ADVERTISEMENT

ನಮ್ಮೊಳಗಿನ ಗಾಂಧಿ

ಯು.ಆರ್.ಅನಂತಮೂರ್ತಿ
Published 25 ಜನವರಿ 2014, 19:30 IST
Last Updated 25 ಜನವರಿ 2014, 19:30 IST

ಮುಖ್ಯಮಂತ್ರಿಯಾಗಿಯೂ ದೆಹಲಿಯ ಬೀದಿಯಲ್ಲಿ ಧರಣಿ ನಡೆಸಿದ ‘ಆಮ್ ಆದ್ಮಿ’ ಪಾರ್ಟಿಯ ಅರವಿಂದ್ ಕೇಜ್ರಿವಾಲ್‌ರನ್ನು ಕಂಡಾಗ ಗಾಂಧಿ ನಮ್ಮ ಮಧ್ಯೆ ಜೀವಂತವಾಗಿದ್ದಾರೆ ಅನ್ನಿಸಿತು. ಕಾನೂನು ಹೇಳುವ ಶಿಸ್ತು ಜನ ವಿರೋಧಿಯಾಗಿದ್ದಾಗ ಹೀಗೆ ಅರಾಜಕ ಎನಿಸುವಂಥ ನಿರ್ಧಾರಗಳನ್ನು ಕೈಗೊಳ್ಳುವ ಧೈರ್ಯ ಬರುವುದು ಗಾಂಧಿಯಿಂದ. ಮುಖ್ಯಮಂತ್ರಿಯೇ ಹೀಗೆ ತನ್ನ ಸಂಪುಟದೊಂದಿಗೆ ಬೀದಿಯಲ್ಲಿ ಕುಳಿತುಬಿಡುವುದು ಒರಟುತನವಲ್ಲವೇ ಎಂಬ ಸಂಶಯ ಬರಬಹುದು. ಗಾಂಧೀ ಮಾರ್ಗ ಉಳಿದುಕೊಂಡದ್ದೇ ಈ ಬಗೆಯ ಒರಟುತನಗಳಲ್ಲಿ. ಗಾಂಧಿ ಕೇವಲ ತತ್ವವಾಗಿದ್ದಾಗ ಈ ಒರಟುತನ ಕಾಣಿಸುವುದಿಲ್ಲ. ಕ್ರಿಯಾಶೀಲಗೊಳ್ಳಲು ಆರಂಭಿಸಿದ ಕ್ಷಣವೇ ಅದು ಮಣ್ಣಿಗೆ ಅಂಟಿಕೊಳ್ಳಬೇಕಾಗುತ್ತದೆ. ಸಹಜವಾಗಿಯೇ ಅದಕ್ಕೆ ಒರಟುತನ ಪ್ರಾಪ್ತವಾಗುತ್ತದೆ.

ಲೋಹಿಯಾ ಅವರಲ್ಲಿ ಗಾಂಧಿ ಹೀಗೆ ಒರಟಾಗಿದ್ದರು. ಆಫ್ರಿಕಾದ ನೆಲ್ಸನ್ ಮಂಡೇಲಾ ರೂಪಿಸಿದ ಚಳವಳಿಯಲ್ಲಿಯೂ ಗಾಂಧಿ ಹೀಗೆ ಒರಟಾಗಿದ್ದರು. ಬರ್ಮಾದಲ್ಲಿ ಸೂಕಿ ಹಿಡಿದ ಮಾರ್ಗದಲ್ಲಿಯೂ ಗಾಂಧಿ ಇದ್ದದ್ದು ಒರಟಾಗಿಯೇ. ಗಾಂಧಿವಾದವನ್ನು ಈ ಒರಟುತನವಿಲ್ಲದೆ ಶುದ್ಧವಾಗಿಟ್ಟುಕೊಂಡರೆ ಅದಕ್ಕೊಂದು ಮಠೀಯ ರೂಪ ಬಂದುಬಿಡುತ್ತದೆ. ವಿನೋಬಾರಲ್ಲಿ ಗಾಂಧಿ ಇದ್ದದ್ದು ಹೀಗೆ ಶುದ್ಧವಾಗಿ ಅಥವಾ ಮಠೀಯ ಸ್ವರೂಪದಲ್ಲಿ. ಅದರಿಂದಾಗಿಯೇ ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಹೇರಿದಾಗ ಅವರದನ್ನು ‘ಅನುಶಾಸನ ಪರ್ವ’ ಅಥವಾ ಟೈಮ್ ಆಫ್ ಡಿಸಿಪ್ಲಿನ್ ಎಂದು ಒಪ್ಪಿಕೊಂಡುಬಿಟ್ಟರು. ಆದರೆ ಅವರ ಅನುಯಾಯಿಯೇ ಆಗಿದ್ದ ಜಯಪ್ರಕಾಶ್ ನಾರಾಯಣ ಭಿನ್ನವಾಗಿ ನಿಂತು ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟವೊಂದನ್ನು ಕಟ್ಟಿದರು. ಜೆ.ಪಿ.ಯ ಕ್ರಿಯಾಶೀಲತೆಗೆ ಕಾರಣವಾದದ್ದು ಗಾಂಧೀವಾದವೇ. ಅದು ವಿನೋಬಾರ ಗಾಂಧೀವಾದದಂತೆ ಶುದ್ಧವಾಗಿರದೆ ಒರಟಾಗಿತ್ತು!

ಇದಕ್ಕೆ ನನ್ನ ಕಾಲದ ಇನ್ನೂ ಒಂದು ಉದಾಹರಣೆಯನ್ನು ಕೊಡಬಹುದು ಅನ್ನಿಸುತ್ತದೆ. ಗಂಧದ ಮರಗಳನ್ನು ಕಡಿಯುವುದು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಒಂದು ಬಗೆಯ ಪ್ರತಿಭಟನೆಯ ಮಾರ್ಗವಾಗಿತ್ತು. ಈ ಮರಗಳನ್ನು ಕಡಿದು ಅವರದನ್ನು ಮಾರಾಟಕ್ಕೆ ಸಾಗಿಸುತ್ತಿರಲಿಲ್ಲ. ಮರಗಳನ್ನು ಕಡಿಯುವುದಷ್ಟೇ. ಏಕೆಂದರೆ ಆಗಿನ ಕಾನೂನಿನಂತೆ ಗಂಧದ ಮರಗಳೆಲ್ಲವೂ ಸರ್ಕಾರದ ಆಸ್ತಿಗಳಾಗಿದ್ದವು. ಮರಗಳನ್ನು ಕಡಿಯುವ ಮೂಲಕ ವಸಾಹತುಶಾಹೀ ಅಧಿಕಾರವನ್ನು ಪ್ರಶ್ನಿಸಲಾಗುತ್ತಿತ್ತು. ಇದೂ ಒಂದು ರೀತಿಯ ಒರಟುತನವೇ.

ಗಾಂಧಿ ಅವರ ಕಾಲದಲ್ಲಿಯೂ ನಮ್ಮ ಕಾಲದಲ್ಲಿಯೂ ಪ್ರಸ್ತುತರಾಗಿ ಉಳಿಯುವುದೇ ಈ ಕಾರಣಕ್ಕೆ. ಹಿಂದೊಮ್ಮೆ ಅಶೀಶ್ ನಂದಿಯವರು ಹೇಳಿದಂತೆ ಸ್ವತಃ ಗಾಂಧಿಗೆ ಸಂಪೂರ್ಣ ಗಾಂಧೀವಾದಿಯಾಗಿರುವುದಕ್ಕೆ ಸಾಧ್ಯವಿರಲಿಲ್ಲ. ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಚಳವಳಿಯನ್ನು ಆರಂಭಿಸಿದಾಗ ಅವರಲ್ಲಿ ನಾನು ಜೆ.ಪಿ., ಲೋಹಿಯಾರಲ್ಲಿ ಕಂಡಿದ್ದ ಗಾಂಧೀವಾದದ ಕ್ರಿಯಾಶೀಲತೆಯನ್ನೇ ಕಂಡಿದ್ದೆ.

ಅಣ್ಣಾ ಹಜಾರೆ ಹಟಮಾರಿಯಂತೆ ಒರಟಾಗಿ ಲೋಕಪಾಲಕ್ಕೆ ವಾದಿಸುತ್ತಿದ್ದುದರ ಹಿಂದಿದ್ದದ್ದೂ ಕೂಡಾ ಕ್ರಿಯಾಶೀಲಗೊಂಡಿದ್ದ ಗಾಂಧೀವಾದವೇ. ಆಗ ಹಜಾರೆ ಜೊತೆಗಿದ್ದು ಈಗ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಇಳಿದಿರುವ ಅರವಿಂದ ಕೇಜ್ರಿವಾಲ್ ಅವರಲ್ಲಿ ಈ ಒರಟುತನ ಸ್ವಲ್ಪ ಹೆಚ್ಚು ಅನ್ನಿಸುವಷ್ಟೇ ಕಾಣಿಸುತ್ತಿದೆ.

ಮುಖ್ಯಮಂತ್ರಿ ಪದವಿಯ ಅನಿವಾರ್ಯತೆಗಳನ್ನು ಒಪ್ಪಿಕೊಂಡು ಪ್ರತಿಭಟಿಸುವುದೋ ಬೇಡವೋ ಎಂಬ ಸೂಕ್ಷ್ಮ ಲೆಕ್ಕಾಚಾರದಲ್ಲಿ ತೊಡಗದೆ, ಸರಿ ಇಲ್ಲ ಎನ್ನಿಸಿದ್ದನ್ನು ಪ್ರತಿಭಟಿಸುತ್ತಿರುವುದರಲ್ಲಿ ಗಾಂಧೀವಾದವಿದೆ. ‘ಆಮ್ ಆದ್ಮಿ’ ಪಕ್ಷದ ಕಾನೂನು ಮಂತ್ರಿ ಕೆಟ್ಟ ಮಾತುಗಳನ್ನು ಆಡಿದಾಗ ಅದು ಸರಿ ಇಲ್ಲ ಎಂದು ಧೈರ್ಯವಾಗಿ ಹೇಳಿದ ಅದೇ ಪಕ್ಷದ ಯೋಗೇಂದ್ರ ಯಾದವ್ ಮಾತಿನಲ್ಲಿಯೂ ಗಾಂಧಿ ಕಾಣಿಸುತ್ತಾರೆ. ಉಳಿದ ರಾಜಕೀಯ ಪಕ್ಷಗಳಾಗಿದ್ದರೆ ‘ನಾನು ಅವರ ಹೇಳಿಕೆಯನ್ನು ಪರಿಶೀಲಿಸಿ ಮತ್ತೆ ಇದರ ಬಗ್ಗೆ ಪ್ರತಿಕ್ರಿಯಿಸುತ್ತೇನೆ’ ಎಂಬ ಪೊಲಿಟಿಕಲೀ ಕರೆಕ್ಟ್ ಉತ್ತರ ಬರುತ್ತಿತ್ತು. ಯೋಗೇಂದ್ರ ಯಾದವ್ ಅವರಲ್ಲಿ ಒಂದು ಕ್ರಿಯಾಶೀಲ ಗಾಂಧೀವಾದ ಇರುವುದರಿಂದ ಅವರು ಜಾರಿಕೊಳ್ಳುವ ಉತ್ತರ ನೀಡಲಿಲ್ಲ. ಸ್ವಲ್ಪ ಒರಟಾಗಿ ‘ನನ್ನ ಸಹಯೋಗಿ ಹೇಳಿದ್ದು ಸರಿಯಲ್ಲ’ ಎಂದು ಧೈರ್ಯವಾಗಿ ಹೇಳಿದರು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಇದು ಸಾಧ್ಯವಿರಲಿಲ್ಲ. ಏಕೆಂದರೆ ಈ ಎರಡೂ ಪಕ್ಷಗಳು ಆಲೋಚನೆಯಲ್ಲಿ ಭಿನ್ನವಲ್ಲ. ಇವುಗಳಲ್ಲಿ ಭಿನ್ನತೆ ಎಂಬುದೇನಾದರೂ ಉಳಿದುಕೊಂಡಿದ್ದರೆ ಅವುಗಳ ಹೊರ ನಡವಳಿಕೆಯಲ್ಲಿ. ಆಲೋಚನೆಗೂ ನಡವಳಿಕೆಗೂ ಸಾತತ್ಯ ಇಲ್ಲದಿರುವೆಡೆ ಗಾಂಧಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಗಾಂಧೀವಾದವನ್ನು ಸುಮ್ಮನೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಅದು ಕ್ರಿಯಾಶೀಲವಾಗಿ ಕಾಣಿಸಿಕೊಳ್ಳಬೇಕು. ಆಮ್ ಆದ್ಮಿ ಪಾರ್ಟಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅದರಲ್ಲಿ ಒಂದು ಬಗೆ. ಹಾಗೆಯೇ ಇದು ಮೇಧಾ ಪಾಟ್ಕರ್ ಅವರಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ಬಗೆ. ಭಾರತಾದ್ಯಂತ ವಿನಾಶಕಾರಿ ಅಭಿವೃದ್ಧಿಯ ವಿರುದ್ಧ, ಶೈಕ್ಷಣಿಕ ಅಸಮಾನತೆಯ ವಿರುದ್ಧ, ಆದಿವಾಸಿಗಳ ಬದುಕಿನ ರಕ್ಷಣೆಗಾಗಿ ಹೋರಾಡುತ್ತಿರುವ ಅನೇಕರಲ್ಲಿ ಗಾಂಧಿಯಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT