ಅನೇಕ ಪ್ರಯತ್ನಗಳ ಬಳಿಕ ಅವಳು ಅನ್ಯಾಯಾಲಯದೊಳಕ್ಕೆ ಪ್ರವೇಶವನ್ನು ಪಡೆದುಕೊಂಡಿದ್ದಳು. ಅದೆಷ್ಟೋ ಸಮಯದಿಂದ ಇಂಥದ್ದೊಂದು ಸಂದರ್ಭಕ್ಕಾಗಿ ಕಾದು ಕಾದು ದಣಿದಿದ್ದಳು. ನೂರಾರು ಸಾರಿ ಅಲ್ಲಿ ನಿಂತು ಪರಿ ಪರಿಯಾಗಿ ಬೇಡಿಕೊಂಡಿದ್ದಳು. ಪ್ರತಿಬಾರಿ ಬಂದಾಗಲೂ ಪ್ರವೇಶ ದ್ವಾರದಲ್ಲಿದ್ದ ಕಾವಲುಗಾರ ತಡೆಯುತ್ತಿದ್ದ. ಕಾವಲುಗಾರನನ್ನು ಕಂಡರೆ ಭಯವಾಗುತ್ತಿತ್ತು. ದಪ್ಪನೆಯ ಮೀಸೆ, ಕೆಂಪಡರಿದ ಕಣ್ಣುಗಳು, ಭಯಾನಕ ನೋಟ. ದೃಷ್ಟಿ ಮಾತ್ರದಿಂದಲೇ ಪ್ರತಿಯೊಬ್ಬರ ಸಂಪೂರ್ಣ ತಪಾಸಣೆ ನಡೆಸುತ್ತಿದ್ದ. ಅವನು ನಿಷ್ಠೆಯಿಂದ ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿದ್ದ. ಅವನ ಧ್ವನಿ ಕಠಿಣವಾಗಿರುತ್ತಿತ್ತು.
`ನ್ಯಾಯವಾದಿಗಳಿಲ್ಲದೆ ಒಳಗೆ ಹೋಗುವಂತಿಲ್ಲ.....'
`ಏನು ನಿನ್ನ ಫಿರ್ಯಾದು.....?'
`ದಾವೆಯ ದಾಖಲೆಗಳನ್ನು ತೋರಿಸು.....'
`ಮೊಕದ್ದಮೆಯ ಸಂಖ್ಯೆ ಏನು.....?'
`ಕಕ್ಷಿದಾರಳು ನೀನೇ ಎಂಬುದಕ್ಕೆ ಆಧಾರವೇನು....?'
`ಫಿರ್ಯಾದು ಇಲ್ಲದೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವುದಿಲ್ಲ....'
`ಗಂಡಾಗಲೀ, ಹೆಣ್ಣಾಗಲೀ ನ್ಯಾಯಾಲಯದ ಮುಂದೆ ಎಲ್ಲರೂ ಒಂದೆ....'
`ದುಃಖ, ಕರುಣೆ, ಸಂಬಂಧಗಳಿಗೆ ಇಲ್ಲಿ ಬೆಲೆಯಿಲ್ಲ. ನ್ಯಾಯದ ಪ್ರತಿಷ್ಠಾಪನೆಯೊಂದೇ ನ್ಯಾಯಾಲಯದ ಪರಮಗುರಿ....'
ಹೊರಗಿದ್ದರೂ ಒಳಗಿನ ವಿಚಾರಗಳನ್ನೆಲ್ಲ ಅರೆದು ಕುಡಿದಿದ್ದ ಚತುರ. ಅವನ ಯಾವ ಮಾತುಗಳೂ ಅವಳ ಚಿತ್ತಕ್ಕೆ ಇಳಿಯುತ್ತಿರಲಿಲ್ಲ. ನ್ಯಾಯದೇವತೆಯನ್ನು ನೋಡುವ ತವಕವೊಂದೇ ಅವಳ ಎದೆಯಲ್ಲಿ ತುಂಬಿದ್ದದ್ದು.
`ನನ್ನ ಬಳಿ ಯಾವ ದಾಖಲೆಗಳೂ ಇಲ್ಲ. ನನ್ನಂಥ ಅಸಹಾಯಕಳು ದಾಖಲೆಗಳನ್ನು ಸೃಷ್ಠಿಸಿ ತರಲು ಸಾಧ್ಯವೇನು? ನಾನೇ ನ್ಯಾಯದೇವತೆಯ ಎದುರು ನಿವೇದಿಸಿಕೊಳ್ಳುತ್ತೇನೆ.....' ಪ್ರತಿಬಾರಿಯಂತೆ ಈಗಲೂ ಅವಳು ಕಾಡಿಬೇಡಿದ್ದಳು.
ಕಾವಲುಗಾರ ಸೋತು ಹೋದಂತೆ ಕಂಡಿದ್ದ.
ಅವನೂ ಮನುಷ್ಯ ಮಾತ್ರನೆ. ಮನುಷ್ಯನಿಗೆ ಮಾನವೀಯತೆಯಿರಬೇಕು, ಗುಣ. ತನ್ನ ಸೇವಾವಧಿಯಲ್ಲಿ ಎಂತೆಂಥಹವರನ್ನೊ ನ್ಯಾಯಾಲಯ ಪ್ರವೇಶಿಸಲು ಬಿಟ್ಟಿರುವುದು ಸ್ವತಃ ಅವನ ಮನಸ್ಸಾಕ್ಷಿಗೆ ಗೊತ್ತಿದೆ.
ಅವಳ ಧಾವಂತದ ಬಗ್ಗೆ ಅವನ ಕರುಳಿನ ಮೂಲೆಯಲ್ಲೆಲ್ಲೊ ಕರುಣೆ ಹುಟ್ಟಿಕೊಂಡಿತ್ತು. ಕರುಣೆಗೂ ಕರುಳಿಗೂ ಅವಿನಾಭಾವ ಸಂಬಂಧ.
ಅವಳ ಕಡೆ ನೋಡದೆ ಅವನು ಬೇರೆಲ್ಲೋ ದೃಷ್ಠಿಯನ್ನು ನೆಟ್ಟಿದ್ದ. ತನ್ನನ್ನು ಒಳಬಿಡಲು ಅದು ಅವನ ಒಪ್ಪಿಗೆಯ ತಂತ್ರವೆಂದು ಅವಳಿಗೆ ತಿಳಿದುಹೋಗಿತ್ತು. ತಕ್ಷಣ ಲಗುಬಗೆಯಿಂದ ನ್ಯಾಯಾಲಯವೆಂಬ ಪವಿತ್ರ ಮಂದಿರವನ್ನು ಪ್ರವೇಶಿಸಿಬಿಟ್ಟಿದ್ದಳು. ಭಾಗ್ಯದ ಬಾಗಿಲು ತೆರೆಯುವುದು ಅಪರೂಪ.
ಎತ್ತರದಲ್ಲಿತ್ತು ನ್ಯಾಯದೇವತೆಯ ಪೀಠ.
ನ್ಯಾಯದ ತಕ್ಕಡಿಯ ಬಟ್ಟಲುಗಳು ಸದಾ ಸಮನಾಗಿರಬೇಕು.
ನ್ಯಾಯದ ಬಟ್ಟಲು ಸದಾ ಭಾರ; ಭೂಮಿಯ ಕಡೆ ಎಳೆಯುತ್ತಿರುತ್ತದೆ.
ಅನ್ಯಾಯದ ಬಟ್ಟಲು ಹಗುರ. ಹಾಗಾಗಿಯೇ ಆಕಾಶವನ್ನು ನೋಡುತ್ತಿರುತ್ತದೆ.
ಅನ್ಯಾಯ ಎತ್ತರದ ಕಡೆಗೆ, ನ್ಯಾಯ ತಗ್ಗಿನ ಕಡೆಗೆ.
ನ್ಯಾಯದೇವತೆ ಎತ್ತರದ ಸ್ಥಾನದಲ್ಲಿ! ಎತ್ತರಕ್ಕೆ ಏರಬೇಕಾದರೆ ಹಗುರವಾಗಿರಬೇಕು.
ಅನ್ಯಾಯ ಉಸಿರಾಡುತ್ತಿರುವುದರಿಂದಲೇ ನ್ಯಾಯಕ್ಕೆ ಬೆಲೆ.
ಗೋಡೆಯ ಮೇಲೆ ಅಲ್ಲಲ್ಲಿ ಮಹಾನ್ ವ್ಯಕ್ತಿಗಳ ಭಾವಚಿತ್ರಗಳು.
ಪೀಠದ ಎದುರು ಕೆಳಗೆ ಹಾಕಿದ ಆಸನಗಳಲ್ಲಿ ನ್ಯಾಯವಾದಿಗಳು ಕಪ್ಪು ಕೋಟುಗಳಲ್ಲಿ ಕಂಗೊಳಿಸುತ್ತಿದ್ದರು.
ಕಕ್ಷಿದಾರರು ತಮ್ಮ ತಮ್ಮ ನ್ಯಾಯವಾದಿಗಳೊಂದಿಗೆ ಪಿಸು ಮಾತುಗಳಲ್ಲಿ ತೊಡಗಿದ್ದರು. ಗೆಲ್ಲುವುದೊಂದೇ ಎಲ್ಲರ ಪರಮ ಗುರಿ. ಗೆಲುವು ಫಲ ನೀಡುತ್ತದೆ.
ಅವಳ ಇರುವಿಕೆಯನ್ನು ಯಾರೂ ಗಮನಿಸಲಿಲ್ಲ.
ಅವರವರ ಬಾಧೆ ಅವರದು. ಬದುಕೇ ಒಂದು ಘನಘೋರ ಠಿಛ್ಞಿಜಿಟ್ಞ
ನ್ಯಾಯಾಲಯದಲ್ಲಿ ಸಣ್ಣ ಕಲರವ ಹುಟ್ಟಿಕೊಂಡಿತ್ತು.
ಅದು ನ್ಯಾಯದೇವತೆಯ ಆಗಮನದ ಸೂಚನೆ.
ಬಹುಪರಾಕ್ ಹೇಳಿಕೊಂಡು ಮೊದಲು ಅಮೀನ ಪ್ರವೇಶಿಸಿದ್ದ.
ಅವನ ತಲೆಯ ಮೇಲೆ ಪೇಟ. ಭಾರ ಹೊರಲು ಬೇಕು ಸಿಂಬಿ.
ಉದ್ದನೆಯ ಕೆಂಪು ಕೋಟು ಅವನ ಮೈಮುಚ್ಚಿತ್ತು.
ನಡುವನ್ನು ಬಿಗಿದಿದ್ದ ಅಗಲವಾದ ಬಿಳಿಯ ಪಟ್ಟೆ.
ವಯಸ್ಸಾದ ರಾಜನಂತೆ ಕಾಣುತ್ತಿದ್ದ.
ಕೈಯಲ್ಲಿ ಉದ್ದನೆಯ ದಂಡ.
ಇಂಗ್ಲಿಷ್ ಭಾಷೆಯಲ್ಲಿ ಪ್ರೊಟೋಕಾಲ್ ಅಂತಾರೆ.
ಅವನ ಹಿಂದೆ ನ್ಯಾಯದೇವತೆ ಕಾಣಿಸಿಕೊಂಡಿದ್ದಳು.
ಅವಳ ಸುತ್ತ ವರ್ಣಿಸಲಸಾಧ್ಯವಾದ ಪ್ರಭಾವಳಿ.
ಮುಖದಲ್ಲಿ ನೆಲೆಯೂರಿದ ಪ್ರಶಾಂತತೆ.
ಕಣ್ಣುಗಳಲ್ಲಿ ಕಂಡರಿಯದ ಕಾಂತಿ.
ದೇಹದುದ್ದಕ್ಕೂ ಕಪ್ಪನೆಯ ನಿಲುವಂಗಿ.
ನ್ಯಾಯಾಲಯದ ತುಂಬಾ ಕಪ್ಪು ಬಣ್ಣ.
ಕಪ್ಪು ಪ್ರತಿಭಟನೆಯ ಸಂಕೇತ; ಕಪ್ಪು ಶೋಕದ ಸೂಚಕ.
ಪ್ರತಿಭಟನೆ ಮತ್ತು ಶೋಕ ಎರಡೂ ಅನ್ಯಾಯದ ಫಲಗಳು.
ನ್ಯಾಯದೇವತೆ ಪ್ರವೇಶಿಸುತ್ತಿದ್ದಂತೆ ಪ್ರತಿಯೊಬ್ಬರೂ ಎದ್ದುನಿಂತರು.
ಅವಳು ನಿಲ್ಲಲಿಲ್ಲ!
ಏಕೆಂದರೆ ಕುಳಿತಿರಲೇ ಇಲ್ಲ!!
ನ್ಯಾಯದೇವತೆ ತನ್ನ ಪೀಠದಲ್ಲಿ ಕಂಗೊಳಿಸತೊಡಗಿದ್ದಳು.
ನ್ಯಾಯವಾದಿಗಳು ತಮ್ಮ ತಮ್ಮ ಆಸನಗಳನ್ನು ಅಲಂಕರಿಸಿದ್ದರು.
ಕಡತಗಳು ಒಂದೊಂದಾಗಿ ಬಿಚ್ಚಿಕೊಳ್ಳತೊಡಗಿದ್ದವು.
ಪ್ರಕರಣಗಳು ಅನಾವರಣಗೊಳ್ಳತೊಡಗಿದವು.
ನ್ಯಾಯವಾದಿಗಳು ವಾದಿಸುತ್ತಿದ್ದರು ಮತ್ತು ಪ್ರತಿವಾದಿಸುತ್ತಿದ್ದರು.
ಬಾಯಿದ್ದವನೇ ಬದುಕುವುದು ಜಗತ್ತಿನಲ್ಲಿ.
ನ್ಯಾಯವಾದಿಗಳು ಸತ್ಯ ಸಂಶೋಧಕರು.
ನ್ಯಾಯವಾದಿಗಳು ಧರ್ಮ ಸಂಸ್ಥಾಪಕರು.
ಪ್ರತಿಯೊಬ್ಬ ನ್ಯಾಯವಾದಿಯೂ ತನ್ನದೇ ಸತ್ಯವೆಂದು, ನ್ಯಾಯವೆಂದು ವಾದಿಸುತ್ತಿರುತ್ತಾನೆ!
ಮಿಥ್ಯ ಯಾರ ಸ್ವತ್ತು?
ನ್ಯಾಯವಾದಿಗಳ ಈ ಸತ್ಯ, ಧರ್ಮ ಸಂರಕ್ಷಣೆಯ ಕಾರ್ಯ ನಿರಂತರವಾದದ್ದು.
ಅದಕ್ಕಾಗಿ ಕಕ್ಷಿದಾರರಿಂದ ಶುಲ್ಕ ಪಡೆಯುತ್ತಾರೆ.
ಗೆದ್ದರೂ ಶುಲ್ಕ, ಸೋತರೂ ಶುಲ್ಕ.
`ನ್ಯಾಯಾಲಯದಲ್ಲಿ ಗೆದ್ದವನು ಸೋತ, ಸೋತವನು ಸತ್ತ' ಗಾದೆ ಮಾತಿಗೆ ಬೆಲೆ ಕಟ್ಟಬಾರದು. ಸತ್ತವರಿಗೆ ಸ್ವರ್ಗ, ಬದುಕಿರುವವನಿಗೆ ನರಕ.
ನ್ಯಾಯವಾದಿಗಳು ಸೌಮ್ಯ ಮೂರ್ತಿಗಳು. ಒಮ್ಮಮ್ಮೆ ಉಗ್ರ ಸ್ವರೂಪಿಗಳೂ ಹೌದು. ಕಾನೂನು ಅವರ ಖಡ್ಗ. ಖಡ್ಗದ ತುದಿ ಎಚ್ಚರಿಕೆಯ ಬಿಂದು.
ನ್ಯಾಯದೇವತೆ ಕೂಡ ಅವರಿಗೆ ಹೆದರುತ್ತಾಳೆ. ನ್ಯಾಯ ಬೇಂಕಿಯ ಚೆಂಡು.
ತೀರ್ಪು ನೀಡುವುದೆಂದರೆ.....
ಕಡಲನ್ನು ಕಡೆದು ಅಮೃತ ಮತ್ತು ವಿಷವನ್ನು ಬೇರ್ಪಡಿಸುವುದು.
ಅಮೃತ ನ್ಯಾಯ! ರಾಕ್ಷಸರಿಗಿಂತ ದೇವರುಗಳು ಒಳ್ಳೆಯವರು, ವರ ನೀಡುತ್ತಾರೆ.
ವಿಷ ಅನ್ಯಾಯ!! ಕೆಲವು ರಾಕ್ಷಸರು ದೇವರುಗಳಿಗಿಂತಲೂ ಒಳ್ಳೆಯವರು.
ಎಷ್ಟು ಹೊತ್ತಾದರೂ ಅಮೀನ ಅವಳ ಹೆಸರನ್ನು ಕೂಗಲಿಲ್ಲ.
ಆಂ! ಅವಳ ಹೆಸರು ಊರ್ಮಿಳಾ. ತನ್ನ ಮೇಲೆ ನ್ಯಾಯವಾದಿಗಳ, ನ್ಯಾಯದೇವತೆಯ ಕಣ್ಣು ಬೀಳಬಹುದು, ಈಗ ಬೀಳಬಹುದೆಂದು ಕಾದವಳು ಬಳಲಿ ಬೆಂಡಾಗಿದ್ದಳು. ಕಾಯುವುದು ದೊಡ್ಡ ನರಕ.
ಮಧ್ಯಾಹ್ನವಾಗಿತ್ತು. ಕೋಪ ಬಂದರೆ ಸೂರ್ಯ ಸತ್ಯವನ್ನೂ ಸುಟ್ಟುಹಾಕಬಲ್ಲ.
ನ್ಯಾಯಾಲಯದ ಊಟದ ಗಂಟೆ ಭಾರಿಸಿತ್ತು.
ವಾದಿಸಲು, ತೀರ್ಪು ನೀಡಲು ಶಕ್ತಿ ಬೇಕು.
ಶಕ್ತಿ ಪಡೆಯಲು ಊಟ ಮಾಡಬೇಕು.
ಅನ್ನ ದೇವರಿಗಿಂತಲೂ ಮಿಗಿಲಾದ ಅನ್ಯದೇವರಿಲ್ಲ ಮನುಜ!
ಎಲ್ಲರೂ ಹಸಿವು ನೀಗಿಸಿಕೊಳ್ಳಲು ತೆರಳಿದ್ದರು.
ನ್ಯಾಯಾಲಯದಲ್ಲಿ ಈಗ ಅವಳೊಬ್ಬಳೇ ಉಳಿದಿದ್ದಳು ಊರ್ಮಿಳಾ.
ನ್ಯಾಯದೇವತೆಯ ಪೀಠದಲ್ಲಿ ಒಮ್ಮೆ ಕುಳಿತುಕೊಳ್ಳಬಾರದೇಕೆ?
ಕ್ಷಣ ಅನ್ನಿಸಿತು ಅವಳಿಗೆ. ಆಸೆಯೇ ದುಖಕ್ಕೆ ಕಾರಣ `ಬುದ್ಧ'.
ಅಂಥ ಆಲೋಚನೆಯಿಂದ ಒಮ್ಮೆಲೇ ಬೆವರಿದಳು.
ಹಸಿವು ಅವಳನ್ನು ಕಂಗೆಡಿಸಿತ್ತು. ಹಸಿವಿನಿಂದ ಸತ್ತವರ ಲೆಕ್ಕ ಇಡಬಾರದು.
ಬಾಯಾರಿಕೆಯಿಂದ ಬಳಲತೊಡಗಿದಳು. ಜಲ ಜೀವ ಮೂಲ.
ನ್ಯಾಯಾಲಯದಲ್ಲಿ ನ್ಯಾಯ ಬಿಟ್ಟರೆ ಬೇರೇನೂ ಸಿಗುವುದಿಲ್ಲ.
ನ್ಯಾಯಾಲಯದಲ್ಲಿ ನೀರು ಸಿಗುವುದಿಲ್ಲ.
ಊಟವಂತೂ ಮೊದಲೇ ಇಲ್ಲ.
ಗಾಳಿ ಮಾತ್ರ ಉಚಿತ. ಗಾಳಿ ಸರ್ವಾಂತರ್ಯಾಮಿ.
ಸಕಲ ಜೀವರಾಶಿಗಳಿಗೂ ಬದುಕಲು ಮೊದಲು ಗಾಳಿ ಬೇಕು.
ಅದರೊಂದಿಗೆ ನೀರು, ಊಟ, ಮೈಥುಗಳೂ ಇರಬೇಕು.
ನ್ಯಾಯ ಕೂಡ ಬೇಕು! ನ್ಯಾಯವನ್ನು ಪಂಚಭೂತಗಳಲ್ಲಿ ಸೇರಿಸಬೇಕು.
ನ್ಯಾಯಾಲಯ ಸ್ವಚ್ಛವಾಗಿರಬೇಕು ಸದಾ ಕಾಲ.
ನ್ಯಾಯವೆಂಬುದು ಅಮೂಲ್ಯವಾದದ್ದು, ಅನ್ಯಾಯವೆಂಬುದು ಮೂಲ್ಯವಾದದ್ದು.
ನ್ಯಾಯವೆಂಬುದು ಸುಂದರವಾದದ್ದು, ಅನ್ಯಾಯ ಸದಾ ಕುರೂಪಿ.
ನ್ಯಾಯವೆಂಬುದು ಪವಿತ್ರವಾದದ್ದು, ಅನ್ಯಾಯ ಅಪವಿತ್ರ.
ನ್ಯಾಯವೆಂಬುದು ಮನುಷ್ಯನಂತೆ....
ಆತ್ಮ ಇರಬೇಕು.....
ದೇಹ ಇರಬೇಕು.....
ಮನಸ್ಸು ಇರಬೇಕು.....
ಮತ್ತು ಹೃದಯ ಕೂಡ ಇರಬೇಕು.
ಆದರೆ ಕೆಲವು ಮನುಷ್ಯರಿಗೆ....
ಕೆಲವು ಮನುಷ್ಯರೇನು, ಬಹುತೇಕ ಮನುಷ್ಯರಿಗೆ ದೇಹವೊಂದೇ ಇರುತ್ತದೆ.
ಇದು ಸತ್ಯದ ಸಾಲು.... ಅಸತ್ಯವೆಂಬುದೂ ಇರುವುದಾದರೆ.
ನ್ಯಾಯವು ಧರ್ಮ ಫಲ!
ಅನ್ಯಾಯವು ಕಂ ಫಲ!!
`ಪವಿತ್ರಾಣಾಯ ಸಾಧುನಾಂ ವಿನಾಶಾಯ ಚ ದುಷ್ಕೃತಾಮ್! ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ'
ಮಲಿನ ವಸ್ತುಗಳನ್ನು ದೇಹದಲ್ಲಿ ಇಟ್ಟುಕೊಳ್ಳುವಂತಿಲ್ಲ.
ದೇಹಕ್ಕೆ ಯಮಬಾಧೆ.
ಆದರೆ ಮನಸ್ಸಿನಲ್ಲಿ ಸಾಗರದಷ್ಟು ಮಲಿನ ವಸ್ತುಗಳನ್ನು ದಾಸ್ತಾನು ಮಾಡಬಹುದು. ಆದರೂ ಮನಸ್ಸು ಪ್ರಶಾಂತ.
ಮತ್ತೆ ನ್ಯಾಯಾಲಯದ ಕಲಾಪ ಪ್ರಾರಂಭವಾಗಿತ್ತು.
ವಾದ, ಪ್ರತಿವಾದ, ಮಂಥನ. ಪ್ರಕರಣಗಳ ಇತ್ಯರ್ಥ.
ಗೆದ್ದವರು ನಗುತ್ತಿದ್ದರು, ಸೋತವರ ಮುಖದಲ್ಲಿ ಹತಾಶೆ.
ನ್ಯಾಯ, ಅನ್ಯಾಯಗಳು ಅದಲು ಬದಲೂ ಆಗಬಹುದು.
ಅವಳು, ಊರ್ಮಿಳಾ ನ್ಯಾಯ ಬೇಕೆಂದು ಎಲ್ಲರನ್ನೂ ಪರಿಪರಿಯಾಗಿ ಬೇಡಿಕೊಂಡಳು.
‘your honour’
‘your honour’
ಅವಳ ಮಾತು ಯಾರ ಕಿವಿಗೂ ತೂರುತ್ತಿಲ್ಲ.
`ನನಗೆ ನ್ಯಾಯ ಕೊಡಿ.....'
ನ್ಯಾಯಾಲಯ ಬೆಚ್ಚಿ ಬೀಳುವಂತೆ ಕಿರುಚಿದ್ದಳು ಊರ್ಮಿಳಾ.
ನ್ಯಾಯಾಲಯದಲ್ಲಿ ಕ್ಷಣಕಾಲ ಮೌನ.
`ಯಾರು ನೀನು.....?' ಅಮೀನ ಕೇಳಿದ್ದ.
`ಯಾರು ನೀನು.....?' ನ್ಯಾಯವಾದಿಗಳು ಕೇಳಿದ್ದರು.
`ಯಾರು ನೀನು....?' ನ್ಯಾಯದೇವತೆಯೂ ಕೇಳಿದ್ದಳು.
`ನಾನು ಹೆಣ್ಣು, ನಾನು ಊರ್ಮಿಳಾ....'
ಅವಳು ಚೇತರಿಸಿಕೊಂಡಿದ್ದಳು.
`ಏನು ನಿನ್ನ ದೂರು....?' ಹತ್ತಾರು ಧ್ವನಿಗಳು ಒಮ್ಮೆಗೆ ದಾಳಿ ಮಾಡಿದಂತೆ.
`ನನ್ನ ಮೇಲೆ ಆಕ್ರಮಣ ನಡೆದಿದೆ....'
`ನನ್ನನ್ನು ಕೊಳ್ಳೆ ಹೊಡೆದಿದ್ದಾರೆ.....'
`ನನ್ನನ್ನು ಬರಿದು ಮಾಡಿದ್ದಾರೆ.....'
ಕಣ್ಣೀರು ಅವಳ ಕಣ್ಣುಗಳಲ್ಲಿರಲಿಲ್ಲ.
`ಯಾರು ಮಾಡಿದ್ದು....?' ಹಿರಿಯ ನ್ಯಾಯವಾದಿಯೊಬ್ಬರು ಕರುಣೆ ತೋರಿದ್ದರು.
`ಗೊತ್ತಿಲ್ಲ, ಬಂದವರಿಗೆ ಮುಖಗಳೇ ಇರಲಿಲ್ಲ. ಮುಖವಾಡಗಳು ಮಾತ್ರವೇ ಇದ್ದದ್ದು....'
`ಎಷ್ಟು ದಿನವಾಯ್ತು....' ಮತ್ತೊಬ್ಬ ನ್ಯಾಯವಾದಿಯ ಪ್ರಶ್ನೆ.
`ಕ್ಷಣಗಳು, ಗಂಟೆಗಳು, ದಿನಗಳು, ವಾರಗಳು, ತಿಂಗಳುಗಳು ಮತ್ತು ವರ್ಷಗಳು. ಲೆಕ್ಕ ಮರೆತು ಹೋಗಿದೆ....' ಅವಳ ಸ್ಥಿತಿ ಸತ್ಯವಾದದ್ದು.
`ದೂರನ್ನೇಕೆ ನೀಡಲಿಲ್ಲ....' ಮಗದೊಬ್ಬ ನ್ಯಾಯವಾದಿಯ ಪ್ರಶ್ನೆ.
`ದಾಖಲಿಸಿಕೊಳ್ಳುವವರಿಲ್ಲದೆ....'
ನ್ಯಾಯಾಲಯದಲ್ಲೆಗ ನಗುವಿನ ಅಲೆ. ಪಿಸುಮಾತಿನ ಕಲರವ ಎರಡೂ ಸೇರಿ ಗದ್ದಲ.
‘silence’
‘silence’
ನ್ಯಾಯದೇವತೆಯೇ ನ್ಯಾಯಾಲಯದ ಅಧಿಪತಿ.
ಅವಳ ಮಾತಿಗೆ ಎಲ್ಲಿಲ್ಲದ ಬೆಲೆ.
ಈಗ ನ್ಯಾಯಾಲಯದಲ್ಲಿ ಸಂಪೂರ್ಣ ಮೌನ.
ಅವಳ ಪ್ರಕರಣಕ್ಕೆ ಇಬ್ಬರು ಹಿರಿಯ ನ್ಯಾಯವಾದಿಗಳು ಎದ್ದು ನಿಂತರು.
ವಾದಿಯೊಬ್ಬರು,
ಪ್ರತಿವಾದಿಯೊಬ್ಬರು,
ಅವರಿಗೆ ಅವಳು ಶುಲ್ಕ ಕೊಡಬೇಕಾಗಿರಲಿಲ್ಲ.
ಊರ್ಮಿಳಾ ಈಗ ನಿಂತಿದ್ದಳು ಕಟಕಟೆಯಲ್ಲಿ.
ಅಲ್ಲಿ ನಿಂತವರು ಧರ್ಮಗ್ರಂಥದ ಮೇಲೆ ಆಣೆಯಿಡಬೇಕು.
ಅಲ್ಲಿ ನಿಂತವರು ಸತ್ಯವನ್ನೇ ನುಡಿಯಬೇಕು.
ಅಲ್ಲಿ ನಿಂತವರು ಹೆಚ್ಚು ಮಾತನಾಡಬಾರದು.
ಅಲ್ಲಿ ನಿಂತವರು ನ್ಯಾಯದೇವತೆಗೆ ವಿಧೇಯರಾಗಿರಬೇಕು.
ವಾದಿ:‘your honour ಈಕೆಯ ಮೇಲೆ ಆಕ್ರಮಣ ನಡೆದಿದೆ. ಅಬಲೆಯ ಮೇಲೆ ಆಕ್ರಮಣ ನಡೆಸುವುದು. ಸಮಾಜಘಾತುಕ ಕೆಲಸ.....'
ಪ್ರತಿವಾದಿ:‘your honour ಈಕೆಗೆ ವಯಸ್ಸಾಗಿದೆ. ಕುರೂಪಿ ಇವಳು. ಇವಳ ಮೇಲೆ ಆಕ್ರಮಣ ಮಾಡುವುದೆಂದರೇನು.....?'
ವಾದಿ:‘your honour ಈಕೆ ಒಂದೊಮ್ಮೆ ಅತ್ಯಂತ ಸುಂದರಿಯಾಗಿದ್ದವಳು. ಇವಳ ಸೌಂದರ್ಯವನ್ನು ಕೆಡಿಸಿ ಕುರೂಪಿಯನ್ನಾಗಿ ಮಾಡಿದ್ದು ಘನಘೋರ ಅಪರಾಧ.....'
ಪ್ರತಿವಾದಿ:‘your honour ಈಕೆಯ ಕಡೆಯಿಂದ ಅಸಹ್ಯವಾದ ದುರ್ವಾಸನೆ ಬರುತ್ತಿದೆ....'
ವಾದಿ:‘your honour ಇದಕ್ಕೆ ಮೊದಲು ಇವಳ ಶರೀರ ಅತ್ಯಂತ ಮಧುರವಾದ ಪರಿಮಳವನ್ನು ಸೂಸುತ್ತಿತ್ತು....'
ಪ್ರತಿವಾದಿ:‘your honour ನೀವೇ ನೋಡಿ ಈಕೆಯ ಕೂದಲು ನೆರೆತಿರುವುದಲ್ಲದೆ ಅಲ್ಲಲ್ಲಿ ಉದುರಿಹೋಗಿದೆ.....'
ವಾದಿ:‘your honour ಈಕೆಯ ಕೂದಲು ಮಾರುದ್ದ ಇದ್ದಿತ್ತಲ್ಲದೆ ಬಂಗಾರದಂತೆ ಪಳ ಪಳ ಹೊಳೆಯುತ್ತಿತ್ತು.....'
ಪ್ರತಿವಾದಿ:‘your honour ಇವಳ ದೇಹ ನೋಡಿ ಅಸ್ಥಿಪಂಜರದಂತಿದೆ. ಇಂಥ ದೇಹಕ್ಕೆ ಮನುಷ್ಯ ಮಾತ್ರರು ಎಂದೂ ಆಸೆ ಪಡಲಾರರು....'
ವಾದಿ:‘your honour ಇವಳದ್ದು ಸಮೃದ್ಧವಾದ ಮೈಸಿರಿಯಾಗಿತ್ತು. ಶತ್ರು ಪಡೆಯಿಂದ ಕೊಳ್ಳೆಯಾದ ನಗರ ಸ್ಮಶಾನದಂತಾಗುವುದಿಲ್ಲವೆ.....?'
ಪ್ರತಿವಾದಿ:‘your honour ಇವಳ ಕಣ್ಣುಗಳನ್ನು ನೋಡಿ ಕುಳಿಬಿದ್ದಿವೆ.....'
ವಾದಿ:‘your honour ಇವಳ ಕಣ್ಣುಗಳಲ್ಲಿ ಕಾಮನ ಬಿಲ್ಲುಗಳು ಕುಣಿಯುತ್ತಿದ್ದವು ಹಿಂದೊಮ್ಮೆ....'
ಪ್ರತಿವಾದಿ:‘your honour ಇವಳ ಹರಿದ ತುಟಿ, ಉದುರಿದ ಹಲ್ಲುಗಳು....'
ವಾದಿ:‘your honour ಇವಳ ತುಟಿಗಳು ತೊಂಡೆ ಹಣ್ಣಿನಂತಿದ್ದವು. ಹಲ್ಲುಗಳು ದಾಳಿಂಬೆಯಂತೆ ಕಂಗೊಳಿಸುತ್ತಿದ್ದವು....'
ಪ್ರತಿವಾದಿ:‘your honour ಅಪರಾಧಿಗಳನ್ನು ಪತ್ತೆಹಚ್ಚಲು ಸಾಕ್ಷಿಗಳು ಅನಿವಾರ್ಯ. ಇವಳ ಪರವಾಗಿ ಯಾರಾದರೂ ಸಾಕ್ಷಿಗಳಿದ್ದರೆ ಕಟಕಟೆಯಲ್ಲಿ ನಿಲ್ಲಲಿ. ನಾನು ಸಾಕ್ಷಿಗಳನ್ನೂ ಪ್ರಶ್ನಿಸಬೇಕು.....'
ಸಾಕ್ಷಿಗಳೇ ನ್ಯಾಯದ ಬೆನ್ನೆಲುಬು.
ಸಾಕ್ಷಿಗಳೇ ತೀರ್ಪಿನ ಆಧಾರ.
ವಾದಿ ಮತ್ತು ಪ್ರತಿವಾದಿ ನ್ಯಾಯವಾದಿಗಳು ತಮ್ಮ ತಮ್ಮ ಆಸನಗಳನ್ನು ಅಲಂಕರಿಸಿದ್ದರು.
ಊರ್ಮಿಳಾ ಕಟಕಟೆಯಲ್ಲಿ ಕಂಪಿಸತೊಡಗಿದಳು.
ಕಟಕಟೆಯಲ್ಲಿ ಊರಿದ್ದ ಅವಳ ಪಾದಗಳಡಿಯಲ್ಲಿ ರಕ್ತ.
ಅದು ಅವಳ ದೇಹದಿಂದ ಜಿನುಗಿದ್ದದ್ದು.
ನ್ಯಾಯಾಲಯದ ಅಂದಿನ ಕಲಾಪದ ಸಮಯ ಮುಗಿಯುತ್ತಾ ಬಂದಿತ್ತು.
ನ್ಯಾಯದೇವತೆ ಕರುಣಾಮಯಿ.
`ನೋಡು ಮಗಳೇ ಊರ್ಮಿಳಾ, ಸಾಕ್ಷಿ ಇಲ್ಲದೆ, ಅಪರಾಧಿಗಳ ಚಹರೆ ಇಲ್ಲದೆ ನಾನು ಏನೆಂದು ತೀರ್ಪು ನೀಡಲಿ, ಯಾರಿಗೆಂದು ಶಿಕ್ಷೆ ವಿಧಿಸಲಿ. ಇನ್ನು ಮುಂದೆ ಈ ನ್ಯಾಯಾಲಯ ನಿನಗೆ ಸದಾ ತೆರೆದಿರುತ್ತದೆ. ನೀನು ಸಾಕ್ಷಿಯೊಂದಿಗೆ ಎಂದಾದರೂ ಬಾ. ನ್ಯಾಯ ಕೊಡಿಸುವ ಜವಾಬ್ದಾರಿ ನನ್ನದು. ನೀನು ಸುಸ್ತಾದಂತೆ ಕಾಣುತ್ತೀಯ. ವಿಶ್ರಾಂತಿ ಗೃಹದಲ್ಲಿ ನೀನು ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ತೆಗೆದುಕೊಂಡು ಹೋಗಬಹುದು....'
ನ್ಯಾಯದೇವತೆ ನ್ಯಾಯವನ್ನೆ ನುಡಿದಿದ್ದಳು.
ಅಮೀನ ಬೇರೊಂದು ಪ್ರಕರಣದ ಕಕ್ಷಿದಾರರ ಹೆಸರನ್ನು ಕೂಗಿದ್ದ.
ಬಹುಶಃ ಅದು ಅಂದಿನ ಕೊನೆಯ ಪ್ರಕರಣ.
ಅವಳು ಕಟಕಟೆಯಿಂದ ಕಾಲು ತೆಗೆದಿದ್ದಳು.
ರಕ್ತದ ಕಲೆ ಕಟಕಟೆಯಲ್ಲಿ. ನೆನಪಿರಲಿ, ರಕ್ತದ ಬಣ್ಣ ಸದಾ ಕೆಂಪು.
ಅವಳು ನ್ಯಾಯಾಲಯಕ್ಕೆ ಅಂಟಿಕೊಂಡಂತಿದ್ದ ವಿಶ್ರಾಂತಿ ಗೃಹವನ್ನು ಪ್ರವೇಶಿಸಿದ್ದಳು.
ಅರೆ, ಸುತ್ತಲೂ ಕನ್ನಡಿ. ಕನ್ನಡಿಯನ್ನು ಕಂಡು ಹಿಡಿದವನನ್ನು ಗಲ್ಲಿಗೇರಿಸಬೇಕು. ಎಷ್ಟು ವರ್ಷಗಳಾದವು ತನ್ನನ್ನು ತಾನು ನೋಡಿಕೊಂಡು.
ಪ್ರತಿವಾದಿ ಹೇಳಿದ್ದೆಲ್ಲವೂ ನಿಜ.
ತಾನು ತಾನಲ್ಲ.
ತಾನು ನಿಜವಲ್ಲ. ಕನಸುಗಳ ಬರ ಮಲಗಿತ್ತು ಕನ್ನಡಿಗಳ ಅಂಗಡಿಯಲ್ಲಿ.
ನ್ಯಾಯಾಲಯದಲ್ಲಿ ಗಟ್ಟಿಯಾಗಿ ಮಾತನಾಡಿಕೊಳ್ಳುತ್ತಿರುವುದು ಅವಳ ಕಿವಿಗಳಿಗೆ ಅಪ್ಪಳಿಸುತ್ತಿದೆ.
`ಅವಳು ನ್ಯಾಯಾಲಯದಲ್ಲಿಯೇ ಮುಟ್ಟಾಗಿದ್ದಾಳೆ....'
`ಕಟಕಟೆಯಲ್ಲಿ ರಕ್ತದ ಕಲೆಗಳು....'
`ಅವಳು ಹುಚ್ಚಿಯಂತೆ ಕಾಣುತ್ತಿದ್ದಳು.....'
`ನ್ಯಾಯಾಲಯವನ್ನು ಅಪವಿತ್ರಗೊಳಿಸಿದಳು.....'
`ನ್ಯಾಯಾಲಯವನ್ನು ತೊಳೆದು ಸ್ವಚ್ಛಗೊಳಿಸಿದ ನಂತರವೇ ಮುಂದಿನ ಕಲಾಪಗಳನ್ನು ಪ್ರಾರಂಭಿಸಬೇಕು....'
`ನ್ಯಾಯಾಲಯವನ್ನು ಅಪವಿತ್ರಗೊಳಿಸಿದ್ದಕ್ಕಾಗಿ ಅವಳಿಗೆ ಜೀವಾವಧಿ ಶಿಕ್ಷೆಯನ್ನು ಕೊಡಬಹುದು....'
`ಫಿರ್ಯಾದು ಇಲ್ಲದೆ, ಸಾಕ್ಷಿಗಳಿಲ್ಲದೆ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು ತಪ್ಪು....'
`ನ್ಯಾಯಾಲಯದ ಗೋಡೆಯನ್ನು ಮತ್ತಷ್ಟು ಎತ್ತರಿಸಬೇಕು. ಕಾವಲನ್ನು ಮತ್ತಷ್ಟು ಬಲಪಡಿಸಬೇಕು'
ವಿಶ್ರಾಂತಿ ಗೃಹದಿಂದ ಅವಳು ಹೊರ ನಡೆದಳು.
‘The court is adjourned...’
ಅಮೀನ ನ್ಯಾಯದೇವತೆಗೆ ಪರಾಕು ಹೇಳಿಕೊಂಡು ಮುಂದೆ ಮುಂದೆ....
ನ್ಯಾಯದೇವತೆ ನಗುಮುಖದೊಂದಿಗೆ ಮೆಲ್ಲನೆ ಅವನ ಹಿಂದೆ ಹಿಂದೆ....
ಊರ್ಮಿಳಾ ಈಗ ಪ್ರವೇಶದ್ವಾರದ ಹತ್ತಿರ ನಿಂತಿದ್ದಳು.
ಅವಳನ್ನು ನೋಡಿ ಕಾವಲುಗಾರ ನಕ್ಕಿದ್ದ.
ಬಹುಶಃ ಮೊಟ್ಟ ಮೊದಲ ಬಾರಿ ಅವನ ಮುಖದಲ್ಲಿ ನಗು.
ಹೊರ ಹೋಗುವ ಯಾರನ್ನೂ ಅವನು ತಡೆಯುವುದಿಲ್ಲ.
ಅವನು ಕೇಳಿದ: `ಏನಾಯಿತು.....'
ಅವಳು ಕೇಳಿದಳು: `ನೀನು ನ್ಯಾಯದೇವತೆಯನ್ನು ನೋಡಿದ್ದೀಯಾ....?'
ಅವನು ಹೇಳಿದ: `ಇಲ್ಲ ಅದರ ಅವಶ್ಯಕತೆಯೂ ನನಗಿಲ್ಲ....'
ಅವಳು ಹೇಳಿದಳು: `ಇನ್ನೆಂದೂ ಒಳಗೆ ಬಿಡು ಎಂದು ನಿನ್ನನ್ನು ಕಾಡುವುದಿಲ್ಲ....'
ಭೂಮಿ ತನ್ನ ಪಥದಲ್ಲಿ ತಾನು ಸುತ್ತುವುದು ಧರ್ಮ ಮತ್ತು ನ್ಯಾಯ.
ಭೂಮಿ ಸುತ್ತುವುದನ್ನು ನಿಲ್ಲಿಸುವವರು ಯಾರು?
ಭೂಮಿ ಸುತ್ತುವುದರಿಂದಲೇ ಹಗಲು ಮತ್ತು ರಾತ್ರಿಗಳು ಉಂಟಾಗುವುದು.
ಹಗಲು ಮೊದಲೋ....?
ರಾತ್ರಿ ಮೊದಲೋ.....?
ಉತ್ತರಿಸಲು ಸೃಷ್ಟಿಕರ್ತನೇ ಹುಟ್ಟಿ ಬರಬೇಕು.
ಸೂರ್ಯ ಮುಳುಗಿದ್ದ.
ಕತ್ತಲು ಕವಿಯುತ್ತಿತ್ತು.
ನ್ಯಾಯಾಲಯ ಖಾಲಿ ಖಾಲಿಯಾಗಿತ್ತು.
ಅವಳು ಕತ್ತಲಿಗೆ ಕಾಲಿಟ್ಟಳು.
ಕತ್ತಲಲ್ಲಿ ಎಲ್ಲರೂ ಬೆತ್ತಲು.
ಕತ್ತಲಲ್ಲಿ ಎಲ್ಲವೂ ಬೆತ್ತಲು.
ಸತ್ಯ-ಮಿಥ್ಯ, ಧರ್ಮ-ಅಧರ್ಮ, ನ್ಯಾಯ-ಅನ್ಯಾಯ.....
ಕತ್ತಲೆಯ ಕೀಲಿ ಸೂರ್ಯನ ಜೇಬಿನಲ್ಲಿ.
‘your honour, darkness is dear to all...’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.