1961-62ರ ಸುಮಾರಿನಲ್ಲಿ ನನ್ನ ಗೆಳೆಯನೊಬ್ಬನ ಕೈಯಲ್ಲಿ `ಚಂಡೆಮದ್ದಳೆ' ಎಂಬ ಕವನ ಸಂಕಲನವಿತ್ತು. ಅದುವರೆಗೆ ಕುವೆಂಪು, ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ ಮೊದಲಾದವರ ಕೆಲವು ಕವನಗಳನ್ನು ಓದಿದ್ದ ನನಗೆ ಆ ಸಂಕಲನದ ಕೆಲವು ದೀರ್ಘ ಕವನಗಳನ್ನು ಓದಿದಾಗ ಕಂಡುಕೇಳರಿಯದ ಹೊಸದೊಂದು ಜಗತ್ತನ್ನು ಪ್ರವೇಶಿಸಿದಂತಾಯಿತು. `ಕಾವ್ಯವೆಂದರೆ ತೀವ್ರವಾದ ಭಾವನೆಗಳನ್ನು ಮನಮುಟ್ಟುವ ಹಾಗೆ ವ್ಯಕ್ತಪಡಿಸುವುದು ಎನ್ನುವುದೇ ಕಾವ್ಯದ ಬಗ್ಗೆ ಸಾಮಾನ್ಯ ಧೋರಣೆ'ಯಾಗಿದ್ದ ಕಾಲದಲ್ಲಿ ಆ ಕವನಗಳು ಭಾಷೆಯಲ್ಲಿ, ನಾಟಕೀಯ ಧಾಟಿಯಲ್ಲಿ, ಪ್ರತಿಮಾಲಂಕಾರದಲ್ಲಿ, ಎಂಥವರನ್ನಾದರೂ ಚುಚ್ಚುವಂಥ ವ್ಯಂಗ್ಯದಲ್ಲಿ, ಅಕರಾಳವಿಕರಾಳ ಎನ್ನಿಸುವಂಥ ವಿವರಗಳಲ್ಲಿ ನವೋದಯಕಾವ್ಯಕ್ಕಿಂತ ತೀರ ಭಿನ್ನವಾದ, ಎಲ್ಲ ರೀತಿಯಿಂದಲೂ ಸ್ವೋಪಜ್ಞವಾದ, ನಿಜಕ್ಕೂ ಬೆರಗುಹುಟ್ಟಿಸುವಂಥ ಹೊಚ್ಚಹೊಸ ದನಿಯನ್ನು ಕಂಡುಕೊಂಡಿದ್ದುವು. ಆ ಕವನಗಳನ್ನು ರಚಿಸಿದ್ದವರು ಗೋಪಾಲಕೃಷ್ಣ ಅಡಿಗರು; ಮುಂದೆ ಕನ್ನಡ ಕಾವ್ಯ ಪರಂಪರೆಗೆ ಹೊಸ ನೀರು ಹರಿಸಿ ಮಾರ್ಗಪ್ರವರ್ತಕರೆನಿಸಿದ ಕವಿವರ್ಯರು.
ಕೆಲವು ವರ್ಷಗಳ ನಂತರ ಅವರ `ಭೂಮಿಗೀತ' ಸಂಕಲನ ಪ್ರಕಟವಾಯಿತು. ಅದರಲ್ಲಿನ ಕವನಗಳನ್ನೂ ಓದಿದ ಮೇಲೆ ಎಂದಾದರೊಂದು ದಿನ ಅಡಿಗರನ್ನು ನೋಡಲೇಬೇಕೆಂಬ ಆಸೆ ಸಹಜವಾಗಿಯೇ ನನ್ನಲ್ಲಿ ಹುಟ್ಟಿಕೊಂಡಿತು. 1972ರಲ್ಲಿ ಗೆಳೆಯ ಬಾ.ಕಿ.ನ. ನನ್ನನ್ನು ಜಯನಗರದಲ್ಲಿದ್ದ ಅಡಿಗರ ಮನೆಗೆ ಕರೆದುಕೊಂಡು ಹೋಗಿ ಅವರನ್ನು ಪರಿಚಯ ಮಾಡಿಕೊಟ್ಟ.
ಮೈಸೂರಿನಲ್ಲಿದ್ದಾಗ ಅವರು ಅಲ್ಲಿನ ಒಂದು ಕಾಫಿ ಹೌಸ್‌ನಲ್ಲಿ ಪ್ರತಿದಿನ ಸಂಜೆ ಅನೇಕ ಮಂದಿ ಕಿರಿಯರ ಜೊತೆ ಸಾಹಿತ್ಯದ ಬಗ್ಗೆ, ರಾಜಕೀಯದ ಬಗ್ಗೆ ಗಾಢವಾಗಿ ಚರ್ಚಿಸುತ್ತಿದ್ದರೆಂದು ಕೇಳಿದ್ದೆ. ಸುಮತೀಂದ್ರ ನಾಡಿಗರು ಗಾಂಧಿ ಬಜಾರಿನಲ್ಲಿ ಒಂದು ಪುಸ್ತಕದಂಗಡಿ ತೆರೆದ ಮೇಲೆ ಬಹುಶಃ ಅಂಥದೇ ರೀತಿಯ ಚರ್ಚಾಕೂಟ ಬೆಂಗಳೂರಿನಲ್ಲೂ ಶುರುವಾಯಿತೆನ್ನಬೇಕು. ಅಡಿಗರು ಹೆಚ್ಚು ಕಡಿಮೆ ಪ್ರತಿ ಸಂಜೆಯೂ ಸುಮಾರು ಐದು ಗಂಟೆ ಹೊತ್ತಿಗೆ ಗಾಂಧಿ ಬಜಾರಿಗೆ ಬರತೊಡಗಿದರು.
ನಾನು, ಬಾ.ಕಿ.ನ., ಎ.ಎನ್. ಪ್ರಸನ್ನ, ಸುಮತೀಂದ್ರ ನಾಡಿಗ, ಬಿ.ಜಿ. ಪೈ, ಇನ್ನೂ ಕೆಲವರು ಅವರನ್ನು ಭೇಟಿಮಾಡುತ್ತಿದ್ದೆವು. ಒಮ್ಮಮ್ಮೆ ಕೆ.ಎಸ್. ನಿಸಾರ್ ಅಹಮದ್, ಲಕ್ಷ್ಮೀನಾರಾಯಣ ಭಟ್ಟ, ವೈಯೆನ್ಕೆ ಮೊದಲಾದವರೂ ಜೊತೆಗಿರುತ್ತಿದ್ದರು. ಎಲ್ಲರೂ ಅಡಿಗರ ಜೊತೆ ಆ ಕಾಲದಲ್ಲಿದ್ದ ಸನ್ಮಾನ್ ಹೋಟೆಲಿಗೆ ಹೋಗಿ, ಕಾಫಿ ಕುಡಿದ ಮೇಲೆ ಹೊರಬಂದು ಕೆನರಾ ಬ್ಯಾಂಕಿನ ಮೆಟ್ಟಿಲುಗಳ ಮೇಲೆ ಕುಳಿತು ಅಡಿಗರ ಯೋಚನಾ ಸರಣಿಗೆ ನಮ್ಮ ನಮ್ಮ ಮನಸ್ಸು ಬುದ್ಧಿಗಳನ್ನು ಹದಮಾಡಿಕೊಳ್ಳುವುದು ಒಂದು ರೂಢಿಯೇ ಆಗಿಬಿಟ್ಟಿತು.
1975ರ ಜೂನ್ 26ರಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರಷ್ಟೆ. ಮಾರನೆಯ ಬೆಳಿಗ್ಗೆ ನಾವೆಲ್ಲ ಪತ್ರಿಕೆಗಳಲ್ಲಿ ಆ ಬಗ್ಗೆ ಓದಿದರೂ ಕೂಡ ನಮಗೆ ಅಂಥ ಶಾಸನದಿಂದ ಏನೇನು ಅನರ್ಥ ಆಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಆ ಸಂಜೆ ಅಡಿಗರು ಎಂದಿನಂತೆ ಗಾಂಧಿ ಬಜಾರಿಗೆ ಬಂದರು. ನಾವು ಮೂವರು ನಾಲ್ವರು ಎಂದಿನಂತೆ ಕಾಫಿ ಕುಡಿದ ಮೇಲೂ ಅಡಿಗರು ಹೆಚ್ಚೇನೂ ಮಾತನಾಡದಿದ್ದುದರಿಂದ ಅವರು ಯಾಕೋ ವ್ಯಗ್ರರಾಗಿದ್ದಾರೆಂದು ತಿಳಿದೆವು. ಹೊರಗೆ ಬಂದು ಕೆನರಾ ಬ್ಯಾಂಕಿನ ಕಟ್ಟೆಯ ಮೇಲೆ ಕುಳಿತದ್ದೇ ಅಡಿಗರು, `ಏನ್ರೀ, ಎಂಥಾ ಧೂರ್ತ ಹೆಂಗಸು ಈಕೆ' ಪ್ರಜಾತಂತ್ರದ ಮೂಲಕ್ಕೇ ಕೊಡಲಿ ಹಾಕಿದಳಲ್ಲ' ಎಂದು ಮೊದಮೊದಲು ಪೇಚಾಡುತ್ತ ಆಮೇಲೆ ಅತೀವ ಸಿಟ್ಟಿನಿಂದ ಒಂದರ್ಧ ಗಂಟೆ ಪ್ರಜಾತಂತ್ರದ ಪರಮ ಮೌಲ್ಯಗಳ ಬಗ್ಗೆ ಮಾತಾಡಿದರು. ಪರಿಣಾಮವಾಗಿ ನಾವೂ ಸ್ವಲ್ಪ ಹೊತ್ತು ಇಂದಿರಾ ಗಾಂಧಿಯ ಕೃತ್ಯದ ಬಗ್ಗೆ ಯೋಚಿಸುವಂತಾಯಿತು. ರಾತ್ರಿ ಏಳೂವರೆ ಗಂಟೆಯಾದದ್ದೇ ಅವರು ಮನೆಗೆ ಹೊರಡಲೆಂದು ಎದ್ದರು. ನಾನು ಅದೇ ಹೊತ್ತಿಗೆ ಆ ದಾರಿಯಲ್ಲಿ ಬಂದ ಒಂದು ಆಟೋವನ್ನು ನಿಲ್ಲಿಸಿ ಅವರನ್ನು ಕೂಡಿಸಿದೆ. ಅವರು `ಬರುತ್ತೇನೆ, ನಾಳೆ ನೋಡೋಣ' ಎಂದದ್ದೇ ಆಟೋ ಹೊರಟಿತು. ಆಶ್ಚರ್ಯವೆಂದರೆ ಹತ್ತು ಗಜ ಹೋದದ್ದೇ ಅದು ನಿಂತುಬಿಟ್ಟದ್ದು. ಆಟೋದವನು ಏನಾದರೂ ಬರುವುದಿಲ್ಲ ಎಂದನೇನೋ ಎಂದುಕೊಂಡು ನಾನು ಓಡಿಹೋದೆ. ಅಡಿಗರು ಕೆಳಗಿಳಿದದ್ದೇ ನನ್ನ ಭುಜ ಹಿಡಿದುಕೊಂಡು `ನಾವೀಗ ಬಾಂಬು ಮಾಡಬೇಕು' ಎಂದು ಹೇಳಿದವರೇ ಮತ್ತೆ ಆಟೋದೊಳಗೆ ತೂರಿಕೊಂಡುಬಿಟ್ಟರು. ಆಮೇಲೆ ಮೂರು ದಿನ ಅವರು ಗಾಂಧಿ ಬಜಾರಿನತ್ತ ಸುಳಿಯಲಿಲ್ಲ. `ಬಹುಶಃ ಬಾಂಬು ಮಾಡುತ್ತಿರಬೇಕು' ಎಂದು ನಾವು ನಕ್ಕದ್ದುಂಟು. ಆದರೆ ನಾಲ್ಕನೆಯ ದಿನ ಬಂದಿತು ಅವರ ಸವಾರಿ. ಎಲ್ಲರೂ ಕಾಫಿ ಹೀರುತ್ತಿರುವಾಗ ಒಂದು ಸಿಗರೇಟು ಹಚ್ಚಿದ ಅಡಿಗರು, ಮೆಲ್ಲನೆ ತಮ್ಮ ಕೋಟಿನ ಜೇಬಿನಿಂದ ಮಡಿಸಿದ ಒಂದು ಕಾಗದ ತೆಗೆದು ನಾಡಿಗರ ಕೈಗಿತ್ತರು. ಅದನ್ನು ತೆರೆದು ನೋಡಿದರೆ ತುರ್ತು ಪರಿಸ್ಥಿತಿಯನ್ನು ವಿಡಂಬಿಸುವ ಈ
ಕವನ:
ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು
ಬೇಕಾದದ್ದು ಬೆಳೆದುಕೋ ಬಂಧು
ಅಡಿಗರು ತಮ್ಮ `ಒಳತೋಟಿ' ಎಂಬ ಕವನಕ್ಕೆ ಬಿ.ಎಂ.ಶ್ರೀಯವರ ರಜತಮಹೋತ್ಸವ ಕವಿತಾಸ್ಪರ್ಧೆಯಲ್ಲಿ ಸುವರ್ಣ ಪದಕ ಪಡೆದರಷ್ಟೆ. ಆ ಸಂದರ್ಭದಲ್ಲಿ `ಪ್ರಬುದ್ಧ ಕರ್ನಾಟಕ' ಪತ್ರಿಕೆಯ ಸಂಪಾದಕರಾಗಿದ್ದ ಎ.ಆರ್. ಕೃಷ್ಣಶಾಸ್ತ್ರಿಗಳು ಅಡಿಗರನ್ನೊಮ್ಮೆ ಕರೆಸಿ `ಒಳತೋಟಿ' ಕವನದಲ್ಲಿ ಒಂದೆರಡು ಕಡೆ ಛಂದಸ್ಸು ಸರಿಯಿಲ್ಲವೆನ್ನುವ ರೀತಿಯಲ್ಲಿ ಮಾತನಾಡಿದರಂತೆ. ಆ ಮಾತು ಅಡಿಗರನ್ನು ಕೆರಳಿಸಿತು. `ನೀವು ಏನು ಬೇಕಾದರೂ ಹೇಳಿ. ಆದರೆ ಛಂದಸ್ಸಿನ ಬಗ್ಗೆ ಮಾತ್ರ ಮಾತನಾಡಬೇಡಿ. ಇದುವರೆಗಿನ ಎಲ್ಲ ಕಾವ್ಯವನ್ನೂ ಓದಿಕೊಂಡಿರುವ ನನಗೆ ಛಂದಸ್ಸಿನ ರೂಪ ಲಕ್ಷಣಗಳೆಲ್ಲವೂ ಗೊತ್ತು' ಎಂದು ಹೇಳಿದರಂತೆ. ಬಹುಶಃ ಇದೇ ಕಾರಣದಿಂದಲೇ ಅವರು ಮುಂದೆಂದೂ ತಮಗಿಂತ ಹಿರಿಯರಾದ ಲೇಖಕರ ಸಖ್ಯ ಬೆಳೆಸಿಕೊಂಡದ್ದೇ ಅಪರೂಪ ಎನ್ನಿಸುತ್ತದೆ. ವಿದ್ಯಾರ್ಥಿ ದೆಸೆಯಲ್ಲಿರುವಾಗ ಸಾಹಿತ್ಯ ಸೃಷ್ಟಿಗೆ ಸಂಬಂಧಿಸಿದಂತೆ ಅವರಿಗೆ ಮಾರ್ಗದರ್ಶಕರಾಗಿದ್ದವರು ಕೆ. ನರಸಿಂಹಮೂರ್ತಿಯವರು. ಆಮೇಲೆ ಯು.ಆರ್. ಅನಂತಮೂರ್ತಿ. `ಭೂಮಿಗೀತ'ಕ್ಕೆ ಅನಂತಮೂರ್ತಿಯವರಿಂದಲೇ ಮುನ್ನುಡಿ ಬರೆಸಿದರಷ್ಟೆ. ಇದಕ್ಕೆ ಅನಂತಮೂರ್ತಿಯವರ ಪ್ರಖರ ವಿಮರ್ಶಾಪ್ರಜ್ಞೆಯಷ್ಟೇ ಕಾರಣವಲ್ಲ; ಅವರಿಗೆ ಯುವಜನರಲ್ಲಿದ್ದ ಪ್ರೀತಿ, ವಿಶ್ವಾಸ, ತುಂಬು ಭರವಸೆ, ಇವುಗಳೂ ಕಾರಣವೆನ್ನಬೇಕು.
ಅವರು ಸದಾ ಓಡಾಡುತ್ತಿದ್ದದ್ದು, ಚರ್ಚಿಸುತ್ತಿದ್ದದ್ದು ಯುವಕರ ಜೊತೆಗೆ ಮಾತ್ರ.
ಗಾಂಧಿ ಬಜಾರಿನಲ್ಲಿ ಕಾಫಿ ಕುಡಿದ ನಂತರ ನಾವು ಮಾತಾಡುವುದಕ್ಕಾಗಿ ಕುಳಿತುಕೊಳ್ಳುತ್ತಿದ್ದದ್ದು ಕೆನರಾ ಬ್ಯಾಂಕಿನ ಮೆಟ್ಟಿಲುಗಳ ಮೇಲೆ ಎಂದೆನಷ್ಟೆ. ಒಮ್ಮೆ ನಾವು ಹೋಗುವ ಮುನ್ನವೇ ಏಳೆಂಟು ಮಂದಿ ಆ ಮೆಟ್ಟಿಲುಗಳನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು. ನಾನು ಎದುರಿಗಿದ್ದ ಟ್ಯಾಗೋರ್ ಪಾರ್ಕಿಗೆ ಹೋಗೋಣವೇ ಎಂದು ಅಡಿಗರನ್ನು ಕೇಳಿದೆ. ಆಗಲಿ ಎಂದರು. ನಾನು ಕೂಡಲೇ ಆ ಪಾರ್ಕಿನೊಳಕ್ಕೆ ಹೋಗಿ ಒಂದು ಕಲ್ಲುಬೆಂಚು ಖಾಲಿಯಾಗಿರುವುದನ್ನು ಕಂಡು ಹಿಂತಿರುಗಿ ನೋಡಿದರೆ ಅಡಿಗರು ಮತ್ತು ಇತರರು ಒಳಕ್ಕೆ ಬರದೆ ಹೊರಗೇ ನಿಂತಿದ್ದರು. ನಾನು `ಬನ್ನಿ ಸರ್, ಜಾಗ ಇದೆ' ಎಂದದ್ದೇ ತಡ, ಅಡಿಗರು, `ಬೇಡಯ್ಯಾ, ಒಳಗೆಲ್ಲ ಮುದುಕರೇ ಇದ್ದಾರೆ' ಎಂದುಬಿಟ್ಟರು!
ಮೊದಲೇ ಹೇಳಿದಂತೆ ಅದು ತುರ್ತುಪರಿಸ್ಥಿತಿಯ ಕಾಲ. ಅಡಿಗರಿಗೆ ಮುಖ್ಯ ಅತಿಥಿಗಳಾಗಿ ಬರಬೇಕೆಂದು ಹಲವು ಊರುಗಳಿಂದ ಕರೆ ಬರುತ್ತಿದ್ದರೂ ಅವರು ಮಾತ್ರ ಒಬ್ಬರೇ ಹೋಗುತ್ತಿರಲಿಲ್ಲ. ಒಮ್ಮೆ ನಾನು ಜೊತೆಗೆ ಬರುತ್ತೇನೆ ಎಂದಾಗ ಧಾರವಾಡದಿಂದ ಗದಗಿಗೆ, ಗದಗಿನಿಂದ ಲಕ್ಷ್ಮೇಶ್ವರಕ್ಕೆ, ಲಕ್ಷ್ಮೇಶ್ವರದಿಂದ ಹಾವೇರಿಗೆ ಎಂದು ಓಡಾಡಿದೆವು. ಒಂದು ದಿನ ಲಕ್ಷ್ಮೇಶ್ವರದ ಕಾಲೇಜಿನಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಅವರ ಭಾಷಣ. ಗದಗಿನಿಂದ ನಮ್ಮನ್ನು ಕೂಡಿಸಿಕೊಂಡು ಹೊರಟ ಒಂದು ಅಂಬಾಸಡರ್ ಕಾರನ್ನು ಮಾರ್ಗ ಮಧ್ಯದಲ್ಲಿ ಯಾರು ಯಾರೋ ಹತ್ತಿಕೊಂಡರು. ಒಂದೆರಡು ಮೈಲಿ ಹೋದ ಚಾಲಕನಿಗೆ ಕಾರನ್ನು ಚಲಿಸಲು ಕೂಡ ಕಷ್ಟಕ್ಕಿಟ್ಟುಕೊಂಡಿತು. ಅವನು ಕಾರ್ಯಕ್ರಮಕ್ಕೆ ಮುಖ್ಯವಾದವರು ಮಾತ್ರ ಬನ್ನಿ; ಉಳಿದವರೆಲ್ಲ ಇಳಿದು ಬಿಡಿ ಎಂದ. ಕೂಡಲೇ ಅಡಿಗರು ನಮಗೇನೂ ಕೆಲಸವಿಲ್ಲ ಎಂದು ಇಳಿದುಬಿಟ್ಟರು. ನಾನೂ ಅವರನ್ನು ಹಿಂಬಾಲಿಸಬೇಕಾಯಿತು. ನಮ್ಮನ್ನು ಬಿಟ್ಟು ಹೊರಟುಹೋದ ಕಾರಿನವನಿಗೆ ತನ್ನ ತಪ್ಪಿನ ಅರಿವಾಗಿ ಹಿಂತಿರುಗಿ ಬರುವ ಹೊತ್ತಿಗೆ ನಾವು ಒಂದೆರಡು ಸಿಗರೇಟು ಸೇದಿ ಹೆಚ್ಚು ಕಡಿಮೆ ಒಂದು ಮೈಲಿಯಷ್ಟು ದೂರ ನಡೆದುಕೊಂಡು ಹೋಗಿದ್ದೆವು. ಅಂದು ಲಕ್ಷ್ಮೇಶ್ವರದಲ್ಲಿ ಅವರು `ಕಾವ್ಯ ಹೇಗೆ ಹುಟ್ಟುತ್ತದೆ' ಎಂದು ಅದ್ಭುತವಾಗಿ ಮಾತನಾಡಿದರು. ಅವೊತ್ತು ನನ್ನಲ್ಲಿ ಟೇಪ್ ರಿಕಾರ್ಡರ್ ಇರಲಿಲ್ಲವಲ್ಲ ಎಂದು ಈಗಲೂ ಹಳಹಳಿಸುತ್ತಿದ್ದೇನೆ.
`ಮೊದಲಿನಿಂದಲೂ ನಾನು ಒಂಟಿ; ಅಂತರ್ಮುಖಿ' ಎಂದು ಹೇಳಿಕೊಂಡಿರುವ ಅಡಿಗರಿಗೆ ಬಹುಶಃ ಕಾಲೇಜಿನಲ್ಲಿರುವಾಗಲೇ ಸಿಗರೇಟಿನ ಚಟ ಅಂಟಿಕೊಂಡಿರಬೇಕು. ಸಿಗರೇಟು ಸೇವನೆಯನ್ನು ಕುರಿತು ಅವರು ಬರೆದಿರುವ `ಧೂಮಲೀಲೆ' ಎಂಬ ಕವನ ಕಾವ್ಯದ ಸೃಷ್ಟಿಪ್ರಕ್ರಿಯೆಯ ಬಗೆಗೂ ಏನೋ ಹೇಳುತ್ತಿದೆಯೆಂದು ನನಗೆ ಅನ್ನಿಸುವುದುಂಟು.
ಸಿಗರೇಟಿನ ಹೊಗೆ
ವರ್ತುಳ ವರ್ತುಳ
ಧೂಪಧೂಮ ಮಾಲೆ;
ವಿವಿಧರೂಪ, ವಿಹ್ವಲವಿಲಾಪಗಳು
ವಿಕೃತ ಚಿತ್ರಗಳು
ಗಾಳಿಯಲೆಯ ಮೇಲೆ
ಅಡಿಗರಷ್ಟು ಪ್ರಖರ ರಾಜಕೀಯ ಪ್ರಜ್ಞೆಯಿದ್ದ ಕವಿ ಕನ್ನಡದಲ್ಲಂತೂ ಇನ್ನೊಬ್ಬರಿಲ್ಲ. ಅವರಿಗೆ ಪ್ರತಿಯೊಂದು ಸಮಸ್ಯೆಯೂ ದೇಶದ ಸಮಸ್ಯೆಯಾಗಿಯೇ ಕಾಣಿಸುತ್ತಿತ್ತು. ಅವರು ಸಾಮಾನ್ಯವಾಗಿ `ಈ ದೇಶದಲ್ಲಿ....' ಎಂದೇ ಮಾತಿಗೆ ತೊಡಗುತ್ತಿದ್ದದ್ದು.
ಒಂದು ದಿನ ಗಾಂಧಿ ಬಜಾರಿನಲ್ಲಿ ಸಿಗರೇಟು ಹಚ್ಚಿಕೊಳ್ಳುವುದಕ್ಕಾಗಿ ಕಡ್ಡಿ ಕೊರೆದರು. ಒಂದು ಕಡ್ಡಿ ಹೊತ್ತಲಿಲ್ಲ. ಇನ್ನೊಂದೂ ಹೊತ್ತಿಕೊಳ್ಳಲಿಲ್ಲ. ಮೂರನೆಯ ಕಡ್ಡಿಯನ್ನು ಗೀರುವ ಮುಂಚೆ `ಏನಪ್ಪಾ, ಈ ದೇಶದಲ್ಲಿ ಬೆಂಕಿಕಡ್ಡಿ ಕೂಡ ಹೊತ್ತುವುದಿಲ್ಲವಲ್ಲಯ್ಯಾ' ಎಂದರು.
1974ರ ಅಂತ್ಯದಲ್ಲಿ ಅಡಿಗರು ಆರ್ಥಿಕವಾಗಿ ತುಂಬ ಕಷ್ಟದಲ್ಲಿದ್ದರು. ಆಗ ನಾವು ಕೆಲವರು ಅವರ ಅದುವರೆಗಿನ ಕಾವ್ಯವನ್ನು ಒಂದೇ ಸಂಪುಟದಲ್ಲಿ ಪ್ರಕಟಿಸಿ, ಅದನ್ನು ಕೊಳ್ಳುವವರಿಗೆಲ್ಲ ಪ್ರಕಟಣಪೂರ್ವ ರಿಯಾಯಿತಿ ಬೆಲೆಗೆ ಒದಗಿಸಿದರೆ ಹೇಗೆ ಎಂದು ವಿಚಾರ ಮಾಡಿದೆವು. ಅದಕ್ಕೆ ಒಪ್ಪಿಕೊಂಡ ಅಡಿಗರು ಬ್ಯಾಂಕಿನಿಂದ ಸಾಲ ಪಡೆದರು. ಅದುವರೆಗೂ ಕನ್ನಡದಲ್ಲಿ ಯಾವುದೇ ಕವಿಯ ಕವನಗಳು ಒಂದೇ ಸಂಪುಟದಲ್ಲಿ ಒಟ್ಟುಗೂಡಿದ ಉದಾಹರಣೆ ಇರಲಿಲ್ಲ. ಪುಸ್ತಕಕ್ಕೆ ಏನು ಹೆಸರಿಡಬೇಕು, ಇಂಗ್ಲಿಷಿನಲ್ಲಿ `ಕಲೆಕ್ಟೆಡ್ ಪೊಯಮ್ಸ' ಎನ್ನುತ್ತಾರಷ್ಟೆ. ಕನ್ನಡದಲ್ಲಿ? ಅಡಿಗರು `ಅಷ್ಟೂ ಕವನಗಳು' ಎಂದಿಟ್ಟರೆ ಹೇಗೆ ಎಂದು ಕೇಳಿದರು.
ನನಗಂತೂ ಅದು ಒಂದಿಷ್ಟೂ ಆಕರ್ಷಕ ಶೀರ್ಷಿಕೆಯಾಗಿ ಕಾಣಲಿಲ್ಲ. ಮರುದಿನ ಅವರು `ಸಮಗ್ರ ಕಾವ್ಯ' ಎನ್ನಬಹುದಲ್ಲ ಎಂದರು. (ನಮಗೆಲ್ಲ ಒಪ್ಪಿಗೆಯಾದ ಅದು ಮುಂದೆ ಅನೇಕಾನೇಕ ಕವಿಗಳ, ಕತೆಗಾರರ ಒಟ್ಟು ಕೃತಿಗಳಿಗೆ ಶೀರ್ಷಿಕೆಯಾದದ್ದು, ಇಂದು ಕೂಡ ಶೀರ್ಷಿಕೆಯಾಗುತ್ತಿರುವುದು ಸರ್ವವಿದಿತ). ಬಾ.ಕಿ.ನ. ತನ್ನ `ಲಿಪಿ ಮುದ್ರಣಾಲಯ'ದಲ್ಲಿ ಅಚ್ಚಿನ ಮೊಳೆಗಳನ್ನು ಜೋಡಿಸಿದ. ನಾನು ಪ್ರೂಫ್ ತಿದ್ದಿದೆ. ನಮಗಿಬ್ಬರಿಗೂ ಮುಖಪುಟಕ್ಕೆ ಅಡಿಗರ ಫೋಟೋ ಹಾಕಬೇಕೆಂಬ ಆಸೆ. ಕೆ.ಜಿ. ಸೋಮಶೇಖರ್ ತೆಗೆದ ಒಂದು ಫೋಟೋವನ್ನು ಆಯ್ಕೆಮಾಡಿಕೊಂಡೆವು. ಸುದ್ದಿ ಗೊತ್ತಾದದ್ದೇ ಅಡಿಗರು ಖಡಾಖಂಡಿತವಾಗಿ ಫೋಟೋ ಬೇಡ ಎಂದುಬಿಟ್ಟರು.
ಏನು ಮಾಡಿದರೂ ನಮ್ಮಿಂದ ಅವರನ್ನು ಒಪ್ಪಿಸಲು ಆಗಲಿಲ್ಲ. ಕಡೆಗೆ ಬಾ.ಕಿ.ನ. ಆ ಫೋಟೋವನ್ನು `ಫೋಟೋಲಿತ್' (ಅಂದರೆ ಸಣ್ಣ ಸಣ್ಣ ಚುಕ್ಕೆಗಳ ಮೂಲಕ ಫೋಟೋದ ರೂಪರೇಷೆಯಷ್ಟೆ ಉಳಿದುಕೊಳ್ಳುವ) ವಿಧಾನದಲ್ಲಿ ಬ್ಲಾಕ್ ಮಾಡಿಸಿ ಮುದ್ರಿಸಿದ. ಅದನ್ನು ನೋಡಿದ ಅಡಿಗರಿಗೆ ಮತ್ತೆ ಅಸಮಾಧಾನವಾಯಿತೆಂದು ಹೇಳಬೇಕಿಲ್ಲ. `ಏನ್ರಯ್ಯಾ, ನನ್ನ ಒಂದೂ ಮಾತು ಕೇಳುವುದಿಲ್ಲ' ಎಂದರು.
`ಸಮಗ್ರ ಕಾವ್ಯ' ಸಿದ್ಧವಾಗುತ್ತಿರುವುದರ ಸುದ್ದಿ ತಿಳಿದ ಕೆಲವರು, ಅವರಲ್ಲೂ ಮುಖ್ಯವಾಗಿ ಕವಿ ದೇಶಪಾಂಡೆ ಸುಬ್ಬರಾಯರು, ಅದನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆಗೊಳಿಸಬೇಕೆಂದು ಆಶಿಸಿದರು. ಹಾಗೆ ಬಿಡುಗಡೆಯ ಸಮಾರಂಭದಲ್ಲಿ ಅನೇಕ ಹೊಸ ಓದುಗರನ್ನು ಮೊಟ್ಟ ಮೊದಲಿಗೆ ಕಂಡ ಅಡಿಗರು `ನನ್ನ ಕಾವ್ಯ ಎಷ್ಟೊಂದು ಜನ ಓದಿಕೊಂಡಿದ್ದಾರೆ' ಎಂದು ಆಶ್ಚರ್ಯಪಟ್ಟದ್ದುಂಟು.
ಬೆಂಗಳೂರಿಗೆ ಹಿಂತಿರುಗಿದ ಮೇಲೆ ಒಂದು ಸಂಜೆ ಬಸವನಗುಡಿ ಕ್ಲಬ್ಬಿನಲ್ಲಿ ಇಸ್ಪೀಟಾಡಿ ಸುಮಾರು ಏಳೂವರೆ ಗಂಟೆಯ ಹೊತ್ತಿಗೆ ಹಿಂತಿರುಗುತ್ತಿದ್ದ ಮಾಸ್ತಿಯವರು ಇದ್ದಕ್ಕಿದ್ದಂತೆ ಗಾಂಧಿ ಬಜಾರಿನಲ್ಲಿ ಪ್ರತ್ಯಕ್ಷರಾಗಿ ಅಡಿಗರನ್ನು ನೋಡಿದ್ದೇ ಮಾತಿಗೆ ನಿಂತರು.
ಅದಾಗ `ಸಾಕ್ಷಿ'ಯ ಒಂದು ಸಂಚಿಕೆಯಲ್ಲಿ ಪ್ರಕಟವಾಗಿದ್ದ ಕವಿತೆ- ಬಹುಶಃ ಅದು ಎ.ಕೆ.ರಾಮಾನುಜನ್ ಬರೆದ ಕವಿತೆ- ಅವರನ್ನು ಕೆರಳಿಸಿತ್ತು. ಜೊತೆಗೆ ಆ ಕವಿತೆಯಲ್ಲಿದ್ದ ಒಂದು ಪೋಲಿಮಾತಿನಿಂದ ಅವರಿಗೆ ಅಸಾಧ್ಯ ಸಿಟ್ಟುಬಂದಿತ್ತು. `ಏನಪ್ಪಾ ಅಡಿಗ, ಎಂಥ ಪದ್ಯಗಳನ್ನು ಮುದ್ರಿಸುತ್ತೀರಿ. ಏನು ಬರೀತಾರೆ ಈ ಕಾಲದ ಜನ. ನನಗೇ ಅರ್ಥವಾಗುವುದಿಲ್ಲ. ಇನ್ನು ಮೇಲೆ ನನಗೆ ಸಾಕ್ಷಿ ಕಳಿಸಬೇಡಿ' ಎಂದೇನೋ ಹೇಳಿಬಿಟ್ಟರು. ಉದ್ದಕ್ಕೂ ನಗುತ್ತ, ಆಗಾಗ ನಮ್ಮತ್ತ ಕಣ್ಣು ಮಿಟುಕಿಸುತ್ತ ಕೇಳಿಸಿಕೊಳ್ಳುತ್ತಿದ್ದ ಅಡಿಗರು ಒಂದೂ ಮಾತು ಆಡಲಿಲ್ಲ. ಮಾಸ್ತಿ ಹೊರಟುಹೋದ ಮೇಲೆ `ಇವರಿಗೆ ಅರ್ಥವಾಗದಿದ್ದರೆ ಪ್ರಪಂಚದಲ್ಲಿ ಯಾರಿಗೂ ಅರ್ಥವಾಗುವುದಿಲ್ಲ. ನೋಡಿ, ಹೇಗಿದೆ ಧೋರಣೆ' ಎಂದರು. ಎರಡು ದಿನಗಳ ನಂತರ ಅವರು ನಮ್ಮ ಕೈಯೊಳಗಿರಿಸಿದ್ದು `ಅರ್ಥವಾಗುವ ಹಾಗೆ ಬರೆಯಬೇಕು' ಎಂಬ ಕವನ. ಹೀಗೆ ಅಡಿಗರಿಗೆ ಸಿಟ್ಟು ಬಂದಾಗ ಕೆಲವು ಅತ್ಯುತ್ತಮ ಕವನಗಳು ಜನ್ಮತಾಳುತ್ತಿದ್ದುವು. ಅವರು ಕೆ.ಎಸ್. ನರಸಿಂಹಸ್ವಾಮಿಯವರ ಕಾವ್ಯವನ್ನು ಬೀಳುಗಳೆಯಲೆಂದೇ ವ್ಯಂಗ್ಯವಾಗಿ `ಪುಷ್ಪಕವಿಯ ಪರಾಕು' ಎಂಬ ಕವಿತೆಯನ್ನು ಬರೆದರೆಂದು ಯಾವತ್ತು, ಯಾವ ಪುಣ್ಯಾತ್ಮ ಕಂಡುಹಿಡಿದನೋ ಗೊತ್ತಿಲ್ಲ. ಹಲವು ಸಂದರ್ಭಗಳಲ್ಲಿ ಅಡಿಗರೇ ಕೆ.ಎಸ್.ನ. ತುಂಬ ಒಳ್ಳೆಯ ಕವಿಯೆಂದು ಹೇಳಿದ್ದುಂಟು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ನಾನೊಮ್ಮೆ ಅವರನ್ನು `ಪುಷ್ಪಕವಿಯ ಪರಾಕು' ಎಂಬ ಕವನವನ್ನೇಕೆ ಬರೆದಿರಿ ಎಂದು ಕೇಳಿದೆ. ಅದಕ್ಕೆ ಅವರು ನೀಡಿದ ಉತ್ತರ ಇದು:
ಮೈಸೂರಿನಲ್ಲಿ ಅಡಿಗರು ಫಿಲೊಮಿನಾಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಸಂಜೆಯ ಹೊತ್ತು, ಬಹುಶಃ ಹೌಸಿಂಗ್ ಬೋರ್ಡಿನಲ್ಲಿದ್ದ, ಕೆ.ಎಸ್.ನ. ಅವರಲ್ಲಿಗೆ ಹೋಗುತ್ತಿದ್ದಂತೆ. ಇಬ್ಬರದೂ ಒಂದು ಹೋಟಲಿನತ್ತ ವಾಕಿಂಗ್. ಆಗ ಕೆ.ಎಸ್.ನ. ತಮ್ಮ `ಮೈಸೂರ ಮಲ್ಲಿಗೆ'ಯಿಂದ ತುಂಬ ಪ್ರಸಿದ್ಧರಾಗಿದ್ದರಂತೆ. ದಾರಿಯಲ್ಲಿ ಕೆಲವರು ಅವರನ್ನು ಗುರುತಿಸಿ ಮಾತಾಡಿಸಲು ಪ್ರಯತ್ನಿಸಿದರೆ ಕೆ.ಎಸ್.ನ. ಮುಖ ಬೇರೆ ಕಡೆ ತಿರುಗಿಸಿಕೊಂಡು ಅವರನ್ನು ಸಂಪೂರ್ಣವಾಗಿ ಉಪೇಕ್ಷಿಸುತ್ತಿದ್ದರಂತೆ. `ಅಂಥ ಸಂದರ್ಭಗಳಲ್ಲಿ ನನಗೆ ತುಂಬ ಸಿಟ್ಟುಬರುತ್ತಿತ್ತಯ್ಯ. ಹಾಗಾಗಿ ನಾನು ಆ ಕವನ ಬರೆಯಲೇಬೇಕಾಯಿತು' ಎಂದರು ಅಡಿಗರು.
ಅವರದು ಸಿಟ್ಟಿನ ಜೊತೆಗೆ ಎಲ್ಲವನ್ನೂ ಪ್ರಶ್ನಿಸುವ ಮನೋಧರ್ಮ. ಎಲ್ಲ ಬೌದ್ಧಿಕರಲ್ಲೂ ಇರಲೇಬೇಕಾದ ಗುಣವಷ್ಟೆ. ಅವರು ಆಚಾರ್ಯ ಬಿ.ಎಂ.ಶ್ರೀ. ಅವರನ್ನು ಕುರಿತು ಬರೆದಿರುವ ಕವನದ ಕೊನೆಯ ಸಾಲನ್ನು ನೋಡಿ: `ದೊಡ್ಡವರು ನೀವು, ನಾವೇನು ಕುಬ್ಜರಲ್ಲ'. ಅವರ `ಕೂಪಮಂಡೂಕ', `ಸಾಮಾನ್ಯನಂತೆ ಈ ನಾನು' ಮುಂತಾದ ಕವನಗಳಲ್ಲಿ ರೂಢಿಗತ ಅರ್ಥಗಳೇ ಬುಡಮೇಲುಗೊಳ್ಳುವುದನ್ನು ಗಮನಿಸಬೇಕು.
ಇಂಗ್ಲಿಷಿನಲ್ಲಿ `ಶೇಕ್ಸ್‌ಪಿಯರ್ ಫಾರ್ ಆಲ್ ಅಕೇಷನ್ಸ್' ಎಂಬ ಮಾತಿದೆ. ಬದುಕಿನಲ್ಲಿ ಯಾವುದೇ ಸಂದರ್ಭಕ್ಕೂ ಹೊಂದುವ ಸೂಕ್ತವಾದೊಂದು ನಾಣ್ನುಡಿಯ ರೂಪದ ಸಾಲು ಶೇಕ್ಸ್‌ಪಿಯರನಲ್ಲಿ ಸಿಕ್ಕೇ ಸಿಕ್ಕುತ್ತದೆ ಎನ್ನುವುದು ಅದರ ಅರ್ಥ. ವೈಯನ್ಕೆಯವರು ಅಡಿಗರ ಕೆಲವು ಸಾಲುಗಳನ್ನು ಉದ್ಧರಿಸುತ್ತ `ಅಡಿಗ ಫಾರ್ ಆಲ್ ಅಕೇಷನ್ಸ್' ಎನ್ನುತ್ತಿದ್ದರು.
ಅಡಿಗರ ಮನೆಯಲ್ಲಿ ಅವರದೇ ಒಂದು ಕೋಣೆಯಿತ್ತು. ಅವರು ಬಹುಮಟ್ಟಿಗೆ ಟೇಬಲಿನ ಮುಂದೆ ಕುಳಿತು ಸಿಗರೇಟು ಸೇದುತ್ತ ತಮಗೆ ಬಂದ ಮರಿ ಕವಿಗಳ, ಕಿರಿ ಕವಿಗಳ ಪುಸ್ತಕಗಳನ್ನೆಲ್ಲ ಒಂದೂ ಬಿಡದೆ ಓದುತ್ತಿರುತ್ತಿದ್ದರು. ಹಾಗೆ ಓದುತ್ತಿರುವಾಗ ಯಾವುದಾದರೊಂದು ವಿಶೇಷ ಪ್ರತಿಮೆಯೋ ರೂಪಕವೋ ಸಿಕ್ಕಿಬಿಟ್ಟರೆ ತಕ್ಷಣ ಅದನ್ನು ಎತ್ತಿಹಾಕಿಕೊಂಡುಬಿಡುತ್ತಿದ್ದರು. ಈ ಮಾತಿಗೆ ಅನಂತಮೂರ್ತಿಯವರ `ರಾಜನ ಹೊಸ ವರ್ಷದ ಬೇಡಿಕೆಗಳು' ಎಂಬ ಕವನ ಅಡಿಗರ ಕೈಯಲ್ಲಿ `ಪ್ರಾರ್ಥನೆ' ಎಂಬ ಸಾರ್ಥಕ ಕವನವಾದದ್ದು ಒಂದು ನಿದರ್ಶನವಷ್ಟೆ.
ಒಂದು ದಿನ ರಾಮಚಂದ್ರ ಶರ್ಮ ಮತ್ತು ಸುಮತೀಂದ್ರ ನಾಡಿಗರ ಜೊತೆ ನಾನು ಅಡಿಗರ ಮನೆಗೆ ಹೋಗಿದ್ದೆ. ಅಡಿಗರ ರೂಮಿನಲ್ಲಿ ಕುರ್ಚಿ ಟೇಬಲ್ಲುಗಳ ಮುಂದೆ ಎರಡು ಮೂರು ಕುರ್ಚಿಗಳೂ ಒಂದು ಮಂಚವೂ ಇರುತ್ತಿದ್ದುವು. ಅಂದು ನಾವು ಮಂಚದ ಮೇಲೆ ಕುಳಿತೆವು. ನಮ್ಮ ಜೊತೆ ತುಂಬ ಸಂತೋಷದಿಂದ ಮಾತನಾಡಿದ ಅಡಿಗರು, ಬಹುಶಃ ನಮಗೆ ಕಾಫಿ ತರಲೆಂದೋ ಏನೊ, ಹೊರಗೆ ಹೋದರು. ಅದೇ ಸಂದರ್ಭದಲ್ಲಿ ಮೇಲೆದ್ದ ಶರ್ಮ ಟೇಬಲ್ಲಿನ ಮೇಲಿದ್ದ ಪುಸ್ತಕವೊಂದನ್ನು ನೋಡುವ ಕುತೂಹಲದಿಂದ ಅದನ್ನೆತ್ತಿಕೊಂಡು ಪುಟಗಳನ್ನು ತಿರುಗಿಸುತ್ತ ಅಡಿಗರ ಕುರ್ಚಿಯಲ್ಲಿಯೇ ಕುಳಿತುಬಿಟ್ಟರು. ಇದ್ದಕ್ಕಿದ್ದಂತೆ ಒಳಗೆ ಬಂದ ಅಡಿಗರು `ಏನಯ್ಯಾ, ನಾನಿನ್ನೂ ಬದುಕಿರುವಾಗಲೇ ನನ್ನ ಕುರ್ಚಿ ಆಕ್ರಮಿಸಿಕೊಳ್ಳಬೇಕೆಂದಿದ್ದೀಯಲ್ಲ' ಎಂದು ನಕ್ಕರು.
ಕಾವ್ಯಕರ್ಮವನ್ನು ಕುರಿತು ಅಡಿಗರೇ ಒಂದೆಡೆ ಹೀಗೆ ಬರೆದಿದ್ದಾರೆ: `ಕವಿಯ ಮನಸ್ಸಿನಲ್ಲಿ ಇರುವ ಭಾವವಾಗಲೀ ಅನುಭವವಾಗಲೀ ಭಾಷೆಯಲ್ಲಿ ಪ್ರತಿಮೆಗಳ ಮೂಲಕ ವ್ಯಕ್ತಗೊಂಡಾಗ ಅದು ಏನಾಗುತ್ತದೆಂಬುದು ಪೂರ್ವನಿಶ್ಚಿತವಲ್ಲ. ಬರೆದದ್ದ ರೊಡನೆ ಕವಿಯ ಅರಿವಿಗೇ ಬಾರದ ಅನೇಕ ಅಂಶಗಳು, ಪ್ರತಿಮೆ ರೂಪಕಗಳೊಡನೆ ಚಿಮ್ಮುವ ಒಳಮನಸ್ಸಿನ ಅಂಶಗಳು, ಭಾಷೆಯೊಡನೆ ಬಂದು ಬೆರೆಯುವ ಸಾಮಾಜಿಕಾಂಶಗಳು ಇವು ಬಂದು ಸೇರದೆ ಕಾವ್ಯಕ್ಕೆ ಸಹಜವಾದ ರೂಪಕ್ಕೆ ಜೀವಸತ್ವ ಬಂದು ಸೇರುವುದಿಲ್ಲ... ಒಂದು ಕಲೆ ಅಥವಾ ಕವನ ಸಫಲವಾಗುವುದು ಅದರಲ್ಲಿ ಕಲೆಗಾರ ಕಾಲವನ್ನು ತಡೆಹಿಡಿದು ನಿಲ್ಲಿಸಿದಾಗ. ಹೀಗೆ ನಿಲ್ಲಿಸುವುದು ಸಾಧ್ಯವಾಗುವುದು ಭೂತ ಭವಿಷ್ಯತ್ತು ವರ್ತಮಾನಗಳನ್ನು ಒಂದೇ ಬಿಂದುವಿನಲ್ಲಿ ತಂದು ಕೇಂದ್ರೀಕರಿಸಿದಾಗ. ಇಂಥ ಕವನಗಳು ತೀರ ಅಪೂರ್ವ ವಾದಂಥವು. ಅಂಥವನ್ನು ಬರೆದಿದ್ದರೆ ನಾನು ಕೃತಾರ್ಥ'.
ಅಡಿಗರಿಗೆ ತಾವೆಷ್ಟು ಸಮರ್ಥರಾದ ಸಾರ್ಥಕ ಕವಿ ಎಂಬುದು ಗೊತ್ತಿತ್ತು. ಅವರಿಗೆ ಬದುಕು ಬೇರೆಯಾಗಿರಲಿಲ್ಲ, ಕಾವ್ಯ ಬೇರೆಯಾಗಿರಲಿಲ್ಲ. ಒಂದು ದಿನ ಸಂಜೆ, ಬಹುಶಃ ರವೀಂದ್ರ ಕಲಾಕ್ಷೇತ್ರದಲ್ಲಿ, `ಸಾಹಿತ್ಯದಲ್ಲಿ ಶ್ರೇಷ್ಠತೆ' ಎಂಬ ವಿಷಯವಾಗಿ ಪಿ. ಲಂಕೇಶ್, ಡಿ.ಆರ್. ನಾಗರಾಜ್ ಮೊದಲಾದವರು ತೀರ ಗಂಭೀರವಾಗಿ ಚರ್ಚಿಸುತ್ತಿದ್ದರು. ಆ ಹೊತ್ತಿಗೆ ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳುತ್ತಿದ್ದ ಅಡಿಗರು ಅಂದು ಕೋಲು ಹಿಡಿದುಕೊಂಡು ಸಭೆಗೆ ಬಂದರು. ಅವರು ನಾಲ್ಕೈದು ನಿಮಿಷ ಮಾತ್ರ ಮಾತನಾಡಿ ಹೇಳಿದ್ದಿಷ್ಟೆ: `ನೋಡೀಪ್ಪ, ನನಗೆ ಸಾಹಿತ್ಯದಲ್ಲಿ ಶ್ರೇಷ್ಠತೆ ಎನ್ನುವುದು ಜೀವನ್ಮರಣದ ಪ್ರಶ್ನೆ'. ಎಂಥ ಕನ್ವಿಕ್ಷನ್!
ಅಡಿಗರ ಕೊನೆಯ ದಿನಗಳಲ್ಲಿ ನಾನು ಮದರಾಸಿನಲ್ಲಿದ್ದೆ. ಒಮ್ಮೆ ಬೆಂಗಳೂರಿಗೆ ಬಂದಾಗ ಅವರ ಮನೆಗೆ ಹೋದೆ.
ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳುತ್ತಿದ್ದರೂ ಅವರು ಸಾಕಷ್ಟು ಜರ್ಜರಿತರಾಗಿದ್ದಂತೆ ಕಂಡಿತು. ತುಂಬ ಆದರದಿಂದ ಬರಮಾಡಿಕೊಂಡು, ನನ್ನ ಬಗ್ಗೆ, ನನ್ನ ಉದ್ಯೋಗದ ಬಗ್ಗೆ, ಹೆಂಡತಿ ಮಕ್ಕಳ ಬಗ್ಗೆ ಒಬ್ಬ ತಂದೆಗಿರಬಹುದಾದ ಅಕರಾಸ್ಥೆಯಿಂದ ವಿಚಾರಿಸಿದರು. ಕಡೆಗೆ `ನೋಡಪ್ಪಾ, ಬೆಳಿಗ್ಗೆ ಮನೆಯವರ ನೆರವಿನಿಂದ ಸ್ನಾನ ಮಾಡಿ, ಒಂದಿಷ್ಟು ತಿಂಡಿ ತಿಂದು, ಈ ಕುರ್ಚಿಯಲ್ಲಿ ಕುಳಿತುಕೊಂಡವನೇ, ಇವತ್ತು ನಿನ್ನಂಥ ಸ್ನೇಹಿತರು ಯಾರಾದರೂ ಮನೆಗೆ ಬಂದಾರೆಯೇ ಅಂತ ಕಾಯುತ್ತಿರುತ್ತೇನೆ' ಎಂದರು. ಆ ಮಾತು ಕೇಳಿ ನನಗೆ ಕಣ್ಣು ತುಂಬಿಬಂತು. ಆಮೇಲೆ ಕೆಲವೇ ತಿಂಗಳಲ್ಲಿ ಅವರು ಇಲ್ಲವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.