ADVERTISEMENT

ನಮ್ಮೂರು ನಮಗ ಪಾಡ...

ಪಾಲಾಕ್ಷ ಬ ತಿಪ್ಪಳ್ಳಿ
Published 2 ಜುಲೈ 2018, 20:26 IST
Last Updated 2 ಜುಲೈ 2018, 20:26 IST

ನಮ್ಮೂರೇ ನಮಗ ಪಾಡ... ಯಾತಕವ್ವ ಹುಬ್ಬಳ್ಳಿ ಧಾರವಾಡ... ಅನ್ನುವ ಹಾಡು, ಧಾರವಾಡಕ್ಕೆ ಬಂದ ಹೊಸತರಲ್ಲಿ ನೆನಪಾಗುತ್ತಿತ್ತು. ನನ್ನದು ಬಿಸಿಲೂರು ಕೊಪ್ಪಳ ಜಿಲ್ಲೆ. ಓದಿದ್ದು ಧಾರವಾಡ... ಅಲ್ಲಿಗೇ ಅಪರಿಚಿತನಾಗಿದ್ದೆ. ಧಾರವಾಡ ನಮ್ಮೂರು ಎನಿಸುವ ಹೊತ್ತಿಗೆ ಜೀವನ ಬೆಂಗಳೂರಿಗೆ ಕರೆತಂದಿದೆ.

ಊರಲ್ಲಿದ್ದಾಗ ಬೆಂಗಳೂರಂದ್ರೆ ವಿಧಾನಸೌಧ, ಹೈಕೋರ್ಟ್, ಕಬ್ಬನ್ ಪಾರ್ಕ್, ಲಾಲ್ ಬಾಗ್ ಚಿತ್ರಗಳು ಮಾತ್ರ ನೆನಪಾಗುತ್ತಿದ್ದವು. ಬೆಂಗಳೂರು ಬಹುದೊಡ್ಡ ನಗರ. ಅಲ್ಲಿನ ವಾತಾವರಣ ಸೊಗಸಾಗಿರುತ್ತದೆ ಎಂದು ಕೇಳಿದ್ದೆ. ಹಾಗೇ ಇದೆ.ನಮ್ಮೂರಿನ ಊಟದ ಪದ್ಧತಿಯೇ ಬೇರೆ. ಸಜ್ಜೆ ಮತ್ತು ಜೋಳದ ರೊಟ್ಟಿ, ಕಾಳು, ಹೊಲದಲ್ಲಿ ಬೆಳೆಯುವ ಚವಳಿಕಾಯಿ, ಬದನೆಕಾಯಿ, ಮೆನಸಿನ ಕಾಯಿ ಇನ್ನಿತರೆ ತರಕಾರಿಗಳನ್ನು ಬೆಳೆದು ತಿನ್ನುತ್ತೇವೆ. ಕೊಂಡು ತರುವುದು ಬಲು ಅಪರೂಪ. ಹೊಲದ ಬದುಗಳಲ್ಲಿ, ಅಂಗಳದಲ್ಲಿ ಸೊಪ್ಪನ್ನು ಬೆಳೆದು, ಅದನ್ನೇ ಊಟಕ್ಕೆ ಬಳಸಿಕೊಳ್ಳುತ್ತೇವೆ.

ನಮ್ಮಲ್ಲಿ ಬೆಳೆದಿದ್ದನ್ನು ಹಸಿಹಸಿಯಾಗಿಯೇ ತಿನ್ನುತ್ತೇವೆ. ಮೆಂತ್ಯ ಸೊಪ್ಪು, ಈರುಳ್ಳಿ, ಸೌತೆಕಾಯಿ, ಹಸಿಮೆಣಸು ಇಷ್ಟಿದ್ದರೆ ಯಾವ ಪಲ್ಯಗಳ ಅಗತ್ಯವೂ ಇರುವುದಿಲ್ಲ. ಇಲ್ಲಿ ಹಾಗಲ್ಲ. ಬೆಳೆದದ್ದನ್ನು ಕೊಂಡು, ತೊಳೆದು, ಬೇಯಿಸಿ, ಹುರಿದು ತಿನ್ನುವುದು ಹೆಚ್ಚು. ಇಲ್ಲಿನ ಜನರ ಜೀವನ ಶೈಲಿ, ಊಟದ ಪದ್ಧತಿ, ನಯವಾಗಿ ಮಾತನಾಡು ಆಂಗ್ಲನ್ನಡ ನೋಡಿದರೆ ಎಲ್ಲವೂ ಅಪರಿಚಿತ ಪರದೆಯಲ್ಲಿಯೇ ಉಳಿದುಬಿಡುತ್ತವೆ. ಗಂಟಲು ಹರಿಯುವಂತೆ ಬಾಯ್ತುಂಬಿ ಮಾತಾನಾಡುವ ನಾವೆಲ್ಲ ಇಲ್ಲಿಯವರ ನಾಜೂಕಿನ ಮುಂದೆ ಬಾಯಿಬಿಗಿ ಹಿಡಿದುಕೊಂಡಿರಬೇಕು. ನಮ್ಮದು ಏನಿದ್ದರೂ ಜವಾರಿ ಭಾಷೆ. ಇವರದು ನಯ, ನಾಜೂಕಿನ ಮಾತು. ಒಟ್ಟಿನಲ್ಲಿ ಭಾಷೆ ಒಂದೇ ಅದುವೇ ಕರುನಾಡಿನ ಸವಿಗನ್ನಡ.

ADVERTISEMENT

ಊಟದಲ್ಲಿ ಖಾರ ಕಡಿಮೆ. ಬಸ್ಸು, ಟ್ರೇನುಗಳಲ್ಲಿ ಮಾತು ಕಡಿಮೆ. ನಮ್ಮಲ್ಲಿ ಹಣ್ಣು ಸೇವಿಸುವುದು ಹುಷಾರಿಲ್ಲದಿದ್ದಾಗ ಮಾತ್ರ. ಆದರೆ ಇಲ್ಲಿ ಹೊಟ್ಟೆತುಂಬಿಸಲೂ ಹಣ್ಣು ತಿನ್ನುತ್ತಾರೆ. ತೀರ ಸೋಜಿಗವೆನಿಸಿದ್ದು, ಇಲ್ಲಿ ಎಲ್ಲರೂ ಪರಸ್ಪರ ಕೈಕೈ ಹಿಡಿದು, ರಸ್ತೆ ಮೇಲೆಯೇ ಅರೆತಬ್ಬಿಕೊಂಡೇ ಹೆಜ್ಜೆ ಹಾಕುತ್ತಾರೆ. ಯಾರ ಚಿಂತೆಯೂ ಇಲ್ಲದೇ ತಮ್ಮದೇ ಲೋಕದಲ್ಲಿ ಮೈಮರೆಯುತ್ತಾರೆ. ನಮ್ಮಲ್ಲಿ ಹುಡುಗ, ಹುಡುಗಿಯರು ಒಟ್ಟಿಗೆ ಹೆಜ್ಜೆ ಹಾಕಿದರೂ ಸಾಕು, ಇಡೀ ಲೋಕವೇ ಅವರತ್ತ ಕಣ್ಬಿಟ್ಟಿರುತ್ತದೆ. ಈ ಸ್ವಚ್ಛಂದವನ್ನು ಕಣ್ಬಿಟ್ಟು ನೋಡುವುದೂ ಸಂಕೋಚವೆನಿಸುತ್ತದೆ.

ಬೆಂಗಳೂರಿಗೂ ನಮ್ಮೂರಿಗೂ ಇರುವ ಒಂದೇ ಒಂದು ಸಾಮ್ಯತೆ ಎಂದರೆ ಕಂಡಲ್ಲೆಲ್ಲ ಕಸ. ನಮ್ಮೂರಲ್ಲಿ ಅದು ತಿಪ್ಪೆಗುಂಡಿಯಾಗಿ ಬೆಳೆಯುತ್ತದೆ. ಕೊಳೆತಿದ್ದು ಮಣ್ಣಿಗೆ ಸೇರುತ್ತದೆ. ಇಲ್ಲಿ ಹಾಗಲ್ಲ.. ಕಸದ ರಾಶಿ, ತ್ಯಾಜ್ಯದ ಬೆಟ್ಟವನ್ನೇ ಸೃಷ್ಟಿಸುತ್ತದೆ. ಉದ್ಯೋಗಾವಕಾಶಕ್ಕೆ ಅರಸಿ ಬಂದಾಗ ಮನೆಬಾಡಿಗೆ,ನೀರಿನ ಬೆಲೆ, ಊಟದ ಬೆಲೆ, ತರಕಾರಿ ಏನೂ ಕೇಳಿದರೂ ಹೌಹಾರಿದಂತಾಗುತ್ತದೆ. ಪತ್ರಿಕೆಯ ಪುಟಗಳನ್ನು ಕಣ್ಣಾಡಿಸಿದರೆ, ಕೊಲೆ, ಆತ್ಮಹತ್ಯೆ, ಅಪಘಾತಗಳು ಸುದ್ದಿಯೇ ಹೆಚ್ಚು. ಜೀವನ ತುಟ್ಟಿ, ಜೀವ ಅಗ್ಗವೆನಿಸುವುದು ಆಗಲೇ... ಊರ ನೆನಪಿಸಿಕೊಂಡಾಗಲೆಲ್ಲ ಹಾಡು ನೆನಪಾಗುತ್ತದೆ.. ನಮ್ಮೂರು ನಮಗ ಪಾಡ.. ಯಾತಕವ್ವಾ ಬೆಂಗಳೂರು... ಮೈಸೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.