ವಿಶ್ವ ತಾಯ್ನುಡಿ ದಿನ: ಫೆ. 21, 2016
ಜೀವನದ ಸಾರ್ಥಕತೆ ಮತ್ತು ಸಂತೋಷದ ಅಳತೆಗೋಲುಗಳಾಗಿದ್ದ ಮೌಲ್ಯಗಳ ಜಾಗದಲ್ಲಿ ಹಣ ಹಾಗೂ ಅದರಿಂದ ದೊರಕುವ ಸವಲತ್ತುಗಳು ಸ್ಥಾನ ಪಡೆಯಲು ಹವಣಿಸುತ್ತಿರುವ ದಿನಗಳಿವು. ಈ ಹಿನ್ನೆಲೆಯಲ್ಲಿ ನಾವು ಈವರೆಗೆ ನೆಚ್ಚಿಕೊಂಡು ಬಂದ ಮೌಲ್ಯಗಳನ್ನು ಆಧುನಿಕ ಪ್ರಭೆಯಲ್ಲಿ ಮರಳಿ ಒರೆಗೆ ಹಚ್ಚುವುದು ಅನಿವಾರ್ಯ.
ನಾವು ನಂಬಿಕೊಂಡು ಬಂದ ಮೌಲ್ಯಗಳಲ್ಲಿ ‘ಮಾತೃಭಾಷೆ’ಯೂ ಒಂದಾದುದರಿಂದ, ತಾಯ್ನುಡಿಯ ಅನನ್ಯತೆ ಮತ್ತು ಅಗತ್ಯಗಳನ್ನು ಮರಳಿ ಮರಳಿ ಪರೀಕ್ಷಿಸುವುದು ಅನಿವಾರ್ಯ. ಇಂಥ ಪ್ರಯತ್ನಗಳು ತಾಯ್ನುಡಿಯ ‘ಅಸಲಿತನ’ವನ್ನು ಮನದಟ್ಟು ಮಾಡಿಸುವುದರ ಜೊತೆಗೆ, ‘ಭಾಷಾಬಹುತ್ವ’ದ ಹೊಸ ಕಾಲದಲ್ಲಿ ತಾಯ್ನುಡಿಯೊಂದಿಗಿನ ನಮ್ಮ ನಂಟಿನ ಸ್ವರೂಪವನ್ನೂ ಸ್ಪಷ್ಟಪಡಿಸುತ್ತವೆ. ಈ ಹಂಬಲದಲ್ಲೇ ‘ತಾಯ್ನುಡಿ ದಿನ’ದ ವಿಶೇಷ ಸಂಚಿಕೆಯನ್ನು ‘ಮುಕ್ತಛಂದ’ ರೂಪಿಸಿದೆ.
ಕನ್ನಡ ನುಡಿಯನ್ನು ತಮ್ಮ ಸೃಜನಶೀಲತೆಯ ಅಸ್ಮಿತೆಯನ್ನಾಗಿಸಿಕೊಂಡಿರುವ ಲೇಖಕರು ‘ತಾಯ್ನುಡಿ’ಯ ವಿವಿಧ ಸಾಧ್ಯತೆಗಳನ್ನು ತಮ್ಮ ಅನುಭವದ ಹಿನ್ನೆಲೆಯಲ್ಲಿ ಈ ಸಂಚಿಕೆಯಲ್ಲಿನ ಬರಹಗಳಲ್ಲಿ ನಿರೂಪಿಸಿದ್ದಾರೆ. ಈ ಬರಹಗಳು ‘ಮಾತೃಭಾಷೆ’ಯ ಕುರಿತ ನಮ್ಮ ಅರಿವು ಮತ್ತು ಪ್ರೀತಿಯನ್ನು ಹೆಚ್ಚಿಸುತ್ತವೆ ಎನ್ನುವುದು ನಮ್ಮ ನಂಬಿಕೆ. ಸಂಚಿಕೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತೇವೆ.
–ಸಂಪಾದಕ, mukthachanda@prajavani.co.in.
ಭಾಷೆಗಾಗಿ ಬಾಂಗ್ಲಾದೇಶದ ವಿದ್ಯಾರ್ಥಿಗಳು ಜೀವ ತೆತ್ತ ಫೆಬ್ರುವರಿ 21ರ ದಿನವನ್ನು ‘ವಿಶ್ವ ತಾಯ್ನುಡಿ ದಿನ’ವೆಂದು ಯುನೆಸ್ಕೋ 1999ರಲ್ಲಿ ಘೋಷಿಸಿತು. ‘ಜಗತ್ತಿನ ಜನರೆಲ್ಲರೂ ಬಳಸುವ ಎಲ್ಲ ಭಾಷೆಗಳನ್ನು ಉಳಿಸಿಕೊಳ್ಳುವುದು, ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ’ ಅನ್ನುವುದು ಈ ದಿನಾಚರಣೆಯ ಉದ್ದೇಶ.
ಆಗಿನ್ನೂ ಅದು ಪೂರ್ವ ಪಾಕಿಸ್ತಾನ ಎಂದೇ ಕರೆಸಿಕೊಳ್ಳುತಿತ್ತು. ಭಾರತ–ಪಾಕಿಸ್ತಾನಗಳು ಹುಟ್ಟಿಕೊಂಡು ಐದು ವರ್ಷ ಕಳೆದಿತ್ತು. ಪೂರ್ವ ಪಾಕಿಸ್ತಾನದಲ್ಲಿ ಬಂಗ್ಲಾ ಭಾಷೆಯನ್ನಾಡುವವರೇ ಶೇಕಡಾ ಐವತ್ತನಾಲ್ಕರಷ್ಟು ಇದ್ದರು. ಮಹಮ್ಮದಾಲಿ ಜಿನ್ನಾ ಅವರ ಉತ್ತರಾಧಿಕಾರಿ ಗೌರ್ನರ್ ಜನರಲ್ ಖ್ವಾಜಾ ನಜೀಮುದ್ದೀನ್ ‘ಉರ್ದು ಮಾತ್ರವೇ ಪಾಕಿಸ್ತಾನದ ರಾಷ್ಟ್ರೀಯ ಭಾಷೆ’ ಎಂದು ಜನವರಿ 27, 1952ರ ಭಾಷಣದಲ್ಲಿ ಘೋಷಣೆ ಮಾಡಿದ್ದರು.
ಮುಂದೆ ನಾಲ್ಕೇ ದಿನಗಳಲ್ಲಿ ಪೂರ್ವ ಪಾಕಿಸ್ತಾನದ ಎಲ್ಲ ರಾಜಕೀಯ ಪಕ್ಷಗಳು ಸೇರಿ ‘ರಾಷ್ಟ್ರಭಾಷಾ ಕೋರ್ಮೀ ಪೊರಿಷದ್’ ಸ್ಥಾಪಿಸಿದ್ದವು. ಆ ಸಭೆ ನಡೆದದ್ದು ಢಾಕಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ. ಶಾಲೆ ಕಾಲೇಜುಗಳಲ್ಲಿ ಬಂಗ್ಲಾ ಮಾಧ್ಯಮಕ್ಕೆ ಅವಕಾಶವಿಲ್ಲ; ಸ್ಟಾಂಪುಗಳೂ ಸೇರಿದ ಹಾಗೆ ಸಮೂಹ ಮಾಧ್ಯಮಗಳಲ್ಲೂ ಆಡಳಿತದಲ್ಲೂ ಉರ್ದು ಮಾತ್ರವೇ ರಾಷ್ಟ್ರಭಾಷೆಯಾಗಿ ಕಾಣಿಸಿಕೊಳ್ಳುತ್ತದೆ; ಬಂಗ್ಲಾ ನುಡಿಯನ್ನು ಬರೆಯುವುದಿದ್ದರೂ ಅರಾಬಿಕ್ ಲಿಪಿಯಲ್ಲಿ ಬರೆಯಬೇಕೆಂಬ ಸರಕಾರೀ ಆಜ್ಞೆಗೆ ತೀವ್ರವಾದ ವಿರೋಧ ವ್ಯಕ್ತವಾಗಿತ್ತು.
ಫೆಬ್ರುವರಿ 21ರಂದು ಮುಷ್ಕರ, ಮೆರವಣಿಗೆಗಳು ನಡೆದವು. ಪಾಕಿಸ್ತಾನ ಸರ್ಕಾರ ನಿಷೇಧಾಜ್ಞೆ ಹೇರಿತು. ಢಾಕಾ ವಿಶ್ವವಿದ್ಯಾಲಯದ ಆವರಣದಲ್ಲಿ ಸೇರಿದ್ದ ವಿದ್ಯಾರ್ಥಿಗಳ ಮೆರವಣಿಗೆ ಹೊರಟಿತು. ಹೈಕೋರ್ಟಿನ ಬಳಿ ಪೋಲೀಸರು ಗುಂಡಿನ ದಾಳಿ ನಡೆಸಿದರು. ಅಬ್ದುಸ್ ಸಲಾಮ್, ರಫೀಕ್ ಉದ್ದೀನ್ ಅಹ್ಮದ್, ಅಬುಲ್ ಬರ್ಕತ್, ಅಬ್ಚುಲ್ ಜಬ್ಬಾರ್, ಶಫಿ ಉರ್ ರಹಮಾನ್ ಹುತಾತ್ಮರಾದರು..
ಬಂಗ್ಲಾ ಭಾಷೆಗಾಗಿ ನಡೆದ ಚಳವಳಿ ಜನರ ಅಸ್ಮಿತೆಯ ಸ್ಥಾಪನೆಯ ಚಳವಳಿಯೂ ಆಗಿ ರೂಪಾಂತರ ಪಡೆಯಿತು. ಮುಂದಿನೆರಡು ದಶಕಗಳಲ್ಲಿ ಇತರ ರಾಜಕೀಯ ಆರ್ಥಿಕ ಕಾರಣಗಳೂ ಸೇರಿ ಸ್ವತಂತ್ರವಾದ ಬಾಂಗ್ಲಾದೇಶ ಉದಯವಾಯಿತು. ಜನ ತಮಗಾಗಿ ತಮ್ಮ ಮುಂದಿನ ತಲೆಮಾರಿಗಾಗಿ ಭಾಷೆಯನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟ ಬಾಂಗ್ಲಾ ರಾಷ್ಟ್ರೀಯ ಹೋರಾಟಕ್ಕೂ ಆ ಮೂಲಕ ಪರೋಕ್ಷವಾಗಿ ಹೊಸ ದೇಶವೊಂದರ ಸೃಷ್ಟಿಗೂ ಕಾರಣವಾಯಿತು.
ಭಾಷೆಗಾಗಿ ವಿದ್ಯಾರ್ಥಿಗಳು ಜೀವ ತೆತ್ತ ಫೆಬ್ರುವರಿ 21ರ ದಿನವನ್ನು ‘ವಿಶ್ವ ತಾಯ್ನುಡಿ ದಿನ’ವೆಂದು ಯುನೆಸ್ಕೋ 1999ರಲ್ಲಿ ಘೋಷಿಸಿತು. ‘ಜಗತ್ತಿನ ಜನರೆಲ್ಲರೂ ಬಳಸುವ ಎಲ್ಲ ಭಾಷೆಗಳನ್ನು ಉಳಿಸಿಕೊಳ್ಳುವುದು, ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ’ ಅನ್ನುವುದು ಈ ದಿನಾಚರಣೆಯ ಉದ್ದೇಶ. ಬಹುನುಡಿ ಮತ್ತು ಬಹು ಸಂಸ್ಕೃತಿಗಳನ್ನು ಸಂಭ್ರಮಿಸುವ ‘ತಾಯ್ನುಡಿ ದಿನ’ದ ಈ ವರ್ಷದ ಘೋಷಣೆ– ‘ಗುಣ ಮಟ್ಟದ ಶಿಕ್ಷಣ, ಭಾಷಾ ಮಾಧ್ಯಮಗಳು, ಮತ್ತು ಕಲಿಕೆಯ ಫಲಿತಾಂಶಗಳ ಸಾಧನೆ’ ಅನ್ನುವುದು.
ಯಾವುದೇ ಜನಸಮುದಾಯದ ಕಣ್ಣಿಗೆ ಕಾಣುವ, ಕಾಣದ ಪಾರಂಪರಿಕ ಸಂಪತ್ತನ್ನು ಕಾಪಾಡಲು ಇರುವ ಅತ್ಯಂತ ಬಲವಾದ ಉಪಕರಣವೆಂದರೆ ಭಾಷೆಗಳು ಮಾತ್ರವೇ. ಜನರು ಆಡುವ ತಾಯಿನುಡಿಗಳನ್ನು ಬೆಳೆಸುವುದಕ್ಕೆ, ಪ್ರಸಾರ ಮಾಡುವುದಕ್ಕೆ ಕೈಗೊಳ್ಳುವ ಕಾರ್ಯಗಳಿಂದ ಜಗತ್ತಿನ ಭಾಷಾ ವೈವಿಧ್ಯ ಸಮೃದ್ಧವಾಗುತ್ತದೆ. ಬಹುಭಾಷಾ ಶಿಕ್ಷಣದ ಮೂಲಕ ಭಾಷಿಕ, ಸಾಂಸ್ಕೃತಿಕ ಪರಂಪರೆಗಳು ಗಟ್ಟಿಗೊಳ್ಳುತ್ತವೆ, ಹಾಗೆ ಜನರಲ್ಲಿ ಅರಿವು, ಸಹನೆ, ಸಂವಾದದ ಮೂಲಕ ಪರಸ್ಪರ ಅರಿಯುವ ಮನೋಧರ್ಮ ಬೆಳೆಯುತ್ತದೆ.
ಶಿಕ್ಷಣದಲ್ಲಿ ಭಾಷೆಗೆ, ಅದರಲ್ಲೂ ತಾಯಿನುಡಿಗೆ ಪ್ರಾಮುಖ್ಯವಿರಬೇಕು. ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣಗಳು ಬಹು ಭಾಷಾ ಮಾಧ್ಯಮಗಳಲ್ಲಿ ನಡೆಯುವುದು ಸೂಕ್ತ. ಇದರಿಂದ ಸ್ಥಳೀಯ ಭಾಷೆಗಳಿಗೆ, ಭಾಷಾ ಅಲ್ಪಸಂಖ್ಯಾತರಿಗೆ, ಸಾಮಾಜಿಕ ನ್ಯಾಯ ದೊರೆಯಲು ಸಹಾಯವಾಗುತ್ತದೆ. ಶಿಕ್ಷಣವು ತಮ್ಮದೇ ಭಾಷೆಯಲ್ಲಿ ದೊರೆತಾಗ ಬಾಯಿಪಾಠದ ಬದಲಾಗಿ ಸೃಜನಶೀಲತೆ ಅರಳುತ್ತದೆ, ವಿಷಯ ಮನಸ್ಸಿಗೆ ಇಳಿಯುತ್ತದೆ. ವಿದ್ಯಾರ್ಥಿ–ಶಿಕ್ಷಕರ ನಡುವೆ ನಿಜವಾದ ಸಂವಾದ ಸಾಧ್ಯವಾಗುತ್ತದೆ– ಇವೆಲ್ಲವೂ, ಸ್ಥೂಲವಾಗಿ, ‘ಯುನೆಸ್ಕೋ’ ಸಂಸ್ಥೆ ವ್ಯಕ್ತಪಡಿಸಿರುವ ಅಭಿಪ್ರಾಯಗಳು. ಬದುಕು ಹೀಗಿರಬೇಕೆನ್ನುವುದು ಕನಸು, ಆಸೆ, ಆದರ್ಶ.
***
ಗ್ಲೋಬೀಕರಣದಿಂದ ಜಗತ್ತೇ ಪುಟ್ಟ ಹಳ್ಳಿಯಂತಾಗಿದೆ. ಇದರ ಕೆಟ್ಟ ಪರಿಣಾಮಗಳು ಕಾಣಿಸಿಕೊಂಡಿರುವುದು ನಾವು ಬದುಕುವ ಪರಿಸರದಲ್ಲಿ, ಮತ್ತೆ ಜಗತ್ತಿನ ಜನ ಬಳಸುವ ಭಾಷೆಗಳಿಗೆ ಒದಗಿರುವ ಅಪಾಯದಲ್ಲಿ. ಜಗತ್ತಿನ ಅರ್ಧಕ್ಕಿಂತ ಹೆಚ್ಚಿನ ಜನರ ತಾಯಿನುಡಿಗಳಾಗಿರುವುದು ಕೇವಲ ಹತ್ತು ಭಾಷೆಗಳು ಮಾತ್ರ. ಇರುವ ಸುಮಾರು ಆರೂವರೆ ಸಾವಿರ ಭಾಷೆಗಳಲ್ಲಿ ಅನೇಕವು ಕೊನೆಯ ಉಸಿರು ಎಳೆಯುತ್ತಿವೆ, ಪ್ರತಿವಾರವೂ ಎರಡು ಭಾಷೆಗಳು ಕಣ್ಮರೆಯಾಗುತ್ತಿವೆ ಅನ್ನುತ್ತಾರೆ ಕೆಲವು ತಜ್ಞರು. ವ್ಯಕ್ತಿಯೊಬ್ಬರು ತೀರಿಕೊಂಡಾಗ ಅವರೆಲ್ಲ ಕನಸು, ಶಕ್ತಿ, ಸಾಮರ್ಥ್ಯ, ಸಾಧ್ಯತೆ, ನೆನಪು, ವೈಶಿಷ್ಟ್ಯ ಎಲ್ಲವೂ ಇಲ್ಲವಾಗುವ ಹಾಗೆ ನುಡಿಯೊಂದು ಮರಣಿಸಿದಾಗ ಇಡೀ ಸಮುದಾಯದ ಹಲವು ನೂರು, ಸಾವಿರ ವರ್ಷಗಳ ಬದುಕು, ಸಾಧನೆಗಳೆಲ್ಲ ಸುಳಿವೇ ಇಲ್ಲದೆ ನಾಶವಾಗುತ್ತವೆ. ಇದು ನಿಜ.
ಕೇವಲ ಭಾವುಕತೆ ದಾಟಿ ತಾಯಿನುಡಿ, ಶಿಕ್ಷಣ, ಶಿಕ್ಷಣ ಮಾಧ್ಯಮದ ಬಗ್ಗೆ ಪ್ರಶ್ನೆ ಕೇಳಿಕೊಳ್ಳುವುದು ನಾವು ಮಾಡಬಹುದಾದ ಕೆಲಸ. ಹಾಗೆ ಭಾವುಕವೆಂದು ಕರೆಯಲಾಗುವ ನಿಲುವಿಗೂ ಒಂದು ಚರಿತ್ರೆಯಿದೆ, ತತ್ವವಿದೆ. ತಾಯಿನುಡಿ, ಮಾತೃಭಾಷೆ ಇಂಥ ರೂಪಕಗಳು ಹುಟ್ಟಿದ್ದು ಯಾವಾಗ ಅನ್ನುವ ಪ್ರಶ್ನೆಯನ್ನೇ ನೋಡಿ. ಕನ್ನಡವನ್ನು ಇತರ ನುಡಿಗಳಿಗಿಂತ ಬೇರೆಯಾಗಿ ಕಲ್ಪಿಸಿಕೊಂಡದ್ದರ ದಾಖಲೆಗಳು ಹಲವು ಸಿಗುತ್ತವೆ. ಕನ್ನಡವನ್ನು ತಾಯಿ ಎಂದು ಕರೆದದ್ದು ಯಾವಾಗ? ಹೋಗಲಿ, ಸಂಸ್ಕೃತದಲ್ಲಾದರೂ ‘ಮಾತೃಭಾಷೆ’ ಎಂಬ ಕಲ್ಪನೆ ಇದೆಯೇ?
‘ಮಾತೃಭಾಷೆ’ ಎಂಬ ನುಡಿಗಟ್ಟು ಮೊದಲು ಬಳಕೆಯಾದದ್ದು ‘ತಾಯಿ’ ಸ್ವರೂಪದ ಚರ್ಚ್‌ನಲ್ಲಿ ಬಳಸುವ ಭಾಷೆ ಎಂಬ ಅರ್ಥದಲ್ಲಿ. ಅದೂ ಸುಮಾರು ಹನ್ನೊಂದನೆಯ ಶತಮಾನದ ಹೊತ್ತಿಗೆ. ಇಂಗ್ಲಿಷಿನಲ್ಲಿ ಇದು ಕಾಣಿಸಿಕೊಂಡದ್ದು ಹದಿನಾಲ್ಕನೆಯ ಶತಮಾನದಲ್ಲಿ. ಹದಿನೆಂಟನೆಯ ಶತಮಾನದಲ್ಲಿ ಇಂಗ್ಲಿಷ್ ನುಡಿಗಟ್ಟಿನ ಸಂಸ್ಕೃತ ಭಾಷಾಂತರ ಬಳಕೆಯಾಯಿತು ಅನ್ನುತ್ತಾರೆ ವಿದ್ವಾಂಸರು. ‘ಮಾತೃಭಾಷೆ’ ಅನ್ನುವಂಥ ರೂಪಕ ಸಂಸ್ಕೃತವೂ ಸೇರಿದಂತೆ ಇತರ ಪ್ರಾಚೀನ ನುಡಿ ದಾಖಲೆಗಳಲ್ಲಿ ಇಲ್ಲವೆನ್ನುತ್ತಾರೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಬಿಎಂಶ್ರೀಯವರೇ ‘ಕನ್ನಡ ತಾಯ ನೋಟ’ ಎಂಬ ಕವಿತೆಯಲ್ಲಿ ನಮ್ಮ ನುಡಿಯನ್ನು ತಾಯಿ ಎಂದು ಕಲ್ಪಿಸಿಕೊಂಡ ಮೊದಲಿಗರಿರಬಹುದು.
ನುಡಿಯನ್ನು ತಾಯಿ ಎಂದು ಕಲ್ಪಿಸಿಕೊಂಡ ಹಾಗೆ ನಾವು ಹುಟ್ಟಿದ ನೆಲವನ್ನೂ ತಾಯಿ ಎಂದು ನೋಡುವ ಪರಿಪಾಠವಿದೆ. ಇದೂ ಕೂಡ ಹೆಚ್ಚು ಚಾಲ್ತಿಗೆ ಬಂದದ್ದು ಹದಿನೆಂಟನೆಯ ಶತಮಾನದ ಕೊನೆಯ ಹೊತ್ತಿಗೆ ಅನ್ನುವ ಮಾತಿದೆ. ಅಂದರೆ ನಾವೊಂದು ರಾಷ್ಟ್ರ, ನಮ್ಮದೊಂದು ಅಸ್ಮಿತೆ ಇದೆ ಅನ್ನುವ ರಾಷ್ಟ್ರೀಯ ಮನೋಧರ್ಮ ಬೆಳೆಯತೊಡಗಿದಾಗ ನುಡಿಯೂ, ನೆಲವೂ ತಾಯಿಯೆಂಬ ರೂಪಕ ಪಡೆದದ್ದು ಹಲವು ಭಾಷೆಗಳಲ್ಲಿ ಕಾಣುತ್ತದೆ. ಮಾತೃಭೂಮಿ, ಮಾತೃಭಾಷೆ ಎನ್ನುವಾಗ ವ್ಯಕ್ತಿಗೂ, ವ್ಯಕ್ತಿಯ ನೆಲ ಮತ್ತು ನುಡಿಗೂ ಸಜೀವ ಸಂಬಂಧ ಕಲ್ಪಿಸುವ ಆಸೆ ಇರುತ್ತದೆ.
ರೂಪಕಗಳೇ ವಿಚಾರವಂತಿಕೆಯ ಸ್ಥಾನ ಪಡೆದುಕೊಂಡಾಗ ತೊಡಕುಗಳು ಹುಟ್ಟುತ್ತವೆ. ತಾಯಿನುಡಿಯೇ ಶಿಕ್ಷಣ ಮಾಧ್ಯಮವಾಗಬೇಕು ಅನ್ನುವ ಮಾತನ್ನು ನೋಡೋಣ. ನಿಜವಾದ ತೊಂದರೆ ಇರುವುದು ‘ಶಿಕ್ಷಣ’ವೆಂಬ ಕಲ್ಪನೆಯಲ್ಲೇ ಹೊರತು ಮಾಧ್ಯಮವಾಗಿ ಬಳಕೆಯಾಗುವ ಭಾಷೆಯಲ್ಲಿ ಅಲ್ಲ. ಕನ್ನಡದ ಮಾಧ್ಯಮದಲ್ಲೇ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬಹು ಸಂಖ್ಯೆಯ ಜನ ಬಳಸುವ ಕನ್ನಡದಿಂದ ದೂರವಾಗುವುದಿಲ್ಲವೇ! ನಿದರ್ಶನಕ್ಕೆ ಈಗ ನೀವು ಓದುತ್ತಿರುವಂಥ ಕನ್ನಡ ವಾಕ್ಯವನ್ನು ಸುಶಿಕ್ಷಿತರಲ್ಲದವರು ಆಡಲು, ಓದಲು ಸಾಧ್ಯವೇ! ಶಿಕ್ಷಣದ ಮೂಲಕ ಪಡೆಯುವ ಕನ್ನಡ, ಕನ್ನಡವನ್ನು ಕಲಿಸುವ ಶಿಕ್ಷಣದ ಕ್ರಮ– ಇವುಗಳಿಂದಾಗಿ ಮಕ್ಕಳಿಗೆ ಕನ್ನಡ ಕಲಿಯುವುದು ಕೂಡ ಮತ್ತೆ ಯಾವುದೇ ಭಾಷೆ ಕಲಿಯುವಷ್ಟೇ ಕಷ್ಟವಾಗುತ್ತದೆ. ‘ಶಿಕ್ಷಣದ ಉದ್ದೇಶವೇ ನಮ್ಮ ಭಾಷೆಯನ್ನೇ ನಮಗೇ ಪರಕೀಯವಾಗಿಸುವುದು’ ಅನ್ನೋಣವೇ?
‘ಶಿಕ್ಷಣವು ಎಲ್ಲರಿಗೂ ದೊರೆಯಬೇಕಾದ ಸರಕು’ ಎಂಬ ಮನೋಧರ್ಮ ಬೆಳೆದದ್ದು ಯಾವಾಗ ಎಂದು ಯೋಚಿಸುವ ವಿದ್ವಾಂಸರು ‘ಕೈಗಾರಿಕೆಗಳ ಮೂಲಕ ಸರಕನ್ನು ಉತ್ಪಾದಿಸುವುದು ಬೆಳವಣಿಗೆಯಾದಾಗ ಶಿಕ್ಷಣವನ್ನೂ ಸರಕು ಎಂದು ಭಾವಿಸುವುದು ಆರಂಭವಾಯಿತು’ ಅನ್ನುತ್ತಾರೆ. ದೇಹ, ಮನಸು, ಬುದ್ಧಿ, ನೀರು, ನೆಲ, ಗಾಳಿ, ಜೊತೆಯ ಮನುಷ್ಯರು ಇಂಥ ಸಜೀವ ಸಂಬಂಧವಿದ್ದ ಭಾಷೆ ಕೂಡ ಉತ್ಪಾದಕರೊಡನೆ, ಗ್ರಾಹಕರೊಡನೆ ‘ಸಂವಹನ’ವನ್ನು ಸಾಧಿಸುವ, ಕಲಿಸಬೇಕಾದ ಸಂಗತಿ ಮಾತ್ರವಾದದ್ದು ಕಳೆದ ಎರಡು ಶತಮಾನಗಳಲ್ಲಿ, ಇಂಥ ಬೆಳವಣಿಗೆ ತೊಡಗಿದ್ದು ಇನ್ನೂ ನೂರು, ನೂರೈವತ್ತು ವರ್ಷದ ಹಿಂದೆ.
ಮಾತೃಭಾಷೆ, ಪ್ರಥಮಭಾಷೆ, ರಾಜ್ಯಭಾಷೆ, ರಾಷ್ಟ್ರಭಾಷೆ, ಜಾಗತಿಕ ಭಾಷೆ ಅನ್ನುವ ಬಗೆಬಗೆಯ ವರ್ಗೀಕರಣವನ್ನೇ ನೋಡಿ. ಮಗು ಹುಟ್ಟಿನಿಂದ ಕಲಿತದ್ದು ತಾಯಿನುಡಿಯೋ, ಮೊದಲು ಕಲಿತದ್ದು ತಾಯಿನುಡಿಯೋ, ಇದನ್ನು ನಿರ್ಧರಿಸುವುದು ರಾಜ್ಯದ ಅಧಿಕಾರ, ರಾಜ್ಯವನ್ನು ನಿಯಂತ್ರಿಸುವ ವ್ಯಾಪಾರೋದ್ಯಮಗಳ ಲಾಭದ ಅಧಿಕಾರ. ವ್ಯಕ್ತಿಗೆ ನಿಜವಾಗಿ ಹಲವು ತಾಯಿನುಡಿಗಳು ಇರಲು ಸಾಧ್ಯ. ಈ ಮಾತಿಗೆ ಬೇಂದ್ರೆ, ಮಾಸ್ತಿ, ಡಿವಿಜಿ ಇವರೆಲ್ಲ ಸುಪ್ರಸಿದ್ಧ ನಿದರ್ಶನಗಳು. ಭಾರತದಂಥ ದೇಶದಲ್ಲಿ ಕನಿಷ್ಠ ನಾಲ್ಕಾದರೂ ನುಡಿಗಳ ತಕ್ಕಮಟ್ಟಿನ ಬಳಕೆ ಇರುವ ಅಸಂಖ್ಯಾತ ಜನ ಇದ್ದಾರೆ.
ಭಾಷೆಯನ್ನು ಕಲಿಸುವುದೂ ಒಂದು ‘ಉದ್ಯೋಗ’ವಾದದ್ದು ತೀರ ಇತ್ತೀಚೆಗೆ, ಭಾಷೆಯೂ ಸರಕು ಅನ್ನುವುದು ನಿರ್ಧಾರವಾದಮೇಲೆ. ಸಮುದಾಯದ ಎಲ್ಲರೂ ಅಕ್ಷರಸ್ಥರಾಗುವುದು ಅಗತ್ಯವಿರದಿದ್ದ ಕಾಲವನ್ನು ದಾಟಿ ಅನೇಕ ಶತಮಾನಗಳೇ ಆಗಿಹೋಗಿವೆ. ಮತ್ತು ತೀರ ಇತ್ತೀಚಿನವರೆಗೆ ಭಾಷೆ ಕಲಿಯುವ ಸಂಗತಿಯಾಗಿತ್ತೇ ಹೊರತು ‘ಸರಿಯಾಗಿ ಕಲಿಸಬೇಕಾದ’ ಸಂಗತಿಯಾಗಿರಲಿಲ್ಲ. ಈಗ ಇರುವ ಸ್ಥಿತಿ ಇದು: ಲೋಕದೊಡನೆ ಸಂವಹನ ಸಾಧಿಸುವುದಕ್ಕೆ ನಮ್ಮ ದೇಹ ಮಾತ್ರ ಸಾಲುವುದಿಲ್ಲ. ಸಂಪರ್ಕಕ್ಕೆ ವಾಹನಗಳು ಬೇಕು. ದೂರವಾಣಿಗಳು ಬೇಕು. ಎಲ್ಲೆಲ್ಲೊ ನಡೆಯುತ್ತಿರುವುದನ್ನು ಇಲ್ಲೇ ಈಗಲೇ ನೋಡಲು ತಂತ್ರಜ್ಞಾನ ಬೇಕು. ಇವೆಲ್ಲ ಸಾಧ್ಯವಾಗುವುದಕ್ಕೆ ಏರ್ಪಾಟು ಮಾಡುವ ವ್ಯವಸ್ಥೆಯೊಡನೆ ಹೊಂದಿಕೊಂಡು ಹೋಗುವುದಕ್ಕೆ, ಬೇಕಾದ್ದನ್ನು ಕೊಂಡು ಅನುಭವಿಸುವುದಕ್ಕೆ ‘ಕಲಿತ’ ತಾಯಿನುಡಿಯನ್ನು ಬಲ್ಲವರು ಬೇಕು.
ದಯವಿಟ್ಟು ಗಮನಿಸಿ, ತಾಯಿನುಡಿಯನ್ನೇ ಶಿಕ್ಷಣದ ಮೂಲಕ ಕಲಿತವರಿಗೂ ಮತ್ತೆ ಯಾವುದೋ ಭಾಷೆಯನ್ನು ಕಲಿತವರಿಗೂ ಮನೋಧರ್ಮದಲ್ಲಿ ವ್ಯತ್ಯಾಸವೇನಿಲ್ಲ. ಕಲಿತವರಿಗೆ ಲೋಕದ ಬಳಕೆಯ ಅಧಿಕಾರ; ಕಲಿಯದವರಿಗೆ ಇಲ್ಲ. ಒಂದಲ್ಲ ಹಲವು ನುಡಿಗಳನ್ನು ಸಹಜವಾಗಿ ತಕ್ಕ ಮಟ್ಟಿಗೆ ಸಮರ್ಥವಾಗಿ ಬಳಸುವ ಸಾಮರ್ಥ್ಯ ಸುಶಿಕ್ಷಿತರಲ್ಲೇ ಕಡಮೆ. ಏಕಭಾಷೆ, ಏಕಸಂಸ್ಕೃತಿ, ಏಕ ಅರ್ಥವ್ಯವಸ್ಥೆಯ ಜನ ಅವರು. ನಮ್ಮ ಜಗತ್ತಿನಲ್ಲಿ ತಾಯಿನುಡಿಗಳು ಇನ್ನೂ ಹಲವು ಉಳಿದಿದ್ದರೆ ಅದಕ್ಕೆ ಕಾರಣ ಶಿಕ್ಷಣ ಪಡೆಯಲಾಗದ ಬಡ ಜನರೇ ಆಗಿದ್ದಾರೆ. ಭಾಷೆಯನ್ನು ಆಡಾಡುತ್ತ ನೋಡು ನೋಡುತ್ತ ಮಾಡಮಾಡುತ್ತ ಕಲಿಯುವ ಸಹಜ ಕಲಿಕೆಗಿಂತ ತಜ್ಞರ ಮೂಲಕ ಭಾಷೆ ಕಲಿಸುವುದು ಅಗತ್ಯವೆಂಬ ಮನೋಧರ್ಮವನ್ನು ಕುರಿತು ಮಾತನಾಡುತ್ತ ಇಡೀ ಜಗತ್ತು ಭಾಷೆಯ ಸಲುವಾಗಿ, ಅಂದರೆ ಭಾಷೆ, ಭಾಷೆಗಳನ್ನು ಕಲಿಸುವುದು, ಪ್ರಸರಿಸುವುದು, ಪ್ರಚಾರಮಾಡುವುದು,
ವಿವಿಧ ಮಾಧ್ಯಮಗಳಲ್ಲಿ ಬಳಸುವುದು ಇತ್ಯಾದಿ ಎಲ್ಲ ಕೆಲಸಗಳ ಸಲುವಾಗಿ, ಮಾಡುವ ಖರ್ಚು ಪೆಟ್ರೋಲು ಡೀಸಲುಗಳಿಗೆ ಮಾಡುವ ಖರ್ಚಿಗಿಂತ ಹೆಚ್ಚು ಅನ್ನುವ ಲೆಕ್ಕ ಕೂಡ ಹಾಕಿದ್ದಾರೆ. ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ ಎರಡು ಬಹುದೊಡ್ಡ ಮಾರುಕಟ್ಟೆ ಮೌಲ್ಯದ ಸರಕುಗಳಲ್ಲಿ ಒಂದು ‘ಪದಗಳು’. ಏನನ್ನು ಹೇಳಬೇಕು, ಯಾರು ಹೇಳಬೇಕು, ಯಾವಾಗ ಹೇಳಬೇಕು, ಯಾವ ಥರದ ಜನರನ್ನು ಉದ್ದೇಶಿಸಿ ಏನನ್ನು ಹೇಳಬೇಕು ಇವೆಲ್ಲವೂ ರಾಜಕೀಯದ, ಹಣಕಾಸಿನ ಹಿತಾಸಕ್ತಿಗಳಿಂದ ನಿರ್ಧಾರವಾಗುತ್ತಿವೆ. ಆಡುವ ಮಾತಿಗೆ ಬೆಲೆ ಹೆಚ್ಚಿದಷ್ಟೂ ಅದರ ಪ್ರತಿಧ್ವನಿ ಎಲ್ಲೆಲ್ಲೂ ಮೊಳಗಬೇಕೆಂಬ ದುರಾಸೆ ಕೂಡ ಹುಟ್ಟುತ್ತದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳೆಲ್ಲವೂ ಒಂದೇ ಬಗೆಯ ಮಾತನ್ನು ಉತ್ಪಾದಿಸುವ ತಾಣಗಳಾಗುತ್ತವೆ ಅಲ್ಲವೇ! ಅಧಿಕಾರ ಬೇಕಾಗಿದ್ದರೆ ಮೊದಲು ಭಾಷೆಯ ಮೇಲೆ ಅಧಿಕಾರ ಸಾಧಿಸಬೇಕು.
ಬೇರೆ ಥರದ ಬದುಕು ಕಟ್ಟಿಕೊಳ್ಳುವುದಕ್ಕೂ ಭಾಷೆಯೇ ಬೇಕು. ತಾಯಿನುಡಿಯನ್ನು ಕೆಲವರು ‘ವರ್ನಾಕ್ಯುಲರ್’ ಅನ್ನುತ್ತಾರೆ. ಆ ಮಾತು ಸುಮಾರಾಗಿ ‘ದೇಶ್ಯ’, ‘ದೇಸಿ’ ಅನ್ನುವ ಅರ್ಥದ್ದು. ‘‘ಆರ್ಥಿಕ ವಿನಿಮಯದ ಆಲೋಚನೆಯಾಗಲೀ ಉದ್ದೇಶವಾಗಲೀ ಇರದೆ ನಾವು ಮಾಡುವ ಚಟುವಟಿಕೆಗಳು, ನಮ್ಮ ದಿನ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಯಾವುದೇ ಬಗೆಯ ಅಧಿಕಾರದ ನಿಯಂತ್ರಣದ ಆಚೆಗೆ ಇರುವ ಕ್ರಿಯೆಗಳಲ್ಲಿ ತೊಡಗುವುದು ಇವನ್ನು ‘ದೇಸೀತನ’ ಅನ್ನಬಹುದು’’ ಎಂಬ ಕುತೂಹಲಕರ ಮಾತೊಂದನ್ನು ಎಲ್ಲೋ ಓದಿದ ನೆನಪಾಗುತ್ತಿದೆ. ಅಂಥ ಚಟುವಟಿಕೆಗಳನ್ನು ರೂಪಿಸುವ, ನಿಜಗೊಳಿಸುವ, ವಿವರಿಸುವ ಮಾತು ತಾಯಿನುಡಿ. ಅಂಥ ನುಡಿಯ ಮಕ್ಕಳಾದರೆ ನಾವು ನುಡಿತಾಯ ಮಕ್ಕಳು.
ಆದರೆ, ನೋಡಿ. ತಾಯನ್ನು ತೊರೆಯದೆ ನಾವು ನಾವಾಗುವುದಿಲ್ಲ. ತಂದೆ ತಾಯಿಯರಿಗಿಂತ ಭಿನ್ನವಾಗದೆ ನಮ್ಮ ವ್ಯಕ್ತಿತ್ವ ಬೆಳೆಯುವುದಿಲ್ಲ. ತಾಯಹಾಲ ಕುಡಿದು ಲಲ್ಲೆಮಾತು ಆಡುವುದು ಎಷ್ಟೇ ಹಿತವೆಂದರೂ ಕೆಲವು ಕಾಲದ ಮಟ್ಟಿಗೆ ಮಾತ್ರ ಹಾಗೆ. ಬೇರೆ ಮೈ, ಬೇರೆ ಮನಸ್ಸು, ಬೇರೆ ಮಾತುಗಳು ನಮ್ಮವಾಗದೆ ಬೆಳವಣಿಗೆ ಸಾಧ್ಯವಾಗದು. ನಾವಲ್ಲದ ಅನ್ಯದ, ನಮ್ಮ ನುಡಿಯದಲ್ಲದ ಬೇರೆಯ ನುಡಿ ತೋರುವ ಲೋಕದ, ಒಡನಾಟ ತೀರ ಮುಖ್ಯ. ಹಾಗೆ ಆಗುವುದಕ್ಕೆ ಎಲ್ಲ ನುಡಿಗಳನ್ನೂ ತಾಯಂದಿರೆಂದೇ ನೋಡುವುದು ಒಳ್ಳೆಯದು. ಬೇಂದ್ರೆಯವರು ತಾನು ಹೆತ್ತ ತಾಯಿಯ, ಧಾರವಾಡದ, ಕರ್ನಾಟಕದ, ಭಾರತದ, ವಿಶ್ವಮಾತೆಯ ಮಗ ಅಂದುಕೊಂಡರಲ್ಲ ಹಾಗೆ. ಇದು ವಾಣಿಜ್ಯದ, ಕೊಡುವ, ಕೊಳ್ಳುವ ಮಾತಲ್ಲ.
ನುಡಿಗಳು ಕಟ್ಟುವ ಬೇರೆ ಬೇರೆ ಲೋಕಗಳೊಡನೆ ಒಡನಾಡುವ ಸ್ವಸ್ಥವಾದ ಕ್ರಮ. ಅದಕ್ಕೆ ಕೇವಲ ‘ಸಂವಹನ’ಶೀಲ ಭಾಷೆಯಲ್ಲ– ಬದುಕಿನ ಸಂದಿಗ್ಧಗಳನ್ನು ಕಾಣಿಸುವ, ಕಾಣಿಸಿ ಅಂಜಿಸುವ, ದಾಟಿಸುವ, ದಾಟಿದೆವೆನಿಸಿ ನೆಮ್ಮದಿಯ ಭ್ರಮೆ ಕೊಡುವ ಭಾಷೆಯೇ ಬೇಕು. ಭಾಷೆ ಎಂದರೆ ಪದಗಳು ಮತ್ತು ಪದಗಳಾಗಲೊಲ್ಲದ ಸಂಗತಿಗಳ ಸಂಬಂಧವನ್ನು ಅರಿಯುವುದು ಎಂಬ ವಿವೇಕದ ನುಡಿಯೊಂದು ನೆನಪಾಗುತ್ತಿದೆ. ನುಡಿತಾಯನ್ನು ನೆನೆವ ಈ ದಿನ ಮತ್ತೇನಲ್ಲದಿದ್ದರೂ ನಮ್ಮ ಶಿಕ್ಷಣದಲ್ಲಿ ‘ಸಂವಹನದ ಭಾಷೆಯಲ್ಲ, ಸಂಬಂಧದ ಭಾಷೆ’ ಕಲಿಯುವುದಕ್ಕೆ ಸಾಧ್ಯವಾಗಲಿ ಎಂದು ಹಂಬಲಿಸೋಣ. ಅಂಥ ಸಾಧ್ಯತೆ ಇರುವ ಸಾಹಿತ್ಯಕ್ಕೆ ಮನುಷ್ಯನ ಬದುಕನ್ನೇ ತಿದ್ದುವ ಭಾಷೆಯ ತಿಳಿವಳಿಕೆಗೆ ಹೆಚ್ಚಿನ ಅವಕಾಶ ದೊರೆಯಲಿ ಎಂದು ಹಾರೈಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.