ADVERTISEMENT

ಬುದ್ಧನ ಭಿಕ್ಷಾಪಾತ್ರೆ

ಕವಿತೆ

ಡಾ.ಬಸವರಾಜ ಸಾದರ
Published 10 ಮೇ 2014, 19:30 IST
Last Updated 10 ಮೇ 2014, 19:30 IST

ಸರ್ವಸಂಗ ಪರಿತ್ಯಾಗಿಗೇಕೆ ಅನ್ನದ ಹಂಗು?
–ಪ್ರಶ್ನೆ ಕೇಳಲಾಗದು.
ಜಠರಾಗ್ನಿಗನ್ನಾಹಾರವಿಲ್ಲದಿರೆ ಬದುಕಿದ್ದೀತೆ ಭೌತಯಂತ್ರ?
ಸತ್ಯ ತಿಳಿದ ಭಿಕ್ಷಾಪಾತ್ರೆ ಬುದ್ಧನ ಜೊತೆ
ಬದ್ಧವಾಯ್ತು ಉಸಿರಿರುವವರೆಗೂ
ಜೀವ ಜತನದ ಜವಾಬ್ದಾರಿ ಹೊತ್ತು.

ಅಲ್ಲ ಈ ಭಿಕ್ಷಾಪಾತ್ರೆ ಮಂತ್ರದಕ್ಷಯಪಾತ್ರೆ;
ಯಾಚಿಸುತ್ತಲಲೆವ ತಿರುಪೆ ತಟ್ಟೆಯೂ ಅಲ್ಲ.
ಬೇಡದ ಭಿಕ್ಷಾಗೌರವಕ್ಕೆ
ನೀಡುವ ನಿರ್ಲಿಪ್ತ ಮನಸ್ಸುಗಳ
ಪ್ರೀತಿಯನ್ನ ಮಾತ್ರ ಪಡೆವ ಜೀವದಾಯಿ.

ನಿತ್ಯ ಶುಚಿ, ಥಳ ಥಳ.
ತೆರೆದಿಟ್ಟಾಗ ಮಾತ್ರ ದೊರಕುವ
ಹಿಡಿಯನ್ನವಷ್ಟನ್ನೇ ಉಂಬ ನೇಮ,
ಹಸಿದ ಹೊಟ್ಟೆಗೆ.
ತುಂಬಲೇಬೇಕೆಂಬ ಆಶೆಯಪೇಕ್ಷೆಯಿಲ್ಲ–
ಹೊಟ್ಟೆ, ಭಿಕ್ಷಾಪಾತ್ರೆ– ಎರಡೂ,
ನಾಳೆ ನಾಡದ್ದಿಗೂ ನಿರ್ಲಿಪ್ತ.
ಉಂಡು, ತೊಳೆದು ಝಳ ಝಳ
ಬೋರಲು ಹಾಕಿದರೆ ಮುಗಿಯಿತು,
ಮರುದಿನವೇ ಮತ್ತೆ ತೆರೆದುಕೊಳ್ಳುವ
ಶುದ್ಧ ಕಾಯಕ ಕ್ರಮ.
ಅಂದಂದಿನನ್ನ ಅಂದಂದೇ ಸಂದು
ಮುಂದೆಂದಿಗೂ ಕೂಡಿಡದ
ಭಾಷೆಯ ಬುದ್ಧನನ್ನದ ಪಾತ್ರೆ,
ಭೂತ-ವರ್ತಮಾನ-ಭವಿಷ್ಯದ
ಜಗಕೆಲ್ಲ ಸುಭಿಕ್ಷಾಯಾತ್ರೆ.

ADVERTISEMENT

ಬರಲಿ ಎಲ್ಲರ ಕೈಗೆ
ನಾಳೆಗನ್ನದ ಪಾಠವಾಗುವ
ಬುದ್ಧನ ಭಿಕ್ಷಾಪಾತ್ರೆ;
ಕೋಟಿ, ಕೋಟಿ ಕೊಳ್ಳೆ ಹೊಡೆವ
ರಣಹಸಿವಿನಾಶೆಯ
ಭಂಡ–ಭ್ರಷ್ಟರ ಕೈಗೆ ಮೊದಲು.

ಪರಿಗ್ರಹದಪಾಯಕ್ಕೆ
ಪ್ರತಿಪಲ್ಲವಿಸಲೇಬೇಕು ವಿಶ್ವಸಮುದಾಯ,
ಹಸಿವಿಗನ್ನಬೇಕು ಕೊನೆ ವಿದಾಯ,
ಬುದ್ಧಂ ಶರಣಂ ಗಚ್ಛಾಮಿ – ಇದೇ ಉಪಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.