ADVERTISEMENT

‘‘ನಮಗೆ ಯಾವುದೇ ಹೊಸ ಐಡಿಯಾ ಹುಟ್ಟುಹಾಕುವುದು ಸಾಧ್ಯವಾಗುತ್ತಿಲ್ಲ...

ಪದ್ಮನಾಭ ಭಟ್ಟ‌
Published 8 ಅಕ್ಟೋಬರ್ 2016, 19:30 IST
Last Updated 8 ಅಕ್ಟೋಬರ್ 2016, 19:30 IST
ಡಾ. ಬಿ.ಎ. ವಿವೇಕ ರೈ
ಡಾ. ಬಿ.ಎ. ವಿವೇಕ ರೈ   

*ನೀವು ಕನ್ನಡ–ತುಳು–ಇಂಗ್ಲಿಷ್‌ ಮೂರೂ ಭಾಷೆಗಳ ವಿದ್ವತ್‌ ಜಗತ್ತನ್ನು ಬಲ್ಲವರು. ಹಲವು ಭಾಷೆಗಳ ಬಗೆಗಿನ ಕುತೂಹಲ ಹುಟ್ಟಿದ್ದು ಹೇಗೆ?
ನನ್ನ ಮಾತ್ರ ಭಾಷೆ ತುಳು. 1970ರಲ್ಲಿ ಕನ್ನಡ ಎಂ.ಎ. ಮುಗಿಸಿ 1971ರಲ್ಲಿ ಉಪನ್ಯಾಸಕ ಹುದ್ದೆಯೂ ಸಿಕ್ಕಿತು. ಪಿಎಚ್‌.ಡಿ. ಮಾಡುವ ಆಸೆ ಇತ್ತು. ಹಾ.ಮಾ. ನಾಯಕರ ಬಳಿಗೆ ಹೋದೆ. ಅವರು ‘ನೀವ್ಯಾಕೆ ತುಳುವಿನಲ್ಲಿ ಸಂಶೋಧನೆ ಮಾಡಬಾರದು’ ಎಂದು ಕೇಳಿದರು. ಅವರೇ ಮಾರ್ಗದರ್ಶಕರಾದರು. ತುಳು ಭಾಷೆಯಲ್ಲಿ ಕೆಲಸ ಮಾಡಲು ಪ್ರೇರಣೆ ಸಿಕ್ಕಿದ್ದು ಹಾ.ಮಾ. ನಾಯಕರಿಂದಲೇ.

ಕು.ಶಿ. ಹರಿದಾಸ ಭಟ್ಟರು ಕೂಡ ನನಗೆ ತುಳುವಿನಲ್ಲಿ ಸಂಶೋಧನೆ ಮಾಡಲು ಸಾಕಷ್ಟು ಪ್ರೋತ್ಸಾಹ ನೀಡಿದರು. ಉಡುಪಿಯಲ್ಲಿ ಅವರು ‘ಗೋವಿಂದ ಪೈ ಸಂಶೋಧನಾ ಕೇಂದ್ರ’ ಕಟ್ಟಿದ್ದರು. ನನ್ನನ್ನು ಸೆಮಿನಾರುಗಳಿಗೆಲ್ಲ ಆಹ್ವಾನಿಸಿದರು. ಅಲ್ಲಿನ ಸೆಮಿನಾರುಗಳಿಗೆ ವಿದೇಶಿ ವಿದ್ವಾಂಸರನ್ನೆಲ್ಲ ಕರೆಸುತ್ತಿದ್ದರು. ಫಿನ್ಲೆಂಡ್‌, ಅಮೆರಿಕ, ಜರ್ಮನಿಗಳಿಂದೆಲ್ಲ ವಿದ್ವಾಂಸರು ಬರುತ್ತಿದ್ದರು. ಇಂಥ ಸೆಮಿನಾರುಗಳಲ್ಲಿಯೇ ನಾನು ಜಾಗತಿಕ ವಿದ್ವಾಂಸರನ್ನು ಭೇಟಿಯಾಗಿದ್ದು. ಅಲ್ಲಿಯವರೆಗೆ ಇಂಗ್ಲಿಷ್‌ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ಆದರೆ ಅಂಥ ಸೆಮಿನಾರುಗಳಲ್ಲಿ ಭಾಗವಹಿಸಲು ಮತ್ತು ವಿದ್ವಾಂಸರೊಂದಿಗೆ ಚರ್ಚಿಸಲು ಇಂಗ್ಲಿಷ್‌ ಕಲಿಯಬೇಕಾಯಿತು. ಇಂಗ್ಲಿಷಿನಲ್ಲಿ ಪ್ರಬಂಧ ಮಂಡಿಸಲು ಶುರುಮಾಡಿದೆ. ಅವರ ಸಂಪರ್ಕದಿಂದ 1989ರಲ್ಲಿ ಜರ್ಮನಿಗೆ ಹೋದೆ, ಫಿನ್ಲೆಂಡ್‌ಗೆ ಹೋದೆ. ಅಂತರರಾಷ್ಟ್ರೀಯ ಪ್ರೊಜೆಕ್ಟ್‌ಗಳಲ್ಲಿ ಭಾಗವಹಿಸಿದೆ. ಹೀಗೆ ಹರಿದಾಸ ಭಟ್ಟರ ಮೂಲಕ ಜಾಗತಿಕ ವಿದ್ವತ್‌ ಪ್ರಪಂಚ ಪರಿಚಯವಾಯಿತು.

*ಒಂದೆಡೆ ಸಣ್ಣಪುಟ್ಟ ಭಾಷೆಗಳು ತಮ್ಮ ಅಸ್ತಿತ್ವಕ್ಕಾಗಿ ಒದ್ದಾಡುತ್ತಿವೆ. ಅದೇ ಸಮಯದಲ್ಲಿ ಇನ್ನು ಕೆಲವು ಭಾಷೆಗಳ ‘ಅಭಿಮಾನ’ ಎನ್ನುವುದು ಮೂಲಭೂತವಾದದ ರೂಪು ತಳೆಯುತ್ತಿದೆ. ಈ ಭಾವುಕ ಅತಿರೇಕ ಮತ್ತು ವಾಸ್ತವದ ಪಾತಾಳದ ನಡುವಿನ ಅಂತರಕ್ಕೆ ಏನು ಕಾರಣ ಇರಬಹುದು?
ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುತ್ತೇನೆ. ನಾನು ಪ್ರಾಧ್ಯಾಪಕನಾಗಿದ್ದವನು. 1976ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ‘ತುಳು ಭಾಷಾ ಸಾಹಿತ್ಯ’ ಮತ್ತು ‘ತುಳು ಜಾನಪದ’ ಎನ್ನುವ ಎರಡು ತುಳು ಪತ್ರಿಕೆಗಳನ್ನು ಆರಂಭಿಸಲಾಯಿತು. ಹಾಗೆ ತುಳು ಪತ್ರಿಕೆ ಆರಂಭಿಸಬೇಕು ಎಂದು ಹೇಳಿದವರು ಹಾ.ಮಾ. ನಾಯಕ. ಅವರು ಮಂಗಳೂರಿನವರಲ್ಲ.

1994ರಲ್ಲಿ ಕರ್ನಾಟಕ ಸರ್ಕಾರ ‘ತುಳು ಅಕಾಡೆಮಿ’ ಮಾಡಿದಾಗ ನನ್ನನ್ನು ಮೊದಲ ಅಧ್ಯಕ್ಷನನ್ನಾಗಿ ಮಾಡಿದರು. ಅಲ್ಲಿ ನಾನು ತುಳು ಸಾಹಿತ್ಯ ಅಧ್ಯಯನ, ಸಂಗ್ರಹ, ಪ್ರಕಟಣೆ ಮಾಡುತ್ತಿದ್ದೆ. ವಿಶ್ವವಿದ್ಯಾಲಯಕ್ಕೆ ಬಂದರೆ ಕನ್ನಡ ಸಾಹಿತ್ಯ, ಅದರ ಪಾಠ ಮಾಡುವುದು. ನನಗೆಂದಿಗೂ ಇದು ಬಿಕ್ಕಟ್ಟು ಎನಿಸಲಿಲ್ಲ.
ಕನ್ನಡಕ್ಕೆ ಹೋಲಿಸಿದರೆ ತುಳು ಸಣ್ಣ ಭಾಷೆ. ನಾನು ಕೃತಿಗಳನ್ನು ಕನ್ನಡದಿಂದ ತುಳುವಿಗೆ, ತುಳುವಿನಿಂದ ಕನ್ನಡಕ್ಕೆ ಅನುವಾದ ಮಾಡಿಸಿದೆ. ಇದರಿಂದ ತುಳು ಸಣ್ಣ ಭಾಷೆಯಾದರೂ ಕನ್ನಡದ ಪ್ರೇರಣೆಯಿಂದ ಅದು ಬೆಳೆಯುತ್ತ ಬಂತು. ಅನೇಕರಿಗೆ ತುಳುವಿನಿಂದ ಕನ್ನಡಕ್ಕೆ ತೊಂದರೆ ಎಂಬ ತಪ್ಪು ಕಲ್ಪನೆಯಿದೆ. ನಾನು ಹಲವು ವರ್ಷಗಳಿಂದ ನೋಡುತ್ತಿರುವ ಹಾಗೆ, ತುಳು ಮಾತನಾಡುವ ಎಲ್ಲರೂ ಕನ್ನಡವನ್ನು ತುಂಬ ಚೆನ್ನಾಗಿ ಓದಿ ಬರೆಯಬಲ್ಲರು.

ಕರಾವಳಿಯಲ್ಲಿ ಎಲ್ಲರೂ ಬೆಳಿಗ್ಗೆ ಕನ್ನಡ ಪತ್ರಿಕೆಯನ್ನೇ ಓದುತ್ತಾರೆ. ತುಳುವಿಗೆ ಒಂದು ಸ್ಥಾನಮಾನ ಸಿಕ್ಕಿದ ಕಾರಣ ಮೌಖಿಕ ಸಂಪ್ರದಾಯದ, ಕೆಳವರ್ಗ, ಕೆಳಜಾತಿಯ ಜನರಿಗೆ ತುಳು ಭಾಷಿಕರಿಗೆ ಬರೆಯುವ ಅವಕಾಶ ಸಿಕ್ಕಿದೆ. ಕನ್ನಡ ಬೆಳೆಸುವುದಕ್ಕೆ ಈ ರೀತಿಯ ಸಣ್ಣ ಭಾಷೆಗಳೂ ಅಗತ್ಯ. ಅಲ್ಲಿನ ಮೌಖಿಕ ಪರಂಪರೆಗಳು ಕನ್ನಡಕ್ಕೆ ಬಂದಾಗ ಕನ್ನಡ ಶ್ರೀಮಂತವಾಗುತ್ತದೆ.

*ಕೊಡವ, ಬ್ಯಾರಿ, ಬಂಜಾರಗಳಂಥ ಭಾಷಾ ಅಕಾಡೆಮಿಗಳೆಲ್ಲ ಕ್ರಮೇಣ ಜಾತಿ ಅಕಾಡೆಮಿಗಳಾಗಿ ಬದಲಾಗುತ್ತಿವೆಯಲ್ಲ?
ಹಾಗೆ ಆಗಬಾರದು. ತುಳುವನ್ನು ಮಾತನಾಡುವ 35ಕ್ಕಿಂತ ಹೆಚ್ಚಿನ ಜಾತಿಗಳಿವೆ. ದಲಿತರಿಂದ ಹಿಡಿದು ಬ್ರಾಹ್ಮಣರವರೆಗೆ ತುಳು ಮಾತನಾಡುವವರಿದ್ದಾರೆ. ಕೊಂಕಣಿಯಲ್ಲಿ ಕುಣುಬಿಯವರಿಂದ ಹಿಡಿದು ಗೌಡ ಸಾರಸ್ವತ ಬ್ರಾಹ್ಮಣರವರೆಗೆ ಮೂವತ್ತಕ್ಕೂ ಹೆಚ್ಚು ಸಮುದಾಯಗಳವರಿದ್ದಾರೆ. ಭಾಷೆ ಜಾತಿಗಿಂತ ಹೆಚ್ಚು ಸೆಕ್ಯೂಲರ್‌. ಯು.ಆರ್‌. ಅನಂತಮೂರ್ತಿ ಅವರು ಹೇಳುತ್ತಿದ್ದಂತೆ ‘ನಾವು ದ್ವಿಭಾಷೆಯನ್ನು, ಬಹುಭಾಷೆಯನ್ನು ಮಾತನಾಡುವುದನ್ನು ಸೆಲಬ್ರೇಟ್‌ ಮಾಡಬೇಕು. ಅವು ಒಂದಕ್ಕೊಂದು ವಿರುದ್ಧ ಅಂತ ತಿಳಿದುಕೊಳ್ಳಬಾರದು. ಭಾಷಾಭಿಮಾನ ದುರಭಿಮಾನವಾದಾಗ ಮೂಲಭೂತವಾದ ಹುಟ್ಟುತ್ತದೆ. ಅದು ಆಗಬಾರದು’.

ತುಳು ಆಗಲಿ ಕೊಂಕಣಿ ಆಗಲಿ ಕನ್ನಡವನ್ನು ಬಿಟ್ಟು ಅವಕ್ಕೆ ಅಸ್ತಿತ್ವ ಇರುವುದಿಲ್ಲ. ಅನೇಕರು ತುಳುವಿಗೆ ಪ್ರತ್ಯೇಕ ರಾಜ್ಯ ಬೇಕು ಎಂದೆಲ್ಲ ಹೇಳುತ್ತಿರುತ್ತಾರೆ. ಅದಕ್ಕೆಲ್ಲ ನನ್ನ ವಿರೋಧವಿದೆ. ಯಾಕೆಂದರೆ ಕನ್ನಡವನ್ನು ಬಿಟ್ಟು ತುಳು ಬೆಳೆಯುವುದಿಲ್ಲ. ಭಾಷಾ ಅಕಾಡೆಮಿಗಳು ಒಂದು ಜಾತಿಗೆ ಸೀಮಿತ ಆಗಬಾರದು. ಅವುಗಳನ್ನು ಜಾತ್ಯತೀತವಾಗಿ ಬೆಳೆಸುವುದು ಮುಖ್ಯ.

*ದೇಶ ವಿದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ ಅನುಭವ ನಿಮಗಿದೆ. ನಮ್ಮ ದೇಶದ ಉನ್ನತ ಶಿಕ್ಷಣದ ಗುಣಮಟ್ಟ ಕುಸಿದಿದೆ ಅನ್ನಿಸುತ್ತಿಲ್ಲವೇ?
ಹೌದು. ಅದನ್ನು ನಾನು ಒಪ್ಪುತ್ತೇನೆ. ಅದಕ್ಕೆ ಅನೇಕ ಕಾರಣಗಳಿವೆ. ಉನ್ನತ ಶಿಕ್ಷಣ ಅನ್ನುವುದರ ಕುರಿತು ಕೇಂದ್ರ ಅಥವಾ ರಾಜ್ಯದಲ್ಲಿ ಇರುವ ಚಿಂತನೆಗಳು ದುರ್ಬಲವಾಗಿವೆ. ಹಲವು ಆಯೋಗಗಳು ಬಂದಾಗಲೂ ಅವುಗಳೆಲ್ಲ ಮೇಲ್ಮೈ ಬದಲಾವಣೆಗೆ ಒತ್ತು ಕೊಟ್ಟವೇ ಹೊರತು, ಆಮೂಲಾಗ್ರವಾಗಿ ಬದಲಾವಣೆ ಮಾಡುವ ಪ್ರಯತ್ನ ಮಾಡಿಲ್ಲ. ವಾರ್ಷಿಕ ಪರೀಕ್ಷೆ ರದ್ದುಪಡಿಸಿ, ಸೆಮಿಸ್ಟರ್‌ ಪದ್ಧತಿ ತಂದಿದ್ದು, ಚಾಯ್ಸ್ಡ್‌ ಬೇಸ್ಡ್‌ ಪದ್ಧತಿ. ಇವೆಲ್ಲ ಬಾಹ್ಯ ಸಣ್ಣ ಬದಲಾವಣೆಗಳು. ಮೂಲಭೂತವಾಗಿ ಹೊಸ ವಿಷಯವನ್ನು ತಿಳಿದುಕೊಂಡು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸಮಾಲೋಚನೆ ನಡೆಸಿ ಕಲಿಯುವ ಮಾದರಿ ನಮ್ಮಲ್ಲಿ ಬಂದಿಲ್ಲ.

ವಿದ್ಯಾರ್ಥಿಗಳು ಓದಿ ಮೂರು ಗಂಟೆಗಳಲ್ಲಿ ಪರೀಕ್ಷೆ ಬರೆದು ರ್‍ಯಾಂಕ್‌ ಪಡೆಯುವ ಪ್ರಕ್ರಿಯೆ ಇದೆಯಲ್ಲ – ಇದರಿಂದಾಗಿ ನಮ್ಮಲ್ಲಿ ಎಲ್ಲ ಉದಾರೀಕರಣದ ಹಾಗೆ ಶೈಕ್ಷಣಿಕ ಉದಾರೀಕರಣವಾಗಿದೆ. ಕಾಲೇಜಿನ ಗುಣಮಟ್ಟ ಅಳೆಯಲು ‘ನ್ಯಾಕ್‌’ ಇದೆ. ಆದರೆ ಅವೆಲ್ಲವೂ ಕಾಣುವಷ್ಟು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ನಮ್ಮ ಆಂತರಿಕ ಮೌಲ್ಯಮಾಪನ ಅಥವಾ ರಾಷ್ಟ್ರೀಯ ಮೌಲ್ಯಮಾಪನಗಳೆಲ್ಲ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಧ್ಯಾಪಕರು ನಿರಂತರವಾಗಿ ಕಲಿಯುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಒಂದು ಬಾರಿ ಪ್ರಾಧ್ಯಾಪಕನಾಗಿಬಿಟ್ಟರೆ ಮತ್ತೇನೂ ಓದಬೇಕಾಗಿಲ್ಲ. ಪ್ರಾಧ್ಯಾಪಕರು, ಪರೀಕ್ಷೆಗಳು, ಅಂಕಗಳು, ರ್‍ಯಾಂಕುಗಳು– ಈ ಚಕ್ರದಿಂದ ಬಿಡಿಸಿ ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಪ್ರಚೋದಿಸುವ ಪ್ರಯತ್ನಗಳೂ ಆಗುತ್ತಿಲ್ಲ.

*ಇದರ ಪರಿಣಾಮಗಳು ಸಮಾಜದ ಮೇಲೆ ಯಾವ ರೀತಿ ಆಗುತ್ತಿದೆ?
ಹೊಸ ಚಿಂತನೆಗಳು ಹುಟ್ಟುತ್ತಿಲ್ಲ. ವಿಜ್ಞಾನ, ಸಮಾಜ ವಿಜ್ಞಾನ, ಮಾನವಿಕ ಅಧ್ಯಯನ ಇವುಗಳಲ್ಲೆಲ್ಲ ನಾವು ಯಾವುದೇ ಹೊಸ ಐಡಿಯಾಗಳನ್ನೂ ಹುಟ್ಟುಹಾಕಲು ಸಾಧ್ಯವಾಗುತ್ತಿಲ್ಲ. ನಮ್ಮದು ಚಿಂತನಶೀಲ ದೇಶ ಎಂದು ಹೇಳುತ್ತೇವಲ್ಲ, ಆದರೆ ಯಾವುದೇ ಹೊಸ ಚಿಂತನಕ್ರಮವನ್ನು, ಸಿದ್ಧಾಂತವನ್ನು ಕೊಡಲು ಸಾಧ್ಯವಾಗುತ್ತಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಇರುವುದನ್ನು ಸರಳಗೊಳಿಸಿ ಪುನರಾವರ್ತಿಸುತ್ತದೆ. ಮೂರು ವರ್ಷಗಳಿಗೊಮ್ಮೆ ಪಠ್ಯಕ್ರಮ ಬದಲಿಸಿದರೆ ಪ್ರಯೋಜನ ಇಲ್ಲ. ನಾವು ಶಿಕ್ಷಣ ನೀಡುವ ಕ್ರಮಗಳು, ಮೌಲ್ಯಮಾಪನ ಕ್ರಮಗಳಲ್ಲಿ ಬದಲಾವಣೆ ಆಗಬೇಕು. ಇಲ್ಲದಿದ್ದರೆ ತೋರಿಕೆಗೆ ಒಳ್ಳೆಯ ಕಟ್ಟಡಗಳನ್ನು ಕಟ್ಟುತ್ತಲೇ ಹೋಗುತ್ತೇವೆ. ಅದಕ್ಕಿಂತ ಹೆಚ್ಚಿನದನ್ನು ಏನೂ ಕೊಡಲು ಸಾಧ್ಯವಿಲ್ಲ.

ಈಗ ನಡೆಯುತ್ತಿರುವ ಕಾವೇರಿ ನೀರಿನ ವಿಷಯವನ್ನೇ ತೆಗೆದುಕೊಳ್ಳಿ. ಇಂಥ ವಿಷಯಗಳಲ್ಲಿ ನಾವು ನಮ್ಮ ಸಮಸ್ಯೆಯನ್ನು ಬಗೆಹರಿಸಲು ಇನ್ನೊಬ್ಬರು ಯಾರಾದರೂ ಇದ್ದಾರಾ ಎಂದು ನೋಡುತ್ತೇವೆ. ನ್ಯಾಯಾಧೀಶರಿರುತ್ತಾರೆ, ಪ್ರಧಾನಿಗಳಿರುತ್ತಾರೆ, ಪೊಲೀಸರಿರುತ್ತಾರೆ. ಸಮಸ್ಯೆಯನ್ನು ಅವರ ಪಾಡಿಗೆ ಬಿಟ್ಟು ನಾವು ಸುಖವಾಗಿ ಇರುತ್ತೇವೆ. ಹಾಗಾಗಿ ಇಡೀ ಗಮನ ನಾಳಿನ ಕೋರ್ಟ್‌ ತೀರ್ಪು ಏನು ಎನ್ನುವುದರ ಮೇಲೆಯೇ ಇರುತ್ತದೆಯೇ ಹೊರತು ಪರ್ಯಾಯ ದಾರಿಗಳ ಬಗ್ಗೆ ಯೋಚಿಸುವುದೇ ಇಲ್ಲ. ಅದರ ಬದಲಿಗೆ– ಹಿಂದೆ ಒಂದು ಹಳ್ಳಿಯಲ್ಲಿ ನೀರಿನ ಸಮಸ್ಯೆ ಬಂದಾಗ ಏನು ಮಾಡುತ್ತಿದ್ದರು, ಹೇಗೆ ಹಂಚಿಕೊಳ್ಳುತ್ತಿದ್ದರು ಎಂದು ಯೋಚಿಸಿ, ಸಂಶೋಧನೆ ನಡೆಸಿ, ಹೊಸ ಪರಿಕಲ್ಪನೆ ಹುಟ್ಟುಹಾಕುವುದು ಹಾಗೂ ಅದನ್ನು ನಮ್ಮ ಕಾಲಕ್ಕೆ ಅಳವಡಿಸುವ ಪ್ರಯತ್ನ ಮಾಡುವುದೇ ಇಲ್ಲ.

*ಇವುಗಳಿಂದ ಬಿಡಿಸಿಕೊಳ್ಳುವ ದಾರಿ ಯಾವುದು?
ನಾವು ನಮ್ಮ ಸುತ್ತಲಿನ ಸಮಾಜವನ್ನು, ಜಾತಿಯನ್ನು, ಧರ್ಮವನ್ನು ನೋಡುವ ಕ್ರಮವೇ ಬದಲಾಗಬೇಕು. ಒಂದೋ ಪರ ಇಲ್ಲವೇ ವಿರೋಧ – ಎರಡರಲ್ಲಿಯೇ ನಮ್ಮ ಇಡೀ ಜೀವನ ಕಳೆಯುತ್ತದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಸೆಮಿನಾರ್‌ಗಳಲ್ಲಿಯೂ ಇವೇ ನಡೆಯುತ್ತಿರುವುದು. ರಾಜಕೀಯ, ಪಂಥೀಯತೆಗಳಿಗೆ ಸಿಲುಕಿ ದ್ವೀಪಗಳಾಗುತ್ತಿದ್ದೇವೆ. ಒಂದು ಕಡೆ ಜನಪದದ ಬಗ್ಗೆ ಮಾತನಾಡುತ್ತೇವೆ, ಇನ್ನೊಂದೆಡೆ ಜನರನ್ನು ಹೊರಗಿಡುತ್ತೇವೆ. ಈ ಕ್ರಮವನ್ನು ಬದಲಿಸಲು ವಿಶ್ವವಿದ್ಯಾಲಯಗಳು ಪ್ರಯತ್ನಿಸಬೇಕು.

*ಜಾನಪದ ಅಧ್ಯಯನದ ಗುಣಮಟ್ಟವೂ ಕಡಿಮೆ ಆಗುತ್ತಿದೆ. ಅದಕ್ಕೆ ಏನು ಕಾರಣ?
ನಮ್ಮ ಶಿಕ್ಷಣ ಪದ್ಧತಿಯಲ್ಲಿ ಯಾವುದಾದರೂ ಹೊಸ ವಿಷಯ ಆರಂಭವಾದಾಗ ಜನರು ಆಕರ್ಷಿತರಾಗುತ್ತಾರೆ. ಜಾನಪದದಲ್ಲಿಯೂ ಹಾಗೆಯೇ ಆಯಿತು. ಈಗ ಜಾನಪದ ಎಂದರೆ ಸುಲಭವಾಗಿ ಕೆಲಸ ಮಾಡಬಹುದಾದ ಕ್ಷೇತ್ರ ಎಂಬ ತಪ್ಪು ಕಲ್ಪನೆ ಬಂತು. ಸಾಮಗ್ರಿ ಸಂಗ್ರಹವೇ ಅಧ್ಯಯನ ಎಂಬ ತಪ್ಪು ಕಲ್ಪನೆ ಇದೆ. ಇದರಿಂದ ಸಂಶೋಧನೆಯ ಗುಣಮಟ್ಟ ಕಳಪೆಯಾಗಿದೆ. ನಾವು ಜಾನಪದದ ಬಗ್ಗೆ ಎಷ್ಟೊಂದು ಮಾತನಾಡುತ್ತೇವೆ; ಆದರೆ ಇಡೀ ಕರ್ನಾಟಕದ ಬಗೆಗಿನ ಒಂದು ಆರ್ಕೈವ್‌ ಇಲ್ಲ ನಮ್ಮಲ್ಲಿ.

*ದಕ್ಷಿಣ ಕನ್ನಡದ ಸಮಾಜ–ಸಂಸ್ಕೃತಿಯನ್ನು ಆಳವಾಗಿ ಅಭ್ಯಸಿಸಿದವರು ನೀವು. ಅಲ್ಲಿನ ಸೆಕ್ಯುಲರ್‌ ಸಂಕೇತಗಳೆಲ್ಲ ಕೋಮು ಸಂಕೇತಗಳಾಗಿ ಬದಲಾಗುತ್ತಿವೆ. ಈ ಬದಲಾವಣೆಗೆ ಪ್ರೇರಣೆಗಳು ಏನಿರಬಹುದು?
ಎಲ್ಲ ರಾಜಕೀಯ ಪಕ್ಷಗಳೂ ಪರೋಕ್ಷವಾಗಿ ಕೋಮುವಾದವನ್ನು ಪೋಷಿಸುತ್ತಿರುತ್ತವೆ. ‘ನಾವದರ ಪರವಾಗಿಲ್ಲ’ ಎಂದು ಎಲ್ಲ ಪಕ್ಷಗಳೂ ಹೋರನೋಟಕ್ಕೆ ಹೇಳುತ್ತವೆ. ಇದು ಕಳೆದ ಇಪ್ಪತ್ತು ವರ್ಷಗಳಿಂದ ಜಾಸ್ತಿ ಆಗುತ್ತಿದೆ. ಹಾಗೆಯೇ ಇದರ ಹಿಂದುಗಡೆ ಆರ್ಥಿಕತೆಯ ಶೈಥಿಲ್ಯದ ಕಾರಣವೂ ಇದೆ. ಕರಾವಳಿ ಭಾಗದಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ಒಂದು ಕಾಲಕ್ಕೆ ಅಲ್ಲಿ ಹೆಂಚಿನ ಕಾರ್ಖಾನೆಗಳು, ಗೋಡಂಬಿ, ಬೀಡಿ ಕಾರ್ಖಾನೆಗಳಿದ್ದವು. ಕ್ರಮೇಣ ಅವೆಲ್ಲವೂ ಮುಚ್ಚಿ ಹೋದವು. ದಕ್ಷಿಣ ಕನ್ನಡದ ಭೂ ಒಡೆತನ ಹೇಗಿದೆ ಎಂದರೆ – ಮಾಲೀಕ ಆಗಲಿ, ಸಣ್ಣ ಭೂಮಿ ಇರುವವನಾಗಲಿ ಇಡೀ ವರ್ಷ ಉಣ್ಣುವಷ್ಟು ಬೆಳೆ ಬೆಳೆಯಲು ಸಾಧ್ಯವಿಲ್ಲ.

ಉದ್ಯಮಗಳು ಇಲ್ಲ, ಕೃಷಿಯಿಂದ ಉತ್ಪಾದನೆಯೂ ಬಹಳ ಕಡಿಮೆ. ಆದ್ದರಿಂದ ಗಲ್ಫ್‌ ದೇಶಗಳು, ಮುಂಬೈ ಇಲ್ಲವೇ ಅಮೆರಿಕ ಹೀಗೆ ಬೇರೆ ಹೊರಗಡೆ ತೆರಳಿ ಅಲ್ಲಿ ದುಡಿದು ತಂದ ಹಣದಲ್ಲಿ ಕುಟುಂಬಗಳು ಬದುಕಿಕೊಳ್ಳುವ ಪರಿಸ್ಥಿತಿ ಇದೆ. ಅಲ್ಲಿನ ಸ್ಥಳೀಯ ಯುವಕರಿಗೆ ಅವಕಾಶಗಳು ಇಲ್ಲ. ಅವರಲ್ಲಿ ಸ್ವಲ್ಪ ಶಿಕ್ಷಣ ಪಡೆದು ವಿದ್ಯಾವಂತರಾದವರು ಬೆಂಗಳೂರಿಗೆ ಬಂದರು. ಉಳಿದವರಿಗೆ ಸಣ್ಣ ಸಣ್ಣ ಕೆಲಸಗಳ ನಡುವಿನ ವಿರಾಮಗಳ ವೇಳೆಗೆ ಜಾತಿ ಮತ್ತು ಧಾರ್ಮಿಕ ಮತೀಯ ಅಂಶಗಳು ಸೆಳೆಯುತ್ತವೆ. ಎಲ್ಲ ರಾಜಕೀಯ ಪಕ್ಷಗಳೂ ಅವರನ್ನು ಬಳಸಿಕೊಂಡರು. ಕೋಮುವಾದ ಬೆಳೆಯತ್ತ ಬಂತು. ಈಗ ಅದನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಅನ್ನುವ ಮಟ್ಟಿಗೆ ಬೆಳೆದುನಿಂತಿದೆ. ಯಾರೂ ಹುಟ್ಟಿನಿಂದ ಜಾತಿವಾದಿಗಳಾಗಲಿ, ಕೋಮುವಾದಿಗಳಾಗಲಿ ಆಗಿರುವುದಿಲ್ಲ.

ಎಲ್ಲರೂ ಕೋಮುವಾದ ಹೆಚ್ಚುತ್ತಿದೆ ಎಂದು ಆಪಾದನೆ ಮಾಡಿದರೇ ವಿನಾ ಅಲ್ಲಿನ ತರುಣ ಪೀಳಿಗೆಗೆ ಉದ್ಯೋಗಾವಕಾಶ ಕಲ್ಪಿಸುವ ವ್ಯವಸ್ಥೆಯನ್ನು ಸರ್ಕಾರವೂ ಮಾಡಲಿಲ್ಲ, ಮಾಡಬಲ್ಲಂಥ ಉದ್ಯೋಗಶೀಲರೂ ಮಾಡಲಿಲ್ಲ. ಅಲ್ಲಿನ ಆರ್ಥಿಕ ಸಮಸ್ಯೆಯನ್ನು ನಿವಾರಿಸದೇ ಹೋದರೆ ಉಳಿದವೆಲ್ಲ ಬರೀ ಮೇಲ್ಮೈನ ಮಾತಾಗುತ್ತದೆ ಅಷ್ಟೆ.

*ಸೈದ್ಧಾಂತಿಕವಾಗಿಯೂ ಇಂಥ ಬದಲಾವಣೆಯನ್ನು ಎದುರಿಸಲು ವಿಫಲರಾಗುತ್ತಿದ್ದೇವಲ್ಲವೇ?
ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದು ಸರಿ. ಇರಲೇಬೇಕು. ಆದರೆ ಅದನ್ನು ಇಟ್ಟುಕೊಂಡೇ ಮುಕ್ತವಾಗಿ ಚರ್ಚಿಸುವ ಮನೋಧರ್ಮ ಇಲ್ಲ. ನಮ್ಮ ಸಿದ್ಧಾಂತವನ್ನು ಬಿಟ್ಟುಕೊಡುವುದಿಲ್ಲ ಎಂಬ ಹಟಮಾರಿತನ, ಅದು ಒಡೆಯಲಾರದ ಗಂಟು ಎಂಬ ಮನೋಧರ್ಮದಿಂದ ಸಮಸ್ಯೆಯ ಸೂಕ್ಷ್ಮಗಳನ್ನು ಅರಿತುಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ನಾನು ದಕ್ಷಿಣ ಕನ್ನಡದಲ್ಲಿಯೇ ಹುಟ್ಟಿಬೆಳೆದವನು. ಅಲ್ಲಿನ ಜೀವನವನ್ನು ಕಂಡಿದ್ದೇನೆ. ಅಲ್ಲಿನ ಎಲ್ಲ ಸಮಸ್ಯೆಗಳ ಹಿಂದೆ ಇರುವ ಆರ್ಥಿಕ ಮತ್ತು ರಾಜಕೀಯ ಅಂಶಗಳನ್ನು ನಮ್ಮ ಸೈದ್ಧಾಂತಿಕತೆಗಳು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಾವುದೋ ಒಂದರ ಪರ ಅಥವಾ ವಿರೋಧ ಈ ಎರಡು ಅಂಚುಗಳಲ್ಲಿ ನಿಂತು ಮಾತನಾಡುವುದು ಸುಲಭ. ಅದನ್ನೇ ಇಂದು ಹೆಚ್ಚು ಹೆಚ್ಚು ಮಾಡಲಾಗುತ್ತಿದೆ.

ಇಡೀ ಸಮಾಜವನ್ನು ಸಮಗ್ರವಾಗಿ ನೋಡಿ ಎಲ್ಲೆಲ್ಲಿ ಬಿರುಕುಗಳಿವೆ, ಎಲ್ಲಿ ದೌರ್ಬಲ್ಯಗಳಿವೆ, ಅದನ್ನು ಹೇಗೆ ಸರಿಮಾಡಬಹುದು ಎಂದು ನೋಡದೆ ಬರೀ ಒಂದು ಕಡೆಯಿಂದ ನೋಡಿ ಸೈದ್ಧಾಂತಿಕವಾಗಿ ಬಗೆಹರಿಸಲು ಸಾಧ್ಯವಿಲ್ಲ. ನಮ್ಮ ಸಮಾಜದಲ್ಲಿ ಈ ಎರಡೂ ಅತಿಗಳಿಗೆ ಅಂಟಿಕೊಳ್ಳದೆ ನಡುವಿನ ಅವಕಾಶದಲ್ಲಿ ಬದುಕುವ ಮಧ್ಯಮವರ್ಗದ ದೊಡ್ಡ ಸಮುದಾಯ ಕರಾವಳಿಯಲ್ಲಿದೆ. ಅವರು ಯಾವ ಕಡೆಗೂ ಇಲ್ಲದೇ ಬಹಳ ಸಹಜವಾಗಿ ಸಮನ್ವಯದಿಂದ ಬದುಕುವವರು. ಆ ಇಡೀ ವರ್ಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಇದರಿಂದ ಈ ಭಾಗ ನಿಧಾನವಾಗಿ ಯಾವುದೋ ಒಂದು ಕಡೆ ಚಲಿಸುತ್ತಿದೆ. ನಡುವಿನ ಅವಕಾಶ ಶಿಥಿಲವಾಗುತ್ತ ಹೋಗುತ್ತಿದೆ. ಇದನ್ನು ಯಾರೂ ಗುರ್ತಿಸುತ್ತಿಲ್ಲ. 

ಕಾರಂತರೊಂದಿಗಿನ ನಂಟು
ನಮ್ಮ ತಂದೆ ಅಗ್ರಾಳ ಪುರಂದರ ರೈ. ಅವರು ಶಿವರಾಮ ಕಾರಂತರ ‘ಮಕ್ಕಳ ಕೂಟ’ದ ಸದಸ್ಯರಾಗಿದ್ದರು. ಹಾಗಾಗಿ ತಂದೆಯ ಮೂಲಕ ನನಗೆ ಕಾರಂತರ ಸಂಪರ್ಕ ಬಂತು. ಪ್ರಾಥಮಿಕ ಶಾಲೆಯ ಹುಡುಗ ಆಗಿದ್ದಾಗಲೇ ಕಾರಂತರ ಪುಸ್ತಕಗಳು ಮನೆಯಲ್ಲಿದ್ದವು. ಅವರ ಯಾವುದೇ ಕಾದಂಬರಿ ಮುದ್ರಣವಾದರೂ ತಂದೆ ತರುತ್ತಿದ್ದರು. ಹಾಗಾಗಿ ಆಗಲೇ ಕಾರಂತರ ಸಾಹಿತ್ಯವನ್ನು ಓದಿದ್ದೆ.


1960ರಲ್ಲಿ ಪುತ್ತೂರಲ್ಲಿ ಬೋರ್ಡ್‌ ಹೈಸ್ಕೂಲಿಗೆ ಸೇರಿದಾಗ ಕಾರಂತರ ಮಕ್ಕಳಾದ ಉಲ್ಲಾಸ್‌ ಮತ್ತು ಕ್ಷಮಾ ಅಲ್ಲಿಯೇ ಓದುತ್ತಿದ್ದರು. ಕಾರಂತರ ಯಕ್ಷರಂಗದ ಮೊದಲ ಪ್ರಯೋಗ ಆದಾಗ ನಾನು ಹತ್ತನೇ ತರಗತಿಯಲ್ಲಿದ್ದೆ. ನಾನು ಹೈಸ್ಕೂಲಿನಲ್ಲಿದ್ದಾಗಲೇ ಕಾರಂತರ ಮನೆಗೆ ಹೋಗುತ್ತಿದ್ದೆ. ಸಂಜೆ ಹೊತ್ತು ವಾಕಿಂಗ್‌ ಹೋದಾಗಲೂ ಕಾರಂತರು ಸಿಗುತ್ತಿದ್ದರು. ಆಗ ಪುತ್ತೂರಲ್ಲಿ ‘ಕರ್ನಾಟಕ ಸಂಘ’ ಇತ್ತು. ಕಾರಂತರು ಅದಕ್ಕೆ ಅಧ್ಯಕ್ಷರಾಗಿದ್ದರು. ಮೈಸೂರು–ಬೆಂಗಳೂರು ಕಡೆಗಳಿಂದ ಸಾಹಿತಿಗಳನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿದ್ದರು. ವಿ.ಸೀತಾರಾಮಯ್ಯ, ಜಿ.ಪಿ ರಾಜರತ್ನಂ ಎಲ್ಲರೂ ಬರುತ್ತಿದ್ದರು.

ನಾನು ಹುಟ್ಟಿದಾಗ ಅಪ್ಪ ಏನು ಹೆಸರಿಡುವುದು ಎಂದು ಕೇಳಲಿಕ್ಕೆ ಕಾರಂತರ ಬಳಿಗೆ ಹೋಗಿದ್ದರಂತೆ. ಆಗ ಕಾರಂತರು ವಿವೇಕ ಎಂದರಂತೆ. ತಂದೆಗೆ ಅದು ವಿವೇಕಾನಂದ ಎಂದಹಾಗೆ ಕೇಳಿತಂತೆ. ಮತ್ತೊಮ್ಮೆ ‘ವಿವೇಕಾನಂದ ಅಂತ ಇಡುತ್ತೇನೆ’ ಎಂದಾಗ – ‘ಆನಂದ ಗೀನಂದ ಏನೂ ಬೇಡ, ವಿವೇಕ ಇದ್ದರೆ ಆನಂದ ತಂತಾನೆಯೇ ಬರುತ್ತದೆ’ ಎಂದರಂತೆ.

ನಾನು ಬಿ.ಎಸ್‌ಸಿ ನಂತರ ಎಂ.ಎ. ಕನ್ನಡ ಮಾಡುವುದಕ್ಕೆ ಕಾರಂತರೂ ಕಾರಣ. ಆಗ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಆರಂಭವಾಗಿತ್ತು. ನಾನು ಸುಮ್ಮನೆ ಅರ್ಜಿ ಹಾಕಿದೆ. ಸೀಟ್‌ ಸಿಕ್ಕಿತು. ಆದರೆ ನನಗೆ ಎಂ.ಎಸ್‌ಸಿ ಮಾಡುವ ಆಸೆ ಇತ್ತು. ನಮ್ಮ ತಂದೆ ಹೋಗಿ ಕಾರಂತರ ಬಳಿ  ‘ಹುಡುಗನಿಗೆ ಎಂ.ಎ.ಗೆ ಸೀಟು ಸಿಕ್ಕಿದೆ ಹೋಗಲೋ ಬೇಡವೋ’ ಎಂದು ಕೇಳಿದರಂತೆ. ಕಾರಂತರು ‘ಅವನು ಸಾಹಿತಿ ಆಗ್ತಾನೋ ಇಲ್ವೋ ಗೊತ್ತಿಲ್ಲ. ಆದರೆ ಸಂಸ್ಕಾರವಾದ್ರೂ ಬರುತ್ತದೆ. ಕನ್ನಡ ಎಂ.ಎ. ಮಾಡಲಿ’ ಎಂದರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT