ADVERTISEMENT

ನನ್ನ ಕಾವ್ಯ ನನ್ನದು

ಮಹಿಳಾ ಕಾವ್ಯ: ಕೆಲವು ಟಿಪ್ಪಣಿಗಳು

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ಪ್ರಸ್ತುತ ಕನ್ನಡ ಕಾವ್ಯದ ಬಗ್ಗೆ ಕೇಳಬಹುದಾದ ಎರಡು ಪ್ರಶ್ನೆಗಳೆಂದರೆ- ಯಾರು ಬರೆಯುತ್ತಿದ್ದಾರೆ ಮತ್ತು ಯಾಕೆ ಬರೆಯುತ್ತಿದ್ದಾರೆ? ಉತ್ತರ ಬಹಳ ಸುಲಭ- ಮಹಿಳೆಯರು ಬರೆಯುತ್ತಿದ್ದಾರೆ ಮತ್ತು ತಮಗಾಗಿ ಬರೆಯುತ್ತಿದ್ದಾರೆ. ಸಾಂಪ್ರದಾಯಿಕ ವಿಮರ್ಶಕರು ಈ ಮಾತನ್ನು ವಿರೋಧಿಸಿ ಗಲಾಟೆ ಮಾಡುವ ಸಾಧ್ಯತೆ ಇದೆ. ಆದರೆ ಇದು ಸತ್ಯ. ಕನ್ನಡದಲ್ಲಿ ಮಹಿಳಾ ಕವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ನಿಸ್ಸಂಶಯವಾಗಿ ಅವರು ಸೆಂಟರ್ ಸ್ಟೇಜ್ ಅಂದರೆ ಮುಖ್ಯನೆಲೆಗೆ ಬಂದಿದ್ದಾರೆ.

ಇಂದು ಮಹಿಳೆಯರು ಕಾವ್ಯ ಜಗತ್ತಿನ ಮುಂಚೂಣಿಯಲ್ಲಿದ್ದಾರೆ ಅನ್ನಲು ಮುಖ್ಯ ಕಾರಣ ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಕಾವ್ಯವನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸುತ್ತಿದ್ದರೆ, ಸಮಕಾಲೀನ ಪುರುಷ ಕವಿಗಳು ಇನ್ನೂ ತಮ್ಮ ಹಳೆಯ ನೆಲೆಗಳನ್ನು ಬಿಟ್ಟುಕೊಡಲಾಗದೇ, ಹೊಸತನ್ನು ಒಪ್ಪಿಕೊಳ್ಳಲಾಗದೇ ಚಡಪಡಿಸುತ್ತಿದ್ದಾರೆ. ಶತಮಾನದ ಮಹಿಳೆಯರು ಕಾವ್ಯದ ವಸ್ತು ಮಾತ್ರವಾಗಿದ್ದವರು, ಪ್ರಸ್ತುತ ತಾವೇ ಸ್ವತಃ ಚರಿತ್ರೆ ನಿರ್ಮಾಣಕಾರರಾಗಿ ದಾಖಲಿಸುತ್ತಿದ್ದಾರೆ ಮತ್ತು ಇದುವರೆಗೆ ತಮ್ಮನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿದ್ದವರನ್ನು ತಾವೇ ವಿಚಾರಿಸಿಕೊಳ್ಳುತ್ತಿದ್ದಾರೆ.

ಈ ಪ್ರಧಾನ ಪಾತ್ರ ಪಲ್ಲಟದ ಬಗ್ಗೆ ಮಾತಾಡಲೂ ಸಹ ಯಾರೂ ಸಿದ್ಧರಿಲ್ಲ. ಯಾಕೆಂದರೆ ಇದನ್ನು ಒಪ್ಪಿಕೊಳ್ಳುವುದಿರಲಿ ಪರಿಗಣಿಸುವುದು ಕೂಡಾ ಅವರ ಪುರಾತನ ಘನತೆಗೆ ಕೀಳಾದುದು. ಹಾಗಾಗಿ `ಇದು ಮಹಿಳಾಕಾವ್ಯದ ಯುಗ' ಎಂದು ಘೋಷಿಸಲು ಅವರು ಇನ್ನೂ ತಯಾರಾಗಿಲ್ಲ. ಅವರ ಈ ವಿಫಲತೆಗೆ ಮುಖ್ಯ ಕಾರಣ ಅವರಿನ್ನೂ ಮಹಿಳೆಯರ ಕಾವ್ಯವನ್ನು ಸರಿಯಾಗಿ ಓದಲು ಅರ್ಥಮಾಡಿಕೊಳ್ಳಲು ಅಸಮರ್ಥರಾಗಿರುವುದು. ಇನ್ನೂವರೆಗೂ ವಿಮರ್ಶಕರು ಮಹಿಳೆಯರ ಕಾವ್ಯವನ್ನು ಸಾಂಪ್ರದಾಯಿಕ ಮೂಸೆಯಲ್ಲೇ ಒರೆ ಹಚ್ಚಿ ನೋಡಿ ಅದರ ಸಿದ್ಧ ಮಾನದಂಡಗಳಿಗೆ ತಕ್ಕದ್ದಾಗಿದ್ದರೆ ಮಾತ್ರ ಒಪ್ಪಿಕೊಳ್ಳುವ ಧೋರಣೆ ತಾಳಿರುವುದು.

ಮಹಿಳೆಯರನ್ನು ಬೇರೆ ರೀತಿಯಲ್ಲಿ ಓದಬೇಕು ಮತ್ತು ಅವರ ಕಾವ್ಯವನ್ನು ಭಿನ್ನ ರೀತಿಯಲ್ಲಿ ಅರ್ಥೈಸಬೇಕು ಎನ್ನುವ ಮೂಲಭೂತ ಅರಿವೇ ಇಲ್ಲವಾಗಿದೆ. ಹಾಗಾಗಿ ವಿಮರ್ಶಕರು ಇನ್ನೂವರೆಗೂ ಮಹಿಳೆಯರ ಕಾವ್ಯವನ್ನು ಕುರಿತು ಬರೆಯುವಾಗ ಒಂದುರೀತಿಯ ರಿಯಾಯಿತಿ ನೀಡುವ ಧೋರಣೆಯನ್ನೇ ತಾಳುತ್ತಿದ್ದಾರೆ. ಉದಾಹರಣೆಗೆ ಪುರುಷರ ಕಾವ್ಯವನ್ನು ವರ್ಗೀಕರಿಸುವ ಯಾವುದೇ ಪ್ರಯತ್ನ ಇದುವರೆಗೆ ಕಂಡುಬಂದಿಲ್ಲವಾದರೂ ಮಹಿಳೆಯರ ಕಾವ್ಯವನ್ನು ಗೃಹಕತ್ಯ, ಲೈಂಗಿಕತೆ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನ ಕುರಿತ ಕವನಗಳನ್ನು ಮಹಿಳೆಯರು ಬರೆಯುತ್ತಾರೆ ಎಂದು ಸಾರಾಸಗಟಾಗಿ ಘೋಷಿಸುವ ಪ್ರವೃತ್ತಿ ಕಂಡುಬರುತ್ತದೆ (Domesticity, sexuality and women’s positioning in society.) ಈ ಮೂರು ವರ್ಗಗಳಿಗೆ ಒಳಪಡದ ಕಾವ್ಯವನ್ನು ಅತ್ಯಂತ ಸುಲಭವಾಗಿ ಯಾವುದೇ ಮುಲಾಜಿಲ್ಲದೆ ತಳ್ಳಿಹಾಕಿಬಿಡುತ್ತಾರೆ.

ಪುರುಷರ ಕಾವ್ಯವನ್ನು ಕುರಿತು ಹೇಳಬೇಕಾದರೆ ಇದನ್ನೇ recurring themes, preoccupation ಎನ್ನುವ ಪಾಸಿಟಿವ್ ಪದಗಳನ್ನು ಬಳಸಿ ವರ್ಣಿಸುತ್ತಾರೆ. ಮಹಿಳೆಯರು ಏನೇ ಕುರಿತು ಬರೆದರೂ ಈ ಮೂರು ವರ್ಗಗಳಲ್ಲಿ ಅಡಕಗೊಳಿಸುತ್ತಾರೆ. ಇದು ಬಿಟ್ಟು ಮಹಿಳೆಯರು ಬೇರೆ ಏನೂ ಬರೆದಿಲ್ಲ ಎಂದು ಸಾರಿಬಿಡುತ್ತಾರೆ. ಉದಾಹರಣೆಗೆ ಮಂಗಳೂರು ಪಬ್ ಅಟ್ಯಾಕ್ ಬಗ್ಗೆ ಬಂದ ಕವನಗಳು, ಮಾನಭಂಗದ ಬಗ್ಗೆ ಬಂದ ಕವನಗಳು, ಜನಪ್ರತಿನಿಧಿಗಳೇ ದ್ವಿಪತ್ನಿತ್ವ ಹೊಂದಿದ ಬಗ್ಗೆ ಖಂಡಿಸಿ ಬರೆದ ಕವನಗಳು, ಸಾರಾಯಿ ವಿರೋಧಿಸಿ ಬರೆದವು, ಧಾರ್ಮಿಕ ಸ್ವಾಮಿ ಎನ್ನುವ ಮುಖವಾದ ಧರಿಸಿ ಲೈಂಗಿಕ ಹಗರಣ ನಡೆಸಿದ ಬಗ್ಗೆ ಬರೆದ ಕವನಗಳು, ಕೊನೆಗೆ ಪಿಂಕ್ ಚಡ್ಡಿ ಆಂದೋಲನದ ಬಗ್ಗೆ ಬರೆದ ಕವನಗಳನ್ನು ಕೂಡಾ ಅವರು `ಹೆಂಗಸರ ವಿಷಯಗಳು', `ಸ್ತ್ರೀವಾದಿ' ಎನ್ನುವ ಶೀರ್ಷಿಕೆಯಲ್ಲಿ ನೋಡಿದರೇ ವಿನಾ ಅವು ರಾಜಕೀಯ ಕವನಗಳು ಎಂದು ಗುರುತಿಸಲೇ ಇಲ್ಲ.

ಹೊಸ ದೃಷ್ಟಿಕೋನ
ಇವತ್ತು ಮಹಿಳಾ ಕಾವ್ಯವನ್ನು ಅರ್ಥಮಾಡಿಕೊಳ್ಳಲು ಹೊಸ ದೃಷ್ಟಿಕೋನ ಬೇಕಿದೆ. ಯಾಕೆಂದರೆ ನಾವು ಅತ್ಯಂತ ಸಂಕ್ರಮಣ ಕಾಲದಲ್ಲಿ ಬರೆಯುತ್ತಿದ್ದೇವೆ. ಸಾಮಾಜಿಕ-ಸಾಂಸ್ಕೃತಿಕ ಪಲ್ಲಟಗಳು ಇಂದು ಬಹಳ ವೇಗಗತಿಯಲ್ಲಿ ಆಗುತ್ತಿವೆ ಮತ್ತು ನೀತಿ ನಿಯಮಗಳು ರಾಕೆಟ್ ವೇಗದಲ್ಲಿ ಬದಲಾಗುತ್ತಿವೆ. ಉದಾಹರಣೆಗೆ ನೌಕಾಪಡೆಯಲ್ಲಿ ಹೆಂಡತಿಯರನ್ನು ಅದಲು ಬದಲು ಮಾಡಿಕೊಳ್ಳುವ ಅಸಹ್ಯ ಪದ್ಧತಿ ಜಾರಿಯಲ್ಲಿದೆ. ಇದರಿಂದ ಪಾರುಮಾಡಿ ಎಂದು ಹೆಂಡತಿಯರು ಬೇಡಿಕೊಂಡರೂ ಅದರ ಬಗ್ಗೆ ಇನ್ನೂ ಕ್ರಮ ಇರಲಿ ಮಾತಾಡಲೂ ಯಾವುದೇ ರೀತಿಯಲ್ಲಿ ಸಿದ್ಧರಿಲ್ಲದ ವ್ಯವಸ್ಥೆ ಇದೆ. ಅಂದರೆ ಅಂತಹ ವಿಕೃತಿಯನ್ನು ಒಪ್ಪಿಕೊಂಡುಬಿಡುವ ಮನೋಭಾವ, ಅದನ್ನು ಅಪರಾಧ ಎಂದು ಪರಿಗಣಿಸಲು ಹಿಂದುಮುಂದು ನೋಡುವ ವರ್ಗ ಇದೆ ಎಂದರೆ ಮತ್ತೆ ಮಹಿಳೆಯರ ಮೇಲೆ ಯಾಕೆ ನೈತಿಕ ಒತ್ತಡವನ್ನು ಹಾಕಬೇಕು?

ಆದರೆ ಹಾಗಾಗುತ್ತಿಲ್ಲ. ಒಂದು ಕಡೆ ಮಹಿಳೆಯರು ಪ್ರಗತಿಪರವಾಗಿರಬೇಕು ಆಧುನಿಕರಾಗಬೇಕು ಎಂದು ಒತ್ತಾಯಿಸಿ, ಅವರು ಆಧುನಿಕರಾಗಿ ಜೀನ್ಸ್ ಧರಿಸಲು ತೊಡಗಿದೊಡನೆಯೇ ಗಾಬರಿಪಟ್ಟು `ಕಾಲೇಜಿಗೆ ಜೀನ್ಸ್ ಧರಿಸಬಾರದು' ಎನ್ನುವ ಡ್ರೆಸ್ ಕೋಡ್ ತರುವ ಅರಕ್ಷಿತ ಭಾವನೆ. ಈ ಅಸುರಕ್ಷತೆ ಅವರನ್ನು ಎಷ್ಟರಮಟ್ಟಿಗೆ ಕಾಡುತ್ತಿದೆ ಅಂದರೆ ಒಂದು ಕಡೆ `ಹೆಣ್ಣು ಬತ್ತಲಾದರೆ ಪ್ರಳಯ' ಅನ್ನುವವರೇ, ಅದೇ ಕಾಲದಲ್ಲಿ ಐಟಂ ಹುಡುಗಿಯರನ್ನು ಬಳಸಿಕೊಳ್ಳುತ್ತಾ ಅದು ಕೊನೆಗೆ ಕ್ರಿಕೆಟ್ ಎನ್ನುವ ಆಟಕ್ಕೂ ಕಾಲಿಟ್ಟು ಅಲ್ಲಿಯೂ ಗ್ಲಾಮರ್ ಎನ್ನುವ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ.

ADVERTISEMENT

ಈಗ ಹುಡುಗಿಯರು ಯಾರನ್ನು ಅನುಕರಿಸಬೇಕು? ಯಾರನ್ನು ಮಾದರಿಯಾಗಿಟ್ಟುಕೊಳ್ಳಬೇಕು? ಇದನ್ನೇ ಕಾವ್ಯ ಕ್ಷೇತ್ರಕ್ಕೆ ಅನ್ವಯಿಸಿದರೆ ಈಗಲೂ `ಹೆಣ್ಣುಮಕ್ಕಳು' (ಪದವೇ ನೋಡಿ ಹೇಗಿದೆ!) ಒಂದು ಕಡೆ ಮುಕ್ತವಾಗಿ ಬರೆಯಲಿ ಎಂದು ಆಶಿಸುವುದು ಇನ್ನೊಂದು ಕಡೆ ಆ ಮುಕ್ತತೆಗೆ ಒಂದು ಪರಿಮಿತಿಯನ್ನು ತಾವೇ ಸೂಚಿಸುವುದು!

ಇವತ್ತಿನ ಕೀಬೋರ್ಡ್ ಸಮಾಜ ಎಲ್ಲೆಗಳನ್ನು ಮೀರಿ ಕಾಲದೇಶಗಳನ್ನು ಮೀರಿ ದಾಪುಗಾಲಿಡುತ್ತಿದೆ. ಆದರೆ ನಮ್ಮ ವಿಮರ್ಶಕ ಮಹಾಶಯರು ಇನ್ನೂವರೆಗೂ ಮಹಿಳೆಯರ ಕಾವ್ಯವನ್ನು ಅಕ್ಕಮಹಾದೇವಿಗೆ ಹೋಲಿಸುವ ಹಳೆಯ ಚಾಳಿಯನ್ನು ಬಿಟ್ಟಿಲ್ಲ. ಯಾಕೆಂದರೆ ಅವರಿಗೆ ಗಂಡ ಮನೆ ಬಟ್ಟೆ ತೊರೆದುಹೋದ ಅಕ್ಕನನ್ನು `ಮಹಾಕವಿ' ಎಂದು ಗೌರವಿಸಬೇಕೋ ಇಲ್ಲವೋ ಗೊತ್ತಾಗುತ್ತಿಲ್ಲ. ಯಾವುದೇ ಕಾರಣಕ್ಕೆ ಮನೆ, ಗಂಡನನ್ನು ತೊರೆದ ಹೆಣ್ಣನ್ನು ಇವತ್ತಿನ ಯಾವ ಪುರುಷ ಪ್ರಭೃತಿಯೂ ಅಕ್ಕನಿಗೆ ಹೋಲಿಸುವುದಿಲ್ಲ. ಹಾಗೆ ಅವಳನ್ನು ಒಪ್ಪಿಕೊಳ್ಳಬೇಕಾದ ಸಂದರ್ಭ ಬಂದರೂ ಅವಳನ್ನು ತಮ್ಮ ಮಾನದಂಡದ ಒರೆಗೆ ಸಿಕ್ಕಿಸಿ ನುರಿದು ಜಜ್ಜಿ ಕೊನೆಗೆ ಅರೆಮನಸ್ಸಿನಿಂದ ಒಪ್ಪಿಗೆ ಕೊಡುತ್ತಾರೆ. ಇನ್ನು ಅವಳ ಕಾವ್ಯವನ್ನು ಸುಮ್ಮನೇ ಬಿಡುತ್ತಾರೆಯೇ? ಖಂಡಿತಾ ಇಲ್ಲ.

ಸಣ್ಣ ಉದಾಹರಣೆ ಕೊಡಬೇಕೆಂದರೆ ನನ್ನ `ಮುದುಕಿಯರಿಗಿದು ಕಾಲವಲ್ಲ' ಕವನಕ್ಕೆ ಬಂದ ಪ್ರತಿಕ್ರಿಯೆ. ಇದು ಒಂದು `ರಮ್ಯ' ಅನುಭವ ಕೊಡುವಾಗಲೇ ನಿಲ್ಲಬೇಕಿತ್ತು, ಅವಳ ಸಾವು, ವಾಸನೆ ಇತ್ಯಾದಿಯನ್ನೆಲ್ಲ ಹೇಳಿ ಕವನ ಅತಿರೇಕಕ್ಕೆ ಹೋಗಿದೆ ಎಂದು ಕನ್ನಡದ ಪ್ರಮುಖ ಹಿರಿಯ ಸಾಹಿತಿ ಗೆಳೆಯ ಹೇಳಿದರು. ಕವನದ ಆಶಯವೇ ಇಂದಿನ ಐಟಂ ಹುಡುಗಿಯರ ಭರತಕ್ಕೆ ಬಿದ್ದು ಮುದುಕಿಯರು ಅನುಭವಿಸುತ್ತಿರುವ ತಳಮಳ ಮತ್ತು ಅತಂತ್ರ ಸ್ಥಿತಿಯನ್ನು ದಾಖಲಿಸುವುದಾಗಿತ್ತು. ಜನಹೃದಯ ಸಾಮ್ರೋಜ್ಞಿಯಾಗಿ ಮೆರೆದ ಮಾಧುರಿ ದೀಕ್ಷಿತ್ ಎರಡೂ ಮಕ್ಕಳ ತಾಯಿಯಾದ ಮೇಲೆ ಹಿಂದಿರುಗಿ ರಣಬೀರ್ ಕಪೂರ್ ಜೊತೆ ಒಂದು ಐಟಂ ಡ್ಯಾನ್ಸ್ ಮಾಡಿದ್ದಕ್ಕೆ ಬರುತ್ತಿರುವ ಟೀಕೆಗಳ ಮಹಾಪೂರ ನೋಡಿದರೆ ಗೊತ್ತಾಗುತ್ತದೆ ಇಲ್ಲಿಯ ಜನರ ಮನಸ್ಥಿತಿ.

ಅಂತಹ ಸಂದರ್ಭದಲ್ಲಿ ಮಹಿಳೆ ಬರೆದದ್ದೆಲ್ಲವೂ ರಮ್ಯವಾಗಿರಬೇಕು ಮತ್ತು ಮಳೆಬೀಳುತ್ತಿರುವಾಗ ಬಿಸಿಬಿಸಿ ಪಕೋಡಾ ಕಾಫಿ ಸೇವಿಸುತ್ತಾ ಓದುವಂತಿರಬೇಕು ಎಂದು ನಿರೀಕ್ಷಿಸುವ ವರ್ಗ ಇನ್ನೂ ಇದೆ ಎನ್ನುವುದೇ ಕಟು ವಾಸ್ತವ. ಅದಕ್ಕೇ ಇವತ್ತು ಮಹಿಳಾ ಕವಿಗಳು ವಿಮರ್ಶಕರ ನುಡಿಗಳಿಗೆ ಕಿವುಡಾಗಿ ಬರೆಯುತ್ತಿದ್ದಾರೆ. ಅದೇ ಅವರನ್ನು ಕಾಪಾಡಿಕೊಳ್ಳುವ ಏಕೈಕ ಉಪಾಯ.

ಮೊಟ್ಟಮೊದಲನೆಯದಾಗಿ ಮಹಿಳೆಯರು ಇವತ್ತು ತಮ್ಮನ್ನು ಅಭಿವ್ಯಕ್ತಿಗೊಳಿಸಿಕೊಳ್ಳಲು ಮಾತ್ರ ಬರೆಯುತ್ತಿದ್ದಾರೆ. ಕಾವ್ಯ ಅವರಿಗೆ ಅಗತ್ಯವಾದ ಮುಸುಕನ್ನು ಕೊಡುತ್ತದೆ. ಯಾಕೆಂದರೆ ಇನ್ನೂವರೆಗೂ ಗಂಡಸರು ತಮ್ಮ ಹೆಂಡತಿಯ ಕಾವ್ಯಾಭಿವ್ಯಕ್ತಿಯನ್ನು ಒಂದು ಆರೋಗ್ಯಕರ ದೃಷ್ಟಿಯಲ್ಲಿಟ್ಟು ನೋಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗದೇ ಇರುವುದು. ಮಹಿಳಾಕವಿಗಳಲ್ಲಿ ಹೆಚ್ಚಿನವರಿಗೆ ಯಾವುದೇ ರೀತಿಯ ಸಾಹಿತ್ಯಿಕ ಮನ್ನಣೆ, ಪ್ರಶಸ್ತಿಯೇ ಮುಖ್ಯವಲ್ಲ. ಅದೂ ದೊರಕಿದರೆ ಸಂತೋಷ, ಆದರೆ ಅದೇ ಪ್ರಧಾನ ಗುರಿಯಲ್ಲ. ಎಷ್ಟೋ ಮಹಿಳೆಯರು ನಿಜವಾಗಿ ತಮ್ಮ ಅಭಿವ್ಯಕ್ತಿಯ ನಿರಾಳತೆಗೆ ಮಾತ್ರ ಕವನ ಬರೆಯುತ್ತಿದ್ದಾರೆ. ಸಾಮಾಜಿಕ ಸಂಕ್ರಮಣ ಕಾಲದಲ್ಲಿ ತಮ್ಮ ಗೊಂದಲಗಳನ್ನು ಹಂಚಿಕೊಳ್ಳುವ ತೋಡಿಕೊಳ್ಳುವ ಮಾರ್ಗ ಅದು.

ಇದಕ್ಕೆ ಯಾವುದೇ ವಸ್ತುಶೈಲಿ ಇತ್ಯಾದಿಗಳ ನಿರ್ಬಂಧವಿಲ್ಲ. ಎಲ್ಲೋ ದೆಹಲಿಯಲ್ಲಿ ಯಾವುದೋ ಮಹಿಳೆಯ ಮಾನಭಂಗವಾಗಿ ಕೊಲೆಯಾದರೆ ಇಲ್ಲಿ ಇವರು ಮರುಗಿ ಸಂಕಟಪಟ್ಟು ಕವನ ಬರೆಯುತ್ತಾರೆ. ಅವಳ ದುರಂತಕ್ಕೆ ಮಿಡಿಯುತ್ತಾರೆ. ಆದರೆ ಅದನ್ನು ಅರ್ಥಮಾಡಿಕೊಳ್ಳದ ವಿಮರ್ಶಕರು ಇನ್ನೂವರೆಗೂ ಮಹಿಳೆಯ ಕಾವ್ಯದ ಉದ್ದೇಶವನ್ನು ತಿಳಿದುಕೊಳ್ಳದೇ ಟೀಕಿಸುತ್ತಿದ್ದಾರೆ. ಇದನ್ನೇ ಕುರಿತು ಒಬ್ಬ ಪುರುಷ ಬರೆದರೆ ಅದು ಸಾಮಾಜಿಕ ಸ್ವಾಸ್ಥ್ಯದ ಕುರಿತು ಅವನಿಗಿರುವ ಕಾಳಜಿ ಎಂದು ಗುರುತಿಸಲಾಗುತ್ತದೆ. ಮಹಿಳೆ ಬರೆದರೆ ಅದು ಮಹಿಳೆಯ ದನಿ ಮಾತ್ರವಾಗುತ್ತದೆ. ಅದು ಪುರುಷನ ಬಗ್ಗೆ ಅವಳು ಮಾಡುತ್ತಿರುವ ಆರೋಪ, ದೂರಾಗಿ ಕೂಡಾ ಅವರು ಪರಿಗಣಿಸುವುದಿಲ್ಲ. `ಓಹ್, ಬಿಡಿ ಮಹಿಳಾ ಕಾವ್ಯ' ಎನ್ನುವ ಉಡಾಫೆ ಮಾತ್ರ ತುಂಬಿತುಳುಕುತ್ತಿದೆ.

ಮಹಿಳೆಯರು ಇವತ್ತು ಯಾವ ವಿಷಯಗಳ ಬಗ್ಗೆ ಬರೆಯುತ್ತಿಲ್ಲ? ಎಲ್ಲಾ ವಿಷಯಗಳು ಇವತ್ತು ಅವರ ಕಾವ್ಯ ಪರಿಧಿಯೊಳಗೆ ಬಂದಿದೆ. ಅದಕ್ಕಾಗಿ ಅವರು ಹೊಸ ಭಾಷೆಯನ್ನೂ ಕಂಡುಕೊಳ್ಳುತ್ತಿದ್ದಾರೆ, ಅಗತ್ಯವಾದಲ್ಲಿ ಪಾರಿಭಾಷಿಕವನ್ನೂ ಹುಟ್ಟುಹಾಕುತ್ತಿದ್ದಾರೆ. ಸಮಕಾಲೀನ ಮಹಿಳಾ ಕವಿಗಳು ತಮ್ಮದೇ ಆದ ಭಾಷೆ, ಶೈಲಿ ಕಾಳಜಿಗಳನ್ನು ದಾಖಲಿಸುತ್ತಿದ್ದಾರೆ. ಇವತ್ತು ಬರೆಯುತ್ತಿರುವ ಹುಡುಗನಿಗೆ ಹೇಗೆ ಬಸವಣ್ಣನಿಗೆ ಎದುರಾಗಿ ಪಿಚ್ ಮಾಡುವ ಅನಿವಾರ್ಯವಿಲ್ಲವೋ ಹಾಗೆಯೇ ಇವತ್ತಿನ ಹುಡುಗಿಯರೂ ಅಕ್ಕಮಹಾದೇವಿಗೆ ಕಟ್ಟುಬೀಳದೇ ಬರೆಯುತ್ತಿದ್ದಾರೆ. ಇವತ್ತು ಹುಡುಗನೊಬ್ಬ ಬಸವಣ್ಣನನ್ನು ಅನುಕರಿಸಿ ಬರೆದರೆ ಯಾರೂ ಅದನ್ನೆತ್ತಿ ಮಾತಾಡುವುದಿಲ್ಲ, ಆದರೆ ಹುಡುಗಿಯೊಬ್ಬಳು ಮಹಾದೇವಿಯನ್ನು ಅನುಕರಿಸಿದರೆ ಅವಳಿಗೆ ಕಾವ್ಯ ವಿಮರ್ಶಕರ ಉರುಳು ಗ್ಯಾರಂಟಿ.

ಹಾಗಾಗಿ ಇವತ್ತಿನ ಹುಡುಗಿಯರು ತಾನು ಬರೆದ ಕಾವ್ಯ ತನ್ನದೇ ಅಭಿವ್ಯಕ್ತಿಯಾಗಬೇಕು ಎನ್ನುವ ಎಚ್ಚರದಲ್ಲಿ ಬರೆಯುತ್ತಿದ್ದಾರೆ. ಅಕಸ್ಮಾತ್ ಹಳಬರ ಚಿಂತನೆಯನ್ನು ಪರಿಗಣಿಸಿದರೂ ಅದನ್ನು ಪ್ರಶ್ನಿಸಲು ಅಥವಾ ತಮ್ಮ ವಾದಕ್ಕೆ ಸಮರ್ಥನೆಗಾಗಿ ಬಳಸಿಕೊಳ್ಳುತ್ತಾರೆ. ಉದಾಹರಣೆಗೆ ಅವರ್ಯಾರಿಗೂ ಸೌದೆ ಒಲೆ ಊದಿ ಅಡುಗೆ ಮಾಡುವ ಅನುಭವವೇ ಇಲ್ಲದಿದ್ದರೂ, ಗ್ಯಾಸ್ ಸ್ಟೌವ್ ಮಾತ್ರ ಗೊತ್ತಿದ್ದರೂ, `ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು' ಎನ್ನುವುದನ್ನು ಉಲ್ಲೇಖಿಸುತ್ತಾರೆ. ಯಾಕೆಂದರೆ ಅದರ ಹಿಂದಿನ ಆಕ್ರೋಶವನ್ನು ಮಾತ್ರ ಅವರು ಗುರುತಿಸುತ್ತಾರೆ.

ಪ್ರಸ್ತುತ ಕನ್ನಡ ಕಾವ್ಯ ಅತ್ಯಂತ ತೀವ್ರವಾಗಿ ಜಾತಿ ರಾಜಕೀಯದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ ಇವತ್ತು ಕವಿ ಎಂದು ಗುರುತಿಸಿಕೊಳ್ಳುವುದೇ ಒಂದು ಪೊಲಿಟಿಕಲ್ ಸ್ಟೇಟ್ ಮೆಂಟ್! ಇಂದು ಲಿಂಗಾಧಾರಿತ ತಾರತಮ್ಯಕ್ಕಿಂತ ಹೆಚ್ಚಾಗಿ ಹಾಗೂ ಬಲವಾಗಿ ಜಾತಿ ರಾಜಕಾರಣ ಕಾವ್ಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಬರೆದ ಕವನ ಎಷ್ಟು ಶಕ್ತಿಶಾಲಿ ಎನ್ನುವುದು, ಯಾರು ಬರೆದಿದ್ದು ಎನ್ನುವುದರ ಮೇಲೆ ನಿರ್ಧಾರಿತವಾಗುತ್ತಿದೆ. ಅದು ಕ್ರಮೇಣ ಕಾವ್ಯಕ್ಕೆ ಹೊರತಾದ ಸಂದರ್ಭಗಳಿಗೆ ಅಂದರೆ ಪ್ರಶಸ್ತಿ, ಸನ್ಮಾನ, ಅಕಾಡೆಮಿಗಳ ಸದಸ್ಯತ್ವ, ಇತ್ಯಾದಿಗಳಿಗೆ ಆವರಿಸಿದೆ. ಸದ್ಯಕ್ಕೆ ಇದರಿಂದ ಪಾರಾಗುವ ಉಪಾಯ ಕಾಣಿಸುತ್ತಿಲ್ಲ. ಸಾಮಾಜಿಕ ನ್ಯಾಯ ಎನ್ನುವುದು ಈಗ ಸೃಜನಶೀಲ ಕ್ಷೇತ್ರಗಳಿಗೂ ಅನ್ವಯಿಸುತ್ತಿರುವುದರಿಂದ ಎಲ್ಲರಿಗೂ ಸಮಾನ ಅವಕಾಶ ಎನ್ನುವ ನಿಯಮದಡಿ ಶುದ್ಧ ಕಾವ್ಯಾಭಿವ್ಯಕ್ತಿ ಎನ್ನುವ ಪರಿಗಣನೆಯಲ್ಲಿ ಏರುಪೇರಾದರೂ ಸಹಿಸಬೇಕಾಗುತ್ತದೆ. ಪರವಾಗಿಲ್ಲ. ಅದರಿಂದ ಮಹಿಳಾಕಾವ್ಯಕ್ಕೆ ಸದ್ಯಕ್ಕೆ ಧಕ್ಕೆ ಏನಿಲ್ಲ. ಮುಂದೆ ಏನಾಗುವುದೋ ಗೊತ್ತಿಲ್ಲ .

ನನ್ನ ದೇಹ ನನ್ನದು
ಒಂದಂತೂ ಸ್ಪಷ್ಟ- ಇವತ್ತು ತಾಯ್ತನ, ಹೆಣ್ತನ ಎನ್ನುವ ಪರಿಕಲ್ಪನೆಗಳೆಲ್ಲ ಮರುವ್ಯಾಖ್ಯಾನಕ್ಕೆ ಒಳಗಾಗುತ್ತಿವೆ. ಹಾಗಾಗಿ ಮಹಿಳೆಯರ ಕವನಗಳು ಇವನ್ನೇ ಪ್ರತಿಫಲಿಸುತ್ತಿವೆ. ಇದು ರಾಜಕೀಯ ಪ್ರಕ್ರಿಯೆಯೇ ಹೊರತು ವೈಯಕ್ತಿಕವಲ್ಲ. ಹೆಣ್ಣೆಂದರೆ ಅವಳ ದೇಹ ಅನ್ನುತ್ತಿದ್ದ ಘೋಷಣೆ ಈಗ `ಅವಳ ದೇಹ ಅವಳದು' ಅಥವಾ `ನನ್ನ ದೇಹ ನನ್ನದು' (ಇಟ್ಸ್ ಮೈ ಬಾಡಿ) ಎನ್ನುವ ಪರಿಕಲ್ಪನೆ ಜಾರಿಗೆ ಬಂದಿದೆ. ಅದು ಬಸಿರಿಗೂ ಸರಿ, ಲೈಂಗಿಕ ಸಂಬಂಧಕ್ಕೂ ಸರಿ. ಇದೇ ಈಗ ಕಾವ್ಯಕ್ಕೂ ಅನ್ವಯಿಸುತ್ತಿದೆ- ನನ್ನ ಕಾವ್ಯ ನನ್ನದು. ಇದು ಕಾವ್ಯಕ್ಕೆ ಹೊಸದು. ಕಮಲದ ತುಟಿಗಳಿಗೆ ಈಗ ಹೊಲಸು ಮಾತಾಡುವುದೂ ಗೊತ್ತಿದೆ ಎಂದು ದಾಖಲಿಸಬೇಕಾಗಿದೆ.

ಒಂದಂತೂ ಎಲ್ಲರೂ ಅರ್ಥಮಾಡಿಕೊಳ್ಳಬೇಕು, ಕವನ ಬರೆಯುವುದು ಮಹಿಳೆಯರಿಗೆ ವೈಯಕ್ತಿಕವಾಗಿ ಬಹಳ ಮುಖ್ಯ. ಅದು ಸುಮ್ಮನೇ ತೀಟೆ ತೀರಿಸಿಕೊಳ್ಳಲು ಬರೆದದ್ದಲ್ಲ. ಹಾಗಾಗಿ ಮಹಿಳಾ ಕಾವ್ಯವನ್ನು ಎರಡನೆಯ ದರ್ಜೆ ಬರಹವೆಂದು ಭಾವಿಸಿದರೆ ಅದಕ್ಕೆ ಕಟುವಾದ ಪ್ರತಿರೋಧ ಖಂಡಿತ. ಸಂಕೀರ್ಣ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಗಳಲ್ಲಿ ನಮ್ಮ ಕಾವ್ಯವನ್ನು ಸಮರ್ಥಿಸಿಕೊಳ್ಳುವ, ಅದಕ್ಕೆ ತಕ್ಕ ಮನ್ನಣೆಗೆ ಒತ್ತಾಯಿಸುವ ಕೆಲಸ ಪ್ರಯಾಸಕರವಾದುದು. ಆದರೂ ಮಹಿಳೆಯರು ಇಂದು ಕಾವ್ಯಕೃಷಿಯಲ್ಲಿ ಸಡಗರದಿಂದ ತೊಡಗಿಕೊಂಡಿದ್ದಾರೆ ಮತ್ತು ಮುಂಚೂಣಿಯಲ್ಲಿದ್ದಾರೆ.
ಈ ಲೇಖನಕ್ಕೆ ಪ್ರತಿಕ್ರಿಯೆಗಳಿಗೆ ಸ್ವಾಗತ
-ಸಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.