ಮುಗ್ಧತೆ ಮತ್ತು ಅನುಭವ– ಈ ಎರಡನ್ನೂ ಬ್ಲೇಕ್ ಅಪೂರ್ಣವೆಂದು ತಿಳಿಯುತ್ತಾನೆ. ಮಗುವಿನ ಮುಗ್ಧತೆ ಒಳಿತನ್ನು ಮಾತ್ರ ಕಾಣುತ್ತದೆ. ಅನುಭವ ಮಾನವ ಪಾತಕಿಯಾಗುವ ಸಾಧ್ಯತೆಯನ್ನು ಕಾಣುತ್ತದೆ. ಈ ಎರಡು ಬಗೆಯ ಅನುಭವಗಳನ್ನೂ ಒಳಗೊಂಡು ಅವುಗಳನ್ನು ಮೀರುವ ಒಂದು ಸ್ಥಿತಿಯನ್ನು ಬ್ಲೇಕ್ ತನ್ನ ಕಾವ್ಯದಲ್ಲಿ ಸೃಷ್ಟಿಸುತ್ತಾನೆ.
ಬ್ಲೇಕ್‌ನ ಮುಗ್ಧವಲ್ಲದ ಅನುಮಾನವನ್ನು ತ್ಯಜಿಸದಂತೆ ನೋಡುವ ಕ್ರಮ ಇಂಗ್ಲಿಷ್ ಸಾಹಿತ್ಯ ಲೋಕದಲ್ಲಂತೂ ಹೊಸತಾದ್ದು. The Lamb ಎನ್ನುವ ಪದ್ಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ಪದ್ಯ ಒಂದು ಮಗುವಿನ ಸರಳವಾದ ಪ್ರಶ್ನೆಯಿಂದ ಸೃಷ್ಟಿಯ ರಹಸ್ಯವನ್ನೇ ಹುಡುಕುವಂತೆ ಶುರುವಾಗುತ್ತದೆ.
‘ಏ ಪುಟ್ಟ ಮರಿ ನಿನ್ನನ್ನು ಮಾಡಿದವರು ಯಾರು ನಿನಗದು ಗೊತ್ತೆ. ನಿನಗೆ ಜೀವ ಕೊಟ್ಟವರಾರು? ಊಟ ಕೊಟ್ಟವರಾರು? ನಿನಗಿಷ್ಟು ಸುಂದರವಾದ ಬಟ್ಟೆ ಕೊಟ್ಟವರಾರು? ಇಷ್ಟು ಹಿತವಾದ ಧ್ವನಿಯನ್ನು ಕೊಟ್ಟವರಾರು?’ ಹೀಗೆಲ್ಲಾ ಕೇಳಿದ ನಂತರ ಉತ್ತರವನ್ನೂ ಬ್ಲೇಕ್ ಅದೇ ಮಗುವಿನ ಮುಗ್ಧತೆಯಲ್ಲಿ ಕೊಡುತ್ತಾನೆ.
‘ನಿನ್ನನ್ನು ಸೃಷ್ಟಿಸಿದವನ ಹೆಸರು ಕೂಡಾ ನಿನ್ನ ಹೆಸರೇ. ತನ್ನನ್ನೇ ಅವನು ಕುರಿಯೆಂದು ಕರೆದುಕೊಳ್ಳುತ್ತಾನೆ. ಹೀಗೆ ಕರೆದುಕೊಳ್ಳುವ ಕ್ರಿಸ್ತ ಮೃದು ಹೃದಯದವ. ‘ನಾನೊಂದು ಮಗು ನೀನೊಂದು ಕುರಿ, ಕ್ರಿಸ್ತನ ಹೆಸರಿನಲ್ಲಿ’ ಎಂದು ಪದ್ಯ ಕೊನೆಯಾಗುತ್ತದೆ. ಬ್ಲೇಕ್‌ಗೆ ದೇವರಿಗಿಂತ ಅವನ ಮಗ ಕ್ರಿಸ್ತನೇ ಇಷ್ಟ.
ಈ ಪದ್ಯದ ಅವಳಿ ಎಂದು ಕರೆಯಬಹುದಾದ ಇನ್ನೊಂದು ಪದ್ಯ ಅನುಭವದ ಪದ್ಯಗಳ ಸರಣಿಯಲ್ಲಿ ಬರುತ್ತದೆ. ಆ ಪದ್ಯದ ಹೆಸರು Tiger. ಹುಲಿಯೆನ್ನುವ ಶಬ್ದ ಸಮರ್ಪಕ ಎನಿಸದಂತೆ ವ್ಯಾಘ್ರ ಎಂದು ಕರೆಯಬೇಕಾದಂತೆ ಈ ಪದ್ಯವಿದೆ. ಕತ್ತಲಿನ ಲೋಕದಲ್ಲಿ ವ್ಯಾಘ್ರ ಉಲಿಯುತ್ತದೆ. ಅದನ್ನು ಬಗ್ಗಿಸಿ ಬಡಿದು ಸೃಷ್ಟಿಸಿದವನ ಬಗ್ಗೆ ಬ್ಲೇಕ್ ಯೋಚಿಸುತ್ತಾನೆ. ಹುಲಿಯ ಸೃಷ್ಟಿಯಲ್ಲಿ ಕುರಿಯಂತಿದ್ದವನು ವ್ಯಾಘ್ರದ ಸೃಷ್ಟಿಯಲ್ಲಿ ವ್ಯಾಘ್ರವೂ ಆಗಿದ್ದಾನೆ. ಜಗತ್ತಿನ ಅದ್ಭುತವಾದ ಪದ್ಯಗಳಲ್ಲಿ ‘ಟೈಗರ್’ ಕೂಡಾ ಒಂದು. ಈ ಪದ್ಯದ ಒಂದು ಸಾಲು ‘ಕುರಿಯನ್ನು ಸೃಷ್ಟಿಸಿದವನು ಹುಲಿಯನ್ನು ಸೃಷ್ಟಿಸಿದನೇ’ ಎಂಬ ಪ್ರಶ್ನೆಯನ್ನೆತ್ತುತ್ತದೆ.
ಮುಗ್ಧವಾದ ಮಗು ಬೆಳೆಯಲೇಬೇಕಾಗುತ್ತದೆ. ಬೆಳೆಯುವಾಗ ನಾವು ಏನನ್ನು ದುಷ್ಟವೆಂದು ತಿಳಿಯುತ್ತೇವೆಯೋ ಅದನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಬ್ಲೇಕ್ ಅರಿತಿದ್ದ. ಆದ್ದರಿಂದ ಈ ಅರ್ಥಮಾಡಿಕೊಳ್ಳುವಿಕೆಯನ್ನು ಮೀರಿ ಮುಂದುವರಿಯುತ್ತಾನೆ. ಇದು ಕಾಲ್ಪನಿಕ ಲೋಕದ ಇನ್ನೊಂದು ನಿಜಕ್ಕೆ ಆಹ್ವಾನ. ಅಂದರೆ ಮೂರು ನಿಜಗಳಿವೆ. ಒಂದು ಮುಗ್ಧತೆಯ ಅಪೂರ್ಣ ನಿಜ. ಇನ್ನೊಂದು ಅನುಭವದ ಘೋರವಾದ ಅಪೂರ್ಣ ನಿಜ. ಮೂರನೆಯದ್ದು ಮೊದಲ ಎರಡನ್ನೂ ಸಮತೋಲದಲ್ಲಿ ನೋಡಿ ಸೃಷ್ಟಿಯ ಬೆರಗಿಗೆ ಎದುರಾಗುವ ನಿಜ.
ಈಚಿನ ದಿನಗಳಲ್ಲಿ ಮನಃಶಾಸ್ತ್ರದ ಅಪೂರ್ಣ ತಿಳಿವಳಿಕೆಯಿಂದ ಮಕ್ಕಳಿಗೆ ಕೇವಲ ಮುದ್ದು ಮುದ್ದಾದ ಕಥೆಗಳನ್ನು ಹೇಳಬೇಕೆಂದೂ ಹದಿಹರೆಯದವರಿಗೆ ಇನ್ನೊಂದು ಬಗೆಯ ಸಾಹಿತ್ಯವನ್ನು ಕೊಡಬೇಕೆಂದೂ ವಯಸ್ಕರಿಗೆ ಈ ಎರಡೂ ಅಲ್ಲದ ಇನ್ನೊಂದನ್ನು ಕೊಡಬೇಕೆಂದು ನಾವು ತಿಳಿಯುತ್ತೇವೆ.
ಬ್ಲೇಕ್‌ಗೆ ‘ಮಕ್ಕಳ ಸಾಹಿತ್ಯ’ ಎಂಬುದೊಂದು ಇರುವಂತೆ ತೋರುವುದಿಲ್ಲ. ಹಾಗೆ ಬರೆದದ್ದು ಅದಕ್ಕೆ ವಿರುದ್ಧವಾದುದರ ಕಡೆ ಬೆಟ್ಟು ತೋರಿಸುವಂತೆ ಇರುತ್ತದೆ. ಕುರಿ ವ್ಯಾಘ್ರನನ್ನು ನೆನಪು ಮಾಡುತ್ತದೆ. ವ್ಯಾಘ್ರ ಕುರಿಯನ್ನು ನೆನಪಿಸುತ್ತದೆ. ಈ ಎರಡೂ ಸತ್ಯಗಳೆಂದೇ ತಿಳಿದು ಎರಡನ್ನೂ ಮೀರಿದ ಸತ್ಯದ ಹುಡುಕಾಟವನ್ನು ಬ್ಲೇಕ್‌ನ ಕವಿ ಕಲ್ಪನೆ ಹೊಳೆಯಿಸುತ್ತದೆ.
ಭಾರತದಲ್ಲಿ ಮತ್ತು ಪ್ರಾಯಶಃ ಇಡೀ ಏಷ್ಯಾದಲ್ಲಿ ಯಾವ ಕಥೆಯೂ ಇದು ಕೇವಲ ಮಕ್ಕಳಿಗೆ, ಇದು ಕೇವಲ ವಯಸ್ಕರಿಗೆ ಎನ್ನುವಂತಿರಲಿಲ್ಲ. ಪ್ರಹ್ಲಾದನ ಕಥೆ ಮಕ್ಕಳ ಕಥೆಯೇ? ಧ್ರುವನ ಕಥೆ ಕೇವಲ ಮಕ್ಕಳ ಕಥೆಯೇ? ಅಭಿಮನ್ಯುವಿನ ಸಾಹಸದ ಕಥೆ ಕೇವಲ ಮಕ್ಕಳ ಕಥೆಯೇ? ಅರೇಬಿಯನ್ ನೈಟ್ಸ್ ಮಕ್ಕಳ ಕಥೆಯೇ? ಇವೆಲ್ಲವನ್ನೂ ಮಕ್ಕಳಾಗಿ ನಾವು ಕೇಳಿಸಿಕೊಂಡಾಗ ದುಷ್ಟರನ್ನೂ ಪಾತಕಿಗಳನ್ನೂ ಮಗುವಿನ ಮುಗ್ಧತೆಯಲ್ಲೇ ಎದುರಾಗುತ್ತೇವೆ.
ಬ್ಲೇಕ್ ಮಕ್ಕಳಿಗೆ ಬರೆಯುವುದನ್ನು ನೋಡಿದರೆ ಮಕ್ಕಳು ಮುಗ್ಧತೆಯಲ್ಲೇ ಉಳಿಯದೆ ಅದನ್ನು ಅನುಭವಿಸುತ್ತಲೇ ಮೀರುವುದನ್ನೂ ಕಲಿಯಬೇಕು ಎಂಬ ಉದ್ದೇಶ ಇರುವಂತಿದೆ. ಆದರೆ ಬ್ಲೇಕ್ ಅನ್ನು ಓದುವಾಗ ರಾಮಾಯಣ, ಮಹಾಭಾರತದ ಹಲವು ಕಥೆಗಳಲ್ಲಿ ಮೃದುತ್ವದ ಜೊತೆಗೆ ಕ್ರೌರ್ಯವೂ ಇರುವುದನ್ನು ಅನುಭವಿಸಿದ್ದೇನೆ. ವೈಯಕ್ತಿಕವಾಗಿ ಒಂದು ಘಟನೆಯಿಂದ ಇದನ್ನು ನಾನು ಮುಗಿಸುತ್ತೇನೆ.
ಇಂಗ್ಲೆಂಡಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ಮಗನನ್ನು ಬೇಬಿ ಸಿಟ್ಟರ್ ಒಬ್ಬಳಲ್ಲಿ ನೋಡಿಕೊಳ್ಳಲು ಬಿಡುತ್ತಿದ್ದೆ. ನನ್ನ ಮಗನಿಗೆ ನಾನು ಅಭಿಮನ್ಯುವಿನ ಕಥೆ ಹೇಳಿದ್ದೆ. ಅಭಿಮನ್ಯುವನ್ನು ಅವನ ಹಿರಿಯರು ಕೊಚ್ಚಿ ಕೊಚ್ಚಿ ಕೊಲ್ಲುವಾಗಲೂ ಅಭಿಮನ್ಯು ಧೈರ್ಯಗೆಡದೆ ಇದ್ದುದನ್ನು ನನ್ನ ಮಗ ಮುಗ್ಧತೆಯಲ್ಲಿ ಉಳಿದ ಮಕ್ಕಳಿಗೆ ಹೇಳಿಬಿಟ್ಟಿದ್ದ.
ಇದನ್ನು ಕೇಳಿಸಿಕೊಂಡ ಬೇಬಿ ಸಿಟ್ಟರ್ ನನ್ನನ್ನು ಕರೆದು ಇನ್ನು ಮುಂದೆ ನಿನ್ನ ಮಗನನ್ನು ಇಲ್ಲಿ ಕಳಿಸಬೇಡ ಎಂದಿದ್ದಳು. ಈ ವಿಷಯದಲ್ಲಿ ನಾನು ನಂಬುವುದು ಭಾರತೀಯರು ಕಥೆಗಳನ್ನು ಸೃಷ್ಟಿಸಿದ ಕ್ರಮದಿಂದ. ಮತ್ತು ಬ್ಲೇಕ್ ಮುಗ್ಧತೆ ಮತ್ತು ಅನುಭವ ಎರಡನ್ನೂ ಅಪೂರ್ಣವೆಂದು ತಿಳಿದು ಎರಡೂ ಅಲ್ಲದ ಇನ್ನೊಂದು ಸ್ಥಿತಿಯನ್ನು ತನ್ನ ಕಲ್ಪನಾಶಕ್ತಿಯಿಂದ ಪಡೆದುಕೊಂಡು ಪೂರ್ಣನಾಗುವ ಬಗೆಯಲ್ಲಿ.
ಮಕ್ಕಳೇ,
‘ಚಂದಕ್ಕಿಮಾಮ’ ವಿಶೇಷ ಸಂಚಿಕೆ ಹೇಗನ್ನಿಸಿತು? ನಿಮಗೆ ಇಷ್ಟವಾದ ಕಥೆ, ಪದ್ಯ, ಲೇಖನ ಯಾವುದು? ಯಾವುದಾದರೂ ಬರಹ ಬೇಜಾರು ತರಿಸಿತಾ? ಈ ಸಂಚಿಕೆಯಲ್ಲಿ ಇನ್ನೂ ಏನಾದರೂ ಇರಬೇಕಿತ್ತು ಅನ್ನಿಸಿತಾ? ಈ ಸಂಚಿಕೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಆಯ್ದ ಪತ್ರಗಳನ್ನು ‘ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟಿಸಲಾಗುವುದು. ಉತ್ತಮ ಪತ್ರಗಳಿಗೆ ಬಹುಮಾನವೂ ಇದೆ. ನಿಮ್ಮ ಅನಿಸಿಕೆ ಚುಟುಕಾಗಿರಲಿ, ಚುರುಕಾಗಿರಲಿ.
ವಿಳಾಸ: ಸಂಪಾದಕರು, ಸಾಪ್ತಾಹಿಕ ಪುರವಣಿ ವಿಭಾಗ, ಪ್ರಜಾವಾಣಿ, ನಂ. 75, ಎಂ.ಜಿ. ರಸ್ತೆ, ಬೆಂಗಳೂರು– 560 001.
ಇ-ಮೇಲ್: saptahika@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.