ADVERTISEMENT

ನಮ್ಮನ್ನು ಬೆಳೆಸಿದ ನಾಯಕ ‘ಅರಸು’

ಶ್ರೀಸಾಮಾನ್ಯರ ಅರಸು 100

ಮಲ್ಲಿಕಾರ್ಜುನ ಖರ್ಗೆ
Published 15 ಆಗಸ್ಟ್ 2015, 19:30 IST
Last Updated 15 ಆಗಸ್ಟ್ 2015, 19:30 IST

ಕ್ರಾಂತಿಕಾರಕ ಭೂ ಸುಧಾರಣೆ ಕಾಯ್ದೆ, ಮೀಸಲಾತಿ ವಿಸ್ತರಣೆ, ಜೀತಪದ್ಧತಿ ಹಾಗೂ ಮಲ ಹೊರುವ ಪದ್ಧತಿಗಳ ನಿಷೇಧದ ಮೂಲಕ ಡಿ. ದೇವರಾಜ ಅರಸು (ಆಗಸ್ಟ್‌ 20, 1915 – ಮೇ 18, 1982) ಜನಸಾಮಾನ್ಯರು ಮತ್ತು ದೀನದಲಿತರ ‘ನಿಜ ಪ್ರತಿನಿಧಿ’ಯಾಗಿ ಗುರ್ತಿಸಿಕೊಂಡವರು. ಎರಡು ಸಲ ಮುಖ್ಯಮಂತ್ರಿಗಳಾಗಿ (1972–77 ಹಾಗೂ 1978–80)  ಕಾರ್ಯ ನಿರ್ವಹಿಸಿದ ಅಗ್ಗಳಿಕೆ ಅವರದು.

ಭೂಮಿ ಮತ್ತು ಮೀಸಲಾತಿಗೆ ಸಂಬಂಧಿಸಿದ ಅವರ ಚಿಂತನೆ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾನೂನುಗಳ ರಚನೆಗೆ ಬೀಜರೂಪವಾಗಿ ಪರಿಣಮಿಸಿತು. ರೈತರ ಭೂಮಿ, ಮೀಸಲಾತಿ ಹಾಗೂ ಜಾತಿಯ ಕುರಿತಂತೆ ಹೊಸ ಸಮೀಕರಣಗಳು ಕಾಣಿಸುತ್ತಿರುವ ವರ್ತಮಾನದಲ್ಲಿ ಅರಸು ಒಂದು ಮಾದರಿಯಾಗಿ, ರೂಪಕವಾಗಿ ನೆನಪಾಗುತ್ತಾರೆ.

ಜನ್ಮಶತಮಾನೋತ್ಸವ ಸಂದರ್ಭ ಅರಸು ಅವರ ವಿಚಾರಗಳನ್ನು ನವೀಕರಿಸಿಕೊಳ್ಳುವ ಸಂದರ್ಭವೂ ಹೌದು. ಅಂದಿಗೂ ಇಂದಿಗೂ ಸಲ್ಲುವ ಅರಸು ಮಾದರಿಗಳನ್ನು ಸೂಚಿಸುವಂತೆ ಹೊಸ ಬರಹಗಳ ಜೊತೆ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ಹಳೆಯ ಬರಹಗಳು ಹಾಗೂ ಚಿತ್ರಗಳು ಇಲ್ಲಿವೆ. ಆಗಸ್ಟ್ 20‌ ಅರಸು ಜನ್ಮದಿನ; ವರ್ಷಪೂರ್ತಿ ಅವರ ಶತಮಾನೋತ್ಸವ ಆಚರಣೆ ನಡೆಯಲಿದೆ.

​***
ಕರ್ನಾಟಕ ಕಂಡ ಬಹುದೊಡ್ಡ ರಾಜಕೀಯ ಧುರೀಣರಲ್ಲಿ ಒಬ್ಬರಾದ ದೇವರಾಜ ಅರಸು, ತಮ್ಮ ಬೆಳವಣಿಗೆಯ ಜೊತೆಗೆ ಹಲವು ಯುವಕರನ್ನು ನಾಯಕರನ್ನಾಗಿ ಬೆಳೆಸಿದರು. ಅಂಥ ನಾಯಕರಲ್ಲಿ ಮುಖ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರು ದೇವರಾಜ ಅರಸು ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಈ ನೆನಪುಗಳು ಅರಸು ಅವರ ಸಿದ್ಧಾಂತ – ಸಾಧನೆಯ ಜೊತೆಗೆ ಅವರ ಅಂತಃಕರಣವನ್ನೂ ಕಾಣಿಸುವಂತಿದೆ.

**
ದೇವರಾಜ ಅರಸು ಅವರು ನನಗೆ ಪರಿಚಯವಾಗಿದ್ದು 1969ರಲ್ಲಿ. ಗುಲ್ಬರ್ಗಾ ಜಿಲ್ಲೆ ಕಾಂಗ್ರೆಸ್‌ ಸಂಚಾಲಕರಾಗಿದ್ದ ಧರ್ಮರಾವ್‌ ಅಫ್ಜಲ್‌ಪುರ್‌ಕರ್‌ ಬೆಂಗಳೂರಿನ ಮಲ್ಲೇಶ್ವರದಲ್ಲಿದ್ದ ಅರಸು ಅವರ ಮನೆಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಆಗಷ್ಟೇ ಕಾಂಗ್ರೆಸ್‌ ಇಬ್ಭಾಗವಾಗಿತ್ತು. ಇದಾದ ಒಂದು ವರ್ಷದ ಬಳಿಕ ಇಂದಿರಾಜಿ ಬರಗಾಲ ಸಮೀಕ್ಷೆಗೆ ಗುಲ್ಬರ್ಗಾಕ್ಕೆ ಬಂದಿದ್ದರು. ಅರಸು ಅವರೇ ಖುದ್ದು ನಮ್ಮನ್ನು ಇಂದಿರಾಜಿ ಅವರಿಗೆ ಭೇಟಿ ಮಾಡಿಸಿದರು. ನಮ್ಮ ಭಾಗದ ದೇವೇಂದ್ರಪ್ಪ ಘಾಳಪ್ಪ, ಪ್ರಭಾಕರ ತೇಲ್ಕರ್‌, ಶಾಂತಮಲ್ಲಪ್ಪ ಮತ್ತಿತರ ನಾಯಕರೂ ಅಲ್ಲಿದ್ದರು.

ನನ್ನ ರಾಜಕೀಯ ಬದುಕಿನಲ್ಲಿ ಅದೊಂದು ಅಪರೂಪದ ಸಂದರ್ಭ. ಇಂದಿರಾಜಿ, ಅರಸು, ಚಂದ್ರಶೇಖರ್‌ ಅವರಂಥ ದೊಡ್ಡ ನಾಯಕರನ್ನು ಒಂದೇ ಕಡೆ ನೋಡುವ ಅದೃಷ್ಟ ಸಿಕ್ಕಿತು. ಚಂದ್ರಶೇಖರ್‌, ಕೃಷ್ಣಕಾಂತ್‌, ಮೋಹನ್‌ ಧಾರಿಯಾ ಅವರಿದ್ದ ‘ಯಂಗ್‌ ಟರ್ಕ್ಸ್‌’ ಗುಂಪು ಇಂದಿರಾಜಿಗಿಂತ ಮೊದಲೇ ಪಕ್ಷ ಸಂಘಟನೆಗೆ ಗುಲ್ಬರ್ಗಾಕ್ಕೆ ಬಂದಿತ್ತು. ಪುರಭವನದ ಬಳಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಆದರೆ, ಪೊಲೀಸರು ಸಭೆ ನಡೆಸಲು ಅವಕಾಶ ಕೊಡಲಿಲ್ಲ. 144ನೇ ಸೆಕ್ಷನ್‌ ಜಾರಿಗೊಳಿಸಿ, ನಮ್ಮನ್ನು ಬಂಧಿಸಿದರು. ಚಂದ್ರಶೇಖರ್‌ ಅವರೂ ಬಂಧನಕ್ಕೊಳಗಾದರು.

ಆ ವೇಳೆಗೆ ಇಂದಿರಾಜಿ 10 ಅಂಶಗಳ ಕ್ರಾಂತಿಕಾರಕ ಕಾರ್ಯಕ್ರಮ ರೂಪಿಸಿದ್ದರು. ಅದು ನಮಗೆ ಇಷ್ಟವಾಗಿತ್ತು. ಭೂ ಸುಧಾರಣೆ ಕಾನೂನು, ರಾಜಮಹಾರಾಜರ ರಾಜಧನ ರದ್ದು, ಬ್ಯಾಂಕುಗಳ ರಾಷ್ಟ್ರೀಕರಣ ಮುಂತಾದ ಮಹತ್ವದ ಅಂಶಗಳು ಅದರಲ್ಲಿದ್ದವು. ನಾವು ಅದನ್ನು ಪ್ರಚಾರ ಮಾಡುತ್ತಿದ್ದೆವು. ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿದ್ದ ದಿನಗಳವು. ಅವರ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ (ಒ) ಬಲಿಷ್ಠವಾಗಿತ್ತು. ಅಧಿಕಾರದಲ್ಲಿ ಇರುವ ಪಕ್ಷ ಯಾವಾಗಲೂ ಪ್ರಬಲವಾಗಿರುತ್ತದೆ. ಆದರೂ ನಾವು ಎದೆಗುಂದಲಿಲ್ಲ. 1971ರ ಲೋಕಸಭೆ ಚುನಾವಣೆ ನಮ್ಮನ್ನು ಅಗ್ನಿಪರೀಕ್ಷೆಗೆ ಒಡ್ಡಿತು.

ಚುನಾವಣೆಯಲ್ಲಿ ಕಷ್ಟಪಟ್ಟು ಕಾಂಗ್ರೆಸ್‌ (ಒ) ಅಭ್ಯರ್ಥಿಯನ್ನು ಸೋಲಿಸಿದೆವು. ಇಂದಿರಾಜಿ ಅಲೆ ಇದ್ದುದ್ದರಿಂದ ಗೆಲುವು ಸುಲಭವಾಗಿತ್ತು. ನಾನೂ ಬೀದರ್‌ನಿಂದ ಲೋಕಸಭೆಗೆ ಟಿಕೆಟ್ ಕೇಳಿದ್ದೆ. ಅರಸು ಅವರು ಕೊಡಲಿಲ್ಲ. ‘ಅಲ್ಲಿಗೆ (ದೆಹಲಿಗೆ) ಹೋಗಿ ಏನು ಮಾಡ್ತೀಯಾ, ರಾಷ್ಟ್ರ ರಾಜಕಾರಣ ಕಷ್ಟ. ಚಿಕ್ಕವರು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಕಿವಿಮಾತು ಹೇಳಿದರು. ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಟಿಕೆಟ್‌ ಕೊಟ್ಟರು.

ನಾನು ಸೇಡಂ ಕೇಳಿದ್ದೆ. ಗುರುಮಿಟ್ಕಲ್‌ ಕ್ಷೇತ್ರದಿಂದ ಹೆಸರು ಅಂತಿಮವಾಯಿತು. ನನಗೆ ಅಲ್ಲಿನ ಮತದಾರರ ಪರಿಚಯವಿರಲಿಲ್ಲ. ಅದರಿಂದಾಗಿ ಸ್ವಲ್ಪ ಹೆದರಿದ್ದೆ. ಸೇಡಂನಲ್ಲಿ ವಿದ್ಯಾರ್ಥಿ – ಕಾರ್ಮಿಕ ನಾಯಕನಾಗಿ ಕೆಲಸ ಮಾಡಿದ್ದರಿಂದ ಜನರ ಪರಿಚಯವಿತ್ತು. ಅರಸು ಅವರು ಗುರುಮಿಟ್ಕಲ್‌ನಲ್ಲೇ ನಿಲ್ಲುವಂತೆ ಸೂಚಿಸಿದರು. ನಮ್ಮ ಭಾಗದ ದೊಡ್ಡ ನಾಯಕರಾಗಿದ್ದ ಕೊಲ್ಲೂರು ಮಲ್ಲಪ್ಪನವರ ಅಭಿಪ್ರಾಯವೂ ಅದೇ ಆಗಿತ್ತು. ಚುನಾವಣೆಗೆ ನಿಂತು ಗೆದ್ದೆ. ಆಮೇಲೆ ‘ಕಾಂಗ್ರೆಸ್‌ ಫೋರಂ ಫಾರ್‌ ಸೋಷಲಿಸ್ಟ್‌ ಆಕ್ಷನ್‌’ ಸದಸ್ಯನಾದೆ. ಅರಸು ಅವರೇ ಅದರ ರಾಜ್ಯ ಸಂಚಾಲಕರಾಗಿದ್ದರು.

ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಧರ್ಮರಾವ್‌ ಅಫ್ಜಲ್‌ಪುರ್‌ಕರ್‌ 1973ರಲ್ಲಿ ಮೃತಪಟ್ಟರು. ಅದರಿಂದಾಗಿ ಉಪ ಚುನಾವಣೆ ನಡೆಯಿತು. ಪಕ್ಷದ ಹಿರಿಯ ನಾಯಕರಾಗಿದ್ದ ಸಿದ್ದರಾಮರೆಡ್ಡಿ ಅವರಿಗೆ ಟಿಕೆಟ್‌ ಕೊಡಬೇಕೆಂದು ಅರಸು ಅವರನ್ನು ನಾವು ಒತ್ತಾಯಿಸಿದೆವು. ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 7 ವಿಧಾನಸಭೆ ಸದಸ್ಯರು ಬೆಂಬಲ ಕೊಟ್ಟರು. ಅರಸು ಅವರನ್ನು ಮೊದಲಿಗೆ ಒಪ್ಪಿಸುವುದು ಕಷ್ಟ ಆಯಿತು.

‘ಸಿದ್ದರಾಮರೆಡ್ಡಿ ರೆಡ್ಡಿ ಸಮಾಜದವರು. ಅವರ ಸಮುದಾಯದ ಜನ ಇಲ್ಲಿ ಕಡಿಮೆ. ಅವರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲುವುದು ಕಷ್ಟ. ಈಗಾಗಲೇ ಮೂರು ಉಪ ಚುನಾವಣೆ ಸೋತಿದ್ದೇವೆ. ಇದೂ ಸೋತರೆ ನಾನು ಮುಖ್ಯಮಂತ್ರಿ ಕುರ್ಚಿ ಖಾಲಿ ಮಾಡಬೇಕಾಗುತ್ತೆ’ ಎನ್ನುವುದು ಅವರ ಆತಂಕವಾಗಿತ್ತು. ಎಲ್ಲ ಶಾಸಕರೂ ರೆಡ್ಡಿ ಅವರ ಪರ ನಿಂತರು. ‘ನೀವು ಹೆದರುವ ಅಗತ್ಯವಿಲ್ಲ. ಉಪ ಚುನಾವಣೆಯಲ್ಲಿ ಸಿದ್ದರಾಮರೆಡ್ಡಿ ಅವರನ್ನು ಗೆಲ್ಲಿಸುವ ಹೊಣೆ ನಮ್ಮದು’ ಎಂದು ಅವರ ಮನವೊಲಿಸಿದೆವು. ಕೊನೆಗೂ ನಮ್ಮನ್ನು ನಂಬಿದರು.

‘ನನ್ನ ಹಣೆಬರಹ ನಿಮ್ಮ ಕೈಯಲ್ಲಿದೆ’ ಎಂದು ಹೇಳಿ ಟಿಕೆಟ್‌ ಕೊಟ್ಟರು. ಕೊನೆಗೂ ಸಿದ್ದರಾಮರೆಡ್ಡಿ ಅವರನ್ನು ಗೆಲ್ಲಿಸಿ, ಅವರ ದುಗುಡವನ್ನು ದೂರ ಮಾಡಿದೆವು. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಬಿದ್ದ ಮತಗಳಿಗಿಂತಲೂ ಹೆಚ್ಚು ಮತಗಳು ನಮಗೆ ಬಂದಿದ್ದವು. ಆಗ ಆಯ್ಕೆಯಾಗಿದ್ದ ಧರ್ಮರಾವ್‌ ಪ್ರಬಲ ಸಮುದಾಯದವರು. ಅವರಿಗಿಂತ ರೆಡ್ಡಿ 15–20 ಸಾವಿರ ಹೆಚ್ಚು ಮತ ಪಡೆದಿದ್ದರು. ಇದರಿಂದ ಅರಸು ಅವರಿಗೆ ಖುಷಿಯಾಗಿತ್ತು. ಫಲಿತಾಂಶ ಪ್ರಕಟವಾದ ಬಳಿಕ ಅವರನ್ನು ಭೇಟಿಯಾದೆ. ಪ್ರೀತಿಯಿಂದ ಅಪ್ಪಿಕೊಂಡು, ಬೆನ್ನು ತಟ್ಟಿದರು.

ಅಂತಃಕರಣದ ಅರಸು
ಮುಖ್ಯಮಂತ್ರಿ ಆಗಿದ್ದರೂ ದೇವರಾಜ ಅರಸು ಅವರಿಗೆ ಅಧಿಕಾರ ತಲೆಗೆ ಏರಿರಲಿಲ್ಲ. ಎಂಥ ಕಠಿಣ ಪರಿಸ್ಥಿತಿಗೂ ಹೊಂದಿಕೊಳ್ಳುವ ಗುಣಧರ್ಮ ಅವರಲ್ಲಿತ್ತು. ಮುಖ್ಯಮಂತ್ರಿ ಆಗಿದ್ದಾಗ ಕೊಲ್ಲೂರು ಮಲ್ಲಪ್ಪ ಅವರ ಮಗನ ಲಗ್ನಕ್ಕೆ ಯಾದಗೀರ್‌ಗೆ ಬಂದಿದ್ದರು. ಲಗ್ನ ಮುಗಿಸಿ ಹೈದರಾಬಾದ್‌ಗೆ ಹೊರಟಿದ್ದರು. ನನ್ನ ಮತ ಕ್ಷೇತ್ರ ಗುರುಮಿಟ್ಕಲ್‌ ಮಾರ್ಗವಾಗಿ ಹೈದರಾಬಾದ್‌ಗೆ ಹೋಗಬೇಕಿತ್ತು. ಮುಖ್ಯಮಂತ್ರಿ ತಮ್ಮ ಅಧಿಕೃತ ಕಾರನ್ನು ವಾಪಸ್‌ ಕಳುಹಿಸಿ, ನನ್ನ ಕಾರಿನಲ್ಲೇ ಕುಳಿತರು.

ಡಿ.ಸಿ ಕಾರು ಬರುವುದೂ ಬೇಡವೆಂದರು. ದಾರಿಯಲ್ಲಿ ‘ಕೊಡಂಗಲ್‌’ ಪಟ್ಟಣಕ್ಕೆ ಸ್ವಲ್ಪ ಹಿಂದೆ ಕಾರಿನ ಟಯರ್‌ ಪಂಕ್ಚರ್‌ ಆಯಿತು. ಕೊಡಂಗಲ್‌ ಇನ್ನೂ 10 ಕಿ.ಮೀ ಇತ್ತು. ಹಿಂದಕ್ಕೆ 30 ಕಿ.ಮೀ ಬರಬೇಕಿತ್ತು. ಯಾವ ಕಡೆ ಹೋಗುವುದಕ್ಕೂ ಇನ್ನೊಂದು ಕಾರಿರಲಿಲ್ಲ. ಟಯರ್‌ ಪಂಕ್ಚರ್ ಆದ ಕಡೆ ಒಂದೇ ಒಂದು ಮರ ಇರಲಿಲ್ಲ. ರಣಗುಡುತ್ತಿದ್ದ ಬಿಸಿಲಲ್ಲೇ ಒಂದು ಕಿ,ಮೀ. ನಡೆದು ಗಿಡದ ಕೆಳಗೆ ಹೋದೆವು. ಯಾರೋ ಟವೆಲ್‌ ಹಾಸಿದರು. ಅದರ ಮೇಲೇ ಮುಖ್ಯಮಂತ್ರಿ ಕುಳಿತರು.

ಕಾರಿನ ಟಯರ್‌ ಸಿದ್ಧವಾಗುವುದಕ್ಕೆ ಸುಮಾರು ಸಮಯ ಹಿಡಿಯಿತು. ಅಲ್ಲಿವರೆಗೂ ಮಾತನಾಡುತ್ತಿದ್ದೆವು. ಅರಸು ಮಾತಿನ ಮಧ್ಯೆ, ‘ಅವಕಾಶ ಸಿಕ್ಕರೆ ನಿನಗೇನಾದರೂ ಮಾಡಬೇಕು’ ಎಂದರು.

ಕೊಟ್ಟ ಮಾತಿನಂತೆ ಅರಸು ನಡೆದುಕೊಂಡರು. 1976ರಲ್ಲಿ ಸಚಿವ ಸ್ಥಾನ ಕೊಟ್ಟು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸ್ವತಂತ್ರ ಹೊಣೆ ವಹಿಸಿದರು. ನಾನು ಕೈಗೊಂಡ ತೀರ್ಮಾನಗಳಿಗೆ ಬೆಂಬಲವಾಗಿ ನಿಂತರು. ಶಿಕ್ಷಣ ಇಲಾಖೆಯಲ್ಲಿ ಹಲವು ವರ್ಷಗಳಿಂದ ಖಾಲಿ ಇದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 16 ಸಾವಿರ ‘ಬ್ಯಾಕ್‌ಲಾಗ್‌’ ಹುದ್ದೆ ತುಂಬಲು ಸಹಕರಿಸಿದರು. ‘ನೇಮಕಾತಿ ಪ್ರಕ್ರಿಯೆ ಎರಡು ಹಂತದಲ್ಲಿ  ನಡೆಯಬೇಕು. ಒಂದೇ ಸಲ ಇಷ್ಟೊಂದು ಹುದ್ದೆ ತುಂಬಿದರೆ ಬೇರೆಯವರ ಮನಸಿಗೆ ಬೇಸರವಾಗಬಹುದು’ ಎಂದು ಸೂಕ್ಷ್ಮವಾಗಿ ಎಚ್ಚರಿಕೆ ಕೊಟ್ಟರು.

ಎಲ್ಲರಂತಲ್ಲದ ಅರಸು
ಅರಸು ಅವರು ಇಂದಿರಾಜಿ ಅವರನ್ನು ಕರೆದುಕೊಂಡು 1977ರಲ್ಲಿ ಮತ್ತೊಮ್ಮೆ ಗುಲ್ಬರ್ಗಾಕ್ಕೆ ಬಂದರು. ಅದು ಅಂಬೇಡ್ಕರ್‌ ಪ್ರತಿಮೆ ಅನಾವರಣ ಕಾರ್ಯಕ್ರಮ. ಚುನಾವಣೆ ಸಮಯವಾದ್ದರಿಂದ ಸಮಾರಂಭ ನಡೆಸಬಾರದೆಂಬ ಸೂಚನೆ ಇತ್ತು. ಚುನಾವಣೆ ಗೆಲ್ಲಬೇಕಾದರೆ ಪ್ರತಿಮೆ ಅನಾವರಣ ಆಗಬೇಕೆಂದು ಹಟ ಮಾಡಿದೆ. ಅಂಬೇಡ್ಕರ್‌ ಪ್ರತಿಮೆ ಅನಾವರಣಗೊಂಡಿತು.

ಸಿದ್ದರಾಮರೆಡ್ಡಿ ಮತ್ತೆ  ಚುನಾವಣೆ ಗೆದ್ದರು. ಅರಸು ಬೇರೆ ನಾಯಕರಂತಲ್ಲ. ಜನ ಮೆಚ್ಚಿಕೊಳ್ಳುವ ಕೆಲಸಗಳಿಗೆ ‘ರಿಸ್ಕ್‌’ ತೆಗೆದುಕೊಳ್ಳುತ್ತಿದ್ದರು. ಇದಕ್ಕೊಂದು ಉದಾಹರಣೆ ವರುಣಾ ನಾಲೆ. ವರುಣಾ ವಿರುದ್ಧ ಮಂಡ್ಯದಲ್ಲಿ ಚಡ್ಡಿ ಮೆರವಣಿಗೆ ನಡೆಯಿತು. ಆದರೂ ಅವರು ಹೆದರಲಿಲ್ಲ. ರಾಜಕೀಯ ಲಾಭ–ನಷ್ಟಗಳನ್ನು ನೋಡುತ್ತಿರಲಿಲ್ಲ. ಅವರೊಮ್ಮೆ ಗುಲ್ಬರ್ಗಾಕ್ಕೆ ಬಂದಾಗಲೂ ಕೆಲವರು ಬಹಿರಂಗವಾಗಿ ವಿರೋಧ ಮಾಡಿದರು. ‘ನೀವು ನನ್ನ ಮತದಾರರಲ್ಲ. ನೀವು ಬಡವರು ಮತ್ತು ರೈತ ವಿರೋಧಿಗಳು. ಮೈ ವೋಟರ್ಸ್‌ ಆರ್‌ ಇನ್‌ವಿಸಿಬಲ್‌’ ಎಂದೂ ರೇಗಿದ್ದರು. ಅವರ ಮಾತು ಚುನಾವಣೆಯಲ್ಲಿ ನಿಜವಾಯಿತು.

ಹತ್ತೇ ವರ್ಷದಲ್ಲಿ ಮತ್ತೆ ಕಾಂಗ್ರೆಸ್‌ ಹೋಳಾಯಿತು. ಇಂದಿರಾಜಿ ಮತ್ತು ಅರಸು ರಾಜಕೀಯವಾಗಿ ಬೇರೆ ಬೇರೆ ದಾರಿ ಹಿಡಿದರು. ನಾನು ಧೈರ್ಯ ಮಾಡಿ ಅರಸು ಅವರ ಬಳಿ ಹೋದೆ. ‘ಹಳ್ಳಿಗಳಲ್ಲಿ ಇಂದಿರಾಜಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದೇವೆ. ಅವರನ್ನು ಬಿಟ್ಟು ಹೊರ ಹೋಗುವುದು ಸರಿಯಲ್ಲ’ ಎಂಬ ಸಲಹೆ ಕೊಟ್ಟೆ. ಅವರು ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ‘ನನ್ನ ಜತೆಗಿರುವವರು ಇರಬಹುದು. ಹೋಗುವವರು ಹೋಗಬಹುದು. ಎಲ್ಲಿಯಾದರೂ ನಿಮ್ಮ ಭವಿಷ್ಯ ಹುಡುಕಿಕೊಳ್ಳಬಹುದು’ ಎಂದು ಖಡಕ್‌ ಆಗಿ ಹೇಳಿಬಿಟ್ಟರು. ಅದೊಂದು ಕಹಿ ಸಂದರ್ಭ. ಏನು ಮಾಡಬೇಕೆಂದು ತೋಚದೆ ಒದ್ದಾಡಿದೆ. ಒಂದೆಡೆ ನಮ್ಮನ್ನು ಬೆಳೆಸಿದ ನಾಯಕ. ಮತ್ತೊಂದೆಡೆ ಬಡವರಿಗೆ ಬದುಕು ಕೊಟ್ಟ ಇಂದಿರಾಜಿ. ಕೊನೆಗೆ ಇಂದಿರಾ ಜತೆ ಉಳಿಯುವ ತೀರ್ಮಾನ ಮಾಡಿದೆ.

ಅರಸರ ಬಳಿಕ ಗುಂಡೂರಾವ್‌ ಮುಖ್ಯಮಂತ್ರಿ ಆದರು. ಅವರ ಸಂಪುಟದಲ್ಲಿ ನಾನು ಕಂದಾಯ ಸಚಿವನಾದೆ. ಅರಸು ವಿರೋಧ ಪಕ್ಷದ ನಾಯಕ. ಬೆಂಗಳೂರು ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಬಗ್ಗೆ ಅರಸು ತಕರಾರು ತೆಗೆದರು. ‘‘ನನ್ನ ಕಾಲದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಗಮನ ಕೊಡಲಿಲ್ಲ. ನೀವಾದರೂ ಕಾಳಜಿ ವಹಿಸಿ. ರೆವಿನ್ಯೂ ಬಡಾವಣೆಗಳು ಬೆಳೆಯಲು ಅವಕಾಶ ಕೊಡಬೇಡಿ. ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ವೇ ಬಡಾವಣೆ ಅಭಿವೃದ್ಧಿಪಡಿಸಲಿ. ನಗರ ಅಡ್ಡಾದಿಡ್ಡಿ ಬೆಳೆದರೆ ನೀರು, ರಸ್ತೆ, ಚರಂಡಿ ಸೌಲಭ್ಯ ಒದಗಿಸಲು ಸಾಧ್ಯವಿಲ್ಲ. ನಿಮ್ಮ ಅಧ್ಯಕ್ಷತೆಯಲ್ಲಿ ಸಭೆ ಕರೆದು, ಒಂದು ತೀರ್ಮಾನ ಮಾಡಿ’’ ಎಂದರು.

ವಿಧಾನಸೌಧದ ಕಮಿಟಿ ಕೊಠಡಿಯಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ಕರೆದೆ. ನನ್ನ ಚೇಂಬರ್‌ ಪಕ್ಕದ ಕೊಠಡಿ ಅದು. ಅರಸು ಸಮಯಕ್ಕೆ ಸರಿಯಾಗಿ ಬಂದರು. ಬೇರೆಯವರು ಇನ್ನೂ ಬರಬೇಕಿದ್ದರಿಂದ ಅವರನ್ನು ಚೇಂಬರ್‌ಗೆ ಕರೆದೊಯ್ದೆ. ‘ನಡಿ, ಒಂದು ಕಪ್‌ ಕಾಫಿ ಕುಡಿಸು’ ಎಂದು ಹೇಳುತ್ತಾ ಎದ್ದು ಬಂದರು. ನನ್ನ ಕುರ್ಚಿ ತೋರಿಸಿ ಕುಳಿತುಕೊಳ್ಳಲು ಹೇಳಿದೆ. ಅರಸು ಅವರು ಒಪ್ಪಲಿಲ್ಲ. ಎದುರಿನ ಕುರ್ಚಿಯಲ್ಲಿ ಕೂತರು. ಆ ಕ್ಷಣಕ್ಕೆ ಕಣ್ಣೀರು ಬಂತು. ಒಂದು ವರ್ಷದ ಹಿಂದೆ ಮುಖ್ಯಮಂತ್ರಿ ಆಗಿದ್ದವರು ಹೀಗೆ ಸಾಮಾನ್ಯರಂತೆ ಕುಳಿತರಲ್ಲಾ ಎಂದು ದುಃಖ ಉಮ್ಮಳಿಸಿ ಬಂತು.

ನನ್ನ ಕಣ್ಣಲ್ಲಿ ನೀರಾಡಿದ್ದನ್ನು ಅರಸು ಗಮನಿಸಿದರು. ‘ಪಾಲಿಟಿಕ್ಸಲ್ಲಿ ಯಾವುದು ಶಾಶ್ವತ ಅಲ್ಲ. ಇದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬಾರದು’ ಎಂದು ಸಮಾಧಾನ ಹೇಳಿದರು. ಅರಸು ಅವರು ಮಂತ್ರಿ ಸ್ಥಾನ ಕೊಟ್ಟಾಗ ನನಗೆ 31 ವರ್ಷ. ಜೀವನದಲ್ಲಿ ಅದೊಂದು ಮರೆಯಲಾಗದ ಘಟನೆ.

ಸಾಮಾಜಿಕ ನ್ಯಾಯದ ತುಡಿತ
ದೇವರಾಜ ಅರಸು ಅವರ ನರನಾಡಿಗಳಲ್ಲಿ ಸಾಮಾಜಿಕ ನ್ಯಾಯ ತುಡಿಯುತಿತ್ತು. ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿದೆ. ಹಿಂದುಳಿದ ವರ್ಗಕ್ಕೆ ಇಂಥದೊಂದು ಅವಕಾಶ ಇರಲಿಲ್ಲ. ಅದಕ್ಕಾಗಿ ಅರಸು ‘ಹಾವನೂರ್‌ ಆಯೋಗ’ ರಚನೆ ಮಾಡಿ, ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದರು.

ಅರಸು ಹಿಂದುಳಿದ ಸಮಾಜಕ್ಕೆ ಸೇರಿದವರಲ್ಲ. ಆದರೂ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ವಹಿಸಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. 20 ಅಂಶಗಳ ಕಾರ್ಯಕ್ರಮ ಇಂದಿರಾಜಿ ರೂಪಿಸಿದರೂ ಅದನ್ನು ಪರಿಣಾಮಕಾರಿ ಆಗಿ ಜಾರಿಗೆ ತಂದ ಹೆಗ್ಗಳಿಕೆ ಅರಸು ಅವರಿಗೆ ಸಲ್ಲಬೇಕು. ಭೂಸುಧಾರಣೆ ಕಾಯ್ದೆ ಜಾರಿ, ಜೀತ ಪದ್ಧತಿ ನಿರ್ಮೂಲನೆ ಕಾರ್ಯಕ್ರಮಗಳಿಂದ ಅರಸು ತಮ್ಮ ವಿರೋಧಿಗಳಿಗೆ ಅಪ್ರಿಯವಾದರು. ಬೇರೆಯವರು ಅವರನ್ನು ಅಪಾರ್ಥ ಮಾಡಿಕೊಂಡರು. ಯಾರಿಗೂ ಅವರು ಅನ್ಯಾಯ ಮಾಡಲಿಲ್ಲ. ನ್ಯಾಯ ಸಿಗದವರಿಗೆ ನ್ಯಾಯ ಒದಗಿಸಿದರು.

ರಾಜಕಾರಣದಲ್ಲಿ ಅರಸು ಅಂಥವರು ಅತ್ಯಂತ ವಿರಳ. ಅವರು ಮಾಡಿದ ಕೆಲಸ ಉಳಿದ ರಾಜಕಾರಣಿಗಳಿಗೆ ಮಾದರಿ. ಅವರು ಇವೆಲ್ಲವನ್ನು ಮಾಡಲು ಕಾಂಗ್ರೆಸ್‌ ಕಾರಣ. ಅವರಿಗೆ ಅಧಿಕಾರ ಸಿಗದಿದ್ದರೆ ಏನೂ ಮಾಡಲು ಸಾಧ್ಯವಿರಲಿಲ್ಲ. ಅರಸು ಸಿಕ್ಕ ಅಧಿಕಾರವನ್ನು ಸದುಪಯೋಗ ಮಾಡಿಕೊಂಡರು. ದೇವರಾಜ ಅರಸು ಅವರ ಶತಮಾನೋತ್ಸವ ಆಚರಣೆ ಸಮಯದಲ್ಲಿ ಅವರ ವಿಚಾರಗಳನ್ನು ಜಾರಿಗೆ ತರಬೇಕು. ಆಗ ಮಾತ್ರ ಆಚರಣೆಗೆ ಬೆಲೆ ಬರುತ್ತದೆ.

ನಿರೂಪಣೆ: ಹೊನಕೆರೆ ನಂಜುಂಡೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.