ADVERTISEMENT

ಮತ್ತೆ ಮತ್ತೆ ಗಾಂಧಿ!

ನೂರು ಕಣ್ಣು ಸಾಲದು

ನೇಸರ ಕಾಡನಕುಪ್ಪೆ
Published 28 ಸೆಪ್ಟೆಂಬರ್ 2013, 19:59 IST
Last Updated 28 ಸೆಪ್ಟೆಂಬರ್ 2013, 19:59 IST

ಗತ್ತು ಕಂಡ ಅದ್ಭುತ ಮಾನವತಾವಾದಿ ಗಾಂಧೀಜಿ ಅವರ ಪ್ರಭಾವ ಜನತೆಯ ಮೇಲಷ್ಟೇ ಅಲ್ಲದೇ ನೂರು ವರ್ಷಗಳನ್ನು ಕಂಡಿರುವ ಭಾರತೀಯ ಸಿನಿಮಾ ರಂಗದ ಮೇಲೂ ಆಗಿದೆ. ಹಾಗೆ ನೋಡಿದರೆ ಚಲನಚಿತ್ರಗಳ ಬಗ್ಗೆ ಬಾಪೂಜಿಯವರಿಗೆ ಅಷ್ಟೇನೂ ಒಲವಿರಲಿಲ್ಲ. ಆದರೆ ಪ್ರಭಾವಶಾಲಿಯಾದ ಚಿತ್ರ ಮಾಧ್ಯಮ ಅವರನ್ನು ಸದಾ ಹಿಂಬಾಲಿಸುತ್ತಲೇ ಬಂದಿದೆ.

ಅವರು ತೀರಿಕೊಂಡು ದಶಕಗಳೇ ಕಳೆದರೂ ಗಾಂಧಿ ಚಲನಚಿತ್ರಗಳಿಂದ ಇನ್ನೂ ಜೀವಂತವಾಗಿದ್ದಾರೆ. ಒಂದಲ್ಲ ಎರಡಲ್ಲ ನೂರಾರು ಸಾಕ್ಷ್ಯಚಿತ್ರಗಳು, ಕಥಾಚಿತ್ರಗಳು ಬಾಪೂಜಿಯವರನ್ನು ಈಗಲೂ ನೋಡುಗರಲ್ಲಿ ಹಸಿರಾಗಿಟ್ಟಿದೆ. ನೇರವಾಗಿ ಗಾಂಧೀಜಿಯವರ ವ್ಯಕ್ತಿತ್ವ ಕೆಲವು ಚಿತ್ರಗಳಲ್ಲಿ ಕಂಡುಬಂದರೆ, ಇನ್ನೂ ಕೆಲವು ಚಿತ್ರಗಳಲ್ಲಿ ಅವರ ವಿಚಾರಧಾರೆಯ ಪ್ರಭಾವ ಎದ್ದುಕಾಣುತ್ತದೆ.

೧೯೨೦ರಿಂದ ೨೦೧೦ರವರೆಗೆ ಸುಮಾರು ೨೫ಕ್ಕೂ ಹೆಚ್ಚು ಕಥಾಚಿತ್ರಗಳಲ್ಲಿ ಬಾಪೂ ತೆರೆಮರೆ ಹಾಗೂ ತೆರೆಯ ಮೇಲಿದ್ದಾರೆ. ಸಾಕ್ಷ್ಯಚಿತ್ರಗಳಂತೂ ಬಾಪೂಜಿಯವರ ಹಲವು ಮಗ್ಗುಲುಗಳನ್ನು ಪರಿಚಯಿಸುತ್ತಲೇ ಇವೆ.  ಗಾಂಧೀಜಿಯವರ ಬದುಕು, ಸಾಧನೆ ಕುರಿತಂತೆ ೧೯೫೨ರಲ್ಲಿಯೇ ಕಥಾಚಿತ್ರವೊಂದು ರೂಪುಗೊಂಡಿತ್ತು.

ಅದರ ರೂವಾರಿ ರಿಚರ್ಡ್ ಅಟೆನ್‌ಬರೋ. ಇವರು ‘ಗಾಂಧಿ’ ಚಿತ್ರದ ಕನಸನ್ನು ಕನಿಷ್ಠ ಮೂರು ದಶಕಗಳ ಕಾಲ ಕಂಡವರು. ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹಾರಲಾಲ್ ನೆಹರೂ ಅವರೊಂದಿಗೆ ಚಿತ್ರ ನಿರ್ಮಾಪಕ ಗ್ಯಾಬ್ರಿಲ್ ಪಾಸ್ಕಲ್ ಅವರು ಸುದೀರ್ಘ ಮಾತುಕತೆಯ ನಂತರ ಗಾಂಧಿ ಜೀವನದ ಚಿತ್ರವೊಂದನ್ನು ನಿರ್ಮಿಸಲು ಅಟೆನ್‌ಬರೋ ಮೊದಲ ಕಾರಣ. ಆದರೆ ದುರಾದೃಷ್ಟವಶಾತ್ ಪಾಸ್ಕಲ್ ಅವರು ಆಕಸ್ಮಿಕವಾಗಿ ತೀರಿಕೊಂಡಿದ್ದರಿಂದಾಗಿ ಚಿತ್ರ ಆರಂಭಗೊಳ್ಳಲಿಲ್ಲ.
 
ಅಟೆನ್‌ಬರೋ ಆ ವೇಳೆಗಾಗಲೇ ಗಾಂಧಿಯವರನ್ನು ಕುರಿತಂತೆ ಅಧ್ಯಯನ ಆರಂಭಿಸಿ ಬಹಳ ಕಾಲ ಕಳೆದಿತ್ತು. ಮತ್ತೆ ಅವರನ್ನು, ೧೯೬೨ರಲ್ಲಿ ಇಂಗ್ಲೆಂಡಿನಲ್ಲಿದ್ದ ಭಾರತೀಯ ಸಂಜಾತ ಅಧಿಕಾರಿ ಮೋತಿಲಾಯ್ ಕೊಠಾರಿ ಸಂಪರ್ಕಿಸಿ ಗಾಂಧಿ ಕುರಿತು ಚಿತ್ರ ನಿರ್ಮಿಸುವ ಬಗ್ಗೆ ಚರ್ಚೆ ನಡೆಸುವಂತೆ ಕೋರಿದರು. ಅಟೆನ್‌ಬರೋ ಅವರು ಲೂಯಿಸ್ ಫಿಚರ್ ಅವರು ರಚಿಸಿದ್ದ ಗಾಂಧಿಯವರ ಆತ್ಮಚರಿತ್ರೆಯನ್ನು ತಮ್ಮ ಚಿತ್ರಕ್ಕಾಗಿ ಓದಿಕೊಳ್ಳಲು ಆರಂಭಿಸಿದ್ದರು.

ADVERTISEMENT

ಕೊಠಾರಿ ಅವರೊಂದಿಗೆ ಮಾತುಕತೆ ನಡೆದ ನಂತರ ಮುಂದಿನ ೧೮ ವರ್ಷಗಳ ಕಾಲ ‘ಗಾಂಧಿ’ ಚಿತ್ರ ನಿರ್ಮಾಣಕ್ಕಾಗಿ ಅಟೆನ್‌ಬರೋ ಕಾದುಕುಳಿತರು. ಭಾರತದಲ್ಲಿ ಕೊನೆಯ ವೈಸರಾಯ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್ ಅವರ ಮಧ್ಯಸ್ಥಿಕೆಯಿಂದ ಅಟೆನ್‌ಬರೋ ಅವರು ಪ್ರಧಾನಿ ಜವಾಹರ್‌ಲಾಲ್ ನೆಹರೂ ಹಾಗೂ ಅವರ ಪುತ್ರಿ ಇಂದಿರಾಗಾಂಧಿಯವರನ್ನು ಭೇಟಿಯಾಗಿ ಚಿತ್ರದ ಬಗ್ಗೆ ಚರ್ಚಿಸಿದರು. ನೆಹರೂ ನೆರವಿನ ಹಸ್ತ ನೀಡಲು ಒಪ್ಪಿದರು. ಆದರೆ, ೧೯೬೪ರಲ್ಲಿ ಅವರ ನಿಧನದ ನಂತರ ಚಿತ್ರದ ಯೋಜನೆ ಮತ್ತೆ ನಿಂತುಹೋಯಿತು. 

ತಮ್ಮ ಗಾಂಧಿ ಚಿತ್ರದ ಗಟ್ಟಿತನವನ್ನು ಅರಿತಿದ್ದ ಅಟೆನ್‌ಬರೋ ಚಿತ್ರ ಯೋಜನೆಯ ಪ್ರಯತ್ನಗಳನ್ನು ಬಿಡಲಿಲ್ಲ. ಕೊನೆಗೆ ಅವರು ೧೯೭೬ರಲ್ಲಿ ವಾರ್ನರ್ ಬ್ರದರ್ಸ್ ಸಂಸ್ಥೆಯೊಡನೆ ಗಾಂಧಿ ಚಿತ್ರದ ತಯಾರಿಕೆ ಕುರಿತು ಮಾತನಾಡಿದರು. ಅದೇ ಸಂದರ್ಭದಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಇದ್ದಿದ್ದರಿಂದ ಚಿತ್ರೀಕರಣ ಅಸಾಧ್ಯವೆಂಬ ನಿರ್ಧಾರಕ್ಕೆ ಬರಲಾಯಿತು. ಛಲ ಬಿಡದ ವಿಕ್ರಮನಂತೆ ಅಟೆನ್‌ಬರೋ ಗಾಂಧಿ ಚಿತ್ರವನ್ನು ೧೯೮೦ರಲ್ಲಿ ನಿರ್ಮಿಸಲು ಗಟ್ಟಿಯಾದ ಬುನಾದಿಯನ್ನು ಹಾಕಿಕೊಂಡರು.

ಅದು ೧೯೮೦ರ ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗುವ ಮೂಲಕ ಸಾಕಾರವಾಯಿತು. ನ್ಯೂ ಗೋಲ್ಡ್ ಕ್ರೆಸ್ಟ್ ತಯಾರಿಕಾ ಸಂಸ್ಥೆ, ರಾಣಿ ದುಬೆ ಹಾಗೂ ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಇವೆಲ್ಲಾ ಸಂಸ್ಥೆ ಹಾಗೂ ವ್ಯಕ್ತಿಗಳ ನೆರವಿನಿಂದ ಅಟೆನ್‌ಬರೋ ೧೯೮೧ರ ಮೇ ೧೦ರಂದು ತಮ್ಮ ಮಹತ್ವಾಕಾಂಕ್ಷೆಯ ‘ಗಾಂಧಿ’ ಚಿತ್ರದ ಚಿತ್ರೀಕರಣವನ್ನು ಪೂರ್ತಿಗೊಳಿಸಿದರು.
ಇದುವರೆವಿಗೂ ತಯಾರಾಗಿರುವ ಬಾಪೂಜಿಯವರನ್ನು ಕುರಿತ ಚಿತ್ರಗಳಲ್ಲಿ ನಿಸ್ಸಂದೇಹವಾಗಿ ಅಟೆನ್‌ಬರೋ ನಿರ್ದೇಶಿಸಿದ ‘ಗಾಂಧಿ’ ಮುಂಚೂಣಿಯಲ್ಲಿದೆ.

ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರವಾದ ಈ ಚಿತ್ರದಲ್ಲಿ ಗಾಂಧಿ ಪಾತ್ರವನ್ನು ಬೆನ್ ಕಿಂಗ್ ಸ್ಲೇ ವಹಿಸಿದ್ದರು. ತಮ್ಮ ಮನೋಜ್ಞ ಪಾತ್ರಾಭಿನಯದಿಂದ ಬೆನ್ ಗಾಂಧೀಜಿಯವರಿಗೆ ಜೀವ ತುಂಬಿಕೊಟ್ಟಿದ್ದರು. ಬಾಪೂಜಿಯವರ ಅಂತಿಮ ಯಾತ್ರೆ ಮೂರು ಲಕ್ಷಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡಂತೆ ಚಿತ್ರೀಕರಣವಾಗಿದ್ದು ‘ಗಿನ್ನಿಸ್’ ಜಾಗತಿಕ ದಾಖಲೆಗಳಲ್ಲಿ ಗಾಂಧಿ ಚಿತ್ರ ನಮೂದಾಯಿತು.

ವಿದೇಶಿಯರ ಪ್ರಯತ್ನಗಳಿಂದ ಅಟೆನ್‌ಬರೋ ‘ಗಾಂಧಿ’ ತೆರೆಗೆ ಬಂದರೆ, ಭಾರತೀಯರೂ ಕೂಡ ಈ ವಿಷಯದಲ್ಲಿ ಹಿಂದೆ ಬೀಳಲಿಲ್ಲ. ತೆಲುಗು ಭಾಷೆಯಲ್ಲಿ ‘ಮಹಾತ್ಮ’ ಚಿತ್ರವನ್ನು ೧೨ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಯಿತು (೨೦೦೯).  ಜನಪ್ರಿಯ ನಟ ಶ್ರೀಕಾಂತ್ ಮಹಾತ್ಮರ ಪಾತ್ರ ವಹಿಸಿದ್ದು, ಕೃಷ್ಣವಂಶಿ ನಿರ್ದೇಶಿಸಿದ ‘ಮಹಾತ್ಮ’ ಚಿತ್ರ ಸಮಾಜ ವಿರೋಧಿಯೊಬ್ಬ ಗಾಂಧಿ ಹಾದಿಯನ್ನು ತುಳಿಯುವ ಕಥಾ ಹಂದರವನ್ನು ಹೊಂದಿತ್ತು.

ಇದಾದ ನಂತರ ಕಮಲ್ ಹಾಸನ್ ಅವರು ‘ಹೇ ರಾಮ್’ ಚಿತ್ರವನ್ನು ಬಾಪೂಜಿ ಕಥೆಯನ್ನೇ ಹಿನ್ನೆಲೆಯಾಗಿಟ್ಟುಕೊಂಡು ತಯಾರಿಸಿದರು. ಈ ಚಿತ್ರದಲ್ಲಿ ಬಾಪೂಜಿ ಪಾತ್ರ ನಿರ್ವಹಿಸಿದವರು ಪ್ರಸಿದ್ಧ ನಟ ನಾಸಿರುದ್ದೀನ್ ಷಾ. ‘ಹೇ ರಾಮ್’ ೨೦೦೦ನೇ ಇಸವಿಯ ಆಸ್ಕರ್ ಸ್ಪರ್ಧೆಗಳಲ್ಲಿ ಭಾರತದ ಚಿತ್ರವಾಗಿ ಅಧಿಕೃತ ಪ್ರವೇಶ ಪಡೆದಿತ್ತು. 

‘ಲಗೆ ರಹೋ ಮುನ್ನಾ ಭಾಯಿ’ ಗಾಂಧಿ ತತ್ವಗಳನ್ನು ಆಚರಣೆಗೆ ತರುವ ಗಾಂಧೀಗಿರಿ ಎಂಬ ಪದವನ್ನೇ ಸೃಷ್ಟಿಸಿದ ಚಿತ್ರ. ಹಿಂದಿಯಲ್ಲದೇ ಅನೇಕ ಭಾರತೀಯ ಭಾಷೆಗಳಲ್ಲೂ ಮುನ್ನಾಭಾಯ್ ಕಾಣಿಸಿಕೊಂಡ. ಈ ಚಿತ್ರದ ಸ್ಫೂರ್ತಿಯಿಂದ ದೇಶದ ಅನೇಕ ಭಾಗಗಳಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆದದ್ದೂ ಕೂಡ ವರದಿಯಾಯಿತು.

ಇನ್ನೊಬ್ಬ ರಾಷ್ಟ್ರ ನಾಯಕ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಬದುಕನ್ನಾಧರಿಸಿದ ‘ಸರ್ದಾರ್’ ಚಿತ್ರದಲ್ಲಿಯೂ ಗಾಂಧೀಜಿಯವರ ಪ್ರಮುಖ ಪಾತ್ರವನ್ನು ಹೆಣೆಯಲಾಗಿತ್ತು. ಬಾಪೂ ಅವರ ಆಲೋಚನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪಟೇಲರ ಪಾತ್ರವನ್ನು ಅನಾವರಣಗೊಳಿಸುವ ಈ ಚಿತ್ರದಲ್ಲಿ ಭಾರತ ಸ್ವಾತಂತ್ರ್ಯ ಪಡೆಯುವ ಅಂತಿಮ ಕ್ಷಣಗಳ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಜೊತೆಗೆ ದೇಶ ಇಬ್ಭಾಗವಾದ ಕಾಲಘಟ್ಟದಲ್ಲಿ ರಾಜಕೀಯ ಮುಖಂಡರು ಹಾಗೂ ಜನತೆಯಲ್ಲಿ ಉಂಟಾದ ತವಕ ತಲ್ಲಣಗಳನ್ನು ಈ ಚಿತ್ರ ಹಿಡಿದಿಟ್ಟಿದೆ.

ಕೇತನ್ ಮೆಹ್ತಾ ನಿರ್ದೇಶಿಸಿದ ಈ ಚಿತ್ರದಲ್ಲಿ ಅನು ಕಪೂರ್ ಮಹಾತ್ಮರ ಪಾತ್ರ ವಹಿಸಿದ್ದರೆ, ಪರೇಶ್ ರಾವಲ್ ಸರ್ದಾರ್ ಪಟೇಲ್‌ಆಗಿ ಅಭಿನಯಿಸಿದ್ದಾರೆ.  ಪ್ರಸಿದ್ಧ ಚಿತ್ರ ನಿರ್ದೇಶಕರ ಶ್ಯಾಮ್ ಬೆನಗಲ್ ಅವರು ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ನಡೆಸಿದ ವಿಶಿಷ್ಟ ಪ್ರಯೋಗಗಳನ್ನು ತಮ್ಮ ‘ದ ಮೇಕಿಂಗ್ ಆಫ್ ಮಹಾತ್ಮ’ ಚಿತ್ರದಲ್ಲಿ ಹಿಡಿದಿಟ್ಟಿದ್ದಾರೆ.

  ಫಾತಿಮಾ ಮೀರ್ ಅವರು ಬರೆದ ಪುಸ್ತಕವನ್ನು ಆಧರಿಸಿದ ಈ ಚಿತ್ರದಲ್ಲಿ ಗಾಂಧೀಜಿ ಬ್ಯಾರಿಸ್ಟರ್ ಉದ್ಯೋಗದಿಂದ ಜನನಾಯಕರಾಗಿ ಮಹಾತ್ಮರಾಗುವ ಬಗೆಯನ್ನು ಪ್ರಭಾವಶಾಲಿಯಾಗಿ ಚಿತ್ರಿಸಲಾಗಿದೆ. ಕಲಾವಿದ ರಜತ್ ಕಪೂರ್ ಯುವ ಗಾಂಧಿಯಾಗಿ ಮನಸ್ಸಿನಲ್ಲುಳಿಯುವಂತಹ ಅಭಿನಯ ನೀಡಿದ್ದಾರೆ.

ಮಹಾತ್ಮ ಗಾಂಧಿ ಅವರ ಇನ್ನೊಂದು ಮುಖವನ್ನು ಪರಿಚಯಿಸುವ ಚಿತ್ರಗಳೂ ತೆರೆಯ ಮೇಲೆ ಮೂಡಿವೆ. ಜಬ್ಬಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿ ಚಿತ್ರವನ್ನೊಳಗೊಂಡ ಸಿನಿಮಾ ತಯಾರಿಸಿದ ಸಂದರ್ಭದಲ್ಲಿ ಬಾಪೂಜಿಯವರ ಇನ್ನೊಂದು ಮುಖವನ್ನು ತೋರಿಸಿದರು. ತಮ್ಮ ಬೇಡಿಕೆಗಳನ್ನು ಅಸಹಕಾರ ಹಾಗೂ ಉಪವಾಸಗಳ ಮೂಲಕ ಈಡೇರಿಸುವಂತೆ ಭಾವನಾತ್ಮಕವಾಗಿ ಒತ್ತಡ ಹೇರುವ ತಂತ್ರವನ್ನು ಜಬ್ಬಾರ್ ಪಟೇಲ್ ಗಾಂಧಿ ಪಾತ್ರದ ಮೂಲಕ ತೋರಿಸಿದ್ದರು.

ಇದಾದ ನಂತರ ‘ಗಾಂಧಿ ಮೈ ಫಾದರ್’ ಚಿತ್ರದಲ್ಲಿ ಮಹಾತ್ಮ ಗಾಂಧಿ ಹಾಗೂ ಅವರ ಪುತ್ರ ಹರಿಲಾಲ್ ಗಾಂಧಿ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪ್ರಸ್ತಾಪಿಸಲಾಗಿತ್ತು. ಗಾಂಧೀಜಿಯವರನ್ನು ಕುರಿತ ಚಿತ್ರಗಳ ಜೊತೆಗೆ ಅವರ ಚಿಂತನಾ ಕ್ರಮವನ್ನು ಅನಾವರಣಗೊಳಿಸುವ ಹಲವಾರು ಚಿತ್ರಗಳು ನಿರ್ಮಾಣಗೊಂಡಿವೆ. ಕೆಲವು ಗಾಂಧೀಜಿ ಪಾತ್ರಗಳನ್ನು ಹೊತ್ತು ತಂದರೆ, ಕೆಲವು ಅವರ ನೈಜ ಚಿತ್ರಣವನ್ನು ಸಾಕ್ಷ್ಯ ಚಿತ್ರಗಳ ಮೂಲಕ ತೆರೆಗೆ ತರಲಾಗಿದೆ.

  ಹಿಂದಿ, ಇಂಗ್ಲಿಷ್ ಹಾಗೂ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಬಾಪೂ ಮೂಡಿ ಬಂದಿದ್ದಾರೆ. ಗಿರೀಶ್ ಕಾಸರವಳ್ಳಿಯವರ ‘ಕೂರ್ಮಾವತಾರ’ ಇದಕ್ಕೊಂದು ಉದಾಹರಣೆ. ಗಾಂಧಿಯವರ ಹತ್ಯೆ ಕುರಿತಂತೆ ಹಲವಾರು ಚಿತ್ರಗಳು ತಯಾರಾಗಿವೆ. ಅವುಗಳಲ್ಲಿ ಮುಖ್ಯವಾದವು ‘ಮೈನೆ ಗಾಂಧಿಕೋ ನಹಿ ಮಾರಾ’ ಹಾಗೂ ‘ನೈನ್ ಅವರ್ಸ್‌ ಟು ರಾಮ’.
 
ಗಾಂಧೀಜಿಯವರ ಪಾತ್ರಗಳಲ್ಲಿ ಅನೇಕ ಭಾರತೀಯ ಹಾಗೂ ವಿದೇಶಿ ಕಲಾವಿದರು ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅಟೆನ್‌ಬರೋ ಅವರ ‘ಗಾಂಧಿ’ಯಲ್ಲಿ ಬೆನ್ ಕಿಂಗ್ ಸ್ಲೇ ಅತ್ಯುತ್ತಮ ನಟನೆಯಿಂದ ಅಕಾಡೆಮಿ ಪ್ರಶಸ್ತಿ ಗೆದ್ದಿದ್ದೊಂದು ಹೆಗ್ಗಳಿಕೆ. ಮರಾಠಿ ನಟ ದಿಲೀಪ್ ಪ್ರಭು ವಾಲ್ಕರ್ ‘ಲಗೆ ರಹೋ ಮುನ್ನಾ ಭಾಯ್’ ಚಿತ್ರದಲ್ಲಿ ಬಾಪೂ ಪಾತ್ರ ನಿರ್ವಹಿಸಿದ್ದರು. 

ಜಬ್ಬಾರ್ ಪಟೇಲ್ ಅವರ ‘ಅಂಬೇಡ್ಕರ್’ ಚಿತ್ರದಲ್ಲಿ ಮೋಹನ್ ಗೋಖಲೆ ಗಾಂಧಿ ಪಾತ್ರಧಾರಿಯಾಗಿದ್ದರು. ‘ಗಾಂಧಿ ಮೈ ಫಾದರ್’ ಚಿತ್ರದಲ್ಲಿ ದರ್ಶನ್ ಜಾರಿವಾಲಾ ಗಾಂಧಿಯಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.  ವೀರ ಸಾವರ್ಕರ್, ನೇತಾಜಿ ಸುಭಾಷ್‌ಚಂದ್ರ ಬೋಸ್, ಹುತಾತ್ಮ ಭಗತ್‌ಸಿಂಗ್ ಮೊದಲಾದ ಚಿತ್ರಗಳಲ್ಲಿ ಗಾಂಧಿ ಪಾತ್ರ ನಿರ್ವಹಣೆ ಮಾಡಿದ್ದವರು ಅನುಭವಿ ನಟ ಸುಂದರ ರಾಜನ್.

ಗಾಂಧಿಯವರ ವಿಚಾರಗಳಿಗೆ ಮುಖಾಮುಖಿಯಾಗುವ ಮೂಲಕ ಅವರನ್ನು ಸ್ಮರಿಸಲು ಕಲಾ ಪ್ರಕಾರಗಳು ನಿರಂತರವಾಗಿ ತವಕಿಸುತ್ತಿವೆ. ಸಾಹಿತ್ಯ, ಚಿತ್ರಕಲೆ, ರಂಗಭೂಮಿ ಜೊತೆಗೆ ಅವರ ವಿಚಾರಧಾರೆ ಈಗಲೂ ಚಲನಚಿತ್ರಗಳಲ್ಲಿ ಮೂಡಿಬರುತ್ತಿದೆ.
–ನೇಸರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.