ADVERTISEMENT

ಪುಲಿಮೊಗರು ಪಟ್ಟಣವೂ... ಪಂಗಾಳಿಯ ಜೆನ್ಸಿಯೂ...

ಕಥೆ

ಟಿ.ಕೆ.ದಯಾನಂದ
Published 11 ಅಕ್ಟೋಬರ್ 2014, 19:30 IST
Last Updated 11 ಅಕ್ಟೋಬರ್ 2014, 19:30 IST

ಇದೆಲ್ಲವೂ ಆಗಿ ಹದಿನೇಳನೇ ದಿನಕ್ಕೆ ಕುಳಾಯಿಕಾಡಿನ ಮೂಲೆಯಲ್ಲಿದ್ದ ಸ್ಮಶಾನದ ಪೊದೆಯೊಂದರಲ್ಲಿ ಗೋಣಿಚೀಲದೊಳಗೆ ಮುಖಚಹರೆ ಗುರುತಿಸಲಾಗದಷ್ಟು ಕೊಳೆತುಹೋಗಿದ್ದ ಶವವೊಂದು ಪತ್ತೆಯಾಗಿತ್ತು. ಅದಾಗಲೇ ದುರ್ವಾಸನೆ ಹೊಡೆಯುತ್ತಿದ್ದ ಆ ಚೀಲವನ್ನು ಬೀಡಾಡಿನಾಯಿಗಳು ಎಳೆದಾಡಿ ಹೊರತಂದಿದ್ದರಿಂದಲೇ ಇದು ಎಲ್ಲರ ಗಮನಕ್ಕೂ ಬಂದಿತ್ತು.

ಯಾವುದೋ ಅನಾಥಹೆಣ ಸಿಕ್ಕಿದೆಯೆಂಬ ಸುದ್ದಿ ಬರುತ್ತಲೇ ಬಾಯಿ ಬಡಿದುಕೊಂಡು ಮಗಳೊಡನೆ ಓಡಿ ಬಂದ ಜೆನ್ಸಿ ಇದು ಹದಿನೇಳು ದಿನಗಳ ಹಿಂದೆ ಮನೆಬಿಟ್ಟು ಹೋದ ತನ್ನ ತಂದೆ ಪಂಗಾಳಿಯದ್ದೇ ಹೆಣವೆಂದು ಪೊಲೀಸರ ದುಂಬಾಲು ಬಿದ್ದಿದ್ದಳು. ಗುರ್ತಿಸಲೂ ಆಗದಷ್ಟು ವಿಕಾರಗೊಂಡ ಹೆಣದ ಚಹರೆಪಟ್ಟಿ ದಾಖಲುಮಾಡುತ್ತಿದ್ದ ಇನ್‌ಸ್ಪೆಕ್ಟರ್ ದಂಡಪಾಣಿಗೆ ಹೆಣದ ಎಡಗೈಮೇಲೆ ಅಸ್ಪಷ್ಟವಾಗಿ ಕಾಣಿಸುತ್ತಿದ್ದ ‘ಲತ’ ಎಂಬ ಹೆಸರನ್ನು ನೋಡಿ ಈ ಹೆಣದ ಚಹರೆಪಟ್ಟಿಯನ್ನು ಈಗಾಗಲೇ ಹಿಂದೊಮ್ಮೆ ನೋಡಿದ್ದ ನೆನಪಾಯಿತು. ಯಾವುದಕ್ಕೂ ಇರಲೆಂದು ಸ್ಟೇಷನ್ನಿನಲ್ಲಿ ತಿಂಗಳ ಹಿಂದಿನ ಅನಾಥಶವಗಳ ವಿಲೇವಾರಿ ಫೈಲುಗಳನ್ನು ತಡವಿದಾಗ ಈಗ ದೊರೆತ ಹೆಣದ್ದೇ ಚಹರೆಪಟ್ಟಿ ಸಿಕ್ಕಿತ್ತು.

ಈಗಾಗಲೇ ವಿಲೇವಾರಿಗೊಂಡು ಮಣ್ಣಾಗಿರುವ ಅದೇ ಹೆಣವು ಹದಿನೇಳು ದಿನಗಳ ನಂತರ ಮತ್ತೊಮ್ಮೆ ಚೀಲದಲ್ಲಿ ಸಿಗುವುದರ ಮರ್ಮವು ದಂಡಪಾಣಿಗೆ ಎಲ್ಲಿಂದಲೂ ಗೊತ್ತಾಗಲಿಲ್ಲವಾಗಿ ಹೆಣದ ಶವಪರೀಕ್ಷೆ ವರದಿಯಲ್ಲಿ ನಮೂದಾಗಿದ್ದ ಆಟೋಪ್ಸಿತಜ್ಞ ದೇವನಾಯಗಂರನ್ನು ಸಂಪರ್ಕಿಸಿದ್ದನು. ದಂಡಪಾಣಿಯಿಂದ ಎಲ್ಲವನ್ನೂ ಕೇಳಿಸಿಕೊಂಡ ದೇವನಾಯಗಂ, ಶವಪರೀಕ್ಷೆ ನಡೆದ ನಂತರ ವರದಿ ಸಿದ್ಧಪಡಿಸಿದ ಮೇಲೆ ಆ ಅನಾಥಹೆಣವನ್ನು ತಮ್ಮ ಆಸ್ಪತ್ರೆಯ ಶವಾಗಾರದ ವಾಚ್‌ಮನ್ ಪಂಗಾಳಿ ಮತ್ತು ಶವಸಾಗಿಸುವ ಮೆಟಡೋರ್ ಡ್ರೈವರ್ ಟೋಬಿ ವಶಕ್ಕೆ ಮಣ್ಣುಮಾಡಲು ಕಳಿಸಿಕೊಟ್ಟಿದ್ದಾಗಿ ಹೇಳಿದರು. ಆಶ್ಚರ್ಯವೆಂಬಂತೆ ಮೂಟೆಯಲ್ಲಿ ಹೆಣ ತೆಗೆದುಕೊಂಡು ತೆರಳಿದ ವಾಚ್‌ಮನ್ ಪಂಗಾಳಿ ಅನ್ನುವ ಮಾತುಬಾರದ ವೃದ್ಧ ಆವತ್ತಿಂದ ನಾಪತ್ತೆಯಾಗಿದ್ದಾನೆ ಎಂಬ ವಿವರಣೆಯನ್ನು ದೇವನಾಯಗಂನಿಂದ ಕೇಳಿದ ನಂತರ ದಂಡಪಾಣಿಗೆ ಈ ಕೇಸು ಇನ್ನಷ್ಟು ಜಟಿಲವಾದಂತೆನಿಸತೊಡಗಿತು.

ಪತ್ತೆಯಾದ ಹೆಣ ಪಂಗಾಳಿಯದ್ದಲ್ಲವೆಂದಾದಲ್ಲಿ ಅದೇ ಹೆಣ ತೆಗೆದುಕೊಂಡು ವಿಲೇವಾರಿಗೆ ಹೋದ ಪಂಗಾಳಿ ಏನಾಗಿಹೋದ? ಎಂಬ ಸಂಗತಿ ಅವನ ತಲೆ ಕೆಡಿಸತೊಡಗಿತು. ಬಿಡಿಸಲೆತ್ನಿಸಿದಷ್ಟೂ ಈ ಪ್ರಕರಣ ಇನ್ನಷ್ಟು ಮತ್ತಷ್ಟು ಸಿಕ್ಕುಸಿಕ್ಕಾಗಿ ಪಂಗಾಳಿ ಎಂಬ ಮೂಗವೃದ್ಧನು ದಂಡಪಾಣಿಯ ಬುದ್ಧಿವಂತಿಕೆಯ ಎಲ್ಲ ಮಜಲುಗಳಿಗೂ ಮೂರೂ ಮೂಲೆಯಿಂದ   ಬೆಂಕಿಯಿಡತೊಡಗಿದ್ದನು.
                        
ಯಾರ ತಲೆಯೊಳಗೂ ಇದೊಂದು ನೆನಪಿನಲ್ಲಿಡಬಹುದಾದ ಜೀವ ಎಂದು ಯಾವತ್ತೂ ದಾಖಲಾಗದ ಪಂಗಾಳಿ ಅನ್ನೋ ಮೂಗಜೀವದ ಬಗ್ಗೆ ಅವನನ್ನು ಹೊರತುಪಡಿಸಿ ಪುಲಿಮೊಗರು ಎಂಬ ಪಟ್ಟಣದ ಜನರಿಗೆ ಇದ್ದ ಸುಳಿವುಗಳು ತುಂಬಕಡಿಮೆ. ಅವನು ಹುಟ್ಟಿದ್ದೆಲ್ಲಿ ಬೆಳೆದಿದ್ದೆಲ್ಲಿ, ಹೆತ್ತವರು, ಬೀದಿಗೊಗೆದವರು ಯಾರೆಂಬುದು ಅವನ ನಿಲುಕಿಗೂ ದಕ್ಕದೆ ಯಾವುದೋ ಕಾಲವಾಗಿತ್ತು. ಪುಲಿಮೊಗರಿನಲ್ಲಿ ದೊಡ್ಡಾಸ್ಪತ್ರೆಯೆಂಬುದು ಆಗುವ ತನಕ ಪಂಗಾಳಿಯ ಮಹತ್ವವೇನೆಂಬುದು ಯಾರಿಗೂ ತಿಳಿದಿರಲಿಲ್ಲ.

ಆಸ್ಪತ್ರೆಯೇನೋ ಆಯಿತು, ಆದರೆ ಅದಕ್ಕೊಂದು ಶವಾಗಾರವೂ ಗತಿಯಿಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಫಲವಾಗಿ ಅಸಹಜವಾಗಿ ಸತ್ತವರ ಶವಪರೀಕ್ಷೆಗೆ 16 ಕಿಲೋಮೀಟರು ದೂರದ ಅಂಕೋಲೆಯ ಸರ್ಕಾರಿ ಆಸ್ಪತ್ರೆಗೆ ಹೆಣಕ್ಕಾಗಿ ಅಲೆದಾಡುತ್ತಿದ್ದ ಜನರಿಗೆ ಯಾಕಾದರೂ ಸತ್ತನೋ ಅಂತ ಸತ್ತವರ ಮೇಲೆಯೇ ರೋಷವುಕ್ಕುವಂತಾಗುತ್ತಿತ್ತು. ಪುಲಿಮೊಗರಿನಿಂದ ಆಸ್ಪತ್ರೆಯ ಹೆಣದವ್ಯಾನಿನಲ್ಲಿ ಹೊರಟ ಶವವನ್ನು ಅಂಕೋಲೆಯ ನ್ಯಾಯವೈದ್ಯಶಾಸ್ತ್ರದ ವೈದ್ಯರು ಕೊಯ್ದು ಶವದ ಅಸಲಿ ಕಾರಣವನ್ನು ಸರ್ಟಿಫೈ ಮಾಡದೆ ಸಂಬಂಧಿಕರಿಗೆ ದಾಟಿಸುವಂತಿರಲಿಲ್ಲ. ಆತ್ಮಹತ್ಯೆಯ ಕೇಸುಗಳಾದರಂತೂ ಪೊಲೀಸುಗಿಲೀಸೆಂದು ಎರಡು ದಿನವಾದರೂ ಹೆಣ ಸಂಬಂಧಿಕರ ಕೈಸೇರುತ್ತಿರಲಿಲ್ಲ. ಇದಕ್ಕೊಂದು ದಾರಿ ಮಾಡಬೇಕೆಂದು ಊರಜನಗಳು ಪುಲಿಮೊಗರಿಗೂ ಒಂದು ಶವಾಗಾರ ಬೇಕೆಂದು ಪಟ್ಟುಹಿಡಿದು ಕುಂತಿದ್ದರ ಪರಿಣಾಮ ಆಸ್ಪತ್ರೆಯ ಹಿಂದೆ ಒಂದು ಶವಾಗಾರ–ಹೆಣಕೊಯ್ಯುವ ಶೀಟಿನ ಮನೆಯೊಂದು ಎದ್ದುನಿಂತಿತ್ತು.

ಇದಾದ ಮೇಲೆಯೇ ಪಂಗಾಳಿಯ ಹೆಸರನ್ನು ಜನರು ಕೇಳುವಂತಾಗಿತ್ತು. ಅಸಲಿಗೆ ಹೆಣದ ಮನೆಯಲ್ಲಿ ಶವಪರೀಕ್ಷೆ ಮಾಡುವ ಉಸ್ತುವಾರಿ ಆಸ್ಪತ್ರೆಯ ಆಟೋಪ್ಸಿತಜ್ಞ ದೇವನಾಯಗಂದಾಗಿತ್ತು. ದಿನಬೆಳಗಾದರೆ ಹೆಣಕೊಯ್ದು ಆ ದರಿದ್ರ ವಾಸನೆಯನ್ನ ಮನೆಗೂ ತರ್ತೀಯ ಎಂದು ಹೆಂಡತಿ ಹತ್ತಿರ ಬಿಟ್ಟುಕೊಳ್ಳದೆ ಕಕಮಕ ಉಗಿಯುತ್ತಿದ್ದರಿಂದ, ಶಿಫಾರಸ್ಸಿನ ಮೇಲೆ ಶವಾಗಾರವಿಲ್ಲದ ಪುಲಿಮೊಗರು ಆಸ್ಪತ್ರೆಯ ಕಡೆಗೆ ವರ್ಗಾವಣೆ ತೆಗೆದುಕೊಂಡು ಬಂದಿದ್ದ ದೇವನಾಯಗಂಗೆ ಇಲ್ಲಿಗೂ ಅಮರಿಕೊಂಡ ಹೆಣಕೊಯ್ಯುವ ಉಸಾಬರಿಗೆ ಅಳುವಂತಾಗುತ್ತಿತ್ತು. ಆಸ್ಪತ್ರೆಯ ಹೆಣದವ್ಯಾನಿನ ಡ್ರೈವರಾದ ಟೋಬಿಗೆ ತನಗೆ ಹೆಣಕೊಯ್ಯುವ ಕೆಲಸದಲ್ಲಿ ಅಸಿಸ್ಟಂಟ್ ಆಗಿರಲು ಒಬ್ಬನನ್ನು ಎಳೆತರಲು ಸೂಚಿಸಿದ್ದನು. ಟೋಬಿ ಇದ್ಯಾವ ತಲೆನೋವೆಂದು ಅವರಿವರನ್ನು ವಿಚಾರಿಸಲಾಗಿ ಪಂಗಾಳಿ ಅನ್ನೋ ಮೂಗನೊಬ್ಬನ ದನ ಕೊಯ್ಯುವ ಸಾಹಸಗಳು ಕಿವಿಗೆ ಬಿದ್ದಿದ್ದವು.

ಸೆಟಗೊಂಡ ಸತ್ತವರ ಕಾಲುಗಳನ್ನು ಲೊಟಲೊಟನೆ ತಿರುಗಿಸಿ ಚಕ್ಕಮಕ್ಕಳ ಹಾಕಿ ಎರಡೂ ಕೈಯನ್ನು ಕಟ್ಟಿಕೊಂಡಂತೆ ತಿರುಗಿಸುವಲ್ಲಿ ಪಂಗಾಳಿ ಎತ್ತಿದಕೈಯವನು ಎಂಬ ಸುದ್ದಿಯನ್ನು ಟೋಬಿಯ ಬಾಯಿಂದ ಕೇಳುತ್ತಲೇ ದೇವನಾಯಗಂ ರೋಮಾಂಚಿತನಾಗಿಹೋಗಿದ್ದ, ಜೊತೆಗೆ ಬೇಬಿಸಾಬರ ದನದಂಗಡಿಗೆ ಚರ್ಮ ಕಳೆದುಕೊಂಡು ಬರೆಬೆತ್ತಲೆ ಬರುತ್ತಿದ್ದ ದನಗಳನ್ನು ಚರ್ಮವೆಬ್ಬಿ ಪಾರ್ಟುಪಾರ್ಟು ಕೊಯ್ದು ತಲೆ-ಮೂಳೆ, ಮಾಂಸ-ಚರ್ಬಿಗಳನ್ನು ವಿಂಗಡಿಸುವ ಕೆಲಸದಲ್ಲಿ ಪಂಗಾಳಿಯ ಧ್ಯಾನಸ್ಥ ತನ್ಮಯತೆಯನ್ನು ಕಣ್ಣಿಂದ ಕಂಡಮೇಲಂತೂ ದೇವನಾಯಗಂ ಇವನನ್ನು ಬಿಟ್ರೆ ಕೆಟ್ಟೆ ಎಂಬ ಸ್ಥಿತಿಗೆ ತಳ್ಳಲ್ಪಟ್ಟು ಪಂಗಾಳಿಗೆ ದುಂಬಾಲು ಬಿದ್ದು ತನಗೆ ಅಸಿಸ್ಟೆಂಟಾಗಿರಲು ಪರಿಪರಿಯಾಗಿ ಬೇಡಿಕೊಂಡಿದ್ದರ ಫಲವಾಗಿ ಪಂಗಾಳಿಗೆ ದೊಡ್ಡಾಸ್ಪತ್ರೆಯ ಶವಾಗಾರದ ಟೆಂಪೊರೆರಿ ವಾಚ್‌ಮನ್ ಕೆಲಸ ಸಿಕ್ಕಿತ್ತು.

ಅಲ್ಲಿಯತನಕ ಒಂದು ದನಕ್ಕಿಷ್ಟು ಎಂದು ದಿನವೂ ದುಡ್ಡುಕೊಟ್ಟು ತನ್ನನ್ನು ಪೊರೆಯುತ್ತಿದ್ದ ಬೇಬಿಸಾಬರಿಗೂ ಬಾಯಿ ಬಿದ್ದುಹೋದ ಪಂಗಾಳಿಗೂ ಯಜಮಾನ–ಕೆಲಸಗಾರನ ವರ್ಷಗಳ ವೃತ್ತಿತಂತು ಅಲ್ಲಿಗೆ ಕಡಿದುಬಿದ್ದಿತ್ತು. ಹೆಸರಿಗೆ ಶವಾಗಾರದ ಟೆಂಪೊರೆರಿ ವಾಚ್‌ಮನ್ ಕೆಲಸವಾದರೂ ದೇವನಾಯಗಂ ಪಂಗಾಳಿಯನ್ನು ಶವಪರೀಕ್ಷೆಯ ಹೆಣಗಳನ್ನು ಕೊಯ್ಯಲು ಅನಧಿಕೃತವಾಗಿ ಬಳಸಿಕೊಳ್ಳುತ್ತಿದ್ದ.

ಮೊದಲಿಗೆ ಶವಹನನಕ್ರಿಯೆಯ ತಲೆಬುಡ ತಿಳಿಯದಿದ್ದ ಪಂಗಾಳಿಗೆ ದೇವನಾಯಗಂ ಅದನ್ನು ವಿಷದವಾಗಿ ಕಲಿಸಿಕೊಟ್ಟಿದ್ದ. ದೊಡ್ಡಾಸ್ಪತ್ರೆಯಲ್ಲಿ ನಾನಾಬಗೆಯ ಕಾಯಿಲೆ ಕಸಾಲೆಗಳಿಗೆ ಕೊರಳೊಪ್ಪಿಸಿ ಜೀವಬಿಟ್ಟವರ ಹೆಣಗಳನ್ನು ವಾರ್ಡಿನಿಂದ ಹೊತ್ತುತಂದು ಶವಾಗಾರದ ಹವಾನಿಯಂತ್ರಿತ ಶವದ ಕಂಪಾರ್ಟುಮೆಂಟು ಬಾಕ್ಸುಗಳಲ್ಲಿ ಇಡುವುದು, ಒಂದೊಂದು ಶವದ ಬಲಗಾಲಿನ ಹೆಬ್ಬೆರಳಿಗೆ ಪೇಪರ್‌ಟ್ಯಾಗೊಂದರಲ್ಲಿ ಆ ಹೆಣಕ್ಕೊಂದು ನಂಬರ್ ಬರೆದು ನೇತಾಡಿಸುವುದು, ದೇವನಾಯಗಂನಿಂದ ಇಂಥ ನಂಬರಿನ ಹೆಣದಪರೀಕ್ಷೆಯೆಂದು ಸೂಚನೆ ಬಂದಾಕ್ಷಣ ಶವಪರೀಕ್ಷೆಯ ಕೊಠಡಿಗೆ ಆಯಾ ಶವವನ್ನು ಸಾಗಿಸುವುದು, ಹೆಣಕೊಯ್ಯಲು ಬಳಸುವ ಯಾಂತ್ರಿಕ ಗರಗಸ, ಚೂರಿ, ಕತ್ತರಿ, ಹೊಲಿಗೆ ಉಪಕರಣಗಳು ಮತ್ತು ಬಿಸಿನೀರನ್ನು ವ್ಯವಸ್ಥೆಗೊಳಿಸುವುದು, ಬಾಯಿಗೆ ಬಿಳಿಬಟ್ಟೆ ಸುತ್ತಿಕೊಂಡು ನಿಂತು ಸೂಚನೆ ಕೊಡುವ ದೇವನಾಯಗಂನ ಮಾತಿನಂತೆ ಶವದ ಅಂಗಾಂಗಗಳನ್ನು ಪರೀಕ್ಷಿಸುವುದು, ಪೊಲೀಸು ಕೇಸಿಗೆ ಬೇಕಿದ್ದರೆ ಅವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲು ಸಂಗ್ರಹಿಸಿಟ್ಟುಕೊಳ್ಳುವುದು, ನಂತರ ಬಿಳಿಬಟ್ಟೆಯಲ್ಲಿ ದೇಹವನ್ನು ಸುತ್ತಿ ಹೆಣಕೊಯ್ಯುವ ಕೋಣೆಯ ಹೊರಗೆ ವ್ಯಸನವೇ ದೇಹರೂಪಿಯಾದಂತೆ ಕಾಯುತ್ತಿರುತ್ತಿದ್ದ ಸಂಬಂಧಿಕರಿಗೆ ಒಪ್ಪಿಸುವುದು, ಬೇವರ್ಸಿ ಹೆಣವಾದರೆ ಅದನ್ನು ಮಣ್ಣುಮಾಡಲೆಂದೇ ಇದ್ದ ಕಪ್ಪುಮೆಟಾಡೋರಿನ ಡ್ರೈವರ್ ಟೋಬಿಯ ವಶಕ್ಕೆ ಒಪ್ಪಿಸುವುದು ಪಂಗಾಳಿಯ ಕೆಲಸಗಳಾಗಿದ್ದವು. ಕೊಯ್ಯಲು ದನವಾದರೂ, ಮನುಷ್ಯನಾದರೂ ಎರಡೂ ಜೀವಕಳೆದುಕೊಂಡ ತೃಣದೇಹಗಳೆಂಬುದನ್ನು ಯಾವಾಗಲೋ ಅರಿತಿದ್ದ ಪಂಗಾಳಿಗೆ ಇದು ಕಷ್ಟದ್ದೇನೂ ಅನ್ನಿಸಿರಲಿಲ್ಲ.

ಮಾತೇ ಬರದೆ, ಯಾರಿಗೂ ಅರ್ಥವಾಗದ ಭಾಷೆಯೊಂದನ್ನು ಕಂಡುಹಿಡಿದುಕೊಂಡಿದ್ದ ಪಂಗಾಳಿಯು ಅದನ್ನು ಬಳಸಿಯೇ ಕೈಸನ್ನೆಗಳ ಮೂಲಕ ಇತರರೊಡನೆ ಸಂವಹಿಸುತ್ತಿದ್ದ. ಇವನ ದಿಗಿಲುಹುಟ್ಟಿಸುವ ಶಬ್ದಗಳ ಭಾಷೆಯನ್ನು ಕೆಲವರು ಉಲ್ಟಾ ಅರ್ಥ ಮಾಡಿಕೊಂಡು ಇನ್ನೇನೋ ಹೇಳುವುದು, ರೇಗತ್ತಿಹೋಗುವ ಇವನು ತಲೆಗೆ ಫಟಫಟಾರನೆ ಬಡಿದುಕೊಂಡು ಮತ್ತೊಮ್ಮೆ ಅದನ್ನೇ ಅದೇ ಶಾಬ್ದಿಕವಾಗಿ ಹೇಳುವುದು ಅದು ಇನ್ನಷ್ಟು ರಂಕಲಿಗೆ ಕಾರಣವಾಗುವುದು, ಹೀಗೆ ಒಂದಷ್ಟು ತರಲೆತಿಕ್ಕಲುಗಳು ಪಂಗಾಳಿಯ ಮೂಗಭಾಷೆಯಿಂದ ನಡೆಯುತ್ತಿದ್ದವು.   

ಅಲ್ಲಿಯತನಕ ಇದ್ದ ಒಬ್ಬಳೇ ಮಗಳು ಜೆನ್ಸಿಯೊಡನೆ ಊರಿಂದ ದೂರವಿದ್ದ ಕುಳಾಯಿಕಾಡು ಎಂಬಲ್ಲಿ ಪಂಗಾಳಿ ದಿವಿನಾಗೇ ಬದುಕುತ್ತಿದ್ದವನಾಗಿದ್ದನು. ಮದುವೆಪದುವೆ ಅಂತ ಯಾವುದೂ ಆಗದ ಈ ಮೂಗನಿಗೆ ಇಷ್ಟುದ್ದದ ಮಗಳೆಲ್ಲಿಂದ ಭೂಮಿ ಸೀಳಿಕೊಂಡು ಬಂದಳೋ ಎಂದು ಅವರಿವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಕೆತ್ತಕ್ಯಾರೇ ಏನೂ ಅನ್ನದೆ ಸುಮ್ಮನಿದ್ದು ಬಿಡುತ್ತಿದ್ದ ಪಂಗಾಳಿಗೆ ಜೆನ್ಸಿ ಮಗಳಾಗಿ ದಕ್ಕಿದ್ದರ ಹಿಂದೊಂದು ಕಥೆಯಿತ್ತು. ಬೇಬಿಸಾಬರ ಕಸಾಯಿಅಂಗಡಿಗೆ ದನಗಳನ್ನು ಕೊಯ್ದುಕೊಡುವ ಕೆಲಸಕ್ಕೆ ಸೇರುವುದಕ್ಕಿಂತ ಮುಂಚೆ, ಅವನು ಪುಲಿಮೊಗರಿನ ಬೆಸ್ತರ ಬಲೆಹೆಣೆಯುವ, ಮೀನುಬೋಟುಗಳ ತಳಕ್ಕೆ ಟಾರು ಬಳಿಯುವ ಕೆಲಸ ಮಾಡುತ್ತಿದ್ದ. ಆ ಕೆಲಸದಿಂದಲೇ ಅನ್ನದಗುಳುಗಳನ್ನು ಹೆಕ್ಕಿಕೊಳ್ಳುತ್ತಿದ್ದ ಪಂಗಾಳಿಯು, ಅದೆಂಥದೋ ಔಷಧದ ಗುಣವಿದ್ದ ನವಿಲುಬಾಣೆಯ ಹಳ್ಳದ ಕೆಸರನ್ನು ಆಗಾಗ ತಿನ್ನಲು ಬರುತ್ತಿದ್ದ ಕಳ್ಳುಕುಡುಕ ಬೆಕ್ಕುಗಳ ಹಣೆಗೆ ಕವೆಗೋಲಿಗೆ ಕಲ್ಲುಸಿಗಿಸಿ ಗುರಿಯಿಟ್ಟು ಹೊಡೆದು ಬೇಯಿಸಿ ತಿನ್ನುವ ಪರಿಪಾಠ ಬೆಳೆಸಿಕೊಂಡಿದ್ದ.

ಹೀಗೆಯೇ ಒಂದುದಿನ ಕವೆಗೋಲೆತ್ತಿಕೊಂಡು ನವಿಲುಬಾಣೆಗೆ ಹೋದಾಗ ಅಲ್ಲಿನ ಪೊದೆಮರೆಯಲ್ಲಿ ಬಟ್ಟೆಯೊಂದರಲ್ಲಿ ಸುತ್ತಿಟ್ಟಿದ್ದ ಎಳೆಗೂಸು ಜೆನ್ಸಿ ಸಿಕ್ಕಿದ್ದಳು. ಯಾರು ಯಾಕಾಗಿ ಅವಳನ್ನು ಅಲ್ಲಿ ತ್ಯಜಿಸಿಹೋಗಿದ್ದರೋ ಅವಳಿಗೂ ಗೊತ್ತಿರಲಿಲ್ಲ, ಇವನಿಗೂ ಗೊತ್ತಾಗಲಿಲ್ಲ. ಒಂದೆರಡು ದಿನ ಕಂಕುಳಲ್ಲಿ ಅವಳನ್ನು ಎತ್ತಿಕೊಂಡು ಸುತ್ತಮುತ್ತಲೆಲ್ಲ ಅವಳ ಕಳ್ಳುಬಳ್ಳಿಯನ್ನು ಹುಡುಕಿಕೊಂಡು ಅಲೆದಿದ್ದ ಪಂಗಾಳಿಗೆ ಆ ತ್ಯಕ್ತಮಗುವನ್ನು ಇದು ತಮ್ಮದೆಂದು ಹೇಳಲು ಯಾರೂ ಸಿಕ್ಕಿರಲಿಲ್ಲ. ಆವತ್ತಿನಿಂದ ಅವನ ಮುರುಕಲುಮನೆಯೇ ಜೆನ್ಸಿಗೂ ಮನೆಯಾಯಿತು. ಬೆಳೆಯುತ್ತ ಬೆಳೆಯುತ್ತ ಜೆನ್ಸಿಯೂ ಪಂಗಾಳಿಯೇ ತನ್ನ ತಂದೆಯೆಂದು ನಂಬುತ್ತಲೇ ಬೆಳೆದಳು. ತನ್ನ ಜಾತಿಧರ್ಮದ ಬಗ್ಗೆ ಯಾವ ಕುರುಹೂ ಲಭ್ಯವಿಲ್ಲದೆ ಮನಸೋಇಚ್ಛೆ ಬದುಕುತ್ತಿದ್ದ ಪಂಗಾಳಿಗೆ ಮಗಳಿಗಾದರೂ ಒಂದಿರಲಿ ಎಂದು ಪುಲಿಮೊಗರಿನ ಇಗರ್ಜಿಯ ಪಾದ್ರಿ ಇಗ್ನೇಶಿಯಸ್ ಮುಂದೆ ಜೆನ್ಸಿಯನ್ನು ಇಟ್ಟು ಇವಳಿಗೊಂದು ಹೆಸರಿಡಲು ಕೈಸನ್ನೆಯಲ್ಲಿ ಕೇಳಿಕೊಂಡಿದ್ದ.

ಅವಳ ಹಣೆಗೆ ಪವಿತ್ರಜಲದಲ್ಲಿ ಶಿಲುಬೆ ಬರೆದ ಪಾದ್ರಿಯು ಅವಳಿಗೆ ಜೆನ್ಸಿಯೆಂದು ಹೆಸರಿಟ್ಟು ಇವನ ಹಣೆಯ ಮೇಲೂ ಬೆರಳಲ್ಲಿ ಶಿಲುಬೆಬರೆದು ಅದ್ಯಾವುದೋ ಉಚ್ಚರಿಸಲಾಗದ ಅಂಗ್ರೇಜಿ ಹೆಸರುಕೊಟ್ಟು ಕಳುಹಿಸಿದ್ದ. ತಲೆತಲೆ ಕೆರೆದುಕೊಂಡರೂ ತನಗೆ ಪಾದ್ರಿಯಿಟ್ಟ ಹೆಸರೇನೆಂಬುದು ಪಂಗಾಳಿಗೆ ನೆನಪಿಗೆ ಬರದೇ ಮಗಳ ಹೆಸರೊಂದನ್ನು ಜತನದಿಂದ ನೆನಪಲ್ಲಿಟ್ಟುಕೊಂಡಿದ್ದ. ಕೇಳಿವರಿಗೆಲ್ಲ ಇದು ದೇವರು ಕೊಟ್ಟ ಕೂಸೆಂದು ಆಕಾಶಕ್ಕೆ ಕೈತೋರಿಸಿಕೊಂಡು ಅವನದೇ ಭಾಷೆಯಲ್ಲಿ ಹೇಳುತ್ತಿದ್ದ. ತನಗರಿವಿಲ್ಲದೆಯೇ ತಾಯಿಯ ಸಂವೇದನೆಗಳನ್ನೂ ಅನುಭವಿಸುತ್ತ ಜೆನ್ಸಿಯನ್ನು ಎದೆಯೆತ್ತರಕ್ಕೆ ಬೆಳೆಸಿನಿಲ್ಲಿಸಿದ ಪಂಗಾಳಿಗೆ ಜೆನ್ಸಿಯೇ ಜಗತ್ತಾಗಿ ಅರಳಿಕೊಂಡಿದ್ದಳು.
ಸ್ಕೂಲು ಮೆಟ್ಟಿಲು ಹತ್ತಿ 9ನೇ ಕ್ಲಾಸಿನವರೆಗೂ ಓದಿದ ಜೆನ್ಸಿಯು ನಂತರ ಇದ್ದಕ್ಕಿದ್ದಂತೆ ಸ್ಕೂಲಿಗೆ ಹೋಗಲೊಲ್ಲೆ ಎಂದು ಹಟಹಿಡಿದು ಕುಳಿತಿದ್ದಳು.

ಪಂಗಾಳಿಯು ಏನಾಯ್ತೆಂದು ಎಷ್ಟು ಪೀಡಿಸಿದರೂ ಅವಳು ಬಾಯಿ ಬಿಟ್ಟಿರಲಿಲ್ಲ. ಪಂಗಾಳಿಯ ವಿನಂತಿಯಂತೆ ಪಾದ್ರಿ ಇಗ್ನೇಷಿಯಸ್ ಇಗರ್ಜಿಗೆ ಜೆನ್ಸಿಯನ್ನು ಕರೆಸಿಕೊಂಡು ಏನಾಯ್ತೆಂದು ವಿಚಾರಿಸಿದ್ದನು. ಜೆನ್ಸಿಯು ಅವನಿಗೆ ಕೊಟ್ಟ ವಿವರಗಳು ಯಾತನಾದಾಯಕವಾಗಿದ್ದವು. ನೋಡಲು ಕರಾವಳಿಯ ಸಹಜ ಚೆಲುವೆಯಂತೆಯೇ ಸುಂದರವಾಗಿದ್ದ ಜೆನ್ಸಿಗೆ ತನ್ನ ಬೆನ್ನಹಿಂದೆ ತನ್ನಪ್ಪನ ಹೆಣಕೊಯ್ಯುವ ಕೆಲಸದ ಬಗ್ಗೆ ಎಲ್ಲರೂ ಆಡಿಕೊಂಡು ನಗುವುದು, ಆ ಕಾರಣಕ್ಕಾಗಿ ಹೆಣಕೊಯ್ಯುವವನ ಮಗಳೆಂದು ಜರಿಯುವುದು ಮಾಡುತ್ತಿದ್ದರು.

ಬುದ್ಧಿ ಬೆಳೆಯದಿದ್ದ ದಿವಸಗಳಲ್ಲಿ ಇದೇನೂ ಅಂಥ ಗಂಭೀರವಲ್ಲವೆಂದು ನಿರ್ಲಕ್ಷಿಸಿದ್ದವಳಿಗೆ ಜೊತೆಗೆ ಓದುತ್ತಿದ್ದ ಹುಡುಗ-ಹುಡುಗಿಯರೇ ತನ್ನ ಬಗ್ಗೆ ಗುಸುಗುಸು-ಪಿಸಪಿಸನೆಂದು ಮಾತನಾಡುತ್ತ ನಗುವುದು ಕಿರಿಕಿರಿ ತರುತ್ತಿತ್ತು. ಒಂದುಸಲ ಯಾವುದೋ ಹೆಣದ ವಿಲೇವಾರಿಗೆಂದು ಹೊರಟಿದ್ದ ಪಂಗಾಳಿಯು ಮಗಳನ್ನೂ ಟೋಬಿಯ ಶವದ ಮೆಟಡೋರಿನಲ್ಲಿ ಕುಳ್ಳಿರಿಸಿಕೊಂಡು ಸ್ಕೂಲು ಗೇಟಿನ ಬಳಿ ಬಿಟ್ಟು ಹೋಗಿದ್ದ. ಇದಾದ ಮಾರನೆ ಬೆಳಗ್ಗೆ ‘ಜೆನ್ಸಿ ವಾಸ್ನೆಗಾಡಿ’ ಎಂದು ಸ್ಕೂಲಿನ ಕಾಂಪೋಂಡುಗೋಡೆಗಳ ಮೇಲೆ ಇದ್ದಿಲಿನಲ್ಲಿ ಬರೆದು ಸ್ಕೂಲು ಮಕ್ಕಳೆಲ್ಲ ಜೆನ್ಸಿಯನ್ನು ‘ವಾಸ್ನೆಗಾಡಿ’ ಎಂದು ರೇಗಿಸುವುದು, ಹಿಂದಿನಿಂದ ಕೂಗಿ ಓಡಿಹೋಗುವುದು ಮಾಡುತ್ತಿದ್ದವು.

ಹೆಣದ ಮೆಟಡೋರಿನಲ್ಲಿ ಸ್ಕೂಲಿಗೆ ಬಂದ ಮಾತ್ರಕ್ಕೆ ‘ವಾಸ್ನೆಗಾಡಿ’ ಎಂದು ಅಡ್ಡಹೆಸರಿಟ್ಟ ಪರಿಣಾಮ ಸ್ಕೂಲಿನೊಳಗೆ ತಲೆಯೆತ್ತಿಕೊಂಡು ತಿರುಗುವುದು ಅವಳಿಗೆ ಕಷ್ಟವಾಗತೊಡಗಿತ್ತು. ಯಾರೊಟ್ಟಿಗೂ ಸೇರದೆ ಒಂಟಿಪಿಂಟರವಳಂತೆ ಕ್ಲಾಸುರೂಮಿನೊಳಗೆ ಕುಳಿತಿದ್ದವಳನ್ನು ನೋಡಿ ಏನಾಯಿತು ಯಾಕಾಯಿತು ಎಂದು ವಿಚಾರಿಸಲೆಂದು ಬಂದ ಭೌತಶಾಸ್ತ್ರದ ಮೇಸ್ಟ್ರು ಸಹದೇವ, ಜೆನ್ಸಿಯನ್ನು ಸಮಾಧಾನಿಸುವ ನೆಪದಲ್ಲಿ ಎಲ್ಲೆಲ್ಲಿಗೋ ಕೈಯಿಟ್ಟು ಅಮುಕಿಬಿಟ್ಟಿದ್ದ. ಅವನಿಂದ ಕೊಸರಿಕೊಂಡು ಹೇಗೋ ಮನೆ ತಲುಪಿಕೊಂಡಿದ್ದ ಜೆನ್ಸಿ ಯಾರೋ ಅವಳ ಅಸ್ತಿತ್ವವನ್ನೇ ಮಂಕರಿಯಲ್ಲಿ ತುಂಬಿಕೊಂಡು ಹೋದಂತೆ ಸಪ್ಪಗಾಗಿಹೋಗಿದ್ದಳು.

ಅವನೆದುರು ಎಲ್ಲವನ್ನೂ ಬಿಚ್ಚಿಟ್ಟ ಜೆನ್ಸಿಯು ಹೆಣಕೊಯ್ಯುವವನ ಮಗಳಾಗಿ ಪುಲಿಮೊಗರಿನಲ್ಲಿ ಇರುವುದೇ ತಪ್ಪಾ? ಎಂಬ ಎರಡಲುಗಿನ ಪ್ರಶ್ನೆಯನ್ನು ಅವನ ಕೊರಳಮೇಲಿಟ್ಟು ಅಳತೊಡಗಿದ್ದಳು. ಇವಳ ಸವಾಲಿಗೆ ಉತ್ತರ ಕೊಡುವ ದೇವರಿನ್ನೂ ಭೂಮಿಯೊಳಗೆ ಹುಟ್ಟಿಲ್ಲವೆಂಬುದು ಮನವರಿಕೆಯಾದ ಇಗ್ನೇಷಿಯಸ್ ಸುಮ್ಮನೆ ಅವಳ ತಲೆನೇವರಿಸಿ ಅವಳ ಅಳು ಮುಗಿಯುವವರೆಗೂ ಒಂದೂ ಮಾತನಾಡದೆ ಇದ್ದುಬಿಟ್ಟನು. ಒಳಗಿನ ಕಡುದುಃಖವೆಲ್ಲವೂ ಇಳಿದ ಮೇಲೆ ಜೆನ್ಸಿ ಇಗರ್ಜಿಯಿಂದೆದ್ದು ಹೋಗಿ ಸುಮಾರು ಹೊತ್ತಾದರೂ ಇಗ್ನೇಷಿಯಸನು ಜಗತ್ತಿನ ಪಾಪವೆಲ್ಲವನ್ನೂ ಇವಳು ತನ್ನ ತಲೆಯ ಮೇಲೆ ಚಿಮುಕಿಸಿ ಹೋದಂತೆನಿಸಿ ಏನೂ ಮಾಡಲಾಗದ ತನ್ನ ಸ್ಥಿತಿಯ ಬಗ್ಗೆಯೇ ಅಸಹ್ಯವುಟ್ಟಿತ್ತು. 

ಶಾಲೆ ತೊರೆದು ಮನೆಯಲ್ಲಿ ಒಂದಷ್ಟು ದಿನ ಇದ್ದೂ ಇದ್ದೂ ಬೋರು ಹೊಡೆಸಿಕೊಂಡ ಜೆನ್ಸಿಗೆ ತಾನೂ ಏನಾದರೂ ಕೆಲಸಪಲಸಕ್ಕೆ ಹೋಗಬೇಕೆಂದು ಅನಿಸುತ್ತಿತ್ತು. ಬೆಸ್ತರಟ್ಟಿಯ ಕೂವಮ್ಮನೊಟ್ಟಿಗೆ ಇದನ್ನು ಹಂಚಿಕೊಂಡಾಗ ತನ್ನೊಡನೆ ಕುಳಾಯಿಕಾಡಿನ ಅಂಚಿಗಿದ್ದ ಸೀತಾನದಿಗೆ ಮಳಿ (ಕಪ್ಪೆಚಿಪ್ಪು) ಆಯಲು ಜೊತೆಗೆ ಬರಲು ಕೂವಮ್ಮ ಕರೆದಿದ್ದಳು. ಸೀತಾನದಿಯು ಸಮುದ್ರಸೇರುವ ಒಂದೂವರೆ ಕಿಲೋಮೀಟರು ಕೂಡುಪ್ರದೇಶದ ಹಿನ್ನೀರಿನೊಳಗೆ ಹೇರಳವಾಗಿ ಸಿಗುತ್ತಿದ್ದ ಕಪ್ಪೆಚಿಪ್ಪುಗಳನ್ನು ಹೆಕ್ಕುವುದು ಜೆನ್ಸಿಗೆ ಸಿಕ್ಕ ಹೊಸ ಕೆಲಸವಾಗಿತ್ತು.

ಪಂಗಾಳಿಯನ್ನು ಕಾಡಿಬೇಡಿ ಒಪ್ಪಿಸಿದ ಜೆನ್ಸಿಯು ಕೂವಮ್ಮನೊಡನೆ ಬೆಳಬೆಳಿಗೆ 4 ಗಂಟೆಗೆದ್ದು ಸೊಂಟಕ್ಕೆ ಬಿದಿರಿನ ಬುಟ್ಟಿಬಲೆಯನ್ನು ಕಟ್ಟಿಕೊಂಡು ಸೀತಾನದಿಯ ನಡುಭಾಗಕ್ಕೆ ಕೊರಳುಮುಳುಗುವ ಜಾಗಕ್ಕೆ ಇಳಿದು ತಲೆಮಾತ್ರ ಹೊರಬಿಟ್ಟುಕೊಂಡು ನಿಂತುಕೊಳ್ಳುತ್ತಿದ್ದಳು. ನೀರಿನ ಉಬ್ಬರದ ಸಮಯವನ್ನು ಬಿಟ್ಟು ಇಳಿತದ ಸಮಯದೊಳಗೆ ನದಿಗಿಳಿದು ನೀರೊಳಗೆ ಕಾಲುಗಳನ್ನಾಡಿಸುತ್ತ ಕಪ್ಪೆಚಿಪ್ಪುಗಳನ್ನು ಕಾಲಿನ ಚಲನೆಮೂಲಕ ಮಾತ್ರವಾಗಿ ಅನುಭವಕ್ಕೆ ತಂದುಕೊಂಡು ತುಡುಮ್ಮನೆ ನೀರಿನೊಳಗೆ ಮುಳುಗುತ್ತಿದ್ದ ಕೂವಮ್ಮ ಮತ್ತು ಜೆನ್ಸಿಯರು ಎರಡೂ ಕೈಯೊಳಗೆ ಮರಳುಸಮೇತ ಕಪ್ಪೆಚಿಪ್ಪುಗಳನ್ನು ಹೆಕ್ಕಿಕೊಂಡು ಬುಟ್ಟಿಬಲೆಯೊಳಗೆ ತುಂಬಿಕೊಂಡು ಮತ್ತೆ ಉಸಿರೆಳೆದುಕೊಳ್ಳಲು ತಲೆಯನ್ನು ನೀರಮೇಲೆ ತರುತ್ತ, ಮತ್ತೆ ಮುಳುಗುತ್ತ ಕಪ್ಪೆಚಿಪ್ಪುಗಳನ್ನು ಹೆಕ್ಕುತ್ತಿದ್ದರು.

ಕಪ್ಪೆಚಿಪ್ಪುಗಳು ಹೆಚ್ಚಿರುವ ಕಡೆಗಳಲ್ಲಿ ಕಾಲಿಗೇ ಬಲೆಯ ಆಕಾರದ ಬುಟ್ಟಿಬಲೆ ಕಟ್ಟಿಕೊಂಡು ಕಾಲಿಗೆ ಸಿಗುವ ಕಪ್ಪೆಚಿಪ್ಪುಗಳನ್ನು ಇನ್ನೊಂದು ಕಾಲಿನಿಂದ ಅದಕ್ಕೆ ತುಂಬಿಕೊಳ್ಳುತ್ತಿದ್ದರು. ಹೀಗೆ ಬೆಳಗ್ಗೆ 10 ಗಂಟೆಯವರೆಗೆ ಕಪ್ಪೆಚಿಪ್ಪುಗಳನ್ನು ಹೆಕ್ಕಿಯಾದ ಮೇಲೆ ದಡಕ್ಕೆ ಬರುತ್ತಿದ್ದ ಇಬ್ಬರೂ ಬುಟ್ಟಿಬಲೆಯೊಳಗೆ ಸಂಗ್ರಹವಾದ ಕಪ್ಪೆಚಿಪ್ಪುಗಳನ್ನು ಚೀಲಕ್ಕೆ ತುಂಬಿಕೊಂಡು ಮೀನುಸಂತೆಯ ವ್ಯಾಪಾರಿ ನೌಫಾಲ್‌ಬ್ಯಾರಿಗೆ ಮಾರಿ ದುಡಿದ ದುಡ್ಡನ್ನು ಖರ್ಚಿಗಿಟ್ಟುಕೊಳ್ಳುತ್ತಿದ್ದರು.  ಹೀಗೆ ಕಪ್ಪೆಚಿಪ್ಪು ವ್ಯವಹಾರಕ್ಕಿಳಿದ ಜೆನ್ಸಿಗೆ ಈ ವ್ಯಾಪಾರದ ಸುತ್ತಮುತ್ತಲಿನ ಆಯಾಮಗಳು ಅರಿವಿಗೆ ಬರಲು ತುಂಬ ದಿವಸಗಳೇನೂ ಹಿಡಿಯಲಿಲ್ಲ.

ನೌಫಾಲ್‌ಬ್ಯಾರಿಯಿಂದ ಕಪ್ಪೆಚಿಪ್ಪು ಖರೀದಿಸಲು ಪುಲಿಮೊಗರಿನ ಮೀನುಸಂತೆಗೆ ಬರುತ್ತಿದ್ದ ನೇಪಾಳಿಯೊಬ್ಬನ ಪರಿಚಯವಾಗಿದ್ದ ಜೆನ್ಸಿಗೆ ಅವನ ಮೂಲಕ ಕಪ್ಪೆಚಿಪ್ಪನ್ನು ಅಡುಗೆಗಷ್ಟೇ ಅಲ್ಲದೆ ಅದನ್ನು ಪೇಂಟ್, ಸುಣ್ಣದ ತಯಾರಿಯಲ್ಲಿ ಬಳಸುವ ಜೊತೆಗೆ ದಂತವೈದ್ಯರು ಹಲ್ಲುಗಳ ಕುಳಿಯನ್ನು ತುಂಬಲು ಬೇಕಾದ ಘನಪೇಸ್ಟ್ ಆಗಿಯೂ ಬಳಸುವುದನ್ನೂ, ಕಪ್ಪೆಚಿಪ್ಪಿನ ಮಾಂಸಕ್ಕಷ್ಟೇ ಅಲ್ಲ ಅದರ ಖಾಲಿಚಿಪ್ಪಿಗೂ ಬೇಡಿಕೆಯಿದೆ ಎಂಬುದನ್ನು ತಿಳಿದುಕೊಂಡಿದ್ದಳು. ಅಂಕೋಲೆಯ ಸುಣ್ಣದ ಫ್ಯಾಕ್ಟರಿಗಳಿಗೆ ಮತ್ತು ಕೆಲವು ಔಷಧ ಕಂಪನಿಗಳಿಗೆ ಟನ್ನುಗಟ್ಟಲೆ ಕಪ್ಪೆಚಿಪ್ಪು ಪೂರೈಸುತ್ತಿದ್ದ ನೇಪಾಳಿಯ ಬಾಯಿಂದ ಕೆಲವೊಂದು ರಹಸ್ಯಗಳನ್ನು ಬಾಯಿಬಿಡಿಸಿಕೊಂಡಿದ್ದ ಜೆನ್ಸಿಯು ಅವನಿಗೆ ಕಪ್ಪೆಚಿಪ್ಪನ್ನು ತಾನೂ ಸಹ ಪೂರೈಸುವುದಾಗಿ ತಿಳಿಸಿ ಒಪ್ಪಿಗೆ ಪಡೆದುಕೊಂಡಿದ್ದಳು.

ಅದರಂತೆ ತೀರದ ಸಮುದ್ರದ ಬಂಡೆಗಳಿಗೆ ಅಂಟಿಕೊಂಡಿರುತ್ತಿದ್ದ ಕಪ್ಪೆಚಿಪ್ಪುಗಳು, ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದ ಕಪ್ಪೆಚಿಪ್ಪುಗಳು, ಬೆಸ್ತರಬಲೆಗಳಿಗೆ ಅಂಟಿಕೊಂಡು ಮೀನು ಬಿಡಿಸುವಾಗ ದೂರ ಎಸೆಯಲ್ಪಡುತ್ತಿದ್ದ ಕಪ್ಪೆಚಿಪ್ಪುಗಳು, ಪುಲಿಮೊಗರಿನ ಹೋಟೆಲುಗಳಲ್ಲಿ ಕಪ್ಪೆಚಿಪ್ಪಿನ ಮಾಂಸ ತಿಂದು ಗಿರಾಕಿಗಳು ಬಿಟ್ಟು ಕಸದತಿಪ್ಪೆ ಸೇರುತ್ತಿದ್ದ ಖಾಲಿಚಿಪ್ಪುಗಳು, ಹೀಗೆ ಇವ್ಯಾವನ್ನೂ ಬಿಡದಂತೆ ಸಂಗ್ರಹಿಸಲು ಶುರುವಿಟ್ಟ ಜೆನ್ಸಿಯನ್ನು ಊರವರು ಇದ್ಯಾಕಾಗಿ ಇವಳು ಈ ಕೆಲಸ ಮಾಡುತ್ತಿದ್ದಾಳೆಂಬುದು ಮೊದಲಿಗೆ ಅರ್ಥವಾಗಲಿಲ್ಲ. ಕೇಳಿದವರಿಗೆ ಕಪ್ಪೆಚಿಪ್ಪಿನ ಬಾಗಿಲುತೋರಣಗಳನ್ನು ಮಾಡಿ ಬ್ಯಾಂಗಲ್‌ಸ್ಟೋರುಗಳಿಗೆ ಮಾರುತ್ತಿದ್ದೇನೆಂದು ಸುಳ್ಳುಮಾಹಿತಿ ಕೊಟ್ಟು ಜೆನ್ಸಿ ಬಾಯಿ ಮುಚ್ಚಿಸುತ್ತಿದ್ದಳು. ವಾರಕ್ಕೊಮ್ಮೆ ಬರುತ್ತಿದ್ದ ನೇಪಾಳಿಗೆ ಮೂಟೆಗಟ್ಟಲೆ ಕಪ್ಪೆಚಿಪ್ಪುಗಳನ್ನು ಕೊಟ್ಟು ಅವನಿಂದ ಹಣ ಪಡೆಯುತ್ತಿದ್ದಳು.

ಮಗಳು ಶಾಲೆಬಿಟ್ಟು ಕಪ್ಪೆಚಿಪ್ಪಿನ ದುಡಿಮೆಯಲ್ಲಿ ತೊಡಗಿಕೊಂಡಿದ್ದುದು ಪಂಗಾಳಿಗೆ ಹೆಮ್ಮೆಯನ್ನೂ ತರುತ್ತಿತ್ತು. ಇದನ್ನು ಟೋಬಿಯೊಟ್ಟಿಗೆ ಹಂಚಿಕೊಂಡು ಖುಷಿಪಟ್ಟಿದ್ದ. ನವಿಲುಬಾಣೆಯ ಪೊದೆಯಲ್ಲಿ ಸಿಕ್ಕಿದ್ದ ಈ ಕೂಸು ಹೀಗೊಂದು ದಿನ ತನ್ನನ್ನೇ ಸಾಕುವಷ್ಟರ ಮಟ್ಟಿಗೆ ಬೆಳೆಯುವಳೆಂದು ಅವನೆಂದೂ ಊಹಿಸಿರಲಿಲ್ಲ. ಆದರೆ ಅವನ ಊಹೆಗೆ ಸಿಗದೆ ನಡೆದು ಹೋದ ಜೆನ್ಸಿಯ ಒಂದು ವಿಚಾರವು ಪಂಗಾಳಿಯನ್ನು ಮುಂದೊಂದು ದಿನ ಇಟ್ಟಾಡಿಸಿಕೊಂಡು ಬಡಿಯುತ್ತದೆಂಬುದು ಆಗ ಅವನಿಗೂ ಗೊತ್ತಿರಲಿಲ್ಲ.      
            
ಅಲ್ಲಿಯತನಕ ತನ್ನೆದೆಗೂಡೊಳಗೆ ಹಚ್ಚದೇ ಉಳಿದಿದ್ದ ಹಣತೆಯೊಂದರ ಸುತ್ತ ಬೆಳಕು ಚಿಮುಕಿಸಿಕೊಂಡು ಮಿಣುಕುಹುಳುವೊಂದು ಹಾರುತ್ತಿರುವ ಕನಸೊಂದು ಬಿದ್ದು ಪುಳಕಗೊಂಡಿದ್ದ ಜೆನ್ಸಿಗೆ ಆ ಕನಸಿನ ಅರ್ಥವೇನೆಂದು ಹೇಗೆ ಯೋಚಿಸಿದರೂ ತಿಳಿದಿರಲಿಲ್ಲ. ಇತ್ತೀಚೆಗೆ ಏನನ್ನಾದರೂ ಕಳೆದುಕೊಳ್ಳಬೇಕೆನಿಸುತ್ತಿದ್ದ ಅವಳಿಗೆ ಯಾವುದನ್ನು ಮೊದಲಿಗೆ ಕಳೆದುಕೊಳ್ಳುವುದೆಂಬ ಗೊಂದಲಗಳೂ ತಲೆತುಂಬಿಕೊಳ್ಳುತ್ತಿದ್ದವು. ಪಂಗಾಳಿಗೆ ಪ್ರಿಯವಾದ ಹೊಳೆಬೈಗೆ ಸಾರು ಮಾಡುತ್ತ ಮಡಕೆ ಕೆಳಗಿದ್ದ ಒಲೆಗೆ ಬೆಂಕಿಯೂದುತ್ತ ಕುಳಿತಿದ್ದವಳು ಒಲೆಯಿಂದೆದ್ದ ಕಮಟುಹೊಗೆಯು ಗಾಳಿಯೊಳಗೆ ಲೀನಗೊಳ್ಳುವ ಮುನ್ನ ತನ್ನ ಆಕಾರದೊಳಗೆ ಯಾವುದೋ ಮುಖವೊಂದನ್ನು ಬರೆದು ಅಳಿಸಿಕೊಂಡಂತಾಗಿ ಒಮ್ಮೆ ಬೆಚ್ಚಿ ಬಿದ್ದಿದ್ದಳು.

ಹೊಗೆಯ ಘಾಟಿಗೆ ಕೆಮ್ಮುತ್ತ ನೆತ್ತಿ ತಟ್ಟಿಕೊಳ್ಳುವಾಗ ಹೊಗೆಯೊಳಗೆ ಹಾಗೆ ಬಂದು ಹೀಗೆ ಹೋಗಿದ್ದು ತನ್ನಿಂದ ಕಪ್ಪೆಚಿಪ್ಪು ಖರೀದಿಸುತ್ತಿದ್ದ ನೇಪಾಳಿಯ ಮುಖವೆಂಬುದು ಗೊತ್ತಾಗಿ ಒಂದುಕ್ಷಣ ಮೈಯನರಗಳು ರುಂ ಎಂದಿದ್ದವು. ವಾರಕ್ಕೊಮ್ಮೆ ಬರುತ್ತಿದ್ದ ನೇಪಾಳಿಯ ಹೆಸರು ಕುಸ್ವೆ ಎಂಬುದನ್ನು ಮೊದಲಿಗೆ ತಿಳಿದುಕೊಂಡ ಜೆನ್ಸಿಯು ಇದೆಂಥ ಹೆಸರು ಅಂದುಕೊಂಡರೂ ಅದೆಂಥದೋ ಮೋಹಕ್ಕೆ ಬಿದ್ದವಳಂತೆ ನೇಪಾಳಿಕುಸ್ವೆಯನ್ನು ಒಳಗೊಳಗೇ ಪ್ರೇಮಿಸಲು ಶುರುವಿಟ್ಟಿದ್ದಳು. ಒಂದು ದಿನ ತಾನು ಆಯ್ದುತಂದ ಕಪ್ಪೆಚಿಪ್ಪನ್ನು ಮೂಟೆಗೆ ತುಂಬಿಕೊಳ್ಳುತ್ತಿದ್ದ ಅವನನ್ನೇ ನೋಡುತ್ತ ನೇರವಾಗಿ ಅವನಿಗೂ ತನಗೂ ತಿಳಿದಿದ್ದ ಹರಕುಮುರಕು ಬ್ಯಾರಿಭಾಷೆಯಲ್ಲಿ ‘ನಂಡೊ ಮಂಜ್ಞಿ ಆವುಡೆ’ (ನನ್ನನ್ನು ಮದ್ವೆ ಆಗ್ತಿಯ) ಅಂದಿದ್ದಳು... ರಪ್ಪನೆ ತೂರಿಬಂದ ಈ ಪ್ರಶ್ನೆಗೆ ಏನೆಂದು ಉತ್ತರಿಸುವುದೆಂದು ಗೊತ್ತಾಗದ ನೇಪಾಳಿಕುಸ್ವೆಯು ಜೆನ್ಸಿಯ ಚೆಲುವಿಗೂ, ದೇಹಕ್ಕೂ ಒಂದೇಸಾರಿ ಬಲಿಬಿದ್ದು ಅದುಗು ಎಂದ್ರೊ, ಆವ (ಅದ್ಕೇನಂತೆ ಆಗೋಣ) ಅಂದಿದ್ದ. ಜೆನ್ಸಿ ಮತ್ತಿವನ  ಪ್ರೇಮ ಆವತ್ತಿಂದ ನಾಜೂಕಾಗಿ ಶುರುವಾಗಿತ್ತು.

ವಾರಕ್ಕೊಮ್ಮೆ ಬರುತ್ತಿದ್ದ ನೇಪಾಳಿಕುಸ್ವೆಯನ್ನೆಳೆದುಕೊಂಡು ಜೆನ್ಸಿ ದೂರದ ಸಮುದ್ರತೀರದ ದೀಪಸ್ಥಂಭದ ಬುಡಕ್ಕೆ ಹೋಗುತ್ತಿದ್ದಳು. ಮಾತನಾಡುತ್ತ, ನಗುತ್ತ, ಒಬ್ಬರ ವಿಷಯ ಹಂಚಿಕೊಂಡು ಕಾಲಹರಣ ಮಾಡುತ್ತಿದ್ದ ಅವರಿಬ್ಬರನ್ನೂ ದೀಪಸ್ಥಂಭದ ರಾತ್ರಿಪಾಳಿಯ ಕೆಲಸದವನು ಬಂದು ಬೈದು ಕಳಿಸುವವರೆಗೂ ಅಲ್ಲಿಯೇ ಇರುತ್ತಿದ್ದರು.

ಹೀಗೆಯೇ ಒಂದಷ್ಟು ತಿಂಗಳುಗಳು ಕಳೆದ ನಂತರ ಪುಲಿಮೊಗರಿನ ಮೀನುವ್ಯಾಪಾರದ ಬ್ಯಾರಿಗಳ ವಿರುದ್ದ ಹಲ್ಲಲ್ಲು ಕಡಿಯುತ್ತಿದ್ದ ‘ಪವನಪುತ್ರ ದಳ’ದ ದೇಶಭಕ್ತ ಹುಡುಗರ ಕೈಗೆ ಇವರಿಬ್ಬರೂ ದೀಪಸ್ಥಂಭದ ಬಳಿಯಲ್ಲಿ ಕತ್ತಲೆಹೊತ್ತಿನಲ್ಲಿ ಸಿಕ್ಕಿಬಿದ್ದಿದ್ದರು. ಊರಿನ ಬ್ಯಾರಿ ಹುಡುಗರ ಜೊತೆಯಲ್ಲಿ ಯಾವ ಹುಡುಗಿ ಕಂಡರೂ ಹಿಡಿದು ಕಪ್ಪಕಪ್ಪಾಳಕ್ಕೆ ಬಡಿದು ಪೊಲೀಸರಿಗೆ ಹಿಡಿದುಕೊಡುತ್ತಿದ್ದ ಈ ಹಲ್ಲಂಡೆ ಹುಡುಗರಿಗೂ ಬ್ಯಾರಿ ಹುಡುಗರಿಗೂ ಹಿಂದಿನಿಂದಲೂ ಸಮಾ ಬಡಿದಾಟಗಳಾಗಿದ್ದವು. ಇದು ಅದೇಕೇಸು ಎಂಬಂತೆ ಇವರಿಬ್ಬರನ್ನೂ ಹಿಡಿದ ‘ಪವನಪುತ್ರ ದಳ’ದ ಸದಸ್ಯರಿಗೆ ಹುಡುಗ ಈ ದೇಶದವನೇ ಅಲ್ಲವೆಂದು ತಿಳಿದ ಮೇಲಂತೂ ಪಿತ್ಥ ನೆತ್ತಿಗೇರಿತ್ತು. ನಮ್ಮೂರ ಹುಡುಗಿಯರನ್ನು ದುಬೈಶೇಖರಿಗೆ ಪೂರೈಸಲು ಬಂದ ಏಜೆಂಟನಂತೆ ನೇಪಾಳಿಕುಸ್ವೆಯು ಅವರಿಗೆ ಕಂಡಿದ್ದ. 

ಜೆನ್ಸಿಯ ಜಾತಿ ಕ್ರೈಸ್ತಮತವೆಂದು ತಿಳಿದ ಮೇಲೆ ಇದ್ಯಾವುದೋ ತಮಗೆ ಸಂಬಂಧಿಸಿರದ ಹಿಂದು-ಮುಸ್ಲಿಮೇತರ ಅವಾಂತರವೆಂದು ನೊಂದುಕೊಂಡು ಅವರಿಬ್ಬರನ್ನೂ ಗದರಿಸಿ ಕಳಿಸಿದ್ದರು. ಆ ಗುಂಪಿನಲ್ಲೊಬ್ಬ ಟೋಬಿಯ ಮಗನಾಗಿದ್ದು, ಮನೆಗೆ ಬಂದವನು ಪಂಗಾಳಿಯ ಮಗಳು ಯಾವನೋ ನೇಪಾಳಿಯ ಕೈಯಲ್ಲಿ ಕೆನ್ನೆ ಸವರಿಸಿಕೊಳ್ಳುತ್ತಿದ್ದಳು ಎಂದು ತನ್ನಪ್ಪನ ಕಿವಿಗೂದಿದ್ದ. ಟೋಬಿಯ ಮೂಲಕ ಜೆನ್ಸಿಯ ಪ್ರೇಮಪ್ರಕರಣ ಪಂಗಾಳಿಯ ಗಮನಕ್ಕೂ ಬಂದು ಪಂಗಾಳಿ `ಕುಸಿದೇ ಹೋಗಿದ್ದ. ಹೆಗಲಿಗೊತ್ತಿಕೊಂಡು ಬೆಳೆಸಿದ ಮಗಳು ಇವನ್ಯಾವನೋ ನೇಪಾಳಿಯ ಜೊತೆಯಲ್ಲಿ ಚಕ್ಕಂದಕ್ಕಿಳಿದ್ದಾಳೆ ಎಂಬುದನ್ನು ಅರಗಿಸಿಕೊಳ್ಳಲೇ ಪಂಗಾಳಿಗೆ ಕಷ್ಟವಾಗಿತ್ತು. ಯಾವುದಕ್ಕೂ ಇರಲಿ ಎಂದು ಒಂದು ಭಾನುವಾರ ಜೆನ್ಸಿಯ ಕಪ್ಪೆಚಿಪ್ಪು ಕೊಳ್ಳಲು ಮನೆಯ ಬಳಿ ಬಂದ ನೆಲ್ಲಿಕಾಯಿ ಕಣ್ಣಿನ ನೇಪಾಳಿಕುಸ್ವೆಯನ್ನೂ, ಜೆನ್ಸಿಯನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಇಬ್ಬರ ಕಣ್ಣುಗಳೂ ಏನೇನೋ ಸನ್ನೆಗಳನ್ನು ವಿನಿಮಯ ಮಾಡಿಕೊಳ್ಳುತ್ತ ಇದ್ದುದು ಕಂಡು ವಿಷಯ ಸ್ಪಷ್ಟವಾಗಿಹೋಗಿತ್ತು.

ಆವತ್ತು ಶವಾಗಾರದಲ್ಲಿ ಬಹಳಹೊತ್ತು ಸಪ್ಪಗೆ ಕುಳಿತಿದ್ದ ಪಂಗಾಳಿಯನ್ನು ಬಹಳಷ್ಟು ಜನ ನೋಡಿದ್ದರು. ಆದರೆ ಅವನು ಅದ್ಯಾವುದೋ ಕಾರಣಕ್ಕೆ ಹೆಣವೊಂದರ ಬಾಕ್ಸು ತೆಗೆದವನು ಅದರ ಅಂಗಾಲಿಗೆ ಹಣೆಯೊತ್ತಿಕೊಂಡು ತುಂಬಹೊತ್ತು ಅದೇಕೆ ಅಲ್ಲೇ ನಿಂತಿದ್ದ, ಅವನೊಳಗೆ ಯಾವ ಯುದ್ಧ ನಡೆಯುತ್ತಿತ್ತು ಎಂಬುದನ್ನು ಯಾರೂ ನೋಡಿರಲಿಲ್ಲ. ಅದು, ಬೆಳೆದ ಮಗಳು ಮದುವೆ ಮಾಡಿಕೊಂಡು ಬಿಟ್ಟು ಹೋಗುವಳೆಂಬ ಶೋಕವೋ, ಜೆನ್ಸಿ ಯಾವನದ್ದೋ ತೆಕ್ಕೆಯೊಳಗೆ ಮುಖ ಹುದುಗಿಸುತ್ತಿದ್ದಾಳಲ್ಲ ಎನ್ನುವ ಕಾರಣಕ್ಕೆ ಹುಟ್ಟಿದ್ದ ಪಿತೃಸಹಜ ವ್ಯಸನವೋ, ಇನ್ನೇನೋ ಮತ್ತೇನೋ ಹೇಳುವುದು ಕಷ್ಟ. ಮನೆಯಲ್ಲಿ ಪಂಗಾಳಿಯು ಮಾತುಗಳನ್ನೇ ಕೊಂದುಕೊಂಡವನಂತೆ ಇರುವುದರ ವಾಸನೆ ಹಿಡಿದ ಜೆನ್ಸಿಗೆ ಇನ್ನಿದು ಮುಚ್ಚಿಟ್ಟು ಪ್ರಯೋಜನವಿಲ್ಲದ ಸಂಗತಿಯೆಂದು ಅರಿವಾಗಿ ತಂದೆಯೆದುರು ಮೊಣಕಾಲೂರಿ ಕುಳಿತು ನಡೆದುದೆಲ್ಲವನ್ನೂ ಹೇಳಿ ತಾನೀಗ ನೇಪಾಳಿಕುಸ್ವೆಯ ಜೀವಬೀಜವನ್ನು ತನ್ನೊಡಲಲ್ಲಿ ನೆಟ್ಟುಕೊಂಡಿರುವ ಆಘಾತಕಾರಿ ವಿಷಯವನ್ನೂ ಬಹಿರಂಗಪಡಿಸಿದ್ದಳು.

ಅಲ್ಲಿಂದೆದ್ದು ಹೋದ ಪಂಗಾಳಿ ಅದಾಗಿ ಎರಡು ದಿನಗಳ ಕಾಲ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಊರೆಲ್ಲ ಹುಡುಕಿದರೂ ಪತ್ತೆಯಿರದೆ ಹೋಗಿದ್ದ ಅವನನ್ನು ಹೆಣದ ಮೆಟಡೋರಿನ ಡ್ರೈವರ್ ಟೋಬಿ ನವಿಲುಬಾಣೆಯ ಹಳ್ಳದ ಬಳಿಯಿಂದ ಕೈ ಹಿಡಿದು ಎಬ್ಬಿಸಿಕೊಂಡು ಬಂದಿದ್ದನು. ನೇಪಾಳಿಕುಸ್ವೆಯನ್ನು ಪಂಗಾಳಿಯ ಮನೆಗೇ ಕರೆಸಿಕೊಂಡು ಜೆನ್ಸಿಯೊಟ್ಟಿಗೆ ಮದುವೆಯಾಗೆಂದು ಟೋಬಿ ಗದರಿಕೊಂಡಾಗ ಪಂಗಾಳಿಗೆ ಇನ್ನೊಂದು ಮರ್ಮಾಘಾತ ಕಾದಿತ್ತು. ನೇಪಾಳಿಕುಸ್ವೆಗೆ ಈಗಾಗಲೇ ಮದುವೆಯಾಗಿ 4 ಮಕ್ಕಳಿದ್ದವು. ಜೆನ್ಸಿಯೂ ಒಲೆಯ ಹೊಗೆಗೂಡಿನಿಂದೆದ್ದ ಮುಖದಲ್ಲಿ ಇವನನ್ನು ಕಂಡು ಸರಿಯಾಗಿಯೇ ಯಾಮಾರಿದ್ದಳು. ಇದು ಊರಗುಲ್ಲಾಗಿ ಕೊನೆಗೆ ನೇಪಾಳಿಕುಸ್ವೆಯೊಟ್ಟಿಗೆ ಜೆನ್ಸಿಯ ಮದುವೆಯನ್ನು ಇಗರ್ಜಿಯಲ್ಲಿ ನೆರವೇರಿಸಿ ಕೈತೊಳೆದುಕೊಳ್ಳಲಾಯಿತು. ಯಾವುದರಲ್ಲಿಯೂ ಆಸಕ್ತಿಯಿಲ್ಲದವನಂತೆ ಇದ್ದ ಪಂಗಾಳಿಯು ಜೆನ್ಸಿ ಪೊದೆಯಲ್ಲಿ ಸಿಗುವ ಮೊದಲು ಯಾವ ಮನಸೋಇಚ್ಛೆ ಬದುಕಿನೊಳಗಿದ್ದನೋ ಹಾಗೆಯೇ ಇರಲು ಶುರು ಮಾಡಿದ್ದನು.

ಜೆನ್ಸಿಯೊಡನೆ ಯಾವ ಮಾತುಕತೆಯೂ ಇರಲಿಲ್ಲ. ಇದರ ಜೊತೆಗೆ ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ ನೇಪಾಳಿಕುಸ್ವೆಯು ಮಾವನೊಡನೆ ಮಾತಿಗಿಳಿಯುವ ಪ್ರಯತ್ನ ನಡೆಸಿದರೂ ಪಂಗಾಳಿಯ ನಿರಾಸಕ್ತಿ ಅವನ ಮುಖಕ್ಕೆ ರಾಚುತ್ತಿತ್ತು. ಒಮ್ಮೆ ಜೆನ್ಸಿಯು ಹೆಣದಮನೆಯಲ್ಲಿ ಪಂಗಾಳಿಗೆ ಕೊಟ್ಟುಬರಲು ಗಂಡನ ಕೈಯಲ್ಲಿ ಹೊಳೆಬೈಗೆ ಸಾರಿನಊಟ ಕಳಿಸಿದ್ದಳು. ಬರುವ ದಾರಿಯಲ್ಲಿ ಮಾವನೊಡನೆ ಕನ್ನಡದಲ್ಲಿ ಮಾತನಾಡಬೇಕೆಂದು ನಿಮ್ಮ ಮಗಳು ಊಟ ಕಳಿಸಿದ್ದಾಳೆ, ಊಟ ಮಾಡಿ ಮಾವ ಅನ್ನಲು ಕನ್ನಡದಲ್ಲಿ ಏನನ್ನುತ್ತಾರೆ ಅಂತ ದಾರಿಯಲ್ಲಿ ಸಿಕ್ಕ ನೌಫಾಲ್‌ಬ್ಯಾರಿಯನ್ನು ಕೇಳಿದ್ದ. ಅವನು ಹೇಳಿಕೊಟ್ಟಂತೆಯೇ ಬಂದು ಪಂಗಾಳಿಯ ಮುಂದೆ ಊಟದಡಬ್ಬಿಯಿಟ್ಟು ಮುಚ್ಕೊಂಡ್ ಊಟ ಮಾಡೋ ಭೋಸುಡಿಮಗನೇ ಅಂದುಬಿಟ್ಟಿದ್ದ. ನೌಫಾಲ್‌ಬ್ಯಾರಿ ಮಾಡಿಟ್ಟಿದ್ದ ತಮಾಷೆಯ ಎಡವಟ್ಟಿನ ಪರಿಣಾಮ ಯಾವ ಮಟ್ಟಿಗಿತ್ತೆಂದರೆ ಯಾವತ್ತೂ ಯಾರ ಮೇಲೂ ಕೋಪ ಮಾಡಿಕೊಳ್ಳದ ಮೂಕವೃದ್ಧ ಪಂಗಾಳಿಯು ನೇಪಾಳಿಕುಸ್ವೆಯನ್ನು ನೆಲಕ್ಕೆ ಕೆಡವಿಕೊಂಡು ಕೂಗಾಡಿಕೊಂಡು ಕಾಲುಕಾಲಲ್ಲೇ ತುಳಿದುಹಾಕಿದ್ದ.   
                                 
ತನಗೆ ಗೊತ್ತಿದ್ದವರೆಲ್ಲ ತನ್ನ ಬೆನ್ನಹಿಂದೆ ಅದ್ಯಾರೋ ಪಿಳಚುಗಣ್ಣಿನವನಿಗೆ ಇವನ ಮಗಳು ಬಸುರಾಗಿ ಮದುವೆಯಾಗಿದ್ದಾಳೆಂದು ಮಾತುಗಳು ಬರುತ್ತಿದ್ದುದು ಪಂಗಾಳಿಯ ಕಿವಿಗೂ ಬಿದ್ದಿತ್ತು. ಜೊತೆಗೆ ಜೆನ್ಸಿಗೆ ಹುಟ್ಟುವ ಮಗುವೂ ಪಿಳಚುಗಣ್ಣಿನ ಮುಖವನ್ನು ಹೊತ್ತುಕೊಂಡು ಹುಟ್ಟುತ್ತದೆ ಎಂತಲೂ ಟೋಬಿ ಪಂಗಾಳಿಯೆದುರು ಆಡಿಕೊಳ್ಳುತ್ತಿದ್ದ. ಎಲ್ಲವೂ ಚೆನ್ನಾಗಿರುವ ಹೊತ್ತಿನಲ್ಲಿ ತನ್ನ ಮತ್ತು ಮಗಳ ನಡುವೆ ಇವನೆಲ್ಲಿಂದ ಬಂದನೋ ಎಂದು ಪಂಗಾಳಿಯು ಒಳಗೊಳಗೇ ಕುದಿಯುತ್ತಿದ್ದುದು ಅವನೊಬ್ಬನಿಗೆ ಮಾತ್ರ ಗೊತ್ತಿತ್ತು. ಒಮ್ಮೊಮ್ಮೆ ದೇವನಾಯಗಂನ ಉಸ್ತುವಾರಿಯಲ್ಲಿ ಹೆಣ ಕೊಯ್ಯುವಾಗ ತಾನೇ ತನ್ನ ಹೆಣವನ್ನು ಕೊಯ್ದುಕೊಳ್ಳುತ್ತಿರುವಂತೆ ಅವನಿಗೆ ಅನ್ನಿಸುತ್ತಿತ್ತು. ಇಷ್ಟರನಡುವೆ ಜೆನ್ಸಿಯು ಪಿಳಿಚುಗಣ್ಣಿನ ಹೆಣ್ಣುಮಗುವೊಂದನ್ನು ಹೆತ್ತಿದ್ದಳಲ್ಲ, ಅದಕ್ಕೆ ತಾಂಜಿ ಎಂಬ ವಿಚಿತ್ರ ಹೆಸರೊಂದನ್ನಿಟ್ಟು ನೇಪಾಳಿಕುಸ್ವೆ ಇನ್ನಷ್ಟು ಆಡಿಕೆಗೆ ಅನುವು ಮಾಡಿಕೊಟ್ಟಿದ್ದ.

ಎಲ್ಲರಿಗೂ ಅದೊಂದು ತಮಾಷೆಯ ಹೆಸರಾಗಿಹೋಗಿತ್ತು. ಯಾರೋ ಮಾಡಿದ ತಪ್ಪಿಗೆ ಎಳೆಗೂಸನ್ನು ದೂರವಿಡುವುದು ಪಂಗಾಳಿಗೂ ಸರಿಬರದೆ ಆ ಮಗುವಿನೊಟ್ಟಿಗೆ ಪಂಗಾಳಿ ಬೆರೆತುಹೋಗಿದ್ದ. ನವಿಲುಬಾಣೆಯಲ್ಲಿ ಜೆನ್ಸಿ ಸಿಕ್ಕಿದ ದಿನಗಳು ಮೊಮ್ಮಗಳೊಟ್ಟಿಗೆ ಆಡುವಾಗ ವಾಪಸ್ಸು ದಕ್ಕಿದಂತಾಗಿ ಪಂಗಾಳಿಯೂ ಖುಷಿಯಾಗಿಯೇ ಇದ್ದ. ಹೆಣದಮನೆಯ ಕೆಲಸಕ್ಕೆ ಹೋಗುವಾಗ ತಾಂಜಿಯನ್ನೂ ಜೊತೆಗೆ ಕರೆದೊಯ್ಯುತ್ತಿದ್ದ ಅವನು ಬೆಳಗಿನಿಂದ ಸಂಜೆಯವರೆಗೆ ಅವಳೊಡನೆ ಆಡುತ್ತ ಅವನೊಳಗಿನ ದುಃಖವನ್ನು ಮರೆಯಲು ಪ್ರಯತ್ನಿಸುತ್ತಿದ್ದ. ಒಮ್ಮೊಮ್ಮೆ ಇವೆಲ್ಲವನ್ನೂ ಬಿಟ್ಟು ಎಲ್ಲಿಗಾದರೂ ಹೋಗಿಬಿಡಬೇಕು ಅಂತ ಅಂದುಕೊಳ್ಳುತ್ತಿದ್ದ. ಇದಿಷ್ಟು ನಡೆಯುವಾಗಲೇ ಪಂಗಾಳಿಯು ಇದ್ದಕ್ಕಿದ್ದಂತೆಯೇ ತಾನು ಅಂದುಕೊಂಡಂತೆಯೇ ಇದ್ದಕ್ಕಿದ್ದಂತೆಯೇ ಪುಲಿಮೊಗರು ಪಟ್ಟಣದಿಂದಲೇ ನಾಪತ್ತೆಯಾಗಿ ಹೋಗಿದ್ದುದು ನಡೆದಿತ್ತು.

ಹೀಗೆ ಪುಲಿಮೊಗರಿನ ದೊಡ್ಡಾಸ್ಪತ್ರೆಯ ಶವಾಗಾರದಲ್ಲಿ ಹೆಣ ಕೊಯ್ಯುತ್ತಿದ್ದ ಪಂಗಾಳಿ ಅನ್ನೋ ಮಾತುಬರದ ಮುದುಕ ಇದ್ದಕ್ಕಿದ್ದಂತೆ ಯಾರಿಗೂ ಮುಖ ತೋರಿಸದಂತೆ ಊರುಬಿಟ್ಟು ಹೋಗಿದ್ದಾನಂತೆ ಎಂಬುದು ಆ ಪಟ್ಟಣದಲ್ಲಿ ಅಷ್ಟೇನೂ ತಲೆಕೆಡಿಸಿಕೊಳ್ಳುವ ವಿಚಾರವೇನೂ ಆಗಿರಲಿಲ್ಲ. ಕಡೆಯಪಕ್ಷ ಅವನ ನಾಪತ್ತೆ ಪ್ರಕರಣದ ಬಗ್ಗೆ ಹಂಗಂತೆ ಹಿಂಗಂತೆ ಅಂತಲೂ ಪಿಸುಗುಡುತ್ತ ಕೂರುವಷ್ಟು ಪಂಗಾಳಿ ಅನ್ನೋ ಆ ಮುದುಕ ಆ ಊರಿಗೆ ಮುಖ್ಯವೂ ಆಗಿರಲಿಲ್ಲ. ತಮಗಿದ್ದ ಒಂದೇ ಕರುಳುಬಳ್ಳಿಯಾದ ಪಂಗಾಳಿಯು ಕಪ್ಪುಬಿಳುಪು ಪಿಚ್ಚರಿನ ಬೆಳ್ಳಂಬಿಳಿ ದೇವರಂತೆ ಠಣಾರನೆ ಮಂಗಮಾಯವಾಗಿದ್ದರ ಬಗ್ಗೆ ಮೂರುಕಾಸಿನ ವಿವರವೂ ಗೊತ್ತಾಗದೆ ಜೆನ್ಸಿಯೂ ಗಲಿಬಿಲಿಗೊಂಡಿದ್ದಳು. ದಿನಗಳೆಯುತ್ತ ಪುಲಿಮೊಗರು ಎಂಬ ಊರು ಪಂಗಾಳಿ ಅನ್ನೋ ಮೂಗವೃದ್ಧನ ಹೆಸರನ್ನು ಪೊರೆಕಳಚಿದಂತೆ ತೆಗೆದು ಬಿಸುಟು ಇತಿಹಾಸದ ಮುಖಕ್ಕೊಗೆದಿತ್ತು.  

ಇಷ್ಟೆಲ್ಲ ನಡೆದುಹೋದ ಮೇಲೆ, ಸುಮ್ಮನೆ ಮಲಗಿದ್ದ ನಾಯಿಗೆ ಕಲ್ಲುಹೊಡೆದು ಬೊಗಳಿಸಿಕೊಂಡಂತೆ ಆಗಿದ್ದ ಇನ್ಸ್‌ಪೆಕ್ಟರ್ ದಂಡಪಾಣಿಗೆ ದೇವನಾಯಗಂರ ಆಣತಿಯಂತೆ ಅನಾಥಹೆಣ ಸಾಗಿಸಿದ ಇಬ್ಬರಲ್ಲಿ ಒಬ್ಬ ಪಂಗಾಳಿಯಾದರೆ, ಮತ್ತೊಬ್ಬ ಶವಸಾಗಿಸುವ ಮೆಟಡೋರಿನ ಡ್ರೈವರ್ ಟೋಬಿ ಎಂಬುದನ್ನು ನೆನಪಿಸಿಕೊಂಡು ಟೋಬಿಯನ್ನು ಸ್ಟೇಷನ್ನಿಗೆ ಕರೆಸಿಕೊಂಡು ಪ್ರಕರಣದ ಕುರಿತಂತೆ ವಿಚಾರಿಸಿದನು. ಟೋಬಿಯು ಆ ದಿನ ವಾಸ್ತವವಾಗಿ ತಾನು ಆ ಅನಾಥಹೆಣವನ್ನು ವಿಲೇವಾರಿ ಮಾಡಲು ಸ್ಮಶಾನದಲ್ಲಿ ಗುಂಡಿ ಅಗೆಯುವನೊಬ್ಬನನ್ನು ನೇಮಿಸಿದ್ದಾಗಿಯೂ, ಮೆಟಾಡೋರ್‌ನಲ್ಲಿ ಹೆಣವನ್ನು ಸಾಗಿಸಲು ತನಗೆ ಬೇರೆ ಕೆಲಸ ಅಡ್ಡ ಬಂದುದರಿಂದ ಪಂಗಾಳಿಯನ್ನೇ ಮೂಟೆ ಹೊತ್ತು ಸ್ಮಶಾನಕ್ಕೆ ತೆರಳಲು ಸೂಚಿಸಿದ್ದಾಗಿಯೂ, ಅದರಂತೆ ಪಂಗಾಳಿಯು ಸ್ಮಶಾನಕ್ಕೆ ಹೋಗಿದ್ದಾಗಿಯೂ ತದನಂತರ ನಡೆದುದೇನೆಂಬುದು ತನಗೆ ಗೊತ್ತಿಲ್ಲವೆಂದು ತಿಳಿಸಿದನು.

ಗುಂಡಿತೋಡಿದವನ ಬಗ್ಗೆ ವಿಚಾರಿಸಲಾಗಿ ಅವನು ಪರವೂರಿನವನಾಗಿದ್ದು ಈಗೆಲ್ಲಿದ್ದಾನೆಂದು ತನಗೆ ತಿಳಿಯದೆಂದೂ, ದಂಡಪಾಣಿಯು ಎಷ್ಟು ಹೆದರಿಸಿ ಬೆದರಿಸಿದರೂ ಇದಿಷ್ಟನ್ನೇ ಹೇಳಿದ ಟೋಬಿಯು, ತನ್ನ ತಲೆಗೆ ಬಂದೂಕಿಟ್ಟು ಗುಂಡುಹೊಡೆದರೂ ಇದರ ಹೊರತು ತನಗೇನೂ ತಿಳಿಯದೆಂದು ಖಡಾಖಂಡಿತವಾಗಿ ಹೇಳಿದನು. ಗುಂಡಿ ತೋಡಿದವನು, ಪಂಗಾಳಿ ಇಬ್ಬರೂ ನಾಪತ್ತೆಯಾಗಿದ್ದರ ಬಗ್ಗೆ ಇನ್ನಷ್ಟು ಗಲಿಬಿಲಿಗೊಳಗಾದ ದಂಡಪಾಣಿ, ಪಂಗಾಳಿ ನಾಪತ್ತೆಯಾದ ದಿನ ಸ್ಮಶಾನದಲ್ಲಿ ಅಗೆದಿದ್ದ ಗುಂಡಿಯನ್ನು ಆಳುಗಳಿಂದ ಮತ್ತೆ ಅಗೆಯಿಸಿ ನೋಡಲಾಗಿ ಅದರೊಳಗೆ ಪಂಗಾಳಿಯ ಅರೆಕೊಳೆತ ಹೆಣ ಪತ್ತೆಯಾಗಿತ್ತು. ಯಾರನ್ನು ಹೂಳಲು ಗುಂಡಿ ಅಗೆಯಲಾಗಿತ್ತೋ, ಆ ಹೆಣವು ಪೊದೆಯೊಳಗೆ ದೊರೆತು, ಆ ಹೆಣವನ್ನು ಹೊತ್ತು ತಂದ ಪಂಗಾಳಿಯು ಗುಂಡಿಯೊಳಗೆ ಮಣ್ಣಾಗಿಹೋಗಿದ್ದ. ಕೊನೆಗೂ ಈ ಪ್ರಕರಣದ ತಲೆಬುಡವೆರಡೂ ಅರ್ಥವಾಗದೇ ದಂಡಪಾಣಿಯು ಇದು ಬಗೆಹರಿಯದ ಕೇಸೆಂದು ತನ್ನ ಮೇಲಧಿಕಾರಿಗಳಿಗೆ ಮಾಹಿತಿ ರವಾನಿಸಿ ಕೇಸುಕ್ಲೋಸು ಮಾಡಿಸಿದ್ದ. ಹಾಗೆ ಪಂಗಾಳಿಯ ನಾಪತ್ತೆ ಮತ್ತು ಮರಣದ ಪ್ರಕರಣ ಯಾರಿಗೂ ಅರ್ಥವಾಗದೆ ಯಾವೊಂದು ಕುರುಹನ್ನೂ ಉಳಿಸದೆಯೇ ಹಾಗೆಯೇ ಮುಗಿದುಹೋಗಿತ್ತು. 

ದಂಡಪಾಣಿ, ಟೋಬಿ, ಗುಂಡಿತೋಡಿದವನು, ದೇವನಾಯಗಂ, ಜೆನ್ಸಿ ಇವರ್ಯಾರಿಗೂ ತಿಳಿಯದೇ ಹೋದ ಸಂಗತಿಯೊಂದಿತ್ತು. ಇವರೆಲ್ಲರ ಅರಿವಿಗೆ ಬರದಂತೆ ಪಂಗಾಳಿಯ ಬದುಕಲ್ಲಿ ಒಂದು ಅನೂಹ್ಯ ಘಟನೆ ನಡೆದಿತ್ತು. ಆವತ್ತು ಹೆಣದಮನೆಯೊಳಗೆ ಮೊಮ್ಮಗಳು ತಾಂಜಿಯೊಡನೆ ಆಟವಾಡುತ್ತಿದ್ದ. ಆಟವಾಡುತ್ತ ಪಂಗಾಳಿಯ ಕಾಲಿಗೆ ಆಗಷ್ಟೇ ಶವಪರೀಕ್ಷೆ ನಡೆದಿದ್ದ ಹೆಣದ ಕಾಲಿಗೆ ನೇತಾಡಿಸಿದ್ದ ನಂಬರ್‌ಟ್ಯಾಗನ್ನು ಕಳಚಿದ್ದ ತಾಂಜಿಯು ಅದನ್ನು ತನ್ನ ತಾತ ಪಂಗಾಳಿಯ ಬಲಗಾಲಿಗೆ ಹಾಕಿ ದಾರ ಸುತ್ತಿದ್ದಳು.

ಹೆಣವನ್ನು ಮೂಟೆಗೆ ತುಂಬಿಕೊಳ್ಳುವ ಸಮಯದಲ್ಲಿ  ಜೆನ್ಸಿ ಪಂಗಾಳಿಯೊಟ್ಟಿಗಿದ್ದ ಮಗಳು ತಾಂಜಿಯನ್ನು ಕರೆದೊಯ್ದಿದ್ದಳು. ಟೋಬಿಯ ಆಣತಿಯಂತೆ ಸ್ಮಶಾನಕ್ಕೆ ಹೆಣದಮೂಟೆ ಹೊತ್ತುಕೊಂಡು ಹೋದ ಪಂಗಾಳಿಗೆ ಅಲ್ಲಿ ಯಾರೂ ಕಾಣದೆ ಹೆಣವನ್ನು ಪೊದೆಯೊಂದರ ಬಳಿ ಇಳಿಸಿ ಪಕ್ಕದಲ್ಲಿದ್ದ ಶರಾಬು ಅಂಗಡಿಯಲ್ಲಿ ಒಂದಷ್ಟು ಹೊಟ್ಟೆಗಿಳಿಸಿಕೊಂಡು ಮತ್ತೆ ಗುಂಡಿಯ ಬಳಿ ಬಂದವನು, ಗುಂಡಿತೋಡಿದವನು ಬರುವತನಕ ಮಲಗಿರೋಣವೆಂದು ಗುಂಡಿಯ ಬಳಿಯಲ್ಲೇ ಮಲಗಿದ್ದನು. ಇತ್ತ ಎತ್ತಲೋ ಹೋಗಿದ್ದ ಗುಂಡಿತೋಡಿದ್ದವನು ಕುಡಿದನಶೆಯಲ್ಲಿ ಪ್ರಜ್ಞೆಯಿಲ್ಲದೆ ಮಲಗಿದ್ದ ಪಂಗಾಳಿಯ ಕಾಲಿಗೆ ಅವನ ಮೊಮ್ಮಗಳು ತಾಂಜಿ ನೇತಾಡಿಸಿದ್ದ ಹೆಣದ ನಂಬರ್‌ಟ್ಯಾಗನ್ನು ನೋಡಿದವನೇ, ಪಂಗಾಳಿ ಇಳಿಸಿ ಹೋಗಿರುವ ಹೆಣ ಇದೇ ಎಂದು ಭಾವಿಸಿದವನೇ, ಜೀವಂತವಿದ್ದ ಪಂಗಾಳಿಯನ್ನೇ ಗುಂಡಿಯೊಳಗೆ ಇಳಿಸಿ ಮಣ್ಣುಮುಚ್ಚಿ ಅವನ ಪಾಡಿಗವನು ಅವನೂರಿಗೆ ಹೊರಟು ಹೋಗಿದ್ದ. ಅವನು ಮತ್ತೆಂದೂ ಪುಲಿಮೊಗರಿಗೆ ಬರಲಿಲ್ಲವಾಗಿ, ಪಂಗಾಳಿ ಸತ್ತದ್ದೇಕೆಂಬ ವಿಷಯ ಮಾತ್ರ ಯಾರ ನಿಲುಕಿಗೂ ದಕ್ಕದೇ ಅವನ ಸಾವೂ ಅವನಂತೆಯೇ ಮಾತು ಕಳೆದುಕೊಂಡು ಯಾವತ್ತಿಗೂ ಮೌನವಾಗಿಯೇ ಉಳಿದುಹೋಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.