ADVERTISEMENT

ಪ್ರತಿ ಭೇಟಿಯ ಹೊಸತನ

ವಿವೇಕ ಶಾನಭಾಗ
Published 15 ಆಗಸ್ಟ್ 2015, 19:30 IST
Last Updated 15 ಆಗಸ್ಟ್ 2015, 19:30 IST

ಮನೆಗೆ ಬಂದು ನಾಲ್ಕು ದಿನ ಇದ್ದು ಹೋಗುವ ಸಂಬಂಧಿಕರು ಹೊರಡುವಾಗ ಮಕ್ಕಳ ಕೈಗೆ ಒಂದಿಷ್ಟು ದುಡ್ಡು ಕೊಡುವುದು ನಮ್ಮಲ್ಲಿ ವಾಡಿಕೆ. ಅದನ್ನು ತಕ್ಷಣ ಅಮ್ಮನ ಕೈಗೆ ಕೊಡುವುದೂ ವಾಡಿಕೆಯೇ. ಒಮ್ಮೆ ನನ್ನ ಸೋದರತ್ತೆ ಬಂದವರು ಮರಳಿ ಮುಂಬೈಗೆ ಹೋಗುವಾಗ ನನ್ನ ಕೈಗೆ ಹತ್ತು ರೂಪಾಯಿ ಇಟ್ಟು ಏನಾದರೂ ತಗೋ ಅಂದರು. ಮನೆಯಲ್ಲೇ ಈ ಘಟನೆ ನಡೆದಿದ್ದರೆ ಆ ದುಡ್ಡನ್ನು ಅಮ್ಮನಿಗೆ ಕೊಡಬೇಕಾಗುತ್ತಿತ್ತು.

ಆದರೆ ಅದನ್ನು ಅವರು ಕೊಟ್ಟಿದ್ದು ಬಸ್‌ಸ್ಟ್ಯಾಂಡಿನಲ್ಲಿ. ಅವರನ್ನು ಬಿಟ್ಟುಬರಲು ಹೋದ ನನ್ನ ಕೈಯಲ್ಲಿ ಬಸ್ಸು ಹೊರಡುವ ಕೊನೆಯ ಕ್ಷಣದ ಅವಸರದಲ್ಲಿ ಕಿಟಕಿಯಿಂದ ಕೈಚಾಚಿ ಮಡಚಿದ ನೋಟನ್ನಿಟ್ಟಿದ್ದರು. ಹೆಚ್ಚು ಯೋಚಿಸದೇ ನಾನು ಅಲ್ಲಿಂದ ಸೀದಾ ಪುಸ್ತಕದ ಅಂಗಡಿಗೆ ಹೋದೆ. ಅಲ್ಲಿ ಏನು ಕೊಳ್ಳಬೇಕು ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಇರಲಿಲ್ಲ. ಸುಮ್ಮನೇ ನೋಡುತ್ತ ನಿಂತವನಿಗೆ ಗಾಜಿನ ಕಪಾಟಿನಲ್ಲಿದ್ದ ‘ಭಾರತೀಪುರ’ ಎಂಬ ಪುಸ್ತಕವೊಂದು ಕಾಣಿಸಿತು.

ಹಸಿರು ಬಣ್ಣದ ಅದರ ಮುಖಪುಟದ ಮೇಲೆ ಕೆಲವು ಅರ್ಧರ್ಧ ಕತ್ತರಿಸಿದ ಸಾಲುಗಳಿದ್ದವು. ಕುತೂಹಲದಿಂದ ಅವುಗಳನ್ನು ಓದಿದ ನನಗೆ ಥಟ್ಟನೆ ಹೊಡೆದೆಬ್ಬಿಸಿದ ಅನುಭವವಾಯಿತು. ಅಂಥ ಭಾಷೆ ಮತ್ತು ವಿಚಾರಗಳು ನನಗೆ ಅದುವರೆಗೂ ಅಪರಿಚಿತವಾಗಿದ್ದವು. ನಾನು ಮಂತ್ರಮುಗ್ಧನಾದೆ. ಆ ದಿನ ಅಂಗಡಿಯಲ್ಲಿ ನಿಂತು ಓದಿದ ಸಾಲುಗಳನ್ನು ನಾನು ಮರೆತೇ ಇಲ್ಲ:

‘‘ಈ ಮಂಜುನಾಥನಿಂದಾಗಿ ನಮ್ಮ ಜೀವನಕ್ರಮದಲ್ಲಿ ಏನೂ ಬದಲಾವಣೆ ಆಗದೇ ಹಾಗೇ ನಿಂತುಬಿಟ್ಟಿದೆ. ನಾವು ಕೊಳೀತಾ ಇದೀವಿ. ಮಂಜುನಾಥನ್ನ ನಾಶ ಮಾಡಿದ ಮೇಲೆ ನಾವು ನಮ್ಮ ಜೀವನಕ್ಕೆ ಜವಾಬ್ದಾರರಾಗಬೇಕಾಗತ್ತೆ... ಇದಕ್ಕೆಲ್ಲ ಮುಖ್ಯವಾದ್ದು ಹೊಲೆಯರು ತಯಾರಾಗೋದು... ದೇವಸ್ಥಾನದ ಹೊಸಿಲ ಒಳಗೆ ಅವರು ಇಡೋ ಮೊದಲನೇ ಹೆಜ್ಜೆ ನೂರಾರು ವರ್ಷಗಳ ವಾಸ್ತವತೇನ್ನ ಬದಲಿಸಬಹುದು....’’. ನಾನು ಹತ್ತು ರೂಪಾಯಿ ಕೊಟ್ಟು ಆ ಪುಸ್ತಕ ಕೊಂಡೆ. ಮತ್ತು ಸೀದಾ ಮನೆಗೆ ಬಂದವನೇ ಇಡೀ ಕಾದಂಬರಿಯನ್ನು ಓದಿ ಮುಗಿಸಿದೆ. ನನಗಾಗ ಹದಿನೈದು ವರ್ಷ.

‘ಭಾರತೀಪುರ’ ನನ್ನ ಮನಸ್ಸಿನಲ್ಲಿ ಎಬ್ಬಿಸಿದ ಕೋಲಾಹಲವನ್ನು ವರ್ಣಿಸಲಿಕ್ಕೆ ಸಾಧ್ಯವಿಲ್ಲ. ಅಂಥ ಭಾಷಾ ಪ್ರಯೋಗವೇ ನನಗೆ ಹೊಸತಾಗಿತ್ತು. ಪ್ರಶ್ನೆಗಳು, ಆಳವಾದ ಅನುಮಾನಗಳು ಎಂತೆಂಥ ಹೊಸ ದಾರಿಗಳನ್ನು ತೆರೆಯಬಲ್ಲುದೆಂಬುದನ್ನು ಸ್ವತಃ ಅನುಭವಿಸಿದೆ. ಆ ಕಾಲದಲ್ಲಿ ನನಗೆ ಆಧ್ಯಾತ್ಮಿಕ ಪುಸ್ತಕಗಳತ್ತ ಬಹಳ ಒಲವಿತ್ತು. ಆ ವಯಸ್ಸಿನಲ್ಲಿ ಕೇಳಿಕೊಳ್ಳುತ್ತಿದ್ದ ಹಲವು ಪ್ರಶ್ನೆಗಳಿಗೆ ಅಲ್ಲಿ ಉತ್ತರವಿದೆಯೆಂದೆನಿಸುತ್ತಿತ್ತು. ಆದರೆ ಅದು ಯಾವುದೂ ನಿಜದ ಅನುಭವಕ್ಕೆ ಹತ್ತಿರವಾಗಿಲ್ಲವೆಂಬ ಅನುಮಾನವೂ, ಅದಕ್ಕೆ ಕಾರಣ ನನ್ನ ಅನುಭವದ ಕೊರತೆಯೇ ಇರಬಹುದೆಂಬ ಸಂಶಯವೂ ಉಂಟಾಗುತ್ತಿತ್ತು.

‘ಭಾರತೀಪುರ’ವನ್ನು ಓದಿದ ನಂತರ ನಾನು ಅದುವರೆಗೂ ಓದುತ್ತಿದ್ದ ಪುಸ್ತಕಗಳನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟು ಹೊಸ ಓದಿನತ್ತ ಹೊರಳಿದೆ. ಅದು ನನ್ನ ಬದುಕಿನ ಮುಖ್ಯವಾದ ತಿರುವು. ವಿಚಾರದ ಸ್ಪಷ್ಟತೆ ಮತ್ತು ಅದನ್ನು ದೈನಿಕದ ಸಾಮಾನ್ಯ ಅನುಭವಕ್ಕೆ ಗಾಢವಾಗಿ ತಳಕು ಹಾಕುವ ಶಕ್ತಿಯು ಅನಂತಮೂರ್ತಿಯವರ ಬರಹಗಳ ಮಾಂತ್ರಿಕತೆಗೆ ಕಾರಣವೆಂದುಕೊಂಡಿದ್ದೇನೆ. ಈ ಮೂಲಕ ವಿಚಾರವೊಂದು ಓದುಗನ ಮನಸ್ಸಿನ ಮೂಲೆಮೂಲೆಗಳನ್ನು ವ್ಯಾಪಿಸುವ ಹಾಗೆ ಮಾಡಿ ಅದನ್ನು ಅನುಭವಕ್ಕೆ ತರುವುದು ಅವರ ಬರಹಗಳ ಲಕ್ಷಣ.

ಅವರ ವಿರುದ್ಧ ಗದ್ದಲವೆಬ್ಬಿಸುತ್ತಿದ್ದ ಮೂಲಭೂತವಾದಿಗಳ ಕೋಪಕ್ಕೂ ಈ ಪ್ರತಿಭೆಯೇ ಕಾರಣವೆಂದುಕೊಳ್ಳುತ್ತೇನೆ. ಅವರ ಮನಸ್ಸುಗಳನ್ನೂ ಅನಂತಮೂರ್ತಿಯವರ ಬರಹಗಳು ಮತ್ತು ಮರ್ಮಕ್ಕೆ ತಾಗುವಂತಹ ರೂಪಕಗಳು ಆಳವಾಗಿ ಕಲಕಿರಬೇಕು. ಅವರ ವಿಚಾರದ ಸ್ಪಷ್ಟತೆಯು ಅನುಭವಕ್ಕೆ ಬಂದ ಪರಿಯಿಂದ ಮೂಲಭೂತವಾದಿಗಳ ಪಡೆ ಕಂಗಾಲಾಗಿರಬೇಕು. ಇಂತಹ ಅಧೈರ್ಯ ಹುಟ್ಟಿದ್ದರಿಂದಲೇ ಈ ಹಿಂದೆ ಯಾರಿಗೂ ತೋರಿರದ ಅಸಹನೆಯನ್ನು ಬಲಪಂಥೀಯರು ತೋರಿಸಿದರು. ‘ಭಾರತೀಪುರ’ ಓದಿದಾಗ ಅದು ನನ್ನಲ್ಲಿ ಹುಟ್ಟಿಸಿದ ವಿಚಲಿತತೆ ಮತ್ತು ಕ್ಷೋಭೆಯನ್ನು ನೆನೆಸಿಕೊಂಡರೆ ಇದು ಸಂಭಾವ್ಯವಾಗಿ ಕಾಣುತ್ತದೆ.

ಅವರನ್ನು ನಾನು ಮುಖತಃ ಭೆಟ್ಟಿಯಾಗಿದ್ದು ಮಾತ್ರ ಎರಡು ವರ್ಷಗಳ ನಂತರ. ನಾನು ಆಗ ಅಂಕೋಲೆಯೆಂಬ ಸಣ್ಣ ಊರಿನಲ್ಲಿ ಪಿಯೂಸಿ ಓದುತ್ತಿದ್ದೆ. ಆ ವರ್ಷ ಶೆಟಗೇರಿ ಗ್ರಾಮದ ಹೈಸ್ಕೂಲಿನ ವಾರ್ಷಿಕೋತ್ಸವಕ್ಕೆ ಅನಂತಮೂರ್ತಿಯವರು ಬರುತ್ತಾರೆ ಎಂಬ ಸುದ್ದಿ ಕೇಳಿ ನಾನು ರೋಮಾಂಚಿತನಾದೆ. ಇಷ್ಟು ಸಣ್ಣ ಊರಿಗೆ, ಅದರಲ್ಲೂ ಹೈಸ್ಕೂಲಿನ ವಾರ್ಷಿಕೋತ್ಸವಕ್ಕೆ ಇವರು ಬರುತ್ತಿದ್ದಾರೆಂಬುದು ಆಶ್ಚರ್ಯಕ್ಕೆ ಕಾರಣವಾಗಿತ್ತು. ಅವರನ್ನು ನಮ್ಮೂರಿಗೆ ಕರೆತರುವುದರ ಹಿಂದೆ ಪ್ರಸಿದ್ಧ ವಿಮರ್ಶಕ ಜಿ.ಎಚ್. ನಾಯಕರು ಇದ್ದಾರೆಂದೂ, ಅವರು ಸದ್ಯ ಅಂಕೋಲೆಗೆ ಬಂದಿದ್ದಾರೆಂದೂ ಗೊತ್ತಾಗಿ ಒಂದು ಸಂಜೆ ನಾನು ನಾಯಕರನ್ನು ಹುಡುಕಿಕೊಂಡು ಅವರ ಮನೆಗೆ ಹೋದೆ. ಅಪರಿಚಿತನನ್ನು ಪ್ರೀತಿಯಿಂದ ಮಾತನಾಡಿಸಿದ ಅವರು ಅನಂತಮೂರ್ತಿಯವರು ಮಾರನೆಯ ದಿನ ಬೆಂಗಳೂರಿನಿಂದ ಬಸ್ಸಿನಲ್ಲಿ ಬರುತ್ತಾರೆಂದು ತಿಳಿಸಿ, ನನ್ನನ್ನು ಮರುದಿನ ಬೆಳಗಿನ ತಿಂಡಿಗೆ ಅವರ ಮನೆಗೆ ಆಹ್ವಾನಿಸಿದರು.

ನಾಯಕರು ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದು ಒಂಬತ್ತು ಗಂಟೆಗೆ. ಆದರೆ ನನಗೆ ಅಷ್ಟು ಕಾಯುವ ಪುರಸತ್ತಿರಲಿಲ್ಲ. ಅದಾಗಲೇ ನಾನು ಅನಂತಮೂರ್ತಿಯವರ ಎಲ್ಲ ಪುಸ್ತಕಗಳನ್ನೂ ಎರಡೆರಡು ಬಾರಿ ಓದಿದ್ದೆ. ನನ್ನ ಮೊಟ್ಟಮೊದಲ ಕತೆಗೆ ಎರಡು ತಿಂಗಳ ಹಿಂದೆಯಷ್ಟೇ ಕಥಾಸ್ಪರ್ಧೆಯಲ್ಲಿ ಬಹುಮಾನ ಬಂದಿತ್ತು. ಹಾಗಾಗಿ ನಾನೂ ಒಬ್ಬ ಸಾಹಿತಿ ಎನ್ನುವುದರಲ್ಲಿ ನನಗೆ ಎಳ್ಳಷ್ಟೂ ಅನುಮಾನವೇ ಇರಲಿಲ್ಲ!

ಇಂಥ ಮನಸ್ಥಿತಿಯಲ್ಲಿದ್ದ ನನಗೆ ಅನಂತಮೂರ್ತಿಯವರನ್ನು ನೋಡುವ ಆತುರವನ್ನು ತಡೆದುಕೊಳ್ಳಲಾಗಲಿಲ್ಲ. ಬೆಳಿಗ್ಗೆ ಏಳುಗಂಟೆಗೆ ಬಸ್‌ಸ್ಟ್ಯಾಂಡಿಗೆ ಹೋದೆ. ಬೆಂಗಳೂರಿನಿಂದ ಬರುವುದು ಒಂದೇ ಬಸ್ಸು. ಇನ್ನೂ ಬಸ್ ಬಂದಿರಲಿಲ್ಲ. ಜಿ.ಎಚ್. ನಾಯಕರು ಮತ್ತು ಶೆಟಗೇರಿ ಹೈಸ್ಕೂಲಿನ ಮುಖ್ಯೋಪಾಧ್ಯಾಯರು ಆಗಲೇ ಬಂದು ಕಾಯುತ್ತಿದ್ದರು. ಎಲ್ಲರೂ ಮರದ ಬುಡದಲ್ಲಿ ಮಾತಾಡುತ್ತ ನಿಂತೆವು. ಆ ದಿನ ಬಸ್ಸು ತಡವಾಗಿ, ಸುಮಾರು ಎಂಟು ಗಂಟೆಯ ಹೊತ್ತಿಗೆ ಬಂತು. ಕಿಟಕಿಯ ಬಳಿ ಕೂತಿದ್ದ ಅನಂತಮೂರ್ತಿಯವರನ್ನು ನಾನು ಗುರುತಿಸಿದೆ. ಅವರು ಕಂದು ಹಳದಿ ಬಣ್ಣದ ಚಿತ್ತಾರಗಳ ಸ್ವೆಟರ್ ಹಾಕಿಕೊಂಡಿದ್ದರು. ನಾಯಕರು ಬಸ್ಸಿನ ಬಾಗಿಲ ಬಳಿ ಹೋಗಿ ಅವರನ್ನು ಎದುರುಗೊಂಡರು.

ನಾನು ಅವರ ಹಿಂದೆಯೇ ನಿಂತಿದ್ದೆ. ಬಸ್ಸಿನಿಂದ ಇಳಿದೊಡನೆ ಸ್ವೆಟರನ್ನು ತೆಗೆಯುತ್ತ ಅವರು ಆಡಿದ ಮೊದಲ ಮಾತು ಈಗಲೂ ನನಗೆ ನೆನಪಿದೆ: ಬೆಂಗಳೂರಿನಲ್ಲಿ ಬಹಳ ಮಳೆ. ಮನೆಯಿಂದ ಬರಲಿಕ್ಕೆ ಆಟೋ ಸಿಗುವುದು ಬಹಳ ಕಷ್ಟವಾಯ್ತು. ನಂತರ ನಾಯಕರು ನನ್ನನ್ನು ಪರಿಚಯಿಸಿದರು. ಆಮೇಲೆ ಒಂಬತ್ತು ಗಂಟೆಗೆ ನಾಯಕರ ಮನೆಯಲ್ಲಿ ತಿಂಡಿಗೆ ಹೋದೆ. ಅವರೆಲ್ಲರೂ ಆಡುವ ಮಾತುಗಳನ್ನು ಅತ್ಯುತ್ಸಾಹದಿಂದ ಕೇಳಿಸಿಕೊಳ್ಳುತ್ತ ಕೂತೆ. ಆದರೆ ನಿಧಾನವಾಗಿ ನನಗೆ ನಿರಾಸೆಯಾಯಿತು: ಅನಂತಮೂರ್ತಿಯವರು ಸಾಹಿತ್ಯವೊಂದನ್ನು ಬಿಟ್ಟು ಜಗತ್ತಿನಲ್ಲಿರುವ ಬೇರೆಲ್ಲ ವಿಷಯಗಳ ಬಗ್ಗೆ ಮಾತಾಡುತ್ತಿದ್ದರು! ರೈತ ಹೋರಾಟಗಳ ಬಗ್ಗೆ, ದಿನಕರ ದೇಸಾಯಿಯವರು ಶಾಲೆಕಾಲೇಜುಗಳನ್ನು ಸ್ಥಾಪಿಸುವ ಮೂಲಕ ತಂದ ಬದಲಾವಣೆಯ ಬಗ್ಗೆ, ಸ.ಪ. ಗಾಂವಕರರ ಸಾಮಾಜಿಕ ಕಾಳಜಿಗಳ ಬಗ್ಗೆ, ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆಯೇ ಅವರಿಗೆ ಕುತೂಹಲ.

ADVERTISEMENT

ಈಗ ಇಷ್ಟು ವರ್ಷಗಳ ಅವರ ನಿಕಟ ಸಹವಾಸದ ನಂತರ ಇದನ್ನೆಲ್ಲ ನೆನೆಸಿಕೊಂಡರೆ ಆಶ್ಚರ್ಯವಾಗುವುದಿಲ್ಲ. ಕಾರಣ ಅವರ ಸ್ವಭಾವವೇ ಹಾಗಿತ್ತು. ಅನಾರೋಗ್ಯದಿಂದ ಪ್ರವಾಸ ಅಸಾಧ್ಯವಾಗುವವರೆಗೂ ಅವರು ಸಣ್ಣ ಊರುಗಳ ಶಾಲೆಕಾಲೇಜುಗಳಿಗೆ ಹೋಗಿ ಮಾತನಾಡುವುದನ್ನು ಇಷ್ಟಪಡುತ್ತಿದ್ದರು. ಕಿರಿಯರ ಬರಹಗಳ ಬಗ್ಗೆ ಅವರಿಗೆ ಅಪಾರವಾದ ಆಸಕ್ತಿಯಿತ್ತು. ಕೊನೆಯವರೆಗೂ, ಎಲ್ಲಿಯೇ ಹೊಸ ಬರಹ ಕಾಣಲಿ ಅದನ್ನು ಓದಿ ಇಷ್ಟವಾದರೆ ಲೇಖಕರನ್ನು ಸಂಪರ್ಕಿಸಿ ಮಾತನಾಡಿಸುತ್ತಿದ್ದರು, ಪತ್ರ ಬರೆಯುತ್ತಿದ್ದರು. ಆ ಕುರಿತು ಎಲ್ಲರಿಗೂ ಹೇಳುತ್ತಿದ್ದರು.

ಒಂದು ಬರಹದ ಶಕ್ತಿಮಿತಿಗಳನ್ನು ತಕ್ಷಣ ಗುರುತಿಸುವ ಮತ್ತು ಅದನ್ನು ನಿರ್ಭಿಡೆಯಿಂದ ಹೇಳುವ ಸ್ವಭಾವದಿಂದ ಅವರ ಮೆಚ್ಚುಗೆಯನ್ನೂ ವಿಮರ್ಶೆಯನ್ನೂ ಹೊಸ ಬರಹಗಾರರು ಬಯಸುತ್ತಿದ್ದರು. ನಾನಿನ್ನೂ ಅವರಿಗೆ ಅಷ್ಟು ಪರಿಚಿತನಾಗಿಲ್ಲದ ದಿನಗಳಲ್ಲಿ ನನ್ನ ಒಂದು ಕತೆಯನ್ನೋದಿ ಪತ್ರ ಬರೆದಿದ್ದರು. ಇನ್ನೂ ಒಂದೂ ಸಂಕಲನ ಪ್ರಕಟಿಸಿರದ ನನಗೆ ಅನಂತಮೂರ್ತಿಯವರಿಂದ ಪತ್ರ ಬಂದರೆ ಕೋಡು ಮೂಡದೇ ಇದ್ದೀತೇ? ಇದು ನನ್ನೊಬ್ಬನ ಅನುಭವ ಮಾತ್ರವಲ್ಲ – ಕನ್ನಡದ ನೂರಾರು ಲೇಖಕರದು.

ಅವರು ಎಂಥ ಅನೌಪಚಾರಿಕ ವಾತಾವರಣವನ್ನು ಸೃಷ್ಟಿಸಿದ್ದರೆಂದರೆ ಯಾರು ಬೇಕಾದರೂ ಅವರನ್ನು ಭೇಟಿಯಾಗಬಹುದಿತ್ತು, ಅವರಿಗೆ ತಮ್ಮ ಬರಹಗಳನ್ನು ಕೊಟ್ಟು ಅಭಿಪ್ರಾಯ ಕೇಳಬಹುದಿತ್ತು. ಇಷ್ಟು ದೊಡ್ಡ ಲೇಖಕರೊಡನೆ ಇಂಥ ಸಲಿಗೆಯನ್ನು ಕನ್ನಡದಲ್ಲಿ ಮಾತ್ರವಲ್ಲ, ಬೇರಾವ ಭಾಷೆಯಲ್ಲೂ ನಾನಂತೂ ಕಂಡಿಲ್ಲ. ಇದರ ಮಹತ್ವವನ್ನು ಮತ್ತು ಸಾಹಿತ್ಯದ ವಾತಾವರಣದ ಮೇಲೆ ಇದು ಉಂಟುಮಾಡಿದ ಪರಿಣಾಮವನ್ನು ಹೇಳಲು ನನ್ನಲ್ಲಿ ಶಬ್ದಗಳಿಲ್ಲ. ಅದೆಷ್ಟೇ ಮನಸ್ತಾಪವಿದ್ದರೂ, ಸಿಟ್ಟುಮಾಡಿಕೊಂಡಿದ್ದರೂ ಆ ವ್ಯಕ್ತಿ ಒಂದು ಉತ್ತಮ ಬರಹವನ್ನು ಬರೆದರೆ ಎಲ್ಲವನ್ನೂ ಮರೆತು ತಕ್ಷಣ ಕರೆಮಾಡಿ ಮಾತಾಡಿಸುತ್ತಿದ್ದರು.

ಇನ್ನು ಇಂಥ ಸ್ಪಂದನ ಕನ್ನಡದ ಲೇಖಕರಿಗೆ–- ಅದರಲ್ಲೂ ಹೊಸ ಲೇಖಕರಿಗೆ– ದೊರೆಯುವುದಿಲ್ಲವೆನ್ನುವುದು ಕನ್ನಡಕ್ಕಾದ ಬಹು ದೊಡ್ಡ ನಷ್ಟ. ಕನ್ನಡದಲ್ಲಿ ಅನಂತಮೂರ್ತಿಯವರ ಯುಗವನ್ನು ಗುರುತಿಸುವುದಾದರೆ ಇದು ಅದರ ಮುಖ್ಯ ಲಕ್ಷಣಗಳಲ್ಲಿ ಒಂದು. ದುರದೃಷ್ಟದಿಂದ ಅವರೊಡನೆ ಇದೂ ಮುಗಿದಿದೆ.

ಸುತ್ತಲಿನ ಆಗುಹೋಗುಗಳ ಬಗ್ಗೆ ತೀವ್ರವಾದ ಆಸ್ಥೆಯುಳ್ಳವರಾಗಿದ್ದರಿಂದ ಅವರ ಸಂಪರ್ಕಕ್ಕೆ ಬಂದ ಯಾವುದನ್ನೂ ನಿರ್ಲಕ್ಷ್ಯದಿಂದ ಹೋಗಗೊಟ್ಟವರಲ್ಲ. ಹಾಗಾಗಿ ಮನೆಕೆಲಸಕ್ಕೆ ಬಂದ ಬಡಗಿಯಿರಲಿ, ತೋಟದ ಆಳು ರಾಮಯ್ಯನಿರಲಿ, ಕಂಪ್ಯೂಟರ್ ಎಂಜಿನಿಯರ್‌ರಿರಲಿ ಅಥವಾ ಮಂತ್ರಿಮಹೋದಯರಿರಲಿ– ಅವರ ಜೊತೆ ಗಾಢವಾದ ಆಸಕ್ತಿಯಿಂದ, ಯಾವ ಬಗೆಯಲ್ಲೂ ಜಜ್‌ಮೆಂಟಲ್ ಆಗದೇ ಸಂವಾದ ನಡೆಸುತ್ತಿದ್ದರು. ಇಂತಹ ಆಸಕ್ತಿಯಿದ್ದುದರಿಂದಲೇ ಹೆಗ್ಗೋಡಿನಲ್ಲಿ ನಡೆದ ವಿಜ್ಞಾನ ಸೆಮಿನಾರಿನಲ್ಲಿ ಮೂರೂ ದಿನಪೂರ್ತಿ ಆದ್ಯಂತ ಭಾಗಿಯಾಗಿದ್ದರು. ಅಲ್ಲಿ ಅತ್ಯಂತ ಹೆಚ್ಚು ಪ್ರಶ್ನೆಗಳನ್ನು ಕೇಳಿದವರು ಇವರೇ! ನೈತಿಕ ಪ್ರಶ್ನೆಗಳನ್ನೆತ್ತಿ ಅತಿ ಹೆಚ್ಚಿನ ಚರ್ಚೆಗೆ ಕಾರಣವಾದದ್ದೂ ಇವರ ಮಾತುಗಳೇ!

ಪ್ರಶ್ನೆಗಳ ಮಾತೆತ್ತಿದರೆ ನೆನಪಾಗುವುದು ಅವರು ಪ್ರಶ್ನೆಗಳನ್ನು ನಿರ್ವಹಿಸುತ್ತಿದ್ದ ರೀತಿ. ಎಂಥ ಸಾಮಾನ್ಯ ಪ್ರಶ್ನೆಯನ್ನೂ ಅವರು ಅಸಡ್ಡೆಯಿಂದ ನೋಡುತ್ತಿರಲಿಲ್ಲ. ಒಳಗೆ ಹುಟ್ಟಿದ ಯಾವುದೋ ಸಂದೇಹವೇ ಪ್ರಶ್ನೆ ಕೇಳಲು ಪ್ರಚೋದಿಸಿದೆಯೆಂಬ ನಂಬಿಕೆಯಿಂದ ಪ್ರಶ್ನೆಯನ್ನೆತ್ತಿದವರ ಜೊತೆಗೇ ಸೇರಿ ಅದನ್ನು ಸಮರ್ಪಕ ಮಾತಿಗೊಳಪಡಿಸಲು ಪ್ರಯತ್ನಿಸುತ್ತಿದ್ದರು. ವಿಚಾರಗಳಿಗೆ ಹೇಗೆ ಸ್ಪಷ್ಟತೆ ತರಬೇಕೆನ್ನುವುದರ ತರಬೇತಿಯಂತಿರುತ್ತಿದ್ದ ಈ ಪ್ರಕ್ರಿಯೆಯು ಪ್ರಶ್ನೆ ಕೇಳಿದವರಲ್ಲಿ ಹುಟ್ಟಿಸುತ್ತಿದ್ದ ಆತ್ಮವಿಶ್ವಾಸದ ಬಗ್ಗೆ ಮತ್ತೆ ಹೇಳಬೇಕಾಗಿಲ್ಲ. ಪ್ರಶ್ನೆಗಳ ಪ್ರಾಂಜಲತೆಯನ್ನು ಅವರು ಗೌರವಿಸುತ್ತಿದ್ದುದರಿಂದ ಅವು ನಿಜವಾದ ಹುಡುಕಾಟದಿಂದ ಬರದೇ ಅವರ ನಿಲುವನ್ನು ಪರೀಕ್ಷಿಸಲೋ ಕೆಣಕಲೋ ಇದೆಯೆಂದು ಭಾಸವಾದರೆ ಸಿಟ್ಟಾಗುತ್ತಿದ್ದರು.

ಹೀಗೆ ಹಂಚಿಕೊಳ್ಳುವುದು, ಜೊತೆಗೆ ಸೇರಿ ಕಟ್ಟುವುದು ಅವರ ವ್ಯಕ್ತಿತ್ವದ ಹಾಗೂ ಚಿಂತನೆಯ ಬಹುಮುಖ್ಯ ಲಕ್ಷಣವೆಂದು ನಾನು ಭಾವಿಸಿದ್ದೇನೆ. ಅವರನ್ನು ಭೇಟಿಯಾಗಲು ದಿನವಿಡೀ ಜನ ಬರುತ್ತಿದ್ದರು. ಯಾರನ್ನೂ ಅವರು ನಿರಾಕರಿಸುತ್ತಿರಲಿಲ್ಲ. ಅವರು ವಾಕ್ ಹೋಗುವ ಹೊತ್ತಿಗೆ ಮನೆಗೆ ಬಂದವರನ್ನು ತಮ್ಮ ಜೊತೆಗೇ ಕರೆದೊಯ್ಯುತ್ತಿದ್ದರು. ಅವರು ಚಿಂತಿಸುತ್ತಿದ್ದ ವಿಚಾರಗಳನ್ನು, ಬರೆಯಲು ಉದ್ದೇಶಿಸಿರುವ ಲೇಖನಗಳನ್ನು ಅಥವಾ ರಾಜಕೀಯ ಪ್ರತಿಕ್ರಿಯೆಗಳನ್ನು, ಅವು ಸಾರ್ವಜನಿಕವಾಗುವ ಮೊದಲೇ ಹಲವಾರು ಜನರ ಜೊತೆ ಹಂಚಿಕೊಂಡಿರುತ್ತಿದ್ದರು.

ಎಂಥದೇ ವಿಚಾರವನ್ನು ಹಂಚಿಕೊಳ್ಳಲು ಯಾರೂ ಅಯೋಗ್ಯರೆಂದು ಭಾವಿಸುತ್ತಿರಲಿಲ್ಲ. ಹಾಗಾಗಿ ಹಿರಿಯರಿರಲಿ ಕಿರಿಯರಿರಲಿ, ಯಾವುದೇ ಹಿನ್ನೆಲೆಯ ಜನವಿರಲಿ ಅವರ ಜೊತೆ ಮಾತುಕತೆಯಲ್ಲಿ ತತ್ಪರರಾಗಿ ತೊಡಗುತ್ತಿದ್ದರು. ಬಹುಮುಖ್ಯವಾಗಿ, ಇಂಥಲ್ಲಿ ದೊರೆಯುವ ಪ್ರತಿಸ್ಪಂದನವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು.

ಒಂದು ಬರಹ ಪ್ರಕಟವಾಗುವ ಮೊದಲೇ ಅದರೊಳಗಿನ ವಿಚಾರಗಳ ಬಗ್ಗೆ ಭಿನ್ನ ಅಭಿರುಚಿಯ ಓದುಗ ವರ್ಗದ ಪ್ರತಿಕ್ರಿಯೆಯನ್ನು, ಅದರ ಪರಿಣಾಮಗಳನ್ನು ಅವರು ಊಹಿಸಬಲ್ಲವರಾಗಿದ್ದರೆ ಅದು ಈ ಕಾರಣಕ್ಕಾಗಿ. ಲೇಖನಗಳಲ್ಲಿ ಕಾಣುವ ಅವರ ಕಥನಕ್ರಮದ ಸಂರಚನೆಯು, ಅಲ್ಲಿ ವಿಚಾರಗಳನ್ನು ಅವರು ಬೆಳೆಸುವ ಬಗೆ ಹಾಗೂ ಹಲವು ವೈವಿಧ್ಯಮಯ ಸಂಗತಿಗಳ ನಡುವಿನ ಸಂಬಂಧವನ್ನು ನಿರ್ಮಿಸಿ ನಿರೂಪಿಸುವ ಕ್ರಮವು, ಇಂಥ ಸತತ ಸಂವಾದದ ಪರಿಣಾಮವಾಗಿ ರೂಪುಗೊಂಡಿದೆಯೆಂದು ಭಾವಿಸಿದ್ದೇನೆ. ಇದು ಸಾಧ್ಯವಾಗಿದ್ದು, ಯಾವುದನ್ನೂ ತನಗೆಂದು ಮಾತ್ರ ಇಟ್ಟುಕೊಳ್ಳದೇ ಹಂಚಿಕೊಳ್ಳುವ ನಿಸ್ಪೃಹತೆಯಿಂದ. 

***

ಜನರ ಜೊತೆ ಅವರ ಒಡನಾಟಕ್ಕೂ, ಹಂಚಿಕೊಳ್ಳುವ ಗುಣಕ್ಕೂ, ಅವರು ಲೇಖನವನ್ನು ಬರೆಯುತ್ತಿದ್ದ ಕ್ರಿಯೆಗೂ ಸಂಬಂಧವಿದೆಯೆಂದು ನನಗನಿಸುತ್ತದೆ. ಎಲ್ಲವೂ ಮೊದಲೇ ಎಲ್ಲೋ ಸಿದ್ಧವಾಗಿದ್ದು, ಅದು ಕೇವಲ ತನ್ನಿಂದ ಬರೆಸಿಕೊಳ್ಳುತ್ತಿದೆ ಎಂಬ ಹಾಗೆ, ಲೇಖನಗಳನ್ನು ಅವರು ಒಂದೇ ಪಟ್ಟಿಗೆ (ಸಿಟಿಂಗ್‌ನಲ್ಲಿ) ಬರೆಯುತ್ತಿದ್ದರು. ನಂತರ ಅಲ್ಲಲ್ಲಿ ತಿದ್ದಿದರೂ ಅದರ ಒಟ್ಟೂ ಆಕಾರ ಮತ್ತು ಪಠ್ಯದಲ್ಲಿ ಮೊದಲ ಕರಡಿಗೂ ಕೊನೆಗೂ ಅಂಥ ವ್ಯತ್ಯಾಸವಾಗುತ್ತಿರಲಿಲ್ಲ. ಇಂಥ ಶಕ್ತಿಯಿಂದಾಗಿಯೇ, ದೀರ್ಘ ಕಾಲ ಕಂಪ್ಯೂಟರಿನೆದುರು ಕೂತು ಸ್ವತಃ ಬರೆಯುವುದು ದೈಹಿಕವಾಗಿ ಕಷ್ಟವಾದಾಗ, ಲೇಖನಗಳನ್ನು ಹೇಳಿ ಬರೆಸುವುದು ಅವರಿಗೆ ಸಾಧ್ಯವಾಯಿತು. ಕನ್ನಡದಲ್ಲಿ ಇದನ್ನು ಮಾಡಿದ ಇನ್ನೊಬ್ಬ ಪ್ರಮುಖ ಲೇಖಕರೆಂದರೆ ಶಿವರಾಮ ಕಾರಂತರು. ವಿಚಾರಗಳ ಸ್ಪಷ್ಟತೆಯಿಲ್ಲದೇ ಇದು ಶಕ್ಯವಿಲ್ಲ.

ಈ ಮಾತು ಅವರ ಭಾಷಣಗಳಿಗೂ ನಿಜ. ಅವರು ಯಾವ ಭಾಷಣಕ್ಕೂ ದೀರ್ಘ ಟಿಪ್ಪಣಿ ಮಾಡಿಕೊಂಡಿದ್ದನ್ನು ನಾನು ಕಂಡಿಲ್ಲ. ಲೇಖನ ಬರೆಯುವ ಕ್ರಿಯೆಯ ಹಾಗೆಯೇ ಇದೂ ಅಷ್ಟೇ ಸೃಜನಾತ್ಮಕವಾಗಿ ಜರುಗುತ್ತಿತ್ತು. ಅವರ ಮಾತಿಗಿದ್ದ ಸದ್ಯದ ಗುಣ ಇಲ್ಲಿಂದಲೇ ಬಂದಿದೆಯೆನಿಸುತ್ತದೆ.ಅಲ್ಲೇ ಸಭೆಯ ನಡುವೆ, ಆಹ್ವಾನ ಪತ್ರಿಕೆಯ ಹಿಂದೆ ಬರೆದ ನಾಲ್ಕೈದು ಶಬ್ದಗಳು, ಕೆಲವೊಮ್ಮೆ ಕೈಗೆ ಸಿಕ್ಕ ಯಾವುದೋ ಪುಸ್ತಕದ ಕೊನೆಯ ಖಾಲಿ ಹಾಳೆಯ ಮೇಲೆ ಬರೆದ ಒಂದೆರಡು ಅರ್ಧ ವಾಕ್ಯಗಳು - ಇಷ್ಟೇ ಅವರ ಭಾಷಣದ ಟಿಪ್ಪಣಿಗಳು. ಅವರು ಮಾತಿಗೇ ನಿಂತದ್ದೇ ಅಲ್ಲೇ ಆ ದಿನದ ಭಾಷಣವು ಆಕಾರ ಪಡೆಯುತ್ತಿತ್ತು.

ಹೀಗೆ ದೊರೆಯುವ ಸೃಜನಾತ್ಮಕ ಸಂತೋಷಕ್ಕಾಗಿಯೇ ಅವರು ಭಾಷಣ ಮಾಡುವುದನ್ನು ಇಷ್ಟಪಡುತ್ತಿದ್ದರೆನಿಸುತ್ತದೆ. ಹಾಗಾಗಿಯೇ ಅವು ಅಷ್ಟೊಂದು ಆಕರ್ಷಕವಾಗಿಯೂ ಟೆಂಟೆಟಿವ್ ಆಗಿಯೂ ಇರುತ್ತಿದ್ದವು. ತಾನಾಡಿದ್ದೇ ಕೊನೆಯ ಮಾತಾಗಬೇಕೆನ್ನುವ ಆಸೆಯಿಲ್ಲದಿರುವಾತ ಮನಸ್ಸನ್ನು ಬಿಚ್ಚಿಡುವಲ್ಲಿ ಕೃಪಣತನ ತೋರುವುದಿಲ್ಲ.ಅವರಂಥ ಸೃಜನಶೀಲ ಬರಹಗಾರರು ಉಕ್ಕಿ ಬರುವ ಒಳನೋಟಗಳನ್ನು ಮುಕ್ತವಾಗಿ ಹಂಚಿಕೊಂಡಾಗ ಮಾತನಾಡುವವರೂ ಕೇಳುವವರೂ ಒಟ್ಟಿಗೇ ಬೆರಗಾಗುವ ಅನುಭವವನ್ನು ನಾನು ಹಲವು ಬಾರಿ ಹಾದು ಹೋಗಿದ್ದೇನೆ. ’ಮಾತನಾಡುತ್ತ ಅಲ್ಲೇ ಇದು ಹೊಳೀತು’ ಎಂದವರು ಅಸಂಖ್ಯ ಬಾರಿ ಹೇಳಿದ್ದಿದೆ.

ಅವರು ‘ದಾವ್ ದ ಜಿಂಗ್’ ಅನುವಾದ ಮಾಡುವಾಗ ಆ ಪ್ರಕ್ರಿಯೆಯನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಮೈಸೂರಿನಲ್ಲಿ ಸುಮಾರು ಒಂದು ತಿಂಗಳವರೆಗೆ, ದಿನದ ಹತ್ತು ಹನ್ನೆರಡು ಗಂಟೆಗಳ ಕಾಲ, ಅದರಲ್ಲಿ ತತ್ಪರರಾಗಿ ತೊಡಗಿಸಿಕೊಂಡಿದ್ದರು. ಹಗಲೂ ರಾತ್ರಿ ಅದನ್ನೇ ಧೇನಿಸಿ, ಒಂದೊಂದು ಕವಿತೆಗೂ ಕಡಿಮೆಯೆಂದರೆ ನಾಲ್ಕು ಆವೃತ್ತಿಗಳನ್ನು ಸಿದ್ಧಪಡಿಸಿದ್ದರು. ಅದು ಕೇವಲ ಅನುವಾದ ಮಾತ್ರ ಆಗಿರಲಿಲ್ಲ. ಅವರೊಳಗಿನ ಹುಡುಕಾಟಕ್ಕೆ ಅದೊಂದು ನೆಪವಾಯಿತೆಂದೆನಿಸುತ್ತದೆ. ಅನುವಾದದ ಈ ಪುಟ್ಟ ಪುಸ್ತಕಕ್ಕೆ ಅವರು ಬರೆದ ಮುನ್ನುಡಿಯನ್ನು ನೋಡಿದರೆ ಇದು ಹೆಚ್ಚು ಸ್ಪಷ್ಟವಾಗುತ್ತದೆ.

ಬರೆಯಲು ಅಗತ್ಯವಾದ ಏಕಾಂತವನ್ನು ಅವರು ಇದ್ದಲ್ಲೇ ಸೃಷ್ಟಿಸಿಕೊಳ್ಳುತ್ತಿದ್ದರು. ಅದಕ್ಕೆ ಇಂಥದ್ದೇ ಜಾಗ ಅಥವಾ ಸಮಯ ಎಂಬುದಿರಲಿಲ್ಲ. ಒಮ್ಮೆ ಬರೆಯಲು ತೊಡಗಿದರೆಂದರೆ ಅದು ಸತತವಾಗಿ, ಸುತ್ತಲಿನ ಪ್ರಪಂಚದ ಆಗುಹೋಗುಗಳಿಂದ ಅಬಾಧಿತವಾಗಿ, ನಡೆಯುತ್ತಿತ್ತು. ಹಾಗಾಗಿ ಅವರ ಎಡೆಬಿಡದ ಪ್ರವಾಸ ಮತ್ತು ಬಿಡುವಿಲ್ಲದ ಸಾರ್ವಜನಿಕ ಜೀವನದ ನಡುವೆಯೂ ಗಾಢ ಬರವಣಿಗೆಯಲ್ಲಿ ಮೈಮರೆತು ತೊಡಗುವುದು ಸಾಧ್ಯವಾಯಿತು.

***
ಸದ್ಯದ ರಾಜಕೀಯ ಸ್ಥಿತಿಯ ಬಗ್ಗೆ ಚಿಂತಿಸುತ್ತ ಅವರು ವ್ಯಕ್ತಪಡಿಸಿದ ಮುನ್ನೋಟಗಳನ್ನು ಗಮನಿಸಿದಾಗ, ಅವು ಅಸಂಭಾವ್ಯವೆಂದು ನಂಬಲು ನಾನು ಬಯಸುತ್ತೇನಾದರೂ ಕೆಲವೊಮ್ಮೆ ನನಗೆ ಅಧೈರ್ಯವುಂಟಾಗುತ್ತದೆ. ಇದಕ್ಕೆ ಪೂರಕವಾದ ಘಟನೆಯೊಂದಿದೆ. ೧೯೯೬ರ ಕರ್ನಾಟಕದ ಚುನಾವಣೆಯಲ್ಲಿ ದೇವೇಗೌಡರೂ ರಾಮಕೃಷ್ಣ ಹೆಗಡೆಯವರೂ ಜನತಾದಳದಲ್ಲಿ ಒಟ್ಟಿಗೇ ಇದ್ದರು. ಆ ಚುನಾವಣೆಯ ಮತ ಎಣಿಕೆಯ ದಿನ ಅನಂತಮೂರ್ತಿಯವರು ಬೆಂಗಳೂರಿನ ನಮ್ಮ ಮನೆಯಲ್ಲಿ ತಂಗಿದ್ದರು.

ಆವತ್ತು ಬೆಳಿಗ್ಗೆ ಏಳು ಗಂಟೆಗೆ ದೇವೇಗೌಡರು ನಮ್ಮ ಮನೆಗೆ ಬಂದರು. ಆಗ ಜನತಾದಳದಲ್ಲಿದ್ದು, ಈಗ ಕಾಂಗ್ರೆಸ್‌ನಲ್ಲಿ ಮುಖ್ಯ ಸ್ಥಾನದಲ್ಲಿರುವ ಸ್ನೇಹಿತರೊಬ್ಬರು ಅವರ ಜೊತೆಗೆ ಬಂದಿದ್ದರು. ದೇವೇಗೌಡರ ಆತ್ಮವಿಶ್ವಾಸ ಮತ್ತು ರಾಜಕೀಯದ ಅನುಭವ ಹೇಗಿತ್ತೆಂದರೆ ಅವರ ಪಕ್ಷಕ್ಕೆ ಎಷ್ಟು ಸೀಟುಗಳು ಬರುತ್ತವೆಂದು ಖಚಿತವಾಗಿ ಹೇಳಿದರು. ಫಲಿತಾಂಶ ಬಂದಾಗ ಕೇವಲ ಮೂರು ಸೀಟುಗಳ ವ್ಯತ್ಯಾಸವಾಗಿತ್ತು ಅಷ್ಟೇ.

ದೇವೇಗೌಡರು ಆ ದಿನ ಬೆಳಿಗ್ಗೆ ಬಂದಿದ್ದಕ್ಕೆ ಮತ್ತು ಮತ ಎಣಿಕೆಯ ಆ ಮಹತ್ವದ ದಿನ ಎಲ್ಲವನ್ನೂ ಬದಿಗಿಟ್ಟು ನಮ್ಮ ಮನೆಯಲ್ಲಿ ಮೂರೂವರೆ ಗಂಟೆಗಳನ್ನು ಕಳೆಯುವುದಕ್ಕೆ ಬಲವಾದ ಕಾರಣವಿತ್ತು. ತಾವು ಮುಖ್ಯಮಂತ್ರಿಯಾಗುವುದಕ್ಕೆ ಹೆಗಡೆಯವರು ಅಡ್ಡಿಪಡಿಸಬಾರದು ಮತ್ತು ಅದನ್ನು ಅನಂತಮೂರ್ತಿಯವರು ಹೆಗಡೆಯವರಿಗೆ ಮನವರಿಕೆ ಮಾಡಿಕೊಡಬೇಕೆಂಬುದೇ ದೇವೇಗೌಡರ ಕೋರಿಕೆಯಾಗಿತ್ತು.

ಬಹುಶಃ ಅನಂತಮೂರ್ತಿಯವರಿಂದ ಆಶ್ವಾಸನೆ ಪಡೆಯುವವರೆಗೂ ಅವರು ಹೊರಡಲಿಲ್ಲವೆಂದು ನನ್ನ ಊಹೆ. ದೇವೇಗೌಡರು ಹೊರಟ ನಂತರ ಅನಂತಮೂರ್ತಿಯವರು ಹೆಗಡೆಯವರಿಗೊಂದು ಪತ್ರ ಬರೆದರು. ಅದರಲ್ಲಿ ದೇಶದ ಒಟ್ಟೂ ರಾಜಕೀಯ ಸ್ಥಿತಿ ಹಾಗೂ ಮುಂಬರುವ ಲೋಕಸಭೆ ಚುನಾವಣೆಯ ಪ್ರಸ್ತಾಪವಿತ್ತು. ಯಾವ ಪಕ್ಷಗಳೂ ಬಹುಮತ ಪಡೆಯಲಾಗದ ಸಂದರ್ಭ ಒದಗಿಬಂದು ಪ್ರಾದೇಶಿಕ ಪಕ್ಷಗಳು ಮಹತ್ವ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಬಹುದೆನ್ನುವ ಮಾತುಗಳನ್ನಾಡಿದ್ದರು.

ಮತ್ತು ಅಂಥ ಸಂದರ್ಭವನ್ನು ನಿರ್ವಹಿಸಲು ಹೆಗಡೆಯವರು ದೇಶದ ರಾಜಕೀಯಕ್ಕೆ ಹೋಗಬೇಕೆಂದೂ, ಕರ್ನಾಟಕದ ಮಟ್ಟಿಗೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ದೇವೇಗೌಡರು ಹೊರಬೇಕೆಂದೂ ಹೇಳಿದ್ದರು. ಇದು ಆ ಕಾಲಕ್ಕೆ ಅಸಂಭಾವ್ಯವಾಗಿಯೇ ಕಂಡಿತ್ತು. ಹೆಗಡೆಯವರು ಯಾವುದನ್ನು ಪರಿಗಣಿಸಿದರೋ, ಯಾವ ಹೊಂದಾಣಿಕೆ ನಡೆಯಿತೋ ನನಗೆ ಗೊತ್ತಿಲ್ಲ– ಅಂತೂ ದೇವೇಗೌಡರು ಮುಖ್ಯಮಂತ್ರಿಗಳಾದರು. ಮುಂದಿನ ಇತಿಹಾಸವನ್ನು ಎಲ್ಲರೂ ಬಲ್ಲರು. ಈಗ ನೆನೆಸಿಕೊಂಡರೆ ಆ ಪತ್ರದ ಒಕ್ಕಣೆ ಭವಿಷ್ಯದ ಭಾಷ್ಯದಂತೆ ಇತ್ತೆಂದು ನನಗೆ ತೋರುತ್ತದೆ. ಆದ್ದರಿಂದಲೇ ಪ್ರಸ್ತುತ ಸರಕಾರ ಹಾಗೂ ಮೋದಿಯವರ ಬಗೆಗಿನ ಅವರ ಭಾವನೆಗಳ ತೀವ್ರತೆಯು ನನ್ನಲ್ಲಿ ಅಧೈರ್ಯವನ್ನೂ ಆತಂಕವನ್ನೂ ಹುಟ್ಟಿಸುತ್ತದೆ.

***
ಅವರೊಡನೆ ನನ್ನ ಕೊನೆಯ ಸಂಭಾಷಣೆ ನಡೆದಿದ್ದು ಆಸ್ಪತ್ರೆಯಲ್ಲಿ. ಆ ದಿನಗಳಲ್ಲಿ ಅವರ ಪುಸ್ತಕ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಮುದ್ರಣಕ್ಕೆ ತಯಾರಾಗಿತ್ತು. ಅತ್ಯಂತ ಆಳವಾಗಿ ಧ್ಯಾನಿಸಿ, ಚಿಂತಿಸಿ ಬರೆದ ಪುಸ್ತಕವಿದು. ಇದನ್ನು ಹಲವು ಬಾರಿ ತಿದ್ದಿ ಈ ರೂಪಕ್ಕೆ ತಂದಿದ್ದಾರೆ. ಇದಕ್ಕಿರುವ ಕಥನದ ಗುಣ ಮತ್ತು ಭಾಷೆಯ ಶಕ್ತಿಯಿಂದಾಗಿ, ಒಂದು ಕಾದಂಬರಿಯಲ್ಲೋ ಕಥೆಯಲ್ಲೋ ಘಟಿಸುವ ಹಾಗೆ ಹಲವು ಚಿಂತನೆಗಳು ಓದುಗನ ಪ್ರಜ್ಞೆಯ ಆಳದಲ್ಲಿ ಒಂದಕ್ಕೊಂದು ಹೆಣೆದುಕೊಳ್ಳುತ್ತವೆ.

ಆ ದಿನ ಆಸ್ಪತ್ರೆಯಲ್ಲಿ ಅವರು ರಿಚರ್ಡ್ ರೋರ್ಟಿಯ ಚಿಂತನೆಗಳ ಬಗ್ಗೆ ಮಾತನಾಡುತ್ತ ‘ಇತಿಹಾಸವಿರಲಿ, ಸಮಾಜವಿಜ್ಞಾನವಿರಲಿ ಮನುಷ್ಯ ಬದಲಾಗುತ್ತಾನೆ ಎಂಬುದರಲ್ಲಿ ನಂಬಿಕೆ ಇಲ್ಲದೇ ಇಂಥ ಶಾಸ್ತ್ರಗಳಲ್ಲಿ ಮಾಡುವ ಕೆಲಸಗಳು ನಿರರ್ಥಕ’ ಎಂಬರ್ಥ ಬರುವ ಮಾತಾಡಿದರು. ಹಾಗೆಯೇ ಮಾತು ಮುಂದುವರಿದು ಕೆಲವು ದಿನಗಳ ಹಿಂದೊಮ್ಮೆ ಅವರು ಶಿವರಾಮ ಕಾರಂತರ ಬಗ್ಗೆ ಮಾತನಾಡಿದ್ದಕ್ಕೆ ನಾನು ಪ್ರತಿಕ್ರಿಯಿಸಿದ್ದನ್ನು ನೆನೆಸಿಕೊಂಡು ‘ಅವರ ಮುಖ್ಯ ಕೃತಿಗಳಲ್ಲದೇ ಇತರ ಎಲ್ಲ ಬರಹಗಳನ್ನು ಸಹ ಅಮೂಲಾಗ್ರವಾಗಿ ಮತ್ತೊಮ್ಮೆ ನೋಡುವ ಕಾಲ ಬಂದಿದೆ’ ಎಂದರು. ಎರಡೂ ಅವರ ಸ್ವಭಾವವನ್ನು ಬಿಚ್ಚಿಡುವ ಟಿಪಿಕಲ್ ಪ್ರತಿಕ್ರಿಯೆಗಳು.

***
ಅವರ ಸಂಪರ್ಕಕ್ಕೆ ಬಂದವರೆಲ್ಲರ ಹಾಗೆ ನಾನೂ ಸಹ ಅವರ ಪ್ರಭಾವಕ್ಕೊಳಗಾಗುವ ಪರವಶತೆಯ ಸುಖವನ್ನು ಅನುಭವಿಸಿದ್ದೇನೆ. ಒಬ್ಬ ಲೇಖಕನಾಗಿ ಅದರಿಂದ ಬಿಡಿಸಿಕೊಳ್ಳುವ ಅನಿವಾರ್ಯತೆಯು ನನಗೆ ಸತತವಾಗಿ ಇತ್ತು. ಈ ಸುಖ ಸಂಕಟಗಳನ್ನು ನೆನೆಯುತ್ತ ಈ ಎಲ್ಲ ಮಾತುಗಳನ್ನು ಬರೆದಿದ್ದೇನೆ.

ಅವರೊಡನೆಯ ಕಾಲು ಶತಮಾನದ ನಿಕಟ ಒಡನಾಟದಲ್ಲಿ, ಸಾವಿರಾರು ಭೇಟಿಗಳಲ್ಲಿ, ಒಮ್ಮೆಯೂ ನಾನು ಬರಿಗೈಯಿಂದ ಹಿಂದಕ್ಕೆ ಬರಲಿಲ್ಲ. ಪ್ರತಿ ಸಲವೂ ಹಂಚಿಕೊಳ್ಳುವುದಕ್ಕೆ ಅವರಲ್ಲಿ ಹೊಸ ಸಂಗತಿಯಿರುತ್ತಿತ್ತು. ಏನಾದರೊಂದು ಹೊಸ ವಿಚಾರವಿರುತ್ತಿತ್ತು. ಮಾತನಾಡಲು ಓದಿದ ಹೊಸ ಪುಸ್ತಕವಿರುತ್ತಿತ್ತು. ಕೊನೆಯ ಭೇಟಿಯಲ್ಲೂ ಇದು ನಿಜ. ಇಷ್ಟು ವರ್ಷಗಳ ನಿಕಟ ಸಂಪರ್ಕದ ನಂತರವೂ ವ್ಯಕ್ತಿಯೊಬ್ಬರು ಹೀಗೆ ಸದಾ ಹೊಸತಾಗಿರುವುದು ಅತಿ ಅಪರೂಪದ ಸಂಗತಿಯೇ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.