ADVERTISEMENT

ಬಣ್ಣದ ನಗರಿಯ ಸುತ್ತ

ಆದರ್ಶ ಬಿ.ಎಸ್.
Published 18 ನವೆಂಬರ್ 2017, 19:30 IST
Last Updated 18 ನವೆಂಬರ್ 2017, 19:30 IST
ಪುಟ್ಟ ಬಣ್ಣದ ಲೋಕದಂತೆ ಕಾಣುವ ಕೋಜಿ!
ಪುಟ್ಟ ಬಣ್ಣದ ಲೋಕದಂತೆ ಕಾಣುವ ಕೋಜಿ!   

ಯುರೋಪಿನ ಗಲ್ಲಿ ಗಲ್ಲಿಗಳನ್ನು ಸುತ್ತುವ ಹುಚ್ಚಿಗೆ ಕಿಚ್ಚು ಹಚ್ಚಿದ್ದು ಆಕಾಶ್. ಯಾವ ದೇಶ ಸುತ್ತೋದು ಎಂಬ ಪಟ್ಟಿ ಸಿದ್ಧಪಡಿಸುತ್ತ ಇದ್ದಾಗ, ಪ್ರಖ್ಯಾತ ಫ್ರಾನ್ಸ್, ಇಟಲಿಯಂತಹ ದೇಶಗಳನ್ನು ಬಿಟ್ಟು ಡೆನ್ಮಾರ್ಕಿಗೆ ಹೋಗುವ ತೀರ್ಮಾನ ಮಾಡಿದ್ದೆವು. ಇಂತಹ ಹುಚ್ಚು ನಿರ್ಧಾರಗಳಲ್ಲೇ ನೆನಪುಗಳು ಹುಟ್ಟುವುದು. ಜರ್ಮನಿಯಿಂದ ಅವನು, ಹಂಗೇರಿಯಿಂದ ನಾನು, ಶನಿವಾರ ಸಂಜೆ ಭೇಟಿಯಾಗಿದ್ದು ಡೆನ್ಮಾರ್ಕಿನ ರಾಜಧಾನಿ ಕೋಪನ್‌ಹೇಗನ್ನಿನಲ್ಲಿ. ಎರಡು ದಿನದಲ್ಲಿ ಎರಡು ದೇಶ ಸುತ್ತುವ ಕನಸು.

ಪ್ರಯಾಣಕ್ಕೆ ತಿರುವು ಸಿಕ್ಕಿದ್ದು ಎರಡನೇ ದಿನ. ಒಂದೇ ದಿನದಲ್ಲಿ ಡೆನ್ಮಾರ್ಕಿನ ನಗರಿಗಳು, ಕಂಟ್ರಿ ಸೈಡ್... ಎಲ್ಲವನ್ನೂ ಸುತ್ತುವ ಬಯಕೆಗೆ ಸಮಯ ಬೆಂಕಿ ಇಡುವಂತೆ ಕಾಣುತ್ತಿತ್ತು. ಎಲ್ಲಿಂದ ಬಂದಿದ್ದೋ ಗೊತ್ತಿಲ್ಲ ಬಾಡಿಗೆ ಕಾರಿನಲ್ಲಿ ಸುತ್ತುವ ಯೋಚನೆ. ವಿಮಾನ ನಿಲ್ದಾಣದ ಪಕ್ಕದಲ್ಲಿ ವಿಚಾರಿಸಿದ್ದಾಯ್ತು, ಬಾಡಿಗೆಗೆ ಕೊಂಡಿದ್ದಾಯ್ತು. ಧೈರ್ಯ ಮಾಡಿ ಹಣ ಅಡವಿಟ್ಟು, ಒಂದಿಷ್ಟು ದುಡ್ಡು ಕೊಟ್ಟು, ಕಣ್ಣು ಮುಚ್ಚಿ ಗಾಡಿ ಕೊಂಡಿದ್ದೆವು.

ಏನೇ ಹೇಳಿ, ಬೇರೆ ಖಂಡವೊಂದರಲ್ಲಿ ಕಾರು ಚಲಾಯಿಸುವುದೇ ಹೆಮ್ಮೆಯ ಸಂಗತಿ. ಇದೇ ಹುಮ್ಮಸ್ಸಿನಲ್ಲಿ ಕಾರು ಹತ್ತಿದ್ದೇ, ಹತ್ತಿ ಹೊರಟಿದ್ದೇ. ಮೋಡ ಕವಿದಿತ್ತು. ಬ್ಯಾಗುಗಳಿಗೆ ಹಿಂದಿನ ಸೀಟಲ್ಲಿ ಮುಕ್ತಿ ಸಿಕ್ಕಿತ್ತು. ಹೊರಟಿದ್ದೇನೋ ಸರಿ, ಎಲ್ಲಿ - ಎತ್ತ - ಹೇಗೆ? ಒಂದೂ ನಿರ್ಧಾರ ಆಗಿರಲಿಲ್ಲ. ವಿಮಾನ ನಿಲ್ದಾಣ ದಾಟುವಷ್ಟರಲ್ಲಿ ಹೆದ್ದಾರಿ ಶುರುವಾಗಿತ್ತು. ಪ್ರತಿ ಮೈಲಿಗೂ ಒಂದೊಂದು ವೇಗ ಮಿತಿ. ಕಣ್ಣು ಮಿಟುಕಿಸುವಷ್ಟರಲ್ಲಿ ಮುಂದೆ ಸಾಗುತ್ತಿದ್ದ ವಾಹನಗಳು.  ಭಾರತದಲ್ಲಿ ಎಡ ಭಾಗದಲ್ಲಿ ಮಾತ್ರ ವಾಹನ ಚಲಾಯಿಸುತ್ತಿದ್ದ ಆಕಾಶ್, ಮೊದಲ ಬಾರಿಗೆ ಬಲಭಾಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದ. ಅಭ್ಯಾಸ ಬಲದ ಕಾರಣದಿಂದಾಗಿ ಕೈ ಎಡಕ್ಕೆ ಜಾರುತ್ತಿತ್ತು. ಆಗೆಲ್ಲ ಹಿಂದಿನಿಂದ ಹಾರ್ನ್ ಸದ್ದು, ಯಾರೋ ಬೈದಂತಹ ಅನುಭವ. ಇಬ್ಬರಲ್ಲೂ ಭಯ ಆವರಿಸತೊಡಗಿತ್ತು.

ADVERTISEMENT

‘ಎಲ್ಲಿಗ್ ಹೋಗ್ಬೇಕು ಫಸ್ಟ್ ನೋಡೋ’ ಎಂದು ಆಕಾಶ್ ಕಿರುಚಿದ.

‘ಕೋಜಿ ಹೋಗಣ ಅಂತ ಡಿಸೈಡ್ ಮಾಡಿದ್ದ್ವಲ್ಲೋ...’

‘ಅದ್ಸರಿ ಜಿ.ಪಿ.ಎಸ್ ಆನ್ ಮಾಡಪ್ಪ’

‘ಲೋ, ಇದು ಯಾವ್ದೋ 1950ರ ಜಿ.ಪಿ.ಎಸ್ ಮಗಾ. ತಲೆ ಬುಡ ತಿಳಿತಾ ಇಲ್ಲ’

‘ಹೆಂಗಾರೂ ಆನ್ ಮಾಡು ಮಾರಾಯ’

‘ಲೋ. ಲೆಫ್ಟಿಗ್ ಹೋಗಪ್ಪ, ಲೆಫ್ಟ್ ಲೆಫ್ಟ್ ಲೆಫ್ಟ್...’

ಹೀಗೆ, ಇಬ್ಬರೂ ಕಿರುಚುತ್ತಿದ್ದಾಗ, ಜಿ.ಪಿ.ಎಸ್ ಕೆಲಸ ಮಾಡೋಕೆ ಶುರು ಮಾಡಿತ್ತು. ಕೋಜಿ ಎಂಬ ಪುಟ್ಟ ನಗರಿ ಕೇವಲ 40 ಮೈಲಿ ದೂರದಲ್ಲಿತ್ತು. ಒಂದೇ ಸಲಕ್ಕೆ ಜೋರಾಗಿ ಮಳೆ ಶುರುವಾಯ್ತು. ಕಾರಿನ ಒಳಗಡೆ ಚಳಿ ಆವರಿಸುತ್ತಿತ್ತು. ರಸ್ತೆ ಮಂಜು ಕವಿದು ಮಬ್ಬಾಗಿ ಕಾಣುತ್ತಿತ್ತು. ವೇಗದ ಮಿತಿ 130 ಎಂಬುದು, ಕಲ್ಲು ಕಲ್ಲುಗಳ ಮೇಲೂ ಹೊಳೆಯುತ್ತಿತ್ತು. ಅಕ್ಕ ಪಕ್ಕದಲ್ಲಿ ಸರ್‍ರೆಂದು ಕಾರುಗಳು ಹಾದು ಹೋದಾಗಲೆಲ್ಲ ಎದೆ ಝಲ್ ಎನ್ನುತ್ತಿತ್ತು.

‘ವೈಪರ್ ಆನ್ ಮಾಡಕ್ ಗೊತ್ತಾಗ್ತಾ ಇಲ್ಲ ಮಗಾ. ರಸ್ತೆ ಕಾಣ್ತಿಲ್ಲ ಕಣೋ’ ಆಕಾಶ್ ಕಿರುಚುತ್ತಿದ್ದ.

‘ನಂಗಂತೂ ಕಾರಿನ ಬಗ್ಗೆ ಏನೂ ಗೊತ್ತಿಲ್ಲ. ಹುಡುಕ್ತಿದೀನಿ ತಡ್ಕಳಪ’

‘ಹುಡ್ಕೋಕೆ ಟೈಮ್ ಇಲ್ಲ ಲೇ. ಏನಾರು ಮಾಡೋ. ಎ.ಸಿ ಹೆಂಗೋ ಆನ್ ಮಾಡೋದು!’

‘ವೈಪರ್ ಆನ್ ಗೊತ್ತಾಗೋ ತಂಕ ಬಟ್ಟೆಯಿಂದ ಗ್ಲಾಸ್ ಒರುಸ್ತೀನಿ’

‘ಮಗಾ. ಭಯ ಆಗ್ತಿದೆ. ಏನೂ ಕಾಣ್ತಾ ಇಲ್ಲ ಲೋ. ಏನಾರೂ ಮಾಡೋ’

‘ಹೈವೇ ಬೇರೆ. ಕಾರು ನಿಲ್ಸೋಕು ಆಗೋಲ್ವಲೋ’

ಅಂತೂ ಇಂತೂ ಎ.ಸಿ, ವೈಪರ್ ಎರಡೂ ಆನ್ ಮಾಡಿದ್ದಾಯ್ತು. ಮಳೆ ಇನ್ನಷ್ಟು ಹೆಚ್ಚುತ್ತಿತ್ತು. ಆಕಾಶ್ ಬಿಟ್ಟ ಕಣ್ಣು ಬಿಟ್ಟಂತೆ ಎದುರು ನೋಡಿ ಕಾರು ಓಡಿಸುತ್ತಿದ್ದ. ನಾನು ಬಲಕ್ಕೆ ಬಲಕ್ಕೆ ಎಂದು ಆಗಾಗ ಕಿರುಚುತ್ತಾ, ಜಿ.ಪಿ.ಎಸ್ ದಾಸನಾಗಿ ಬೆಚ್ಚಗೆ ಕುಳಿತಿದ್ದೆ.

ಎಲ್ಲ ಶಾಂತವಾಗುತ್ತಿದೆ ಎಂದು ಉಸಿರು ಎಳೆದುಕೊಳ್ಳುವಷ್ಟರಲ್ಲಿ ಒಂದು ಕೆಂಪು ದೀಪ ಕಾಣುತ್ತಿತ್ತು. ಸಿಗ್ನಲ್ಲಿನಲ್ಲಿ ಗಾಡಿ ನಿಲ್ಲಿಸಿದ್ದೇನೋ ಸರಿ, ಅದನ್ನು ದಾಟುವುದು ಯಾವಾಗ? ಯೂರೋಪಿನ ಸಿಗ್ನಲ್ ದಾಟುವ ನಿಯಮಗಳು ಇಬ್ಬರಿಗೂ ಗೊತ್ತಿರಲಿಲ್ಲ. ಗ್ರೀನ್ ಸಿಗ್ನಲ್ ಬಿತ್ತು. ನಾವು ಯಥಾವತ್ತಾಗಿ ಎಡಕ್ಕೆ ತಿರುಗಿದ್ದೆವು. ಧಕ್ ಧಕ್ ಧಕ್ ಧಕ್ ಧಕ್ ಎನ್ನುತ್ತಾ ಕಾರುಗಳೆಲ್ಲ ಸಿಗ್ನಲ್ಲಿನ ನಡುವೆ ದಿಕ್ಕಾಪಾಲಾಗಿ ನಿಂತವು. ನಾವು ಸಿಗ್ನಲ್ ನಿಯಮ ಉಲ್ಲಂಘಿಸಿದ್ದೇವೆ ಎಂಬುದು ತಿಳಿಯಿತು. ಭಯ ಮತ್ತಷ್ಟು ಆವರಿಸಿತು.

ಮತ್ತೆ ಸ್ವಲ್ಪ ದೂರಕ್ಕೆ ಇನ್ನೊಂದು ಸಿಗ್ನಲ್. ಮತ್ತೆ ಎಡ ತಿರುವು. ಅಲ್ಲೂ ಇದೇ ಕಥೆ. ಹೀಗೆ ಎಲ್ಲ ಸಿಗ್ನಲ್ಲುಗಳನ್ನೂ ಬ್ರೇಕ್ ಮಾಡುತ್ತಿದ್ದರೆ, ಹಾಕೋ ದಂಡಕ್ಕೆ ನಮ್ಮನ್ನ ನಾವು ಮಾರಾಟ ಮಾಡಿಕೊಳ್ಳಬೇಕಾಗುತ್ತದೆ ಎನ್ನುವ ಚಿಂತೆ ಶುರುವಾಯ್ತು. ಭಯ ತಾರಕಕ್ಕೆ ಏರುವ ಹೊತ್ತಿಗೆ ಮೆಕ್‌ ಡೊನಾಲ್ಡ್ ಕಣ್ಣಿಗೆ ಬಿತ್ತು. ಅಲ್ಲಿ ಕಾರು ನಿಲ್ಲಿಸಿ ತಿಂದು ತೇಗಿದ್ದಾಯ್ತು.

ವಿಪರ್ಯಾಸ ಎಂದರೆ ಅಲ್ಲಿ ನಮಗೆ ಸಹಕರಿಸಿದ್ದು ಒಬ್ಬ ಪಾಕಿಸ್ತಾನಿ. ಅಲ್ಲಿ ವಾಹನ ಚಾಲನೆ ಮಾಡುವಾಗ ಅನುಸರಿಸುವ ನಿಯಮಗಳ ಬಗ್ಗೆ ಕೂಲಂಕಷವಾಗಿ ಹೇಳಿ, ಅಕ್ಕರೆಯಿಂದ ಬೀಳ್ಕೊಟ್ಟ. ಎಡಕ್ಕೆ ತಿರುಗಲು, ಗ್ರೀನ್ ಸಿಗ್ನಲ್ ಬಿದ್ದ ಮೇಲೂ, ಎದುರು ದಿಕ್ಕಿನಲ್ಲಿದ್ದ ವಾಹನಗಳು ದಾಟುವ ತನಕ ಕಾಯಬೇಕಿತ್ತಂತೆ. ಅಲ್ಲೇ, ನಾವು ತಪ್ಪು ಮಾಡಿದ್ದು. ಎಷ್ಟು ದಂಡ ಕಟ್ಟಬೇಕಾಗುತ್ತದೆಯೋ ಎಂಬ ಭಯ ಬೇರೂರಿತ್ತು. ಆದರೆ ನಿಯಮಗಳನ್ನು ತಿಳಿದ ನಂತರ ಆಕಾಶ್ ಕಣ್ಣಲ್ಲಿ ಧೈರ್ಯ ಮೂಡಿತ್ತು.

ಮುಂದೆ ಕಂಡಿದ್ದೆಲ್ಲ ಸಗ್ಗವೀಡು... ಸಣ್ಣಗೆ ಜಿನುಗುವ ಮಳೆ, ಕುರುಹು ತೋರುವಂತೆ ಗಾಜಿನಿಂದ ಜಾರುವ ಮಳೆಯ ಹನಿಗಳು, ಯಾವುದೋ ನಾಡಲ್ಲಿ ಕನ್ನಡದ ಹಾಡು - ಭುವಿ ಕೆನ್ನೆ ತುಂಬಾ, ಮುಗಿಲು ಸುರಿದ ಮುತ್ತಿನ ಗುರುತು - ಪಸರಿಸಿತ್ತು ಕನ್ನಡದ ಕಂಪು... ಕ್ಷಣಗಳು ನೆನಪಾಗಿ ದಾಖಲಾಗುವ ಮುನ್ನವೇ ಊರು ಬಾ ಎಂದಿತ್ತು.

ಕೋಜಿ - ಅದೊಂದು ಪುಟ್ಟ ಬಣ್ಣದ ಲೋಕ. ನಗರಗಳಾಚೆಗೆ ಯಾರಿಗೂ ಕಾಣದ ಕಾಮನಬಿಲ್ಲಿನಂತೆ ನಿಂತಿದೆ. ಬೆಂಕಿಪೊಟ್ಟಣದಂತೆ ಜೋಡಿಸಿದ ಮನೆಗಳು, ಪ್ರತಿ ನೋಟಕ್ಕೂ ತುಸು ನಗುತ ಸಾಗುವ ಜನ, ತೆರೆದ ಆಕಾಶ, ಮಿನುಗುವ ಭೂರಮೆ, ರಂಗೇರಿ ನಿಂತ ಬಿಂಬಗಳು. ಕಾರು ನಿಲ್ಲಿಸಿ, ಬಟ್ಟೆ ಬದಲಿಸಿ, ರಂಗವಲ್ಲಿಯ ಬಿಡಿಸುವ ತವಕ... ಬಣ್ಣಗಳ ನಡುವೆ ನಮ್ಮದೂ ಒಂದು ಬಣ್ಣ. ಕೆಲವೇ ಕೆಲವು ಪುಟ್ಟ ಪುಟ್ಟ ಬಣ್ಣದ ಮನೆಗಳು, ಸುತ್ತುವರಿದ ಸಮುದ್ರ, ಭಾವನಾತ್ಮಕ ಜನ, ಸಜ್ಜಾಗಿ ನಿಂತ ಸುಂದರ ದಾರಿಗಳು - ನೆಮ್ಮದಿಗೆ ಮತ್ತೊಂದು ಹೆಸರೇ ಕೋಜಿ ಎಂದರೆ ತಪ್ಪಾಗದೇನೋ.

ಪ್ರತಿ ಹೆಜ್ಜೆ ಇಟ್ಟಾಗಲೂ ಪುಳಕ. ಅಲ್ಲಿ ಇಲ್ಲಿ ಕಾಣುವ ಒಬ್ಬಿಬ್ಬರು ಜನ. ಕೆಂಪು, ಕೆಂಪಿನ ಪಕ್ಕ ನೀಲಿ, ಅದರ ಜೊತೆಗೆ ಹಳದಿ, ಅಲ್ಲಲ್ಲಿ ಹಸಿರು, ಮತ್ತೆಲ್ಲೋ ಗುಲಾಬಿ - ಬಣ್ಣ ಬಣ್ಣದ ಮನೆಗಳು - ಬಹುಷಃ ಈ ನಗರ ನಿರ್ಮಿಸಿದ್ದು ಅಂಬೆಗಾಲಿನ ಕಿನ್ನರನೇನೋ! ಪುಟ್ಟ ಪುಟ್ಟ ಹೆಜ್ಜೆಯಿಟ್ಟು, ರಂಗಿನೋಕುಳಿ ಎರಚಿದಂತೆ. ಅಲ್ಲೋ ಇಲ್ಲೋ ಕಾಣುವ ಜನರಿಗೆ ನಾವೇ ಕುತೂಹಲದ ಕೇಂದ್ರ ಬಿಂದು.  ಕೆಲವೊಂದು ಹಾದಿಗಳಲ್ಲಂತೂ ನೀರವತೆ. ಸುಮ್ಮನೆ ನಿಂತರೆ, ಹೆಜ್ಜೆ ಸಪ್ಪಳದಳಲ್ಲೂ ಹಾಡು ಕೇಳೀತು. ಎಲ್ಲ ಗೊಂದಲಗಳನ್ನೂ ಗಂಟು ಮೂಟೆ ಕಟ್ಟಿಟ್ಟು, ಈ ನಗರಿಗೆ ಬಂದು ನೆಲೆಸಿದರಾಯ್ತು. ಬಣ್ಣದ ಲೋಕದಲ್ಲಿ ಸಣ್ಣ ಮನೆಯೊಂದು ಸಾಕು - ಕಣ್ಣ ನೋಟಗಳಲಿ ಕವಿತೆ ಹೊಮ್ಮೀತು.

ಅಲೆದ ಹಾದಿಗಳ ಬಣ್ಣ ಮೈಗಂಟಿದಂತಹ ಅನುಭವ. ಕ್ಯಾಮೆರಾ ಒದ್ದೆಯಾದದ್ದು ತಿಳಿಯಲಿಲ್ಲ. ನಿಂತ ಗಡಿಯಾರದ ಪರಿವೆಯಿಲ್ಲ. ಕಪ್ಪು ಕಾರಿನಿಂದ ಮೈಗೆರಚಿದ್ದ ಕೆಸರು, ಮಳೆಯಲ್ಲಿ ತೋಯ್ದು ಹೋದದ್ದು ಅರಿವಿಗೆ ಬರಲೇ ಇಲ್ಲ. ಮಳೆ ನಿಂತ ಮೇಲೂ, ಛತ್ರಿ ಮುಗಿಲನ್ನು ನೋಡುತ್ತಿತ್ತು. ಹಕ್ಕಿ ಸುಮ್ಮನೆ ಹಾಡುತ್ತಿತ್ತು. ಕೆಂಪು ಮನೆಯ ಕೆಂಗುಲಾಬಿಯ ಕಣ್ಣ ಮೇಲಿನ ಹನಿಯ ಬಿಂಬದಲ್ಲಿ, ಅಂಗಳದಿ ಆಡುತ್ತಿದ್ದ ಮಗುವ ನಗೆಯೊಂದು ಕಾಣುತ್ತಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.