ADVERTISEMENT

ನೂರು ದಳದ ಮಲ್ಲಿಗೆ: ಕೆ.ಎಸ್‌.ನರಸಿಂಹಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2015, 19:30 IST
Last Updated 24 ಜನವರಿ 2015, 19:30 IST

ಕನ್ನಡ ಸಾರಸ್ವತಲೋಕದಲ್ಲಿ ಮಲ್ಲಿಗೆ ಬಳ್ಳಿಯನ್ನು ನೆಟ್ಟ ಕವಿ ಕೆ.ಎಸ್‌. ನರಸಿಂಹಸ್ವಾಮಿ (ಜ.26, 1915- ಡಿ. 28, 2003). ಆ ಬಳ್ಳಿಯಿಂದ ಕನ್ನಡದ ರಸಿಕ ಮನಸ್ಸುಗಳು ನಿರಂತರವಾಗಿ ಮಲ್ಲಿಗೆ ಹಂಬುಗಳನ್ನು ಕೊಯ್ದು, ತಂತಮ್ಮ ಎದೆಯೊಳಗೆ ಊರಿಕೊಂಡು ನೀರೆರೆಯುತ್ತಿದ್ದಾರೆ. ಈ ಮಲ್ಲಿಗೆ ಸಖ್ಯ ಅದೆಷ್ಟೋ ಜನರ ಪ್ರೇಮದ ರಮ್ಯಕ್ಷಣಗಳಿಗೆ ಹಾಗೂ ದಾಂಪತ್ಯದ ಅಮೃತಕ್ಷಣಗಳಿಗೆ ಒದಗಿಬಂದಿದೆ. ‘ಮೈಸೂರ ಮಲ್ಲಿಗೆ’ ಕವಿತೆಗಳ ಮೂಲಕ ಹೊಸ ‘ಜಾನಪದ’ ಸೃಷ್ಟಿಸಿದ ಕವಿಯ ಜನ್ಮಶತಾಬ್ದಿ ವರ್ಷವಿದು. ನಾಳೆಗೆ (ಜ. 26) ಕವಿ ಹುಟ್ಟಿ ನೂರು ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಕವಿಯನ್ನು ನೆನಪಿಸಿಕೊಳ್ಳುವ ನಾಲ್ಕು ವಿಶಿಷ್ಟ ನೋಟಗಳು ಇಲ್ಲಿವೆ.

ಕೆಎಸ್‌ನ- ಮರುಸೃಷ್ಟಿಯ ಸವಾಲು
ಕೆ.ಎಸ್.ನ ನಮ್ಮ ಸಾಮುದಾಯಿಕ ಪ್ರಜ್ಞೆಯಲ್ಲಿ ಊರಿಕೊಂಡಿರುವುದು ಅವರ ‘ಮೈಸೂರ ಮಲ್ಲಿಗೆ’ ಕವನಗಳಿಂದ. ಅದು ಕ್ಯಾಸೆಟ್ಟಾಯಿತು. ಸಿನಿಮಾ ಆಯಿತು. ಅದೇ ವೇಳೆಗೆ ಗಂಭೀರ ಸಾಹಿತ್ಯ  ವಲಯದಲ್ಲಿ ಅವರು ರಮ್ಯದ ಪೊರೆ ಕಳಚಿಕೊಂಡು ಗಂಭೀರ ಕವಿಯಾದ ಅವಸ್ಥ್ಯಾಂತರದ ಬಗ್ಗೆಯೂ ಸಾಕಷ್ಟು ಅಧ್ಯಯನ ನಡೆದಿದೆ. ರೊಮಾನ್ಸ್ ಮತ್ತು ಗಂಭೀರ ಸಾಮಾಜಿಕ ಆಸ್ಥೆ ಎರಡೂ ಪೇಲವ ಆಗುತ್ತಿರುವ ಈ ದಿನಗಳಲ್ಲಿ ಕೆ.ಎಸ್. ನರಸಿಂಹಸ್ವಾಮಿ ಏನನ್ನಾದರೂ ಪ್ರತಿನಿಧಿಸುತ್ತಾರಾ?

ಲ್ಯಾಟಿನ್ ಅಮೆರಿಕನ್ ಕಲಾವಿದವನೊಬ್ಬ ಪ್ರಕೃತಿ ಚಿತ್ರಗಳನ್ನು ಬರೆದು ಮೂಲೆಗುಂಪಾಗಿ ಮತ್ತೆ ಮರುಹುಟ್ಟು ಪಡೆದದ್ದರ ಬಗ್ಗೆ ಎಡುವರ್ಡೋ ಗೆಲಿಯಾನೋ ಬರೆಯುತ್ತಾನೆ, ಈ ಜಗತ್ತು ಹೇಗಿರಬೇಕೆಂಬ ಬಗ್ಗೆ ಹ1 ಬಿಡದ ಯತ್ನದ ಸಾದರಪಡಿಸುವಿಕೆ ಅದು ಅಂತ.
ಕೆಎಎಸ್‌ನ ಕಟ್ಟಿಕೊಡುವ ರೊಮ್ಯಾಂಟಿಕ್ ಚಿತ್ರಗಳ ಭಿತ್ತಿಯನ್ನು ಗಮನಿಸಬೇಕು. ಅದು ಚಾರಿತ್ರಿಕವಾಗಿ ಎಷ್ಟು ನಿಜ ಅನ್ನುವುದು ಸಂಶಯಾಸ್ಪದ. ಆದರೆ ಅದು ಕಟ್ಟಿಕೊಡುವ ಪರ್ಯಾಯ ಜಗತ್ತು ಗಮನಿಸಬೇಕು. Everything you can imagine is real ಎಂದು ಪಾಬ್ಲೊ ಪಿಕಾಸೋ ಹೇಳಿದ ಮಾತಿದೆ. ಸೃಜನಶೀಲ ಮರುಸೃಷ್ಟಿಯ ಶಕ್ತಿ ಬಗ್ಗೆ ಆತ ಹೇಳಿದ್ದು.

ಕೆಎಎಸ್‌ನ ಕಟ್ಟಿಕೊಡುವ ಜಗತ್ತಿನಲ್ಲಿ ಒಂದು ಮನುಷ್ಯ ಸಂಬಂಧ ಇದೆ. ನವಿರು ಆತಂಕ ಇದೆ, ಪುಟ್ಟ ವಿಷಾದ ಇದೆ. ಕಾಲದ/ಆಧುನಿಕತೆಯ ಓಘದಲ್ಲಿ ಹಠಾತ್ತನೆ ಸ್ತಬ್ಧವಾದ ಗಳಿಗೆಯೊಂದರಲ್ಲಿ ನಡೆಸುವ ಲೋಕ ವ್ಯಾಪಾರ ಅದು. ಚಿತ್ರದುರ್ಗದ ರೈಲು ಓಡೋಡಿ ಬರುವ ಕಾಲ ಅದು. ಬಳೆಗಾರ ಚೆನ್ನಯ್ಯ ಬರುವ ಕಾಲ ಅದು. ಅಷ್ಟೇಕೆ ಅಕ್ಕಿಯಾರಿಸುತ್ತಿದ್ದ ಘಟ್ಟ ಅದು. ಅದಕ್ಕೊಂದು ಅಸಹಾಯಕತೆ ಇದೆ. ವ್ಯಕ್ತಿಗತವಾಗಿ ಅಲ್ಲಿ ಇವಿಲ್ ಇಲ್ಲದಿದ್ದರೂ, ಕಾಲದ ನಿಷ್ಕರುಣ ನಡೆ ಅದಕ್ಕಿಂತಲೂ ಶಕ್ತಿಯುತ.

ನರಸಿಂಹಸ್ವಾಮಿ ಅವರಿಗೆ ಕನಸಲ್ಲೂ ಹೆಂಡತಿಯೇ ಬರುತ್ತಾಳೆ ಎಂದು ಪುತಿನ ತಮಾಷೆ ಮಾಡಿದ್ದರು ಎಂಬ ದಂತ ಕಥೆ ಇದೆ. ಪುತಿನ ಬಲು ಕಠೋರ ಬೌದ್ಧಿಕ ಕಾಣ್ಕೆ ಇದ್ದವರು. ಆ ಕಾಣ್ಕೆಗೆ  ನಿರ್ನಾಮ ಆಗುವ ಸ್ವಅರಿವು ಇದೆ. ಕೆಎಎಸ್‌ನ ಈ ಅರಿವನ್ನು ಅಷ್ಟಿಷ್ಟು ವ್ಯಂಗ್ಯ ವಿಷಾದಗಳಲ್ಲಿ ತಮ್ಮ ನವೋದಯೋತ್ತರ ಕವನಗಳಲ್ಲಿ ಕಟ್ಟಿಕೊಡುತ್ತಾರೆ. ಆದರೆ ಈಗ ಅದು ಅಷ್ಟೇನು ತೀವ್ರ ಅನ್ನಿಸುವುದಿಲ್ಲ. ಆದರೆ ‘ಮೈಸೂರ ಮಲ್ಲಿಗೆ’ಯ ಸವಾಲಿನ ಶಕ್ತಿ ತೀವ್ರವಾದದ್ದು. ನಮ್ಮ ಸಂಸ್ಕೃತಿಯ ಮಾನವೀಯ ಸಂಬಂಧಗಳ ಸಂಭ್ರಮದ ಕಲ್ಪಕತೆಯ ರೂಪಕ ಅದು.

ಇಂದು ‘ನಮ್ಮ ಸಂಸ್ಕೃತಿ’ ಎಂಬ ಕಿರುಚಾಟದಲ್ಲಿ ಮುನ್ನೆಲೆಗೆ ಬರುತ್ತಿರುವ ಯಜಮಾನ ಸಂಸ್ಕೃತಿಯ ರೂಪಕಗಳನ್ನು ನೋಡಿದರೆ, ಕೆಎಎಸ್‌ನ ನೋಡುವ/ ಸಾದರ ಪಡಿಸುವ ಸಂಸ್ಕೃತಿಯ ಚಿತ್ರಗಳು ಈ ರೂಕ್ಷ ಭೂತಗಳಿಗೆ ಸಡ್ಡು ಹೊಡೆಯುವಷ್ಟು ಶಕ್ತಿಶಾಲಿಯಾಗಿವೆ. ನಾವು ಬಯಸುವ ಆದರೆ ಇನ್ನು ದಕ್ಕಲಾರದ ಬದುಕಿನ ತುಣುಕು ಅದು; ನಿಜ.

ನಾನು ದೊಡ್ಡಬಳ್ಳಾಪುರದಲ್ಲಿದ್ದಾಗ ಕೆಎಎಸ್‌ನ ದಂಪತಿಗಳನ್ನು ಕಾಲೇಜಿಗೆ ಕರೆಸಿದ್ದೆವು. ನಾನು ಅವರ ಮನೆಗೆ ಹೋದಾಗ ವೆಂಕಮ್ಮನವರು ಅಕ್ಕಿ ಆರಿಸುತ್ತಿದ್ದರು. ‘ಕವಿಗಳನ್ನು ನೋಡೋಕೋ?’ ಎಂದು ಅಭಿಮಾನ, ವ್ಯಂಗ್ಯಮಿಶ್ರಿತ ದನಿಯಲ್ಲಿ ಕೇಳಿದ್ದರು. ‘ನೀವೂ ಬರಬೇಕು...’ ಅಂದಾಗ ಆ ತಾಯಿ, ‘ಘಾಟಿ ದೇವಸ್ಥಾನಕ್ಕೆ ಕರ್ಕೊಂಡೋಗ್ತೀರಾ..?’ ಎಂದು ಕೇಳಿದ್ದರು. ಕಾಲೇಜಿಗೆ ಬರುವ ಮೊದಲು ಆ ದೇವಸ್ಥಾನಕ್ಕೆ ಹೋಗಿಯೇ ನಾವು ಬಂದದ್ದು. ಆಗ, ಅಲ್ಲಿ ಸುಂದರ ಮೆಟ್ಟಿಲು ಮೆಟ್ಟಿಲು ಸೋಪಾನಗಳಿದ್ದವು. ಬಲು ಸರಳ ಸುಂದರವಾಗಿತ್ತು ಆ ದೇವಸ್ಥಾನ. ಕೆಎಎಸ್‌ನ ಅಲ್ಲಿನ ಸೋಪಾನದಲ್ಲಿ ಕೂತಿದ್ದರೇ ವಿನಃ ದೇವಸ್ಥಾನದ ಒಳಗೆ ಬಂದಿರಲಿಲ್ಲ. ‘ಇದೆಲ್ಲಾ ಇನ್ನು ಎಷ್ಟು ದಿನ..?’ ಎಂದು ಹೇಳಿ ಎದ್ದು ಬಂದು ಕಾರಲ್ಲಿ ಕೂತಿದ್ದರು, ಮಡದಿಯ ಕೈಹಿಡಿದು.

ಹೊಸದೇನೋ ರೂಕ್ಷವಾದದ್ದು ಹಳೆಯ ನವಿರು ಅಸಹಾಯಕ ಜಗತ್ತನ್ನು ಮೂಲೆಗುಂಪು ಮಾಡುವ ಕ್ರೌರ್ಯವನ್ನೇ ಸತ್ಯಜಿತ್ ರೇ  ಅನನ್ಯವಾಗಿ ತೋರಿಸಿದ್ದು. ಕೆಎಸ್‌ನ ಕಟ್ಟಿಕೊಟ್ಟ ಭಾವಪ್ರಪಂಚ ಇಂಥಾದ್ದು. ಮೌಲಿಕವಾಗಿ ವರ್ತಮಾನದ ಪ್ರಸ್ತಾವಗಳನ್ನು ಅಳೆವ ಶಕ್ತಿ ಅದಕ್ಕಿದೆ. ಗಾಂಧಿಯೂ ಇಂದು ಸವಾಲಾಗಿರುವುದು ಸಾಧ್ಯ, ಪರ್ಯಾಯ ಎಂಬ ಕಾರಣಕ್ಕಲ್ಲ– ಐಬನ್ನು ಎತ್ತಿ ತೋರುವ ನಿಕಷವಾಗಿ.
–ಕೆ.ಪಿ. ಸುರೇಶ

ಎಂದೂ ಮರೆಯದ ಕವಿ
ಕೆ.ಎಸ್. ನರಸಿಂಹಸ್ವಾಮಿ ಅವರು ನಾನು ತುಂಬ ಇಷ್ಟಪಟ್ಟ ಕವಿ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರ ಮಾತುಗಳನ್ನು ಕೇಳಿದ್ದೇನೆ. ‘ನಾನು ಗೀಚಿದ ಅಕ್ಷರಗಳೆಲ್ಲ ನನ್ನ ಅನುಭವಗಳೇ ಆಗಿವೆ. ಅವನ್ನೇ ಪದ್ಯ ರೂಪದಲ್ಲಿ ನಿಮ್ಮೆದುರು ಇಟ್ಟಿದ್ದೇನೆ’ ಎನ್ನುತ್ತಿದ್ದರು. ‘ಮೊದಲ ದಿನ ಮೌನ’, ‘ತೌರ ಸುಖದೊಳಗೆನ್ನ’– ಇವೆಲ್ಲವೂ ಅವರ ಅನುಭವಗಳೇ ಅಂತೆ. ‘ಈ ಹಾಡು ಹೀಗೇ ಬರಬೇಕು. ಹೀಗೆ ಬಂದ್ರೇ ಚೆನ್ನಾಗಿರುತ್ತದೆ’ ಎನ್ನುತ್ತಿದ್ದರು. ತನ್ನ ಕವಿತೆಯೊಂದು ಹೇಗೆ ಧ್ವನಿತವಾಗಬೇಕು ಎಂಬ ಕಲ್ಪನೆ ಅವರಿಗಿತ್ತು. ನನ್ನ ಪ್ರಕಾರ ಅವರು ನಿಜಕ್ಕೂ ‘ಅನುಭಾವಿ ಕವಿ’.

ADVERTISEMENT

‘ಒಂದು ಹುಡುಗಿಯನ್ನು ಪ್ರೀತಿಸಬೇಕಾದರೆ ಸೌಂದರ್ಯವೇ ಮುಖ್ಯವಲ್ಲ. ಹೃದಯವಂತಿಕೆ ಮಾತ್ರ ಲೆಕ್ಕಕ್ಕೆ ಬರುವುದು. ಹಾಗಾಗಿಯೇ ನಾನು ನನ್ನ ಹೆಂಡತಿಯನ್ನು ಅಷ್ಟು ಅಗಾಧವಾಗಿ ಪ್ರೀತಿಸುತ್ತೇನೆ’ ಎಂದು ಅವರು ಹಲವು ಬಾರಿ ಹೇಳಿದ್ದರು. ಅವರ ಪದ್ಯಗಳನ್ನು ಹಾಡುವಾಗ ರಾಗಗಳಷ್ಟೇ ಅಲ್ಲದೇ ಭಾವಗಳೂ ನನ್ನ ಮನಸ್ಸಿನಲ್ಲಿ ಸಂಯೋಜಿತವಾಗುತ್ತಿದ್ದವು. ಅಷ್ಟು ಅದ್ಭುತವಾದ ಅನುಭವಗಳು ಅವರ ಕವನದಲ್ಲಿ ದಕ್ಕುತ್ತಿದ್ದವು. ಆಪ್ತ ಸಾಲುಗಳು ಅವರದ್ದು. ಅವರ ಎಲ್ಲ ಕವಿತೆಗಳನ್ನೂ ಹಾಡಿಬಿಟ್ಟಿದ್ದೇನೆ. ಬಹುಶಃ ಯಾವುದನ್ನೂ ಉಳಿಸಿಲ್ಲ ಎನಿಸುತ್ತದೆ. ‘ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ’ ಹಾಗೂ ‘ದೀಪವು ನಿನ್ನದೆ ಗಾಳಿಯು ನಿನ್ನದೆ’ ಹಾಡುಗಳು ನನಗೆ ತುಂಬ ಇಷ್ಟ.

ನರಸಿಂಹಸ್ವಾಮಿ ಅವರನ್ನು ತುಂಬ ಸಲ ಭೇಟಿ ಮಾಡಿದ್ದೇನೆ. ಸಾಕಷ್ಟು ಬಾರಿ ಅವರ ಮನೆಗೆ ಹೋಗಿದ್ದೆ. ಎಷ್ಟೆಲ್ಲ ಚರ್ಚೆ ಮಾಡುತ್ತಿದ್ದೆವು. ತುಂಬ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದರು. ‘ರತ್ನಮಾಲೆ’ ಎಂದೇ ನನ್ನನ್ನು ಅವರು ಕರೆಯುತ್ತಿದ್ದುದು. ಗಾಯಕರು ಕವಿಗಳನ್ನು ಭೇಟಿ ಮಾಡುವ ಆ ಕಾಲ ಸ್ಮರಣೀಯ. ಮಧ್ಯಾಹ್ನ ಊಟವಾದ ನಂತರ ಮನೆಯ ಮುಂಬಾಗಿಲಲ್ಲಿ ಎರಡು ಬೆತ್ತದ ಕುರ್ಚಿ ಹಾಕಿಕೊಂಡು ಪತ್ನಿ ವೆಂಕಮ್ಮ ಅವರ ಜೊತೆ ಕೂರುತ್ತಿದ್ದರು. ಸರಳ ವ್ಯಕ್ತಿ. ವ್ಯಾಪಾರಿ ವಿಚಾರಗಳೆಲ್ಲ ಅವರಿಗೆ ಗೊತ್ತೇ ಆಗುತ್ತಿರಲಿಲ್ಲ. ಯಾವುದಾದರೂ ಕಾರ್ಯಕ್ರಮಕ್ಕೆ ನೀವು ಬರಬೇಕು ಎಂದರೆ ಬಂದುಬಿಡೋರು.

‘ಸುಗಮ ಸಂಗೀತ ಪರಿಷತ್ತು’ ನಡೆಸಿದ ಪ್ರಪ್ರಥಮ ಸುಗಮ ಸಂಗೀತ ಸಮ್ಮೇಳನ ನಡೆದಿದ್ದು ಮಂಡ್ಯದಲ್ಲಿ. ನರಸಿಂಹಸ್ವಾಮಿಗಳೇ ಅದರ ಅಧ್ಯಕ್ಷರು. ಆಗ ತಮ್ಮ ಕವಿತೆಗಳ ಕುರಿತು ಮಾತನಾಡುತ್ತ, ‘ನಾನು ಬರೆದಿರುವುದಕ್ಕಿಂತ ನನ್ನ ಕವಿತೆಗಳು ತುಂಬ ಮಧುರವಾಗಿ ನನಗೆ–ನಿಮಗೆ ಇಂದು ಕೇಳುತ್ತಿದ್ದರೆ ಅದು ರತ್ನಮಾಲಾ ಕಂಠದಿಂದಾಗಿ ಮತ್ತು ಅದ್ಭುತ ಸಂಯೋಜಕ ಸಿ. ಅಶ್ವಥ್ ಅವರ ಚಮತ್ಕಾರದಿಂದ ಮಾತ್ರ’ ಎಂದಿದ್ದರು. ಅವರ ಹಾಡುಗಳನ್ನು ಹಾಡಿ ಅವರಿಂದಲೇ ಇಂಥ ಹೊಗಳಿಕೆ ಮಾತುಗಳನ್ನು ಪಡೆದವಳಿಗೆ ಇನ್ನೆಂಥ ಪ್ರಶಸ್ತಿ ಬೇಕು?
–ರತ್ನಮಾಲಾ ಪ್ರಕಾಶ್ನಿ (ರೂಪಣೆ: ಗಣೇಶ ವೈದ್ಯ)

ಬಳ್ಳಿಗಳಿಲ್ಲದ ಕಾಲದಲ್ಲಿ ಮಲ್ಲಿಗೆಮಾಲೆ
ಆಫೀಸಿನ ಗೆಳತಿಯೊಂದಿಗೆ ಹರಟುತ್ತಿರುವಾಗ ಮಾತಿನ ನಡುವೆ ಹೇಳಿದಳು– ‘ನನ್ನ ಗಂಡ ಮೊದಲ ಸಲ ನನ್ನನ್ನು ಬಿಟ್ಟು ಅಮೆರಿಕಕ್ಕೆ ಹೊರಟಾಗ, ಏರ್‌ಫೋರ್ಟಿನವರೆಗೆ ಹೋಗಿ ತಬ್ಬಿ, ಅತ್ತು ಬೀಳ್ಕೊಟ್ಟಿದ್ದೆ. ಎರಡನೆಯ ಬಾರಿ ಹೊರಟಾಗ, ಮೆಟ್ಟಿಲಿಳಿದು ಟ್ಯಾಕ್ಸಿಯ ಬಾಗಿಲವರೆಗೆ ಬಂದು ಕೈ ಬೀಸಿ ಮನೆಗೆ ಮರಳಿದ್ದೆ. ಮೂರನೆಯ ಬಾರಿ ಹೊರಟಾಗ, ಅದೆಷ್ಟು ಒಗ್ಗಿಹೋಗಿದ್ದೆನೆಂದರೆ, ಅಡುಗೆ ಮನೆ ಒಳಗಿಂದಲೇ ಬೈ ಹೇಳಿ... ಬಾಗಿಲು ಸರಿಯಾಗಿ ಹಾಕಿಕೊಂಡು ಹೋಗು ಅಂದಿದ್ದೆ’ ಎಂದಳು. ನನಗಾಗ ಥಟ್ಟನೆ ನೆನಪಾದದ್ದು ನರಸಿಂಹಸ್ವಾಮಿ ಅವರ ‘ತಿಂಗಳಾಯಿತೆ?’ ಪದ್ಯ.

ಅದೊಂದು ಸರಳ ಕವಿತೆ. ದೂರದೂರಿಗೆ ಹೋಗುತ್ತಿದ್ದೇನೆ, ಒಂದು ತಿಂಗಳ ನಂತರ ಮರಳುತ್ತೇನೆಂದು ಕವಿ ಮನೆಯಿಂದ ಹೊರಡುತ್ತಾನೆ. ಹೆಜ್ಜೆ ಮುಂದಿಡಲಾರದೆ, ಹೆಂಡತಿಯನ್ನು ಬಿಟ್ಟು ಹೋಗಲು ಮನಸ್ಸು ಬಾರದೆ, ಅಲ್ಲಲ್ಲಿ ನಿಂತು ಹಿಂದಿರುಗಿ ಹೆಂಡತಿಯ ಮುಖ ನೋಡುತ್ತ ವಿರಹ ತಾಪದಲ್ಲಿ ರೇಲ್ವೇ ನಿಲ್ದಾಣದ ಕಡೆ ಹೆಜ್ಜೆ ಹಾಕುತ್ತಾನೆ. ದಾರಿಯಲ್ಲಿ ಕಂಡ ಒಬ್ಬ ಹಣ್ಣು ಮಾರುವವನು, ‘ಬಂಡಿ ಆಗಲೇ ಹೊರಟುಹೋಯಿತು’ ಎಂದಾಗ ಅವನ ಸಂತೋಷ ಹೇಳತೀರದು. ಉಲ್ಲಾಸದಿಂದ ಮನೆಗೆ ಮರಳುತ್ತಾನೆ. ಮನೆ ಬಾಗಿಲು ತೆರೆದ ಹೆಂಡತಿ, ‘ತಿಂಗಳಾಯಿತೆ?’ ಎಂದು ರತಿಕುಹಕದಲ್ಲಿ ಕೇಳುವಲ್ಲಿಗೆ ಕವಿತೆ ಮುಗಿಯುತ್ತದೆ.

ಗಳಿಗೆಗಳು ಉರುಳುವುದರೊಳಗೆ ಗಂಡ–ಹೆಂಡಿರ ಊರುಗಳು ಬದಲಾಗುವುದು ಸಾಮಾನ್ಯವಾಗಿರುವ ಕಾಲದಲ್ಲಿ ನರಸಿಂಹ ಸ್ವಾಮಿಯವರ ‘ತಿಂಗಳಾಯಿತೆ?’ಯಂಥ ಸರಳ ಸಾಂಸಾರಿಕ ಕವಿತೆಗಳು ಹೇಗೆ ಸಲ್ಲುತ್ತವೆ? ಸಂಸ್ಕೃತಿ, ಜೀವನಧರ್ಮ, ಸಂಬಂಧಗಳ ಸ್ವರೂಪ, ಸಾಮಾಜಿಕ ಮೌಲ್ಯಗಳು ಬದಲಾಗುತ್ತಿರುವ ಕಾಲಕ್ಕೆ ಒಂದು ಕವಿತೆ, ಒಬ್ಬ ಕವಿ ಹೇಗೆ ಸಲ್ಲುತ್ತಾನೆ? ಬಳ್ಳಿಗಳೇ ಇಲ್ಲದ ಕಾಲದಲ್ಲಿ ಮಲ್ಲಿಗೆಮಾಲೆಯನ್ನು ಔಟ್‌ಡೇಟಡ್ ಎಂದು ಸಾರಾಸಗಟಾಗಿ ತಿರಸ್ಕರಿಸಬಹುದೇ? ಸಂಜೆಯಾಗುವ ಮುನ್ನ ಕತ್ತಲಾಗುವ ಕಾಲದಲ್ಲಿ ಸಂಜೆಗೆಂಪಿಗೆ ಮುನ್ನಡೆಯದೆ ನಿಂತವರೆಷ್ಟು? ಮಲ್ಲಿಗೆಯ ಕಂಪಿಗೆ ಮನಸೋತವರೆಷ್ಟು? ಗೆಜ್ಜೆಯಿಂಪನ್ನು ಹಿಂಬಾಲಿಸಿದವರೆಷ್ಟು? ಇಬ್ಬರು ದುಡಿದರೂ ಕೋಟಿ ಸಂಪಾದಿಸಲಾಗದ ಕಾಲದಲ್ಲಿ ಕೆಲಸಕ್ಕೆ ಹೋಗದೆ ಮನೆಯೊಳಗಿರುವ ಹೆಂಡತಿಯನ್ನು ಬಯಸುವವರೆಷ್ಟು?

ಮತ್ತೊಬ್ಬರು ಬರೆದಿದ್ದೆಲ್ಲವೂ ನಮ್ಮ ಅನುಭವದ ಪರಿಧಿಯೊಳಗೇ ದಕ್ಕಬೇಕು; ನಮ್ಮದೆನ್ನಿಸಬೇಕು ಅನ್ನುವ ಅಹಂಕಾರ ನರಸಿಂಹ ಸ್ವಾಮಿಯವರಂಥ ಕವಿಗಳನ್ನು ಸುಲಭವಾಗಿ ಔಟ್‌ಡೇಟಡ್ ಕವಿಯಾಗಿಸಬಹುದು. ಆದರೂ, ಕನ್ನಡ ಸಾಹಿತ್ಯದ ಬಗೆಗೆ ಹೊಸತಾಗಿ ಆಕರ್ಷಿತರಾಗಿರುವ ಯುವ ಓದುಗರನ್ನು ಬರಹಗಾರರನ್ನು (ಪದ್ಯಗಳನ್ನು ಓದದೇ ಕೇವಲ ಭಾವಗೀತೆಗಳನ್ನಷ್ಟೇ ಕೇಳಿ ಗೊತ್ತಿರುವವರನ್ನೂ), ‘ನಿಮ್ಮ ನೆಚ್ಚಿನ ಕವಿ ಯಾರು?’ ಅಂತ ಕೇಳಿದರೆ, ನೂರಕ್ಕೆ ಎಂಬತ್ತು ಮಂದಿ ಇಂದಿಗೂ ಹೇಳುವ ಹೆಸರು– ಕೆ.ಎಸ್.ಎನ್.

ನರಸಿಂಹ ಸ್ವಾಮಿಯವರ ಕವಿತೆಗಳು, ಅದರಲ್ಲಿನ ವಿವರಗಳು ನಮ್ಮನ್ನು ಇಂದಿಗೂ ಸೆಳೆಯುವುದಕ್ಕೆ ಕಾರಣ ಅದು ಬದಲಾದ ಭಾವಗಳಿಗೆ ಒದಗಿಸುವ ಭಿನ್ನಭಾವ (ಕಾಂಟ್ರಾಸ್ಟ್ ಎಮೋಶನ್ಸ್; ಕಾಂಟ್ರಡಿಕ್ಟಿಂಗ್ ಅಲ್ಲ). ಅಂಥ ಭಿನ್ನಭಾವಗಳನ್ನು ಒದಗಿಸುತ್ತಲೇ, ನಮ್ಮೊಳಗಿನ್ನೂ ಜೀವಂತವಾಗಿರುವ ಬಯಕೆಗಳನ್ನು, ಕೆಲವೊಂದು ಮೂಲಭೂತ ಸಂವೇದನೆಗಳನ್ನು ಅವರ ಕವಿತೆಗಳು ಉದ್ದೀಪಿಸುತ್ತದೆ. ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಕೋಟಿ ರೂಪಾಯಿ’ ಅನ್ನುವುದನ್ನು ಯಾರೂ ವಾಚ್ಯಾರ್ಥದಲ್ಲಿ ಅನುಭವಿಸದೆ, ಸಹಬಾಳ್ವೆಯು ಹುಟ್ಟಿಸುವ ಧೈರ್ಯ, ವಿಶ್ವಾಸ, ಹರ್ಷವನ್ನಷ್ಟೇ ಅನುಭವಿಸುತ್ತಿರುತ್ತಾರೆ. ಅದರ ಜೊತೆಗೇ ವಿಪರೀತ ವಿಚ್ಛೇದನಗಳ ಕಾಲದಲ್ಲಿ ಹೆಂಡತಿ ಮನೆಯೊಳಗಿಲ್ಲದ ವಾಸ್ತವವು ಹೆಂಡತಿ ಮನೆಯೊಳಗಿದ್ದರೆ ಕೋಟಿ ರೂಪಾಯಿ ಎನ್ನುವ ವ್ಯತಿರಿಕ್ತ ಭಾವಕ್ಕೆ ಇದಿರಾಗಿ ಅದರ ಪರಿಣಾಮವನ್ನು ಇಮ್ಮಡಿಗೊಳಿಸುತ್ತದೆ. ಇರುವುದರ, ಇಲ್ಲದಿರುವುದರ ಅಥವ ಇದ್ದಿರಬಹುದಾದ ಸಂಗತಿಗಳನ್ನು ಮನಸ್ಸು ಏಕಕಾಲಕ್ಕೆ ಗ್ರಹಿಸಿ ಇಲ್ಲದಿರುವುದರ ಬಗ್ಗೆ ನವಿರಾಗುತ್ತದೆ. ಗಂಡ ಮೂರನೇ ಸಲ ಅಮೆರಿಕಕ್ಕೆ ಹೊರಟಾಗ ನನ್ನ ಗೆಳತಿ ಮನೆಯೊಳಗಿಂದಲೇ ಬೈ ಹೇಳಿ ಕಳಿಸಿಕೊಟ್ಟಿದ್ದು ಎಷ್ಟು ನಿಜವೋ, ಮೊದಲ ಸಲ ಏರ್‌ಫೋರ್ಟಿನವರೆಗೂ ಹೋಗಿ ಅತ್ತು ಬಂದಿರುವುದೂ ಅಷ್ಟೇ ನಿಜ. ಮನೋವೃತ್ತಿ ಬದಲಾದರೂ ಕೆಲವು ಮೂಲಭೂತ ಸಂವೇದನೆಗಳು ಮನುಷ್ಯನಲ್ಲಿ ಉಳಿದುಬಿಟ್ಟಿರುತ್ತವೆ. ನರಸಿಂಹ ಸ್ವಾಮಿಯವರ ಕವಿತೆಗಳು ಗೆಲ್ಲುವುದು ಇಲ್ಲಿ. ವಿವರಗಳು ಕವಿತೆಗೆ ನೆಪವಷ್ಟೇ.
–ವಿಕ್ರಂ ಹತ್ವಾರ್‌

ಕವಿತೆಯಾಯಿತು ಮಾತು
ಮೈಸೂರು ಸೀಮೆಯ ಮೇಲು ಮಧ್ಯಮವರ್ಗದ ಆಡುಭಾಷೆಯಲ್ಲಿ ಮಲ್ಲಿಗೆಯ ಹಾಡುಗಳನ್ನು ಪೋಣಿಸಿದ ಕವಿ ಕೆ.ಎಸ್. ನರಸಿಂಹಸ್ವಾಮಿ. ಆದರೆ ಆಡುಭಾಷೆ ತನ್ನಿಂದ ತಾನೇ ಕಾವ್ಯವಾಗುವುದಿಲ್ಲ. ಕಾವ್ಯಾರಂಭ ಮಾಡಿದಾಗ ಕಾವ್ಯದ ಸ್ವರೂಪ, ಸ್ವಭಾವಗಳ ಕುರಿತು ಅವರು ಯೋಚಿಸಿರಲಿಲ್ಲವಾದರೂ ನವೋದಯ ಕಾಲವೇ ತನ್ನ ಕವನಗಳಿಗೆ ಸುಳಿವು ಕೊಡದೆ ಹೊಸತನವನ್ನು ಒದಗಿಸಿತೆಂದು ಕವಿ ಹೇಳಿದ್ದಾರೆ. ಅವರದು ಸ್ವಭಾವೋಕ್ತಿಯ ಕಾವ್ಯವೆಂಬ ವಿಮರ್ಶೆಯ ಮಾತಿದೆ. ವಕ್ರೋಕ್ತಿಗೊಲಿದ ಕಾಲವು ಸ್ವಭಾವೋಕ್ತಿಯ ಶಕ್ತಿ, ಸ್ವಾರಸ್ಯಗಳನ್ನು ಮರೆತು, ಆ ಮಾತನ್ನು ನಕಾರಾತ್ಮಕವಾಗಿ ಹೇಳಿರುವುದು ದುರದೃಷ್ಟಕರ. ವಾಸ್ತವವಾಗಿ ಈ ಮಾತು ಹೆಚ್ಚಿನ ಚರ್ಚೆಗೊಳಗಾಗಬೇಕು. ಭಾಷೆಯ ಬಳಕೆಯ ಬಗೆಗೆ ಈ ಕವಿ ಎಷ್ಟು ಎಚ್ಚರ ವಹಿಸಿದವರೆಂದರೆ ಸಾಕಷ್ಟು ದೀರ್ಘಕಾಲ ಏನನ್ನೂ ಬರೆಯದೆ ಆ ಕುರಿತು ಶ್ರದ್ಧೆಯಿಂದ ಸಮೀಕ್ಷೆ ಮಾಡಿದೆನೆಂದೂ, ‘ನಮ್ಮ ಜನ ತಮ್ಮ ನಿತ್ಯ ಜೀವನದಲ್ಲಿ ಬಳಸುವ ಮಾತಿನ ಶಕ್ತಿ, ಸೌಂದರ್ಯಗಳನ್ನು ಕಂಡುಕೊಂಡು’ ಅವುಗಳನ್ನು ಕವಿತೆಗೆ ಹಾಯಿಸಿಕೊಳ್ಳುವ ಪ್ರಯತ್ನ ಮಾಡಿದೆನೆಂದೂ ಸಮಗ್ರ ಕಾವ್ಯದ ಮುಮ್ಮಾತುಗಳಲ್ಲಿ ಅವರು ಹೇಳಿದ್ದಾರೆ.

‘ಶಿಲಾಲತೆಯಲ್ಲಿ ಅಲಂಕಾರ, ರೂಪಕಗಳನ್ನು ಕಟ್ಟಿಕೊಂಡು ಕುಣಿದಿದ್ದು ಸಾಕು... ಆಡುವ ಮಾತಿಗೆ ಹತ್ತಿರ ಇರಬೇಕು. ಆಡೋ ಭಾಷೇನೇ ಅಲ್ಲ. ಅದಕ್ಕೆ ಹತ್ತಿರ. ಸರಳತೆಯನ್ನು ಸಾಧಿಸಬೇಕು... ಸರಳತೆಯನ್ನಿಟ್ಟುಕೊಂಡು ಸಂಕೀರ್ಣವಾದುದನ್ನು ಹೇಳಬೇಕು... ಈ ಯೋಚನೆ ಮಾಡ್ತಾನೆ ಹದಿನಾರು ವರ್ಷ ಕಳೀತು’– ಒಂದು ಸಂದರ್ಶನದಲ್ಲಿ ಕವಿ ಹೇಳಿದ ಮಾತಿದು. ಮಾತು ಸರಳವಾದಾಗ ಅಥವಾ ಹಾಗೆ ತೋರುವಾಗ, ಅದು ಆಡುಭಾಷೆಗೆ ಅಷ್ಟು ಹತ್ತಿರದಲ್ಲಿ ನಿಲ್ಲುವಾಗ ಹಾಗೂ ಅದು ಆಡುಭಾಷೆಯೇ ಅನ್ನಿಸಿಬಿಡುವಾಗ ಆಗಬಹುದಾದ ಅಪಚಾರಗಳೆಲ್ಲವೂ ಕೆ.ಎಸ್‌.ನ. ಅವರ ಕವಿತೆಗಳಿಗಾಗಿವೆ. ಈ ಮಣ್ಣಿನ ಮಾತುಗಳನ್ನು ಬಳಸಿಯೇ, ‘ಈ ಮಣ್ಣಿನದಲ್ಲವೆನ್ನಬಹುದಾದ ಅಪ್ಸರೆಯ  ಲಾವಣ್ಯ’ ಅವರ ಕವಿತೆಗಳಿಗೊದಗಿದ್ದು ಹೇಗೆ? ಕವಿತೆಯ ಕುರಿತು, ಅದರ ಹುಟ್ಟಿನ ಕುರಿತು, ಕವಿ ಕವಿತೆ ಮತ್ತು ಬದುಕಿನ ಸಂಬಂಧದ ಕುರಿತು ಈ ಕವಿ ಮೊದಲ ಸಂಕಲನದಿಂದ ತೊಡಗಿ ಅನೇಕ ಕವಿತೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಹತ್ತು ಕವನಗಳನ್ನು ಮನಸಿನಲ್ಲಿಟ್ಟುಕೊಂಡು ಕೆಳಗಿನ ಕೆಲ ಮಾತುಗಳನ್ನು ಬರೆಯಲಾಗಿದೆ.

‘ಮೈಸೂರು ಮಲ್ಲಿಗೆ’ಯ ಕೊನೆಯ ಪದ್ಯ ‘ನನ್ನ ಕವಿತೆ’ (ಕೊನೆಯ ಸಂಕಲನದ ಕಡೆಯ ಪದ್ಯಕ್ಕೂ ಅದೇ ಶೀರ್ಷಿಕೆ ಇದೆ!). ತಾನು ಅಳಿದರೂ ತನ್ನ ಕವಿತೆ ಉಳಿಯುವುದೆಂಬ ವಿಶ್ವಾಸ ಇಲ್ಲಿ ಪ್ರಕಟವಾಗಿದೆ. ಗೋವುಗಳು ಮುಂದೆ, ಗೊಲ್ಲ ಹಿಂದೆ; ಗೋವುಗಳು ಮುಂದೆ, ಗೋಧೂಲಿ ಹಿಂದೆ. ಇದು ಈ ಪುಟ್ಟ ಕವಿತೆಯಲ್ಲಿ ಅವರು ರಚಿಸಿರುವ ಪ್ರತಿಮೆ. ಮುಂದೆ ‘ನಾನು ಕಂಡ ಕವನ’ ಎಂಬ ಕವಿತೆ ಬರೆಯುವ ಹೊತ್ತಿಗೆ ಇದು ಇಡೀ ವಿಶ್ವವನ್ನು ಆವರಿಸುವ ಪ್ರತಿಮಾಲೋಕವಾಗಿದೆ. ‘ಕವನ ಹುಟ್ಟುವ ಸಮಯ’ ಕವಿತೆಯಲ್ಲಿ ತಕ್ಕಂಥ ಮಾತುಗಳಿಗಾಗಿ ಕಾಯ್ದು ನಿಂತ ಕವಿಯ ಚಿತ್ರವಿದೆ. ‘ಆಳದನುಭವವನ್ನು ಮಾತು ಕೈ ಹಿಡಿವಾಗ, ಕಾವು ಬೆಳಕಾದಾಗ ಒಂದು ಕವನ’ ಎಂಬ ಸೂತ್ರರೂಪ ವಾಕ್ಯ ಈ ಕವಿತೆಯ ಕೊರಳಿಂದ ಹೊರಟಾಗ ಅದು ಕವಿತೆಯ ಮೂರ್ತ, ಅಮೂರ್ತ ಸ್ವರೂಪಗಳೆರಡಕ್ಕೂ ಬಾಯಿ ಕೊಟ್ಟಂತಿದೆ. ‘ಕವಿತೆಯೆಂದರೆ ಏನು?’ ಎಂಬ ಕವಿತೆಯಲ್ಲಿ ಕಡೆಗೂ ಆ ಪ್ರಶ್ನೆ ವಿಸ್ಮಯದ ನೋಟ ಬೀರುತ್ತಲೇ ಇದೆ. ಕವಿತೆಯ ಕುರಿತು ಬರೆದ ಗದ್ಯದಲ್ಲೂ ಈ ಕವಿ ‘ಅದು ನನಗೆ ತಿಳಿಯದು’ ಎಂದೇ ಉದ್ಗರಿಸಿದ್ದಾರೆ.

ಬದುಕನ್ನು ‘ಪ್ರಾಸಗಳಿಲ್ಲದ ಕವಿತೆ’ ಎಂದು ಕಾಣುವ ‘ಕವಿತೆ ಮತ್ತು ಬದುಕು’ ಹಾಗೂ ‘ನೋವು ಕಂಬನಿ ಬದುಕು; ಕರವಸ್ತ್ರ ಕವಿತೆ’ ಎಂದು ವ್ಯಾಖ್ಯಾನಿಸುವ ‘ಬದುಕು–ಕವಿತೆ’ ಒಂದನ್ನೊಂದು ಪೋಷಿಸುವಂತಿವೆ. ‘ಕವಿ’ ಎಂಬ ಕವಿತೆ ಕಾವ್ಯದ ಶಕ್ತಿಯನ್ನು, ಕವಿಯ ಸಾಮರ್ಥ್ಯವನ್ನು ತೋರುವ ಬಗೆ ವಿಶಿಷ್ಟವಾಗಿದೆ. (‘ನನ್ನ ರಕ್ತದ ತುಂಬ ಹೊಸ ಮಾತು ಪಲ್ಲವಿಸಿ, ಹೊಸ ವಸಂತವನಲ್ಲಿ ತರಲು ಬಲ್ಲೆ’. ‘ಮಾಸ್ತಿಯವರ ಕವಿತೆ’ ಸ್ವತಃ ಕೆ.ಎಸ್‌.ನ ಆರಂಭದಿಂದಲೂ ಬಳಸುತ್ತ ಬಂದಿರುವ ಕಾವ್ಯ ಮಾದರಿಯೊಂದರ ಸರಳ ಚೆಲುವನ್ನು ಕೀರ್ತಿಸುವ ಕವಿತೆ. (‘ಇಲ್ಲಿ ಜೀವನದಂತೆ ಕವಿತೆ ಜೀವದ ಉಸಿರು’). ಈ ಪುಟ್ಟ ಟಿಪ್ಪಣಿಯಲ್ಲಿ ಆರಂಭದಲ್ಲಿ ಆಡಿದ ಮಾತುಗಳನ್ನು ಕಾವ್ಯಾತ್ಮಕವಾಗಿ ಬೆಳಗಬಲ್ಲ ಕವಿತೆ: ‘ಕವಿತೆಯಾಯಿತು ಮಾತು’. ತನ್ನೊಳಗಿನ ಮಾತು, ಮೌನದಲ್ಲಿ ಹುಟ್ಟಿದ ಮಾತು, ನಾದವಾಗಿ ಪರಿಣಮಿಸಿದ ಮಾತು ಕಡೆಗೂ, ‘ಕವಿತೆಯಾಯಿತು ನನಗೆ ನನ್ನ ಮಾತು’ ಎನ್ನುವಾಗ ಬರಿಯ ನುಡಿಯಲ್ಲದ, ಕಾವ್ಯರೂಪದ ಅಸೀಮ ಸ್ವರೂಪದ ದರ್ಶನವಿದೆ.
ಅವರ ಕೊನೆಯ ಕವಿತೆಯ ಸಾಲುಗಳು:
ಕಡಲು ಭೋರ್ಗರೆಯುವುದು, ಆಕಾಶ ಮಿಂಚುವುದು 
ಎಲ್ಲವನು ಒಳಗೊಳುವುದೆನ್ನ ಕವಿತೆ.
ಇದು ಬರಿಯ ಸ್ವಭಾವೋಕ್ತಿಯೆ!

–ಚಿಂತಾಮಣಿ ಕೊಡ್ಲೆಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.