ADVERTISEMENT

ನಿಸಾರ್‌ ಅಹಮದ್‌ ಸಂದರ್ಶನ | ಲಾಲ್‌ಬಾಗ್‌ ಏಕಾಂತಕ್ಕೆ ಗಾಂಧಿ ಬಜಾರು ಲೋಕಾಂತಕ್ಕೆ

ರೋಹಿಣಿ ಮುಂಡಾಜೆ
Published 3 ಮೇ 2020, 10:35 IST
Last Updated 3 ಮೇ 2020, 10:35 IST
ಲಾಲ್‌ಬಾಗ್ ಕೆರೆಯ ಎದುರು ಕವಿ ನಿಸಾರ್ ಅಹಮದ್ (ಚಿತ್ರ ಮತ್ತು ವಿಡಿಯೊ: ಆನಂದ ಬಕ್ಷಿ)
ಲಾಲ್‌ಬಾಗ್ ಕೆರೆಯ ಎದುರು ಕವಿ ನಿಸಾರ್ ಅಹಮದ್ (ಚಿತ್ರ ಮತ್ತು ವಿಡಿಯೊ: ಆನಂದ ಬಕ್ಷಿ)   

‘ನನಗೆ ತಂದೆಯೇ ಮೊದಲ ಗುರು’ ಕವಿ ನಿಸಾರ್ ಅಹಮದ್ ತಮ್ಮ ತಂದೆಯನ್ನು ಹೀಗೆ ನೆನಪಿಸಿಕೊಳ್ಳಲು ಕಾರಣವಿತ್ತು. ‘ಪ್ರಜಾವಾಣಿ’ಗೆ ನೀಡಿದ್ದ ಈ ವಿಶೇಷ ಸಂದರ್ಶನವು ಡಿಸೆಂಬರ್ 11, 2017ರಂದು ಮೊದಲ ಬಾರಿಗೆ ಪ್ರಕಟವಾಗಿತ್ತು.

–––

ನಾನು ಹುಟ್ಟಿದ್ದು ದೇವನಹಳ್ಳಿಯಲ್ಲಾದರೂ ಬೆಳೆದದ್ದು, ಓದಿದ್ದೆಲ್ಲಾ ಈ ಬೆಂಗಳೂರಿನಲ್ಲೇ. 1940ರಿಂದ 48ರವರೆಗೂ ಲಾಲ್‌ಬಾಗ್‌ನಲ್ಲೇ ಇದ್ವಿ. ದೊಡ್ಡ ಮಾವಳ್ಳಿಯ ಸರ್ಕಾರಿ ಶಾಲೆಯಲ್ಲಿ ನಾನು ಓದಿದ್ದು. ಆಗ ನನ್ನ ತಂದೆ ರೆವಿನ್ಯೂ ಇನ್‌ಸ್ಪೆಕ್ಟರ್‌ ಆಗಿದ್ರು.

ADVERTISEMENT

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮ್ಮ ನಾಡಿನಲ್ಲಿ ಕನ್ನಡಕ್ಕೆ ಆದ್ಯತೆ ಸಿಗುತ್ತೆ ಅನ್ನೋ ಲೆಕ್ಕಾಚಾರ ಹಾಕಿಯೇ ಅವರು ನನ್ನನ್ನೂ, ನನ್ನ ತಮ್ಮನನ್ನೂ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದರು. ಉಳಿದ ಮುಸ್ಲಿಂ ಹುಡುಗ್ರೆಲ್ಲಾ ಉರ್ದು ಶಾಲೆಗೆ ಸೇರಿದ್ರು. ನನ್ನನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಿದ ಆ ನಿರ್ಧಾರವೇ ಬಹುಶಃ ನಿಸಾರ್‌ ಅಹಮದ್‌ ಅನ್ನೋ ಕವಿಯ ಹುಟ್ಟಿಗೆ ಕಾರಣವಾಯ್ತೇನೊ. ನನಗೆ ತಂದೆಯೇ ಮೊದಲ ಗುರು, ರೋಲ್‌ ಮಾಡೆಲ್‌. ಅಲ್ಪಪ್ರಾಣ, ಮಹಾಪ್ರಾಣ, ಉಚ್ಚಾರಣೆ... ಎಲ್ಲಾ ಹೇಳಿಕೊಟ್ಟೋರು ಅವರೇ.

ಮನೆಯಿಂದ ಒಂದು ರಸ್ತೆ ದಾಟಿದರೆ ಈ ಲಾಲ್‌ಬಾಗ್. ಶಾಲೆ ಬಿಟ್ಟ ತಕ್ಷಣ ನಾವು ಇಲ್ಲಿಗೆ ಓಡಿಬರೋರು. ಮರಕೋತಿ ನಮ್ಮ ಫೇವರಿಟ್‌ ಆಟ. ಫುಟ್‌ಬಾಲ್‌ ಎಲ್ಲಾ ಆಡೋ ಹಾಗಿರಲಿಲ್ಲ ಅಲ್ಲಿ. ಮನೇಲಿ ರೇಡಿಯೊ ಕೂಡಾ ಇರಲಿಲ್ಲ. 500 ಮನೆಗೊಂದು ರೇಡಿಯೊ ಇದ್ರೆ ಹೆಚ್ಚು. ಒಟ್ಟಿನಲ್ಲಿ ಮನರಂಜನೆಗೆ ಏನೇನೂ ಇರಲಿಲ್ಲ. ಹಾಗಾಗಿ ನನಗೆ ನಮ್ಮ ಸಸ್ಯಕಾಶಿ ಮತ್ತು ಓದು ಆಸರೆಯಾಯಿತು.

ಒಂದರ್ಥದಲ್ಲಿ ಲಾಲ್‌ಬಾಗ್‌ ನನ್ನ ಒಂದು ಶ್ವಾಸಕೋಶವಿದ್ದಂತೆ. ಇನ್ನೊಂದು ಶ್ವಾಸಕೋಶ ಗಾಂಧಿಬಜಾರ್‌. ಆ ಬಗ್ಗೆ ಆಮೇಲೆ ಹೇಳ್ತೀನಿ. ಲಾಲ್‌ಬಾಗ್‌ ಏಕಾಂತಕ್ಕೆ, ಗಾಂಧಿಬಜಾರ್‌ ಲೋಕಾಂತಕ್ಕೆ ಅಂತ ಯಾವಾಗಲೂ ಹೇಳ್ತೀನಿ. ಕುವೆಂಪು ಅವರಿಗೆ ಮಲೆನಾಡು ಸಿಕ್ಕಂಗೆ, ವರ್ಡ್ಸ್‌ವರ್ತ್‌ಗೆ ಲಂಡನ್‌ನ ಲೇಕ್‌ ಡಿಸ್ಟ್ರಿಕ್ಟ್‌ ಸಿಕ್ಕಂಗೆ ನಂಗೆ ಲಾಲ್‌ಬಾಗ್‌ ಸಿಕ್ತು. ಇವರಿಬ್ಬರೂ ಪ್ರಕೃತಿ ರಮ್ಯವಾದ ಪದ್ಯಗಳನ್ನು ಬರೆಯಲು ಆ ಪ್ರದೇಶಗಳೇ ಕಾರಣ. ನನ್ನ ಕಾವ್ಯದ ಜನ್ಮಸ್ಥಳ ಲಾಲ್‌ಬಾಗ್‌ ಎಂದರೆ ತಪ್ಪಾಗಲಾರದು. ಯಾಕೆಂದರೆ ವಿದ್ಯಾರ್ಥಿ ಜೀವನದಿಂದಲೂ ಇಲ್ಲಿ ಅಡ್ಡಾಡುತ್ತಿದ್ದೆ, ಆಟವಾಡುತ್ತಿದ್ದೆ, ವಾಯುವಿಹಾರ ಮಾಡುತ್ತಿದ್ದೆ. ಆಗೆಲ್ಲಾ ನನ್ನ ತಲೇಲಿ ಕಾವ್ಯದ ಚಿಂತನ–ಮಂಥನ ನಡೆಯುತ್ತಿತ್ತು. ನನ್ನ ಓದುವ ಹಸಿವನ್ನು ತಣಿಸಲೂ ಈ ಸಸ್ಯಕಾಶಿಯೇ ಆಸರೆಯಾಗಿತ್ತು, ಪ್ರಕೃತಿ ಕುರಿತಾದ ನನ್ನ ಪದ್ಯಗಳಿಗೆ ಈ ಸಸ್ಯಕಾಶಿಯೇ ಪ್ರೇರಣೆ, ಸ್ಫೂರ್ತಿ.

ನಾನು ಪ್ರೈಮರಿ ಸ್ಕೂಲ್‌ ಮುಗಿಸುತ್ತಿದ್ದಂತೆ ತಂದೆಗೆ ಹೊಸಕೋಟೆಗೆ ವರ್ಗವಾಯಿತು. ಎಸ್ಸೆಸ್ಸೆಲ್ಸಿವರೆಗೆ ಹೊಸಕೋಟೆಯಲ್ಲಿ ಓದಬೇಕಾಯಿತು. ಆದರೆ ಇಂಟರ್‌ಮೀಡಿಯೆಟ್‌ಗೆ ಮತ್ತೆ ಲಾಲ್‌ಬಾಗ್‌ಗೇ ಬಂದೆ. ಇಲ್ಲಿ ನಮ್ಮ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡು ಓದಿದೆ. ಇದೆಲ್ಲಾ ನನ್ನ ಯೋಗಾಯೋಗ ಅನ್ನಬಹುದು. ತಂದೆಗೆ ಮತ್ತೆ ಬೆಂಗಳೂರಿಗೇ ವರ್ಗವಾಯ್ತು. ಬಹುಶಃ ಬೆಂಗಳೂರಿನ ಬೇರೆ ಯಾವುದೇ ಭಾಗದಲ್ಲಿ ನಾನಿದ್ರೂ ಕಾವ್ಯದ ನಂಟು ಇಷ್ಟೊಂದು ಬೆಳೆಯುತ್ತಿರಲಿಲ್ಲ. ನನ್ನ ಸುಕೃತಕ್ಕೆ ಲಾಲ್‌ಬಾಗ್‌ ಸಹವಾಸ ಮತ್ತೆ ಮತ್ತೆ ಸಿಗುತ್ತಲೇ ಹೋಯಿತು.

ಇಂಟರ್‌ಮೀಡಿಯೆಟ್‌ನಲ್ಲಿ ಸತ್ಯನಾರಾಯಣ ಅಂತ ಕ್ಲಾಸ್‌ಮೇಟ್‌ ಇದ್ದ. ಅವನೂ ನಾನೂ ಮಟಮಟ ಮಧ್ಯಾಹ್ನ ಇಲ್ಲೇ ಬಂದು ಕಡ್ಲೆಕಾಯಿ ತಿಂದ್ಕೊಂಡು ಕೂರ್ತಿದ್ವಿ. ಆಗ ಇಲ್ಲಿ ನರಪಿಳ್ಳೆನೂ ಇರ್ತಾ ಇರ್ಲಿಲ್ಲ. ಒಂದು ಸಲ ಏನಾಯ್ತು ಗೊತ್ತಾ? ಇಲ್ಲಿನ ಕೆರೆಯಲ್ಲಿ ನಾನು ಮತ್ತು ಸ್ನೇಹಿತರು ಎಂದಿನಂತೆ ಈಜ್ತಾ ಇದ್ವಿ. ಇಲ್ಲಿ ಈಜೋದು ಅಪಾಯಕಾರಿ ಅಂತ ಎಷ್ಟೋ ಸಲ ಬೈಸ್ಕೊಂಡಿದ್ವಿ. ಆವತ್ತು ಒಬ್ಬ ಅಧಿಕಾರಿ ಬಂದು ನಮ್ಮ ಅಂಗಿ– ಚಡ್ಡಿ ಎಲ್ಲಾ ಎತ್ಕೊಂಡು ಹೋಗಿಬಿಟ್ಟ! ನಾವು ನೀರಿನಿಂದ ಮೇಲೆ ಬರುವಂತಿಲ್ಲ, ಅಲ್ಲೇ ಇರುವಂತಿಲ್ಲ. ಆದ್ರೂ ಹುಟ್ಟುಡುಗೆಯಲ್ಲೇ ಗೇಟ್‌ ವರೆಗೂ ಅವನ ಹಿಂದೆ ಓಡ್ಕೊಂಡು ಹೋಗಿದ್ವಿ. ಅಂಥಾ ಫಜೀತಿಯಾಗಿತ್ತು.

ಕಾಲೇಜು ಲೆಕ್ಚರರ್‌ ಆದಾಗಲೂ, ಮನೇಲಿ ಮಕ್ಕಳು ಗಲಾಟೆ ಮಾಡ್ತಾರೆ ಅಂತ ಇಲ್ಲಿ ಬಂದು ಪುಸ್ತಕ ಓದ್ಕೊಂಡು ಇಲ್ಲೇ ಕ್ಯಾಂಟೀನ್‌ನಲ್ಲಿ ಎರಡಾಣೆಗೆ ಖಾಲಿ ದೋಸೆ, ಇಡ್ಲಿ ತಿಂದ್ಕೊಂಡು ಕಾಲೇಜಿಗೆ ಹೋಗ್ತಿದ್ದೆ. ಆಗಿನ್ನೂ ನಯಾ ಪೈಸೆ ಬಂದಿರಲಿಲ್ಲ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’, ‘ಕಾನೂರ ಹೆಗ್ಗಡತಿ’ಯನ್ನು ಅದೆಷ್ಟು ಸಲ ಈ ಲಾಲ್‌ಬಾಗ್‌ನಲ್ಲಿ ಓದಿದ್ದೇನೋ ನಂಗೇ ನೆನಪಿಲ್ಲ. ಕನಿಷ್ಠ 150 ಪುಸ್ತಕಗಳನ್ನು ಇಲ್ಲಿ ಓದಿದ್ದೇನೆ. ಆಗಲೇ ಹೇಳಿದಂಗೆ ಏಕಾಂತಕ್ಕೆ ನಂಗೆ ಲಾಲ್‌ಬಾಗೇ ಆಗಬೇಕಿತ್ತು.

ನಾನು ಇಲ್ಲಿ ಹೆಚ್ಚು ಬರೀತಿರಲಿಲ್ಲ. ಇಲ್ಲಿ ಬರೆದ ಕೆಲವೇ ಪದ್ಯಗಳಲ್ಲಿ ‘ಕೆಂಪುತೋಟ ಮತ್ತು ಡಾ.ಎಚ್ಚೆನ್‌’ ಮುಖ್ಯವಾದುದು. ಡಾ. ಎಚ್. ನರಸಿಂಹಯ್ಯ (ಎಚ್ಚೆನ್‌) ಜತೆ ಇಲ್ಲಿ ಬೆಳಿಗ್ಗೆ ವಾಕಿಂಗ್‌ಗೆ ಬರುತ್ತಿದ್ದೆ. ‘ಒಂದು ದಿನ ಇಲ್ಲಿಗೆ ಬರದಿದ್ರೂ ಅಯ್ಯೋ ಈ ನರಸಿಂಹಯ್ಯ ಸತ್ತೋದ್ನಾ ಹೇಗೆ ಅಂತ ಈ ಗಿಡಮರಗಳು ನೊಂದ್ಕೊಂಡುಬಿಟ್ಟಾವು ಕಣಯ್ಯಾ. ಅದಕ್ಕೆ ಒಂದು ದಿನಾನೂ ನಾವು ವಾಕಿಂಗ್‌ ತಪ್ಪಿಸ್ಬಾರ್ದು’ ಎನ್ನುತ್ತಿದ್ದರು. ಆ ನೆನಪಿನಲ್ಲೇ ಬರೆದ ಪದ್ಯ ಅದು. ಅದು ಬಿಟ್ಟರೆ ‘ಕುರಿಗಳು ಸಾರ್‌’ ಇಲ್ಲೇ ಬರೆದೆ. ಚೀನಿಯರ ಆಕ್ರಮಣದ ವಿರುದ್ಧ ಬರೆದದ್ದು ಅದು.

1958ರಲ್ಲಿ ನನ್ನ ಎಂ.ಎಸ್ಸಿ ಮುಗೀತು. 1959ರಲ್ಲಿ ದಿ ಮೈಸೂರು ಮೈನ್ಸ್‌ ಅಂಡ್‌ ಜಿಯಾಲಜಿ ಇಲಾಖೆಯಲ್ಲಿ ಸಹಾಯಕ ಭೂ ವಿಜ್ಞಾನಿಯಾಗಿ ಗುಲ್ಬರ್ಗಕ್ಕೆ ನೇಮಕಗೊಂಡೆ. ಆ ನೌಕರಿ ನನಗೆ ಒಗ್ಗಲಿಲ್ಲ. ಯಾವ್ಯಾವುದೋ ಊರಿಗೆ ಹೋಗಬೇಕಾಗಿತ್ತು. ಅಲೆಯೋದು ನನ್‌ ಕೈಲಾಗಲಿಲ್ಲ. ಆಫೀಸಲ್ಲೇ ಉಳ್ಕೋಬೇಕಾಗಿತ್ತು. ಸರಿಯಾಗಿ ಊಟ ತಿಂಡಿ ಇಲ್ಲ. ಆಗ ಗುಲ್ಬರ್ಗದ ಪ್ರದೇಶಗಳು ಎಷ್ಟು ಹಿಂದುಳಿದಿದ್ದವು ಎಂದರೆ ಹೋಟೆಲ್‌, ಜನ ಸಂಚಾರ, ವಾಹನ ಸಂಪರ್ಕ ಇರುತ್ತಿರಲಿಲ್ಲ. ಹಾಗೆ ಕಷ್ಟ ಎದುರಿಸಲಾಗದೆ ಕೆಲಸ ಬಿಟ್ಟೆ. 1959ರಲ್ಲಿ ಮತ್ತೆ ನಿರುದ್ಯೋಗಿಯಾದೆ. ಆಗ ಭೂಸರ್ವೇಕ್ಷಣಾ ಇಲಾಖೆಯಲ್ಲಿ ಅಂದರೆ ಜಿಯಾಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕಿದೆ. ಕಲ್ಕತ್ತದಲ್ಲಿ ಕೆಲಸ ಸಿಕ್ಕಿತು. ಹಿಮಾಲಯದ ತಪ್ಪಲಲ್ಲಿದ್ದ ತಾಮ್ರದ ಗಣಿಗೆ ನಿಯೋಜನೆಗೊಂಡೆ. ಆದರೆ ಅಷ್ಟು ದೂರ ಅಂದರೆ ಅಮ್ಮನಿಗೆ ಸುತರಾಂ ಇಷ್ಟವಿರಲಿಲ್ಲ. ನಮ್ಮಪ್ಪ ‘ಹೋಗು, ಗೋ ಐ ಸೇ, ಬದುಕಿನಲ್ಲಿ ಚಾಲೆಂಜ್ ತಗೋಬೇಕು ಕಣಯ್ಯಾ’ ಅಂತ ಹೇಳಿದ್ರೂ ಅಮ್ಮನ ಮಾತು ಮೀರಲು ನನಗೂ ಮನಸ್ಸಿರಲಿಲ್ಲ.

ಅಷ್ಟರಲ್ಲಿ ಒಂದು ಪವಾಡ ನಡೀತು. ಒಂದು ದಿನ ಆಕಾಶವಾಣಿಯಿಂದ ಒಂದು ಪತ್ರ ಬಂತು. ಕುವೆಂಪು ಅವರ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ನಾನು ಕವನ ಓದ್ಬೇಕು ಅಂತ. ನನಗೆ ದಿಗ್ಭ್ರಮೆಯಾಯ್ತು. ಅದು ಮೈಸೂರು ದಸರಾ ಕವಿಗೋಷ್ಠಿ. ಬೆಂಗಳೂರು ಆಕಾಶವಾಣಿಯಲ್ಲಿದ್ದ ರಾಘವೇಂದ್ರ ಇಟಗಿ ಎಂಬವರು ಕಳಿಸಿದ್ದ ಲೆಟರ್ ಅದು. ಆ ಕವಿಗೋಷ್ಠಿ ನನ್ನ ಬದುಕಿಗೆ ಹೊಸ ತಿರುವು ಕೊಟ್ಟಿತು. ನನ್ನ ಕವನವನ್ನು ಕುವೆಂಪು ಮೆಚ್ಚಿಕೊಂಡರು. ಅದೇ ಸಮಯಕ್ಕೆ ಸೆಂಟ್ರಲ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದವರು ವಿದೇಶಕ್ಕೆ ಹೋಗುವವರಿದ್ದರು. ಆ ಸ್ಥಾನಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ನಾನು ಸಲ್ಲಿಸಿದೆ. ನೇಮಕಗೊಂಡೆ. 1959ರಲ್ಲಿ ಅಧ್ಯಾಪನ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಪ್ರವೇಶವಾದೆ. ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಮತ್ತು ‘ಗ್ಯಾಸ್‌’ (ಸರ್ಕಾರಿ ಕಲೆ ಹಾಗೂ ವಿಜ್ಞಾನ ಕಾಲೇಜು) ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಲೇ ಸಾಹಿತ್ಯದ ಚಟುವಟಿಕೆಗಳಲ್ಲೂ ಅತ್ಯಂತ ಸಕ್ರಿಯನಾಗಿದ್ದೆ.

ವಿಶೇಷವಾಗಿ, ಭಾಷಾಂತರ ಸಾಹಿತ್ಯದಲ್ಲಿ ತೊಡಗಿಸಿಕೊಂಡೆ. ಚಿಲಿಯ ಕವಿ ಪಾಬ್ಲೊ ನೆರೂಡಾನ ಕಾವ್ಯಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ 1967ರಿಂದ 72ರವರೆಗೆ ಮತ್ತು 1975ರಿಂದ 1978ರವರೆಗೆ ಕೆಲಸ ಪ್ರಾಧ್ಯಾಪಕನಾಗಿದ್ದೆ. ಚಿತ್ರದುರ್ಗದಲ್ಲೂ ಇದ್ದೆ.

ಗಾಂಧಿ ಬಜಾರ್‌ ಲೋಕಾಂತಕ್ಕೆ ಅಂತ ಹೇಳಿದೆ ನೋಡಿ. ಸಾರಸ್ವತ ಲೋಕದ ದಿಗ್ಗಜರನ್ನು ನನಗೆ ಪರಿಚಯಿಸಿದ ಜಾಗ ಅದು. ಡಿವಿಜಿ, ಅ.ನಾ.ಸುಬ್ಬರಾಯರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವೈಎನ್ಕೆ... ಹೀಗೆ ಗಾಂಧಿ ಬಜಾರಿನಲ್ಲಿ ನಂಗೆ ಸಿಕ್ಕಿದವರ ಹೆಸರು ಹೇಳ್ತಾ ಹೋದ್ರೆ ಬ್ರಹ್ಮಾಂಡ. ಲಾಲ್‌ಬಾಗ್‌ನಲ್ಲಿ ಕಾವ್ಯದ ಹೊಸ ಹೊಸ ಹೊಳಹುಗಳು ಹುಟ್ಟುತ್ತಿದ್ದವು. ಗಾಂಧಿ ಬಜಾರು ಲೌಕಿಕ ಚಿಂತನೆಗೆ ಪ್ರೇರಣೆ. 1960ರಲ್ಲಿ ‘ಮನಸು ಗಾಂಧಿ ಬಜಾರು’ ಎಂಬ ಪದ್ಯವನ್ನೇ ಬರೆದುಬಿಟ್ಟಿದ್ದೆ.

ಶಿವಮೊಗ್ಗದಲ್ಲಿ ಎರಡು ಅವಧಿಯಲ್ಲಿ ಕೆಲಸ ಮಾಡಿದೆ ಅಂದ್ನಲ್ಲ! ಸಹ್ಯಾದ್ರಿಯ ಮಡಿಲು, ತುಂಗೆಯ ಪರಿಸರವೂ ನನ್ನ ಮೇಲೆ ಗಾಢ ಪ್ರಭಾವ ಬೀರಿದವು. ಕಾಲೇಜಿಗೆ ತುಂಗಾ ಸೇತುವೆ ಮೇಲೆ ನಡೆದು ಹೋಗುತ್ತಿದ್ದೆ. ಸಾಯಂಕಾಲವಂತೂ ಎಲ್ಲೇ ನಡೆದುಕೊಂಡು ಹೋಗುತ್ತಿದ್ದರೂ ಹಕ್ಕಿಗಳ ಚಿಲಿಪಿಲಿಯು ಜೇಬಿನಲ್ಲಿ ನಾಣ್ಯಗಳನ್ನು ಹಾಕಿಕೊಂಡು ನಡೆದಾಡಿದಂತೆ ಇರುತ್ತಿತ್ತು. ಅಲ್ಲಿನ ಪ್ರಕೃತಿಯ ಪ್ರೇರಣೆಯಿಂದಲೂ ನಾನು ಸಾಕಷ್ಟು ಪದ್ಯಗಳನ್ನು ಬರೆದಿದ್ದೇನೆ. ಆಗ ನನ್ನ ಹೆಂಡತಿ ಇಲ್ಲೇ ಬೆಂಗಳೂರಲ್ಲಿ ಕಂಟೋನ್ಮೆಂಟ್‌ನ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯಿನಿ ಆಗಿದ್ದ ಕಾರಣ ಸಂಸಾರವನ್ನು ಇಲ್ಲೇ ಬಿಟ್ಟು ನಾನು ಒಬ್ಬನೇ ಶಿವಮೊಗ್ಗೆಯಲ್ಲಿದ್ದೆ.

ನನ್ನನ್ನು ಎಲ್ಲರೂ ‘ನಿತ್ಯೋತ್ಸವ ಕವಿ’ ಎಂದೇ ಕರೀತಾರೆ. ಈ ನಿತ್ಯೋತ್ಸವ ಪದ್ಯ ಹುಟ್ಟಿದ್ದೂ ಬೆಂಗಳೂರಿನಲ್ಲೇ, 1978ರ ನವೆಂಬರ್‌ನಲ್ಲಿ. ಆಗ ನಮ್ಮ ಮನೆ ಜಯನಗರದಲ್ಲಿತ್ತು. ಶಿವಮೊಗ್ಗದಿಂದ ರಜೆಯಲ್ಲಿ ಇಲ್ಲಿಗೆ ಬಂದಿದ್ದೆ. ಆಕಾಶವಾಣಿ ಪ್ರಸಾರ ಮಾಡಲು ಉದ್ದೇಶಿಸಿದ್ದ ಕಾರ್ಯಕ್ರಮಕ್ಕಾಗಿ ಬರೆದುದು. ಯಾವ ವಿಷಯದ ಮೇಲೆ ಬರೀಲಿ ಎಂದು ಎರಡು ರಾತ್ರಿ ಎರಡು ಹಗಲು ತಲೆಕೆಡಿಸ್ಕೊಂಡಿದ್ದೆ. ಒಂದು ಇಳಿಸಂಜೆ ಮನೆಯ ತಾರಸಿ ಮೇಲೆ ನಿಂತಿದ್ದಾಗ, ಥಟ್ಟಂತ ಜೋಗದ ವೈಭೋಗ ನೆನಪಾಯ್ತು. ಅಯ್ಯೋ, ಜೋಗ ಜಲಪಾತದ ಶ್ರೀಮಂತಿಕೆಯ ಮೇಲೆಯೇ ಬರೆದರಾಯಿತಲ್ಲ ಅಂತ ಅನಿಸಿಬಿಡ್ತು. ದಡದಡಾಂತ ಮನೆಯೊಳಗೆ ಓಡ್ಕೊಂಡು ಬಂದು ಬುಡ್ಡೀ ದೀಪದ ಬೆಳಕಿನಲ್ಲಿ ಬರೆದುಬಿಟ್ಟೆ... ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ...’

‘ನಿತ್ಯೋತ್ಸವ’ ನಾಡಿನ ಅಚ್ಚುಮೆಚ್ಚಿನ ಪದ್ಯವಾದುದು ನನ್ನ ಸುಯೋಗ. 2008ರಲ್ಲಿ ಪದ್ಮಶ್ರೀ ಪ್ರಶಸ್ತಿಯೂ ಬಂತು. ಕನ್ನಡ ಭಾಷೆ, ನೆಲ ನನಗೆ ಬೇಕುಬೇಕಾದ್ದನ್ನೆಲ್ಲಾ ಕೊಟ್ಟಿದೆ. ಕನ್ನಡದ ಮಣ್ಣಿನಲ್ಲಿ, ಲಾಲ್‌ಬಾಗ್‌ ಇರೋ ಈ ಬೆಂಗಳೂರಲ್ಲಿ ನಾನು ಬರಲು ಅವಕಾಶ ಸಿಕ್ಕಿದ್ದರಿಂದಲೇ ಕೆ.ಎಸ್.ನಿಸಾರ್‌ ಅಹಮದ್‌ ಎಂಬ ಕವಿ ಹುಟ್ಟಲು ಸಾಧ್ಯವಾಯಿತು. ನಾನು ಈ ಮಣ್ಣಿಗೆ, ನಾಡಿಗೆ ಚಿರಋಣಿ.

ಅನ್ನ ಕೊಟ್ಟ ಎರಡು ಸಂಸ್ಥೆಗಳು

ಒಂದು ರೀತಿಯಲ್ಲಿ ನಾನು ಬೆಳೆದಿದ್ದು ಆಕಾಶವಾಣಿ ಮತ್ತು ‘ಪ್ರಜಾವಾಣಿ’ಯಿಂದ. 1958–59ರಲ್ಲಿ ಎಂ.ಬಿ. ಸಿಂಗ್ ಅವರು ಪ್ರಜಾವಾಣಿಯಲ್ಲಿ ವಿಮರ್ಶೆಗಾಗಿ ಪುಸ್ತಕಗಳನ್ನು ಕೊಡಲು ಶುರು ಮಾಡಿದರು. ‘ಏನಿದು ಈ ಹುಡುಗನ ವಿಮರ್ಶೆ ಪ್ರಜಾವಾಣಿಯಲ್ಲಿ ಬರ್ತಿದ್ಯಲ್ಲಾ’ ಅಂತ ಎಲ್ಲರೂ ಆಶ್ಚರ್ಯಪಡೋರು. ‘ಸುಧಾ’ ವಾರಪತ್ರಿಕೆ ಶುರುವಾದಾಗ ಗ್ರಂಥಾಂತರಂಗ ಅನ್ನೋ ಕಾಲಂಗೆ ಮೊದಲ ರಿವ್ಯೂ ಬರೆದೋನು ನಾನೇ. ಆಮೇಲೆ ಎಷ್ಟು ಬರೆದೆನೋ ನೆನಪಿಲ್ಲ.

ವೈಎನ್ಕೆ ಇದ್ದಾಗ ‘ಸುಧಾ’ದ ಕೊನೆಪುಟದಲ್ಲಿ ಲಾಸ್ಟ್‌ ಪಂಚ್‌ ಎಂಬ ಹಾಸ್ಯ ಕವನಗಳನ್ನು ಬರೆಸಿದ್ರು. ಪ್ರಪಂಚದ ಸಾಹಿತ್ಯವನ್ನು ಪರಿಚಯಿಸಿದವರೇ ಅವರು. ಆಗ ಗುರುಸ್ವಾಮಿ ಮತ್ತು ನೆಟ್ಟಕಲ್ಲಪ್ಪ ಅವರು ಸಂಜೆ ಹೊತ್ತು ಪ್ರಜಾವಾಣಿ ಕಚೇರಿ ಹೊರಗೆ ಕೈಕಟ್ಕೊಂಡು ನಿಲ್ಲೋರು. ನೆಟ್ಟಕಲ್ಲಪ್ಪ ಎಂಥಾ ಸ್ಫುರದ್ರೂಪಿ ಗೊತ್ತಾ? ಇಬ್ಬರ ಉಡುಗೆ ತೊಡುಗೆ ನೋಡಿದ್ರೆ ಕೈಮುಗೀಬೇಕು ಅನ್ಸೋದು. ಆಕಾಶವಾಣಿ, ನನಗೆ ಅನ್ನ ಕೊಟ್ಟ ಇನ್ನೊಂದು ಸಂಸ್ಥೆ.

***

ಪೂರ್ತಿ ಹೆಸರು: ಕೊಕ್ಕರೆ ಹೊಸಹಳ್ಳಿ ಶೇಕ್‌ ಹೈದರ್‌ ನಿಸಾರ್‌ ಅಹಮದ್‌

ಜನನ: 5ನೇ ಫೆಬ್ರುವರಿ, 1936

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.