ADVERTISEMENT

ಭಾಷೆ ಮೀರಿದ ಜಗತ್ತಿನ ಚಿತ್ರದ ಕಥೆ

‘ಪಥೇರ್ ಪಾಂಚಾಲಿ’ ಅರವತ್ತು!

ಪಿ.ಶೇಷಾದ್ರಿ
Published 22 ಆಗಸ್ಟ್ 2015, 19:30 IST
Last Updated 22 ಆಗಸ್ಟ್ 2015, 19:30 IST

1956 ನೇ ಇಸವಿಯ ಒಂದು ದಿನ. ದೂರದ ಫ್ರಾನ್ಸ್ ದೇಶದಲ್ಲಿ ಪ್ರತಿಷ್ಠಿತ ‘ಕ್ಯಾನೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ ನಡೆದಿತ್ತು. ಜಗತ್ತಿನ ವಿವಿಧ ದೇಶಗಳಿಂದ ಚಲನಚಿತ್ರಗಳು ಸ್ಪರ್ಧಾಕಣದಲ್ಲಿದ್ದವು. ಅಂದು ಜ್ಯೂರಿಗಳು ಬೆಳಗ್ಗೆಯಿಂದ ನಾಲ್ಕು ವಿವಿಧ ರಾಷ್ಟ್ರಗಳ ಚಿತ್ರಗಳನ್ನು ನೋಡಿ ಸುಸ್ತಾಗಿದ್ದರು. ಆವತ್ತಿನ ಶೆಡ್ಯೂಲ್ ಪ್ರಕಾರ ನೋಡಲು ಇನ್ನೂ ಒಂದು ಚಿತ್ರ ಬಾಕಿ ಉಳಿದಿತ್ತು. ಅದು ಭಾರತೀಯ ಚಿತ್ರ!

ಈ ದೇಶದ ಚಿತ್ರಗಳ ಬಗ್ಗೆ ಒಂದು ರೀತಿಯ ನಿರ್ಲಕ್ಷ್ಯವಿದ್ದ ದಿನಗಳು ಅವು. ಮುಕ್ಕಾಲು ಪಾಲು ಜ್ಯೂರಿಗಳು ಚಿತ್ರ ನೋಡಲು ಉತ್ಸಾಹ ತೋರಿಸದೆ ಎದ್ದು ಹೊರಟರು. ಉಳಿದ ಇಬ್ಬರು-ಮೂವರು ಮಾತ್ರ ಚಿತ್ರ ನೋಡಲು ಕುಳಿತರು. ಪ್ರದರ್ಶನ ಮುಗಿದಾಗ ಮಧ್ಯರಾತ್ರಿ ದಾಟಿತ್ತು... 

ಬೆಳಗ್ಗೆ, ಇತರೆ ಜ್ಯೂರಿಗಳು ಬಂದರು. ರಾತ್ರಿ ನೋಡಿದ್ದ ಭಾರತೀಯ ಚಿತ್ರವನ್ನು ಮತ್ತೆ ಪ್ರದರ್ಶಿಸಲಾಯಿತು! ಮತ್ತೆ ಇದೇಕೆ? ನೋಡದಿದ್ದವರ ಪ್ರಶ್ನೆ. ‘ಸುಮ್ಮನೇ ನೋಡಿ’– ರಾತ್ರಿ ನೋಡಿದವರ ಉತ್ತರ. ಸರಿ, ಮತ್ತೊಮ್ಮೆ ಎಲ್ಲರೂ ನೋಡಿದರು, ಮನಸಾರೆ ಮೆಚ್ಚಿದರು, ಚಪ್ಪಾಳೆ ತಟ್ಟಿದರು. ಆ ಚಿತ್ರಕ್ಕೆ ‘ಅತ್ಯುತ್ತಮ ಮಾನವೀಯ ದಾಖಲೆಯ ಚಿತ್ರ’ ಪ್ರಶಸ್ತಿಯನ್ನು ಘೋಷಿಸಿದರು. ಅದೇ ಸತ್ಯಜಿತ್ ರೇ ಚಿತ್ರಿಸಿದ ಬಂಗಾಲಿ ಭಾಷೆಯ ಚಿತ್ರ ‘ಪಥೇರ್ ಪಾಂಚಾಲಿ’!

ಭಾರತೀಯ ಚಿತ್ರರಂಗದಲ್ಲಿ ಹೊಸ ಶಕೆಯ ಆರಂಭಕ್ಕೆ ನಾಂದಿ ಹಾಡಿದ ‘ಪಥೇರ್ ಪಾಂಚಾಲಿ’ ರೇ ಅವರ ‘ಅಪು ಸರಣಿ’ಯ ‘ಅಪರಾಜಿತೋ’ ಮತ್ತು ‘ಅಪುರ್ ಸಂಸಾರ್’ ಚಿತ್ರಗಳಲ್ಲಿ ಮೊದಲನೆಯದು. ಇಂಥ ಕಲಾಕೃತಿ ಬಿಡುಗಡೆಯಾಗಿ (26 ಆಗಸ್ಟ್, 1955) ಅರವತ್ತು ವರ್ಷಗಳಾಗುತ್ತಿದೆ.
***
‘ಪಥೇರ್ ಪಾಂಚಾಲಿ’ ಎಂದರೆ ‘ಕಿರು ಹಾದಿಯ ಹಾಡು’. ಈ ಚಿತ್ರದಲ್ಲಿ ಒಬ್ಬ ಬಾಲಕನ ದೃಷ್ಟಿಕೋನದಿಂದ ಇಡೀ ವಿಶ್ವವನ್ನು ರೇ ನಮಗೆ ದರ್ಶನ ಮಾಡಿಸುತ್ತಾರೆ. ಇದರ ಮೂಲಕತೆ ಪಶ್ಚಿಮ ಬಂಗಾಳದ ಪ್ರಸಿದ್ಧ ಕಾದಂಬರಿಕಾರರಾದ ವಿಭೂತಿಭೂಷಣ ಬ್ಯಾನರ್ಜಿ ಅವರದ್ದು. ಈ ಕತೆಯನ್ನು ಸತ್ಯಜಿತ್ ರೇ ಓದಿದ್ದು 1943ರಲ್ಲಿ. ಆಗ ಅವರಿಗೆ ಇದನ್ನು ಸಿನಿಮಾ ಮಾಡಬೇಕೆಂಬ ಕಲ್ಪನೆಯೂ ಇರಲಿಲ್ಲ; ತಾವು ನಿರ್ದೇಶಕರಾಗಬೇಕೆಂಬ ಯೋಚನೆಯೂ ಇರಲಿಲ್ಲ. ಆಗವರು ಒಂದು ಜಾಹೀರಾತು ಕಂಪೆನಿಯಲ್ಲಿ ವಿನ್ಯಾಸಕಾರನಾಗಿ ಕೆಲಸ ಮಾಡುತ್ತಿದ್ದರು. ಇದನ್ನು ಓದಿ ಮೆಚ್ಚಿ, ಮಕ್ಕಳಿಗಾಗಿ ಒಂದು ‘ಸಚಿತ್ರ ಕಥಾಮಾಲಿಕೆ’ ಸಿದ್ಧಪಡಿಸಬೇಕೆಂದು ಹೊರಟರು. ಆಗ ರಚಿಸಿದ ಚಿತ್ರಗಳೇ ‘ಸ್ಟೋರಿ ಬೋರ್ಡ್’ ಅಗಿ ಚಲನಚಿತ್ರವಾಗಿ ವಿಶ್ವಪ್ರಸಿದ್ಧವಾದದ್ದು ಇತಿಹಾಸ.

ಪಥೇರ್ ಪಾಂಚಾಲಿಯ ಕಥೆ ಸ್ಥೂಲವಾಗಿ ಹೀಗಿದೆ: ಅದೊಂದು ಬಡತನವೇ ಮೈವೆತ್ತಂತಿರುವ ಬಂಗಾಲಿ ಬ್ರಾಹ್ಮಣ ಕುಟುಂಬ. ಆ ಮನೆಯ ಯಜಮಾನ ಹರಿಹರ. ವೃತ್ತಿಯಲ್ಲಿ ಅರ್ಚಕನಾದರೂ ಪ್ರವೃತ್ತಿಯಲ್ಲಿ ಕವಿ. ಮುರುಕಲು ಮನೆಯಲ್ಲಿ ವಾಸ. ಪತ್ನಿ ಸರ್ಬೋಜಯ, ಮಗಳು ದುರ್ಗಾ ಮತ್ತು ಶಿಲಾಯುಗದ ಪಳೆಯುಳಿಕೆಯಂತಿರುವ ಅವನ ಸಂಬಂಧಿ ವೃದ್ಧೆ ಇಂದಿರ್ ಠಕ್ಕುರ್ ಜೊತೆಗಾರರು. ಬರಗಾಲ ಮತ್ತು ಬಡತನ ಹರಿಹರನನ್ನು ಕೆಲಸಕ್ಕಾಗಿ ಊರೂರು ಅಲೆಯುವಂತೆ ಮಾಡುತ್ತದೆ. ಈ ನಡುವೆ ಮಗ ಅಪುವಿನ ಜನನವಾಗುತ್ತದೆ. ಹರಿಹರ ದುಡಿಮೆಗಾಗಿ ದೂರದ ಊರಿಗೆ ಹೋದವನು ತಿಂಗಳುಗಟ್ಟಲೆ ಹಿಂತಿರುಗುವುದಿಲ್ಲ. ಬಡತನದ ಬೇಗೆಯಿದ್ದರೂ ದುರ್ಗಾ ಮತ್ತು ಅಪು ತಮ್ಮದೇ ಬಾಲ್ಯದಾಟಗಳೊಂದಿಗೆ ಬೆಳೆಯುತ್ತಾರೆ. ಮಗಳು ದುರ್ಗಾ ನೆರೆಹೊರೆಯಲ್ಲಿ ಆಗಾಗ ನಡೆಸುವ ಸಣ್ಣಪುಟ್ಟ ಕಳ್ಳತನಗಳು, ಇದಕ್ಕೆ ಮುದುಕಿ ಇಂದಿರೆಯ ಕುಮ್ಮಕ್ಕು, ಕೆಲಸದ ನಿಮಿತ್ತ ದೂರ ಹೋದ ಗಂಡ, ಇವೆಲ್ಲಾ ಸರ್ಬೋಜಯಳನ್ನು ಕಾಡುವ ನಿರಂತರ ಸಮಸ್ಯೆಗಳು.

ಒಂದು ಸಂದರ್ಭದಲ್ಲಿ ಸರ್ಬೋಜಯ ಅಜ್ಜಿ ಇಂದಿರೆಯನ್ನು ಮನೆಯಿಂದ ಹೊರ ಹಾಕುತ್ತಾಳೆ. ಉಳಿಯಲು ಎಲ್ಲೂ ತಾವಿಲ್ಲದೆ ಮುದುಕಿ ಕಾಡಿನ ಬಿದಿರಿನ ಬುಡದಲ್ಲಿ ಅನಾಥಳಾಗಿ ಕಣ್ಣುಮುಚ್ಚುತ್ತಾಳೆ. ಅಜ್ಜಿಯ ಸಾವು ಮಕ್ಕಳ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಈ ನಡುವೆ ಮಳೆಗಾಲ ಪ್ರಾರಂಭವಾಗುತ್ತದೆ. ಮಳೆಯಲ್ಲಿ ನೆನೆಯುವುದು ಅಪು ಮತ್ತು ದುರ್ಗಾಳಿಗೆ ಯಾವ ಕಿಮ್ಮತ್ತೂ ಬಯಸದೆ ಸಿಗುವ ಸುಖ. ಈ ಆಟ ದುರ್ಗಾಳ ಆರೋಗ್ಯವನ್ನು ಹಾಳುಗೆಡಹಿ ಬಲಿ ತೆಗೆದುಕೊಳ್ಳುತ್ತದೆ. ಈ ಸಾವು ಅಪುವಿನ ಮೇಲೆ ಗಾಢ ಪ್ರಭಾವವನ್ನು ಬೀರುತ್ತದೆ. ಸಿನಿಮಾದ ಅಂತ್ಯದಲ್ಲಿ ಹರಿಹರ ಒಂದಿಷ್ಟು ಸಂಪಾದಿಸಿ, ಉಡುಗೊರೆಗಳೊಂದಿಗೆ ಮನೆಗೆ ಹಿಂತಿರುಗುತ್ತಾನೆ. ದುರ್ಗಾಳ ಸಾವಿನ ಸುದ್ದಿ ಕೇಳಿ ಅವನಿಗೂ ಆಘಾತವಾಗುತ್ತದೆ. ಬದುಕಲು ಅಸಾಧ್ಯವಾದ ಆ ಮುರುಕಲು ಮನೆಯನ್ನೂ ಹಳ್ಳಿಯನ್ನೂ ತ್ಯಜಿಸಿ ಪತ್ನಿ ಮಗನೊಂದಿಗೆ ವಾರಾಣಸಿಗೆ ಹೊರಡುತ್ತಾನೆ. ಇದು ಕಾದಂಬರಿಯ ಕಾಲುಭಾಗದಷ್ಟು ಕತೆ.
***
ಚಲನಚಿತ್ರದಲ್ಲಿ ಭಾರತದ ಹಳ್ಳಿಯ ಬಡತನದ ದರ್ಶನವನ್ನು ಜಗತ್ತಿಗೇ ಮಾಡಿಸಿದ ಸತ್ಯಜಿತ್ ರೇ ಹುಟ್ಟಿದ್ದು ಶ್ರೀಮಂತಿಕೆಯ ಕುಟುಂಬದಲ್ಲಿ (1921). ತಮ್ಮ ಅಭಿವ್ಯಕ್ತಿಯನ್ನು ಹೊರಹಾಕಲು ಇವರು ಆರಿಸಿಕೊಂಡದ್ದು ಚಿತ್ರಕಲೆಯನ್ನು. ಇದರ ಕಲಿಕೆಗಾಗಿ ರವೀಂದ್ರನಾಥ್ ಟ್ಯಾಗೋರರ ಶಾಂತಿನಿಕೇತನ ಸೇರಿದರು. ನಂತರ ಕೋಲ್ಕತ್ತದ ಜಾಹೀರಾತು ಸಂಸ್ಥೆಯೊಂದರಲ್ಲಿ ವಿನ್ಯಾಸಕಾರನಾಗಿ ಉದ್ಯೋಗಕ್ಕೆ ಸೇರಿಕೊಂಡರು. ಅಲ್ಲಿ ಸ್ನೇಹಿತರೊಂದಿಗೆ, ಚಿತ್ರಕಲೆ, ರಾಜಕೀಯ, ಸಿನಿಮಾ ಕುರಿತು ಚರ್ಚಿಸುತ್ತಿದ್ದರು. ಇದರ ಫಲವಾಗಿ 1947ರಲ್ಲಿ ಪ್ರಾರಂಭವಾದದ್ದೇ ‘ಕಲ್ಕತ್ತಾ ಫಿಲಂ ಸೊಸೈಟಿ’. ಅದು ಭಾರತದಲ್ಲಿ ಪ್ರಾರಂಭವಾದ ಎರಡನೆಯ ಚಿತ್ರಸಮಾಜ. ಎಲ್ಲರೂ ಒಟ್ಟಿಗೇ ಸೇರಿ ವಿದೇಶಿ ಕ್ಲಾಸಿಕ್ ಸಿನಿಮಾಗಳನ್ನು ನೋಡಿದರು. ನೋಡ ನೋಡುತ್ತಲೇ ರೇ ಚಿತ್ರಗಳ ಪರಿಭಾಷೆಯನ್ನು ಗ್ರಹಿಸಿದರು.

1949ರಲ್ಲಿ ಸತ್ಯಜಿತ್ ರೇ ಬದುಕಿನಲ್ಲಿ ನಡೆದ ಒಂದು ಘಟನೆ ಅವರ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿತು. ಫ್ರೆಂಚ್ ನಿರ್ದೇಶಕ ಜೀನ್ ರೆನಾಯರ್ ತನ್ನ ‘ದಿ ರಿವರ್’ ಚಿತ್ರಕ್ಕೆ ಲೊಕೇಶನ್ ಹುಡುಕುತ್ತಾ ಕಲ್ಕತ್ತಾಗೆ ಬಂದರು. ಸತ್ಯಜಿತ್ ರೇ ಅವರೊಂದಿಗೆ ಹಲವಾರು ದಿನ ಓಡಾಡಿದರು. ಆಗ ಜಗತ್ತಿನ ಚಲನಚಿತ್ರಗಳ ಬಗ್ಗೆ ಇಬ್ಬರ ನಡುವೆ ಚರ್ಚೆಯಾಗುತ್ತಿತ್ತು. ರೇ ತಮ್ಮ ಮನಸ್ಸಿನಲ್ಲಿದ್ದ ‘ಪಥೇರ್ ಪಾಂಚಾಲಿ’ ಕತೆಯನ್ನು ಅವರಿಗೆ ಹೇಳಿದರು. ರೆನಾಯರ್ ಅದಕ್ಕೆ ಹಲವು ಒಳನೊಟಗಳನ್ನು ಸೂಚಿಸಿದರು.

ಅದೇ ಸಮಯದಲ್ಲಿ ಸತ್ಯಜಿತ್ ರೇ ತಾವು ಉದ್ಯೋಗದಲ್ಲಿದ್ದ ಜಾಹೀರಾತು ಕಂಪನಿಯ ಕೆಲಸದ ಮೇಲೆ ಲಂಡನ್‌ಗೆ ಹೋದರು. ಅಲ್ಲಿ ಇಟಲಿಯ ಚಿತ್ರನಿರ್ದೇಶಕ ವಿಟ್ಟೋರಿಯಾ ಡಿ ಸಿಕಾನ ‘ಬೈಸಿಕಲ್ ಥೀವ್ಸ್’ ನೋಡಿದರು. ಬದುಕಿಗೆ ಆಧಾರವಾದ ಬಡವನ ಬೈಸಿಕಲ್ ಕದಿಯುವ ಮತ್ತೊಬ್ಬ ಬಡವನ ಕತೆಯುಳ್ಳ ಆ ಚಿತ್ರ ಇವರನ್ನು ಗಾಢವಾಗಿ ತಟ್ಟಿತು. ಪಾಶ್ಚಿಮಾತ್ಯರ ನವವಾಸ್ತವಿಕತೆಯ ತಂತ್ರಗಳು ಇಷ್ಟವಾದವು.

ಭಾರತಕ್ಕೆ ಹಡಗಿನಲ್ಲಿ ಹಿಂತಿರುಗಿ ಬರುತ್ತಿರುವಾಗಲೇ ಮನದಲ್ಲಿ ‘ಪಥೇರ್ ಪಾಂಚಾಲಿ’ಯ ರೂಪು-ರೇಷೆ ಸಿದ್ಧವಾಗತೊಡಗಿತ್ತು. ಸತ್ಯಜಿತ್ ರೇ ಈ ಚಿತ್ರಕ್ಕಾಗಿ ಯಾವುದೇ ಚಿತ್ರಕಥೆ ಬರೆಯಲಿಲ್ಲ. ತಾವು ಚಿತ್ರಕ್ಕಾಗಿ ಮಾಡಿದ್ದ ಸ್ಕೆಚ್‌ಗಳನ್ನೇ ನಿರ್ಮಾಪಕರುಗಳಿಗೆ ತೋರಿಸಿ ಹಣ ಹೂಡಲು ಪ್ರೇರೇಪಿಸತೊಡಗಿದರು. ಅಲ್ಲಿಯವರೆಗೆ ಬಂಗಾಲಿ ಚಿತ್ರಗಳಲ್ಲಿ ಸ್ಟೋರಿ ಬೋರ್ಡ್ ಅನ್ನು ಯಾರೂ ಮಾಡಿರಲಿಲ್ಲ. ಅದೂ ಅಲ್ಲದೆ ರೇ ಹೇಳುತ್ತಿದ್ದ ಕಥಾ ನಿರೂಪಣೆಯಲ್ಲಿ ಹಾಡು, ಕುಣಿತ ಎರಡೂ ಇಲ್ಲದಿರುವುದು ಅವರಿಗೆ ಮತ್ತಷ್ಟು ಅಚ್ಚರಿ ಉಂಟು ಮಾಡಿತ್ತು. ಹೀಗೊಂದು ಚಿತ್ರ ಮಾಡಲು ಸಾಧ್ಯವೆ ಎಂಬುದೇ ಎಲ್ಲರ ಪ್ರಶ್ನೆಯಾಗಿತ್ತು. ಇವೆಲ್ಲದರ ಜೊತೆಗೆ ರೇ ಚಿತ್ರರಂಗಕ್ಕೆ ಹೊಸಬರು.

ಈ ಎಲ್ಲ ಕಾರಣಗಳಿಂದ ಯಾರೂ ಸುಲಭವಾಗಿ ಹಣ ಹೂಡಲು ಮುಂದೆ ಬರಲಿಲ್ಲ. ಆಗ ಸತ್ಯಜಿತ್ ರೇ ಚಿತ್ರದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿ ನಿರ್ಮಾಪಕರಿಗೆ ತೋರಿಸಿ ಅವರ ವಿಶ್ವಾಸ ಗಳಿಸುವ ಮತ್ತೊಂದು ಸಾಹಸಕ್ಕೆ ಮುಂದಾದರು. ಇದಕ್ಕೆ ಬೇಕಾದ ಹಣವನ್ನು ತಾವೇ ಹೊಂದಿಸಿಕೊಂಡರು. ಆ ಕಾಲದಲ್ಲಿ ಚಲನಚಿತ್ರಗಳನ್ನು ಸ್ಟುಡಿಯೊಗಳಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರೇ ನೈಜ ತಾಣಗಳನ್ನು ಹುಡುಕಿ ಹೊರಟರು. 

ಅಪು ಪಾತ್ರಕ್ಕೆ ಬೇಕಾದ 6–7 ವರ್ಷದ ಬಾಲಕಲಾವಿದನದ್ದೇ ಸಮಸ್ಯೆಯಾಗಿತ್ತು. ಶಾಲೆಗಳಿಗೆ ಹೋಗಿ ಹುಡುಕಿದರೂ ಸಮಾಧಾನವಾಗಲಿಲ್ಲ. ಕೊನೆಗೆ ಪತ್ರಿಕೆಗಳಲ್ಲಿ ಪ್ರಕಟಣೆ ಕೊಟ್ಟರು, ಸಾಕಷ್ಟು ಜನ ತಮ್ಮ ಮಕ್ಕಳೊಂದಿಗೆ ಆಡಿಷನ್‌ಗೆ ಬಂದರು. ಅವರ್‍ಯಾರಲ್ಲೂ ಅಪು ಕಾಣಲಿಲ್ಲ. ಕೊನೆಗೆ ಆತ ಸಿಕ್ಕಿದ್ದು ರೇ ಅವರ ಪತ್ನಿಗೆ, ಅವರ ಪಕ್ಕದ ಮಹಡಿಯಲ್ಲಿ ಆಡುತ್ತಿದ್ದ ಮಕ್ಕಳ ಗುಂಪಿನಲ್ಲಿ! ಆತನೇ ಬಾಲಕ ಸುಬೀರ್ ಬ್ಯಾನರ್ಜಿ. ಅಪುವನ್ನು ಹುಡುಕುವುದು ಎಷ್ಟು ತ್ರಾಸ ಆಯಿತೋ ಅಷ್ಟೇ ಕಷ್ಟ ಅಜ್ಜಿ ಇಂದಿರ್ ಠಾಕೂರನ್ ಹುಡುಕಲೂ ಆಯಿತು. ಕೊನೆಗೆ ಆಯ್ಕೆಯಾದವರು ನಟಿ ಚುನ್ನಿಬಾಲ ದೇವಿ. ಎಂಬತ್ತು ವರ್ಷದ ರಂಗಭೂಮಿಯ ನಟಿ. ಆಕೆ ಚಿತ್ರದಲ್ಲಿ ನಟಿಸಲು ಎರಡು ಕರಾರು ಹಾಕಿದಳಂತೆ. ಒಂದು, ಪ್ರತಿದಿನವೂ ಸಂಭಾವನೆ ಎಂದು ಇಪ್ಪತ್ತು ರೂಪಾಯಿ ಕೊಡಬೇಕು. ಆಮೇಲೆ  ಮಧ್ಯಾಹ್ನ ಊಟದ ನಂತರ ಒಂದು ತುಣುಕು ಹೊಗೆಸೊಪ್ಪು ಕೊಡಿಸಬೇಕು. ರೇ ಎರಡಕ್ಕೂ ಒಪ್ಪಿದರು. ಹಾಗಾಗಿ ಭಾರತೀಯ ಚಿತ್ರಗಳಲ್ಲೇ ಅದ್ಭುತವಾದ ಮುದುಕಿ ಪಾತ್ರ ಸೃಷ್ಟಿಯಾಯಿತು. 

ಇದರ ಛಾಯಾಗ್ರಾಹಕರು ಸುಭ್ರತಾ ಮಿತ್ರ. ಇವರು ಮೂಲತಃ ಸ್ಥಿರಛಾಯಾಗ್ರಾಹಕರು. ರೇಗೆ ಅವರ ಬಗ್ಗೆ ಅಪಾರ ನಂಬಿಕೆ. 27 ಅಕ್ಟೋಬರ್ 1952ರಂದು 16ಎಂಎಂ ಕ್ಯಾಮೆರಾ ಒಂದನ್ನು ಬಾಡಿಗೆಗೆ ಪಡೆದು ಎಂಟು ಜನರ ತಂಡದೊಂದಿಗೆ ಚಿತ್ರೀಕರಣ ಪ್ರಾರಂಭಮಾಡಿಯೇ ಬಿಟ್ಟರು.

ಮೊದಲ ಶಾಟ್ ಚಿತ್ರೀಕರಿಸಿದ್ದು ಅಪು ಮೇಲೆ. ಆತ ಬಯಲಲ್ಲಿ ಬೆಳೆದ ಹುಲ್ಲು ಜೊಂಡಿನ ನಡುವೆ ಅಕ್ಕ ದುರ್ಗಾಳನ್ನು ಹಿಂಬಾಲಿಸಿಕೊಂಡು ಹೋಗಿ ಅಂತ್ಯದಲ್ಲಿ ಉಗಿಬಂಡಿಯನ್ನು ನೋಡಿ ಅಚ್ಚರಿಪಡಬೇಕು. ಬಾಲಕ ಸುಭೀರ್ ಬ್ಯಾನರ್ಜಿಗೂ ಸಿನಿಮಾ ಹೊಸದು, ರೇಗೂ ಹೊಸದು. ಎರಡು ಮೂರು ಬಾರಿ ಪ್ರಯತ್ನಿದರೂ ಬಾಲಕ ನೈಜವಾಗಿ ಅಭಿನಯಿಸಲಿಲ್ಲ. ಹುಡುಗನಿಗೆ ಎಷ್ಟು ವಿವರಿಸಿದರೂ ಅರ್ಥವಾಗುತ್ತಿರಲಿಲ್ಲ. ಕೊನೆಗೆ ರೇ ಮಾಡಿದ ತಂತ್ರ ಏನು ಗೊತ್ತೆ? ಬಾಲಕನಿಗೆ ತಿಳಿಯದಂತೆ ಹುಲ್ಲುಗಾವಲಿನ ನಡುವೆ ಅಪು ನಡೆಯುವ ದಾರಿಯಲ್ಲಿ ನಡು ನಡುವೆ ಒಂದಿಷ್ಟು ಅಡೆ-ತಡೆಗಳನ್ನು ಹಾಕಿದರು. ಅಲ್ಲಲ್ಲಿ ಮರೆಯಲ್ಲಿ ಸಹಾಯಕರನ್ನು ಕೂರಿಸಿದರು. ಅವರು ಆಗಾಗ್ಗೆ ನಿಗದಿಪಡಿಸಿದ ಸಂದರ್ಭದಲ್ಲಿ ಅಲ್ಲಿಂದಲೇ ಅಪ್ಪುವನ್ನು ಕರೆದು ಅವನು ತಮ್ಮತ್ತ ನೋಡುವಂತೆ ಮಾಡುತ್ತಿದ್ದರು. ಶಾಟ್ ನೈಜವಾಗಿ ಬಂತು. ಇದೇ ಪ್ರಯತ್ನವನ್ನು ‘ಬೈಸಿಕಲ್ ಥೀವ್ಸ್’ನಲ್ಲಿ ಡಿ ಸಿಕಾ ತಂದೆಯ ಪಾತ್ರದ ನಟನಿಂದ ಮಾಡಿಸಿದ್ದನಂತೆ. ಅದೇ ತಂತ್ರವನ್ನು ರೇ ಇಲ್ಲಿ ಪ್ರಯೋಗ ಮಾಡಿ ಗೆದ್ದರು. 

ಈ ದೃಶ್ಯವನ್ನು ಇಟ್ಟುಕೊಂಡು ನಿರ್ಮಾಪಕರನ್ನು ಹುಡುಕಲು ಆರಂಭಿಸಿದರು. ರಾಣದತ್ತ ಎಂಬ ನಿರ್ಮಾಪಕ ಮುಂದೆ ಬಂದ. ಮತ್ತೆ ಚಿತ್ರೀಕರಣ ಪ್ರಾರಂಭವಾಯಿತು. ಕೆಲ ದಿನಗಳಲ್ಲೇ ಆತನೂ ಕೈ ಎತ್ತಿದ. ಚಿತ್ರೀಕರಣದಲ್ಲಿ ಊಟ ತರಿಸಲೂ ದುಡ್ಡಿರಲಿಲ್ಲ. ಆಗ ಸತ್ಯಜಿತ್ ರೇ ತಮ್ಮ ಪತ್ನಿಯ ಒಡವೆಗಳನ್ನು ಒತ್ತೆಯಿಟ್ಟು, ತಮ್ಮ ಬೆಲೆಬಾಳುವ ಪುಸ್ತಕಗಳನ್ನು ಮಾರಾಟಮಾಡಿ ಹಣ ಹೊಂದಿಸಿ ಚಿತ್ರೀಕರಣ ಮುಂದುವರಿಸಲು ಪ್ರಯತ್ನಿಸಿದರು. ಅದೂ ಎಷ್ಟು ದಿನ? ಒಂದು ಮಳೆಗಾಲ ಕಳೆಯಿತು, ಇನ್ನೊಂದು ಮಳೆಗಾಲ ಬಂತು. ಕೊನೆಗೆ ಸರ್ಕಾರದ ಬಳಿ ಹೋದರು. ಅಂದಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಿ.ಸಿ. ರಾಯ್ ಚಿತ್ರದ ರಶಸ್ ನೋಡಿ ಒಪ್ಪಿಗೆ ಸೂಚಿಸಿದರು. ಚಿತ್ರೀಕರಣ ಮತ್ತೆ ಪ್ರಾರಂಭವಾಯಿತು. ಕೊನೆಗೊಮ್ಮೆ ಚಿತ್ರೀಕರಣ ಮುಗಿದಾಗ ರೇ ನಿಟ್ಟುಸಿರು ಬಿಡುತ್ತಾ ಹೇಳಿದರಂತೆ. ‘‘ಈ ಚಿತ್ರ ಆದ ಮೂರು ವರ್ಷಗಳಲ್ಲಿ ನಾವು ಮೂರು ಅಪಾಯಗಳಿಂದ ತಪ್ಪಿಸಿಕೊಂಡೆವು. ಒಂದು ಅಪುವಿನ ಧ್ವನಿ ಬದಲಾಗಲಿಲ್ಲ; ಎರಡು ದುರ್ಗಾ ದೊಡ್ಡವಳಾಗಲಿಲ್ಲ; ಮೂರನೆಯದು ಅಜ್ಜಿ ಸಾಯಲಿಲ್ಲ!’’.

ಹೀಗೆ ಹಲವಾರು ಅಡೆತಡೆಗಳೊಂದಿಗೆ ಮೂರು ವರ್ಷಗಳ ಕಾಲ ಒಂದು ತಪಸ್ಸಿನಂತೆ ಮಾಡಿ ಮುಗಿಸಿದ ಚಿತ್ರ ‘ಪಥೇರ್ ಪಾಂಚಾಲಿ’. ಪಶ್ಚಿಮ ಬಂಗಾಲದ ಗ್ರಾಮೀಣ ಜೀವನವನ್ನು ಇದು ಸಮರ್ಥವಾಗಿ ಸೆರೆ ಹಿಡಿದಿತ್ತು. ಮಾನವ ಸಂಬಂಧಗಳ ಸೂಕ್ಷ್ಮಗಳನ್ನು ಪ್ರೇಕ್ಷಕರ ಮುಂದಿಡುವ ಮೂಲಕ ಹೊಸ ಚಿಂತನೆಗೆ ಎಡೆಮಾಡಿ ಕೊಟ್ಟಿತ್ತು. ನಾಟಕೀಯತೆ ಇಲ್ಲದೆ ಸಹಜವಾಗಿ, ಬದುಕಿನ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತಾ ಸಾಗಿದ್ದ ಚಿತ್ರ ನಿರೂಪಣೆಯಲ್ಲಿ ಒಂದು ನಿಧಾನಗತಿಯನ್ನು ಸಾಧಿಸಿತ್ತು.

ಸಿನಿಮಾದಲ್ಲಿನ ಪ್ರತಿಯೊಂದು ಅಂಶವನ್ನೂ ತುಂಬಾ ಎಚ್ಚರಿಕೆಯಿಂದ ಸತ್ಯಜಿತ್ ರೇ ರೂಪಿಸಿದ್ದರು. ಚಿತ್ರದಲ್ಲಿ ಬರುವ ಕರು, ನಾಯಿ, ಬೆಕ್ಕು, ಜೇಡ, ಸತ್ತ ಕಪ್ಪೆ, ರೆಕ್ಕೆ ಹುಳ ಮತ್ತು ಹಾವು ಎಲ್ಲವೂ ಸಮರ್ಥವಾಗಿ, ಸಾಂದರ್ಭಿಕವಾಗಿ ಬಳಕೆಯಾಗಿವೆ. ಈ ಸಂದರ್ಭದಲ್ಲಿ Renoir ಎಂಬ ನಿರ್ದೇಶಕನ ಮಾತುಗಳನ್ನು ನೆನಪಿಸಿಕೊಳ್ಳಬಹುದು– ‘You don't have to have too many elements in a film, but whatever you use must be the right elements, the expressive elements’.

ಚಿತ್ರದ ಒಂದು ಸನ್ನಿವೇಶದಲ್ಲಿ ದುರ್ಗಾಳ ಸಾವಾಗಿದೆ. ತಿಂಗಳುಗಟ್ಟಲೆ ಮನೆಯಿಂದ ಹೊರಗಿದ್ದ ಪತಿ ಹರಿಹರ ಮನೆಗೆ ಬರುತ್ತಾನೆ. ಆಗ ಸರ್ಬೋಜಯ ಗಲ್ಲಕ್ಕೆ ಕೈ ಹಾಕಿ ಕುಳಿತಿರುತ್ತಾಳೆ. ಗಂಡನ ಧ್ವನಿ ಕೇಳಿ ಕೈಕೆಳಗಿಳಿಸುತ್ತಾಳೆ. ಆಗ ಆಕೆಯ ಕೈಬಳೆಗಳು ಕೆಳಗೆ ಸರಿಯುತ್ತವೆ. ಈ ಉದಾಸೀನ ಭಾವ ಆಕೆ ಪ್ರಾಪಂಚಿಕವಾಗಿ ಎಂಥ ಅಸಡ್ಡೆ ಹೊಂದಿದ್ದಾಳೆ ಎಂಬುದನ್ನು ಹೇಳಬೇಕು ಎನ್ನುವುದು ರೇ ಯೋಚನೆ. ಬಳೆಯ ಈ ಚಲನೆಗಾಗಿ ರೇ ಏಳು ಟೇಕ್ ತೆಗೆದುಕೊಂಡಿದ್ದರಂತೆ! ಇಂಥ ಅನೇಕ ಸನ್ನಿವೇಶಗಳು ಚಿತ್ರದಲ್ಲಿವೆ. ಈ ಚಿತ್ರಕ್ಕೆ ಪಂಡಿತ್ ರವಿಶಂಕರ್ ಹಿನ್ನೆಲೆ ಸಂಗೀತ ಒದಗಿಸಿದ್ದರು. ಮಗಳ ಸಾವನ್ನು ಪತಿಗೆ ತಿಳಿಸುವ ಸಂದರ್ಭದಲ್ಲಿ ಪತ್ನಿ ಗಟ್ಟಿಯಾಗಿ ಅಳುತ್ತಾಳೆ. ಆಕೆಯ ಆಳುವಿನ ಧ್ವನಿಯ ಭಾವೋತ್ಕರ್ಷವನ್ನು ಕಡಿಮೆ ಮಾಡಲು ಅಳುವನ್ನು ನಿಧಾನವಾಗಿ ಕ್ಷೀಣ ಮಾಡಿ ಅಲ್ಲಿ ಶಹನಾಯಿಯನ್ನು ಬಳಸಿ ವಿಶಿಷ್ಟ ಭಾವ ಮೂಡಿಸಲಾಗಿದೆ.
***
ಚಿತ್ರ ಬಿಡುಗಡೆಯಾದಾಗ ಇದನ್ನು ಬರಿ ವಿಮರ್ಶಕರು ಮಾತ್ರವಲ್ಲ, ಜನರೂ ಮೆಚ್ಚಿದರು. ಇದರ ಯಶಸ್ಸು ಜಾಗತಿಕ ಸಿನಿಮಾ ಜಗತ್ತು ಭಾರತೀಯ ಸಿನಿಮಾಗಳನ್ನೂ ಕಣ್ಬಿಟ್ಟು ನೋಡುವಂತಾಯಿತು. ಪ್ರಖ್ಯಾತ ಚಿತ್ರ ನಿರ್ದೇಶಕ ಕುರಸೋವ ಅವರಿಗೂ ಕೂಡ ಇದು ಅಚ್ಚುಮೆಚ್ಚಿನ ಚಿತ್ರ. ಆ ಕಾಲಕ್ಕೇ ಹಾಲಿವುಡ್ ಚಿತ್ರಗಳ ಅತ್ಯಂತ ಕಟು ವಿಮರ್ಶಕ ಎಂದು ಹೆಸರು ಮಾಡಿದ್ದ, ಜಾನ್ ಸೈಮನ್ ಎಂಬ ಅಮೆರಿಕದ ವಿಮರ್ಶಕ, ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ’ಯನ್ನು ವಸ್ತುನಿಷ್ಠ ವಿಮರ್ಶೆಗೊಳಪಡಿಸಿ, ‘ಭಾರತೀಯ ಬಡತನದ ನೆಗಟಿವ್ ಅನ್ನು ಬೆಳ್ಳಿತೆರೆಗೆ ತಂದ ಸಮರ್ಥ ಚಿತ್ರ’ ಎಂದು ಹಾಡಿ ಹೊಗಳಿದ. ವಿಪರ್ಯಾಸವೆಂದರೆ, ಆಗ ರಾಜ್ಯಸಭಾ ಸದಸ್ಯೆಯಾಗಿದ್ದ, ಹಿಂದಿ ಚಿತ್ರರಂಗದಲ್ಲಿ ಅಭಿನೇತ್ರಿಯಾಗಿ ಮಿಂಚಿದ್ದ, ನರ್ಗೀಸ್, ‘ಇದು ಭಾರತೀಯ ಬಡತನದ ಕ್ಷುಲ್ಲಕ ಪ್ರದರ್ಶನ’ ಎಂದು ರಾಜ್ಯಸಭೆಯಲ್ಲಿ ಚಿತ್ರವನ್ನು ಲೇವಡಿ ಮಾಡಿದರು. ಒಂದು ಹಂತದಲ್ಲಿ ಈ ಚಿತ್ರವನ್ನು ನಿಷೇಧಿಸಲೂ ಯೋಜಿಸಲಾಗಿತ್ತು!
***
ನಮ್ಮ ದೇಶದ ವಿಭಿನ್ನ ಚಿತ್ರಮಾರ್ಗಕ್ಕೆ ಸಾಕ್ಷಿಯಾದ ‘ಪಥೇರ್ ಪಾಂಚಾಲಿ’ ಹುಟ್ಟಿಗೆ ಒಂದು ಸಣ್ಣ ಫ್ಲ್ಯಾಶ್‌ಬ್ಯಾಕ್: ಮುಖ್ಯವಾಹಿನಿಯ ಸಿನಿಮಾಗಳ ಸಾಂಪ್ರದಾಯಿಕ ಕಥನಕ್ರಮದಿಂದ ಭಿನ್ನವಾದ ಮಾರ್ಗ ತುಳಿದ ಪರ್ಯಾಯ ಚಿತ್ರಗಳು ಪ್ರಾರಂಭವಾದದ್ದು ಯೂರೋಪಿನಲ್ಲಿ. ಆಗ ಎರಡನೇ ಮಹಾಯುದ್ಧ ಮುಗಿದಿತ್ತು. ಇಟಲಿಯಲ್ಲಿ ‘ದ ಓಪನ್ ಸಿಟಿ’ ಎಂಬ ಚಿತ್ರ ತಯಾರಾಯಿತು. ಅದರ ನಿರ್ದೇಶಕ ರೊಸೆಲಿನಿ. ಆತ ಈ ಚಿತ್ರದಲ್ಲಿ ಇಟಲಿಯ ಫ್ಯಾಸಿಸಂ ಮತ್ತು ಜರ್ಮನಿಯ ನಾಸಿಸಂಗಳಿಗೆ ಪ್ರತಿಭಟನೆಯೆಂಬಂತೆ, ಯುದ್ಧದ ಭಯಂಕರ ಪರಿಣಾಮಗಳನ್ನು ಶಕ್ತಿಯುತವಾಗಿ ಚಿತ್ರಿಸಿ ಮಾನವೀಯತೆಯನ್ನು ಎತ್ತಿಹಿಡಿದಿದ್ದ. ಅದರಲ್ಲಿ ಅದ್ದೂರಿತನವಿರಲಿಲ್ಲ, ಆಡಂಬರಗಳಿರಲಿಲ್ಲ, ಅದೊಂದು ವಾಸ್ತವಿಕವಾದ ಚಿತ್ರಣವಾಗಿತ್ತು. ಚಿತ್ರನಿರ್ಮಾಣದಲ್ಲಿ ಇದೊಂದು ಹೊಸಶೈಲಿ ಎನ್ನಿಸಿಕೊಂಡ ಕಾರಣ ಅದನ್ನು ‘ನವವಾಸ್ತವಪಂಥ’ (Neo-Realism) ಎಂಬ ಹೊಸ ಹೆಸರಿನಿಂದ ಕರೆಯಲಾಯಿತು.  ಹಳೆಯದನ್ನು ಪ್ರತಿಭಟಿಸುವ ಕ್ರಾಂತಿಯ ಹೊಸ ಅಲೆ ಮೊಳೆತದ್ದು ಆಗಲೇ. ಇದನ್ನು ಹಿಂಬಾಲಿಸಿ ಬಂದದ್ದೇ ವಿಟ್ಟೊರಿಯೊ ಡಿ ಸಿಕಾನ ‘ಬೈಸಿಕಲ್ ಥೀವ್ಸ್’.

ಹೀಗೆ ಆರಂಭವಾದ ಈ ಹೊಸ ಅಲೆಯ ಪ್ರಭಾವ ನಮ್ಮ ದೇಶಕ್ಕೂ ಬಂತು. ಚೇತನ್ ಆನಂದ್‌ರ ‘ನೀಚ್ ನಗರ್’ (1946) ಎಂಬ ಹಿಂದಿ ಚಿತ್ರದಲ್ಲಿ ಹೊಸ ಅಲೆಯ ಪ್ರಭಾವವನ್ನು ಇತಿಹಾಸಕಾರರು ಸ್ಪಷ್ಟವಾಗಿ ಗುರುತಿಸಿದ್ದಾರೆ. ನಂತರ ಇದು ಮುಂದುವರಿದದ್ದು ಋತ್ವಿಕ್ ಘಟಕ್‌ರ ‘ನಾಗರಿಕ್’ (1952), ಬಿಮಲ್‌ರಾಯ್ ಅವರ ‘ದೋ ಬೀಗಾ ಝಮೀನ್’ (1953)ನಲ್ಲಿ.  ಸತ್ಯಜಿತ್ ರೇ ಅವರ ಮೇಲೆ ಇವೆಲ್ಲವುಗಳ ಪ್ರಭಾವ ದಟ್ಟವಾಗಿರುವುದನ್ನು ನಾವು ಗುರುತಿಸಬಹುದು. ಪಾಶ್ಚಿಮಾತ್ಯ ಚಿತ್ರಗಳ ವ್ಯಂಗ್ಯ, ತಮಾಷೆ, ನ್ಯೂನೋಕ್ತಿ, ತೆರೆದಿಟ್ಟ ಅಂತ್ಯ ಇವನ್ನು ಇಲ್ಲೂ ಕಾಣಬಹುದು.

‘ನಾನೇಕೆ ಚಿತ್ರ ನಿರ್ಮಿಸುತ್ತೇನೆ’ ಎಂಬ ಬಗ್ಗೆ ರೇ ಒಂದೆಡೆ ಹೀಗೆ ಹೇಳುತ್ತಾರೆ. “ನಾನೇಕೆ ಚಿತ್ರ ಮಾಡುತ್ತೇನೆ ಎಂದು ಯಾರಾದರೂ ಕೇಳಿದರೆ ಉತ್ತರ ಹೇಳುವುದು ಕಷ್ಟ. ಇದಕ್ಕೆ ಸರಿಯಾದ ಅಥವಾ ಒಳ್ಳೇ ಕಾರಣಗಳು ಇಲ್ಲ ಎಂಬುದಲ್ಲ, ಕಾರಣಗಳು ಅನೇಕ ಇದ್ದಾವೆ ಎಂಬುದೇ! ಚಿತ್ರ ತಯಾರಿಸುವುದರಲ್ಲಿ ನನಗೆ ಪ್ರೀತಿ ಇದೆ ಎಂಬುದೇ ಈ ಪ್ರಶ್ನೆಗೆ ನಿಜವಾದ ಉತ್ತರ... ನನ್ನ ಮೊದಲ ಚಿತ್ರ ‘ಪಥೇರ್ ಪಾಂಚಾಲಿ’ಗೆ ಮೊದಲು ನನಗೆ ಗೊತ್ತಿದ್ದ ಬಂಗಾಲದ ಜೀವನ ಮೇಲುಮೇಲಿನದ್ದು. ಈಗ ಮಾತ್ರ ಅದು ನನಗೆ ಕಿಂಚಿತ್ತಾದರೂ ಗೊತ್ತು ಎನ್ನಬಲ್ಲೆ; ಅದರ ನೆಲ, ಋತುಗಳು, ಗಿಡಗಳು, ಕಾಡುಗಳು, ಹೂಗಳು; ಹೊಲದಲ್ಲಿ ದುಡಿವ ಹೆಂಗಸರು, ಬಾವಿಯ ಬಳಿ ಹರಟುವ ಹೆಂಗಸರು, ಮಳೆ ಬಿಸಿಲಲ್ಲಿ ಆಡುವ ಮಕ್ಕಳು; ಪ್ರಪಂಚದ ಎಲ್ಲ ಕಡೆ ಆಡುವ ಹಾಗೇ ಆಡುವ ಮಕ್ಕಳು. ಈಗ ನನಗೆ ಕೊಲ್ಕತ್ತಾ ಗೊತ್ತು. ಪ್ರಪಂಚದ ಯಾವುದೇ ನಗರದ ಹಾಗೆ ಇದಿಲ್ಲ. ಆದರೆ ಇಲ್ಲೂ ಜನ ಲಂಡನ್, ನ್ಯೂಯಾರ್ಕ್, ಟೋಕಿಯೋಗಳಲ್ಲಿ ಹೇಗೋ ಹಾಗೇ ಹುಟ್ಟುತ್ತಾರೆ, ಬದುಕುತ್ತಾರೆ, ಪ್ರೇಮಿಸುತ್ತಾರೆ. ಈ ವೈಶಿಷ್ಟ್ಯ ಮತ್ತು ಸಾಂಗತ್ಯ- ಇದು ನನ್ನನ್ನು ಬೆರಗುಗೊಳಿಸುತ್ತದೆ. ಈ ಬೆರಗನ್ನೇ ನನ್ನ ಚಿತ್ರಗಳಲ್ಲಿ ಕಾಣಿಸಲು ಯತ್ನಿಸುತ್ತೇನೆ”.

ನಲವತ್ತು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ರೇ ಮೂವತ್ತೇಳು ಚಿತ್ರಗಳನ್ನು ನಿರ್ದೇಶಿಸಿದರು. ಹಲವಾರು ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳನ್ನು ಮಾಡಿದರು.  ಎಲ್ಲವೂ ಒಂದಲ್ಲ ಒಂದು ಪ್ರಶಸ್ತಿಯನ್ನು ಪಡೆದುಕೊಂಡಿವೆ. ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ಭಾರತರತ್ನ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಸಿನಿಮಾ ರಂಗದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ದಕ್ಕುವ ಆಸ್ಕರ್ ಪ್ರಶಸ್ತಿಯೂ ಇವರನ್ನು ಹುಡುಕಿಕೊಂಡು ಬಂದಿದೆ. ಆ ಮೂಲಕ ಆಸ್ಕರ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ರೇ ಪಾತ್ರರಾಗಿದ್ದಾರೆ. ಉಳಿದಂತೆ ಮೂವತ್ತೈದು ಅಂತರರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ಮೂವತ್ತು ರಾಷ್ಟ್ರಪ್ರಶಸ್ತಿಗಳು ರೇ ಅವರಿಗೆ ದೊರೆತಿವೆ. 1992ರಲ್ಲಿ ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ಸತ್ಯಜಿತ್ ರೇ ಕೊನೆಯುಸಿರೆಳೆದರು. ಇಂದು ಅವರು ಇಲ್ಲ. ಆದರೆ ಅವರು ಬಿಟ್ಟು ಹೋದ ಚಿತ್ರಗಳು ನಮ್ಮನ್ನು ಈಗಲೂ ಕಾಡುತ್ತವೆ. ಇದಲ್ಲವೆ ಒಂದು ಬದುಕಿನ ಸಾರ್ಥಕತೆ ಅಂದರೆ...

‘‘ನೋಡಿದ ಚಿತ್ರ ಚಿತ್ತ ಕೆಡಿಸಬೇಕು, ನಮ್ಮನ್ನು ಬೆಳೆಸಬೇಕು, ಅಂತರಂಗವನ್ನು ಅಲ್ಲಾಡಿಸಬೇಕು, ಅರಳಿಸಬೇಕು’’
-ಸತ್ಯಜಿತ್ ರೇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.