ADVERTISEMENT

ಭೀಷ್ಮನ ನೈತಿಕ ಪ್ರಜ್ಞೆ

ಯು.ಆರ್.ಅನಂತಮೂರ್ತಿ
Published 27 ಜುಲೈ 2013, 19:59 IST
Last Updated 27 ಜುಲೈ 2013, 19:59 IST

ಮಹಾಭಾರತದಲ್ಲಿ ಭೀಷ್ಮನನ್ನು ಎಲ್ಲರೂ ಯಾಚಿಸುವವರೆ; ಸ್ವಂತ ಅಪ್ಪನೂ ಕೂಡ. ಅಪ್ಪನ ಕಾಮಜೀವನಕ್ಕಾಗಿ ತನ್ನ ಕಾಮ ಜೀವನವನ್ನು ತ್ಯಾಗ ಮಾಡಿದ ಈ ಭೀಷ್ಮನನ್ನು ಯಾರೂ ಉತ್ಕಟವಾಗಿ ಪ್ರೀತಿಸುವಂತೆ ನಮಗೆ ಕಾಣುವುದಿಲ್ಲ. ಹುಷಾರು ತಪ್ಪಿ ನಡೆದುಕೊಳ್ಳುವವರೇ (ಅರ್ಜುನ, ಭೀಮ, ಕರ್ಣ, ದ್ರೌಪದಿ) ನಮಗೆ ಪ್ರಿಯರಾಗುವುದು. ಇತ್ತ ಗೃಹಸ್ಥನೂ ಆಗದೆ, ಸನ್ಯಾಸಿಯೂ ಆಗದೆ ಎಲ್ಲದಕ್ಕೂ ಸಾಕ್ಷಿಯಾಗಿ ಬದುಕುವ ಈ ಮುದುಕನಿಗೆ ಯೌವನವೇ ಇಲ್ಲವೆನ್ನಿಸುತ್ತದೆ.

ಆದರೆ ಇಡೀ ಕಥನದಲ್ಲಿ ತನ್ನ ಮಾನಸಿಕ ಸಮತೋಲನ ಕಳೆದುಕೊಳ್ಳದಂತೆಯೂ, ಕೌರವ/ಪಾಂಡವ ವ್ಯಾಜ್ಯದಲ್ಲಿ ಘಟನೆಯೊತ್ತಡದ ಅವಸರಕ್ಕೆ ಮೂಡುವ ಅಂತಃಸಾಕ್ಷಿಯ ಪಿಸುಮಾತಿಗೂ ಅವಕಾಶ ಕೊಡದೆಯೂ ಯಾವ ಪಕ್ಷಕ್ಕೂ ವಾಲದಂತೆ ತನ್ನ ಆಯುಷ್ಯವನ್ನು ಸವೆಸುತ್ತ ಭವಿಷ್ಯದಲ್ಲಿ ನಿಜವೆನ್ನಿಸುವಂತೆ ಕಾಣುವ ಭೀಷ್ಮನನ್ನು ಅಡ್ಡಗೋಡೆಯ ಮೇಲಿನ ದೀಪವೆಂದು ಅಲ್ಲಗಳೆಯಲಾಗದು. ಕಟ್ಟಳೆಯ ಪ್ರಕಾರ ಕೌರವರು ತಂದೆಗೆ ಹುಟ್ಟಿದ ಮಕ್ಕಳು; ಪಾಂಡವರು ನಿಜದಲ್ಲಿ ಕೌಂತೇಯರು. ಇದೊಂದು ಸಮಸ್ಯೆ ಕಥೆಯ ಉದ್ದಕ್ಕೂ ಇದೆ. ಕುಟುಂಬದ ಹಿರಿಯನಾದ ಭೀಷ್ಮ ಇಂತಹ ಲೌಕಿಕ ಸತ್ಯಗಳಿಗೂ ಬಂದಿಯೇ.

ಇಳಿಬಿದ್ದ ಹುಬ್ಬನ್ನು ಕಣ್ಣಿಗಡ್ಡವಾಗದಂತೆ ಮೇಲಕ್ಕೆತ್ತಿಕಟ್ಟಿ ಕೃಷ್ಣನ ಕೋಪಕ್ಕೆ ಪಾತ್ರನಾಗುವ ಪುಣ್ಯಕ್ಕೆ ಕಾಯುವ, ತಾನು ಕಂಡ ಸತ್ಯವನ್ನು ವಿಧುರನಂತೆ ಹೊರಹಾಕದೆ ಉಂಡ ಉಪ್ಪಿನ ಋಣಕ್ಕಾಗಿ ಬಾಯಿಮುಚ್ಚಿ ಕೂತಿದ್ದು ಯುದ್ಧಕ್ಕೆ ಮನಸಿನಲ್ಲಿ ಒಲ್ಲದೆ ಸನ್ನದ್ಧನಾಗುವ, ಈ ಅಜೇಯನಾದ ಭೀಷ್ಮ ಗೌರವಕ್ಕೆ ಎಷ್ಟು ಪಾತ್ರನೋ ಅಷ್ಟೇ ಸಂಗಾತಿ ಅಕ್ಕರೆಗೆ ನಿಲುಕದವ. ಎಲ್ಲರಿಗೂ ಬೇಕಾದವನಾಗಿ ಯಾರಿಗೂ ಬೇಡವಾದವ.

ಈ ವ್ಯಕ್ತಿಯ ನೈತಿಕ ಲೋಕ ಯಾವ ಬಗೆಯದೆಂದು ಆಲೋಚಿಸುತ್ತಿದ್ದಂತೆ ನನಗೆ ಹೊಳೆದದ್ದು ತನ್ನ ಕಾಲಕ್ಕೆ ಆಯ್ಕೆಯ ಸಂಕಟದಲ್ಲಿ ಎದುರಾಗುವ, ಸರಳವಾದ ತೀರ್ಪಿಗೆ ಬರಲಾರದೆ ಸುಮ್ಮನಿರುವಂತೆ ತೋರುವ ಲಿಬರಲ್ ಧೋರಣೆಯ ಮನುಷ್ಯನದು. ತಾನು ಮಾಡುವುದು ತಪ್ಪೋ ಸರಿಯೋ ಎಂಬ ಬಗ್ಗೆ ತೀರ ತಲೆಕೆಡಿಸಿಕೊಳ್ಳದವರೇ ಎಲ್ಲ ಕಾಲದಲ್ಲೂ ಕ್ರಿಯಾಶೀಲರು. ಇಂಥವರ ನಡುವೆ ಭೀಷ್ಮ ಮೌನಿ; ಕಾಲಕ್ಕೆ ತನ್ನನ್ನು ಒಡ್ಡಿಕೊಂಡವನು. ಯೌವನವನ್ನೇ ಕಾಣದ ಅಕಾಲ ವೃದ್ಧ.

ಭೀಷ್ಮನ ಒಳನೋಟಗಳು ಬಹು ಸೂಕ್ಷ್ಮದಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಮುಂದೆ ರಾಜನಾಗಲಿರುವ ಧರ್ಮರಾಯ ಪ್ರಾಣಿ ಹಿಂಸೆ ಎಷ್ಟು ಅಗತ್ಯ ಅಥವಾ ಅನಿವಾರ್ಯ ಎಂದು ಕೇಳಿದಾಗ ಭೀಷ್ಮ ಕೊಡುವ ಉತ್ತರ ಕ್ರಿಯೆಯಲ್ಲಿ ಸಾಬೀತಾಗುವ ಸಂಗತಿಯಲ್ಲ; ಅಂತಃಕರಣದ ಒಂದು ಸುಯಿಲು.

ತನ್ನ ಕಾಲದ ಕಟ್ಟು-ಕಟ್ಟಲೆಗಳಲ್ಲಿ ಊರಿಕೊಂಡ ಮನಸ್ಸಿನ ಭೀಷ್ಮ (ಗೌತಮ ಬುದ್ಧನಂತೆ) ಯಜ್ಞಯಾಗಗಳನ್ನು ವಿರೋಧಿಸುವುದೂ ಇಲ್ಲ, ಸಮರ್ಥಿಸುವುದೂ ಇಲ್ಲ. ಅವನು ಕೊಡುವ ಉತ್ತರವನ್ನು ಗಮನಿಸಬೇಕು. ಅದು ತನಗೇ ಹೇಳಿಕೊಂಡ ಭಾವುಕ (ಅಪ್ರಯೋಜಕ) ಸಮಾಧಾನದಂತಿದೆ, ಅಥವಾ ಯಾವ ಸಮಾಧಾನಕ್ಕೂ ಸಿಗದ ಪ್ರಶ್ನೆಗೆ ದಿಕ್ಕು ತೋಚದವನ ನಿಟ್ಟುಸಿರಿನಂತಿದೆ. ಅಸಹಾಯಕತೆ ಕೂಡ ಮಾನವೀಯ ಸ್ಪಂದನವೇ ಒಬ್ಬ ಲಿಬರಲ್ ಧೋರಣೆಯ ಮನುಷ್ಯನಿಗೆ.

ಒಂದು ಕತೆ ಹೇಳಿ ಭೀಷ್ಮ ಧರ್ಮರಾಯನ ಪ್ರಶ್ನೆಗೆ ಉತ್ತರಿಸುವುದು. ಒಮ್ಮೆ ಒಂದು ಯಜ್ಞದಲ್ಲಿ ಆರ್ತವಾಗಿ ಕೂಗುತ್ತಿರುವ ಗೋವುಗಳನ್ನು ಅವುಗಳನ್ನು ಕೊಲ್ಲುವ ಕ್ರೂರ ಕ್ರಿಯೆಗೆ ಸಹಾಯಕವಾಗಿ ಸಡಗರಿಸುತ್ತಿರುವ ಬ್ರಾಹ್ಮಣರ ಕೂಟವನ್ನೂ ಪ್ರಾಜ್ಞನೊಬ್ಬ ನೋಡಿದನು. ಕರುಣೆಯಲ್ಲಿ ಪರವಶನಾದ ಈ ಪ್ರಾಜ್ಞ ಭಾವುಕವಾಗಿ ಉದ್ಘರಿಸುತ್ತಾನೆ: `ಅಯ್ಯೋ ಪಾಪದ ಗೋವುಗಳೇ!'. ಈ ಉದ್ಗಾರವೇ ಈ ಸಂದರ್ಭದ ಉತ್ತರವಾಗಿಯೂ ಭೀಷ್ಮನಿಗೆ ತೋರುತ್ತದೆ.

`ಗೋವುಗಳಿಗೆ ಕ್ಷೇಮ ಉಂಟಾಗಲಿ' ಎಂದು ಭಾವುಕವಾಗಿ ಉದ್ಗರಿಸಿದ್ದೇ ಈ ಲೋಕದಲ್ಲಿ ನಿಲ್ಲುವ ಸತ್ಯದ ವಚನವಾಯಿತು ಎನ್ನುತ್ತಾನೆ ಭೀಷ್ಮ. ಅಂದರೆ ಸಂಪೂರ್ಣ ಹಿಂಸೆಯ ಪರವಾಗಿ ಆಗಲೀ ಅಥವಾ ನಿರ್ವಾಹವಿಲ್ಲದೆ ಹಿಂಸೆ ಮಾಡುವ ಪರಂಪರೆಯ ಸಮರ್ಥನೆಯನ್ನಾಗಲೀ ಮಾಡಲಾರದ ನಿಸ್ಸಹಾಯಕತೆಯ ಆರ್ತತೆಯೂ ಇಲ್ಲಿ ಒಂದು ಉತ್ತರವಾಗಿ ಕಾಣಬಲ್ಲದಾಗಿದೆ. ಈಗ ನಿಜವಾಗದೇ ಹೋದದ್ದು ಮುಂದಾದರೂ ನಿಜವಾಗಬಹುದೇನೋ ಎನ್ನುವ ಆಶಯದಲ್ಲಿ ಭೀಷ್ಮನ ಉತ್ತರ ಕಾಣಿಸಿಕೊಳ್ಳುತ್ತದೆ. ಸದ್ಯದ ಸತ್ಯಕ್ಕೆ ಪ್ರಜ್ಞಾಲೋಕದ ದೃಢತೆಯಲ್ಲಿ ಮಾತ್ರ ಎದುರಾಗುವ ಕಾಲಕ್ಕೆ ಬಂದಿಯಾದರೂ ಶವಾಗದ ಔದಾರ್ಯದ (ಲಿಬರಲ್) ಮನಸ್ಸು ಇಲ್ಲಿದೆ.

ಭೀಷ್ಮ ಹೇಗೆ ಚಿಂತಿಸುತ್ತಾನೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ: ಇಕ್ಕಟ್ಟಾದ ಕಾರ್ಯ ಸಂಕಟ ಒದಗಿದಾಗ ಅದನ್ನು ಶೀರ್ಘದಲ್ಲಿ ಮುಗಿಸಬೇಕೆ ಅಥವಾ ದೀರ್ಘಕಾಲ ನಿರೀಕ್ಷೆಯಿಂದ ವಿಮರ್ಶಿಸಿ ನಡೆಸಬೇಕೆ ಎನ್ನುವ ಪ್ರಶ್ನೆ ಸಾರ್ವಕಾಲಿಕವಾದದ್ದು. ಶೇಕ್ಸ್‌ಪಿಯರ್‌ನ `ಹ್ಯಾಮ್ಲೆಟ್' ನಾಟಕದ ಅಂತರಂಗದಲ್ಲಿರುವ ಸಮಸ್ಯೆ ಇದು. ಇದನ್ನು ಭೀಷ್ಮ ಪರಿಹರಿಸುವ ಕ್ರಮ ನೋಡೋಣ. ಭೀಷ್ಮನೇ ಹೇಳುವ ಗೌತಮನ ಕತೆಯಲ್ಲಿ ಇದು ಅಡಗಿದೆ.

ಗೌತಮ ಮುನಿಗೆ ಅನೇಕ ಪುತ್ರರಿದ್ದರು. ಅವರಲ್ಲಿ ಒಬ್ಬನ ಹೆಸರು `ಚಿರಕಾರಿಕ'. ಭೀಷ್ಮ ಕಥನದಲ್ಲಿ ಈ ಹೆಸರನ್ನು ನೆನೆಯುತ್ತಿದ್ದಂತೆಯೇ ಉದ್ಗರಿಸುತ್ತಾನೆ, `ಓ ಚಿರಕಾರಿಕಾ ನಿನಗೆ ಒಳ್ಳೆಯದಾಗಲಿ'. ಹೀಗೆ ತಾನು ಕಥಿಸುವ ವ್ಯಕ್ತಿಯನ್ನು ತನ್ನ ಕಥನದಲ್ಲಿ ಬರಮಾಡಿಕೊಳ್ಳುವ ಭಾವುಕತೆ ಭೀಷ್ಮನ ಒಳಜೀವನದ ಆರ್ದತೆಯನ್ನು ಸೂಚಿಸುವಂತಿದೆ. ಅಲ್ಲದೆ ತನ್ನ ಒಳಗೇ ಸತತ ಮಾತಾಡಿಕೊಳ್ಳುವ ಸಪ್ಪೆ ಎನ್ನಿಸುವ ವಿಳಂಬಿಯೊಬ್ಬನನ್ನು ದೃಢಸಂಕಲ್ಪದ ಭೀಷ್ಮನಂತವನೊಬ್ಬ ಮುಖವಾಣಿ ಮಾಡಿಕೊಳ್ಳುವುದೇ ಅರ್ಥಗರ್ಭಿತವಾಗಿದೆ. ಲಿಬರಲ್ ಎಂದು ನಾವು ತಿಳಿಯುವವರೆಲ್ಲರೂ ತಾನಲ್ಲದ್ದರಲ್ಲಿ ನಿತ್ಯಾಸಕ್ತರು. (ಬ್ರಿಟನ್ನಿನ ಜಾನ್ ಸ್ಟೂವರ್ಟ್ ಮಿಲ್ ತನ್ನ ವಿದ್ಯಾರ್ಥಿಗಳಿಗೆ ಸಂಪ್ರದಾಯವಾದಿ ಕೋಲೆರಿಡ್ಜನ್ನು ಓದದೇ ಯಾವ ತೀರ್ಮಾನಕ್ಕೂ ಬರಬಾರದು ಎನ್ನುತ್ತ ಇದ್ದನಂತೆ. ಮಿಲ್ ಲಿಬರಲ್ ತತ್ವದ ರೂವಾರಿ)

ಈ ಚಿರಕಾರಿಕನ ಕಥೆ ಹೀಗಿದೆ; ಚಿರಕಾರಿ ದೀರ್ಘಕಾಲದವರೆಗೆ ನಿದ್ರಿಸುವವನು, ಹಾಗೆಯೇ ದೀರ್ಘ ಕಾಲದವರೆಗೆ ಎಚ್ಚರವಾಗಿರುವವನು. ಎಲ್ಲರೂ ಅವನನ್ನು ಈ ಕಾರಣದಿಂದ ಮಂಕನೆಂದು, ಸೋಮಾರಿ ಎಂದು ಹೀಯಾಳಿಸುವುದು. ಮಹಾಭಾರತದ ಈ ಕಥೆ ನಮಗೆ ಗೊತ್ತಿರುವ ಕಥೆಯಾಗಿ ಭೀಷ್ಮನ ಬಾಯಲ್ಲಿ ಮೂಡುವುದಿಲ್ಲ. `ಒಂದಾನೊಂದು ಕಾಲದಲ್ಲಿ ಚಿರಕಾರಿಯ ತಾಯಿ ಅಹಲ್ಯೆಯ ಮೇಲೆ ವ್ಯಭಿಚಾರದ ದೋಷ ಹೇರಲ್ಪಟ್ಟಿತು. ಆಗ ಗಂಡನಾದ ಗೌತಮ ಮಗನನ್ನು ಕರೆದು ನಿಮ್ಮ ತಾಯಿಯನ್ನು ಕೊಂದುಬಿಡು ಎನ್ನುತ್ತಾನೆ. ಹೀಗೆ ಆಜ್ಞೆಮಾಡಿ ಗೌತಮ ಯಾವತ್ತಿನ ತನ್ನ ನಿತ್ಯ ನಿಯಮದಂತೆ ತಪೋವನಕ್ಕೆ ಹೊರಟು ಹೋಗುತ್ತಾನೆ'. ಇದು ನಮಗೆ ಗೊತ್ತಿರುವ ಗೌತಮ/ಅಹಲ್ಯೆಯರ ಕತೆ. ಆದರೆ ಭೀಷ್ಮನ ಕಥನದಲ್ಲಿ ಅದು ಭಿನ್ನವಾಗುವುದರಲ್ಲಿ ಅಂದರೆ ಉತ್ಕಟತೆ ಕಳೆದುಕೊಳ್ಳುವುದರಲ್ಲಿ ನೈತಿಕತೆಯ ಹೊಸ ಹೊಳಹು ಇದೆ.

ಚಿರಕಾರಿಯದು ವಿಳಂಬದ ಸ್ವಭಾವ, ಏನನ್ನೂ ತಕ್ಷಣ ಮಾಡುವವನು ಅಲ್ಲ. ತಂದೆಯ ಆಜ್ಞೆಯನ್ನು ಪಾಲಿಸಲು ಒಪ್ಪಿದ ಚಿರಕಾರಿ ತುಂಬಾ ಹೊತ್ತು ನರಳುತ್ತಾನೆ. ತಾಯಿಯನ್ನು ಕೊಲ್ಲುವುದೂ ಅಧರ್ಮ, ಅಪ್ಪನ ಆಜ್ಞೆಯನ್ನು ನಡೆಸದೇ ಇರುವುದೂ ಅಧರ್ಮ, ಈ ಮಧ್ಯೆ ತಾನು ಹೇಗೆ ನಡೆದುಕೊಳ್ಳಬೇಕು ಎಂದು ಚಿರಕಾರಿ ಯೋಚಿಸುತ್ತಾ ಕೂರುತ್ತಾನೆ. ತನ್ನ ಮನಸ್ಸನ್ನು ಕಟ್ಟಿಕೊಟ್ಟದ್ದು ತಂದೆಯ ತಪಸ್ಸಿನ ವಿಧಿವಿಧಾನಗಳು, ಆದರೆ ಮನುಷ್ಯನಾಗಿ ತಾನು ಹುಟ್ಟುವಾಗ ಅಗ್ನಿಗೆ ಅರಣಿ ಹೇಗೋ ಹಾಗೆ ತಾಯಿ ಈ ದೇಹಕ್ಕೆ ಕಾರಣಳು. ಭೀಷ್ಮ ನಮ್ಮೆದುರಿಗೆ ಇಡುವುದು ಹೀಗೆ ಹೊಯ್ದಾಡುವ ಚಿರಕಾರಿಯನ್ನು. ಹೀಗೆ ಚಿರಕಾರಿ ಹೊಯ್ದೊಡುತ್ತಿರುವುದನ್ನು ವರ್ಣಿಸುವಾಗಲೇ ಭೀಷ್ಮ, ಗೌತಮನ ಮನಸ್ಥಿತಿಯನ್ನು ವರ್ಣಿಸುತ್ತಾನೆ. ಅವನಿಗೆ ಶಾಸ್ತ್ರಜ್ಞಾನವಿದೆ, ಮನಸ್ಥೈರ್ಯವಿದೆ, ಇದರಿಂದ ವಿವೇಕ ಮೂಡುತ್ತದೆ, ತಾನು ಮಗನಿಗೆ ಅಪ್ಪಣೆ ಮಾಡಿದ್ದು ತಪ್ಪು ಎಂದು ಅರಿವಾಗುತ್ತದೆ.

ನಮಗೆ ಗೊತ್ತಿರುವ ಅಹಲ್ಯೆಯ ದುರಂತದ ಕಥೆ ಇಲ್ಲಿ ತೆಗೆದುಕೊಳ್ಳುವ ತಿರುವಿಗೆ ಕಾರಣವಾದದ್ದು ಹಲವು ಮಗ್ಗಲುಗಳಲ್ಲಿ ಸತ್ಯವನ್ನು ಕಾಣುವ ಭೀಷ್ಮ ಈ ಕಥೆಯನ್ನು ಹೇಳುತ್ತಾ ಇದ್ದಾನೆ ಎಂಬುದು. (ಈ ಬಗೆಯ ಕಥೆಯ ತಿರುವುಗಳನ್ನು ನಾವು ಮಾಸ್ತಿ ಅವರ `ವೆಂಕಟಿಗನ ಹೆಂಡತಿ'ಯಂತಹ ಕಥೆಗಳಲ್ಲಿ ಕಾಣುತ್ತೇವೆ).

ಭೀಷ್ಮ ಇಲ್ಲಿ ರೂಪಿಸುವ ಗೌತಮನ ಅಂತರಂಗದ ಮಾತುಗಳು ಸ್ವಲ್ಪ ತಾಳಿನೋಡಿದಾಗ ನಿಜವೆನ್ನಿಸುವಂತೆ ಇವೆ. `ಇಂದ್ರ ಬ್ರಾಹ್ಮಣವೇಷ ಧರಿಸಿ ನನ್ನ ಆಶ್ರಮಕ್ಕೆ ಅಥಿತಿಯಾಗಿ ಬಂದನು. ಇದರಿಂದ ನನಗೆ ಸಂತೋಷವೇ ಅಯಿತು. ಪ್ರಿಯ ವಾಕ್ಯಗಳಿಂದ ಅವನನ್ನು ಗೌರವಿಸಿದೆನು, ವಿಧಿಯುಕ್ತನಾಗಿ ಅರ್ಘ್ಯಪಾದ್ಯಗಳನ್ನು ಕೊಟ್ಟೆನು. ಅಲ್ಲದೆ ಇಂದ್ರನನ್ನು ಇನ್ನೂ ಹೆಚ್ಚು ಸಂತೋಷಗೊಳಿಸುವುದಕ್ಕಾಗಿ `ನಾನು ನೀನು ಬೇರೆಯಲ್ಲ, ನನ್ನ ಸರ್ವಸ್ವವೂ ನಿನ್ನದೇ ಎಂದು ಹೇಳಿದೆನು. ಇದಾದ ಮೇಲೆ ಅಕಾರ್ಯವು ನಡೆದು ಹೋಗಿದ್ದರೆ ಹೆಂಗಸಿಗೆ ಅಪರಾಧ ಎಲ್ಲಿಯದು? ಅವಳು ಅಪರಾಧಿಯಂತೆ ಕಾಣಲು ಮುಖ್ಯ ಕಾರಣ ನನ್ನ ಅಸೂಯೆ ಅಲ್ಲವೆ?'

ಯಾರ ಮನಸ್ಸಾದರೂ ಹೀಗೆ ಹಿಮ್ಮೆಟ್ಟಿ ತನ್ನ ಇಷ್ಟಗಳ ಇಕ್ಕಟ್ಟಿನ ಕೊಕ್ಕೆಯಿಂದ ಬಿಡುಗಡೆ ಪಡೆದು ಸತ್ಯವನ್ನು ಕಾಣಬಲ್ಲುದು ಎಂದು ನಾವು ತಿಳಿಯುವಂತೆ ಭೀಷ್ಮ ಮಾತಾಡುತ್ತಾನೆ. (ಇದ್ದಕ್ಕಿದ್ದಂತೆ ಈ ಬಗೆಯ ಅನುಮಾನ ಹುಟ್ಟಿ ಒಬ್ಬ ಮನುಷ್ಯ ಪೇಚಾಡುವುದನ್ನು ನಾವು ಶೇಕ್ಸ್‌ಪಿಯರ್‌ನ `ವಿಂಟರ್ಸ್‌ ಟೇಲ್'ನಲ್ಲಿ ಕಾಣುತ್ತೇವೆ. ಶೇಕ್ಸ್‌ಪಿಯರ್ ಇಂತಹ ಕಥೆಗಳಲ್ಲಿ ಹುಡುಕುವ ಸತ್ಯಗಳನ್ನು ಭೀಷ್ಮ ಪ್ರಜ್ಞೆಯಲ್ಲಿ ಹುಡುಕುವುದು ಅರ್ಥಪೂರ್ಣವಾದೀತು).

ಈ ಮಧ್ಯ ವಿಳಂಬದಲ್ಲೇ ಬದುಕುವ ಚಿರಕಾರಿ ತನ್ನ ತಾಯಿಯನ್ನು ಕೊಂದಿರುವುದಿಲ್ಲ, ಹೀಗಾಗಿ ಅವನ ಅಪ್ಪನ ಒಳಧ್ವನಿಯ ಆಜ್ಞೆಯನ್ನು ಪಾಲಿಸಿದಂತಾಗುತ್ತದೆ. ಭೀಷ್ಮ ಅತ್ಯಂತ ಕಠಿಣವಾದ ನಿಯಮಗಳನ್ನು ಪಾಲಿಸುವುದು ತನ್ನ ಸ್ವಂತ ಜೀವನದಲ್ಲಿ ಮಾತ್ರ. ಉಳಿದವರ ತಪ್ಪುಗಳನ್ನು ಅವನು ನೋಡುವುದು ಉದಾರವಾಗಿ. ಆದ್ದರಿಂದಲೇ ಕೌರವ-ಪಾಂಡವ ವಿರೋಧದಲ್ಲಿ ಎಲ್ಲರಿಗೂ ಹಿರಿಯನಾದ ಭೀಷ್ಮ ನಿರುಪಾಯನಾಗಿ ಸಾಕ್ಷಿಪ್ರಜ್ಞೆಯಲ್ಲಿ ಎಲ್ಲವನ್ನೂ ನೊಡುತ್ತಾನೆ. ಆದರೆ ಈ ಭೀಷ್ಮನಿಗೂ ಅವನ ನೈತಿಕ ಪ್ರಜ್ಞೆಯ ವಿಸ್ತಾರದಲ್ಲಿ ಕಳೆದುಹೋಗದ ಒಂದು ಅಂಚಿದೆ. ಈ ಅಂಚಿಗೆ ಬಂದು ಭೀಷ್ಮ ನಿಂತಾಗ ಅವನಿಗೆ ಯಾರೂ ಸಹಾಯ ಮಾಡಲಾರರು. ಭೀಷ್ಮ ಗೆದ್ದು ತಂದ ಹೆಣ್ಣುಗಳಲ್ಲಿ ಒಬ್ಬಳಾದ ಅಂಬೆಯನ್ನು ಯಾರೂ ಮದುವೆಯಾಗುವುದಿಲ್ಲ, ಭೀಷ್ಮನೂ ಆಗುವುದಿಲ್ಲ, ಅಂಬೆಗೆ ಎಷ್ಟು ಅನ್ಯಾಯವಾಗುತ್ತದೆ ಎಂದರೆ ಅದನ್ನು ಭೀಷ್ಮನೇ ತೀರಿಸಬೇಕಾಗುತ್ತದೆ. ಅಂಬೆ ತನಗೆ ಎದುರಾದಾಗ. ತನ್ನ ಶಸ್ತ್ರಾಶ್ತ್ರಗಳನ್ನು ಕೆಳಗಿಟ್ಟು ಶರಶಯ್ಯೆಯ ಮೇಲೆ ಮಲಗಿ ಭೀಷ್ಮ ತನ್ನ ನಿರ್ವಾಣವನ್ನು ಎದುರುಗೊಳ್ಳುತ್ತಾನೆ. ಇಂತ ಸ್ಥಿತಿಯಲ್ಲಿಯೇ ನಾನು ಮೇಲೆ ಗಮನಿಸಿದ ಕಥೆಯನ್ನು ಭೀಷ್ಮ ಹೇಳುವುದು ಎಂಬುದನ್ನು ಗಮನಿಸಿಬೇಕು.

ಭೀಷ್ಮ ಕಠಿಣ ಬ್ರಹ್ಮಚರ್ಯದಲ್ಲಿ ಬದುಕಿದರೂ ಈ ಲೋಕವನ್ನು ತ್ಯಾಗಮಾಡಿದ ಸನ್ಯಾಸಿಯಲ್ಲ. ಲೋಕಸಂಗ್ರಹದಲ್ಲಿ ಕೃತಾರ್ಥನಾಗುವ ಗೃಹಸ್ಥನೂ ಅಲ್ಲ. ಲಿಬರಲ್ ಮನೋಧರ್ಮದ ಮೂಲ ಇಂತಹ ವಿರುದ್ಧ ಧರ್ಮಗಳಲ್ಲಿ ಬದುಕುವ ಆಯ್ಕೆಗಳಲ್ಲಿ ಇರುತ್ತವೆ. ಗಾಂಧಿಯವರ ಜೀವನದಲ್ಲಿ ವೈಯಕ್ತಿಕ ಬದುಕಿನ ನಿಷ್ಠೂರ ನೈತಿಕ ಪಾಲನೆಯನ್ನೂ ಸಾರ್ವಜನಿಕ ಜೀವನದಲ್ಲಿ ಅವರು ತೋರುವ ಉದಾರಧೋರಣೆಗಳನ್ನೂ ಇಲ್ಲಿ ನೆನೆಯಬಹುದು.
***
ನಾನು ಮೇಲಿನದೆಲ್ಲವನ್ನೂ ಬರೆದುಕೊಂಡದ್ದು ನನ್ನದೇ ಒಂದು ತೆವಲಿಗಾಗಿ. ನಾನು ಕಥೆ ಬರೆಯಲು ತೊಡಗಿದಾಗ ಕಥೆಗಳು ಒಂದು ಕವನದಂತೆ ಅಂತರ ಸಂಬಂಧಗಳನ್ನೆಲ್ಲ ಪಡೆದುಕೊಂಡ ಬಿಗಿಯಾದ ರಚನೆಯಾಗಬೇಕು ಎಂದುಕೊಂಡಿದ್ದೆ. ಮಾಸ್ತಿ, ಚದುರಂಗರು ಕಥೆ ಹೇಳುವ ರೀತಿ ಸಡಿಲವಾದ ಸಂಯೋಜನೆಯದು ಎಂದುಕೊಂಡಿದ್ದೆ. ಕಥೆಯನ್ನು ಓದಿದ ಮೇಲೆ ಕಥೆಯ ಸಾರವನ್ನು ನಮ್ಮ ಮಾತಲ್ಲೇ ಓದುಗರಾದ ನಾವು ಹೇಳಬಲ್ಲಂತೆ ಅವರ ಕಥೆಗಳು ಇರುತ್ತವೆ.

ಅಡಿಗರ ರಚನೆಗಳು ಓದುವ ಮನಸ್ಸನ್ನು ಪಾತಾಳಗರಡಿ ಮಾಡಿ ಆಳಕ್ಕೆ ಇಳಿಸುತ್ತ ಇದ್ದ ಕಾಲ, ನಾನು ಬರೆಯತೊಡಗಿದ್ದ ಕಾಲ. ಈ ಕಟ್ಟುವ ಕಾಲಕ್ಕೆ ಒಂದು ಬಿಚ್ಚುವ ಕಾಲವೂ ಬಂತು. ಲಂಕೇಶರು ತಮ್ಮ ಕವನ ಸಂಕಲನವನ್ನು `ಬಿಚ್ಚು' ಎಂದು ಕರೆದರು. ಅದು ಬಂದಾಗ ಅಡಿಗರು ಚದುರಂಗರ ಒಂದು ಸಿನಿಮಾ ನೋಡುತ್ತ, ಇದು `ಬಿಚ್ಚುವ ಕಾಲ' ಎಂದು ಹೇಳಿದ ನೆನಪು. ಚಂಪಾ ಆಗಲೇ ಬಿಚ್ಚಿ ಬರೆಯತೊಡಗಿದ್ದರು. ಹೀಗೆ ಬರೆಯುವುದು ಒಂದು ಘೋಷಣಾ ರೂಪ ಪಡೆದದ್ದು ತೇಜಸ್ವಿ `ಅಬಚೂರಿನ ಫೋಸ್ಟ್ ಆಫೀಸ್' ಬರೆದಾಗ, ಮಾಸ್ತಿಯವರ ಧಾಟಿಗೆ ಕಥನಕ್ರಿಯೆ ಹಿಂದಿರುಗುತ್ತ ಇದ್ದಂತೆ ನಮ್ಮ ಈ ಕಾಲದಲ್ಲಿ ಕೆ. ಸತ್ಯನಾರಾಯಣರಂತಹ ಬರಹಗಾರರು ಯಾರ ಕಣ್ಣಿಗೂ ಬೀಳದ ಲೋಕಕ್ಕೆ ಲಗ್ಗೆ ಹಾಕತೊಡಗಿದರು. ಅಳ್ಳಕವಾದ ರಚನೆಯ ಕಥೆ ವಿಸ್ತಾರವನ್ನೂ ಪಡೆಯತೊಡಗಿತು. ಇದನ್ನು ನನ್ನದೇ ರೀತಿಯಲ್ಲಿ ನಿರ್ವಹಿಸಲು ಪ್ರಯತ್ನಿಸಿದ್ದೇನೆ. ಇದು ಸಫಲವಾಗಿದೆಯೋ ತಿಳಿಯೆ.

ಭೀಷ್ಮ ಒಬ್ಬ ವಿಳಂಬಿಯ ಮುಖೇನ ಗೌತಮನ ರೋಚಕವಾದ ಕಥೆಯನ್ನು ಗಮನಿಸುತ್ತ ಇದ್ದಂತೆ ಕಥೆಯ ಅದಮ್ಯ ಕಾಮುಕತೆ ಹಿನ್ನೆಲೆಯಾಗಿಬಿಡುತ್ತದೆ. ಕರೆಯದೇ ಬಂದ ಇಂದ್ರನಿಂದ ಸಂತೋಷಪಟ್ಟದ್ದು ಗಂಡ ಗೌತಮಮುನಿ ಕೂಡ. ಸಿಟ್ಟಿನಲ್ಲಿ ಆಡಿದ ಮಾತು ತಣ್ಣಗಾಗಲು ಕಾಲ ಬೇಕಾಗುತ್ತದೆ.

ಇಂತಹ ಬಿಸಿ ಇಳಿಸುವ ಕಾಲ ಸಡಿಲವಾದ ಬಂಧದ ಕಥನದಲ್ಲಿ ಇರುವಷ್ಟು ಸಹಜವಾಗಿ ಬಿಗಿಯಾದ ಬಂಧದ ಕಥನದಲ್ಲಿ ಇರಲಾರದೇನೊ? ನಾಟಕೀಯ ಭಾವೋತ್ಕಟತೆಯಾಗಿ ವರ್ಣನೆಗೊಳ್ಳುತ್ತ ಬಿಚ್ಚಿಕೊಳ್ಳುವ ಕಥನದಲ್ಲಿ ಅಹಲ್ಯೆ ಕಲ್ಲಾಗಬೇಕು; ರಾಮ ಬಂದು ಅವಳನ್ನು ವಿಮೋಚನೆ ಮಾಡಬೇಕು. (ಅಥವಾ ವಾಲ್ಮೀಕಿಯಲ್ಲಿಯಂತೆ ಅವಳೊಂದು ಗಾಳಿಯಲ್ಲಿ ಅಲೆದಾಡುವ ನಿಟ್ಟುಸಿರಾಗಬೇಕು).

ವಿಳಂಬಿಯೊಬ್ಬನ ಗುಣವನ್ನು ಹೇಳಲು ವಿಳಂಬದ ನಡೆಯಲ್ಲಿಯೇ ಭೀಷ್ಮ ಹೇಳುವ ಅಹಲ್ಯೆಯ ಕಥೆಯಲ್ಲಿ ಕಾಮದ ರೋಚಕತೆ ಇಲ್ಲ.  ಕಥೆಯ ಸಂದರ್ಭದಲ್ಲಿ ಮುಚ್ಚಿಡಬಾರದ ಒಂದು ಸಂಗತಿಯಾಗಿ ಮಾತ್ರ ಕಾಮ ಇದೆ. ಗೌತಮ ಬದಲಾಗಲು ಅವಕಾಶ ಇರುವ, ಅವಸರ ಪಡದ, ರತ್ಯಾತುರ ಕಥನದ ತೀವ್ರತೆಗೆ ಒಲಿಯದ ಕಥನವೊಂದು ನಮಗೆ ಗೊತ್ತಿರುವ ಕಥೆಗೆ ಬದಲಾಗಿ ರುಚಿಕರವಾಗದೆ ಮೂಡುತ್ತದೆ. ಜೊತೆಗೆ ಸತ್ಯದ ಇನ್ನೊಂದು ಮಗ್ಗುಲನ್ನೂ ತೋರುತ್ತದೆ. ಲಿಬರಲ್ ಮನೋಧರ್ಮವನ್ನು ಭೀಷ್ಮ ಬೆಳಕಿನಲ್ಲಿ ನೋಡುವ ಈ ನನ್ನ ಪ್ರಯತ್ನ ಅಧಿಕಪ್ರಸಂಗವೆನ್ನಿಸದೆಂದು ನಂಬಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.