ಕರ್ನಾಟಕ ಜನಾಂಗದ ಮೊತ್ತಮೊದಲ ಬರಹ ಭಾಷೆ, ಪ್ರಾಕೃತ; ಲಿಪಿ, ಬ್ರಾಹ್ಮೀ.
ಇಲ್ಲಿಯ ಜನಾಂಗಕ್ಕೆ ಇವನ್ನು ಪರಿಚಯಿಸಿದವನು, ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಪಾಟಲೀಪುತ್ರ (ಬಿಹಾರ ರಾಜ್ಯ)ದಿಂದ ಆಳುತ್ತಿದ್ದ ಮೌರ್ಯಚಕ್ರವರ್ತಿ ಅಶೋಕ. ಒಂದು ಭಾಷೆ ಮತ್ತು ಒಂದು ಲಿಪಿಯ ಮೂಲಕ ಈತನು ಬೆಸೆದ ದಖ್ಖಣವು ಸುಮಾರು ಆರು ಶತಮಾನಗಳ ಕಾಲ (ಕ್ರಿ.ಪೂ. 3ರಿಂದ ಕ್ರಿ.ಶ. 3ರವರೆಗೆ) ಈ ಮಾಧ್ಯಮಗಳ ಮೂಲಕವೇ ಸಂಭಾಷಿಸಿತು. ಯಾರು ಯಾವುದರ ಬಗ್ಗೆ ಏನನ್ನು ಹೇಳಬೇಕಾದರೂ ಇವನ್ನು ಬಳಸಲೇಬೇಕಾಗಿತ್ತು. ತನ್ನ ರಾಜಾಜ್ಞೆಗಳನ್ನು ಕೆಳದಖ್ಖಣಿಗರಿಗೆ ತಲುಪಿಸಲು ಇಂದಿನ ಕರ್ನಾಟಕ ಪ್ರದೇಶಕ್ಕೆ ವಿಶೇಷ ಪ್ರಾಶಸ್ತ್ಯ ಕೊಟ್ಟು ಅಶೋಕನು ಏಳು ಕೇಂದ್ರಗಳಲ್ಲಿ ಕಿರುಬಂಡೆ ಶಾಸನಗಳನ್ನು, ಒಂದರಲ್ಲಿ ವಿಶೇಷ ಶಾಸನವನ್ನು ಬರೆಸಿದ್ದನು. ಆತನು ದೇಶಾದ್ಯಂತ ಬರೆಸಿದ ಮೊದಲ ವರ್ಗದ ಶಾಸನಗಳಲ್ಲಿ ಇವು ಪ್ರತಿಶತ ಐವತ್ತು (ಅಂದರೆ ಒಟ್ಟು ಅರ್ಧದಷ್ಟು) ಆಗಿವೆ.
ಈ ಹಿನ್ನೆಲೆಯಲ್ಲಿ ಕೆಳದಖ್ಖಣದ ಪ್ರಾಕೃತ ಭಾಷಾಚರಿತ್ರೆಯನ್ನು ರಚಿಸಲು ಪ್ರಯತ್ನಿಸಿದರೆ, ಬರಹವು ಬಳಕೆಗೆ ಬಂದಂದಿನಿಂದ ಸುಮಾರು ಅರ್ಧಸಹಸ್ರಮಾನಕ್ಕೂ ಹೆಚ್ಚು ಕಾಲ ಅದನ್ನು ಸಮರ್ಥವಾಗಿ ಬಳಸಿದವರು ಜೈನರಿಗಿಂತ ಬೌದ್ಧರು ಎಂಬ ಸತ್ಯ ಹೊರಹೊಮ್ಮುವುದು. ಆಂಧ್ರಪ್ರದೇಶದಲ್ಲಿ ಈವರೆಗೂ ದೊರಕಿರುವ ಸುಮಾರು 600 ಕಲ್ಬರಹಗಳು (ಇವುಗಳಲ್ಲಿ 200 ಧಾನ್ಯಕಟಕ ಅಥವಾ ಅಮರಾವತಿಯಲ್ಲಿವೆ), ಕರ್ನಾಟಕದಲ್ಲಿ ದೊರಕಿರುವ ಸುಮಾರು 350 ಕಲ್ಬರಹಗಳು (ಇವುಗಳಲ್ಲಿ 270 ಕನಗನಹಳ್ಳಿಯಲ್ಲಿವೆ) ಬೌದ್ಧರವಾಗಿವೆ.
ಅಕ್ಷರಸಮಾಜದ ನಿರ್ಮಾಣ
ಅಶೋಕನ ಕಾಲದಲ್ಲಿ ಪ್ರಾರಂಭವಾದ ಪ್ರಾಕೃತ ಬರವಣಿಗೆಗಳು ಕ್ರಿಸ್ತಶಕದ ಆರಂಭದಲ್ಲಿ ಉತ್ತರ ಕರ್ನಾಟಕದ ಬಹುಭಾಗವನ್ನು ವ್ಯಾಪಿಸಿ, ಪ್ರಾಕೃತ ಭಾಷಾ ನಕಾಶೆಯನ್ನು ನಿರ್ಮಿಸಿದವು. ಅವು ದಕ್ಷಿಣ ಕನ್ನಡದ ಬನವಾಸಿ, ಬೆಳಗಾವಿಯ ವಡಗಾವ್–ಮಾಧವಪುರ, ಧಾರವಾಡದ ವಾಸನ್, ಬಳ್ಳಾರಿಯ ಹಂಪಿ, ಹುರುಸಗಂಧಿ, ಹಿರೇಹಡಗಲಿ, ಕಲಬುರ್ಗಿಯ ಸಣ್ಣತಿ, ಕನಗನಹಳ್ಳಿ, ಜೇವರ್ಗಿ, ಬೆಳ್ವಾಡಿಗಿ, ಮತ್ತು ಶಿವಮೊಗ್ಗೆಯ ಮಳವಳ್ಳಿಯನ್ನು ಒಳಗೊಂಡಿದ್ದವು.
ಉತ್ತರ ಭಾರತದ ಬಹುತೇಕ ಪ್ರಾಕೃತ ನುಡಿಗಟ್ಟುಗಳು ಇಲ್ಲಿ ಸಮಾಗಮಗೊಂಡದ್ದು ಈ ಅಕ್ಷರಸಮಾಜದ ವಿಶೇಷತೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಮಗಧಿ, ಅರ್ಧಮಾಗಧಿ, ಶೌರಸೇನಿ, ಮಹಾರಾಷ್ಟ್ರಿ ಮತ್ತು ಪೈಶಾಚಿ ಪ್ರಾಕೃತಗಳು. ಸಣ್ಣತಿ ಮತ್ತು ಕನಗನಹಳ್ಳಿ ಶಾಸನಗಳಲ್ಲಿ ಮಗಧಿ, ಮಹಾರಾಷ್ಟ್ರಿ ಮತ್ತು ಪಾಲಿ ಪ್ರಾಕೃತಗಳ ಪ್ರಭಾವವನ್ನು ಗುರುತಿಸಲಾಗಿದೆ.
ಭಾಷಾ ಸ್ಥಿತ್ಯಂತರದ ಕಾಲ
ಕ್ರಿ.ಪೂ. 6ನೇ ಶತಮಾನದ ಸುಮಾರಿನಲ್ಲಿ ತಮ್ಮ ತಮ್ಮ ತತ್ತ್ವಗಳನ್ನು ಹಂಚಿಕೊಳ್ಳಲು ಪ್ರಜ್ಞಾಪೂರ್ವಕವಾಗಿಯೇ ಪ್ರಾಕೃತವನ್ನು ಆಯ್ಕೆಮಾಡಿಕೊಂಡಿದ್ದ ಗೌತಮ ಬುದ್ಧ, ವರ್ಧಮಾನ ಮಹಾವೀರ ಮತ್ತು ಮೊಖ್ಖಲಿ ಗೋಸಾಲರ ಕಾಲಾನಂತರದ ಅನುಯಾಯಿಗಳು, ತಮ್ಮ ಮತಪ್ರವರ್ತಕರು ಅನುಮೋದಿಸಿದ ಭಾಷೆಯನ್ನು ಕ್ರಿಸ್ತಶಕದ ಆರಂಭದಲ್ಲಿ ಭಾಗಶಃ ಕೈಬಿಟ್ಟು, ಸಂಸ್ಕೃತಭಾಷೆಯಲ್ಲಿ ವ್ಯವಹರಿಸತೊಡಗಿದ್ದು ಭಾಷಾ ಇತಿಹಾಸದ ಅಚ್ಚರಿಯ ತಿರುವುಗಳಲ್ಲೊಂದು. ದಕ್ಷಿಣದಲ್ಲಿ ನೆಲೆಕಂಡುಕೊಂಡಿದ್ದ ಆಜೀವಿಕರು ಸ್ವತಂತ್ರವಾಗಿ ಶಾಸನಗಳನ್ನು ಬರೆಸಲಿಲ್ಲ, ಆದರೆ ಈ ಸಮಾಜದ ಮುಖ್ಯ ಅಂಗವಾಗಲಿದ್ದ ಹಾಗೂ ಬರವಣಿಗೆಯ ಕ್ಷೇತ್ರದಲ್ಲಿ ವೈದಿಕರಿಗಿಂತ ಒಂದು ಹಂತದಲ್ಲಿ ಮುಂದಿದ್ದ ಜೈನರಿಗೆ ಈ ಮಾತು ಅನ್ವಯವಾಗುವುದಿಲ್ಲ. ಆದರೂ ಕ್ರಿ.ಶ. ಮೊದಲರ್ಧ ಸಹಸ್ರಮಾನದಲ್ಲಿ ದಖ್ಖಣದ ಜೈನರು ಬಹುತೇಕ ನಿಷ್ಕ್ರಿಯರಾಗಿದ್ದು, ಶಾಸನಗಳನ್ನು ಬರೆಸದಿರುವುದು ಕುತೂಹಲಕರ ಸಂಗತಿ. ಇದೇನೇ ಇದ್ದರೂ, ಸಂಸ್ಕೃತೀಕರಣ ಪ್ರಕ್ರಿಯೆ ದಖ್ಖಣದಲ್ಲಿ ಪ್ರಾರಂಭವಾದದ್ದು ಸಂಸ್ಕೃತಭಾಷೆಯನ್ನು ಮೊದಲು ಪ್ರಬಲವಾಗಿ ತಿರಸ್ಕರಿಸಿದ್ದ ಬುದ್ಧನ ಅನುಯಾಯಿಗಳಿಂದ, ಮತ್ತು ಇದಕ್ಕೆ ವೇದಿಕೆ ದೊರಕಿದ್ದು ಪ್ರಸಿದ್ಧ ಬೌದ್ಧಕೇಂದ್ರಗಳಲ್ಲಿ ಎಂಬುದು ಗಮನಾರ್ಹ.
ಈ ಭಾಷಾ ಸ್ಥಿತ್ಯಂತರದ ಹಂತಗಳು ಕುತೂಹಲಕರವಾಗಿದ್ದು, ಅವುಗಳಲ್ಲಿ ಎರಡು ವಿಶೇಷ ಗಮನ ಸೆಳೆಯುವವು:
1. ಪ್ರಾಕೃತವನ್ನು ಸತತವಾಗಿ ದೂರವಿಡುತ್ತಾ ಬಂದಿದ್ದ ವೈದಿಕರು ಕ್ರಿ.ಶ. 3–4ನೇ ಶತಮಾನಗಳಲ್ಲಿ ಈ ಭಾಷೆಯನ್ನೇ ತಮ್ಮ ಅಭಿವ್ಯಕ್ತಿಗೆ ಆಯ್ಕೆ ಮಾಡಿಕೊಳ್ಳುವುದು.
2. ಮೊದಲಿನಿಂದಲೂ ಛಂದಃಮಾಧ್ಯಮವನ್ನು ದೂರವಿಟ್ಟು ವ್ಯವಹರಿಸಿದ್ದ ಬೌದ್ಧರು ಮತ್ತು ಜೈನರು ಈ ಮಾಧ್ಯಮದಲ್ಲಿಯೇ ವ್ಯವಹರಿಸಲಾರಂಭಿಸುವುದು.
ಬಹುಕಾಲ ಬರವಣಿಗೆಯನ್ನು ನಿರ್ಲಕ್ಷಿಸಿದ್ದ ವೈದಿಕರು ಸುಮಾರು ಕ್ರಿಸ್ತಶಕದ ಹೊರಳಿನಲ್ಲಿ ಅದರ ಆವಶ್ಯಕತೆಯನ್ನು ಮನಗಂಡಾಗ ತಮ್ಮ ಅಪೌರುಷೇಯ ಅಥವಾ ದೇವಭಾಷೆಗೆ ಸ್ವಂತ ಲಿಪಿ ಇಲ್ಲದಿರುವ ಕೊರತೆಯನ್ನು ಕಂಡುಕೊಂಡರು. ಈ ಹಂತದಲ್ಲಿ ಅವರು ಎದುರಿಸಿದ ಎರಡು ಸಂದಿಗ್ಧತೆಗಳೆಂದರೆ, ಸುಮಾರು ಅರ್ಧಸಹಸ್ರಮಾನ ಪ್ರಾಕೃತದೊಡನೆ ಗುರುತಿಸಿಕೊಂಡಿದ್ದ ಬ್ರಾಹ್ಮೀಲಿಪಿಯನ್ನು ತಮ್ಮ ಮಾಧ್ಯಮವನ್ನಾಗಿ ಮಾಡಿಕೊಳ್ಳಬೇಕಾದದ್ದು ಮತ್ತು ದೈನಂದಿನ ವ್ಯವಹಾರಕ್ಕೆ – ವಿಶೇಷವಾಗಿ ಶಾಸನಬರಹಕ್ಕೆ – ಬೇಕಾದ ಮಾದರಿಗಳನ್ನು ಆ ಪೂರ್ವದ ಪ್ರಾಕೃತ ಬರಹಗಳಿಂದ ಪಡೆದುಕೊಳ್ಳಬೇಕಾದದ್ದು.
ಪ್ರಾದೇಶಿಕ ಪರಿಸರದಲ್ಲಿ ಈ ಬೆಳವಣಿಗೆಯನ್ನು ನೋಡುವುದಾದರೆ, ಕರ್ನಾಟಕದಲ್ಲಿ ಇದು ಪ್ರಾರಂಭವಾಗುವುದು ಶಿವಮೊಗ್ಗ ಜಿಲ್ಲೆಯ ಮಳವಳ್ಳಿಯಲ್ಲಿ. ಸ್ಥಳೀಯ ಮಳಪಳಿ ದೇವರಿಗೆ ಶಿವಾಲಯವೊಂದನ್ನು ಕಟ್ಟಿಸಿ, ಕೌಂಡಿನ್ಯಗೋತ್ರದ ಕೌಶಿಕಪುತ್ರ ನಾಗದತ್ತನೆಂಬ ಬ್ರಾಹ್ಮಣನಿಗೆ ಭೂದತ್ತಿ ಕೊಟ್ಟು, ಈ ವಿವರಗಳನ್ನೊಳಗೊಂಡ ಶಾಸನವನ್ನು ಪ್ರಾಕೃತ ಭಾಷೆಯಲ್ಲಿ ಬರೆಸುವುದರೊಂದಿಗೆ. ಇದು ಸಂಭವಿಸಿದ್ದು ಕ್ರಿ.ಶ. 3–4ನೇ ಶತಮಾನಗಳಲ್ಲಿ.
ಪ್ರಾದೇಶಿಕ ಭಾಷೆಯ ಪ್ರಸ್ತುತತೆ
ಕ್ರಿ.ಪೂ. ಸುಮಾರು 6ನೇ ಶತಮಾನದ ಅವೈದಿಕ ಮತಪ್ರವರ್ತಕರು (ಇವರನ್ನು ಪಾಖಂಡಿಗಳೆಂದೂ ಕರೆದದ್ದುಂಟು) ತಮ್ಮ ತತ್ತ್ವಗಳನ್ನು ಹಂಚಿಕೊಳ್ಳಲು ಪ್ರಾಕೃತವನ್ನು ಆಯ್ಕೆ ಮಾಡಿಕೊಳ್ಳಲು ಇದರ ಜನಪ್ರಿಯತೆ ಒಂದು ಕಾರಣವಾಗಿದ್ದರೆ, ಸಂಸ್ಕೃತಭಾಷೆಯನ್ನು ಸೀಮಿತ ಜನಾಂಗಕ್ಕೆ ನಿರ್ಬಂಧಿಸಿದ್ದು ಇನ್ನೊಂದು ಕಾರಣವಾಗಿತ್ತು. ತುಂಬಾ ಸರಳವೂ ಮುಕ್ತವೂ ಆದ ಪ್ರಾದೇಶಿಕ ಭಾಷೆಗಿಂತ ಛಂದಃಭಾಷೆಯು ಕಠಿಣವೆನಿಸಿದ್ದರಿಂದ, ಅದನ್ನು ಕಲಿಯುವ–ಕಲಿಸುವ ಅವಕಾಶಗಳನ್ನು ಮೀಮಾಂಸಕಾರರ ಕಟ್ಟಳೆಗಳು ತುಂಬಾ ಮಿತಿಗೊಳಿಸಿದ್ದುದರಿಂದ, ಬುದ್ಧನಿಗೂ ಮಹಾವೀರನಿಗೂ ತಾವು ಮಾಡಿಕೊಂಡ ಭಾಷಾ ಆಯ್ಕೆಯು ಸರಿ ಎನಿಸಿರಲು ಸಾಕು. ಬುದ್ಧನ ಇಬ್ಬರು ಅನುಯಾಯಿಗಳು ಒಂದು ಹಂತದಲ್ಲಿ ಶಾಕ್ಯಮುನಿಯನ್ನು ಸಂಪರ್ಕಿಸಿ, ಆತನ ಬೋಧನೆಗಳನ್ನು ಸಂಸ್ಕೃತದಲ್ಲಿ ತಂದುಕೊಳ್ಳಲು ಅನುಮತಿ ಕೋರಿದಾಗ, ‘ಅಂತಹ ಅವಿವೇಕತನದ ಅವಶ್ಯಕತೆ ಇದೆಯಾ?’ ಎಂಬ ಉತ್ತರವು ಮರುಪ್ರಶ್ನೆಯಾಗಿ ಬಂದಿತ್ತೆನ್ನಲಾಗಿದೆ! ಇಷ್ಟೊಂದು ನಿಷ್ಠುರ ನುಡಿಗಳಲ್ಲಿ ಮಹಾವೀರನು ಸಂಸ್ಕೃತ ಭಾಷೆಯನ್ನು ತಿರಸ್ಕರಿಸದಿದ್ದರೂ ಅದರ ಆವಶ್ಯಕತೆಯನ್ನು ಮೌನವಾಗಿಯೇ ತಳ್ಳಿಹಾಕಿದ್ದರಿಂದ, ಆರಂಭಕಾಲದ ಬೌದ್ಧಸಾಹಿತ್ಯದಂತೆ ಜೈನ ಸಾಹಿತ್ಯವೆಲ್ಲವೂ ಪ್ರಾಕೃತಗಳಲ್ಲಿ ರಚನೆಯಾಯಿತು.
ಪ್ರಾದೇಶಿಕ ಭಾಷೆಯೇ ಬುದ್ಧ–ಮಹಾವೀರರ ಪ್ರಬಲ ಶಕ್ತಿಯಾಗಿತ್ತೆಂಬುದನ್ನು ಅರಿತುಕೊಳ್ಳಲು ಬಹಳ ಶ್ರಮಪಡಬೇಕಿಲ್ಲ, ಆದರೆ ಸಂಸ್ಕೃತದಷ್ಟು ಪ್ರಾಕೃತವು ಆಗ ಸಂಘಟಿತ ಭಾಷೆಯಾಗಿರದೆ ಹಲವು ನುಡಿಗಟ್ಟುಗಳಲ್ಲಿ ಹಂಚಿಕೊಂಡಿದ್ದುದರಿಂದ, ಇದರ ‘ನಾನತ್ವ’ಗಳನ್ನು ಸಮನಾಗಿ ಗೌರವಿಸುತ್ತಲೇ ಅವರ ಅನುಯಾಯಿಗಳು ತಮ್ಮ ಸಂಭಾಷಣೆಯನ್ನು ರೂಪಿಸಿಗೊಳ್ಳಬೇಕಾಗಿತ್ತು. ನೆಲದ ನುಡಿಗಟ್ಟುಗಳೆಡೆ ಬುದ್ಧನಿಗಿದ್ದ ಒಲವನ್ನು ಸರಿಯಾಗಿ ಅರ್ಥಮಾಡಿಕೊಂಡೇ ಅಶೋಕಮೌರ್ಯನು ತನ್ನ ಶಾಸನಗಳನ್ನು ಪ್ರಾಕೃತಗಳಲ್ಲಿ ಬರೆಸಿದ್ದನು. ದಕ್ಷಿಣದಲ್ಲಿ ದ್ರಾವಿಡ ನುಡಿಗಟ್ಟುಗಳು ಎಲ್ಲಿ ತಳವೂರಿದ್ದವೋ ಆ ಪ್ರದೇಶಗಳನ್ನು ಬಿಟ್ಟು, ಇನ್ನುಳಿದ ಕಡೆ – ಅಂದರೆ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ದೇಶೀಯತೆಯನ್ನು ಧ್ವನಿಸುವ ಪ್ರಾಕೃತಗಳಲ್ಲಿ ಆತನು ಶಾಸನಗಳನ್ನು ಬರೆಸಿದ್ದೂ ಇದೇ ಕಾರಣಕ್ಕಾಗಿ. ಇದರ ಪರಿಣಾಮವಾಗಿ ದಖ್ಖಣ ಪ್ರಾಕೃತವೆಂಬ ಪ್ರಭೇದವೊಂದು ಜನ್ಮ ತಾಳಿತಲ್ಲದೆ, ಪ್ರಾಕೃತ ಭಾಷೆಯು ದಖ್ಖಣ ಜನಾಂಗದ ಮೊದಲ ಬರಹ ಭಾಷೆಯಾಯಿತು.
ಸಂಸ್ಕೃತಭಾಷಿಕರಾದ ಬೌದ್ಧರು
ಆರಂಭದ ಹಂತದಲ್ಲಿ ಸಂಸ್ಕೃತಭಾಷೆಯನ್ನು ಬಳಸಲು ಸಾಕಷ್ಟು ಬಿಗುಮಾನ ತೋರಿದ್ದ ಬೌದ್ಧರು ಕ್ರಮೇಣ ತಮ್ಮ ನಿಲುವನ್ನು ಸಡಿಲಿಸಿ ಸಂಸ್ಕೃತದಲ್ಲಿ ಬರೆಯತೊಡಗಿದರು. ಇದರ ಪ್ರಥಮ ಕುರುಹುಗಳನ್ನು ಹೀನಯಾನ ಪಂಥದ ಸರ್ವಾಸ್ತಿವಾದಿಗಳ ಬರಹಗಳಲ್ಲಿ, ತೀವ್ರತೆಯನ್ನು ಮಹಾಯಾನರ ಬರಹಗಳಲ್ಲಿ ಗುರುತಿಸಲಾಗಿದೆ. ಕನಿಷ್ಕನ ಕಾಲದಲ್ಲಿ (ಕ್ರಿ.ಶ. ಒಂದನೆಯ ಶತಮಾನ?) ನಾಲ್ಕನೆಯ ಬೌದ್ಧಪರಿಷತ್ ಸಮಾವೇಶಗೊಂಡ ನಂತರ ಬೌದ್ಧ ಸಂಸ್ಕೃತಸಾಹಿತ್ಯದ ಒಂದು ಪ್ರವಾಹವೇ ಭೋರ್ಗರೆಯತೊಡಗಿತು. ಇದನ್ನು ಸ್ಥೂಲವಾಗಿ ಪ್ರಬುದ್ಧ ಕಾವ್ಯ ಸಾಹಿತ್ಯ ಮತ್ತು ಬೆರಕೆ ಅಥವಾ ಮಿಶ್ರಭಾಷಾ ಸಾಹಿತ್ಯ, ಎಂಬ ಎರಡು ವರ್ಗಗಳಡಿ ತರಬಹುದು. ಕ್ರಿ.ಶ. ಒಂದರಿಂದ ನಾಲ್ಕನೆಯ ಶತಮಾನದ ಕೊನೆಯವರೆಗಿನ ಸುಮಾರು ನಾಲ್ಕು ಶತಮಾನಗಳಲ್ಲಿ ರಚಿಸಿದ ಬಹುತೇಕ ಬೌದ್ಧ ಸಾಹಿತ್ಯವು ಈ ಷ್ಹಾನ್ರೆಯಲ್ಲಿದೆ.
ಮಿಶ್ರಭಾಷಾ ಬರಹಗಳು
ಕ್ರಿ.ಶ. 3ನೇ ಶತಮಾನದಲ್ಲಿ ವೈದಿಕರು ಶಾಸನಗಳನ್ನು ಬರೆಸಲು ಆರಂಭಿಸಿದಾಗ ಈ ಮಿಶ್ರಭಾಷೆಯು ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರಿಂದ ಬೆರಕೆಯ ಬರವಣಿಗೆಗಳು ಹೆಚ್ಚಳಗೊಂಡು ದೇಶಾದ್ಯಂತ ವ್ಯಾಪಿಸಿದವು. ಅಪ್ಪಟ ಸಂಸ್ಕೃತವಾದಿಗಳಿಗೆ ಸಾಕಷ್ಟು ಮುಜುಗರವನ್ನುಂಟುಮಾಡಿದರೂ ಅಲ್ಪಾವಧಿಯಲ್ಲಿ ಇದು ಸಾಧಿಸಿದ ವ್ಯಾಪಕತೆಯನ್ನು ಮನಗಂಡು ಇದೂ ಒಂದು (ಸಂಸ್ಕೃತ)ಭಾಷಾ ಪ್ರಭೇದವೆಂದು ಅವರು ಒಪ್ಪಿಕೊಳ್ಳುವಂತೆ ಮಾಡಿತ್ತು. ರಾಜಕೀಯ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ನೋಡುವುದಾದರೆ, ಸುಮಾರು ಕ್ರಿ.ಶ. 2ನೇ ಶತಮಾನದಲ್ಲಿ ಶಕಕ್ಷತ್ರಪರ ಮತ್ತು ಕುಷಾಣರ ಶಾಸನಭಾಷೆ ಇದಾಗಿದ್ದುದನ್ನು, ಪಶ್ಚಿಮ ಮತ್ತು ದಖ್ಖಣದಲ್ಲಿ ಶಕಕ್ಷತ್ರಪರೊಡನೆ ರಕ್ತಸಂಬಂಧ ಹೊಂದಿದ್ದ ಇಕ್ಷ್ವಾಕು ಮತ್ತು ಚುಟುಸಾತಕರ್ಣಿಗಳ ಬರಹಗಳ ಮೇಲೆ ಇದು ಪ್ರಭಾವ ಬೀರಿದ್ದನ್ನು ಕಾಣುವೆವು. ಬೌದ್ಧರಡಿ ಈ ಭಾಷಾ ಪ್ರಭೇದವು ಎಷ್ಟು ಜನಪ್ರಿಯವಾಯಿತೆಂದರೆ, ಪಾಣಿನಿಗೆ ನಿಷ್ಠರಾಗಿದ್ದ ಕೆಲವು ವೈದಿಕರನ್ನೂ ಈ ಭಾಷೆಯಲ್ಲಿ ವ್ಯವಹರಿಸುವಂತೆ ಮಾಡಿತು.
ಈ ಷ್ಹಾನ್ರೆಯ ಕಲ್ಬರಹಗಳು ದಕ್ಷಿಣದಲ್ಲಿ ಪ್ರಾರಂಭವಾಗುವುದು ಕ್ರಿ.ಶ. 3ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು ಇವನ್ನು ಇನ್ನೂ ಹೆಚ್ಚು ನಿಚ್ಚಳವಾಗಿ ಕಾಣುವುದು ಇಕ್ಷ್ವಾಕು ರಾಜಧಾನಿಪಟ್ಟಣವಾಗಿದ್ದ ವಿಜಯಪುರ (ಆಂಧ್ರಪ್ರದೇಶದ ನಾಗಾರ್ಜುನಕೊಂಡ)ದಲ್ಲಿ. ಇಕ್ಷ್ವಾಕರು ಆಳಿದ್ದು ಸುಮಾರು 75 ವರ್ಷ (225–300) ಮಾತ್ರ. ಆದರೆ ಹಿಂದೆಂದೂ ಕಾಣದಂತಹ ಧಾರ್ಮಿಕ ಹಾಗೂ ಭಾಷಿಕ ಬದಲಾವಣೆಗಳನ್ನು ಈ ಏಳು ದಶಕಗಗಳು ಕಂಡವು. ಮೊದಲು ಬೌದ್ಧಕೇಂದ್ರವಾಗಿ ಇತಿಹಾಸದಲ್ಲಿ ಸ್ಥಾನ ಪಡೆದುಕೊಂಡು, ಧಾನ್ಯಕಟಕ (ಅಮರಾವತಿ)ದಂತಹ ಪ್ರಸಿದ್ಧ ಕೇಂದ್ರವನ್ನು ಹಿನ್ನೆಲೆಗೆ ತಳ್ಳಿದ ವಿಜಯಪುರವು ಕೆಲವೇ ಕೆಲವು ದಶಕಗಳಲ್ಲಿ ದಖ್ಖಣ–ಏಷ್ಯಾದ ಬೌದ್ಧಕೇಂದ್ರಗಳೊಂದಿಗೆ ಸಂಪರ್ಕ ಬೆಳೆಸಿಕೊಂಡು, ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರಕ್ಕೇರಿದ ಬೌದ್ಧಕೇಂದ್ರವೆನಿಸಿತು. ಇಷ್ಟು ಮಾತ್ರವಲ್ಲ, ದಶಕಗಳು ಕಳೆಯುವುದರೊಳಗಾಗಿ ಇದು ವೈದಿಕರ ಕೇಂದ್ರವಾಗಿ ಹೊರಹೊಮ್ಮಿ ಮೊತ್ತಮೊದಲು ಸ್ಥಾಪಿಸಿದ ದಖ್ಖಣದ ಹಿಂದೂ ದೇವಾಲಯಗಳನ್ನೂ ಕಂಡಿತು. ಅಂದರೆ, ಧರ್ಮಸಂಗಮ ಮತ್ತು ಭಾಷಾಸಂಗಮ ಕೇಂದ್ರವಾಗಿ ಇದು ದಕ್ಷಿಣ ಭಾರತದಲ್ಲಿ ವಿಶಿಷ್ಟ ಸ್ಥಾನಗಳಿಸಿಕೊಂಡಿತೆನ್ನಬಹುದು. ದಕ್ಷಿಣದ ದಾಖಲಿತ ಇತಿಹಾಸದಲ್ಲಿ ಬೌದ್ಧರನ್ನೂ ವೈದಿಕರನ್ನೂ ಒಂದೆಡೆ ನಾವು ಮೊದಲು ಕಾಣುವುದು, ಮತ್ತು ಪ್ರಾಕೃತ ಮತ್ತು ಸಂಸ್ಕೃತ ಮಾತ್ರವಲ್ಲದೆ ಮಿಶ್ರಭಾಷೆಯನ್ನು ಈ ಎರಡು ವರ್ಗಗಳು ಬಳಸುವುದನ್ನು ಮೊದಲು ನೋಡುವುದು ಇದೇ ಕೇಂದ್ರದಲ್ಲಿ.
ಒಗ್ಗೂಡಿಸುವ ಪ್ರಯತ್ನ
ಮೂರನೆಯ ಶತಮಾನದಲ್ಲಿ ಪ್ರಾಕೃತ, ಪ್ರಾಕೃತ ಮಿಶ್ರಿತ ಸಂಸ್ಕೃತ, ಮತ್ತು ಸಂಸ್ಕೃತ (ವಿಶೇಷವಾಗಿ ಪದ್ಯ) ಬರಹಗಳು ಸಾಕಷ್ಟು ಸಂಖ್ಯೆಯಲ್ಲಿ ಹೊರಬಂದವು. ತಮಗೆ ದೊರೆತ ಅವಕಾಶವನ್ನು ಬಳಸಿಕೊಂಡು, ಈ ಕಾಲದ ಬೌದ್ಧರು, ಜೈನರು ಮತ್ತು ವೈದಿಕರು ಅನೇಕ ಸಾಹಿತ್ಯ ಕೃತಿಗಳನ್ನು ಸಂಸ್ಕೃತದಲ್ಲಿ ಹಾಗೂ ಮಿಶ್ರಭಾಷೆಯಲ್ಲಿ ರಚಿಸಿದರೆಂಬುದಕ್ಕೆ ಅಶ್ವಘೋಷನಿಂದ ರಾಜಶೇಖರನವರೆಗಿನ ಗ್ರಂಥಗಳನ್ನು ನಿದರ್ಶಿಸಬಹುದು. ಪ್ರವರಸೇನನ ‘ಸೇತುಬಂಧು’ ಈ ಕಾಲದ ಹೆಸರಾರ್ಹ ಪ್ರಾಕೃತಗ್ರಂಥಗಳಲ್ಲೊಂದು. ಈ ಗ್ರಂಥವನ್ನು ಸಂಸ್ಕೃತದ ಉದ್ದಾಮ ಕವಿ ಕಾಳಿದಾಸನೇ ರಚಿಸಿದನೆಂಬ ವಾದವಿದೆ. ಇದನ್ನು ನಂಬುವುದಾದರೆ ಒಂದು ಭಾಷೆಯ ಖ್ಯಾತ ಕವಿಯು ಮತ್ತೊಂದು ಭಾಷೆಯನ್ನು ತನ್ನದನ್ನಾಗಿಸಿಕೊಳ್ಳಲು ಬಯಸಿದ್ದನ್ನು ಸೂಚಿಸಲು ಇದೊಂದು ಉತ್ತಮ ಉದಾಹರಣೆಯಾಗುವುದು. ಪ್ರಾಕೃತ ಭಾಷಿಕರು ಸುಲಭವಾಗಿ ಸಂಸ್ಕೃತದಲ್ಲಿ ಸಂಭಾಷಿಸಲೆಂದು ಪಾಣಿನಿಯ ವ್ಯಾಕರಣವನ್ನು ವೈದಿಕ ಕಟ್ಟಳೆಗಳಿಂದ ಮುಕ್ತಗೊಳಿಸಿ, ಸಾತವಾಹನ ಕಾಲದ ವೈಯಾಕರಣಿಯಾದ ಸರ್ವ್ವದೇವನು ಕಾತಂತ್ರ ಅಥವಾ ಕುಮರ ಎಂಬ ವ್ಯಾಕರಣವನ್ನು ರಚಿಸಿದ್ದೂ ಇದೇ ಕಾಲದಲ್ಲಿ. ಇದು ಬಹುಬೇಗನೇ ಜನಪ್ರಿಯತೆಗಳಿಸಿಕೊಂಡಿತೆನ್ನಲಾಗಿದೆ. ಆನಂತರ ಕಾಲದ ಕನ್ನಡ ವೈಯಾಕರಣಿಗಳೂ ‘ಅಭಿನವಸರ್ವದೇವ’ರೆಂದು ಕರೆದುಕೊಂಡದ್ದನ್ನು, ಈ ವ್ಯಾಕರಣದ ಹಲವು ಹಸ್ತಪ್ರತಿಗಳು ಮೂಡಬಿದರೆಯ ಜೈನ ಭಂಡಾರದಲ್ಲಿ ಈಗಲೂ ಲಭ್ಯವಿರುವುದನ್ನು ನೋಡಿದರೆ ಈ ಕೃತಿಗೆ ಕರ್ನಾಟಕದಲ್ಲಿ ಸಂದ ಮನ್ನಣೆಯನ್ನು ಮನವರಿಕೆಮಾಡಿಕೊಳ್ಳಬಹುದು.
ಜೈನ ಬರಹಗಳು
ಜೈನರು ಬರೆಸಿದ ಮೊದಮೊದಲ ಮಹತ್ವದ ಕಲ್ಬರಹಗಳು ಪೂರ್ವಭಾರತದ ಕಳಿಂಗ ಪ್ರದೇಶದಲ್ಲಿ, ಉತ್ತರ ಭಾರತದ ಮಥುರಾದಲ್ಲಿ ಕಂಡುಬಂದಿವೆ. ಬಹುಶಃ ಶಂಗರ ಆಳ್ವಿಕೆಯಡಿ, (ಕ್ರಿ.ಪೂ. 2ನೇ ಶತಮಾನದಲ್ಲಿ), ಪ್ರಾರಂಭವಾದ ಈ ಪ್ರಕ್ರಿಯೆ ಕುಷಾಣರಡಿ (ಕ್ರಿ.ಶ. ಒಂದನೆಯ ಶತಮಾನದ) ಹೆಚ್ಚು ಚೈತನ್ಯ ಪಡೆದುಕೊಂಡಿತು. ಲಭ್ಯ ಮಾಹಿತಿಯ ಪ್ರಕಾರ ಜೈನರು ಮೊತ್ತಮೊದಲು ದಕ್ಷಿಣದಲ್ಲಿ ಬರೆಸಿದ್ದು ಕ್ರಿ. ಪೂ. 2ನೇ ಶತಮಾನದಲ್ಲಿ, ತಮಿಳುನಾಡಿನ ಮದುರೈ ಜಿಲ್ಲೆಯ ಕೆಲವು ಗುಹೆಗಳಲ್ಲಿ.
ದಖ್ಖಣದಲ್ಲಿ ಬೌದ್ಧರು ಬಳಸಿದ ಭಾಷೆಗೂ ಜೈನರು ಬಳಸಿದ ಭಾಷೆಗೂ ಸಾಕಷ್ಟು ವ್ಯತ್ಯಾಸವಿದೆ. ಬೌದ್ಧರು ಪ್ರಾಕೃತ (ಮತ್ತು ಅದರ ಪ್ರಭೇದಗಳಾದ ಶೌರಸೇನಿ, ಮಗಧಿ, ಮುಂತಾದ)ವನ್ನು ಮಾತ್ರ ಬಳಸಿದರಾಗಲೀ ದೇಶೀ ಭಾಷೆಯನ್ನಲ್ಲ. ಅಲ್ಲದೆ ದೇಶೀ ನುಡಿಗಟ್ಟುಗಳನ್ನು ಪ್ರಾಕೃತದಲ್ಲಿ ಇವರು ಮಿಶ್ರಮಾಡಲೂ ಇಲ್ಲ. ಇದಕ್ಕೆ ಭಿನ್ನವಾಗಿ ಜೈನರು ಇಲ್ಲಿ ಪ್ರಾಕೃತ ಭಾಷೆಯಲ್ಲಿ ಶಾಸನಗಳನ್ನು ಬರೆಸಲಿಲ್ಲ, ಅವರು ಬರೆಸಿದ್ದು ಸಂಸ್ಕೃತದಲ್ಲಿ, ಕನ್ನಡದಲ್ಲಿ, ಮತ್ತು ಒಮ್ಮೊಮ್ಮೆ ಇವೆರಡನ್ನೊಳಗೊಂಡ ದ್ವಿಭಾಷೆಯಲ್ಲಿ. ಲೌಕಿಕ ವ್ಯವಹಾರಕ್ಕೆ ಸಮಕಾಲಿನ ಬೌದ್ಧರಂತೆ ಜೈನರು ಪ್ರಾಕೃತವನ್ನು ಬಳಸದಿದ್ದರೂ ಧಾರ್ಮಿಕ ಚಿಂತನೆಗೆ ಮತ್ತು ಸಂಘಸಂವೇದನೆಗೆ (ವಿಶೇಷವಾಗಿ ಶ್ರಮಣರು) ಈ ಭಾಷೆಯನ್ನು ಬಳಸುತ್ತಿದ್ದರೆಂಬುದಕ್ಕೆ ಪುರಾವೆಗಳಿವೆ. ಈ ಕಾಲದ ಜೈನಮುನಿಗಳು ಸದಾಸಂಚಾರದಲ್ಲಿರುತ್ತಿದ್ದ ಅನಿಯತವಾಸಿಗಳಾಗಿದ್ದುದರಿಂದ ಬೌದ್ಧರಂತೆ ಒಂದೆಡೆ ನೆಲೆ ನಿಲ್ಲುತ್ತಿರಲಿಲ್ಲ, ಮತ್ತು ಅವರಂತೆ ಸಂಘಸಂಸ್ಥೆಗಳನ್ನು ಕಟ್ಟಲು ಆಸಕ್ತರಾಗಿರಲಿಲ್ಲ.
ತಮಿಳುನಾಡಿನ ಗುಹೆಗಳಲ್ಲಿರುವ ಸುಮಾರು ಆರ್ಧ ಡಜನ್ ಬ್ರಾಹ್ಮೀ ತುಂಡು ಶಾಸನಗಳನ್ನು ಬಿಟ್ಟರೆ, ಕ್ರಿಸ್ತಶಕದ ಮೊದಲರ್ಧ ಸಹಸ್ರಮಾನದಲ್ಲಿ ಜೈನರು ಬರೆಸಿದ ಶಾಸನಗಳಾವೂ ದಕ್ಷಿಣ ಭಾರತದಲ್ಲಿ ಸಿಕ್ಕಿಲ್ಲ. ಮುಂದಿನ ಅರ್ಧ ಸಹಸ್ರಮಾನದಲ್ಲಿ ಇವರು ಹೆಚ್ಚು ಬರೆಸತೊಡಗಿದಾಗ, ಅವರ ಕಾರ್ಯಕ್ಷೇತ್ರವು ದಕ್ಷಿಣದಂಚಿನಿಂದ ಕೆಳದಖ್ಖಣಕ್ಕೆ ವರ್ಗವಾಗಿ, ಕರ್ನಾಟಕವು ಅದರ ಕೇಂದ್ರವಾಯಿತು. ಇವರ ಆರಂಭಕಾಲದ ಶಾಸನಗಳೆಲ್ಲವೂ ತಾಮ್ರಪಟಗಳ ಮೇಲೆ ಬರೆದ ಸಂಸ್ಕೃತ ಭಾಷೆಯಲ್ಲಿದ್ದು, ಅವು ವೈಜಯಂತೀ ಕದಂಬ ರಾಜ್ಯದಲ್ಲಿ (ಕ್ರಿ.ಶ. ನಾಲ್ಕರಿಂದ ಆರನೆಯ ಶತಕಾವಧಿ) ದಟ್ಟೈಸಿವೆ.
ಬದಲಾದ ಭಾಷಾನೀತಿ
ಸಮಾನ ಭಾಷಾಧೋರಣೆಯ ಬೌದ್ಧರೊಡನೆ ಸುಮಾರು ಮುಕ್ಕಾಲು ಸಹಸ್ರಮಾನವರ್ಷ (ಕ್ರಿ.ಪೂ. 6ರಿಂದ ಕ್ರಿ.ಶ. 3ರರವರೆಗೂ) ಪ್ರಾಕೃತ ಭಾಷೆಯನ್ನು ಹಂಚಿಕೊಂಡಿದ್ದ ಜೈನರು, ಬೌದ್ಧಮತವು ಇಳಿಮುಖದ ಹಾದಿ ಹಿಡಿದ ಕೂಡಲೇ, ತಮ್ಮ ಭಾಷಾನೀತಿಯನ್ನು ಬದಲಿಸಿಕೊಳ್ಳತೊಡಗಿದರು. ಸಂಸ್ಕೃತಭಾಷೆಯನ್ನು ತಿರಸ್ಕರಿಸಿ, ಜನಾಂಗ ಭಾಷೆಯಲ್ಲಿ ವ್ಯವಹರಿಸಿದ ಇವರಿಬ್ಬರೂ ದಖ್ಖಣವನ್ನು ತಲುಪಿದಾಗ, ಜನಾಂಗೀಯ ಭಾಷೆಯ ಮರು ವ್ಯಾಖ್ಯಾನವನ್ನು ಮಾಡಬೇಕಾದ ಒತ್ತಡಕ್ಕೊಳಗಾದರೆನಿಸುವುದು. ಆದರೆ ತಮ್ಮ ಧರ್ಮದೊಡನೆ ತಮ್ಮ ಭಾಷೆಯನ್ನು ದಖ್ಖಣಕ್ಕೆ ತಂದಿದ್ದ ಬೌದ್ಧರು ಉತ್ತರ ಭಾರತದಲ್ಲಿ ಪಾಲಿಸಿದ ನೀತಿಯನ್ನೇ ಇಲ್ಲಿಯೂ ಮುಂದುವರೆಸಿದುದರಿಂದ ಕೊನೆಯವರೆಗೂ ಪ್ರಾಕೃತದಲ್ಲಿಯೇ ಅವರು ವ್ಯವಹರಿಸಿದರು. ಇದಕ್ಕೆ ಭಿನ್ನವಾದ ಭಾಷಾನೀತಿಯನ್ನು ಅನುಸರಿಸಿದ ಜೈನರು, ತಮ್ಮ ಮಠೀಯ ವ್ಯವಹಾರಕ್ಕೆ ಪ್ರಾಕೃತವನ್ನು ಬಳಸುತ್ತಾ, ಸಾಮಾಜಿಕ ಹಾಗೂ ಮತ ವಹಿವಾಟಿಗೆ ಸಂಸ್ಕೃತ ಮತ್ತು ಪ್ರಾದೇಶಿಕ ಭಾಷೆಯಾದ ಕನ್ನಡದೊಡನೆ ಅನುಸಂಧಾನ ಮಾಡಿಕೊಳ್ಳತೊಡಗಿದರು.
ಪ್ರಾಕೃತದ ಮರುವ್ಯಾಖ್ಯಾನ
ನಾಲ್ಕನೆಯ ಶತಮಾನದವರೆಗೂ ಒಂದು ಬಗೆಯಲ್ಲಿ ಅಜ್ಞಾತಸ್ಥಿತಿಯಲ್ಲಿದ್ದ ದಖ್ಖಣದ ಜೈನರು ಬೌದ್ಧರ ನಿರ್ಗಮನದಿಂದಾದ ನಿರ್ವಾತವನ್ನು ತುಂಬತೊಡಗಿದರು. ಇಷ್ಟು ಮಾತ್ರವಲ್ಲ, ಏಕೈಕ ಜನಾಂಗ ಭಾಷೆಯೆಂದು ಆವರೆಗೂ ಪರಿಗಣಿತವಾಗಿದ್ದ ಪ್ರಾಕೃತದೊಡನೆ ದಕ್ಷಿಣದ ಜನಾಂಗೀಯ ಭಾಷೆಗಳನ್ನು ಸಮೀಕರಿಸಿಕೊಂಡು, ದೇಶೀಭಾಷೆಯ ಹೊಸ ವ್ಯಾಖ್ಯಾನವನ್ನು ಮಾಡಿದರು. ಇದರಿಂದಾಗಿ ಪ್ರಾಕೃತವನ್ನು ದಖ್ಖಣದಲ್ಲಿ ಪುನಶ್ಚೇತನ
ಗೊಳಿಸಬೇಕಾದ ಅಗತ್ಯವನ್ನು ಇವರು ಕಾಣಲಿಲ್ಲ. ಅಂದರೆ ಜನಾಂಗೀಯ ಭಾಷೆಗಳಲ್ಲಿಯೇ ಧರ್ಮಬೋಧನೆ ಮಾಡಬೇಕೆಂಬ ಮಹಾವೀರನ ಮೂಲೋದ್ದೇಶವನ್ನು ಈಡೇರಿಸಲು ಉತ್ತರದ ಪ್ರಾಕೃತಗಳೇ ಆಗಬೇಕಿಲ್ಲ – ದಕ್ಷಿಣದ ಯಾವುದೇ ಜನಾಂಗೀಯ ಭಾಷೆಯಾದರೂ ಸರಿ – ಎಂದು ಅವರು ತೀರ್ಮಾನಿಸಿದರೆಂದರ್ಥ. ದೇಶೀಭಾಷೆಯ ಕಲ್ಪನೆಯನ್ನು ಅಂದಿನ ಬೌದ್ಧರಿಗಿಂತ ಜೈನರು ಹೆಚ್ಚು ಸಮರ್ಥವಾಗಿ ಆರ್ಥಮಾಡಿಕೊಂಡಿದ್ದರೆಂಬುದನ್ನು ಇದು ಸಾಬೀತುಪಡಿಸುವುದು. ಬೌದ್ಧರು ಪ್ರಾಕೃತವನ್ನು ಬಿಟ್ಟು ಸ್ಥಳೀಯ ದೇಶೀಭಾಷೆಯನ್ನು ಬಳಸದಿದ್ದುದು, ಮತ್ತು ಜೈನರು ಉತ್ತರದ ಪ್ರಾಕೃತಗಳಿಗೆ ಮಾತ್ರ ಅಂಟಿಕೊಳ್ಳದೆ ದಖ್ಖಣದ ಪ್ರಾದೇಶಿಕ ಭಾಷೆಗಳಿಗೆ ವಿಸ್ತರಿಸಿಕೊಂಡಿದ್ದು ಇದಕ್ಕೆ ಪುರಾವೆ.
ಜೈನರು ಕನ್ನಡದಲ್ಲಿ ಬರೆಯಲಾರಂಭಿಸಿದ್ದು ಸುಮಾರು 6ನೇ ಶತಮಾನದಲ್ಲಿ. ಆದರೆ ಅದಕ್ಕಿಂತ ಒಂದೆರಡು ಶತಮಾನಗಳ ಮುಂಚೆಯೇ ಅವರು ಪ್ರಾಕೃತದಲ್ಲಿ ಬರೆಯುವುದನ್ನು ನಿಲ್ಲಿಸಿ ಸಂಸ್ಕೃತವನ್ನು ಬಳಸತೊಡಗಿದ್ದರು. ಪ್ರಾಕೃತವನ್ನು ಕನ್ನಡಕ್ಕೆ ಸಮೀಕರಿಸುವ ಪ್ರಕ್ರಿಯೆ 5ನೇ ಶತಮಾನದ ಸುತ್ತಮುತ್ತಲಲ್ಲಿ ಅಂಕುರಗೊಂಡು, 8ನೇ ಶತಮಾನದ ಸುಮಾರಿಗೆ ಸದೃಢತೆಯನ್ನು ಸಂಪಾದಿಸಿಕೊಂಡಿತೆಂಬುದಕ್ಕೆ ಸೂಕ್ಷ್ಮ ಸುಳಿವುಗಳಿವೆ. ಇದನ್ನು ಬಹಿರಂಗ ಪಡಿಸಿದ ಶ್ರೇಯಸ್ಸು ಬಾದಾಮಿ ಚಾಳುಕ್ಯ ವಿಜಯಾದಿತ್ಯನ ಕಾಲದ ಒಬ್ಬ ಲಿಪಿಕಾರನಿಗೆ ಸಲ್ಲುವುದು. ಚಾಳುಕ್ಯ ರಾಜಮಾತೆ ನಿರ್ಮಿಸಿದ ತ್ರಿಮೂರ್ತಿ ದೇವಾಲಯದ ವಿವರಗಳನ್ನೊದಗಿಸಲು ದ್ವಿಭಾಷಾ ಶಾಸನವೊಂದನ್ನು ಬರೆದ ಈ ಅಜ್ಞಾತ ಲಿಪಿಕಾರನು, ಒಂದು ಹಂತದಲ್ಲಿ ಸಂಸ್ಕೃತಬರಹವನ್ನು ನಿಲ್ಲಿಸಿ, ‘ಪ್ರಾಕೃತ ಭಾಷಾಯ ವರ್ಣನೇತಾಣಿ’ ಎಂದು ಪೋಷಿಸಿ, ಮುಂದಿನ ವಾಕ್ಯವನ್ನು ಕನ್ನಡದಲ್ಲಿ ಮುಂದುವರಿಸುವನು. ಅಂದರೆ ಸಂಸ್ಕೃತ ಬಿಟ್ಟು ಉಳಿದೆಲ್ಲ ದೇಶೀಭಾಷೆಗಳು ಇವನ ದೃಷ್ಟಿಯಲ್ಲಿ ಪ್ರಾಕೃತಗಳಾಗಿದ್ದವೆಂದಂತಾಯ್ತು. ಭಾರತೀಯ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ ಮಾಡಿರುವ ಈ ಅಪೂರ್ವ ಸಮೀಕರಣವು ಸಂಸ್ಕೃತವನ್ನು ಒಂದು ತಟ್ಟೆಯಲ್ಲಿಟ್ಟು, ದೇಶೀಭಾಷೆಗಳೆನ್ನೆಲ್ಲ ಪ್ರಾಕೃತ ಹೆಸರಿನಡಿ ತಂದು ಇನ್ನೊಂದು ತಟ್ಟೆಯಲ್ಲಿಟ್ಟು ತೂಗಿದಂತಿದೆ.
ಕರ್ನಾಟಕ ಜೈನರ ಭಾಷಾನೀತಿಯ ಹೆಗ್ಗುರುತುಗಳು
ಕ್ರಿಸ್ತಶಕ ಮೊದಲ ಸಹಸ್ರಮಾನದ ಜೈನರ ಭಾಷಾನೀತಿಯ ಈ ಸಮೀಕ್ಷೆಯಲ್ಲಿ ಕಾಣಿಸಿಕೊಂಡಿರುವ ನಾಲ್ಕು ಪ್ರಧಾನ ಹೆಗ್ಗುರುತುಗಳು ಗಮನಯೋಗ್ಯವಾಗಿವೆ. ಅವು:
1. ಸುಮಾರು ನಾಲ್ಕರಿಂದ 10ನೆಯ ಶತಮಾನದವರೆಗೆ ಕೆಳದಖ್ಖಣದ ಜೈನರು ಶಾಸನಗಳನ್ನು ಬರೆಸಿದ್ದು ಸಂಸ್ಕೃತ ಇಲ್ಲವೇ ಕನ್ನಡ ಭಾಷೆಯಲ್ಲಿ, ಇಲ್ಲವೇ ಇವೆರಡನ್ನೊಳಗೊಂಡ ದ್ವಿಭಾಷೆಗಳಲ್ಲಿ, ಪ್ರಾಕೃತದಲ್ಲಲ್ಲ. ಕನ್ನಡ ಬರವಣಿಗೆಯು ಕದಂಬ (ಮತ್ತು ಗಂಗ) ರಾಜ್ಯಗಳಲ್ಲಿ ಕ್ರಿ.ಶ. 400ರ ಸುಮಾರಿನಲ್ಲಿ ಪ್ರಾರಂಭವಾದರೂ ಈ ರಾಜ್ಯದ ಜೈನರು ಪೂರ್ಣಪ್ರಮಾಣದ ಕನ್ನಡ ಶಾಸನಗಳನ್ನು ಬರೆಸಲಿಲ್ಲ. ಆದರೆ ಈ ಕಾಲದಲ್ಲಿ ಬ್ರಾಹ್ಮೀ ಹೊಕ್ಕುಳಬಳ್ಳಿಯಿಂದ ಬೇರ್ಪಟ್ಟಿದ್ದ ಕನ್ನಡ ಲಿಪಿಯನ್ನು ವೈದಿಕರಂತೆ ಇವರೂ ತಮ್ಮ ಬರಹಗಳಿಗೆ ಬಳಸಿಕೊಂಡರು.
2. ಗಂಗ ರಾಜ್ಯದ ಜೈನರು ಎಂಟನೆಯ ಶತಮಾನದವರೆಗೂ ಬರೆಸಿದ ತಾಮ್ರಪಟಗಳೆಲ್ಲವೂ ಸಂಸ್ಕೃತದಲ್ಲಿವೆ. ಸಂಸ್ಕೃತ ಮತ್ತು ಕನ್ನಡ ವಿಭಾಗಗಳನ್ನೊಳಗೊಂಡ ದ್ವಿಭಾಷಾ ಶಾಸನಗಳನ್ನು ಇವರು ಬರೆಸತೊಡಗಿದ್ದು ಎಂಟನೆಯ ಶತಮಾನದಲ್ಲಿ.
3. ಏಳನೆಯ ಶತಮಾನದಲ್ಲಿ ಶಾಸನ ಬರೆಸಲಾರಂಭಿಸಿದ ಬಾದಾಮಿ ಚಾಳುಕ್ಯ ರಾಜ್ಯದ ಜೈನರು ಆರಂಭದಿಂದಲೂ ಸಂಸ್ಕೃತ ಹಾಗೂ ಕನ್ನಡಭಾಷೆಗಳಲ್ಲಿ ಕ್ರಮವಾಗಿ ತಾಮ್ರಪಟಗಳನ್ನು ಶಿಲಾಶಾಸನಗಳನ್ನು ಬರೆಸಿದ್ದರು, ಆದರೆ ದ್ವಿಭಾಷಾ ಶಾಸನಗಳನ್ನು ಇವರು ಬರೆಸಿದ್ದಕ್ಕೆ ಪುರಾವೆಗಳಿಲ್ಲ. ಮೊದಲು ತಾಮ್ರಪಟಗಳನ್ನು ಬರೆಸಿ, ಕಾಲಾನಂತರದಲ್ಲಿ ಅವನ್ನು ಶಿಲಾಫಲಕಗಳ ಮೇಲೆ ಮೂಲಭಾಷೆ ಮತ್ತು ಲಿಪಿಯಲ್ಲಿ ಪ್ರತಿಮಾಡಿಸಿದ್ದು ಇವರ ವಿಶೇಷತೆ. ಪೂರ್ಣಪ್ರಮಾಣದ ಪ್ರಶಸ್ತಿಯನ್ನು ಶಿಲೆಯ ಮೇಲೆ ಬರೆಸಿದ ಶ್ರೇಯಸ್ಸೂ ಇವರದ್ದಾಗಿದೆ. ಸಂಸ್ಕೃತಭಾಷೆಯ ತಾಮ್ರಪಟಗಳನ್ನು ಶಿಲಾಶಾಸನಗಳನ್ನು ಬರೆಸಲು ಇವರು ಹೆಚ್ಚು ಬಳಸಿದ್ದು ಕನ್ನಡ ಲಿಪಿಯನ್ನು, ಆದರೆ ಕರ್ನಾಟಕದ ಕೆಲವು ಆಯ್ದ ಕೇಂದ್ರಗಳಲ್ಲಿ ನಾಗರೀಲಿಪಿಯನ್ನು ಪರಿಚಯಿಸಿದವರೂ ಇವರೇ.
ಈ ಮೂರು ಹಂತಗಳ ಜೈನಬರಹಗಳಲ್ಲಿ, ಸಂಸ್ಕೃತಕ್ಕೆ ಹೆಚ್ಚಿನ ಸ್ಥಾನ ದೊರಕಿರುವುದು ಪ್ರಶ್ನಾತೀತ. ಆದರೆ ಬ್ರಾಹ್ಮೀಯ ನಂತರ ಸಂಸ್ಕೃತದ ಸಾರ್ತವಾಹಕತ್ವವನ್ನು ವಹಿಸಿಕೊಂಡದ್ದು ಕನ್ನಡ ಲಿಪಿ. ಇದೇ ಕಾಲದಲ್ಲಿ ಕನ್ನಡ ಭಾಷೆಯು ತನ್ನ ದಿಟ್ಟ ಹೆಜ್ಜೆಯ ಗುರುತುಗಳನ್ನು ಮೂಡಿಸಿತಲ್ಲದೆ ರಾಷ್ಟ್ರೀಯ ಭಾಷೆಯಾಗಿದ್ದ ಸಂಸ್ಕೃತದ ಪ್ರಧಾನ ವಾಹಿನಿಯೂ ಆಯಿತು. ಮೊದಲ ಸಹಸ್ರಮಾನದ ಉತ್ತರಾರ್ಧದಲ್ಲಿ ಉಕ್ಕೇರಿ ಅಪ್ಪಳಿಸುತ್ತಿದ್ದ ಸಂಸ್ಕೃತ ಸುನಾಮಿಯಲ್ಲಿ ತನ್ನ ದೇಶೀಯತೆಯನ್ನು ಕಳೆದುಕೊಳ್ಳದೆ, ಪ್ರಾಕೃತವನ್ನೂ ಸಂಸ್ಕೃತವನ್ನೂ ಅರಗಿಸಿಕೊಳ್ಳುತ್ತಲೇ ಹಳಗನ್ನಡವು ಪ್ರಬುದ್ಧಾವಸ್ಥೆಯನ್ನು ತಲುಪಿತು. ಕನ್ನಡದ ಈ ಸಾಧನೆಗೆ ವೈದಿಕರಷ್ಟು ಜೈನರೂ ಕಾರಣರಾಗಿದ್ದರು. ಈ ಅವಧಿಯಲ್ಲಿ ಸಂಸ್ಕೃತ ಉಚ್ಚಾರ ಪ್ರಕ್ರಿಯೆಯಿಂದ ಪ್ರಭಾವಿತರಾದ ಕನ್ನಡವು, ತನ್ನ ವಿಶಿಷ್ಟ ವರ್ಣಗಳಾದ ‘ಱ’ ಮತ್ತು ‘ೞ’ಗಳನ್ನು ಸಂಸ್ಕೃತಕ್ಕೆ ಪರಿಚಯಿಸಿ, ಅದರ ಉಚ್ಚಾರ ಪ್ರಕ್ರಿಯೆಯನ್ನು ಪ್ರಭಾವಿಸಿತು.
4. ಒಂಬತ್ತನೆಯ ಶತಮಾನದಲ್ಲಿ ಶಾಸನಗಳನ್ನು ಬರೆಯಲಾರಂಭಿಸಿದ ರಾಷ್ಟ್ರಕೂಟ ರಾಜ್ಯದ ಜೈನರು ಮೊದಲು ಬರೆಸಿದ್ದು ಸಂಸ್ಕೃತ ಮತ್ತು ಕನ್ನಡ ವಿಭಾಗಗಳನ್ನೊಳಗೊಂಡ ದ್ವಿಭಾಷಾ ಶಾಸನಗಳನ್ನು. ಆದರೆ ಆವರೆಗೂ ಪ್ರಚಾರದಲ್ಲಿದ್ದ ಈ ದ್ವಿಭಾಷಾ ಬರಹ ಸ್ವರೂಪವನ್ನು ಬದಲಿಸಿ, ಎರಡು ಪ್ರಾದೇಶಿಕ ಕನ್ನಡ ಮತ್ತು ತೆಲುಗು ಭಾಷೆಗಳನ್ನೊಳಗೊಂಡ ದ್ವಿಭಾಷಾ ಬರಹಗಳನ್ನೂ ಪ್ರಾಯೋಜಿಸಿದ್ದು ಇವರ ವೈಶಿಷ್ಟ್ಯ. ಹಿಂದೆಂದಿಗಿಂತಲೂ ಹೆಚ್ಚು ನಾಗರೀ ಲಿಪಿಯನ್ನು ಬಳಸಿದ್ದರಿಂದ, ಸಂಸ್ಕೃತ ಭಾಷಾ ಶಾಸನಗಳು ಈ ಲಿಪಿಯಲ್ಲೂ ಅಪರೂಪವಾಗಿ ತೆಲುಗುಲಿಪಿಯಲ್ಲೂ ಬರತೊಡಗಿದವು. ಈ ನಾಗರಿಯೇ ಮುಂದೆ ದೇವನಾಗರಿಯಾಗಿ, ಸಂಸ್ಕೃತದ ವಿಶಿಷ್ಟವಾಹಿನಿಯಾಗಿ, ದೇಶಾದ್ಯಂತ ಪ್ರಚಾರಗೊಂಡಿತು, ಆದರೆ ದಖ್ಖಣದಲ್ಲಿ ಅದು ಕನ್ನಡ ಮತ್ತು ತೆಲುಗುಲಿಪಿಗಳಿಗೆ ಪ್ರಥಮ ಸ್ಥಾನವನ್ನು ಬಿಟ್ಟುಕೊಟ್ಟೇ ಅವುಗಳ ಹಿಂದೆ ಸಾಗಬೇಕಾಯಿತು. ಈ ಕಾರಣ ರಾಷ್ಟ್ರಕೂಟರ ಕಾಲಾನಂತರವೂ ಕರ್ನಾಟಕದಲ್ಲಿ ಸಂಸ್ಕೃತ ಶಾಸನಗಳನ್ನು ಹೆಚ್ಚು ಬರೆದದ್ದು ಕನ್ನಡಲಿಪಿಯಲ್ಲಿ.
(‘ಧಾರವಾಡ ಸಾಹಿತ್ಯ ಸಂಭ್ರಮ– 2017’ರಲ್ಲಿ ಮಾಡಿದ ವಿಶೇಷ ಉಪನ್ಯಾಸ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.