ADVERTISEMENT

ಮಣ್ಣಿನ ರಾಜಕುಮಾರಿ

ಗೀರ್ವಾಣಿ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಒಂದೂರಿನಲ್ಲಿ ಒಬ್ಬ ಗೊಂಬೆ ಮಾಡುವವನಿದ್ದ. ಚೆನ್ನಯ್ಯ ಎಂದು ಅವನ ಹೆಸರು. ಚಂದದ  ಗೊಂಬೆಗಳನ್ನು ಮಾಡಿ ಮಾರುವುದು ಅವನ ಕೆಲಸ. ಅವನು ಮಾಡುವ ಗೊಂಬೆಗಳು ಹೇಗಿರುತ್ತಿದ್ದವು ಎಂದರೆ ಅವಕ್ಕೆ ಜೀವ ಇದೆಯೆನೋ ಅನ್ನಿಸುವಷ್ಟು ನೈಜವಾಗಿರುತ್ತಿದ್ದವು. ಅವನಿಗೊಬ್ಬ ಮಗಳಿದ್ದಳು, ಹತ್ತು ವರ್ಷದವಳು. ಮಾಲಿನಿ ಎಂದು ಹೆಸರು. ಅವಳಿಗೆ ಅಮ್ಮ ಇರಲಿಲ್ಲ. ದಿನಾಲು ಅಪ್ಪ ಗೊಂಬೆ ಮಾಡುವಾಗ ಕಥೆ ಹೇಳಬೇಕಿತ್ತು ಅವಳಿಗೆ. ಅಪ್ಪನ ಬಳಿ ಯಾವಾಗಲೂ ರಾಜಕುಮಾರಿ ಕಥೆ ಹೇಳು ಎಂದು ಪೀಡಿಸುತ್ತಿದ್ದಳು. ಅಪ್ಪ ಎಷ್ಟೇ ರಾಜಕುಮಾರಿಯರ ಕಥೆ ಹೇಳಿದರೂ ‘ಇದಲ್ಲ... ಬೇರೆ’ ಎನ್ನುತ್ತಿದ್ದಳು.

ಒಮ್ಮೆ ಏನಾಯಿತೆಂದರೆ ಚೆನ್ನಯ್ಯ ಒಂದು ಹುಡುಗಿಯ ಗೊಂಬೆ ಮಾಡಲು ತೊಡಗಿದ. ಅದೇನೋ ಕಾರಣಕ್ಕೆ ಅದು ಮುಂದುವರೆಯುತ್ತಿರಲಿಲ್ಲ. ಅರ್ಧಕ್ಕೇ ನಿಂತು ಹೋಗುತ್ತಿತ್ತು. ಏನಾದರೂ ಅಡ್ಡಿ ಬಂದು ಇದುವರೆಗೆ ಆ ಗೊಂಬೆ ಮಾಡಲು ಆಗಿರಲಿಲ್ಲ. ಸರಿ, ಇವತ್ತಾದರೂ ಮಗಳಿಗೆ ಕಥೆ ಹೇಳುತ್ತ ಮಾಡಲಾಗುತ್ತದೆಯೋ ನೋಡೋಣ ಎಂದು ಹುಡುಗಿಯ ಗೊಂಬೆ ಮಾಡಲು ಶುರು ಮಾಡಿದ. ಮೊದಲಿಗೆ ಗೊಂಬೆಯ ಮುಖದಿಂದಲೇ ಆರಂಭಿಸಿದ. ಜೊತೆಗೆ ಕಥೆ ಹೇಳಲೂ ಶುರು ಮಾಡಿದ.

ಒಂದಾನೊಂದು ಕಾಲದಲ್ಲಿ ಭ್ರಾಮರಿ ಎಂಬ ರಾಜ್ಯದಲ್ಲಿ ಪುಷ್ಪಿಕೆ ಎಂಬ ರಾಜಕುಮಾರಿಯಿದ್ದಳು. ಆಕೆ ಮೇಘಪರ್ವ ಎಂಬ ರಾಜನ ಮಗಳು. ಪುಷ್ಪಿಕೆ ಅಪ್ರತಿಮ ಸುಂದರಿಯಾಗಿದ್ದಳು. ಅವಳ ಸೌಂದರ್ಯದ ಬಗ್ಗೆ ಇಡೀ ರಾಜ್ಯ, ಪಕ್ಕದ ರಾಜ್ಯ, ಅದರಾಚೆಗಿನ ರಾಜ್ಯದ ತುಂಬೆಲ್ಲ ಮಾತಾಡುತ್ತಿದ್ದರು. ಅವಳ ಖ್ಯಾತಿ ಎಷ್ಟಿತ್ತೆಂದರೆ ಆಕೆ ಪ್ರತೀ ಪೌರ್ಣಮಿ ದಿನ ತನ್ನ ಅಂತಃಪುರದ ಬಾಲ್ಕನಿಗೆ ಬರುತ್ತಿದ್ದಳು. ಆಗ ಅವಳನ್ನು ನೋಡಲು ಜನಸಾಗರವೇ ಮೆರೆಯುತ್ತಿತ್ತು. ಗರ್ಭಿಣಿ ತಾಯಂದಿರು ರಾಜಕುಮಾರಿಯನ್ನು ನೋಡಿದರೆ ತಮ್ಮ ಹುಟ್ಟಲಿರುವ ಮಕ್ಕಳೂ ಸುಂದರವಾಗೇ ಹುಟ್ಟುತ್ತಾರೆ ಎಂದು ರಾಜಕುಮಾರಿಯನ್ನು ನೋಡಲು ಬರುತ್ತಿದ್ದರು. ಇನ್ನು ಆ ರಾಜ್ಯದ ಕಲೆಗಾರರು, ಶಿಲ್ಪಿಗಳು, ಕವಿಗಳು, ಚಿತ್ರಕಾರರು ಅವಳಿಂದಲೇ ಸ್ಫೂರ್ತಿ ಪಡೆದು ಅನೇಕ ಚಿತ್ರ, ಕವಿತೆ ಶಿಲ್ಪಗಳನ್ನು ರಚಿಸುತ್ತಿದ್ದರು.

ದೇಶ ವಿದೇಶಗಳಿಂದಲೂ ರಾಜಕುಮಾರಿಯ ಸೌಂದರ್ಯ ನೋಡಲು ಜನರು ಬರತೊಡಗಿದರು. ರಾಜ ಮೇಘಪರ್ವನಿಗೆ ದಿನೇ ದಿನೇ ಹೆಚ್ಚುತ್ತಿರುವ ಮಗಳ ಸೌಂದರ್ಯದ ಬಗ್ಗೆ ಒಂದೆಡೆ ಹೆಮ್ಮೆಯಾದರೆ, ಇನ್ನೊಂದೆಡೆ ಮಗಳ ಸುರಕ್ಷತೆಯ ಚಿಂತೆಯಾಗತೊಡಗಿತು. ಹೀಗೇ ಆದರೆ ಅವಳನ್ನು ಕಾಯುವುದು ಹೇಗೆ? ಅವಳಿಗೆ ಸಮನಾದ ಗಂಡು ಹುಡುಕುವುದು ಹೇಗೆ? ಸೌಂದರ್ಯದಲ್ಲಿ, ಬುದ್ಧಿಮತ್ತೆಯಲ್ಲಿ ಅವಳನ್ನು ಮೀರಿಸುವ ರಾಜಕುಮಾರನನ್ನು ಎಲ್ಲಿಂದ ಹುಡುಕಲಿ? ಯಾರದಾದರೂ ಕೆಟ್ಟ ಕಣ್ಣು ಬಿದ್ದರೆ? ಹೀಗೆಲ್ಲ ಯೋಚಿಸಿ ಯಾವುದಕ್ಕೂ ರಾಜಕುಮಾರಿಯನ್ನು ಹುಷಾರಾಗಿ ಕಾಪಾಡಬೇಕು ಎಂದು ನಿರ್ಧರಿಸಿ ಅವಳ ಅಂತಃಪುರದ ಬಾಗಿಲನ್ನು ವಿಶೇಷವಾಗಿ ಭದ್ರಗೊಳಿಸಲು ಯೋಚಿಸಿದ.

ತಂತ್ರಜ್ಞರನ್ನು ಕರೆಸಿ, ಅಂತಃಪುರದ ಬಾಗಿಲಿಗೆ ಒಂದು ಚಕ್ರ ತಯಾರಿಸಿದ. ಅದರ ಸುತ್ತಲೂ ಅಸಂಖ್ಯಾತ ಸಂಖ್ಯೆಗಳು. ಆ ಚಕ್ರಕ್ಕೆ ಒಂದು ಕೆಂಪು ಕಂಬವಿತ್ತು. ಚಕ್ರವನ್ನು ತಿರುಗಿಸಿದಾಗ ಕೆಂಪು ಕಂಬ ಒಂದು ನಿಗದಿತ ಸಂಖ್ಯೆಯ ಮೇಲೆ ನಿಲ್ಲಬೇಕು. ಆ ಸಂಖ್ಯೆಗೆ ಅದೇ ಸಂಖ್ಯೆಯಿಂದ ಗುಣಿಸಿ, ಅದೇ ಸಂಖ್ಯೆಯಿಂದ ಭಾಗಿಸಿ, ಅದಕ್ಕೆ ಒಂದನ್ನು ಸೇರಿಸಿದಾಗ ಯಾವ ಸಂಖ್ಯೆ ಬರುತ್ತದೋ ಆ ಸಂಖ್ಯೆ ಮೇಲೆ ಒತ್ತಿದರೆ ಮಾತ್ರ ಬಾಗಿಲು ತೆರೆದುಕೊಳ್ಳುತ್ತಿತ್ತು. ಇದು ಆ ಕಾಲಕ್ಕೆ ಅತ್ಯಂತ ವಿಭಿನ್ನ ತಂತ್ರಜ್ಞಾನವಾಗಿತ್ತು.

ಇತ್ತ ಚೆನ್ನಯ್ಯ ಕಥೆ ಹೇಳುತ್ತ ಗೊಂಬೆ ಮಾಡುವುದನ್ನು ಮುಂದುವರೆಸಿದ್ದ. ಅಚ್ಚರಿಯೆಂದರೆ ಆ ದಿನ ಅವನು ಎಂದಿಗಿಂತ ವೇಗವಾಗಿ ಗೊಂಬೆ ಮಾಡತೊಡಗಿದ್ದ. ಗೊಂಬೆಯ ಮುಖ ಆಗಲೇ ಪೂರ್ಣವಾಗಿತ್ತು. ಅತ್ಯಂತ ಸುಂದರವಾಗಿ ಮೂಡಿ ಬಂದಿತ್ತು ಅದು. ಚೆನ್ನಯ್ಯ ಕಥೆ ಹೇಳುತ್ತಿದ್ದರೆ ಅದೂ ಕೇಳಿಸಿಕೊಳ್ಳತೊಡಗಿತು! ಚೆನ್ನಯ್ಯ ಮಾತ್ರ ಈ ಪವಾಡದ ಅರಿವಿಲ್ಲದೇ ಉಳಿದ ಅಂಗಗಳನ್ನು ಮಾಡುತ್ತ ಕಥೆ ಮುಂದುವರೆಸಿದ.

ರಾಜಕುಮಾರಿಯ ಅಂತಃಪುರದ ಬಾಗಿಲನ್ನು ತೆರೆಯುವ ರಹಸ್ಯ ಇಬ್ಬರಿಗೆ ಮಾತ್ರ ತಿಳಿದಿತ್ತು. ಒಂದು ರಾಜನಿಗೆ, ಇನ್ನೊಂದು ಮಾಲಿನಿಗೆ. ಯಾರೀ ಮಾಲಿನಿ? ಮಾಲಿನಿಯು ರಾಜಕುಮಾರಿಯ ಆಪ್ತ ಸಖಿ.

ಚೆನ್ನಯ್ಯ ಹೀಗೆನ್ನುತ್ತಿದ್ದಂತೆ ಅವನ ಮಗಳು ಮಾಲಿನಿ ಮುಖದಲ್ಲಿ ಏನೋ ಬದಲಾವಣೆ ಕಂಡಿತು. ಅವಳು ಕೇಳಿದಳು, ‘ಅವಳು ನನ್ ಹಾಗೇ ಇದ್ಲಾ?’ ಎಂದು. ‘ಹೌದಮ್ಮ’ ಎನ್ನುತ್ತ ಕಥೆ ಮುಂದುವರೆಸಿದ ಚೆನ್ನಯ್ಯ.

ಮಾಲಿನಿ ರಾಜಕುಮಾರಿಯ ಪರಮಾಪ್ತ ಗೆಳತಿಯೂ ಆಗಿದ್ದಳು. ಎಲ್ಲೇ ಹೋಗುವುದಿದ್ದರೂ ಒಟ್ಟಿಗೇ ಹೋಗುತ್ತಿದ್ದರು. ರಾಜನೂ ಮಾಲಿನಿಯನ್ನು ನಂಬುತ್ತಿದ್ದ. ಹೀಗಾಗಿ ಪುಷ್ಪಿಕೆಯ ಅಂತಃಪುರದ ಬಾಗಿಲು ತೆರೆಯುವ ರಹಸ್ಯ ಮಾಲಿನಿಗೆ ಮಾತ್ರ ತಿಳಿದಿತ್ತು. ರಾಜನೇನೋ ರಾಜಕುಮಾರಿಯ ಸುರಕ್ಷತೆಗೆ ಇದನ್ನೆಲ್ಲ ಮಾಡಿಸಿದ. ಆದರೆ ಪುಷ್ಪಿಕೆ ಇದರಿಂದ ತುಂಬ ನೊಂದಳು. ಪಂಜರದ ಗಿಳಿಯಾದೆ ತಾನು ಎಂದು ಬೇಸರಪಟ್ಟುಕೊಂಡಳು. ಅವಳು ನೊಂದಿದ್ದನ್ನು ನೋಡಿ ರಾಜ ಮೇಘಪರ್ವ ರಾಜಕುಮಾರಿಯನ್ನು ವಿಹಾರಕ್ಕೆ ಕರೆದೊಯ್ಯುವಂತೆ ಮಾಲಿನಿಗೆ ಸೂಚಿಸಿದ. ಇಬ್ಬರೂ ವಿಹಾರಕ್ಕೆ ಹೊರಟರು.

ಮಾಲಿನಿ, ಪುಷ್ಪಿಕೆ ಇಬ್ಬರೂ ಕಾಡಿನಲ್ಲಿ ವಿಹರಿಸತೊಡಗಿದರು. ಪುಷ್ಪಿಕೆಗೆ ಅತ್ಯಂತ ಸಂತೋಷವಾಗಿತ್ತು. ಇಬ್ಬರೂ ತೊರೆಯಲ್ಲಿ ನೀರಾಟವಾಡುತ್ತಿದ್ದಾಗ ಆಕಾಶಮಾರ್ಗವಾಗಿ ಒಬ್ಬ ಮಾಂತ್ರಿಕ ಹೋಗುತ್ತಿದ್ದ. ಹಕ್ಕಿ ಗರಿಗಳನ್ನು ಸೇರಿಸಿ ರೆಕ್ಕೆ ಕಟ್ಟಿಕೊಂಡು ಹಾರಿ ಹೋಗುವ ಕಲೆ ಅವನಿಗೆ ಸಿದ್ಧಿಸಿತ್ತು. ಅವನು ಮೇಲಿಂದ ರಾಜಕುಮಾರಿಯನ್ನು ನೋಡಿದ. ನೋಡಿದ ತಕ್ಷಣ ಬಯಸಿದ. ತನ್ನ ಸಂಗಾತಿಯಾದರೆ ಇವಳೇ ಎಂದು ತೀರ್ಮಾನಿಸಿದ. ಸುಂದರ ರಾಜಕುಮಾರನಂತೆ ವೇಷ ಧರಿಸಿ ಅವಳೆದುರು ಬಂದ.

ಪುಷ್ಪಿಕೆಯ ಸೌಂದರ್ಯಕ್ಕೆ ಅದೆಷ್ಟು ಮಾರು ಹೋದನೆಂದರೆ ಅವಳೆದುರು ನಿಲ್ಲುತ್ತಿದ್ದಂತೆ ಅವನಿಗೆ ಬಂದ ವಿದ್ಯೆಗಳೆಲ್ಲ ಮರೆತು ಹೋದವು. ತನ್ನ ಮಂತ್ರಗಳ ಮೂಲಕ ರಾಜಕುಮಾರಿಯನ್ನು ಅಪಹರಿಸುವುದು ಅವನ ಉದ್ದೇಶವಾಗಿತ್ತು. ಆದರೆ ಅವಳನ್ನು ಕಾಣುತ್ತಿದ್ದಂತೆ ಒಂದೇ ಒಂದು ಮಂತ್ರವೂ ನೆನಪಿಗೆ ಬರಲಿಲ್ಲ. ‘ಅಬ್ರಕದಬ್ರ..’ ಎಂದ. ಅವನಿಗೆ ರೆಕ್ಕೆಗಳು ಮೂಡಿಬಿಟ್ಟವು. ರೆಕ್ಕೆ ಬಡಿದ. ಏನು ಮಾಡಬೇಕೆಂದೇ ತೋಚದೆ, ಯಾವ ವಿದ್ಯೆಯೂ ನೆನಪಿಗೆ ಬರದೆ ಪೆದ್ದನಂತೆ ನಿಂತುಬಿಟ್ಟ. ರಾಜಕುಮಾರಿ ನಕ್ಕುಬಿಟ್ಟಳು. ಅವಳು ನಗುತ್ತಿದ್ದಂತೆ ಇಡೀ ಪರಿಸರ ಬೆಳಗಿತು. ಹಕ್ಕಿಗಳು ಚಿಲಿಪಿಲಿಗುಟ್ಟಿದವು, ಮೊಗ್ಗುಗಳು ಸರ್ರನೆ ಅರಳಿದವು. ಇಡೀ ಪರಿಸರದಲ್ಲಿ ಹಿತವಾದ ಪರಿಮಳ ತುಂಬಿ ಹೋಯಿತು. ಮಾಂತ್ರಿಕ ಶಕ್ತಿಹೀನನಾಗಿಬಿಟ್ಟ. ರಾಜಕುಮಾರಿ ಮಾಲಿನಿ ಜೊತೆ ಹೊರಟು ಹೋದಳು.

ಅಂದಿನಿಂದ ಮಾಂತ್ರಿಕನಿಗೆ ಹೇಗಾದರೂ ಸರಿ ರಾಜಕುಮಾರಿಯನ್ನು ಪಡೆಯಲೇಬೇಕೆಂಬ ಛಲ ಮೂಡಿತು.
ಚೆನ್ನಯ್ಯ ಹೀಗೆ ಹೇಳುತ್ತಿದ್ದಂತೆ ಅವನು ಮಾಡಿದ ಬೊಂಬೆಯ ಮುಖದಲ್ಲಿ ಭಯ ಮೂಡಿತು. ಮಾಲಿನಿ ಇದನ್ನು ಗಮನಿಸಿದಳು. ಚೆನ್ನಯ್ಯ ಕಥೆ ಮುಂದುವರೆಸಿದ.

ರಾಜಕುಮಾರಿಯನ್ನು ಪಡೆಯಬೇಕು. ಹೌದು ಆದರೆ ಹೇಗೆ? ಅವಳೆದುರು ಬಂದರೆ ತಾನು ಶಕ್ತಿಹೀನನಾಗಿಬಿಡುತ್ತೇನೆ. ಅವಳಂಥ ಸುಂದರಿ ತನ್ನಂಥ ಮಾಂತ್ರಿಕನಿಗಲ್ಲದೇ ಇನ್ಯಾರಿಗೂ ಸಿಗಬಾರದು. ಮಂತ್ರದಿಂದಲೇ ಅವಳು ಬಯಸಿದ್ದೆಲ್ಲ ಸೃಷ್ಟಿ ಮಾಡಿ ಕೊಡಬಲ್ಲೆ ತಾನು. ತನಗಿರುವ ಯೋಗ್ಯತೆ ಇನ್ಯಾರಿಗಿದೆ? ಎಂದು ಮನಸ್ಸಿನಲ್ಲೇ ಯೋಚಿಸಿ, ಬಲೆ ಹೆಣೆಯೊಡಗಿದ. ‘ಒಮ್ಮೆ ನನ್ನ ಕೈವಶವಾಗಲಿ; ಆಮೇಲೆ ಅವಳನ್ನು ಪಳಗಿಸುತ್ತೇನೆ ನಾನು’ ಎಂದು ಲೆಕ್ಕಹಾಕತೊಡಗಿದ. ಆಗ ಅವನಿಗೆ ನೆನಪಾಗಿದ್ದು ಮಾಲಿನಿ.

ಇತ್ತ ಚೆನ್ನಯ್ಯನ ಮಗಳು ಮಾಲಿನಿಯ ಮುಖದಲ್ಲೂ ಭಯ ಮೂಡಿತು ಈಗ. ಅವಳು ಬೊಂಬೆಯ ಮುಖದತ್ತ ನೋಡಿದಳು. ಬೊಂಬೆ ಇವಳನ್ನೇ ನೋಡುತ್ತಿತ್ತು. ಮಾಲಿನಿಗೆ ಆಶ್ಚರ್ಯವಾಗಿ ಬೊಂಬೆಯನ್ನೇ ನೋಡುತ್ತ ಕುಳಿತಳು. ಚೆನ್ನಯ್ಯ ಕಥೆ ಮುಂದುವರೆಸಿದ.
ರಾಜಕುಮಾರಿಯ ಅಂತಃಪುರಕ್ಕೆ ಮಾರುವೇಷದಲ್ಲಿ ಹೋದರೂ ಒಳ ಹೋಗುವಂತಿಲ್ಲ. ಮಾಲಿನಿಗೆ ಮಾತ್ರ ಒಳಹೋಗುವ ರಹಸ್ಯ ತಿಳಿದಿದೆ. ಮಾಲಿನಿಯನ್ನು ಹಿಡಿದರೆ ಮಾತ್ರ ಕೆಲಸವಾಗುವುದು ಎಂದು ಅವಳನ್ನೇ ಕಾಯುತ್ತ ಕುಳಿತ. ಮಾಲಿನಿ ಸಂತೆಗೆ ಬಂದಾಗ ಅವಳನ್ನು ಅಪಹರಿಸಿ ತನ್ನ ಕೋಟೆಗೆ ಕರೆದೊಯ್ದ. ಅಲ್ಲಿ ಅವಳನ್ನು ವಶೀಕರಿಸಿ ಅವಳಿಂದ ಬಾಗಿಲು ತೆರೆಯುವ ರಹಸ್ಯ ತಿಳಿದುಕೊಂಡ.

ನಂತರ ಅವಳದೇ ವೇಷ ಧರಿಸಿ ಅಂತಃಪುರ ಪ್ರವೇಶಿಸಿದ. ಅವನಲ್ಲಿ ಮಾಲಿನಿಯಾಗಿ ಬಂದಿದ್ದರಿಂದ ರಾಜಕುಮಾರಿಯನ್ನು ಎದುರಿಸುವುದು ಸುಲಭವಾಯಿತು. ‘ಕೈತೋಟದಲ್ಲಿ ನವಿಲು ಬಂದಿದೆ ಬಾ’ ಎಂದು ಸುಳ್ಳು ಹೇಳಿ ಪುಷ್ಪಿಕೆಯನ್ನು ಅಲ್ಲಿಂದ ಕರೆದೊಯ್ದ. ಕೈತೋಟದ ಅಂಚಿಗೆ ಕರೆದೊಯ್ದು ಅಲ್ಲಿಂದ ತನ್ನ ರೆಕ್ಕೆಗಳಲ್ಲಿ ರಾಜಕುಮಾರಿಯನ್ನು ಅಡಗಿಸಿಕೊಂಡು ಕೋಟೆಗೆ ಬಂದುಬಿಟ್ಟ.

ರಾಜಕುಮಾರಿ ಅಲ್ಲಿ ತನ್ನ ಗೆಳತಿ ಮಾಲಿನಿಯನ್ನು ನೋಡಿದಳು. ಇಬ್ಬರಿಗೂ ಇದೆಲ್ಲ ಮಾಂತ್ರಿಕನ ಕೆಲಸ ಎಂದು ಅರ್ಥವಾಯಿತು. ತಾವೀಗ ಮಾಂತ್ರಿಕನ ಕೈಲಿ ಸಿಕ್ಕಿರುವುದು ತಿಳಿದು ಗಡಗಡ ನಡುಗಿದರು. ಏಕೆಂದರೆ ಮಾಂತ್ರಿಕನ ಕೋಟೆಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇರಲಿಲ್ಲ. ಇಬ್ಬರೂ ಕೋಟೆ ಸುತ್ತಿ ನೋಡಿದರು. ಎತ್ತೆತ್ತರದ ಗೋಡೆಗಳು, ಒಂದೆಡೆಯೂ ಬಾಗಿಲುಗಳೇ ಇರಲಿಲ್ಲ. ಎಲ್ಲಿ ನೋಡಿದರೂ ಗೋಡೆಯೆತ್ತರದ ಕನ್ನಡಿಗಳು. ಅದರಿಂದ ಮಾಂತ್ರಿಕ ತನ್ನ ಕೋಟೆಯಲ್ಲಿ ಏನಾದರೂ ತಿಳಿಯುತ್ತಿದ್ದ. ಎತ್ತರದಿಂದ ಹಾರಿಬಿಡೋಣ ಎಂದರೆ ಕಿಟಕಿ ಎಂದು ತಿಳಿದು ಹೋದದ್ದು ಗೋಡೆಯಾಗಿ ಬಿಡುತ್ತಿತ್ತು. ನೆಲವೆಂದು ಕಾಲಿಟ್ಟಿದ್ದು ನೀರಾಗಿಬಿಡುತ್ತಿತ್ತು.

ಇಬ್ಬರೂ ದಿಕ್ಕು ತೋಚದೆ ಕುಳಿತಿದ್ದಾಗ ಮಾಂತ್ರಿಕ ಬಂದ. ರಾಜಕುಮಾರಿ ಪುಷ್ಪಿಕೆಯನ್ನು ಮದುವೆಯಾಗುವಂತೆ ಒತ್ತಾಯಿಸಿದ. ‘ನನ್ನ ಜೀವ ಹೋದರೂ ನಿನ್ನ ಮದುವೆ ಆಗಲಾರೆ’ ಎಂದು ಬಿಟ್ಟಳು. ‘ಬೆಳಗಿನ ತನಕ ಸಮಯ ಕೊಡುತ್ತೇನೆ. ಒಪ್ಪಿಕೊಂಡರೆ ಸರಿ. ಇಲ್ಲದಿದ್ದರೆ ಇಬ್ಬರನ್ನೂ ಇಲಿ ಮಾಡಿಬಿಡುತ್ತೇನೆ’ ಎಂದು ಹೆದರಿಸಿದ. ಇಬ್ಬರೂ ಹೆದರಲಿಲ್ಲ. ‘ನಿನ್ನ ಕೈಲಿ ಸಿಕ್ಕಿ ಒದ್ದಾಡುವುದಕ್ಕಿಂತ ಅದೇ ಮೇಲು’ ಎಂದರು. ಗಹಗಹಿಸಿ ನಕ್ಕ ಮಾಂತ್ರಿಕ ‘ನಿಮ್ಮಿಂದ ಏನೂ ಮಾಡಲಾಗುವುದಿಲ್ಲ. ನಾಳೆ ಬೆಳಗಾದರೆ ನಮ್ಮಿಬ್ಬರ ಮದುವೆ’ ಎಂದು ಹೋದ. ಪುಷ್ಪಿಕೆ ತನ್ನನ್ನು ಹೇಗಾದರೂ ಇಲ್ಲಿಂದ ಪಾರು ಮಾಡುವಂತೆ ಮಾಲಿನಿಯನ್ನು ಬೇಡಿಕೊಂಡಳು. ಪಾಪ ಮಾಲಿನಿ, ಏನು ಮಾಡಿಯಾಳು?

ರಾಜಕುಮಾರಿಯನ್ನು ಕಾಪಾಡುವುದು ತನ್ನ ಧರ್ಮ. ಆಗಲಿಲ್ಲ ಎಂದರೆ ಪ್ರಾಣತ್ಯಾಗ ಮಾಡುವುದೊಂದೇ ದಾರಿ ಎಂದುಕೊಂಡು ಮತ್ತೊಂದು ಸುತ್ತು ಕೋಟೆಯನ್ನು ಸುತ್ತಿ ಬಂದಳು. ಎಲ್ಲೂ ದಾರಿ ಕಾಣಲಿಲ್ಲ. ಬೇರೆ ಯಾವ ಮಾರ್ಗವೂ ತೋಚಲಿಲ್ಲ. ರಾಜಕುಮಾರಿಗೆ ‘ನೀನು ಮಲಗು ನಾನು ಕಾದು ಕೂತಿರುತ್ತೇನೆ, ಏನಾದರೂ ದಾರಿ ಹೊಳೆಯಬಹುದು’ ಎಂದು ಮಲಗಿಸಿದಳು. ರಾಜಕುಮಾರಿ ನಿದ್ರೆಗೆ ಜಾರುತ್ತಿದ್ದಂತೆ ಕೋಟೆಯ ಒಂದು ಸುತ್ತು ಹೋಗಿಬಂದಳು. ಏನೂ ದಾರಿ ತೋಚಲಿಲ್ಲ. ಈಗ ಗಟ್ಟಿ ಮನಸು ಮಾಡಿ ಕೋಟೆಯ ಒಂದು ಭಾಗದ ಕನ್ನಡಿಗೆ ಬಟ್ಟೆ ಹೊದೆಸಿದಳು. ಮಾಂತ್ರಿಕನಿಗೆ ಅಲ್ಲಿ ನಡೆಯುತ್ತಿರುವುದು ತಿಳಿಯಬಾರದು ಎಂದು ಹೀಗೆ ಮಾಡಿದಳು. ಸರಸರನೆ ನೆಲ ಅಗೆದು ಹೊಂಡ ಮಾಡತೊಡಗಿದಳು. ರಾಜಕುಮಾರಿಯನ್ನು ಪಾರು ಮಾಡಲಾಗದ ತನಗೆ ಬದುಕುವ ಯೋಗ್ಯತೆ ಇಲ್ಲ ಎಂದು ತೀರ್ಮಾನಿಸಿದಳು. ಹೊಂಡಕ್ಕೆ ಹಾರಿ ಜೀವಂತ ಸಮಾಧಿಯಾಗುವುದು ಅವಳ ಉದ್ದೇಶವಾಗಿತ್ತು.

ಸಾಯುವ ಮುನ್ನ ಒಮ್ಮೆ ರಾಜಕುಮಾರಿಯ ಮುಖ ನೋಡಿ ಬರೋಣ ಎಂದು ಅತ್ತ ಹೋದಳು. ಅಲ್ಲಿ ಹೋಗಿ ನೋಡಿದರೆ ರಾಜಕುಮಾರಿ ಇರಲಿಲ್ಲ. ಅಯ್ಯೋ ಮಾಂತ್ರಿಕ ರಾಜಕುಮಾರಿಗೆ ಏನೋ ಮಾಡಿದ ಎಂದುಕೊಳ್ಳುತ್ತ ವಾಪಸ್ ಹೊಂಡದತ್ತ ಬಂದರೆ ಅಲ್ಲಿ ಹೊಂಡವೇ ಇರಲಿಲ್ಲ!

ಆಗಿದ್ದೇನೆಂದರೆ ಮಾಲಿನಿ ಹೊಂಡ ತೋಡುತ್ತಿದ್ದಾಗ ರಾಜಕುಮಾರಿ ಮರೆಯಲ್ಲಿ ನಿಂತು ನೋಡುತ್ತಿದ್ದಳು. ಮಾಲಿನಿ ಅತ್ತ ಹೋಗುತ್ತಿದ್ದಂತೆ ತಾನೇ ಸ್ವತಃ ಹೊಂಡಕ್ಕೆ ಹಾರಿ ಮಣ್ಣು ಮುಚ್ಚಿಕೊಂಡು ಬಿಟ್ಟಳು. ಮಣ್ಣಿನಲ್ಲೇ ಸಮಾಧಿಯಾಗಿ ಹೋದಳು.

ಚೆನ್ನಯ್ಯ ಹೀಗೆ ಕಥೆ ಮುಗಿಸುತ್ತಿದ್ದರೆ ಮಾಲಿನಿ ಅಳತೊಡಗಿದಳು. ಅಚ್ಚರಿಯೆಂದರೆ ಗೊಂಬೆಯ ಕಣ್ಣಲ್ಲೂ ನೀರು ಬರತೊಡಗಿತ್ತು. ಚೆನ್ನಯ್ಯ ಬೆರಗಾಗಿ ಹೋದ. ಅಷ್ಟರಲ್ಲಾಗಲೇ ಗೊಂಬೆ ಪೂರ್ತಿಯಾಗಿತ್ತು. ಚೆಂದುಳ್ಳಿ ಚೆಲುವೆಯಾಗಿದ್ದಳು ಗೊಂಬೆ. ಚೆನ್ನಯ್ಯ ಗಾಬರಿಯಿಂದ ಮಾಲಿನಿಗೆ ಅದನ್ನು ತೋರಿಸಿದ. ಆಗ ಮಾಲಿನಿ ಹೇಳತೊಡಗಿದಳು. ಅಪ್ಪ ನೀನು ಇಷ್ಟು ಹೊತ್ತು ಹೇಳಿದ್ದು ಕಥೆ ಅಲ್ಲ. ಸತ್ಯ ಘಟನೆಯನ್ನ.

ಆ ಕಥೆಯಲ್ಲಿ ಬರುವ ಮಾಲಿನಿ ಬೇರೆ ಯಾರೂ ಅಲ್ಲ. ನಾನೇ ನಿಮ್ಮ ಮಗಳು. ರಾಜಕುಮಾರಿ ಈ ಬೊಂಬೆ. ಮಣ್ಣಲ್ಲಿ ಲೀನವಾದವಳು ಮಣ್ಣಿಂದಲೇ ಉದ್ಭವಿಸಿದಳು ಎಂದಳು. ಚೆನ್ನಯ್ಯನಿಗೆ ಆಶ್ಚರ್ಯವಾಗಿ ಹೋಯಿತು. ತಾನು ಹೇಗೆ ಈ ಕಥೆ ಹೇಳಿದೆ ಎಂದು ಯೋಚಿಸತೊಡಗಿದ. ಉತ್ತರ ಹೊಳೆಯಲಿಲ್ಲ. ಆಗ ಮಾಲಿನಿ ಹೇಳಿದಳು. ‘ಅಪ್ಪ, ಈ ಗೊಂಬೆ ಇಷ್ಟು ಸುಂದರವಾಗಿರುವುದು ಬೇಡ. ಇವಳಲ್ಲಿ ಏನಾದರೂ ದೋಷ ತುಂಬು. ರಾಜಕುಮಾರಿಯಾಗಿದ್ದಾಗ ಸೌಂದರ್ಯವೇ ಅವಳಿಗೆ ಮುಳುವಾಯಿತು.

ಈಗ ಮತ್ತೆ ಹಾಗಾಗುವುದು ಬೇಡ’ ಎಂದಳು. ಆಗ ಚೆನ್ನಯ್ಯ ಆ ಗೊಂಬೆಗೆ ಸ್ವಲ್ಪ ಹಲ್ಲುಬ್ಬು ಮಾಡಿದ. ಉಳಿದಂತೆ ಸೌಂದರ್ಯ ಹಾಗೇ ಉಳಿದುಕೊಂಡಿತು. ಮಾಲಿನಿ ಸಂತೋಷದಿಂದ ಹೋಗಿ ಗೊಂಬೆಯನ್ನು ತಬ್ಬಿಕೊಂಡಳು. ಅದಕ್ಕೆ ಜೀವ ಬಂದು ಬಿಟ್ಟಿತು. ಇಬ್ಬರೂ ಕೈ ಕೈ ಹಿಡಿದು ಹೊರನಡೆದರು. ಚೆನ್ನಯ್ಯ ಇದು ಕನಸಾ ಇಲ್ಲ ನಿಜವಾ ಎಂದು ಪಿಳಿ ಪಿಳಿ ನೋಡುತ್ತ ನಿಂತ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.