ಆಕಸ್ಮಿಕವಾದ ನಮ್ಮ ನಮ್ಮ ಜಾತಿ, ಧರ್ಮಗಳಿಂದ ಬಿಡುಗಡೆ ಹೊಂದಿ ನಮ್ಮ ಸ್ವಇಚ್ಛೆಯ ಪ್ರಜಾತಂತ್ರದ ಧರ್ಮಕ್ಕೆ ಮತಾಂತರಗೊಳ್ಳಬೇಕಾದ ತುರ್ತು ಇಂದಿನದು. ಈ ಪ್ರಕ್ರಿಯೆ ಪ್ರತಿಕ್ಷಣವೂ ನಡೆಯಬೇಕಾದದ್ದು.
ಪ್ರಜಾತಂತ್ರವೇ ಧರ್ಮ ಎಂದು ನಂಬಿರುವವನು ನಾನು. ಈ ನಂಬಿಕೆಯಲ್ಲಿ ನಾನು ಏಕಾಂಗಿಯೇನಲ್ಲ ಎಂಬ ದೃಢವಿಶ್ವಾಸವೂ ನನ್ನದು. ಈ ಧರ್ಮದ ಧರ್ಮಗ್ರಂಥವೆಂದರೆ ನಮ್ಮ ಸಂವಿಧಾನವೇ. ಈ ಧರ್ಮಕ್ಕೆ ಏಕಮೇವಾದ್ವಿತೀಯನಾದ ಗುರುವೂ ಇಲ್ಲ, ಪ್ರವಾದಿಯೂ ಇಲ್ಲ ಮತ್ತು ಈ ಧರ್ಮಗ್ರಂಥ ಯಾರೂ ಮುಟ್ಟಬಾರದ, ಪ್ರಶ್ನಿಸಬಾರದ, ಏನನ್ನೂ ಬದಲಿಸಲಾಗದ, ಚಲನಶೀಲತೆಯನ್ನು ಕಳೆದುಕೊಂಡ ಗ್ರಂಥವೂ ಅಲ್ಲ. ಇಲ್ಲಿ ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯ ವಿಸ್ತಾರವಾದುದು. ಮಿತಿಗಳಿಲ್ಲದ, ಗಡಿಗಳಿಲ್ಲದ ಅನಂತ ಸಾಧ್ಯತೆಗಳಿರುವ ವ್ಯವಸ್ಥೆ ಈ ಧರ್ಮ.
ವೇದ, ಉಪನಿಷತ್ತು, ಭಗವದ್ಗೀತೆ ಅಥವಾ ಮತ್ಯಾವುದೇ ಪವಿತ್ರವೆಂದು ಪರಿಗಣಿಸಲಾದ ಗ್ರಂಥವೂ ಮನುಷ್ಯನ ನಿರಂತರ, ಅವಿರತ ಸತ್ಯಶೋಧನಾ ಕುತೂಹಲಗಳಿಗೆ ಅಂತಿಮ ಉತ್ತರಗಳನ್ನು ನೀಡುವವು ಎಂದು ನಾವು ತಿಳಿದಿಲ್ಲ. ಗೀತೆಯಲ್ಲಿ ಶ್ರೀಕೃಷ್ಣನೇ ಅರ್ಜುನನಿಗೆ ತಾನು ಬೋಧಿಸಬೇಕಾದದ್ದೆಲ್ಲವನ್ನೂ ಬೋಧಿಸಿದ ಮೇಲೆ ಕೊನೆಗೆ ಹೇಳುವ ಮಾತೆಂದರೆ– ‘ಯಥೇಚ್ಛಸಿ ತಥಾ ಕುರು’ ಎಂಬ ನುಡಿ. ಅಂದರೆ ಆಯ್ಕೆ ವ್ಯಕ್ತಿಯದೇ, ಈ ಸ್ವಾತಂತ್ರ್ಯವನ್ನು ಕಸಿದುಕೊಂಡಂತಲ್ಲ ಎಂದಾಯಿತು.
ಧರ್ಮಗ್ರಂಥವೆಂದರೆ ಬಿಡುಗಡೆಯ ಮಾರ್ಗದರ್ಶಿ ಆಗಬೇಕು. ನಮ್ಮ ಪೂರ್ವಗ್ರಹಗಳಿಂದ, ಸ್ವಇಚ್ಛೆಯಿಂದ ಉಸಿರು ಕಟ್ಟಿದವರಂತೆ ಬಾಳುತ್ತಿರುವ ಬದುಕಿನಿಂದ ಮುಕ್ತ ಗೊಳಿಸಿಕೊಂಡು ನಿರಾಳ ಸ್ಥಿತಿ ತಲುಪುವುದಕ್ಕೆ ಸಹಾಯಕ ಆಗುವುದು ಎಂದರ್ಥ. ನಾವು ಕಟ್ಟಿಹಾಕಿಕೊಂಡ, ಕಟ್ಟಿ ಹಾಕಿಕೊಂಡ ನೂರುಬಗೆಯ ಗಂಟುಗಳಿಂದ ಬಿಡಿಸಿ ಕೊಳ್ಳುವುದಕ್ಕೆ ಸಹಾಯಕವಾಗಬೇಕು; ಮತ್ತೂ ಸಂಕೀರ್ಣ ಗೊಳಿಸಿಕೊಳ್ಳುವ ರೀತಿಯದಲ್ಲ. ಬದಲಿಗೆ ಈ ಬಂಧನ ಮತ್ತೂ ಜಟಿಲವಾಗುತ್ತ ಹೋದರೆ ನಾವು ನಂಬಿದ ಗ್ರಂಥ ಧಾರ್ಮಿಕವೂ ಅಲ್ಲ ಮತ್ತು ಅದು ಪ್ರತಿನಿಧಿಸುವ ಧರ್ಮ ಧರ್ಮವೂ ಅಲ್ಲ.
ಧರ್ಮವೆಂದರೆ ನಮ್ಮ ಇಂದ್ರಿಯಗಳ ಮೂಲಕ ಅನುಭವಕ್ಕೆ ಬರುವ ಈ ಜಗತ್ತನ್ನು ಮೀರಿದ ಮನಸ್ಸಿಗೆ, ಮನಸ್ಸಿನ ಅಂತರಾಳಕ್ಕೆ ವೇದ್ಯವಾಗುವ, ಕಲ್ಪನೆಗೆ ಆಗೊಮ್ಮೆ ಈಗೊಮ್ಮೆ ಮಿಂಚಿನಂತೆ ಹೊಳೆದು ಮರೆಯಾಗಿಬಿಡುವ ನಮ್ಮ ಹೊಳಹುಗಳು. ಇವು ಶಬ್ದಗಳಲ್ಲಿ ಹಿಡಿಯಲಾಗದೆ ಶಬ್ದಗಳಿಗಾಗಿ ತಡಕಾಡುತ್ತಲೇ ಇರುವ ಸ್ಥಿತಿಯಲ್ಲಿ ನಮ್ಮನ್ನು ಇರಿಸಿಬಿಡುತ್ತದೆ. ಸಿಕ್ಕಿತೆಂದು ಸಂಭ್ರಮಿಸುವ ಮರುಕ್ಷಣವೇ ತನ್ನ ಇನ್ನೊಂದು ಮಗ್ಗುಲು ಕಾಣಿಸಿ, ಮತ್ತೆ ದೂರಕ್ಕೆ ಸಿಡಿದುಹೋಗಿ ನಮ್ಮನ್ನು ಏಕಕಾಲದಲ್ಲಿ ಅಸಫಲರು ಎನಿಸಿದರೂ ಸವಾಲನ್ನು ಸ್ವೀಕರಿಸುವ ಮನಃಸ್ಥಿತಿಯನ್ನು ಸಿದ್ಧಗೊಳಿಸುವ ಪ್ರೇರಕ ಶಕ್ತಿಯೂ ಆಗಿರುತ್ತದೆ.
ಆಲಯದಲ್ಲಿದ್ದರೂ ಬಯಲಿನ ಆಕರ್ಷಣೆ ಉಳಿಸುತ್ತಲೇ ಹೋಗುವುದರಿಂದಲೇ ಧರ್ಮವೆಂದರೆ ಅರಳುವ ಪ್ರಕ್ರಿಯೆ. ಎಲ್ಲ ವಿವರಣೆಗಳಿಂದಲೂ ದೂರ ಸರಿಯುತ್ತ ಅಮೂರ್ತವೂ, ಪ್ರತಿಕ್ಷಣದ ಅಂತರಾಳದ ಗುಂಗೂ ಆಗಿ ಉಳಿದುಬಿಡುವುದು ಈ ಆಕರ್ಷಣೆ.
ಕಠೋಪನಿಷತ್ತಿನಲ್ಲಿ ‘ತಮಸೋಮಾ ಜ್ಯೋತಿರ್ಗಮಯ, ಅಸತೋಮಾ ಸದ್ಗಮಯ, ಮೃತ್ಯೋರ್ಮಾ ಅಮೃತಂಗಮಯ’ ಎಂಬ ಅದ್ಭುತ ಸಾಲುಗಳಿವೆ. ಕತ್ತಲು, ಸುಳ್ಳು, ಇವುಗಳಲ್ಲೇ ಮುಳುಗಿ ನಮ್ಮದು ಒಂದು ಬಗೆ ‘ಆತ್ಮ’ಹತ್ಯೆ ಮಾಡಿಕೊಂಡು ಸತ್ತ ಸ್ಥಿತಿಯಲ್ಲಿದ್ದಂತೆ, ‘ಅಮೃತಂಗಮ’ಯ ಅಂದರೆ ಜೀವಂತ ಉಳಿಯುವುದು. ಕೇವಲ ಉಸಿರಾಟಕ್ಕೆ ಮಿತಿಗೊಂಡದ್ದಲ್ಲ ಈ ಉಳಿವು– ಬದುಕಿಗೆ, ಅನಂತಕ್ಕೆ, ಭವಿಷ್ಯಕ್ಕೆ, ಸ್ಪಂದಿಸುವ ರೀತಿ, ನಾಡಿ ಮಿಡಿಯುತ್ತಿರುವಂತೆ ಉಳಿಸಿಕೊಳ್ಳುವ ಸ್ಥಿತಿಯಿದು. ಅಣುವೂ ಬ್ರಹ್ಮಾಂಡವೂ, ಅನಂತದ ಕಲ್ಪನೆಯೂ ಏಕಕಾಲದಲ್ಲಿ ಉಂಟಾದಾಗ ಮಾತ್ರ ಧಾರ್ಮಿಕ ಭಾವನೆ ಸಾಧ್ಯವಾಗಬಹುದು. ಆಲಯವೂ ಬಯಲೂ ‘ಒಂದಾದೆಡೆ ನಿಮ್ಮಲ್ಲಿ ತೆರಹುಂಟೆ’ ಎಂದು ಬಸವಣ್ಣ ಹೇಳುವುದು ಇದೇ ಮಾತನ್ನೇ.
ನಾವು ಅಂತಿಮ ಸತ್ಯವನ್ನು ಕಂಡುಕೊಂಡಿದ್ದೇವೆಂದು ಭ್ರಮಿಸುವುದು ‘ಧರ್ಮ’ಕ್ಕೆ ನಾವು ಕೊಡುವ ಮೊದಲ ಮಾರಕ ಹೊಡೆತ. ಆದರೆ ಪೆಟ್ಟಿನ ಪರಿಣಾಮವಾಗುವುದು ನಮಗೆ, ಧರ್ಮಕ್ಕಲ್ಲ. ಬುದ್ಧನ ಒಂದು ಮಾತು ಹೀಗಿದೆ: ‘ವಿಪರೀತಹ ಯಾವ ಒಲವೂ, ಆಕರ್ಷಣೆಯೂ ಸಂಕಟಕ್ಕೆ, ದುಃಖಕ್ಕೆ ಕಾರಣ; ಸತ್ಯದ ಕುರಿತಾದ ನಮ್ಮ ತೀವ್ರಾಕರ್ಷಣೆಯೂ ಸೇರಿದ ಹಾಗೆ’. ನಾನು ಹುಟ್ಟಿದ ಧರ್ಮದ ಸತ್ಯವೇ ಅಂತಿಮವೆಂದು ಭಾವಿಸಿದ ಮರುಕ್ಷಣ, ಹುಡುಕುತ್ತ ಹೊರಡುವ ನಮ್ಮ ಚೈತನ್ಯಕ್ಕೆ ಘಾತಮಾಡಿದ ಹಾಗೆ. ಇದು ಮತ್ತೊಬ್ಬ ವ್ಯಕ್ತಿಯ ಸತ್ಯಗ್ರಹಿಕೆಯ ಕುರಿತಾದ ಅಸಹನೆ, ಸ್ಪರ್ಧಾಭಾವ ಮತ್ತು ಅಂತಿಮವಾಗಿ ಹಿಂಸಾಪ್ರವೃತ್ತಿಯನ್ನು ಬೆಳೆಸುವುದು. ನಮ್ಮ ಗುರುಗಳು, ನಮ್ಮ ಆಚಾರ್ಯರು, ನಮ್ಮ ಪ್ರವಾದಿಗಳು ಹೇಳಿದ ಮಾತು ಎಂಬುದನ್ನು ಗಿಣಿಪಾಠದಂತೆ ಜಪಿಸುತ್ತ, ಸುತ್ತಲ ಜಗತ್ತಿನ ವೈವಿಧ್ಯತೆಗೆ, ಸೌಂದರ್ಯಕ್ಕೆ ಮುಸುಕು ಹಾಕಿ ಸ್ವಚ್ಛಂದತೆಯ ಸೊಬಗನ್ನು ಕಳೆದುಕೊಳ್ಳುತ್ತಿರುತ್ತೇವೆ.
ನಮ್ಮ ದೇಶದ ದುರಂತವೆಂದರೆ ಉಪನಿಷತ್ತಿನಂಥ ಅದ್ಭುತ ಚಿಂತನೆಗಳನ್ನು ಒಳಗೊಂಡ ಗ್ರಂಥಗಳನ್ನು ರಚಿಸಿದ ಮನುಷ್ಯಕುಲದ ಅಂತಿಮ ಘಟ್ಟ, ಮನುಷ್ಯ ಕುಲವನ್ನೇ ಜಾತಿಗಳಾಗಿ ಒಡೆದು, ಮೇಲು ಕೀಳುಗಳನ್ನು, ಲಿಂಗ ತಾರತಮ್ಯಗಳನ್ನು ಹುಟ್ಟುಹಾಕಿರುವುದು. ಅಸಮಾನತೆಯನ್ನೇ ಮೂಲಮಂತ್ರವಾಗಿಸಿದ ಮನುಷ್ಯ ರಚಿಸಿದ ಶಾಸ್ತ್ರಗ್ರಂಥವನ್ನು ‘ಧರ್ಮಶಾಸ್ತ್ರ’ವೆಂದು ಕರೆದು, ಆ ಗ್ರಂಥಕ್ಕೆ ಸಂಪೂರ್ಣ ಸಮರ್ಪಣೆ ಮಾಡಿಕೊಂಡು, ಸರ್ವಕಾಲಕ್ಕೂ ಮಾನಸಿಕ ಗುಲಾಮ ಸ್ಥಿತಿಯನ್ನು ಆಯ್ಕೆ ಮಾಡಿಕೊಂಡದ್ದು. ಇದು ಧರ್ಮ ದುರಂತ. ಮೋಕ್ಷಮಾರ್ಗದಲ್ಲಿ ನಡೆಯುವುದೆಂದರೆ ಬದುಕಿನ ಮಾರ್ಗಕ್ಕೆ ಅಭೇದ್ಯ ಅಡ್ಡಗೋಡೆಗಳನ್ನು ಸೃಷ್ಟಿಸಿಕೊಂಡ ಹಾಗೆ. ಕರ್ಮಸಿದ್ಧಾಂತದಲ್ಲಿ ನಂಬಿಕೆಯಲ್ಲಿ ಮುಂದಿನ ಜನ್ಮಕ್ಕೆ ಮಾರ್ಗ ಮಾತ್ರ ಈ ಬದುಕು ಎಂಬ ಆತ್ಮಹಾನಿಕರ ರೀತಿಯ ಸ್ಥಿತಿಯಲ್ಲಿರುವುದೆಂದರೆ ಸುತ್ತಲ ಜೀವಕೋಟಿಯನ್ನೂ ಪ್ರಕೃತಿಯ ಅಗಾಧ ಅನಂತ ಕೊಡುಗೆಗಳನ್ನೂ ಅಸಹನೆಯಲ್ಲಿ ತಿರಸ್ಕರಿಸಿದ ಹಾಗೆ. ಇಂಥ ಸಂದರ್ಭವನ್ನು ಅರಿತೇ– ಬುದ್ಧ, ಕ್ರಿಸ್ತ, ಮಹಮದ್, ಮಹಾವೀರ, ಬಸವಣ್ಣ, ಅಕ್ಕ ಇವರುಗಳೆಲ್ಲ ನಮ್ಮ ಪ್ರಜ್ಞೆಯಲ್ಲಿ ಬಿತ್ತಿದ್ದು ಜೀವಪ್ರೇಮದ ಬೀಜಗಳನ್ನು.
ನಮ್ಮ ಯುಗಕ್ಕೇ ಬಂದರೆ ಠಾಗೋರ್, ಗಾಂಧಿ, ಅಂಬೇಡ್ಕರ್, ಲೋಹಿಯಾ ಇವರುಗಳು ಮನಸ್ಸುಗಳ ಸ್ವಾತಂತ್ರ್ಯಕ್ಕಾಗಿ, ಸಮಾನತೆಯ ಆಶಯವನ್ನು ತುಂಬುತ್ತ ಜೀವಕೋಟಿಯನ್ನು ಅರಳಿಸುವುದಕ್ಕೆ ಯತ್ನಿಸಿದರು. ನಮ್ಮ ಸೀಮಿತ ಅರ್ಥದ ಧಾರ್ಮಿಕ ಕಲ್ಪನೆಯ ಹಾಗೆಯೇ ನಮ್ಮ ರಾಷ್ಟ್ರೀಯತಾ ಭಾವವೂ ಸಂಕುಚಿತವಾಗಿದೆ. ‘ರಾಷ್ಟ್ರಗಳ ಮಧ್ಯದಲ್ಲಿ ಕಟ್ಟಿದ ಕೋಟೆಗಳು ಮನುಷ್ಯನನ್ನು ಅಂತರರಾಷ್ಟ್ರೀಯವಾಗಿ ವಿಭಜಿಸುವ ಪ್ರಕ್ರಿಯೆ’ ಎಂದೇ ಠಾಗೋರ್, ಗಾಂಧಿ ಇವರುಗಳು ಮನಸ್ಸುಗಳನ್ನು ಸಂಕುಚಿತಗೊಳಿಸುವ ರಾಷ್ಟ್ರೀಯತಾಭಾವದ ಕಲ್ಪನೆಯನ್ನು ಕಟುವಾಗಿ ವಿರೋಧಿಸಿದ್ದು, ಠಾಗೋರ್ ಮತ್ತು ಕುವೆಂಪು ಅಂಥ ಚಿಂತಕರು ಮತ್ತೂ ಮುಂದುವರೆದು ‘ವಿಶ್ವಮಾನವ’ ಕಲ್ಪನೆಯನ್ನು ನಮ್ಮ ಮನಸ್ಸುಗಳಲ್ಲಿ ಹುಟ್ಟಿಹಾಕಿದ್ದು.
ಇಡೀ ರಾಷ್ಟ್ರವನ್ನೂ ‘ಹಿಂದೂ’ ರಾಷ್ಟ್ರವನ್ನಾಗಿಸುತ್ತೇನೆ ಎಂಬುವನೂ, ಇಡೀ ಜಗತ್ತನ್ನು ‘ಇಸ್ಲಾಮೀಕರಣ’ಗೊಳಿಸಿ ಬಿಡುತ್ತೇನೆ ಎಂಬುವವನೂ– ಈ ಇಬ್ಬರೂ ವಿಕೃತ ಮನಸ್ಸುಗಳಲ್ಲಿ ನರಳುವವರು. ಧರ್ಮವು ಬಲಿಷ್ಠವೋ ಅಲ್ಲವೋ ಎಂಬುದು ಸಂಖ್ಯಾಬಲದಿಂದ ನಿರ್ಣಯವಾಗುವುದಲ್ಲ.
ಹಿಂದೂಧರ್ಮಕ್ಕೆ ಮತಾಂತರ ಗೊಳ್ಳುವುದು ಎಂಬುದೇ ಇಲ್ಲ ಎಂದು ಇದುವರೆಗೆ ನಂಬಿಸಲಾಗುತ್ತಿತ್ತು. ಇದ್ದಕ್ಕಿದ್ದಂತೆ ಹಿಂದೂಧರ್ಮಕ್ಕೆ ಹಿಂದಿರುಗುವ ಇಚ್ಛೆಯುಳ್ಳವರು ಎಂದು ಹೇಳಲಾಗದವರನ್ನು ‘ಘರ್ ವಾಪಸೀ’ ಎಂಬ ಮಾತು ಪ್ರಚುರಪಡಿಸುತ್ತ ಅಂಥವರುಗಳಿಗೆ ಹಿಂದೂಧರ್ಮದ ದೀಕ್ಷೆ ನೀಡುವ ಪರಿಪಾಠ ಆರಂಭವಾಗಿದೆ. ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾದ ಮಾತೆಂದರೆ ಹಿಂದೂಧರ್ಮವೆಂದರೆ ನೂರು ಜಾತಿಗಳ ಸಮುಚ್ಚಯ. ನಾನು ಹಿಂದೂ ಎಂದು ಹೇಳಿಕೊಂಡರೆ ಏನೂ ಹೇಳಿಕೊಂಡಂತಾಗಲಿಲ್ಲ; ನನ್ನ ಜಾತಿಯನ್ನು ಹೇಳಿಕೊಂಡಾಗಲೇ ಅಧಿಕೃತತೆ ಬರುವುದು. ಎಂದಾದ ಮೇಲೆ ಹೀಗೆ ‘ಮನೆಗೆ ವಾಪಸಾ’ಗುವವರನ್ನು ಯಾವ ಜಾತಿಗೆ ಸೇರಿಸುವ ಅಭಿಪ್ರಾಯ ಈ ಮತಾಂತರ ನಾಯಕರುಗಳಿಗೆ ಇದೆ ಎಂದು ಸ್ಪಷ್ಟಗೊಳಿಸಬೇಕು. ಯಾವ ಜಾತಿಯವರು ಇವರನ್ನು ತಮ್ಮೊಡನೆ ಸೇರಿಸಿಕೊಳ್ಳಲು ಸಿದ್ಧರಿದ್ದಾರೆ ಎಂಬ ಯೋಚನೆ ಯಾರನ್ನೂ ಬಾಧಿಸಿದಂತೆ ಕಾಣುವುದಿಲ್ಲ. ಮರುಮತಾಂತರದ ವಿಚಾರವೇ ಹಾಸ್ಯಾಸ್ಪದ ಮತ್ತು ಮರುಮತಾಂತರಗೊಂಡವರು ಇದನ್ನು ಹುಟ್ಟುಹಾಕಿದವರ ಕೈಗಳಲ್ಲಿ ಸಿಲುಕಿ ಅತಂತ್ರರೂ ಅನಾಥರೂ ಆಗುವುದು ಖಂಡಿತ.
ಪ್ರಜಾತಂತ್ರವೆಂಬುದು ಧರ್ಮವಾಗಬೇಕಾದ, ಧರ್ಮವೆಂದು ಪರಿಗಣಿಸಬೇಕಾದ ಅವಕಾಶ ಮತ್ತು ತುರ್ತು ನಮ್ಮ ಎದುರಿನಲ್ಲಿದೆ. ಈ ಮೊದಲೇ ಹೇಳಿದಂತೆ ಇಲ್ಲಿ ವ್ಯಕ್ತಿಗೆ ಆಯ್ಕೆಯ ಸ್ವಾತಂತ್ರ್ಯವಿದೆ; ವ್ಯವಸ್ಥೆಯನ್ನು ವಿರೋಧಿಸುವ ಹಕ್ಕೂ ಇದೆ, ಈ ಹಕ್ಕು ಬಳಸಿ ತನ್ನ ಘನತೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ. ಆಯ್ಕೆ ತಪ್ಪಾದರೆ ಜವಾಬ್ದಾರಿ ನಮ್ಮದೇ ಎಂಬ ಅರಿವನ್ನು ಈ ವ್ಯವಸ್ಥೆ ಕಲಿಸುತ್ತದೆ. ತಪ್ಪನ್ನು ಸರಿಮಾಡಿಕೊಳ್ಳುವ, ನಮ್ಮ ನಾಯಕರುಗಳನ್ನು ಬದಲಿಸುವ, ದಂಡಿಸುವ, ಬಂಧಿಸುವ ಅಧಿಕಾರವೂ ವ್ಯಕ್ತಿಗೆ ಇದೆ. ವ್ಯವಸ್ಥಿತ ಧರ್ಮದಲ್ಲಿ ಒಮ್ಮೆ ಒಬ್ಬ ವ್ಯಕ್ತಿಯನ್ನು ಪೀಠದಲ್ಲಿ ಕೂರಿಸಿಬಿಟ್ಟರೆ ಆತನ ಕೊನೆ ಉಸಿರುವವರೆಗೆ ಪೀಠಾಧಿಪತಿ. ಕಾಲುಮುಟ್ಟಿ ನಮಸ್ಕರಿಸಿ ಅವರಿಗೆ ಅವಿಚ್ಛಿನ್ನ ವಿಧೇಯತೆಯನ್ನು ತೋರುತ್ತಾ ಅವರ ಮಾತುಗಳನ್ನು ಶಂಖದಿಂದ ಜಾರಿದ ತೀರ್ಥವೆಂಬಂತೆ ಸ್ವೀಕರಿಸುವುದಷ್ಟೇ ನಮ್ಮ ಕರ್ತವ್ಯ.
ನಮ್ಮ ಚುನಾವಣಾ ವ್ಯವಸ್ಥೆ, ಶಾಸನಸಭೆ, ಸಂಸತ್ ಕಲಾಪಗಳು ಎಲ್ಲವೂ ಕೂಡ ನಮ್ಮ ಅಂತಿಮ ಗುರಿಯಾಗಬೇಕಾದ ವೈಯಕ್ತಿಕ ಸ್ವಾತಂತ್ರ್ಯ, ಮತ್ತು ಸಮುದಾಯದಲ್ಲಿ ಸಮಾನತೆಯ ಸ್ಥಾಪನೆಗಳಿಂದಾಗಿ ನಾವು ಕಂಡುಕೊಂಡ ಮಾರ್ಗಗಳಷ್ಟೆ. ಆ ಕಾರಣದಿಂದಲೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಿಷ್ಠೆ ಮತ್ತು ಬದ್ಧತೆಗಳುಳ್ಳ ನಾಗರಿಕರ ಸೃಷ್ಟಿ ಅವಶ್ಯವೂ ಹೌದು, ಸಾಧ್ಯವೂ ಹೌದು.
ಒಳ್ಳೆಯ ಬ್ರಾಹ್ಮಣ, ಶೂದ್ರ, ಲಿಂಗಾಯತ, ಮುಸಲ್ಮಾನ ಎಂದೆಲ್ಲ ಕರೆಸಿಕೊಳ್ಳುವುದು ಬಹು ಸುಲಭ. ಆಯಾ ಮಠಗಳ ಗುರುಗಳು ‘ಆಹಾ ಎಂಥ ನಿಷ್ಠಾವಂತ’ ಎಂದು ತಮ್ಮ ಪೀಠಕ್ಕೆ ನಿಷ್ಠರಾದವರನ್ನು ಗುರುತಿಸಬಿಡಬಹುದು. ಆದರೆ ಒಳ್ಳೆಯ ಮನುಷ್ಯನಾಗುವುದೇ ನಮ್ಮ ಮುಂದಿರುವ ಸವಾಲು. ಈ ಒಳ್ಳೆಯ ಮನುಷ್ಯನಾಗುವುದು ಎಂದರೆ ಪ್ರಜಾತಂತ್ರದ ಅಮೂರ್ತಗಳೊಡನೆ ನಮ್ಮನ್ನು ನಾವು ಸಮೀಕರಿಸಿಕೊಳ್ಳುತ್ತ ಹೋಗುವುದು. ಪ್ರಕೃತಿಧರ್ಮಕ್ಕೆ ಹತ್ತಿರವಾಗುತ್ತಿದ್ದೇವೆಂಬ ವಿಶ್ವಾಸದಲ್ಲಿ ಮುಂದುವರೆಯುವ ಬಗೆ ಇದು. ಮನುಷ್ಯನನ್ನು ಮನುಷ್ಯನನ್ನಾಗಿ ಮಾತ್ರ ಗುರುತಿಸುವ ರೀತಿಯನ್ನು ಕಲಿಯುವುದು, ಜಾತಿಗಳಾಗಿ ಅಲ್ಲ, ಗಂಡು–ಹೆಣ್ಣು ಎಂಬ ಭೇದಭಾವಗಳಲ್ಲಿ ಅಲ್ಲ.
ಆಯ್ಕೆಗಳೇ ಇಲ್ಲದೆ ಆಕಸ್ಮಿಕವಾದ ನಮ್ಮ ಹುಟ್ಟಿನ ಜಾತಿಯ ಕುರಿತಾಗಿ ಸಂಭ್ರಮಿಸುವುದನ್ನು ಕಂಡರೆ ತುಟಿಯಂಚಿನ ಕಿರುನಗೆಯ ಜೊತೆಗೆ ಕಣ್ಣಂಚು ತೇವಗೊಳ್ಳುವುದು ಕೂಡ. ಎಂದೇ ನಾವು ಅಕಸ್ಮಾತ್ತಾಗಿ ಹುಟ್ಟಿದ ನಮ್ಮ ಜಾತಿ, ಧರ್ಮಗಳಿಂದ ಬಿಡುಗಡೆ ಹೊಂದಿ ನಮ್ಮ ಸ್ವಇಚ್ಛೆಯ ಪ್ರಜಾತಂತ್ರದ ಧರ್ಮಕ್ಕೆ ಮತಾಂತರಗೊಳ್ಳಬೇಕಾದ ತುರ್ತು ಇಂದಿನದು. ಈ ಪ್ರಕ್ರಿಯೆ ಪ್ರತಿಕ್ಷಣವೂ ನಡೆಯಬೇಕಾದದ್ದು. ವೈವಿಧ್ಯಮಯ ಬಣ್ಣಗಳು, ಆಯಾಮಗಳು ಪಡೆದುಕೊಳ್ಳುತ್ತಲೇ ಹೋಗುವ ಈ ಪ್ರಕ್ರಿಯೆಯಲ್ಲಿ ಯಶಸ್ಸು ಸುಲಭಸಾಧ್ಯವಿಲ್ಲದಿದ್ದರೂ ಈ ಸಾಹಸ ಮಾತ್ರ ನಮ್ಮನ್ನು ಜೀವಂತವಾಗಿ ಉಳಿಸುವುದು ಸತ್ಯ. ನಿಜವಾದ ಅರ್ಥದಲ್ಲಿ ನಾವು ಧಾರ್ಮಿಕರೆನಿಸಿಕೊಳ್ಳುವುದೂ ಸತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.