ಈ ಸಂಚಿಕೆಗೆ ಹೆಣ್ಣು ಮಕ್ಕಳ ದಿನಾಚರಣೆ ಎಂಬ ಹೆಸರಿಡುವುದಕ್ಕೆ ಹೆಂಡತಿಯ ಸಮ್ಮತಿಯಿಲ್ಲ. ಮಕ್ಕಳ ದಿನಾಚರಣೆಯು ಎಲ್ಲ ಮಕ್ಕಳದ್ದಾಗಿರಬೇಕು; ಇದರಲ್ಲಿ ವಿಭಾಗ ಸಲ್ಲದು ಎಂಬ ಆಕೆಯ ಮಾತನ್ನು ನಾನು ನಿರಾಕರಿಸುತ್ತಲೂ ಇಲ್ಲ. ಆದರೆ, ನಮ್ಮ ಪ್ರಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಅವರ ಹುಟ್ಟು ಹಬ್ಬವನ್ನು ಎಲ್ಲ ಮಕ್ಕಳ ದಿನಾಚರಣೆಯನ್ನಾಗಿ ಇದುವರೆಗೂ ಆಚರಿಸಿಕೊಂಡು ಬಂದಿದ್ದೇವೆ; ಮುಂದೆಯೂ ಆಚರಿಸಲಿದ್ದೇವೆ. ಯಾವುದಾದರೊಂದು ವರ್ಷದಲ್ಲಿ ಕನ್ನಡದ ಯಾವುದಾದರೊಂದು ದಿನ ಪತ್ರಿಕೆಯು ತನ್ನ ಒಂದು ಸಂಚಿಕೆಯನ್ನು ಹೆಣ್ಣು ಮಕ್ಕಳಿಗಾಗಿ ಮೀಸಲಿಟ್ಟು, ಸಂಚಿಕೆಯ ಎಲ್ಲ ಲೇಖನಗಳನ್ನೂ ಹೆಣ್ಣು ಮಕ್ಕಳಿಂದಲೇ ಬರೆಸಿದರೆ ಮಹಾಪರಾಧವೇನೂ ಆಗುವುದಿಲ್ಲವೆಂಬುದು ನನ್ನ ತಾತ್ಕಾಲಿಕ ಸಮರ್ಥನೆ; ಅಷ್ಟೆ. ಕನ್ನಡದ ಗಂಡುಮಕ್ಕಳ ಕ್ಷಮೆಯಿರಲಿ.
ಮಕ್ಕಳ ಸಾಹಿತ್ಯ ಮೊತ್ತ ಮೊದಲು ಸದ್ದು ಮಾಡಿದ್ದು ನಮ್ಮ ತಾಯಂದಿರ ಬಾಯಲ್ಲಾಗಿದ್ದರೂ, ಅವುಗಳ ಬಹುಪಾಲು ಜೋಗುಳ ರೂಪದ ಮೌಖಿಕ ಸಾಹಿತ್ಯಗಳು. ಶಿಷ್ಟ ಸಾಹಿತ್ಯ ಪ್ರಕಾರವು ಶಿಷ್ಟ ಸಂಸ್ಕೃತಿಯಂತೆಯೇ ನಮ್ಮ ತಾಯಂದಿರ ಬಾಯಿಗೆ ಬೀಗ ಜಡಿದಿದೆ. ಇಲ್ಲೂ ಒಂದು ತಮಾಷೆಯಿದೆ; ಮೌಖಿಕ ಸಾಹಿತ್ಯದ ತಾಯಂದಿರಿರಲಿ, ಶಿಷ್ಟ ಸಾಹಿತ್ಯದ ತಂದೆಯಂದಿರೇ ಇರಲಿ, ಅವರೆಲ್ಲ ಹೆಚ್ಚಾಗಿ ಹಾಡುತ್ತಿದ್ದದ್ದು ಗಂಡು ದೇವ ಮಕ್ಕಳ ಲಾಲಿಗಳನ್ನೇ.
ನಾವು ಓದಿದ ಅಥವಾ ಕೇಳಿದ ನೂರಾರು ಪುರಾಣ,
ಐತಿಹಾಸಿಕ, ಜನಪದ ಕತೆ-ಕಾವ್ಯಗಳಲ್ಲಿ
ಕುಂಟಾಬಿಲ್ಲೆ ಆಡುವ ವಯಸ್ಸಿನ ಒಬ್ಬಳೂ ಕಾಣಿಸುವುದಿಲ್ಲ. ಕಣ್ಣು ಮುಚ್ಚಿದಾಗಲೆಲ್ಲ ಕಾಣಿಸುವ ಅಹಲ್ಯಾ, ತಾರಾ, ಸೀತೆ, ಮಂಡೋದರಿ, ದ್ರೌಪದಿ, ಅಧಿತಿ, ಹಿಡಿಂಬೆ, ಶೂರ್ಪನಕಿ, ಮಂಥರೆ, ಸೌಮಿತ್ರೆ, ಕೌಸಲ್ಯೆ, ಕೈಕೇಯಿ, ಲಕ್ಷ್ಮಿ, ಶಚಿ, ರಾಧಾ, ರುಕ್ಮಿಣ, ಸತ್ಯಭಾಮಾ, ಜಾಂಬವಂತೆ, ಯಶೋದಾ, ದೇವಕಿ, ಮತ್ಸ್ಯಗಂದೀ, ಅಂಬೆ, ಅಂಬಾಲಿಕಾ, ಮಾದ್ರಿ, ಕುಂತಿ, ಭಾನುಮತಿ, ಉತ್ತರೆ, ರೇಣುಕಾದೇವಿ, ಅಕ್ಕಮಹಾದೇವಿ, ಝಾನ್ಸಿರಾಣಿ, ಚೆನ್ನಮ್ಮ, ಓಬವ್ವ, ಜೀಜಾಬಾಯಿ, ಶಾರದಾಂಬೆ, ಮೀನಾಕ್ಷಿ, ನೂರ್, ಮಮ್ತಾಜ್, ಫಾತಿಮಾ, ಖತೀಜಾ, ಜಹನಾರಾ, ಮರಿಯಮ್ಮ ಕೊನೆಗೆ ಮನುಕುಲದ ಮೊತ್ತ ಮೊದಲ ತಾಯಿ ಎಂದು ನಂಬಲಾಗುವ ಅವ್ವ [ಈವ್] ಮೊದಲಾದ ಹೆಣ್ಣುಮಕ್ಕಳು ನಮ್ಮೆಲ್ಲಾ ಪುರಾಣ-ಇತಿಹಾಸ-ಜಾನಪದಗಳಲ್ಲಿ ಎಂಟ್ರಿ ಕೊಡುವುದೇ ದೊಡ್ಡವಳಾಗಿ ‘ಪುರುಷಸೂಕ್ತ’ಳೆನ್ನಿಸಿದ ಬಳಿಕ.
ಕನ್ನಡದಲ್ಲಿ ಮುದ್ರಣ ಯುಗದ ಆರಂಭವಾದಂದಿನಿಂದ ಕಳೆದ ಶತಮಾನದ ಅಂತ್ಯದವರೆಗೆ ಕಾಣಿಸುವ ಮಹಿಳಾ ಸಾಹಿತಿಗಳಲ್ಲಿ ಮಕ್ಕಳಿಗಾಗಿ ಪುಸ್ತಕ ಪ್ರಕಟಿಸಿದವರನ್ನು ಎಣಿಸಲು ಒಂದು ಮುಷ್ಟಿ ಬೆರಳುಗಳ ಅಗತ್ಯವೂ ಇಲ್ಲ. ಕನ್ನಡದಲ್ಲಿ ಐದಾರು ವರ್ಷಗಳ ಹಿಂದೆ ಪ್ರಕಟವಾಗಿದ್ದ ಮೂವತ್ತು ಸುಪ್ರಸಿದ್ದ ಹಿರಿಯ ಮಹಿಳಾ ಸಾಹಿತಿಗಳ ಆತ್ಮ ಕಥನಗಳಲ್ಲಿ ಒಬ್ಬರೇ ಒಬ್ಬ ತಾಯಿಯೂ, ಮಕ್ಕಳಿಗಾಗಿ ತಾನೊಂದು ಪುಸ್ತಕ ಪ್ರಕಟಿಸಿದ್ದೇನೆಂದು ಹೇಳಿಕೊಂಡಿಲ್ಲ. ನಮ್ಮ ಹೊಸತಲೆಮಾರಿನ ಮಕ್ಕಳ ಸಾಹಿತಿಗಳಲ್ಲಿ ಮಾಸ್ತರುಗಳ ಸಂಖ್ಯೆಯೇ ಹೆಚ್ಚು. ಅವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಟೀಚರುಗಳಲ್ಲಿ ಮಕ್ಕಳ ಪುಸ್ತಕ ಬರೆದು ಪ್ರಕಟಿಸಿದವರು ತೀರಾ ಕಡಿಮೆ. ಮನೆ ಮತ್ತು ಶಾಲೆಗಳಲ್ಲಿ ಬದುಕಿನುದ್ದಕ್ಕೂ ಮಕ್ಕಳ ಜೊತೆಗೇ ಬದುಕುವ ನಮ್ಮೆಲ್ಲಾ ಟೀಚರುಗಳು ಮಕ್ಕಳ ಸಾಹಿತ್ಯದತ್ತ ಆಸಕ್ತಿವಹಿಸುದಿಲ್ಲ ಯಾಕೆ? ಪಶ್ಚಿಮ ಬಂಗಾಳದಲ್ಲಿ ಮಕ್ಕಳ ಸಾಹಿತ್ಯದಲ್ಲಿ ಸ್ವಲ್ಪವಾದರೂ ಕೆಲಸ ಮಾಡದ ಸಾಹಿತಿಗಳನ್ನು ಯಾವುದೇ ದೊಡ್ಡ ಸಾಹಿತ್ಯ ಪ್ರಶಸ್ತಿಗೆ ಪರಿಗಣಿಸುವುದಿಲ್ಲವಂತೆ!
ಕನ್ನಡದ ಬಹಳಷ್ಟು ಬರಹಗಾರರನ್ನು ಬೆಂಬಲಿಸಿ ಬೆಳೆಸಿದ್ದ ಪ್ರಜಾವಾಣಿ ಪತ್ರಿಕೆಯ ನಿರ್ಮಾಪಕ-ನಿರ್ವಾಹಕ-ಸಂಪಾದಕರು ಈ ವರ್ಷದ ಮಕ್ಕಳ ದಿನಾಚರಣೆಯ ವಿಶೇಷ ಸಂಚಿಕೆಗೆ ಅತಿಥಿ ಸಂಪಾದಕನಾಗಬೇಕೆಂದು ಆದೇಶ ನೀಡಿದಾಗ ನನ್ನನ್ನು ಕಾಡಿದ ಪ್ರಶ್ನೆಗಳು ಇವು.
ಈ ಸಂಚಿಕೆಯ ಎಲ್ಲ ಪುಟಗಳನ್ನು ತುಂಬಬಲ್ಲಷ್ಟು ಬರಹಗಳನ್ನು ಹೆಣ್ಣು ಮಕ್ಕಳಿಂದಷ್ಟೇ ಸಂಪಾದಿಸಲು ಸಾಧ್ಯವೇ ಎಂಬ ಅಳುಕಿನಿಂದಲೇ ಆರಂಭಿಸಿದ ಈ ಕೆಲಸಕ್ಕೆ, ಅತ್ಯಲ್ಪ ಅವಧಿಯಲ್ಲಿ ವೈವಿಧ್ಯಮಯ ಬರಹಗಳನ್ನು ಒದಗಿಸಿದ ಎಲ್ಲ ಲೇಖಕಿಯರಿಗೂ ಕೃತಜ್ಞತೆಗಳು. ಈ ಅಪೂರ್ವ ಅವಕಾಶವನ್ನು ಒದಗಿಸಿದ ಪ್ರಜಾವಾಣಿಯ ಎಲ್ಲ ಗೆಳೆಯರಿಗೂ ನನ್ನ ವಂದನೆಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.