗಳ ವೈವಿಧ್ಯಕ್ಕೆ ಕಾರಣವಾಗಿದೆ. ಕಸುಬುದಾರರು ಬರೆದಾಗ, ಸಹಜವಾಗಿಯೇ ಒದಗಿಬರುವ ಅಧಿಕೃತತೆ ಮತ್ತು ಒಳನೋಟವು ಈ ಪುಸ್ತಕಕ್ಕೆ ದಕ್ಕಿದೆ.
ಪರಂಪರೆಯ ಜೊತೆಗಿನ ಅನುಸಂಧಾನ ಲೇಖಕನಿಗೆ ಏಕೆ ಮತ್ತು ಎಷ್ಟು ಮುಖ್ಯ ಎನ್ನುವುದನ್ನು ಕಂಡುಕೊಳ್ಳಲು ಈ ಕೃತಿಯು ನೆರವಾಗುತ್ತದೆ. ಕೃತಿಯುದ್ದಕ್ಕೂ ಶ್ರೀರಾಮ್ ಅವರ ಅಗಾಧ, ವೈವಿಧ್ಯಮಯ ಓದಿನ ಹರಹು ಮತ್ತು ಆ ಓದಿನ ಮೂಲಕ ಅವರು ಲೋಕವನ್ನು ಬಗೆಯುವ ಮತ್ತು ಕಂಡುಕೊಳ್ಳುವ ವಿಧಾನಗಳನ್ನು ಪಡೆದುಕೊಂಡಿರುವುದು ತಿಳಿಯುತ್ತದೆ. ಇದು ಅವರು ಕಥೆಗಾರರಾಗಿ ಬೆಳೆದ ಬಗೆಗೆ ಹಿಡಿದ ಕನ್ನಡಿ. ಭಿನ್ನ ಭಾಷೆ, ಸಂಸ್ಕೃತಿಯ ಕೃತಿಗಳನ್ನು ಓದಿ, ಕರಗಿಸಿಕೊಂಡು, ತನ್ನ ಅನುಭವ ಮತ್ತು ತಾತ್ವಿಕ ಹುಡುಕಾಟಗಳ ಮೂಲಕ ಬೆಳೆದಿರುವ ಕತೆಗಾರನ ಅಂತರಂಗ ಇಲ್ಲಿ ಕೆಲಸಮಾಡಿದೆ.
ಕತೆಯನ್ನು ಏಕೆ ಹೇಳಬೇಕು ಎಂಬ ಪ್ರಶ್ನೆಯಿಂದ ಶ್ರೀರಾಮ್ ಬರಹಗಳು ಶುರುವಾಗಿ, ಹೇಳುವ ಕ್ರಮವೇ ಹೇಗೆ ಕಥೆಯ ಆಶಯವನ್ನು ನಿರ್ಧರಿಸುತ್ತದೆ ಎಂಬ ಸತ್ಯದೊಂದಿಗೆ ಒಡಮೂಡುತ್ತವೆ. ಇಷ್ಟಾಗಿಯೂ ಕತೆಯು ಕತೆಗಾರನನ್ನು ಮೀರಿ ಬೆಳೆಯುತ್ತದೆ, ಅದು ಹೇಗೆ, ಏಕೆ ಎಂಬುದಕ್ಕೆ ಉತ್ತರವಿಲ್ಲ ಮತ್ತು ಅದೇ ಸೃಜನಶೀಲ ಸೌಂದರ್ಯದ ನಿಗೂಢತೆಗೆ ಕಾರಣ ಎನ್ನುವ ಎಚ್ಚರದಲ್ಲಿ ಈ ಬರಹಗಳ ಹೊಳಪಿದೆ.
ಪ್ರತಿಯೊಂದು ಲೇಖನವೂ ಒಂದು ಕತೆಯಂತೆ ಓದಿಸಿಕೊಳ್ಳುವುದು ಈ ಪ್ರಬಂಧಗುಚ್ಛದ ವಿಶೇಷ. ಆಶಯ ಮತ್ತು ಸ್ವರೂಪದಲ್ಲಿ ಸಾಮ್ಯವಿರುವುದರಿಂದ ಈ ಲೇಖನಗಳನ್ನು ಒಟ್ಟಂದದಲ್ಲಿ ನೋಡಿದಾಗ, ಒಂದು ಮತ್ತೊಂದರ ಮುಂದುವರಿಕೆಯಾಗಿ ಕಾಣತೊಡಗುತ್ತದೆ. ಪರಿಭಾಷೆಗಳ ಭಾರದಿಂದ ಮುಕ್ತವಾಗಿರುವ ಈ ಕೃತಿಯನ್ನು ಓದುವ ಮತ್ತು ಬರೆಯುವ ಕ್ರಿಯೆಯಲ್ಲಿ ಕುತೂಹಲವುಳ್ಳ ಯಾರಾದರೂ ಖುಷಿಯಿಂದ ಓದಬಹುದು. ಶ್ರೀರಾಮ್ ಅವರ ಕಥನಕ್ರಮವೇ ಕೃತಿಯ ಚೌಕಟ್ಟನ್ನು ನಿರ್ಧರಿಸಿರುವ ಮತ್ತು ಲೇಖನಗಳು ತಮ್ಮ ಆಶಯದ ಚೌಕಟ್ಟನ್ನು ಮುರಿದು ಬೆಳೆಯಲು ನೆರವಾಗುವ ಉಪಕರಣವಾಗಿದೆ.
-ತೇಜಶ್ರೀ
***
ಮನುಷ್ಯಸಂಬಂಧಗಳ ಆರೋಗ್ಯದ ಕಥನ
ಈ ವರ್ಷವೂ ಒಳ್ಳೆಯ ಕವಿತೆ, ಕತೆ, ಕಾದಂಬರಿ, ಅನುವಾದಗಳು ಪ್ರಕಟವಾಗಿವೆ. ಆದರೆ ನಾನು ಅಪರೂಪದ ಪುಸ್ತಕವೊಂದನ್ನು ಆರಿಸಿಕೊಂಡಿದ್ದೇನೆ. ಇದನ್ನು ಬರೆದವರು, ದಿಕ್ಕುದೆಸೆಯಿಲ್ಲದ ಬದುಕಗಳನ್ನು ಒಪ್ಪವಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹದಿನೆಂಟು ತರುಣ–ತರುಣಿಯರು; ಸುತ್ತಮುತ್ತ ಓಡಾಡುತ್ತಿದ್ದರೂ ಕಣ್ಣಿಗೆ ಬೀಳದವರು, ಬಿದ್ದರೂ ‘ಬಡವ’ರೆಂದೋ ‘ಭಡವ’ರೆಂದೋ ತಿರಸ್ಕೃತರಾದವರು. ಶಿವು, ಅಬ್ದುಲ್, ದೀಪು, ಮೇಘನ, ಸಿದ್ದು... ಇವರೆಲ್ಲರೂ ಕರ್ನಾಟಕದ ಮೂಲೆಮುಡುಕುಗಳಿಂದ ಬಂದವರು.
ಎಲ್ಲರದೂ ಬೇರೆ ಬೇರೆ ಕಥೆಗಳು; ಎಲ್ಲ ಕಥೆಗಳ ಹಿನ್ನೆಲೆಯೂ ಒಂದೇ: ಒಡೆದ ಕುಟುಂಬಗಳು, ನಿರ್ಲಕ್ಷಿಸುವ ತಂದೆಯರು, ಪೊರೆಯುವ ತಾಯಿಯರು, ತಮ್ಮ–ತಂಗಿಯರನ್ನು ಉಳಿಸಿಕೊಳ್ಳುವ ಅಕ್ಕಂದಿರು... ಗೋಡೆ ಕಟ್ಟುವ ಜಾತಿಗಳು, ಅರಳುವ ಕಮರುವ ಕನಸುಗಳು, ಬಡತನಕ್ಕಿಂತ ಹೆಚ್ಚಾಗಿ ಕಾಡುವ ಅವಮಾನಗಳು, ಹದಿಹರೆಯದ ಹುಡುಗಿಯರನ್ನು ಕಾಡುವ ಪೀಡೆಗಳು... ಇದು ಮನುಷ್ಯಸಂಬಂಧಗಳ ಆರೋಗ್ಯ ಮತ್ತು ಅನಾರೋಗ್ಯದ ಕಥನ.
ಆದರೆ, ಇಲ್ಲಿರುವುದು ಗೋಳುಕರೆಗಳ ಕಥನವಲ್ಲ; ಅಸಹನೆ ಮತ್ತು ದ್ವೇಷಗಳ ಕೆಂಡದುಂಡೆಗಳಲ್ಲ. ಇವರೆಲ್ಲರೂ ಬದುಕನ್ನು ಕಟ್ಟಿಕೊಳ್ಳುವ ಛಲ ಹೊಂದಿರುವವರು, ದುಡಿಮೆಗೆ ಹೆದರದವರು, ಚಿಕ್ಕ–ಪುಟ್ಟ ಕನಸುಗಳನ್ನು ನಿಜವಾಗಿಸಲು ಹೆಣಗುತ್ತಿರುವವರು. ಬಾಳೆಹಣ್ಣಿನ ಗುಡಾಣದಲ್ಲಿ ಬೆಳೆದ ಮಕ್ಕಳು ಮತ್ತು ಅವರ ಪೋಷಕರು ತಲೆತಗ್ಗಿಸುವಂತೆ ಮಾಡಬಲ್ಲವರು. ಈ ಕಥನಗಳನ್ನು ಓದಿದ ಬಳಿಕ ಮುರಿದ ಗುಡಿಸಲುಗಳು, ಖಾಲಿ ಟಿಫಿನ್ ಬಾಕ್ಸುಗಳು, ಹರಿದ ಅಂಗಿ–ಲಂಗಗಳು, ಗಣಿತ ಮತ್ತು ಇಂಗ್ಲಿಷಿಗೆ ಬಲಿಯಾಗುವ ನಿರಪರಾಧಿಗಳು ಮನಸ್ಸಿನೊಳಗೆ ಮನೆ ಮಾಡುತ್ತಾರೆ.
ಈ ಬರೆಹಗಳ ಮೂಲಗುಣ ಪ್ರಾಮಾಣಿಕತೆ. ಬಡತನವನ್ನು ಮುಚ್ಚಿಟ್ಟುಕೊಳ್ಳದ, ಅದು ನೀಡುವ ಅವಮಾನವನ್ನು ಮೀರಿನಿಂತವರ ಅನುಭವಗಳ ಸಾಚಾತನ ಮತ್ತು ಮನಸ್ಸಿನ ಮುಗ್ಧತೆಗಳು ಕಾವ್ಯದ, ಕಥನದ ಗುಣವನ್ನು ಪಡೆದಿವೆ:
‘ನಮ್ ಬದ್ಕು, ಒಂಥರ ದಿನಾ ಇರೋ ಯುದ್ಧದ ಹಾಗೆ. ನೋಡೋರು ಕಣ್ಣಲ್ಲೇ ಚುಚ್ಚಿ ತಿವ್ದು ಕೀವು ರಕ್ತ ಹೆಪ್ಪುಗಟ್ಟಿರತ್ತೆ.’ ‘ಹೇಳೋ ಅಷ್ಟು ದೊಡ್ಡುದಲ್ಲ, ನನ್ ಕಥೆ. ಅದುರ ಬಗ್ಗೆ ಮಾತಾಡೋಕು ಯೋಚ್ನೆ ಮಾಡೋಕೂ ಟೈಮ್ ಕೊಡಲ್ಲ ನಾನು.’ ‘ಈ ದೇಶದ ಎಜುಕೇಷನ್ ಕಣ್ಣ್ ಕಟ್ಟಿ ಕಾಡಲ್ಲಿ ಬಿಡೋ ಹಾಗೆ ಇದೆ.’
‘ಅಕ್ಕ ಹೂಬುಟ್ಟಿ ಹಿಡಿದು ಹೋಗೋವಾಗ ನಾನು ಅಕ್ಕನ ಲಂಗದ ತೂತುಗಳ ಬಗ್ಗೆ ಯೋಚಿಸ್ತಿದ್ದೆ. ಒಮ್ಮೆ ‘ಇದೇನಕ್ಕ ಹರಿದಿದೆ’ ಅಂದ್ರೆ ನನ್ನಕ್ಕ ಆ ತೂತಲ್ಲಿ ಕೈತೂರಿಸಿ ‘ಜೋಬು ಕಣೋ ಸಿದ್ದು. ನೋಡು, ಎಷ್ಟೊಂದಿದೆ’ ಅಂತಿದ್ಲು.’
‘ನಾನು ಸಣ್ಣದಿರೋವಾಗ ಒಳ್ಳೊಳ್ಳೇ ಬಟ್ಟೆ ಹಾಕ್ಬೇಕಂತ ಆಸೆ ಇತ್ತು. ನನ್ ಕನಸು ಇಷ್ಟೇ ಇದ್ದದ್ದು. ನಾನು ಮದ್ವೆ ಆಗೋ ಗಂಡು ಟೈಲರ್ ಆಗಿದ್ರೆ ಒಳ್ಳೇದಂತ.’
ಈ ಪಟ್ಟಿಯನ್ನು ಬೆಳೆಸಲು ಸಾಧ್ಯವಿಲ್ಲ; ಪುಸ್ತಕವನ್ನೇ ಓದಬೇಕು. ಈ ಲೇಖಕರು ಮತ್ತೆ ಮತ್ತೆ ‘ಸಖಿ’, ‘ಸಂವಾದ’. ಮತ್ತು ‘ಬದುಕು ಕಮ್ಯೂನಿಟಿ ಕಾಲೇಜು’ಗಳ ಮಾರ್ಗದರ್ಶನವನ್ನು ನೆನೆಸಿಕೊಳ್ಳುತ್ತಾರೆ. ಸರ್ಕಾರವು ನೀಡುವ ಸವಲತ್ತುಗಳ ಬಗ್ಗೆ ಸಿನಿಕತನದಿಂದ ಮಾತಾಡುವವರಿಗೆ, ಅವು ಈ ಸಸಿಗಳಿಗೆ ಒಂದಿಷ್ಟು ನೀರೆರೆದಿರುವುದು
ಗೊತ್ತಾಗುತ್ತದೆ. ತಿಳಿವಳಿಕೆ, ನಾಚಿಕೆ ಮತ್ತು ಬದ್ಧತೆಗಳನ್ನು ಮೂಡಿಸುವ ಈ ಪುಸ್ತಕ,
‘ಎ ಮಸ್ಟ್ ರೀಡ್!.
-ಎಚ್.ಎಸ್. ರಾಘವೇಂದ್ರ ರಾವ್
***
ಹಳ್ಳಿಯ ಕತೆಗಳ ವಿಸ್ತರಣೆ
ಹಳೆಯ ಪುಸ್ತಕಗಳ ಹೊಸ ಓದು ಮತ್ತು ಮರು ಓದುಗಳ ಜೊತೆಗೆ ನನ್ನ ಓರಗೆಯ ಲೇಖಕರನ್ನು ಓದುವುದು ಚರ್ಚಿಸುವುದೂ ಚೇತೋಹಾರಿ ಸಂಗತಿಯೇ. ಈ ವರ್ಷ ಪ್ರಕಟಗೊಂಡಿರುವ ಸಚ್ಚಿದಾನಂದ ಹೆಗಡೆಯವರ ‘ಮರೆವಿನ ಬಳ್ಳಿ’ ಕಥಾ ಸಂಕಲನ ಸದ್ಯ ನೆನಪಿಗೆ ಬರುವ ಹಾಗೆ ನನ್ನನ್ನು ಕಾಡಿದ ಪುಸ್ತಗಳಲ್ಲೊಂದು. ಇಲ್ಲಿನ ಕತೆಗಳು ನಗರ ಕೇಂದ್ರಿತ ಅಂಶಗಳನ್ನು ತಮ್ಮ ಕಥಾನಕದಲ್ಲಿ ಬೆರೆಸಿಕೊಂಡಿವೆ. ಅಂದರೆ, ನಗರದ ಪ್ರಹಸನಗಳಿಂದ ಶುರುವಾಗಿ, ಅದು ಬಾಲ್ಯದ ಹಳ್ಳಿಯ ಕತೆಗಳತ್ತ ಜಾರುವುದಕ್ಕೆ ಅವಕಾಶ ಒದಗಿಸಿ, ಅಲ್ಲಿಂದ ಮತ್ತೆ ನಗರಕ್ಕೆ ಬೆಸೆದುಕೊಳ್ಳುವ ನಿರೂಪಣೆಯ ಶೈಲಿ ಬಹುತೇಕ ಎಲ್ಲ ಕತೆಗಳಲ್ಲೂ ಇದೆ. ಹಳ್ಳಿಯ ಕತೆಗಳನ್ನು ಹೇಳುವುದಕ್ಕೆ ನಗರದ ಪ್ರಹಸನಗಳು ಕೇವಲ ನೆಪಗಳೇನೋ ಅಂತ ಅನ್ನಿಸುವುದೂ ಇದೆ. ಅಷ್ಟು ಒತ್ತೊತ್ತಾಗಿ ಬಾಲ್ಯದ ನೆನಪುಗಳು ಮುತ್ತುತ್ತವೆ. ಈ ಕತೆಗಾರನಲ್ಲಿ ತಾನು ಬಿಟ್ಟು ಬಂದ ಹಳ್ಳಿ ಮತ್ತು ಸದ್ಯ ಬದುಕುತ್ತಿರುವ ನಗರ ಪ್ರಜ್ಞೆ
ಗಳೆರಡೂ ಒಟ್ಟಿಗೇ ಒಂದನ್ನು ಬಿಟ್ಟು ಮತ್ತೊಂದು ಕೆಲಸ ಮಾಡಲಾಗದು ಎನ್ನುವ ಹಾಗೆ ಬೆಸೆದುಕೊಂಡಿದೆ. ವರ್ತಮಾನವು ತನ್ನ ಸದ್ಯತೆಯಲ್ಲಿ ಪ್ರಕಟಗೊಳ್ಳುವುದಿಲ್ಲ.ಹಾಗಾಗಿ ಈ ಕತೆಗಳಲ್ಲಿ ನಗರ ಕೇಂದ್ರಿತ ಅಂಶಗಳಿದ್ದರೂ ಅವು ಅರ್ಬನ್ ಕಥಾನಕಗಳಾಗದೆ ಹಳ್ಳಿಯ ಕತೆಗಳ ವಿಸ್ತರಣೆಯೇ ಆದಂತಿದೆ.
ದೇವಸ್ಥಾನದ ಒಳಗೆ ಬಸ್‌ಸ್ಟ್ಯಾಂಡನ್ನು ಕಾಣಿಸುತ್ತಾರೆ. ಲಾಫಿಂಗ್ ಕ್ಲಬ್ಬಿನ ಸಹವಾಸದಲ್ಲಿ ತನ್ನೂರಿನ ಸ್ನೇಹಿತ ಕಾಣೆಯಾದುದರ ಕತೆ ಹೇಳುತ್ತಾರೆ. ಹಳ್ಳಿಯಲ್ಲಿ ದಾರಿ ತಪ್ಪಲು ಮರೆವಿನ ಬಳ್ಳಿ ಮೆಟ್ಟುವುದರ ನೆಪವಿದ್ದರೆ, ನಗರದ ರಸ್ತೆಗಳ ಗೋಜಲನಲ್ಲಿ ಎಲ್ಲ ತಂತ್ರಜ್ಞಾನ ವ್ಯವಸ್ಥೆಯಿದ್ದಾಗ್ಯೂ ದಾರಿ ತಪ್ಪುವುದಕ್ಕೆ ಯಾವ ಮರೆವಿನ ಬಳ್ಳಿ ಕೆಲಸ ಮಾಡುತ್ತಿದೆ? ರೂಪಕವೊಂದು ಓದುಗರ ಮನಸ್ಸನ್ನು ಇಂಥ ಸಾಮ್ಯತೆ ಮತ್ತು ಅಂತರಗಳ ನಿಕಷಕ್ಕೆ ತೊಡಗುವಂತೆ ಮಾಡುತ್ತಾರೆ.
ಹೀಗೆ, ಬದಲಾಗಿರುವ/ಬದಲಾಗುತ್ತಿರುವ ನಗರ ಮತ್ತು ಹಳ್ಳಿಗಳು ಕೇವಲ ತಾನು ಬದಲಾಗುವುದು ಮಾತ್ರವಲ್ಲ. ಒಂದರ ಸಂಗತಿಗಳು ಮತ್ತೊಂದರ ಒಳಗೆ ನುಸುಳಿ, ಮಿಶ್ರ ಸಂಸ್ಕೃತಿಯನ್ನೋ ಅಥವ, ದುರಂತವನ್ನೋ ಎರಡೂ ಪ್ರದೇಶಗಳು ಹೊತ್ತು ಹೆಣಗಾಡುತ್ತಿರುವುದನ್ನು ಕಾಣಿಸುವುದು ಇಲ್ಲಿನ ಕತೆಗಳ
ವಿಶಿಷ್ಟತೆಯಾಗಿದೆ.
-ವಿಕ್ರಂ ಹತ್ವಾರ
***
ಹಣೆಪಟ್ಟಿಯನ್ನು ಒಪ್ಪದ ಬರಹ
ವೃತ್ತಿಯಿಂದ ವಾಸ್ತುಶಿಲ್ಪಿಯಾಗಿರುವ ವಸ್ತಾರೆ ಪ್ರವೃತ್ತಿಯಿಂದ ಸಾಹಿತಿ; ಸಾಹಿತಿಯಾಗಿ ತಮ್ಮದೇ ಆದ ವಿಶಿಷ್ಟ ಶೈಲಿ ಹಾಗೂ ಕಾಳಜಿಗಳನ್ನು ಬೆಳೆಸಿಕೊಂಡಿರುವವರು. ಈ ಸಂಕಲನದ ಹದಿನಾಲ್ಕು ಲೇಖನಗಳನ್ನು ನಾವು ವೈಚಾರಿಕ ಲೇಖನಗಳು, ಲಲಿತ ಪ್ರಬಂಧಗಳು, ಚಿತ್ರ ಲೇಖನಗಳು, ಇತ್ಯಾದಿ ಹೇಗೆ ಬೇಕಾದರೂ ಕರೆಯಬಹುದು. ಆದರೆ, ಇವು ಯಾವ ಹಣೆಪಟ್ಟಿಯನ್ನೂ ಒಪ್ಪದ ಬರಹಗಳು.
ಇಲ್ಲಿರುವ 14 ಲೇಖನಗಳಲ್ಲಿ, ಸ್ಥೂಲವಾಗಿ, ಎರಡು ವರ್ಗಗಳನ್ನು ಗುರುತಿಸಬಹುದು: ಯಾವುದಾದರೂ ಒಂದು ಅಸಂಗತವೆನ್ನಬಹುದಾದ ಪ್ರಶ್ನೆಯನ್ನೆತ್ತಿ, ಅದಕ್ಕೆ ಬಗೆಬಗೆಯ ಉತ್ತರಗಳನ್ನು ಹುಡುಕುತ್ತಾ ಕೊನೆಗೆ ಆ ಪ್ರಶ್ನೆ ಅಷ್ಟೇನೂ ಅಸಂಗತವಲ್ಲ ಎಂದು ತೋರಿಸುವುದು. ಹಾಗೆಯೇ, ಒಂದು ಪರಿಕಲ್ಪನೆಯನ್ನು ಅಥವಾ ಸಂಕೇತವನ್ನು ತೆಗೆದುಕೊಂಡು ಅದು ಧ್ವನಿಸುವ/ ಅದಕ್ಕೆ ಸಮಾನವಾದ ಎಲ್ಲಾ ಸಾಧ್ಯತೆಗಳನ್ನೂ ಪರಿಗಣಿಸುತ್ತಾ ಆ ಪರಿಕಲ್ಪನೆಯಲ್ಲಿ/ ಸಂಕೇತದಲ್ಲಿ ಹುದುಗಿರಬಹುದಾದ ಸಂಗತಿಗಳನ್ನು ಸ್ಪಷ್ಟಪಡಿಸುವುದು.
ಉದಾಹರಣೆಗೆ. ರಾವಣನಿಗೆ ಎಷ್ಟು ತಲೆಗಳು? ಹತ್ತು ತಲೆಗಳು ಎಂದು ಉತ್ತರಿಸಿದರೆ, ಪ್ರಮುಖವಾದ ತಲೆಗೆ ಒಂದು ಭಾಗದಲ್ಲಿ ಐದು, ಮತ್ತೊಂದು ಭಾಗದಲ್ಲಿ ನಾಲ್ಕು ತಲೆಗಳಿದ್ದು, ಪ್ರಮಾಣಬದ್ಧವಲ್ಲದ ರಾವಣನ ದೇಹ ಸದಾ ಒಂದು ಕಡೆ ವಾಲಿರಬೇಕು; ಅಹುದೆ? ಹೀಗೆ ಚರ್ಚಿಸುತ್ತಾ, ಕೊನೆಗೆ 4+4+1 ಹೀಗೆ ಪ್ರಮಾಣಬದ್ಧತೆಗೆ ತಲೆಬಾಗಿ ಒಂಬತ್ತೇ ತಲೆಗಳಿರುವ ರಾವಣನ ಚಿತ್ರವನ್ನು ನಮ್ಮ ಗಮನಕ್ಕೆ ತರುತ್ತಾರೆ; ಅದರಲ್ಲಿಯೂ, ಸಮತೋಲನಕ್ಕಾಗಿ, ಒಂದು ತಲೆ ಹಿಂಭಾಗದಲ್ಲಿರಬಹುದು ಎಂದು ತರ್ಕಿಸುತ್ತಾರೆ.
ಅರ್ಧನಾರೀಶ್ವರನ ಪರಿಕಲ್ಪನೆಯನ್ನು ಕುರಿತು, ಅಂತಹ ಆಕೃತಿಯನ್ನು ‘ಅರ್ಧನರೇಶ್ವರಿ’ ಎಂದೇಕೆ ಕರೆಯಬಾರದು? ಎಂದು ಪ್ರಶ್ನಿಸುತ್ತಾರೆ. ಈ ಸಂಕಲನದ ಲೇಖನಗಳಲ್ಲಿ ಅತ್ಯಂತ ರೋಚಕವಾದದ್ದು ‘ಮಹಾಕಾಳಿ’ಯ ರೂಪಣೆಯನ್ನು ಕುರಿತದ್ದು. ಅಹಮದಾಬಾದಿನಲ್ಲಿರುವ ಒಂದು ಕಟ್ಟಡದ ವಿನ್ಯಾಸದ ವಿವರಗಳಿಂದ ಪ್ರಾರಂಭವಾಗುವ ಲೇಖನವು, ಅನಂತರ ಹಿಂದೂ ಧರ್ಮ, ಬೌದ್ಧ ಧರ್ಮ, ಇತ್ಯಾದಿ ‘ಅಪೌರುಷೇಯ ಧರ್ಮ’ಗಳಲ್ಲಿ ಮಾತ್ರ ಹೆಣ್ಣು ದೇವತೆಗಳ ರೂಪಣೆ ಸಾಧ್ಯ ಎಂದು ಮಂಡಿಸುತ್ತಾ, ಕೊನೆಗೆ ‘ನಾಲಿಗೆ ಹೊರಗಿಕ್ಕಿ, ಶಿವನನ್ನು ಮೆಟ್ಟಿ, ಕುಣಿಯುತ್ತಿರುವ’ ಕರ್ರಂಕರಿ ಕರಿಕಾಳಿಯು ಪಾಶ್ಚಿಮಾತ್ಯರಿಗೆ ‘ಪುರುಷಾಟ್ಟಹಾಸವನ್ನು ಭಂಜಿಸುವ ಕಡು ಮಾಡರ್ನಿಸ್ಟ್ ದ್ಯೋತಕವಾಗುತ್ತಾಳೆ,’ ಪಾಶ್ಚಿಮಾತ್ಯ ಸ್ತ್ರೀವಾದಗಳ ಆದ್ಯ ಪ್ರತಿಮೆಯಾಗುತ್ತಾಳೆ – ಎಂದು ಲೇಖಕರು ವಾದಿಸುತ್ತಾರೆ. ಹಾಗೆ ನೋಡಿದರೆ, ಕಾಳಿಯ ರೂಪಣೆ ನಾಲ್ಕೈದು ಲೇಖನಗಳಲ್ಲಿ ಮರುಕಳಿಸುತ್ತದೆ.
ನಮಗೆಲ್ಲರಿಗೂ ತಾಳ್ಮೆ ಹಾಗೂ ಕುತೂಹಲಗಳಿದ್ದರೆ, ಅಂತರ್ಜಾಲವೆಂಬ ಮಾಯಾಲೋಕದಲ್ಲಿ ಎಂತೆಂತಹ ರೋಚಕ–ಸ್ಫೋಟಕ ಮಾಹಿತಿ ಹುದುಗಿದೆ ಎಂಬುದನ್ನು ಈ ಸಂಕಲನವನ್ನು ಓದಿಯೇ ಅರಿಯಬೇಕು.
-ಸಿ.ಎನ್. ರಾಮಚಂದ್ರನ್
***
ಭವಾವಳಿಯ ಅಪೂರ್ಣತೆಯ ಬಿಂಬಗಳು
‘ವಿಕಲ್ಪ’ ಎರಡು ಕಿರುಕಾದಂಬರಿಗಳ ಸಂಗ್ರಹ. ‘ಪ್ರತಿ ಕ್ಷಣವೂ ಬದಲಾಗುವ ಮನುಷ್ಯರು ಮತ್ತು ಜಗತ್ತನ್ನು ಗ್ರಹಿಸಲು ಯಾವ ಮಾದರಿಗಳೂ ಇಲ್ಲ’ ಎನ್ನುವ ಕಾದಂಬರಿಕಾರರು ‘ಆದರೆ ನಮ್ಮ ಮನಸ್ಸು ಮಾತ್ರ ಮನುಷ್ಯರನ್ನು, ಬದುಕನ್ನು, ಕಥೆಗಳನ್ನು ಈಗಾಗಲೇ ರೂಢಿಯಾಗಿರುವ ಸ್ವರೂಪದಲ್ಲೇ ಗ್ರಹಿಸಲು ತವಕಿಸುತ್ತದೆ’ ಎಂದು ಗುರುತಿಸುತ್ತಾರೆ. ಇದು ಸೃಜನಶೀಲವಾಗಿ ಈ ಲೇಖಕರು ಎದುರು ಹಾಕಿಕೊಂಡಿರುವ ಸವಾಲೂ ಹೌದು. ವಸ್ತು, ನಿರೂಪಣೆ, ಲೋಕದೃಷ್ಟಿ ಈ ಮೂರೂ ಅಂಶಗಳಲ್ಲೂ ಇಲ್ಲಿಯ ಸಂಕೀರ್ಣ ಕಿರುಕಾದಂಬರಿಗಳು ಮಹತ್ವದ್ದಾಗಿ ತೋರುತ್ತವೆ.
ತನ್ನಿಂದ ವಿಚ್ಛೇದನ ಪಡೆದ ಮೊದಲ ಇಬ್ಬರೂ ಮಡದಿಯರು ತಮ್ಮ ದಿನಚರಿಗಳನ್ನು ಪ್ರಕಟಿಸಲಿರುವರೆಂದು ತಿಳಿದು ಆತಂಕಕ್ಕೊಳಗಾದ ‘ವಿಕಲ್ಪ’ದ ನಾಯಕ ಅವರು ಬರೆಯಬಹುದಾದ್ದನ್ನು ಊಹಿಸುತ್ತ ಅದಕ್ಕೆ ಉತ್ತರಿಸುತ್ತಾ ಹೋಗುತ್ತಾನೆ – ತನ್ನ ದಿನಚರಿ ಬರವಣಿಗೆ ಮೂಲಕ. ಇದು ಆತ ತನಗಾಗಿ ಮಾಡಿಕೊಳ್ಳುತ್ತಿರುವ ಬರವಣಿಗೆ.
ಅದರ ಮೂಲಕ ಅವನು ತನ್ನ ಬಾಲ್ಯ, ಹರಯ, ಕುಟುಂಬದ ದ್ವಂದ್ವಗಳು, ವಿವಾಹ ಸಂಬಂಧ ಎಲ್ಲದರ ಕುರಿತು ಹೊಸ ಅರಿವು ಗಳಿಸಿಕೊಳ್ಳುತ್ತಾನೆ. ಇದೊಂದು ಬಗೆಯಲ್ಲಿ ಅವನ ವ್ಯಕ್ತಿತ್ವದಲ್ಲಿ ಸ್ಪಷ್ಟತೆ ತಂದುಕೊಳ್ಳುವ ಕ್ರಿಯೆ. ‘ಒಬ್ಬ ವ್ಯಕ್ತಿ ದೈಹಿಕವಾಗಿ ನಮ್ಮಿಂದ ದೂರವಾದಾಗಲೂ ನಮ್ಮೊಳಗೇ ಇದ್ದೇ ಬಿಡುತ್ತಾನೆ, ಆ ಅರ್ಥದಲ್ಲಿ ಯಾರಿಗೂ ಯಾರಿಂದಲೂ ಬಿಡುಗಡೆ ಇಲ್ಲ’ ಎಂಬುದು ಅವನಲ್ಲಿ ಹುಟ್ಟುವ ಹೊಸ ತಿಳಿವಳಿಕೆ.
‘ಭೂಮಿಯಲ್ಲಿ ಹುಟ್ಟುವುದೇ ಈ ಭವಾವಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದಕ್ಕೆ’ ಎಂದು ಕಂಡುಕೊಳ್ಳುವ ಆತ ಹಾಗಿದ್ದೂ ನಾವು – ಒಂದು ಕಾಲಮಾನದಲ್ಲಿ ಬದುಕಿರುವವರು – ಜತೆಗೂಡಲು ಕಾರಣವೇನಿರಬಹುದು ಎಂದು ಅಚ್ಚರಿಗೊಳ್ಳುತ್ತಾನೆ.
ಪ್ರತಿಯೊಂದು ಸಂಗತಿಯೂ ಸ್ವತಂತ್ರವಾಗಿರಲಿ, ‘ಯಾವುದಕ್ಕೆ ಯಾವುದೂ ಪರಾಮರ್ಶೆಯ ಬಿಂದುವಾಗುವುದು ಬೇಡ’ – ಇದು ಕಥನದ ಕಡೆಯ ಮಾತು ಎಂದುಕೊಳ್ಳುವಾಗಲೇ ರಾಜಲಕ್ಷ್ಮಿಯ ಆತ್ಮಚರಿತ್ರೆಯ ಕಥಾನಕದೊಡನೆ ಈ ಕಿರುಕಾದಂಬರಿ ಹೊಸ ಆಯಾಮ ಕಟ್ಟಿಕೊಂಡಿದೆ. ‘ಬದುಕೇ ತನ್ನ ಸ್ವಭಾವದಲ್ಲಿ ಅಪೂರ್ಣ’ ಎನ್ನುವ ಆಕೆ ನಮ್ಮ ಎಲ್ಲ ಚಟುವಟಿಕೆಗಳೂ ಅಂತಿಮವಾಗಿ ನಮ್ಮ ಅಪೂರ್ಣತೆಯನ್ನೇ ಅನುಭವಕ್ಕೆ ತಂದುಕೊಡುತ್ತವೆ ಎನ್ನುತ್ತಾರೆ. ನಿರೂಪಕ ತನ್ನ ಅನುಭವದಿಂದ ಹುಟ್ಟಿದ ವಿಚಾರಗಳನ್ನು ರಾಜಲಕ್ಷ್ಮಿಯವರ ಅನುಭವದಿಂದ ಹುಟ್ಟಿದ ವಿಚಾರಗಳೊಡನೆ ಹೊಂದಿಸಿಕೊಳ್ಳಬೇಕಾಗಿದೆ.
‘ಅ–ಚರಿತ್ರೆ – ಒಂದು ಪತ್ರ’ ಕಿರುಕಾದಂಬರಿಯಲ್ಲಿ ಕೋದಂಡರಾಮಪುರ ಸಂಸ್ಥಾನದ ಮಹಾರಾಜ ಕಾಶೀನಾಥರು ಲೇಖಕರಿಗೆ ಒಂದು ವೈಯಕ್ತಿಕ ಪತ್ರ ಬರೆದು ಅದನ್ನು ಬಹಿರಂಗಗೊಳಿಸದಂತೆಯೂ ಕೋರಿಕೊಂಡಿದ್ದಾರೆ. ಹಳೆಯ ವೈಭವದ ದಿನಗಳ ಗತ್ತಿನಲ್ಲಿ ಇಂದೂ ಬದುಕುತ್ತಿರುವ ರಾಜರಿಗೆ ಯಾರೂ ಸಂಸ್ಥಾನದ ಚರಿತ್ರೆ ಬರೆಯುವುದು ಬೇಡವಾಗಿದೆ. (ಮನೆತನದ ಸಂಬಂಧದ್ದೆ ಹೊಸಕಾಲದ ಹುಡುಗ ಆ ಆಸೆ ಹೊತ್ತು ಬಂದಿದ್ದಾನೆ. ಜೊತೆಗೆ ರಾಜರ ಜೋಡಿಯ ಇನ್ನೊಬ್ಬ – ರಾಜಮನೆತನದ ಅರ್ಚಕರ ಕುಟುಂಬದವನು, ಅವನು ಪ್ರತ್ಯೇಕವಾಗಿ ಇನ್ನೊಂದು ಯೋಜನೆ ಹೊತ್ತು ಬಂದಿದ್ದಾನೆ.) ‘ಅರಮನೆಗಳ ಮರ್ಯಾದೆ ನಿಂತಿರುವುದೇ ಗುಟ್ಟುಗಳ ಮೇಲೆ.’
ಚರಿತ್ರೆಯಾಗಲೊಲ್ಲದ ಅನೇಕ ಸಂಗತಿಗಳಿವೆ. ಅವು ಜನಕ್ಕೆ ಗೊತ್ತಿರುವವೇ, ಆದರೆ ‘ತಿಳಿದಿವೆ’ ಎನ್ನಲಾಗದು! ಇದು ರಾಜರ ಸಮಸ್ಯೆ. ಹಾಗಿದ್ದೂ ಅದನ್ನು ಅವರು ಹೇಳಿಕೊಳ್ಳಲೂಬೇಕು – ಅದಕ್ಕಿರುವ ಮಾಧ್ಯಮ ಪತ್ರಬರಹ. ಪತ್ರ, ದಿನಚರಿ ಎಲ್ಲವೂ ಅತ್ಯಂತ ವೈಯಕ್ತಿಕ ಸಂಗತಿಗಳು.
ಸಾಹಿತ್ಯ ಕೃತಿಯೊಂದು ಆ ಮಾಧ್ಯಮಗಳ ಬಳಕೆಯಿಂದ ಅಧಿಕೃತತೆ ಸಾಧಿಸಲೆತ್ನಿಸುವುದು, ಪಾತ್ರ, ಸಂದರ್ಭಗಳ ಆಂತರ್ಯದಲ್ಲೇ ಗಂಟಾಗಿ ಉಳಿದುಬಿಡಬಹುದಾದ ಒಳಸುಳಿಗಳನ್ನು ತಿಳಿಯಲೆತ್ನಿಸುವುದು ಈ ಎರಡು ಕೃತಿಗಳ ಕುರಿತು ಒಟ್ಟಾಗಿ ಹೇಳಬಹುದಾದ ಒಂದು ಮಾತು. ಆಕೃತಿಯ ದೃಷ್ಟಿಯಿಂದ ಕಿರಿದಾಗಿ ತೋರುವಾಗಲೂ ಸಾಂದ್ರತೆಯಿಂದ ಇವು ಕಾದಂಬರಿಗಳೆ.
ಮೊದಲ ಕಾದಂಬರಿಯ ನಿರೂಪಕ ಬರೆಯುತ್ತಲೇ ಬಿಡುಗಡೆಯ ಭಾವ, ತಾತ್ವಿಕ ಆಳ ಗಳಿಸಿಕೊಳ್ಳುತ್ತಾ ಬೆಳೆದರೆ, ಎರಡನೆಯ ಕೃತಿಯಲ್ಲಿ ಮಹಾರಾಜರು ಕಡೆಗೂ ಚರಿತ್ರೆಯಾಗುವುದನ್ನು ಒಪ್ಪದೆಯೇ ಉಳಿದಿದ್ದಾರೆ. ಪ್ರತಿ ಕ್ಷಣವೂ ಬದಲಾಗುವ ಮನುಷ್ಯ, ಜಗತ್ತನ್ನು ಗ್ರಹಿಸಲು ಮಾದರಿಗಳಿಲ್ಲವಾದರೂ ಸಾಹಿತ್ಯಕೃತಿಯು ಸಮಕಾಲೀನವಾದ್ದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲೆತ್ನಿಸುತ್ತಲೇ ಅಂಥ ಸಾಹಸಕ್ಕೆಳೆಸುತ್ತದೆ.
-ಚಿಂತಾಮಣಿ ಕೊಡ್ಲೆಕೆರೆ
***
ಹೊಸಬಗೆಯ ವಿ–ಚಿತ್ರ ವಿ–ಮರ್ಶೆ
ಕನ್ನಡ ಬರಹಗಾರರ ಮುಖಗಳು ನಮಗೇನೂ ಅಪರಿಚಿತವಲ್ಲ, ವಿಶೇಷವೂ ಅಲ್ಲ; ಈಚೀಚೆಗಂತೂ ನಮ್ಮ ಮಾಧ್ಯಮಗಳಲ್ಲಿ ಅಕ್ಷರಗಳಿಗಿಂತ ಚಿತ್ರಗಳೇ ಹೆಚ್ಚಿರುವುದರಿಂದ, ಇವರನ್ನೆಲ್ಲ ನಾವು ಆಯಾಸವಾಗುವಷ್ಟು ಸಲ ನೋಡಿಯಾಗಿದೆ. ಆದರೆ, ಅಂಥ ಬರಹಗಾರರ ಛಾಯಾಚಿತ್ರಗಳನ್ನೇ ವಸ್ತುವಾಗಿಟ್ಟುಕೊಂಡ ಈ ಪುಸ್ತಕವು ಕನ್ನಡದ ಲೇಖಕರನ್ನು ಕಂಡಿರುವ ಕಣ್ಣು ಬೇರೆ ಬಗೆಯದು.
ಉದಾಹರಣೆಗೆ ಈ ಚಿತ್ರಗಳು, ಆಯಾ ಲೇಖಕರು ‘ಚೆನ್ನಾಗಿ ಕಾಣುವಂತೆ’ (ಅಥವಾ ಹಾಗೆ ಭಾಸವಾಗುವಂತೆ!) ತೆಗೆದ ಫೋಟೊಗಳಲ್ಲ. ಬದಲು, ಈ ಪುಸ್ತಕದ ತಲೆಬರಹವೇ ಸೂಚಿಸುವ ಹಾಗೆ, ಇವು ಆಯಾ ಲೇಖಕರ ಮುಖಮುದ್ರೆಗಳನ್ನು ನಮ್ಮೆದುರಿಗೆ ತೆರೆಸುವ ಪ್ರಯೋಗಕ್ಕೆ ತೊಡಗಿದ ಕಲಾಪ್ರಯತ್ನಗಳು. ಛಾಯಾಚಿತ್ರಕಾರನು ಅವರನ್ನು ಗ್ರಹಿಸಿದ ಆ ಕ್ಷಣದಲ್ಲಿ, ಅವರ ಅಂತಃಕರಣವು ಅವರ ಮುಖಕರಣದಲ್ಲಿ ಪ್ರತಿಫಲಿತಗೊಂಡು ಮೂಡಿಸುವ ಸೂಕ್ಷ್ಮವಾದ ಭಾವಲೋಕದ ನೆರಳುಗಳನ್ನು ಸೆರೆ ಹಿಡಿಯುವುದು ಈ ಚಿತ್ರಗಳ ಉದ್ದೇಶವಾಗಿರುವಂತೆ ನನಗೆ ತೋರುತ್ತದೆ.
ಇಷ್ಟರ ಮೇಲೆ, ಈ ಚಿತ್ರಗಳನ್ನು ತೆಗೆದ ಮುಕುಂದ್ ಅವರು ಕೇವಲ ಮುಖಮುದ್ರೆಗಳನ್ನು ಹಿಡಿಯಲು ಹೊರಟ ದೃಶ್ಯಕಾರರು ಮಾತ್ರವೇ ಅಲ್ಲ. ಆಯಾ ಲೇಖಕರ ಚಿತ್ರ ಇರುವ ಎದುರು ಪುಟದಲ್ಲಿ ಮುಕುಂದರು ಬರೆದಿರುವ ಪುಟ್ಟಪುಟ್ಟ – ಆದರೆ ತುಂಬ ಧ್ವನಿಶಕ್ತಿಯಿರುವ – ಟಿಪ್ಪಣಿಗಳಲ್ಲಿ ನಮಗೆ ಕಾಣುವಂತೆ, ಈ ಚಿತ್ರಕಾರರು ಆಯಾ ಲೇಖಕರ ಕೃತಿಗಳನ್ನು ಓದಿದವರು; ಅವರ ಕೃತಿಗಳಲ್ಲಿ ಕಾಣುವ ಭಾವಲೋಕಕ್ಕೆ ಕೂಡ ಪ್ರತಿಸ್ಪಂದಿಸುವವರು. ಹಾಗಾಗಿ, ಈ ಚಿತ್ರಗಳನ್ನು ಆಯಾ ಟಿಪ್ಪಣಿಗಳ ಜತೆಗೆ ಓದುತ್ತ ಹೋದ ನನಗೆ, ಇದು ಕನ್ನಡದಲ್ಲಿ ಮೊದಲಬಾರಿಗೆ ಬಂದ ಹೊಸಬಗೆಯ ಒಂದು ‘ವಿ–ಚಿತ್ರ ವಿ–ಮರ್ಶೆ’ಯ ಪುಸ್ತಕವೆಂದೂ ಅನ್ನಿಸಿದೆ.
ಶಾಬ್ದಿಕ ಭಾಷೆಯ ಕೃತಿಗಳಿಗೆ ಶಾಬ್ದಿಕ ಭಾಷೆಯಲ್ಲಿಯೇ ಪ್ರತಿಸ್ಪಂದಿಸಬೇಕಾದ ಸಾಂಪ್ರದಾಯಿಕ ವಿಮರ್ಶೆಯ ಹಣೆಬರಹವನ್ನು ಉಲ್ಲಂಘಿಸಿ, ಅಂಥ ಕೃತಿಗಳನ್ನೂ ಕೃತಿಕಾರರನ್ನೂ ಒಂದು ಚಿತ್ರದ ಪ್ರತಿಮೆಯ ಮೂಲಕ ಗ್ರಹಿಸುವ ಒಂದು ಅವ್ಯಕ್ತ ಪ್ರಯೋಗವು ಈ ಪುಸ್ತಕದಲ್ಲಿ ನಡೆದಿರಬಹುದೆ? – ಎಂದು ನನಗೆ ಕಂಡಿರುವುದ
ರಿಂದಲೇ, ಈ ಪುಸ್ತಕದಿಂದ ನಾನು ಆಕರ್ಷಿತನಾಗಿದ್ದೇನೆ. ಜತೆಗೆ, ಕಳೆದ ಒಂದು ಶತಮಾನದಲ್ಲಿ ಬಂದ ಐವತ್ತು ಲೇಖಕರ ಚಿತ್ರಗಳನ್ನೊಳಗೊಂಡ ಈ ಪುಸ್ತಕವು ಪ್ರಾತಿನಿಧಿಕತೆಯ ಉದ್ದಿಶ್ಯವಿಟ್ಟುಕೊಳ್ಳದೆಯೂ ಕನ್ನಡದ ಬರಹಲೋಕದ ವೈಶಾಲ್ಯ–ವೈವಿಧ್ಯಗಳ ಒಂದು ಮುಖಮುದ್ರೆಯನ್ನು ಕೊಡುವಂತಿದೆಯೆಂಬುದೂ ಈ ಪುಸ್ತಕದ ವೈಶಿಷ್ಟ್ಯವಾಗಿದೆ.
-ಅಕ್ಷರ ಕೆ.ವಿ.
***
ಪಂ. ತಾರಾನಾಥರ ಆಧುನಿಕ ಚಿಂತನೆಯ ಕತೆಗಳು
ಒಂದು ವರ್ಷದ ಅವಧಿಯಲ್ಲಿ ಓದಿರಬಹುದಾದ ಪುಸ್ತಕದಲ್ಲಿ ಒಂದು ಇಷ್ಟವಾದುದನ್ನು ಆರಿಸುವುದು ಕಷ್ಟದ ಕೆಲಸ. ಅದೂ ಓದುವ ಚಟವಿದ್ದೂ ಪ್ರತಿ ತಿಂಗಳು ಕನಿಷ್ಠ ಹತ್ತಾದರೂ ಹೊಸ ಪುಸ್ತಕ ಓದುವವನಿಗೆ ನಿಜಕ್ಕೂ ತ್ರಾಸಿನ ಕೆಲಸ. ವಾಸ್ತವವಾಗಿ ನಾನು ಓದುವ ಎಲ್ಲಾ ಪುಸ್ತಕಗಳನ್ನೂ ನಾನು ಇಷ್ಟಪಡುತ್ತೇನೆ. ಇಷ್ಟವಾಗದೆ ಇರುವುದನ್ನು ಓದುವುದು ಸಹ ಸಾಧ್ಯವಿಲ್ಲ. ಅಂತಹವುಗಳು ಕಿವಿ ಸಹ ಮುದುರಿಕೊಳ್ಳದೇ ಗೂಡು ಸೇರಿಬಿಡುತ್ತವೆ. ಈ ಹಾದಿಯಲ್ಲಿ ಪ್ರತೀವರ್ಷವೂ ಶತಕ, ಕೆಲವೊಮ್ಮೆ ದ್ವಿಶತಕದ ಹತ್ತಿರಕ್ಕೆ ಬಂದಿರುವುದುಂಟು. ಹಾಗೆ ಓದಿದ್ದೆಲ್ಲವೂ ನನ್ನ ನೆನಪಿನ ಕಣಜದಲ್ಲಿ ಉಳಿಯುವುದಿಲ್ಲ. ಉಳಿದಿದ್ದರೆ ನಾನೀಗ ಏನಾಗಿದ್ದೇನೋ ಅದಾಗುತ್ತಿರಲಿಲ್ಲ ಎಂಬುದು ಕುಶಾಲಿನ ಮಾತು.
ಆದರೆ ಈ ವರ್ಷ ನಾನು ಓದಿದ ಪುಸ್ತಕದಲ್ಲಿ ನನ್ನ ಗಮನ ಸೆಳೆದ ಹಲವು ಪುಸ್ತಕಗಳಿವೆ. ಅದರಲ್ಲೂ ತೀರಾ ಈಚೆಗೆ ಓದಿದ ಪಂಡಿತ ತಾರಾನಾಥರ ‘ದೇವರ ಮಗು’ ವಿಶೇಷವಾದುದು ಅನೇಕ ಕಾರಣಗಳಿಗೆ. ಇದು ಪಂಡಿತ ತಾರಾನಾಥರ ಸಮಗ್ರ ಸಾಹಿತ್ಯ ಸಂಪುಟದ ಮೂರನೆಯ ಪುಸ್ತಕ. ಈ ಹಿಂದೆ ಪಂಡಿತ ತಾರಾನಾಥರ ‘ಧರ್ಮ ಸಂಭವ’ ಎಂಬ ಪುಸ್ತಕದ ಮರುಮುದ್ರಣವನ್ನು ಓದಿದ್ದೆ. ಅದು ಕಬ್ಬಿಣದ ಕಡಲೆ ಎನಿಸಿತ್ತು. ನನ್ನ ತಲೆಗೆ ಹತ್ತಿರಲಿಲ್ಲ. ಆದರೆ ಈ ‘ದೇವರ ಮಗು’ ಹಾಗಲ್ಲ. ಇಲ್ಲಿ ಏಳು ಕತೆಗಳಿವೆ. ಎರಡು ಕಿರು ನಾಟಕಗಳಿವೆ.
ಈ ಪುಸ್ತಕ ಇಷ್ಟವಾಗಲು ಮೊದಲ ಕಾರಣ, ಇಲ್ಲಿ ಬಳಸಲಾಗಿರುವ ಭಾಷೆ. ಇಲ್ಲಿನ ಕತೆಗಳು ಸ್ವಾತಂತ್ರ್ಯಪೂರ್ವದ್ದಾದರೂ ಕತೆಯನ್ನು ಹೇಳಲು ಬಳಸಿರುವ ಭಾಷೆಯು ಹಿಂದಿನದೆನಿಸುವುದಿಲ್ಲ. ಓದುಗರಿಗೆ ಸಲೀಸಾಗಿ ತಲುಪುವ ಕ್ಲಿಷ್ಟವಲ್ಲದ ವಾಕ್ಯ ರಚನೆ, ಹೇಳಬೇಕೆಂದಿರುವ ವಿಷಯ ಕುರಿತು ಸ್ಪಷ್ಟತೆ – ಇವು ಪಂಡಿತ ತಾರಾನಾಥರ ಈ ಕತೆಗಳನ್ನು ಮತ್ತೆ ಮತ್ತೆ ಓದಲು ಪ್ರೇರೇಪಿಸುತ್ತವೆ. ಇಲ್ಲಿರುವ ‘ಯಾರು ಕೆಟ್ಟರು?’, ‘ನಿಸರ್ಗಾವಮಾನ’, ‘ದೇವರ ಮಗು’ ತರಹದ ಕತೆಗಳು ಆಧುನಿಕ ಚಿಂತನೆಗಳು (ನಮ್ಮ ಕಾಲದ ಎಂಬರ್ಥದಲ್ಲಿ) ಎಂದೆನಿಸುವಷ್ಟು ಹೊಸತಾಗಿವೆ.
ಇದೇ ಮಾತುಗಳನ್ನು ಇಲ್ಲಿರುವ ಎರಡು ಕಿರು ನಾಟಕಗಳ ಬಗ್ಗೆ ಹೇಳಲಾಗದು. ಆದರೂ ಈ ನಾಟಕಗಳ ವಸ್ತು ಪಂಡಿತ ತಾರಾನಾಥರ ಕಾಲಕ್ಕೆ ಮಾತ್ರವಲ್ಲ ಇಂದು ಹೆಚ್ಚುತ್ತಿರುವ ಹುಸಿದೇಶಭಕ್ತಿಯ ಕಾಲದಲ್ಲಿ ಮುಖ್ಯವಾಗುತ್ತದೆ. ಆ ಕಾಲದಲ್ಲಿನ ನಾಟಕ ಪ್ರದರ್ಶನದ ತೊಡಕುಗಳಿಗೆ ಹೊಂದುವಂತೆ ಪಂಡಿತ ತಾರಾನಾಥರು ಈ ನಾಟಕಗಳನ್ನು ಕಟ್ಟಿರಬಹುದು. ಪ್ರಾಯಶಃ ಈ ನಾಟಕಗಳ ಎಳೆಯನ್ನು ಹಿಡಿದುಕೊಂಡು ಈ ಕಾಲದ ಪ್ರದರ್ಶನಾನುಕೂಲಕ್ಕೆ ಹೊಂದಿಸಿ ಹಿಗ್ಗಿಸಿದರೆ ಇವು ಖಂಡಿತ ಉತ್ತಮ ನಾಟಕಗಳಾಗಬಲ್ಲವು.
‘ದೇವರ ಮಗು’ ತರಹದ ಪುಸ್ತಕಗಳ ಮೂಲಕ ಪಂಡಿತ ತಾರಾನಾಥರ ಮರುಪರಿಚಯ ಮಾಡಿಕೊಳ್ಳಲು ಕಾರಣರಾದ ಈ ಮಾಲಿಕೆಯ ಸಂಪಾದಕರಾದ ಎಂ.ಧ್ರುವನಾರಾಯಣ ಮತ್ತು ಕಿ.ರಂ. ನಾಗರಾಜ ಅವರಿಗೆ ಮತ್ತು ಪ್ರಕಾಶಕರಿಗೆ ಅಭಿನಂದನೆ ಸಲ್ಲಿಸುತ್ತಾ ನೀವೂ ಈ ಪುಸ್ತಕ ಓದಿರಿ ಎಂದು ಕೋರುತ್ತೇನೆ.
-ಬಿ. ಸುರೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.