ADVERTISEMENT

ಬಲ್ಲವರ ನೆನಪುಗಳು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2014, 19:30 IST
Last Updated 27 ಡಿಸೆಂಬರ್ 2014, 19:30 IST
ಬಲ್ಲವರ ನೆನಪುಗಳು
ಬಲ್ಲವರ ನೆನಪುಗಳು   

ಕನ್ನಡದ ಶ್ರೀಮಂತ ‘ಮೇಷ್ಟ್ರು ಪರಂಪರೆ’ಯ ಸಾಲಿನಲ್ಲಿ ನೆನಪಿಸಿಕೊಳ್ಳ ಬೇಕಾದ ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ ಕನ್ನಡದ ಪ್ರಸಿದ್ಧ ವಿದ್ವಾಂಸರಲ್ಲೊಬ್ಬರು. ಅವರ 150ನೇ ವರ್ಷದ ಸಂಸ್ಮರಣ ಗ್ರಂಥದ ಬಿಡುಗಡೆ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ‘ಪಂಡಿತರತ್ನಂ ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿಗಳು’ ಕೃತಿಯಲ್ಲಿನ, ಶಾಸ್ತ್ರಿಗಳ ವಿದ್ವತ್ತು ಮತ್ತು ಸಾಧನೆಯನ್ನು ಪರಿಚಯಿಸುವ, ಕೂಡಲಿ ಚಿದಂಬರಂ ಅವರ ಬರಹದ ಆಯ್ದ ಭಾಗಗಳು ಇಲ್ಲಿವೆ.

ಪಂಡಿತ ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿಗಳನ್ನು ಅವರ ಜೀವಿತ ಕಾಲದಲ್ಲಿ ಅರಿಯದಿದ್ದ ಕನ್ನಡಿಗರಿರಲಿಲ್ಲ. ಅವರ ಕೀರ್ತಿ ಕನ್ನಡನಾಡಿನ ಆಚೆಗೂ ಹರಡಿತ್ತೆಂದು ನನ್ನ ನಂಬಿಕೆ. ಆ ಕೀರ್ತಿಗೆ ಮೂಲಾಧಾರ ಆಗಿದ್ದದ್ದು ಅವರ ಕನ್ನಡ-ಸಂಸ್ಕೃತ ಭಾಷಾ ಪಾಂಡಿತ್ಯ; ಮತ್ತು ಆ ಪಾಂಡಿತ್ಯಕ್ಕೆ ಮೆರುಗು ಕೊಡುತ್ತಿದ್ದ ಉದಾರವಾದ ಲೌಕಿಕ ಪ್ರಜ್ಞೆ.

ಶಾಸ್ತ್ರಿಗಳ ಪಾಂಡಿತ್ಯ ಭಾಷಣ ಸಾಮರ್ಥ್ಯಗಳನ್ನು ಮನಸಾರ ಮೆಚ್ಚಿ ಮಾತನಾಡಿಕೊಳ್ಳುತ್ತಿದ್ದರು ಅವರ ವಿದ್ಯಾರ್ಥಿಗಳು. ಅವರ ಕನ್ನಡ ತರಗತಿಗೆ ಯಾವ ವಿದ್ಯಾರ್ಥಿಯೂ ಚಕ್ಕರು ಹೊಡೆಯುತ್ತಿರಲಿಲ್ಲವಂತೆ. ನನ್ನ ಸಹಪಾಠಿಗಳು ಬಗೆಬಗೆಯಾಗಿ ವಿವರಿಸುತ್ತಿದ್ದ ಶಾಸ್ತ್ರಿಗಳ ಭಾಷಣಗಳ ಸೊಗಸಿನ ವರ್ಣನೆಗಳನ್ನು ಕೇಳಿ ಕೇಳಿ ನನ್ನ ಬಾಯಲ್ಲಿ ನೀರೂರಿತ್ತು. ಆದರೆ, ಅವರು ಕನ್ನಡ ಪಂಡಿತರು; ನಾನು ಸಂಸ್ಕೃತ ವಿದ್ಯಾರ್ಥಿ. ಹೀಗಿರುವಾಗ ಅವರ ತರಗತಿಗೆ ಹೋಗಲು ನನಗವಕಾಶವೆಲ್ಲಿ? ನಮ್ಮ ಸಂಸ್ಕೃತ ಪಂಡಿತರೊಂದು ಬಾರಿ ಎರಡು ಮೂರು ದಿನಗಳು ರಜಾ ಹೋದರು. ಅಂಥ ಸಮಯವನ್ನೆ ಕಾಯುತ್ತಿದ್ದ ನಾನೂ ನನ್ನ ಜೊತೆಯ ಒಬ್ಬಿಬ್ಬರು ವಿದ್ಯಾರ್ಥಿಗಳೂ ಕನ್ನಡ ತರಗತಿಗೆ ನುಗ್ಗಿ ವಿದ್ಯಾರ್ಥಿಗಳ ಮಧ್ಯೆ ಹುದುಗಿ ಕುಳಿತೆವು. ಆ ದಿನ ಶಾಸ್ತ್ರಿಗಳು ಯಾವ ಪಾಠ ಹೇಳುತ್ತಿದ್ದರೋ ಈಗ ಜ್ಞಾಪಕವಿಲ್ಲ. ಶಾಸ್ತ್ರಿಗಳು ಪಠ್ಯ ವಿಷಯಕ್ಕೆ ಕಟ್ಟು ಬಿದ್ದ ನೀರಸ ಪಂಡಿತರಲ್ಲ. ಪ್ರಪಂಚದ ವಿಷಯವೆಲ್ಲ ಅವರ ಪಾಠದ ಪಥದಲ್ಲಿ ಸುಳಿಯುತ್ತಿದ್ದವು. ಅಂದು ಕುದುರೆಗಳ ಪ್ರಸ್ತಾವ ಬಂತು.

ಶಾಸ್ತ್ರಿಗಳ ಬಾಯಿಂದ ಮಾತಿನ ಬುಗ್ಗೆ ಅವ್ಯಾಹತವಾಗಿ ಚಿಮ್ಮಿ ಹರಿಯಿತು. ಕುದುರೆ: ‘ಆಚಾರ್ರ ತಟ್ಟು’, ‘ಶೇಕದಾರ್ರ ಟಾಕಣ’, ‘ಅಮಲ್ದಾರರ ಕುದುರೆ’, ಡೆಪ್ಯುಟಿ ಕಮಿಷನರ ‘ಸವಾರಿ ಕುದುರೆ’, ಜಟಕಾ ಕುದುರೆ, ಸಾರೋಟಿನ ಕುದುರೆ, ಪಟ್ಟದ ಕುದುರೆ– ಹೀಗೆ ನಾನಾ ಬಗೆಯ ನಾನಾ ಅಂತಸ್ತಿನ ಕುದುರೆಗಳ ಸಾಮಾನ್ಯ ಚಹರೆ, ನಡವಳಿಕೆ, ಜಾತಿಗುಣ, ಅವುಗಳ ಬೆಳವಣಿಗೆ, ಕಷ್ಟ ಸುಖಗಳು... ಇವೇ ಮುಂತಾದ ವಿಷಯಗಳನ್ನೆಲ್ಲ ಕುರಿತು ತಾವು ಆ ಪ್ರಾಣಿಗಳನ್ನು ಸ್ವತಃ ಸಾಕಿ ಅನುಭವ ಪಡೆದಿರುವವರಂತೆ ವಿವರ ನಿಷ್ಠವಾಗಿ ವರ್ಣಿಸಿದರು. ಈ ಪಂಡಿತರಿಗೆ ಇಷ್ಟೆಲ್ಲ ವಿಷಯ ಹೇಗೆ ತಿಳಿಯಿತೆಂದು ಅಚ್ಚರಿಪಟ್ಟೆವು.

ಶಾಸ್ತ್ರಿಗಳ ಸಾಹಿತ್ಯ ಪಾಂಡಿತ್ಯ ವಿಪುಲವಾದದ್ದಾಗಿತ್ತು. ಪಠ್ಯ ಕಾವ್ಯದಲ್ಲಿ ಯಾವ ವರ್ಣನೆ ಸನ್ನಿವೇಶ ಸಂದರ್ಭಗಳು ಬರಲಿ, ಅವುಗಳಿಗೆ ಸದೃಶವಾದ ವರ್ಣನೆ ನಿದರ್ಶನಗಳನ್ನು ಇತರ ಕನ್ನಡ ಕಾವ್ಯಗಳಿಂದ, ವ್ಯಾಸ ವಾಲ್ಮೀಕಿ ಕಾಳಿದಾಸ ದಂಡಿ ಬಾಣ ಭವಭೂತಿ ಭಾರವಿ ಮೊದಲಾದ ಸಂಸ್ಕೃತ ಕವಿಗಳಿಂದ, ಉದಾಹರಿಸಿ ವಿಷಯವಿವರಣೆ ಮಾಡುತ್ತಿದ್ದರು.
ಶಾಸ್ತ್ರಿಗಳು ವಾದದಲ್ಲಿ, ಯುಕ್ತಿವಾದದಲ್ಲಿ, ಗಟ್ಟಿಗರು, ಚತುರರು. ರಾಜತಂತ್ರದ ದೃಷ್ಟಿಯಿಂದ ದುರ್ಯೋಧನನ ನಡೆವಳಿಕೆಗಳು ಸಮರ್ಥನೀಯವೆಂದು ಒಮ್ಮೆ ಸಮಂಜಸವಾಗಿ ವಾದಿಸುವರು. ಮರುದಿನ, ಧರ್ಮಸೂಕ್ಷ್ಮಗಳನ್ನು ವಿವೇಚನೆ ಮಾಡಿ ಜಗದ್ಧಿತ ದೃಷ್ಟಿಯನ್ನು ವಿವರಿಸಿ ಅವನ ನೀತಿಯನ್ನು ಖಂಡಿಸಿ ವ್ಯಾಸರ ಧರ್ಮಾಭಿಮಾನವನ್ನು ಕೊಂಡಾಡುವರು. ಹೀಗೆ ಅವರ ಪಾಠಗಳು ವಿದ್ಯಾರ್ಥಿಗಳಿಗೆ ಬೋಧಪ್ರದವಾಗಿಯೂ ಅವರ ಬುದ್ಧಿಗೆ ಒಂದು ವ್ಯಾಯಾಮದಂತೆಯೂ ಇರುತ್ತಿದ್ದವು.

ಶಾಸ್ತ್ರಿಗಳ ಜೀವನ ವಿಚಾರಗಳನ್ನು ಅವರ ಒಡನಾಡಿಗಳಾಗಿದ್ದವರು ಯಾರಾದರೂ ಗುರುತಿಸಿ ಇಟ್ಟಿದ್ದರೆ ಚೆನ್ನಾಗಿತ್ತು; ಎಷ್ಟೋ ಸ್ವಾರಸ್ಯವಾದ ಸಂಗತಿಗಳು ತಿಳಿದುಬರುತ್ತಿದ್ದವು. ಏಕೆಂದರೆ, ಶಾಸ್ತ್ರಿಗಳದು ರಸಜೀವನ. ಅವರು ರಸಿಕರು. ಅವರ ಬದುಕು ರಸಮಯವಾದ ಸನ್ನಿವೇಶಗಳಿಂದ ಕೂಡಿದ್ದಾಗಿತ್ತು. ಆದರೆ, ನಮ್ಮ ದೇಶದ ಎಂದಿನ ಪದ್ಧತಿಯಂತೆ ಅವರ ಜೀವನ ವೃತ್ತವನ್ನು ಸಂಗ್ರಹಿಸುವ ಕೆಲಸವನ್ನು ಯಾರೂ ಮಾಡಲಿಲ್ಲ. ಶಾಸ್ತ್ರಿಗಳ ತೈಲಚಿತ್ರವೊಂದನ್ನು ಅವರ ಮಕ್ಕಳಾದ ಶ್ರೀ ಎಸ್.ಎಸ್. ಕುಕ್ಕೆಯವರು ಬರೆದು ಶಿವಮೊಗ್ಗೆಯ ಕರ್ಣಾಟಕ ಸಂಘಕ್ಕೆ ದಯಪಾಲಿಸಿದರು. ಚಿತ್ರದ ಅನಾವರಣೋತ್ಸವ ಸಮಯದಲ್ಲಿ ಶಾಸ್ತ್ರಿಗಳನ್ನು ಕುರಿತು ನಾಲ್ಕು ಮಾತನಾಡಬೇಕಾದ ಕರ್ತವ್ಯ ನಾನು ಅವರಲ್ಲಿ ಬಳಕೆಯಾಗಿದ್ದುದರಿಂದ-ನನ್ನ ಪಾಲಿಗೆ ಬಿತ್ತು. ಆ ಸಂದರ್ಭದಲ್ಲಿ, ಅವರ ಜೀವನಕ್ಕೆ ಸಂಬಂಧಪಟ್ಟ ಕೆಲವು ಸ್ಥೂಲಾಂಶಗಳನ್ನು ಅವರಿಂದಲೆ ಸಂಗ್ರಹಿಸಿದೆ.

ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿಗಳು 26-6-1865ರಲ್ಲಿ, ಈಗ ನರಸಿಂಹರಾಜಪುರವೆಂದು ಕರೆಯಲ್ಪಡುವ ಎಡೇಹಳ್ಳಿಯಲ್ಲಿ ಹುಟ್ಟಿದರು. ಎಡೇಹಳ್ಳಿ ಮಲೆನಾಡು ಪ್ರದೇಶ. ಮಲೆನಾಡು ಪ್ರಕೃತಿ ಸೌಂದರ್ಯದ ಬೀಡು. ಶಾಸ್ತ್ರಿಗಳು ಬಾಲ್ಯದಿಂದಲೂ ಪ್ರಕೃತಿಸೌಂದರ್ಯವನ್ನು ಸವಿದವರು. ಆ ಸೌಂದರ್ಯಾನುಭವದ ಫಲವನ್ನು ಅವರ ಜೋಗದ ಜಲಪಾತ, ಕೆಮ್ಮಣ್ಣ ಗುಂಡಿ, ಬೃಂದಾವನ, ನಮ್ಮ ಮಲೆನಾಡು, ವಿಜಯನಗರ ಮೊದಲಾದ ಕನ್ನಡ ಸಂಸ್ಕೃತ ಕೃತಿಗಳಲ್ಲಿ ಕಾಣಬಹುದು.

ಶಾಸ್ತ್ರಿಗಳ ಬಾಲ್ಯ ವಿದ್ಯಾಭ್ಯಾಸ ಶಿವಮೊಗ್ಗೆಯಲ್ಲಿ ನಾಡಿಗರ ಪಂತರ ಮಠದಲ್ಲಿ ನಡೆಯಿತು. ಶಿಷ್ಟಾಚಾರ ಸಂಪನ್ನರಾದ ಅವರ ತಂದೆ ತಾಯಿಗಳು ಮಗನ ಮೇಧಾಶಕ್ತಿಯನ್ನು ಕಂಡುಕೊಂಡು ಗರ್ಭಾಷ್ಟಮದಲ್ಲಿ ಉಪನಯನೋತ್ಸವವನ್ನು ನಡೆಸಿ, ನರಸಿಂಹರಾಜಪುರದಲ್ಲಿ ವೇದಾಧ್ಯಯನಾದಿ ವಿದ್ಯಾಭ್ಯಾಸಕ್ಕೆ ಏರ್ಪಾಡು ಮಾಡಿದರು. ಸಾಹಿತ್ಯ ವ್ಯಾಸಂಗವೂ ಅದರ ಜೊತೆಯಲ್ಲಿ ನಡೆಯಿತು. ಹದಿಮೂರು ವರ್ಷಗಳ ಕಾಲ ಶ್ರೀ ಶಾರದಾ ಸನ್ನಿಧಿಯಲ್ಲಿ ವಿದ್ಯಾಭ್ಯಾಸದ ತಪಸ್ಸನ್ನು ಆಚರಿಸಿ ಶಾಸ್ತ್ರಿಗಳು ದೇಶ ಸಂಚಾರವನ್ನು ಕೈಕೊಂಡರು. ಪುಸ್ತಕ ವಿದ್ಯೆಗೆ ಜೀವಕಳೆಯನ್ನು ತಂದುಕೊಡತಕ್ಕದ್ದು ಲೋಕವ್ಯವಹಾರಜ್ಞಾನ. ಲೋಕ ಪರಿಜ್ಞಾನದ ಸಂಪಾದನೆಗೆ ವಿಶೇಷ ಸಹಕಾರಿಯಾದದ್ದು ದೇಶ ಪರ್ಯಟನ. ಈ ಪರ್ಯಟನವನ್ನು ಮುಗಿಸಿಕೊಂಡು ಶಿವಮೊಗ್ಗೆಗೆ ಹಿಂದಿರುಗಿ, ಇವರ ಬರವನ್ನೇ ನಿರೀಕ್ಷಿಸುತ್ತಿದ್ದ ತಂದೆತಾಯಿಗಳ ಮತ್ತು ಪಿತಾಮಹ ಪಿತಾಮಹಿಯರ ದರ್ಶನಾಶೀರ್ವಾದಗಳನ್ನು ಪಡೆದು ಅವರ ಸೇವೆಯಲ್ಲಿ ನಿರತರಾದರು.

ಶಿವಮೊಗ್ಗೆಯ ಕಾಲೇಜಿನಲ್ಲಿ ಸಂಸ್ಕೃತ ಪಂಡಿತರಾಗಿ ನೇಮಕವಾದರು. ಕಾಲಾನಂತರದಲ್ಲಿ, ಶಿವಮೊಗ್ಗೆಯಿಂದ ಕಾಲೇಜನ್ನು ತೆಗೆದಮೇಲೆ ಶಾಸ್ತ್ರಿಗಳು ಅದೇ ಸ್ಥಳದ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾದರು. ಅವರ ಕನ್ನಡದ ವ್ಯಾಸಂಗಕ್ಕೆ ಅದೇ ಮೊದಲಾಯಿತು. ಅಂದಿನಿಂದ, ಕೆಲಸದಿಂದ ನಿವೃತ್ತರಾಗುವವರೆಗೂ ಅವರು ಕನ್ನಡ ಪಂಡಿತರಾಗಿ ಕೆಲಸ ಮಾಡಿದರು. ಒಟ್ಟಿನಲ್ಲಿ ಮುವ್ವತ್ತೇಳು ವರ್ಷಗಳ ಕಾಲ ಸರಕಾರದಲ್ಲಿ ಶಿಕ್ಷಣವೃತ್ತಿಯ ಸೇವೆಯನ್ನು ಸಲ್ಲಿಸಿದರು.
ಉದ್ಯೋಗದಿಂದ ವಿಶ್ರಾಂತರಾದ ಮೇಲೆ ಶಾಸ್ತ್ರಿಗಳು ಸುಮ್ಮನೆ ಕಾಲ ಕಳೆಯಲಿಲ್ಲ. ಸಂಸ್ಕೃತದಿಂದ ಮೇಘಸಂದೇಶ, ಕಿರಾತಾರ್ಜುನೀಯ ಮೊದಲಾದ ಕೆಲವು ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು. ಸಂಸ್ಕೃತ ಕನ್ನಡ ಭಾಷೆಗಳಲ್ಲಿ ಕೆಲವು ಕೃತಿಗಳನ್ನು ಸ್ವತಂತ್ರವಾಗಿಯೂ ರಚಿಸಿದರು.

ಅವರು ಶಿವಮೊಗ್ಗೆಯ ಕರ್ಣಾಟಕ ಸಂಘದ ಅಧ್ಯಕ್ಷರಾದಾಗ– ಕನ್ನಡ ಪುನರುತ್ಥಾನದ ಚಳವಳಿಯ ಸಂಕೇತವಾದ ಕರ್ಣಾಟಕ ಸಂಘಕ್ಕೆ ಹಳೆಯ ಕಾಲದ ಪಂಡಿತರನ್ನು ಅಧ್ಯಕ್ಷರನ್ನಾಗಿ ಆರಿಸಿಕೊಳ್ಳುವುದೆ? ಸಂಘ ಹೇಗೆ ಮುಂದುವರಿದೀತು? ಎಂಬ ಸಂದೇಹ ಬಹು ಮಂದಿಗೆ. ಶಾಸ್ತ್ರಿಗಳ ಭಾಷಾಭಿಮಾನವನ್ನೂ ಲೌಕಿಕ ಪ್ರಜ್ಞೆಯನ್ನೂ ಅರಿತವರಿಗೆ ಆ ಬಗೆಯ ಸಂಶಯಕ್ಕೆ ಕಾರಣವಿಲ್ಲ. ಶಾಸ್ತ್ರಿಗಳ ಕನ್ನಡದ ಅಭಿಮಾನ ಸಣ್ಣಪುಟ್ಟ ಕುಂದುಕೊರತೆಗಳನ್ನು ಮೀರಿ ನಿಲ್ಲುವಷ್ಟು ಶಕ್ತವಾಗಿತ್ತು. ದೇಹಾರೋಗ್ಯ ಸರಿಯಾಗಿ ಇರುವವರೆಗೂ ಕರ್ಣಾಟಕ ಸಂಘದ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸಿ, ಸಂಘಕ್ಕೆ ದಯಮಾಡಿ ಸಿದ ಅತಿಥಿಗಳನ್ನು ಆದರ ವಿಶ್ವಾಸಗಳಿಂದ ಬರಮಾಡಿಕೊಳ್ಳುತ್ತಿದ್ದರು. ತಮ್ಮ ವಿದ್ವತ್ತಿನಿಂದಲೂ ಉದಾರ ನೀತಿಯಿಂದಲೂ ಕರ್ಣಾಟಕ ಸಂಘಕ್ಕೆ ಅವರೊಂದು ಭೂಷಣವಾಗಿ ಶೋಭಿಸಿದರು.

1931ರಲ್ಲಿ ಪ್ರಕಟವಾದ ಅವರ ಕನ್ನಡ ಮೇಘಸಂದೇಶ ಕೃತಿ ಪ್ರಕಟವಾದ ಕೆಲವು ತಿಂಗಳುಗಳಲ್ಲಿಯೇ ಅದು ಆಳಿದ ಮಹಾಸ್ವಾಮಿಯವರಾದ ಶ್ರೀ ಕೃಷ್ಣರಾಜ ಒಡೆಯರವರ ಗಮನಕ್ಕೆ ಬಂತು. 1933ರ ಬೇಸಗೆಯಲ್ಲಿ ಪ್ರಭುಗಳು ಕೆಮ್ಮಣ್ಣಗುಂಡಿಗೆ ವಿಹಾರಾರ್ಥವಾಗಿ ಬಂದಾಗ ಶಾಸ್ತ್ರಿಗಳನ್ನು ಬರಮಾಡಿಕೊಂಡರು. ಶಾಸ್ತ್ರಿಗಳಿಗದು ಅನಿರೀಕ್ಷಿತವಾದ ಕರೆಯಾಗಿತ್ತು. ಸಾಹಿತ್ಯ, ಧರ್ಮ, ವೇದಾಂತ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರಭುಗಳು ಪ್ರಶ್ನೆಗಳನ್ನು ಎತ್ತಿ ಶಾಸ್ತ್ರಿಗಳ ವ್ಯಾಖ್ಯಾನಗಳನ್ನು ಕೇಳಿ ಮೆಚ್ಚಿಕೊಂಡರು. ಅದೇ ವರ್ಷದ ನವರಾತ್ರಿಯಲ್ಲಿ ಮೈಸೂರಿಗೆ ದರ್ಬಾರಿಗೆ ಬರಮಾಡಿಕೊಂಡು ‘ಆಸ್ಥಾನ ಮಹಾವಿದ್ವಾನ್’ ಎಂಬ ಬಿರುದನ್ನೂ ಖಿಲ್ಲತ್ತುಗಳನ್ನೂ ಕೊಟ್ಟು ಶಾಸ್ತ್ರಿಗಳನ್ನು ಗೌರವಿಸಿದರು.

ತರ್ಕ ವೇದಾಂತ ಸಾಹಿತ್ಯ ವ್ಯಾಕರಣಾದಿ ಶಾಸ್ತ್ರಗಳಲ್ಲದೆ ಜ್ಯೋತಿಷ ನೀತಿ ಧರ್ಮಶಾಸ್ತ್ರಗಳಲ್ಲಿಯೂ ಶಾಸ್ತ್ರಿಗಳಿಗೆ ಪರಿಶ್ರಮವಿತ್ತು. ಜ್ಯೋತಿಷ ಸಮ್ಮೇಳನವೊಂದಕ್ಕೆ ಅವರು ಅಧ್ಯಕ್ಷರಾಗಿದ್ದರು. ಜ್ಯೋತಿಷವೃತ್ತಂ ಎಂಬ ಕೃತಿಯೊಂದನ್ನೂ ರಚಿಸಿರುವಂತೆ ತೋರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT