ADVERTISEMENT

ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಾರದು

ಎಸ್.ನಟರಾಜ ಬೂದಾಳು
Published 3 ಮೇ 2014, 19:30 IST
Last Updated 3 ಮೇ 2014, 19:30 IST
ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಾರದು
ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಾರದು   

ನಿಜಸ್ವಪ್ನ
ಲೇ: ಎಚ್.ಆರ್. ರಮೇಶ
ಬೆ: ರೂ. 80
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ

ಎಲ್ಲವನ್ನೂ ಸ್ಥಿತಗೊಳಿಸಿ ನುಡಿಯಲು ಹವಣಿಸುವ ಭಾಷೆಯ ಚಾಳಿಯ ಬಗೆಗೆ ಕವಿಗಳಿಗೆ, ದಾರ್ಶನಿಕರಿಗೆ ಆಗಾಗ್ಗೆ ಸಿಟ್ಟು ಬರುತ್ತೆ. ಮತ್ತೆ ಸ್ವಲ್ಪ ಹೊತ್ತಿಗೆ ತಪ್ಪು ಅದರದ್ದಲ್ಲ ಎಂದು ಗೊತ್ತಾದಾಗ ಅದನ್ನು ಬೈದದ್ದಕ್ಕೆ ಬೇಜಾರುಪಟ್ಟುಕೊಳ್ಳುತ್ತಾರೆ. ಲೋಕವನ್ನು ನಿರಂತರ ಬದಲಾಗುತ್ತ ಹರಿಯುತ್ತಲೇ ಇರುವ ಪ್ರವಾಹ ಎಂದು ಸ್ವೀಕರಿಸಿ ನಡೆದುಕೊಳ್ಳಲು ನಮಗೆ ಯಾಕೆ ಸಾಧ್ಯವಾಗುವುದಿಲ್ಲ ಎನ್ನುವುದಕ್ಕೆ ಸರಳ ಉತ್ತರಗಳಿಲ್ಲ.

ಎಲ್ಲವನ್ನೂ ಭಾಷೆಯಲ್ಲಿ ಹೆಸರಿಟ್ಟು ಕರೆದ ಕಾರಣಕ್ಕೆ, ಅವಳಿ ವಿರುದ್ಧಗಳೆಂದು ಗುರುತಿಸಿದ ಕಾರಣಕ್ಕೆ, ತಾನು-ಇದಿರು ಎಂದು ಲೋಕವನ್ನು ಇಬ್ಭಾಗಿಸಿಕೊಂಡ ಕಾರಣಕ್ಕೆ– ಹೀಗೆ ಇರಬಹುದಾದ ಕಾರಣಗಳ ಶೋಧನೆ ಅನೇಕ ಬೌದ್ಧಿಕ ಸ್ತರಗಳಲ್ಲಿ ಮತ್ತು ಅದರಾಚೆಗೂ ಇನ್ನೂ ನಡೆದೇ ಇದೆ.

ನಮ್ಮ ಈ ತಪ್ಪು ನಡೆ ಕಲಿತದ್ದೇ ಹೊರತು ಅದಾಗೇ ಬಂದದ್ದಲ್ಲ ಎನ್ನುವುದೇ ವಿಸ್ಮಯದ ಸಂಗತಿ. ಇವೆಲ್ಲವನ್ನು ಎದುರಿಗೆ ಹರಡಿಕೊಂಡಿರುವ ‘ನಿಜಸ್ವಪ್ನ’ ಸಂಕಲನದ ಈ ಕವಿ ಅವುಗಳಲ್ಲಿ ಒಂದೊಂದನ್ನೇ ತೆಗೆದು–ಇಟ್ಟು ತೋರಿಸುತ್ತಾರೆ. ತಾನು–ಇದಿರಿನಲ್ಲಿ ಒಂದನ್ನು ಇಲ್ಲವಾಗಿಸಿದರೆ ಸಾಕು, ಇನ್ನೊಂದರ ಸ್ವತಂತ್ರ ಅಸ್ತಿತ್ವ ಇಲ್ಲವಾಗುತ್ತದೆ. ಇದಿರು ಎಂಬುದೊಂದು ಇಲ್ಲವಾದಾಗ ಸಂಘರ್ಷಕ್ಕೆ ಕಾರಣವೇ ಇಲ್ಲ. ಇದನ್ನು ಅನೇಕ ತಾತ್ವಿಕ ಆಕರಗಳು ತೋರುತ್ತಲೇ ಬಂದಿವೆ, ಸಾಧ್ಯವಾದಷ್ಟು ಕಡಿಮೆ ಮಾತಿನಲ್ಲಿ.

ಕಾಡ ತೊರೆಯ ನೀರು ಕುಡಿಯುವಾಗ
ಬೊಗಸೆಯಲಿ
ಕಂಡು ಅದ ಭಿಕ್ಷುವೊಬ್ಬ ಅದೇ ಆಗಿ ಹೋದ  
(ಪದರು)

ಎಚ್.ಆರ್. ರಮೇಶ್ ಭಾಷೆಯೆಂಬ ಇಕ್ಕಟ್ಟಿನ ದಾರಿಯಲ್ಲಿ ಸಾಗುವುದನ್ನು ಬಲ್ಲ ಕಸುಬುದಾರ ಕವಿ. ಅವರ ಕವನಗಳು ಇಂತಹ ಕೆಲವು ಆಯಕಟ್ಟಿನ ಜಾಗಗಳನ್ನು ಮುಟ್ಟಿ ತೋರಿಸುತ್ತವೆ. ಬದುಕಿನ ನಡೆ ದಿಕ್ಕುತಪ್ಪಿದಾಗ ದರ್ಶನ, ಕಾವ್ಯ, ಕಲೆ ಮೀಮಾಂಸೆಗಳು ಕ್ರಿಯಾಶೀಲವಾಗಿ ಮಾತನಾಡುತ್ತವೆ, ನಮ್ಮ ನಡುವಿನ ವ್ಯಂಗ್ಯವನ್ನು ಎದುರಿಗೆ ಹಿಡಿಯುತ್ತವೆ.

ಗ್ಲೂಕೋಸಿನ ಹನಿಹನಿ ಇಷ್ಟಿಷ್ಟೇ ಖಾಲಿಯಾದಂತೆ
ಇದ ಜೊತೆ ಕರೆದುಕೊಂಡು ಹೋಗಲು ಬಂದಿದೆ ಅದು
ತಟ್ಟಿದೆ ಬಾಗಿಲ ಆಗಲೆ ಎರಡು ಮೂರು ಬಾರಿ
ಕಾಯುತ್ತಿದೆ ತಾಳ್ಮೆಯಿಂದ.

ಭಾಷೆ ಮತ್ತು ಅದರೊಂದಿಗಿನ ನಮ್ಮ ಪಯಣವು ಅನಿರ್ದಿಷ್ಟತೆಯಿಂದ ಅರ್ಥನಿರ್ದಿಷ್ಟತೆಯ ಕಡೆಗೆ ಚಲಿಸುತ್ತಿದೆಯೆಂದು ನಂಬಿ ನಾವು ವ್ಯವಹರಿಸುತ್ತೇವೆ. ಅರ್ಥವೆನ್ನುವುದು ನಿರ್ಧರಿತ ಸಂಗತಿ ಎಂದೇ ಭಾವಿಸಿರುತ್ತೇವೆ. ಆದರೆ ಅರ್ಥವೆನ್ನುವುದು ಸಿದ್ಧಗೊಂಡ ಸಂಗತಿಯಾಗದೆ ಅದು ಪ್ರತಿಯೊಂದು ಸಂದರ್ಭದಲ್ಲಿಯೂ ಉಂಟಾಗಿ ವಿಸರ್ಜನೆಯಾಗುವುದೆಂಬುದನ್ನು ಈ ಸಂಕಲನದ ಅನೇಕ ಕವನಗಳು ಮುಂದಿಡುತ್ತವೆ.

ಇವರಿಗೆ ಕಿವಿ ಕೇಳಿಸುತ್ತಾ
ಕೇಳಿಸಬಹುದು. ಅಥವಾ ಕೇಳಿಸುವುದಿಲ್ಲ.
ಅವರು ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದಾರೆ ಸುಡುವ ಬಿಸಿಲಲ್ಲೂ ಜೋಪಾನವಾಗಿ
ಸುಟ್ಟುಹೋಗಬಹುದೆಂಬ ಭಯದಿ ಝಳವ ತಪ್ಪಿಸಿ ಮಾತು
ಆಣೆ ಪ್ರಮಾಣ ಯೋಜನೆಗಳ ಅವರ ಕಣ್ಣುಗಳಲ್ಲಿ ಇಳಿಬಿಡುತ್ತಿದ್ದಾರೆ. ಅಥವಾ
ತುಂಬುತ್ತಿದ್ದಾರೆ. ಅಥವಾ ಅವರು ಭಾಷಣವನ್ನು ಕೇಳುತ್ತಿಲ್ಲ. ಅಥವಾ ಇವರು
ಕೇಳುತ್ತಿದ್ದಾರೆ. ಅಥವಾ ಕೇಳುತ್ತಿರಬಹುದು. ಅಥವಾ...      
(ಅಥವಾ)

ಅವಳಿ ವಿರುದ್ಧಗಳನ್ನು ಹುರಿ ಮಾಡಿ ಹೆಣೆದ ಇಂತಹ ರಚನೆಗಳು ಇಲ್ಲಿನ ಅನೇಕ ಕವನಗಳಲ್ಲಿವೆ. ‘ಅವೆಲ್ಲ’ ಅರ್ಥದ ಅನಂತ ಸಾಧ್ಯತೆಗಳನ್ನೂ ಮತ್ತು ಅದು ಸಂಬಂಧದಲ್ಲಿ ಮಾತ್ರ ಘಟಿಸಬಲ್ಲದೆಂಬುದನ್ನು ನುಡಿದೂ, ನುಡಿಯದೆಯೂ ಹೊಳೆಯಿಸಲು ಸಾಧ್ಯವೆಂಬಂತೆ ‘ಇವೆ’. ಇದೆ, ಇಲ್ಲ, ಇದೆ–ಇಲ್ಲ ಎರಡೂ ಇವೆ, ಇದೆ-ಇಲ್ಲ ಎರಡೂ ಇಲ್ಲ– ಈ ನಾಲ್ಕು ತುದಿಗಳ ಮೂಲಕ ಲೋಕಸಂಗತಿಗಳನ್ನು ಕಾಣಬೇಕೆಂದು ಮಧ್ಯಮಮಾರ್ಗ ಸೂಚಿಸುತ್ತದೆ. ಹೀಗೆ ನೋಡುವುದರಿಂದ ಒಂದು ಸಂಗತಿ ಗೊತ್ತಾಗುತ್ತದೆ, ಅದೇನೆಂದರೆ: ಕಂಡದ್ದು ಎಂದರೆ ನಾವು ಕಂಡದ್ದು ಎಂದಷ್ಟೇ ಅರ್ಥ. ಹಾಗಾಗಿ ಪಠ್ಯದ ನಿರ್ಮಾಣ ಕವಿಯ ತುದಿಯಲ್ಲಾಗುವುದಿಲ್ಲ, ಬದಲಿಗೆ ಪಡೆಯುವವನ ತುದಿಯಲ್ಲಿ ನಡೆಯುವ ಕರಾಮತ್ತು. ನಿಜವಾದ ಕಾವ್ಯ ಕೇಳುಗನ ತುದಿಯಲ್ಲಿ ಉಂಟಾಗುತ್ತದೆ.

ಕಾವ್ಯ ಮೀಮಾಂಸೆ ಎಂದರೆ ರಸ, ಧ್ವನಿ, ಅಲಂಕಾರ, ಅಷ್ಟೇ ಅಲ್ಲ; ಇದು ಕೂಡ ಕಾವ್ಯ ಮೀಮಾಂಸೆಯ ಒಂದು ಪ್ರಮುಖ ಪರಿಕಲ್ಪನೆ.  
ಈ ಸಂಕಲನದ ಅನೇಕ ಕವಿತೆಗಳ ನಿಧಾನ ಲಯದ ಬಗೆಗೆ ನನ್ನ ಅನಿಸಿಕೆಯೊಂದನ್ನು ಹೇಳಬೇಕು. ಕಾವ್ಯದ ಲಯ ತೀರಾ ಮಂದ್ರಕ್ಕೆ ಇಳಿದಾಗ ಅದನ್ನು ನಿರ್ವಹಿಸುವುದು ಕಷ್ಟವಿರಬೇಕು. ಕಾವ್ಯದ ತೀವ್ರ ಅನುಭವಕ್ಕಾಗಿ ಹಾತೊರೆಯುವವರಿಗೆ ಇಂತಲ್ಲೆಲ್ಲ ಒಂಚೂರು ಅಸಹನೆ ಕಂಡರೆ ಅದನ್ನೂ ಗೌರವಿಸಬೇಕು. ಇನ್ನೇನು ನಿಂತೇ ಹೋಗುವುದೇನೋ ಅನ್ನುವಷ್ಟು ಮೆಲ್ಲಗೆ ನಡೆವ ಛಂದವೊಂದು ಅನೇಕ ಕವಿತೆಗಳಲ್ಲಿದೆ.

ತಿಳಿಗೊಳದ ದಡದಲಿ ಕೂತು ಮಾತಾಡುವುದಾದರೂ ಏನಿದೆ
ಅದೇ ಹೇಳುತಿದೆ
ನಮ್ಮ ಎದೆಯೊಳಗಿನ ಅದ
ಮೌನ ಮಾತ ತಬ್ಬಿದೆ ಮಾತು ತಿಳಿಗೊಳದ ಮೌನ
ವಾಚ್ಯದ ಮಟ್ಟದಲ್ಲಿ ಕಲಾತ್ಮಕವಲ್ಲದ್ದು ವ್ಯಂಗ್ಯದ ಮಟ್ಟದಲ್ಲಿ ಅಮೋಘವಾಗುವುದು ಸುಳ್ಳು ಎಂಬ ಮಾತೊಂದಿದೆ. ಇದು ಲೌಕಿಕ ಮತ್ತು ಪಾರಲೌಕಿಕಗಳ ಬಗೆಗೂ ಸಲ್ಲುವ ಮಾತು. ಕಾವ್ಯವೂ ಹಾಗೆಯೇ ಇರಬೇಕು. ಅದು ಅರ್ಥವಾಗುವ ಮುನ್ನ ನಮಗೆ ತಟ್ಟಬೇಕು. ಅಂತಹ ಅನುಭವವನ್ನು ಇಲ್ಲಿಯ ಅನೇಕ ಕವನಗಳು ನೀಡುತ್ತವೆ. ಅವುಗಳಲ್ಲಿ ಒಂದು:
ಇಲ್ಲಿ ಕೋಟಿ ಮಾತುಗಳು ಉರುಳಿ ಉರುಳಿ ಹೋಗುತ್ತಿವೆ ಎಲ್ಲಿ ಹೋಗುತ್ತವೋ
ಏನು ಆಗುತ್ತವೋ ಒಂದೇ
ಒಂದು ಆ ನುಡಿಗಾಗಿ ಪರಿತಪಿಸುತ್ತಿದ್ದೇನೆ ಇದ್ದಾಗ ಸತ್ತು ಸತ್ತು ಮಣ್ಣಾಗಿ
ಕರಗಿದರೂ ಇರುವಂತೆ ಈಗಲೂ.

ಧ್ಯಾನಿಸಲು ಕೂಡ ಏನೂ ಇಲ್ಲದಿರುವುದೆ ಮಹಾಸುಖವೆನ್ನುತ್ತಾನೆ ಸರಹಪಾದ. ಅದನ್ನು ಈ ಕವಿಯ ನಾಲ್ಕು ಪದಗಳು ನುಡಿದ ರೀತಿ:
ಖಾಲಿ ಆಕಾಶವಾಗಿದೆ
ಒಣಗಿ ಧ್ಯಾನ
ಇದು ಎಷ್ಟು ಸೂಕ್ಷ್ಮದ ಸಂಗತಿ ಎಂದರೆ; ಇದನ್ನು ಇನ್ನೊಮ್ಮೆ ನುಡಿದರೆ, ‘ಸದ್ದು.. ಸದ್ದು..’ ಎನ್ನುತ್ತಲೇ ಇರುವ ಟೀಚರ್ ಆಗುತ್ತದೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT