‘ಮಕ್ಕಳ ದಿನಾಚರಣೆ’ ಆಸುಪಾಸಿನಲ್ಲಿ ಭಾನುವಾರದ ಪುರವಣಿಯನ್ನು ‘ಮಕ್ಕಳ ವಿಶೇಷ ಸಂಚಿಕೆ’ಯನ್ನಾಗಿ ಕಳೆದ ಐದು ವರ್ಷಗಳಿಂದ ರೂಪಿಸುತ್ತಿದ್ದೇವೆ. ಕಳೆದ ಎರಡು ವರ್ಷಗಳ ಸಂಚಿಕೆಗಳನ್ನು ಕನ್ನಡ ಸಾರಸ್ವತ ಲೋಕದ ಹಿರಿಯರು ಅತಿಥಿ ಸಂಪಾದಕರಾಗಿ ರೂಪಿಸಿದ್ದರು. 2013ರ ‘ಮಕ್ಕಳ ಸಂಚಿಕೆ’ಯನ್ನು ಎಚ್.ಎಸ್. ವೆಂಕಟೇಶಮೂರ್ತಿ ಹಾಗೂ 2014ರ ಸಂಚಿಕೆಯನ್ನು ಬೊಳುವಾರು ಮಹಮದ್ ಕುಂಞಿ ರೂಪಿಸಿದ್ದರು. ಈ ವರ್ಷದ ಅತಿಥಿ ಸಂಪಾದಕರಾಗಿ ಹಿರಿಯ ಲೇಖಕ ಆನಂದ ಪಾಟೀಲರು ಮಕ್ಕಳ ಸಂಚಿಕೆಯನ್ನು ರೂಪಿಸಿದ್ದಾರೆ.
ತಮ್ಮ ಸಾಹಿತ್ಯಿಕ ಬದುಕನ್ನೆಲ್ಲ ಮಕ್ಕಳ ಕಾಳಜಿಗೆ ಮೀಸಲಾಗಿ ಇರಿಸಿರುವ ಪಾಟೀಲರು, ಅದೇ ಅಕ್ಕರೆಯಲ್ಲಿ ಈ ಸಂಚಿಕೆಯನ್ನು ರೂಪಿಸಿದ್ದಾರೆ. ಎಳೆಯರ ಹೊಸ ಬರಹಗಳ ಜೊತೆಗೆ, ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಹಿರಿಯರ ರಚನೆಗಳು ಈ ಸಂಚಿಕೆಯಲ್ಲಿವೆ. ಇಲ್ಲಿನ ಬರಹಗಳ ಮೂಲಕ ಲೇಖಕರ ಉಳಿದ ಬರಹಗಳನ್ನೂ ಮಕ್ಕಳು ಹುಡುಕಿಕೊಂಡು ಓದಲಿ ಎನ್ನುವ ಹಂಬಲ ನಮ್ಮದು. ಈ ಪುರವಣಿ ಪುಟಾಣಿಗಳಿಗೆ ಹಾಗೂ ಮಕ್ಕಳ ಕಾಳಜಿಯಲ್ಲಿ ತೊಡಗಿಕೊಂಡಿರುವ ಪಾಲಕರು ಮತ್ತು ಶಿಕ್ಷಕರಿಗೆ ಇಷ್ಟವಾಗುತ್ತದೆಂದು ಭಾವಿಸಿದ್ದೇವೆ. ಪ್ರತಿಕ್ರಿಯೆಗಳಿಗೆ ಸ್ವಾಗತ.
–ಸಂಪಾದಕ
mukthachanda@prajavani.co.in
ಇಂದು ಮಕ್ಕಳ ಬಾಲ್ಯದ ಸುತ್ತಲಿನ ಪರಿಸರ ಸರಳವಾಗಿಲ್ಲ, ಸುಲಭವಾಗಿಲ್ಲ. ನಾವು ಯಾವುದನ್ನು ಅನಪೇಕ್ಷಿತ ಅಂದುಕೊಳ್ಳುತ್ತೇವೋ ಅದೆಲ್ಲ ಮಕ್ಕಳ ಕಣ್ಣಿಗೆ ರಾಚುವಂತೆ ಎದುರಿನಲ್ಲೇ ನಡೆಯುತ್ತಿದೆ, ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ದೊಡ್ಡವರನ್ನು ದೊಡ್ಡವರಾಗಿ ನೋಡುವಲ್ಲಿ ಮಕ್ಕಳು ಅನುಮಾನಿಸುತ್ತಿದ್ದಾರೆ. ಅವರ ಕಣ್ಣುಗಳಲ್ಲಿ ಅನುಮಾನಗಳು, ಸಂಶಯಗಳು, ಗೊಂದಲಗಳು ತುಂಬಿಕೊಳ್ಳುತ್ತಿವೆ.
ಮಕ್ಕಳ ಬಾಲ್ಯ ಮುಗ್ಧತೆಯ ತಾಣವಾಗಿ ಸುಂದರ, ಸ್ವಚ್ಛಂದವಾಗಿ ಉಳಿಯುತ್ತಿಲ್ಲ. ಈ ಎಲ್ಲ ಅನಿವಾರ್ಯದ ವಾಸ್ತವದ ನಡುವೆಯೇ ಮಕ್ಕಳು ಕಾಲೂರಿ ಹೆಜ್ಜೆ ಹಾಕಬೇಕಿದೆ, ದಾರಿ ತುಳಿಯಬೇಕಿದೆ, ಬಾಲ್ಯವನ್ನು ಸಾಧ್ಯವಾದಷ್ಟೂ ಅನುಭವಿಸಬೇಕಿದೆ. ಉದ್ಯಾನದ ಜಾಗವನ್ನು ಯಾರೋ ಪ್ರಭಾವಿಗಳು ಕಬಳಿಸಿಕೊಂಡಹಾಗೆ, ನದಿಯ ನೀರನ್ನು ರಸಾಯನಿಕಗಳಿಂದ ಕಲುಷಿತಗೊಳಿಸುವ ಹಾಗೆ, ಹಸಿರು ಕಾಡುಗಳನ್ನು ಗೊತ್ತಿಲ್ಲದ ಹಾಗೆ ಕಣ್ಮರೆಯಾಗಿಸುವ ಹಾಗೆ ಬಾಲ್ಯದ ಸುಂದರ ಸ್ವಚ್ಛಂದವನ್ನ ಏನೆಲ್ಲ ಆಕ್ರಮಿಸಿಕೊಳ್ಳತೊಡಗಿದೆ.
ನಮ್ಮ ಮಕ್ಕಳು ಇದನ್ನೆಲ್ಲ ಬಹು ಬೇಗ ಗಮನಕ್ಕೆ ತಂದುಕೊಳ್ಳುತ್ತಿದ್ದಾರೆ. ಸಮೂಹ ಮಾಧ್ಯಮಗಳು, ಮಾಹಿತಿ ತಂತ್ರಜ್ಞಾನ ಜಾಲಗಳು ಇಂದು ಏನೆಲ್ಲವನ್ನು ಹತ್ತಿರ ಹತ್ತಿರಕ್ಕೇ ತಂದು ತೆರೆದಿರಿಸತೊಡಗಿವೆ. ಮಕ್ಕಳ ಸುತ್ತಲಿನ ಹಿರಿಯರ ಕಾಳಜಿಗಳು, ಪ್ರೀತಿ ಮಮತೆಗಳು, ಶಿಕ್ಷಣ ತರಬೇತಿಗಳು, ಕಲೆ ಕೌಶಲಗಳು ಈ ಬಗೆಯ ಗಟ್ಟಿ ಹೆಜ್ಜೆಗಳಿಗೆ ಅನುವು ಮಾಡಿಕೊಡುವಂತಿರಬೇಕು... ರಾಜಕುಮಾರರು ದಾರಿ ತಪ್ಪಿದರೆಂದು ವಿಷ್ಣುಶರ್ಮ ‘ಪಂಚತಂತ್ರ’ ರಚಿಸಿದರೆಂದು ಕೇಳಿದ್ದೇವೆ. ಆದರೆ ಈಗ ನಮ್ಮ ಮಕ್ಕಳು ದಾರಿ ತಪ್ಪಿಲ್ಲ, ಅವರ ಸುತ್ತಲಿನ ವಾತಾವರಣ ದಾರಿ ತಪ್ಪಿಸಿಕೊಂಡಿದೆ. ಹಾಗಾಗಿ ಈಗ ಹೊಸದಾಗಿ ‘ಪಂಚತಂತ್ರ’ ನಮ್ಮ ಮಕ್ಕಳ ನಡುವೆಯೇ ರಚನೆಗೊಳ್ಳಬೇಕಿದೆ.
‘ಪ್ರಜಾವಾಣಿ’ ಪತ್ರಿಕೆಯು ಮಕ್ಕಳ ದಿನಾಚರಣೆಯ ಈ ಪುರವಣಿಯನ್ನ ಸಂಪಾದಿಸಲು ಕೇಳಿದಾಗ ಇದು ಮತ್ತೊಂದು ಹೊಸದೇ ಆದ ಆಹ್ವಾನವಾಗಿ ನನಗೆ ಕಂಡಿತು. ನಮ್ಮಷ್ಟಕ್ಕೇ ನಮಗೆ ಇಷ್ಟವಾಗಿದ್ದನ್ನ ಪತ್ರಿಕೆಯೊಂದಕ್ಕೆ ಬರೆದು ಕಳಿಸೋದು ಸುಲಭದ್ದು. ಆದರೆ ಪತ್ರಿಕೆಯ ಪುಟಗಳಲ್ಲಿ ಏನೇನೆಲ್ಲ ಇರಿಸಬೇಕು ಅಂತ ಜವಾಬ್ದಾರಿ ವಹಿಸೋದು ಸುಲಭದ್ದಲ್ಲ ಅಂತ ಕೆಲಸ ಶುರು ಹಚ್ಚಿಕೊಂಡಾಗಲೇ ಅಂದುಕೊಂಡೆ! ಮಕ್ಕಳ ಲೋಕ ಅಂದರೆ ನನಗೆ ಒಂದಿಷ್ಟೆಲ್ಲ ಬಲು ಇಷ್ಟದ್ದು ಅಂದುಕೊಂಡರೂ ಪತ್ರಿಕೆಯಂಥ ಅವಕಾಶದಲ್ಲಿ, ಅದೂ ‘ಮಕ್ಕಳ ದಿನಾಚರಣೆ’ಯಂಥ ಸಂದರ್ಭದಲ್ಲಿ ನಾನಾ ಬಗೆಯಲ್ಲಿ ಹರಡಿಕೊಳ್ಳುವುದು ಏನೆಲ್ಲ ಕಸರತ್ತನ್ನ ಒಳಗೊಂಡೇ ಇರುತ್ತದೆ.
ನುರಿತ ಪತ್ರಿಕೆಯ ವೃತ್ತಿಕಾರರು ತೊಡಗಿಕೊಳ್ಳುವುದಕ್ಕೂ ನಮ್ಮಂಥವರು ಏನೇನೋ ತಲೆಯಲ್ಲಿ ಇಟ್ಟುಕೊಂಡು ದಿಢೀರನೆ ಈಜುಕೊಳಕ್ಕೆ ಜಿಗಿದು ಬಿಟ್ಟರೆ ಆಗೋ ಅನುಭವವೇ ಬೇರೆ. ಪತ್ರಿಕೆಯ ಗೆಳೆಯರು ಜೊತೆಗೇ ಇದ್ದು ಈ ಪುರವಣಿಯನ್ನು ರೂಪಿಸುವ ಅವಕಾಶವನ್ನು ಸ್ವಚ್ಛಂದವಾಗಿ ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಟ್ಟುದು ನಿಜಕ್ಕೂ ಆಪ್ತವಾದ ಸಂಗತಿ. ಈ ವಿಶೇಷ ಪುರವಣಿಯನ್ನು ಕೈಗೆತ್ತಿಕೊಂಡಿರೋ ನಿಮಗೆ ಹೇಗೆಲ್ಲಾ ಅನಿಸುತ್ತೋ ಎನ್ನುವ ಕುತೂಹಲ ನನ್ನದು. ಹೊಸ ತಿಂಡಿ ಮಾಡಿ ಬಡಿಸಿದವರು ರುಚಿಗ್ರಾಹಿಗಳ ಪ್ರತಿಕ್ರಿಯೆಗೆ ಮೈಯೆಲ್ಲ ಕಿವಿಯಾದ ಪರಿಸ್ಥಿತಿ ನನ್ನದು.
‘ಮಕ್ಕಳ ದಿನಾಚರಣೆ’ಯ ದಿನ ನಮ್ಮ ಸಮಯ ಆದಷ್ಟು ಮಕ್ಕಳಮಯವಾಗಿರಲಿ. ಅದು ಕೇವಲ ನಮ್ಮ ಮನೆಯ ಮಕ್ಕಳಲ್ಲ, ಸುತ್ತ ಕಾಣುವ ಎಲ್ಲ ಮಕ್ಕಳಲ್ಲಿ ಹಬ್ಬಿಕೊಂಡಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.