ನಮ್ಮ ಪುಟ್ಟ ಬಹಳ ದಿಟ್ಟ, ನಾಯಿ ಬಾಲ ಜಗ್ಗಿದ ಬೌಬೌ ಬೊಗಳಿದಂತೆ ಅವನು ಬಹಳ ಹಿಗ್ಗಿದ ಈ ನನ್ನ ಚುಟುಕು ಪಠ್ಯದಲ್ಲಿ ಓದಿದ ಮಕ್ಕಳು ನನ್ನೆದುರು ಹೇಳಿ ನಲಿದಾಗ ಅವರ ತಾಯಿಯೂ ನಕ್ಕಳು ನನಗೆ ಸಂತಸ, ಅವಳಲ್ಲ ಮಮ್ಮಿಗಳ ಒಕ್ಕಲು ಮೊದಲಿಂದಲೂ ನನಗೆ ನಾಯಿ ಬೆಕ್ಕುಗಳು ಪ್ರೀತಿ ಅವಕೂ ಗೊತ್ತು ತಮ್ಮನ್ನು ಪ್ರೀತಿಸುವವರ ರೀತಿ ಬಾಲ ಮೇಲೆತ್ತಿ ಮೆತ್ತಗೆ ಪಾದಕ್ಕುಜ್ಜಿ ಸುಳಿದಾಡಿ ಬೆಕ್ಕು ತೊಡೆಯ ಮೇಲೇರಿ ಗುರುಗುರು ನಿದ್ದೆ– ಹೇಗೆ ಎಬ್ಬಿಸಬೇಕು? ಸಾಕಿದ ನಾಯಿ ನಾಕು, ಒಂದಾದ ನಂತರ ಒಂದು ಎಲ್ಲಕ್ಕೂ ಹೆಸರು ಮನು– ಮನುಕುಲವೆ ಒಂದು.
‘ಮನುವಿನ ಕಥೆ’, ‘ಮನುವಿನ ಕೊನೆಗಳಿಗೆ’ ಕವಿತೆ ಬರೆದದ್ದುಂಟು ನಿಸಾರ್ ಅವನ್ನು ಮೆಚ್ಚಿ, ಲೇಖಿಸಿದ್ದಾರೆ ಮೂಕಪ್ರಾಣಿಯ ನಂಟು. ಅದಾಯಿತಲ್ಲ– ಯಾರೋ ಕೊಟ್ಟರು ಮತ್ತೊಂದು ಮುದ್ದುಮರಿ ಬಣ್ಣಿಸಲಾರೆ ಏಳೆಂಟು ವರುಷದಲ್ಲಿ ನಮ್ಮೊಡನೆ ಬೆಳೆದ ಪರಿ ಮೊಮ್ಮಗಳು ಸೃಷ್ಟಿ ತಾನೇ ಹೆಸರಿಟ್ಟುಬಿಟ್ಟಳು ಅದಕ್ಕೆ ‘ಗುಫಿ’ ಏನರ್ಥವೊ– ಕೆಲವರ ಬಾಯಲ್ಲಿ ಮಾತ್ರ ‘ಗೋಪಿ’ ಅಪೂರ್ವನ ಬಾಯಲ್ಲಿ ‘ಚೇನು’, ‘ಜಳಕ’ ಶಬ್ದ ಬರುವುದೆ ತಡ ಓಡುವುದು, ಹಿಡಿದು ಸ್ನಾನ ಮಾಡಿಸುವವರೆಗೂ ಅವನು ಬಿಡ ಹಸಿದಾಗ ಅಡುಗೆ ಮನೆ ಬಾಗಿಲಲ್ಲಿಯೇ ಹೂಡುವುದು ಬಿಡಾರ, ಸೊಸೆ ಬಿಸಿ ಬಿಸಿ ಚಪಾತಿ ಹಾಕಿದಾಗ ಹೊಟ್ಟೆ ಭರಪೂರ ಗೇಟು ಸಪ್ಪಳಾದರೆ ಸಾಕು, ಬೊಗಳುವುದು ದೊಡ್ಡದನಿ ತೆಗೆದು ಒಳಗೆ ಬಂದರೆ, ಅರಿಯದವರನು ಮೂಸಿ, ಬಾಲವಲ್ಲಾಡಿಸುವದು ಅಧ್ಯಕ್ಷನಂತೆ ಮಧ್ಯದಲ್ಲಿ ಕುಳಿತು ಕೇಳುವುದು ನಮ್ಮ ಮಾತುಕತೆ ‘ನೀವಂತೂ ಸರಿ, ನಿಮ್ಮ ನಾಯಿಯೂ ಸಭ್ಯ’– ಅವರ ಮೆಚ್ಚುಗೆ– ಮಮತೆ.
ಬೆಂಗಳೂರಿನ ಮೊಮ್ಮಗ ಕುಶಾಲನ ನಾಯಿ ಕಥೆ ಹೇಳಲೇಬೇಕು ‘ಕನ್ನಡದ ಹೆಸರಿಡು’ ಎಂದಾಗ ಒಪ್ಪಿದನಲ್ಲಾ, ಅಷ್ಟೇ ಸಾಕು.ಏಳೆಂಟು ವರುಷದ ಹಿಂದಿನ ಮಾತು: ಪಾಕಿಸ್ತಾನದಲ್ಲಿ ಭಾರತದ ಟೆಸ್ಟು ಕೇಳಬೇಕೆ? ಎರಡೂ ತಂಡದಲ್ಲಿ ತುರುಸು ತಿಕ್ಕಾಟವೆಷ್ಟು! ಭಾರತವ ಗೆದಿಸಿತ್ತು ಧೋನಿಯ ಸಿಕ್ಸರಿನ ಮೇಲೆ ಸಿಕ್ಸರ್ ಕುಶಾಲ ಫೋನಾಯಿಸಿದ: ‘ಧೋನಿಯ ಹೆಸರಿಡಲೇ, ಇದು ಬಾಕ್ಸರ್?’ ನಾನು ಉತ್ತರಿಸಿದೆ: ‘ಅದೇ ಇರಲಿ, ನಿಮ್ಮ ಹೊಸ ಮನೆ ಕಾಯಲು ಮುಷರಪ್ ಬೇರೆ ಬಣ್ಣಿಸಿದ್ದಾನೆ ಧೋನಿಯ ತಲೆಗೂದಲು’.
ಇತ್ತೀಚೆಗೆ ಮೊಹಾಲಿಯಲ್ಲಿ ಭಾರತಾಸ್ಟ್ರೇಲಿಯಾ ಏಕದಿನ ಪಂದ್ಯ– ವ್ಯರ್ಥ ಧೋನಿಯ ಅಜೇಯ ಶತಕ, ಇದು ಮಾತ್ರ ಚೋದ್ಯ. ಬಾಕ್ಸರ್ ಧೋನಿಯು ಮಲಗಿಬಿಟ್ಟಿತು ಮುದುಡಿಕೊಂಡು– ಸೋಲುಗೆಲುವುಗಳು ಹಗಲಿರುಳಿನಂತೆ ಒಂದರ ಹಿಂದೆ ಒಂದು. ‘ಸಭ್ಯರಾಟ’ಕ್ಕೆ ಕೊನೆಗೂ ಸಚಿನ್ ಸಲ್ಲಿಸಲಿದ್ದಾನೆ ನಮನ, ರಿಕಿ ಪಾಂಟಿಂಗ್ ಮರೆತಿಲ್ಲವಂತೆ ‘ಮಂಕಿಗೇಟ್’ ಹಗರಣ.
‘ಸಾಪ್ತಾಹಿಕ ಪುರವಣಿ’ಯ ಈ ಸಂಚಿಕೆಯನ್ನು ಮಕ್ಕಳ ವಿಶೇಷ ಪುರವಣಿಯನ್ನಾಗಿ ರೂಪಿಸಿರುವುದರಿಂದ ಸ್ಥಿರ ಶೀರ್ಷಿಕೆಗಳು ಪ್ರಕಟವಾಗಿಲ್ಲ. ಮುಂದಿನ ವಾರ ಎಂದಿನಂತೆ ಪ್ರಕಟಗೊಳ್ಳುತ್ತವೆ. –ಸಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.