ADVERTISEMENT

ಫ್ರಾನ್ಸ್‌ನ ಒಂದು ಹಳ್ಳಿ: ಯಾರೋ ಬಿಡಿಸಿದ ಚಿತ್ರ

ವಸಂತ ಹೊಸಬೆಟ್ಟು
Published 23 ಫೆಬ್ರುವರಿ 2013, 19:59 IST
Last Updated 23 ಫೆಬ್ರುವರಿ 2013, 19:59 IST

`ಇಲ್ಲಿ ಕ್ಷೌರದ ಅಂಗಡಿ ಇಲ್ಲ. ಸಿನಿಮಾ ಥಿಯೇಟರ್, ವಸತಿಗೃಹ ಯಾವುದೂ ಕಾಣುವುದಿಲ್ಲ' ಇಪ್ಪತ್ತರ ಹರೆಯದ ಸೆಲೈನ್ ವಿವರಿಸುತ್ತ ಹೋದರು. ಅದು ಫ್ರಾನ್ಸ್‌ನ ಒಂದು ಪುಟ್ಟ ಹಳ್ಳಿ. ಹೆಸರು ಸೆಂಜೂಸ್ ಲ್ ಮಾಟೆಲ್.

ಜನಸಂಖ್ಯೆ ಸುಮಾರು 2500. ಪ್ಯಾರಿಸ್‌ನ ದಕ್ಷಿಣಕ್ಕೆ ಸುಮಾರು 350 ಕಿ.ಮೀ ದೂರದಲ್ಲಿ ತಳವೂರಿದೆ. ತೀರಾ ಹೆಚ್ಚೇನೂ ಜನಸಂದಣಿ ಇಲ್ಲದಿರುವುದು, ಕ್ಷೌರ ದುಬಾರಿಯಾಗಿರುವುದು ಮತ್ತಿತರ ಕಾರಣಗಳಿಂದ ಅಲ್ಲಿ ಚಿತ್ರಮಂದಿರ, ಸಲೂನ್, ಲಾಡ್ಜ್‌ಗಳನ್ನು ನಿರೀಕ್ಷಿಸುವಂತಿಲ್ಲ. ಹಾಗೇನಾದರೂ ಸಿನಿಮಾ ನೋಡಬೇಕೆಂದಿದ್ದರೆ ಅವರು ಪಕ್ಕದ ಊರು ಲಿಮೋಷ್‌ಗೆ ತೆರಳುತ್ತಾರೆ. ಇದನ್ನೆಲ್ಲಾ ಕೇಳುತ್ತಿರುವಾಗಲೇ ನನಗೆ ನಮ್ಮೂರುಗಳು ನೆನಪಾದವು. ಫ್ರಾನ್ಸ್‌ನ ಒಡಲೊಳಗೊಂದು ಭಾರತವಿದೆಯಲ್ಲಾ ಎಂದು ಹುಬ್ಬೇರಿಸುವಂತಾಯಿತು.

ಸುಮಾರು ಮೂರು ದಶಕಗಳಿಂದ `ಅಂತರರಾಷ್ಟ್ರೀಯ ವ್ಯಂಗ್ಯಚಿತ್ರ ಮೇಳ' ಅಲ್ಲಿ ನಡೆಯುತ್ತಿದೆ. ಪ್ರತಿವರ್ಷದ ಸೆಪ್ಟೆಂಬರ್ ಕೊನೆಯ ವಾರ ಹಾಗೂ ಅಕ್ಟೋಬರ್ ಮೊದಲ ವಾರ ಚಾಚೂ ತಪ್ಪದೆ ಕಾರ್ಟೂನ್ ಹಬ್ಬ ಸಾಗಿಬಂದಿದೆ. ಉತ್ಸವದ ನಿಮಿತ್ತ ಫ್ರಾನ್ಸ್‌ಗೆ ಹಾರಿದ್ದ ನನಗೆ ಆ ಹಳ್ಳಿಯಲ್ಲಿ ಒಂಬತ್ತು ದಿನಗಳ ಕಾಲ ಉಳಿದುಕೊಳ್ಳುವ ಅವಕಾಶ ದೊರೆಯಿತು. ಪಾಶ್ಚಾತ್ಯರ ಹಳ್ಳಿ ನನಗೆ ಹತ್ತಿರವಾದದ್ದು ಹೀಗೆ.

ವಸತಿ ಗೃಹ ಇಲ್ಲದಿದ್ದರೇನಂತೆ ಊರಿನಲ್ಲಿ ಆತಿಥ್ಯಕ್ಕೇನೂ ಕೊರತೆ ಇಲ್ಲ. ಪ್ರತಿ ವರ್ಷ ವಿಶ್ವದೆಲ್ಲೆಡೆಯಿಂದ ಇಲ್ಲಿಗೆ ಬರುವ ಸುಮಾರು ಇನ್ನೂರು ವ್ಯಂಗ್ಯಚಿತ್ರಕಾರರಿಗೆ ಹಳ್ಳಿಯ ಮನೆಗಳೇ ಆಶ್ರಯ ನೀಡುತ್ತವೆ. ನಾನು ಉಳಿದುಕೊಂಡದ್ದು ಅಂಥದ್ದೇ ಮನೆಯೊಂದರಲ್ಲಿ. ಮನೆಯೊಡೆಯ ಜ್ಹಾಕಿ ಹಳ್ಳಿಯ ಪ್ರಾಥಮಿಕ ಶಾಲೆಯ ಮಾಸ್ತರ್. ಅವರಿಗೆ ಹತ್ತು ಎಕರೆ ತೋಟವೂ ಉಂಟು. ಅಲ್ಲೆಲ್ಲಾ ಸೇಬಿನ ಮರಗಳು, ತರಕಾರಿ ಗಿಡಗಳು.

ನಿಸರ್ಗವನ್ನು ಬಹಳ ಪ್ರೀತಿಸುವ ಜ್ಹಾಕಿ ಸಾವಯವ ಕೃಷಿಯನ್ನು ನೆಚ್ಚಿಕೊಂಡವರು. ಬಂದವರಿಗೆ ತೋಟ ತೋರಿಸುವುದು ಅವರ ನೆಚ್ಚಿನ ಕೆಲಸ. ಹಾವಿನ ಬಗ್ಗೆ ಭಯವಿರುವ ನಮಗೆ ಅವರನ್ನು ಕಂಡರೆ ಅಚ್ಚರಿಯಾಗುತ್ತದೆ. ಆ ತೋಟದಲ್ಲಿ ಜಿಂಕೆ, ತೋಳಗಳೂ ಆಡಿಕೊಂಡಿರುತ್ತವೆ. ಜೇನು ನೊಣಗಳನ್ನೂ ಸಾಕುವ ಅವರು ನಮ್ಮಲ್ಲಿ ಹಾವು ಕಡಿದು ಸಾಯುವವರಿಗಿಂತಲೂ ಜೇನು ಕಡಿದು ಸಾಯುವವರ ಸಂಖ್ಯೆ ಹೆಚ್ಚು ಎನ್ನುತ್ತಾರೆ.

ಫ್ರಾನ್ಸ್‌ನಲ್ಲಿ 2000ಕ್ಕೂ ಹೆಚ್ಚು ಸೇಬಿನ ತಳಿಗಳಿದ್ದರೂ ಕೇವಲ ಬೆರಳೆಣಿಕೆಯ ತಳಿಗಳು ಮಾರುಕಟ್ಟೆಗೆ ಬರುತ್ತವೆ ಎನ್ನುವುದು ಅವರ ಆಕ್ಷೇಪ. ಅವರ ತೋಟದ ಬಳಿ ದೊಡ್ಡ ವರ್ಕ್‌ಶಾಪ್ ಇದೆ. ಅದನ್ನು ಕೃಷಿ ಉದ್ದೇಶಕ್ಕಾಗಿ ಇತರರಿಗೆ ಬಾಡಿಗೆ ಕೊಡುವುದೂ ಉಂಟು. ಆದರೆ ತೋಟದಲ್ಲೆಲ್ಲೂ ಪಾರ್ಥೇನಿಯಂ ಸುಳಿವಿರಲಿಲ್ಲ. ರಸ್ತೆಯ ಬದಿ ಸುರುಳಿ ಸುತ್ತಿದ ಹುಲ್ಲಿನ ಬಣವೆ ರೋಲರ್‌ನಂತೆ ಭಾಸವಾಗುತ್ತಿತ್ತು.

ಫ್ರಾನ್ಸ್‌ನಲ್ಲಿ ಮದುವೆಗಿಂತಲೂ ಲಿವಿಂಗ್ ಟುಗೆದರ್ ಹೆಚ್ಚು ಜನಪ್ರಿಯ. ಜ್ಹಾಕಿ ಕುಟುಂಬವೂ ಅದಕ್ಕೆ ಹೊರತಲ್ಲ. ಕ್ಯಾನ್ಸರ್‌ಗೆ ತುತ್ತಾಗಿ ತಂದೆ ಮೃತಪಟ್ಟ ಮೇಲೆ ತಾಯಿ ಮತ್ತೊಬ್ಬರನ್ನು ಮದುವೆಯಾದರು. ಕಳೆದ ಮೂವತ್ತೆರಡು ವರ್ಷಗಳಿಂದ ಆ ದಂಪತಿ ಒಟ್ಟಿಗೆ ಬದುಕುತ್ತಿದ್ದಾರೆ. ಮಲತಂದೆಗೂ ಇದು ಹೊಸ ಮದುವೆಯೇನಲ್ಲ.

ಅವರು ತಮ್ಮ ಮೊದಲ ಪತ್ನಿಗೆ ಸೋಡಾ ಚೀಟಿ ನೀಡಿ ಈ ಮದುವೆಗೆ ಅಣಿಯಾಗಿದ್ದರು. ಹಾಗೆಂದು ಅವರ ಮೊದಲ ಪತ್ನಿ ಇವರಿಂದ ದೂರ ಉಳಿದಿಲ್ಲ. ಪಕ್ಕದ ಲಿಮೋಷ್ ಪೇಟೆಯಲ್ಲಿರುವ ಆಕೆ ಬಿಡುವಾದಾಗಲೆಲ್ಲಾ ಇವರ ಮನೆಗೆ ಬಂದು ಹೋಗುವುದುಂಟು.

ಜ್ಹಾಕಿಯ ಮಗ ಸಿಲ್ವೈನ್ ಈಗಷ್ಟೇ ಕಾಲೇಜು ಮುಗಿಸಿದ್ದಾರೆ. ಕೆಲಸದ ಹುಡುಕಾಟದಲ್ಲಿದ್ದಾರೆ. ವೀಕೆಂಡ್‌ಗೆಂದು ಆತನ ಗರ್ಲ್‌ಫ್ರೆಂಡ್ ಮನೆಗೆ ಬರುವುದುಂಟು. ರಿಜಿಸ್ಟ್ರಾರ್ ಕಚೇರಿಯಲ್ಲಿ ಕೆಲಸ ಮಾಡುವ ಆಕೆಯ ಹೆಸರು ಫ್ಲಾರೆನ್ಸ್. ಮನೆಯವರೂ ಅಷ್ಟೇ ಸಹಜವಾಗಿ ಆಕೆಯನ್ನು ಮಗನ ಗರ್ಲ್‌ಫ್ರೆಂಡ್ ಎಂದು ಪರಿಚಯಿಸುತ್ತಾರೆ. ನಾನು ಸುಮ್ಮನಿರದೆ ನಮ್ಮ ಮದುವೆ ವ್ಯವಸ್ಥೆಯನ್ನು ತಿಳಿಸಿದೆ. ಅದಕ್ಕವರು ನಿಮ್ಮಲ್ಲಿ ಮನಸ್ತಾಪ ಬಂದರೆ ಏನು ಮಾಡುವಿರಿ ಎಂಬ ಪ್ರಶ್ನೆ ಎಸೆದರು!

ಈ ಹಳ್ಳಿಗರು ತಮ್ಮ ಸಂಪತ್ತಿನ ಬಗ್ಗೆ ಅಷ್ಟೇನೂ ಹೇಳಿಕೊಳ್ಳುವುದಿಲ್ಲ. ನೆರೆಹೊರೆಯವರ ಕಣ್ಣು ಬಿದ್ದು ಎಲ್ಲಿ ದುಬಾರಿ ತೆರಿಗೆ ನೀಡಬೇಕಾಗುತ್ತದೋ ಎಂಬ ಆತಂಕ ಅವರಿಗೆ. ಫೋಟೊ ಕುರಿತಂತೆಯೂ ಅವರಿಗೆ ವಿಪರೀತ ಹೆದರಿಕೆ. ಪೋಷಕರ ಅನುಮತಿಯಿಲ್ಲದೆ ಫೋಟೊಗಳನ್ನು ಫೇಸ್‌ಬುಕ್‌ಗೆ ಹಾಕುವಂತಿಲ್ಲ. ಸರ್ಕಾರಿ ನೌಕರರಂತೂ ಫೋಟೊದಿಂದ ಬಲು ದೂರ.

ಫ್ರಾನ್ಸ್‌ನ ಚಾನೆಲ್ಲುಗಳಲ್ಲಿ ಫ್ರೆಂಚ್ ಅನುರಣಿಸುತ್ತದೆ. ಹುಡುಕಿದರೂ ಆಂಗ್ಲಪತ್ರಿಕೆ ಸುಳಿವು ಈ ಹಳ್ಳಿಯಲ್ಲಿಲ್ಲ. ಪಕ್ಕದ ಊರುಗಳಲ್ಲಿ ದಕ್ಕುವುದೂ ಅಪರೂಪ. ಆದರೆ ಶಾಲೆಗಳಲ್ಲಿ ಇಂಗ್ಲಿಷ್ ನಿಧಾನಕ್ಕೆ ಆವರಿಸಿಕೊಳ್ಳುತ್ತಿದೆ. ಕನ್ನಡಕ್ಕೆ ಇಂಗ್ಲಿಷ್‌ನಿಂದ ಎದುರಾಗಿರುವ ಸ್ಥಿತಿಯನ್ನೇ ಫ್ರೆಂಚ್ ಭಾಷೆಯೂ ಎದುರಿಸುತ್ತಿದೆ. ಬೆಳಿಗ್ಗೆ ರೇಡಿಯೊ, ಸಂಜೆ ಟಿವಿಗೆ ಅಂಟಿಕೊಳ್ಳುವ ಮಂದಿ ಇವರು. ಟಿವಿಯಲ್ಲಿ ಮೂಡಿ ಬರುವ ರೋಚಕ ಸುದ್ದಿಗಳಿಗೆ ಭಾರೀ ಆಕ್ಷೇಪ ವ್ಯಕ್ತಪಡಿಸುವುದುಂಟು.

ಮನೆಯಲ್ಲಿ ನಾಯಿ ಅಥವಾ ಬೆಕ್ಕು ಇರಲೇಬೇಕು. ನಾನುಳಿದುಕೊಂಡಿದ್ದ ಮನೆಯಲ್ಲಂತೂ ಮೂರು ಬೆಕ್ಕುಗಳು ಬಾಲ ಅಲ್ಲಾಡಿಸುತ್ತಾ ಓಡಾಡಿಕೊಂಡಿರುತ್ತಿದ್ದವು. ಅವುಗಳ ಪಾಲನೆ ಪೋಷಣೆಗೆ ಕುಟುಂಬದವರು ಇಂತಿಷ್ಟು ಹಣ ಎಂದು ಮೀಸಲಿಡುತ್ತಾರೆ. ಹೊಸಬರು ಅವುಗಳನ್ನು ಮುದ್ದು ಮಾಡದಿದ್ದರೆ ಕತೆ ಮುಗಿಯಿತು. ಕಾಲ ಬಳಿ ಅವು ಸುಳಿಯುವ ಪರಿಯೇನು? ತಮ್ಮತ್ತ ಗಮನ ಹರಿಯುವಂತೆ ಮಾಡಲು ಅವು ಹೂಡುವ ಆಟಗಳೇನು? ಬಹಳ ಜಾಣ ಬೆಕ್ಕುಗಳವು.

ದನಗಳನ್ನು ಅವರು ಮಾಂಸಕ್ಕೆಂದೇ ಸಾಕುತ್ತಾರೆ. ಈ ಮಾಂಸ ವಿವಿಧ ದೇಶಗಳಿಗೆ `ಲಿಮೋಷ್' ಬ್ರಾಂಡಿಗೆ ರಫ್ತಾಗುತ್ತದೆ. ಇದೇ ಅವರ ಪ್ರಮುಖ ಆದಾಯದ ಮೂಲ. ದನ ಈ ಹಳ್ಳಿಗರ ಬದುಕಿನಲ್ಲಿ ಎಷ್ಟು ಹಾಸು ಹೊಕ್ಕಾಗಿತ್ತೆಂದರೆ ವ್ಯಂಗ್ಯಚಿತ್ರ ಮೇಳದ ಲಾಂಛನದಲ್ಲಿ ಕೂಡ ದನದ ಚಿತ್ರವಿತ್ತು.

ವಿದ್ಯುತ್ ಮೇಲೆಯೇ ಹಳ್ಳಿ ಅವಲಂಬಿತವಾಗಿಲ್ಲ. ಸೌರಶಕ್ತಿ ಹಾಗೂ ಸೌದೆ ಅವರ ಇಂಧನವಾಗಿ ಬಳಕೆಯಾಗುತ್ತದೆ. ಹನ್ನೆರಡು ಕಿ.ಮೀ ದೂರದಲ್ಲಿರುವ ಲಿಮೋಷ್‌ಗೆ ತೆರಳಲು ವಿದ್ಯುತ್ ಅಥವಾ ಇಂಧನ ಆಧರಿತ ಟ್ರಾಮ್‌ಗಳನ್ನು ಬಳಸುವುದುಂಟು. ಹತ್ತಿರದ ಸ್ಥಳಗಳನ್ನು ತಲುಪಲು ಸೈಕಲ್ ಬಳಸುತ್ತಾರೆ. ನಮ್ಮಲ್ಲಿ ಬಸ್ ನಿಲ್ದಾಣ ಇರುವಂತೆ ಇಲ್ಲಿ ಸೈಕಲ್ ನಿಲ್ದಾಣಗಳುಂಟು.

ಶನಿವಾರ ಭಾನುವಾರ ಜತೆಗೆ ಬುಧವಾರವೂ ಇಲ್ಲಿನ ಶಾಲೆಗಳಿಗೆ ರಜೆ. ಉದ್ಯೋಗಸ್ಥರು ವಾರಕ್ಕೆ 35 ಗಂಟೆ ದುಡಿಯುತ್ತಾರೆ. ಹೆಚ್ಚು ಹೊತ್ತು ದುಡಿದರೆ ಪೂರಕ ರಜೆ ಕೂಡ ದೊರೆಯುತ್ತದೆ. ಮಾರುಕಟ್ಟೆಗೆ ಹೋದರೆ ಎಲ್ಲವೂ ಚೈನಾಮೇಡ್ ವಸ್ತುಗಳೇ. ನಮ್ಮ ಆರ್ಥಿಕ ವ್ಯವಸ್ಥೆ ಆಚಾರ ವಿಚಾರಗಳ ಬಗ್ಗೆ ಹಳ್ಳಿಗರು ತಿಳಿದುಕೊಂಡಿರುವುದನ್ನು ಕೇಳಿ ಅಚ್ಚರಿಯಾಯಿತು.

ಬರುವಾಗ ಜ್ಹಾಕಿ ತಮ್ಮ ತೋಟದಲ್ಲಿ ಸಾವಯವ ವಿಧಾನದಡಿ ಬೆಳೆಸಿದ ಬೀನ್ಸ್ ಬೀಜವನ್ನು ಪ್ರೀತಿಯಿಂದ ಕೊಟ್ಟರು. ಅದನ್ನೇನೋ ಅಷ್ಟೇ ಪ್ರೀತಿಯಿಂದ ತಂದೆ. ಆದರೆ ಬೆಂಗಳೂರಿನಲ್ಲಿ ಅವುಗಳನ್ನು ನೆಡಲು ಜಾಗವೆಲ್ಲಿದೆ? ಹುಡುಕಾಟದಲ್ಲಿದ್ದೇನೆ...           

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.