ADVERTISEMENT

ಮಧ್ಯಮಮಾರ್ಗ ಎನ್ನುವ ನಿಸರ್ಗವಿವೇಕ

ಎಸ್.ನಟರಾಜ ಬೂದಾಳು
Published 10 ಮೇ 2014, 19:30 IST
Last Updated 10 ಮೇ 2014, 19:30 IST

ಭಾರತದಲ್ಲಿ ಹುಟ್ಟುವ ಪ್ರತಿ ಮಗುವೂ ಮಾತು ಕಲಿಯುವ ಮುನ್ನ, ಅಕ್ಷರ ಕಲಿಯುವ ಮುನ್ನ, ತನ್ನದೇ ವಿವೇಚನೆಯನ್ನು ಬಳಸುವ ಮುನ್ನ ದೈವವಾದ, ಬ್ರಹ್ಮವಾದ, ಆತ್ಮವಾದ, ಜಾತಿವಾದ, ದ್ವೈತಾದ್ವೈತವಾದಗಳ ಮತ್ತು ಪ್ರಮಾಣವಾದಗಳನ್ನಾಧರಿಸಿದ ಸಾಂಸ್ಕೃತಿಕ ಸಂವಿಧಾನದ ಜೀತದಾಳಾಗುತ್ತದೆ. ಈ ಸಾಂಸ್ಕೃತಿಕ ದಾಸ್ಯದಿಂದ ಬಿಡುಗಡೆ ದೊರಕಿಸಿಕೊಡುವುದು ಒಂದು ದೊಡ್ಡ ಸವಾಲು. ಬುದ್ಧಗುರುವಿನ ಎದುರಿಗೆ ಇದ್ದ ಸವಾಲು ಇದೇ ಆಗಿತ್ತು. ಬೌದ್ಧ ಧರ್ಮವೆಂದರೆ ನಾಲ್ಕು ಶ್ರೇಷ್ಠ ಸತ್ಯಗಳು, ಅಷ್ಟಾಂಗಮಾರ್ಗ, ಪಂಚಶೀಲ ಎಂಬ ತಿಳಿವಳಿಕೆ ವ್ಯಾಪಕವಾಗಿದೆ. ಇಂತಹ ಆಚರಣೆಗಳನ್ನು ಬಹುಪಾಲು ಜಗತ್ತಿನ ಎಲ್ಲ ಧರ್ಮಗಳೂ ಹೇಳುತ್ತವೆ. ಹಾಗಾದರೆ ಬುದ್ಧಗುರು ಅರಿತು ತಿಳಿಸಿದ ತಾತ್ವಿಕತೆಯ ವಿಶೇಷವೇನು? 

ಶೂನ್ಯತೆ ಅಥವಾ ಮಧ್ಯಮಮಾರ್ಗವು ಬೌದ್ಧ ಧರ್ಮದ ಕೇಂದ್ರ ತಾತ್ವಿಕತೆ ಆಗಿದೆ. ಇದನ್ನು ಒಂದು ಪೂರ್ಣ ಪ್ರಮಾಣದ ಚಿಂತನಾ ಪ್ರಸ್ಥಾನವನ್ನಾಗಿ ಬೆಳೆಸಿ ಮಂಡಿಸಿದವನು ಅಂದಿನ ಕರ್ನಾಟಕದ ನಾಗಾರ್ಜುನ (ಕ್ರಿ.ಶ. 2ನೇ ಶತಮಾನ). ಈಗ ಮಹಾಯಾನ ಎಂದು ಕರೆಯುವ ಬೌದ್ಧ ತಾತ್ವಿಕ ಪ್ರಸ್ಥಾನದ ಪ್ರಧಾನ ಆಚಾರ್ಯನೇ ನಾಗಾರ್ಜುನ. ಅವನ ‘ಮೂಲಮಧ್ಯಮಕಕಾರಿಕೆ’ಯೇ ಈ ಪ್ರಸ್ಥಾನದ ಆಚಾರ್ಯಕೃತಿ. ನಾಗಾರ್ಜುನ ಕನ್ನಡದ ನೆಲದವನು. ಹಾಗಾಗಿ ಮಹಾಯಾನದ ಪ್ರವರ್ತನೆಯಾದದ್ದು ಕನ್ನಡದ ನೆಲದಿಂದ. ಇದನ್ನು ಕ್ರಿ.ಶ. 5ನೇ ಶತಮಾನದ ಕುಮಾರಜೀವನಿಂದ ಹಿಡಿದು ಇತ್ತೀಚಿನ ಎ.ಕೆ. ವಾರ್ಡರ್‌ವರೆಗೆ ಉಲ್ಲೇಖಿಸುತ್ತಾರೆ. ಯಾರ ಮೂಲಕ, ಯಾವ ಕೃತಿಗಳ ಮೂಲಕ ಬೌದ್ಧ ತಾತ್ವಿಕತೆಯನ್ನು ತಿಳಿದುಕೊಳ್ಳಬಹುದು? ಇದು ಅನೇಕರನ್ನು ಕಾಡುವ ಪ್ರಶ್ನೆ. 

ಸರಿಯಾದ ಲೋಕವಿವರಣೆಯನ್ನು ಯಾವ ಮೂಲದಿಂದ ತಿಳಿದರೂ ಅದು ಬೌದ್ಧ ಧರ್ಮವೇ ಆಗಿರುತ್ತದೆ ಮತ್ತು ಅಂತಹ ವಿವರಣೆಯನ್ನಾಧರಿಸಿದ ಬದುಕನ್ನು ಬಾಳಿದರೆ ಅದು ನಿಶ್ಚಿತವಾಗಿ ಬೌದ್ಧ ಧರ್ಮದ ಬಾಳುವೆಯ ಕ್ರಮವೇ ಆಗಿರುತ್ತದೆ. ಅದು ‘ಸರಿಯಾದ’ ತಿಳಿವಳಿಕೆಯಾಗಿರುವುದರಿಂದ ಯಾರಿಗೆ ಬೇಕಾದರೂ ಯಾವಾಗ ಬೇಕಾದರೂ ಹೊಳೆಯಬಹುದು. ಮತ್ತು ಬೌದ್ಧ ಧರ್ಮವೆನ್ನುವುದು ಈಗಾಗಲೇ ಹೇಳಿ ಮುಗಿಸಿರುವ ಧರ್ಮವಲ್ಲ. ಆದಿ ಮತ್ತು ಅಂತ್ಯವಿಲ್ಲದ ಈ ಲೋಕಪ್ರವಾಹವು ಹೇಗೆ ಹರಿಯುತ್ತಲೇ ಇದೆಯೋ ಹಾಗೆಯೇ ಬುದ್ಧ ಪ್ರಜ್ಞೆ ಹರಿಯುತ್ತಲೇ ಇದೆ.

ಮಧ್ಯಮ ಎಂದರೆ ಪ್ರಾರಂಭ ಮತ್ತು ಕೊನೆಯೆಂಬುದಿಲ್ಲದ ಸದಾ ಹರಿಯುತ್ತಿರುವ ಪ್ರವಾಹ ಎಂಬುದು ಸರಳ ವಿವರಣೆ. ಈ ಲೋಕ ಅಂತಹ ಒಂದು ಪ್ರವಾಹ ಮಾತ್ರ. ಎದುರಿಗಿನ ಪದಾರ್ಥಪ್ರಪಂಚವನ್ನು ಇದೆ ಎಂದಾಗಲೀ, ಇಲ್ಲ ಎಂದಾಗಲೀ, ಹೇಳಲು ಸಾಧ್ಯವಿಲ್ಲವೆಂದು ಬೌದ್ಧ ಧರ್ಮ ಮತ್ತು ವಿಜ್ಞಾನ ಮಾತ್ರ ಹೇಳುತ್ತವೆ. ಎಲ್ಲ ಧರ್ಮಗಳೂ ಲೋಕವನ್ನು ‘ಆಗಿ ಇರುವ’ ವಸ್ತುಪ್ರಪಂಚ ಎಂದು ವಿವರಿಸಿದರೆ, ಬೌದ್ಧ ಧರ್ಮ ಮಾತ್ರ ಲೋಕವನ್ನು ‘ಆಗುತ್ತಲೇ ಇರುವ’ ನಿರಂತರ ಪ್ರವಾಹವೆಂದು ವಿವರಿಸುತ್ತದೆ. ಬುದ್ಧಗುರು ಲೋಕವನ್ನು ಸರಿಯಾಗಿ ಗ್ರಹಿಸುವುದರ ಮೂಲಕ ಪಡೆದ ಅರಿವು ಇದು. ಅವನು ನೀಡಿದ ಈ ಲೋಕವಿವರಣೆಯನ್ನು ಶೂನ್ಯತೆ, ಮಧ್ಯಮಮಾರ್ಗ, ಪ್ರತೀತ್ಯಸಮುತ್ಪಾದ ಮುಂತಾಗಿ ಕರೆಯುತ್ತಾರೆ. ತಾನು ಮತ್ತು ಇದಿರು ಎಂಬುದಿಲ್ಲದ, ಹರಿಯುತ್ತಿರುವ ಈ ಪ್ರವಾಹವನ್ನು ಅದಿರುವಂತೆಯೇ ಅರಿತುಕೊಂಡಾಗ ‘ನಾನು ಬೇರೆ’ ಎಂಬುದು ಅಳಿದು ಹೋಗುತ್ತದೆ. ಹಾಗಾಗಿ ಈ ಲೋಕದ ಸಮಸ್ತದ ಬಗೆಗೆ ಕರುಣೆ ಮತ್ತು ಮೈತ್ರಿ ಉಂಟಾಗುತ್ತದೆ.

ವಸ್ತು ಪ್ರಪಂಚವನ್ನು ಕುರಿತಾದ ಬೌದ್ಧ ವಿವರಣೆಯನ್ನು ಮಧ್ಯಮಮಾರ್ಗ, ಶೂನ್ಯತೆ, ಪ್ರತೀತ್ಯಸಮುತ್ಪಾದ, ನಿಃಸ್ವಭಾವವಾದ, ಅನಾತ್ಮವಾದ – ಮುಂತಾದುವುಗಳಿಂದ ಸೂಚಿಸುತ್ತಾರೆ. ತಾನು ಮತ್ತು ತನ್ನ ಎದುರಿನ ಎಲ್ಲವನ್ನೂ ‘ಇದೆ’ ಎಂದೋ ಅಥವಾ ‘ಇದೆಲ್ಲ ನಿಜವಲ್ಲ, ಇದರ ಹಿಂದೆ ಇರುವುದು ಮತ್ತೊಂದು’ ಎಂದೋ ಗ್ರಹಿಸಿ ವ್ಯವಹರಿಸುವ ನಮಗೆ, ಇದೆ–ಇಲ್ಲ ಎಂಬ ಎರಡು ತುದಿಗಳನ್ನು ಬಿಟ್ಟು ಲೋಕವನ್ನು ಚಲಿಸುತ್ತಿರುವ ಪ್ರವಾಹ ಎಂದು ನೋಡುವ ಮಧ್ಯಮಮಾರ್ಗವನ್ನು ಬುದ್ಧಗುರು ತೋರಿಸಿಕೊಟ್ಟನು. ಬೌದ್ಧ ಮಧ್ಯಮಮಾರ್ಗ ಮತ್ತು ವಿಜ್ಞಾನವು ಲೋಕವನ್ನು ಸದಾ ‘ಆಗುತ್ತಲೇ ಇರುವ’ ಪ್ರಕ್ರಿಯೆ ಎಂದು ವಿವರಿಸುತ್ತವೆ.

ಪದಾರ್ಥ ಸಮಸ್ತದಲ್ಲೂ ಆತ್ಮವೊಂದನ್ನು (ಬ್ರಹ್ಮ) ಕಲ್ಪಿಸಿಕೊಂಡು ಬಾಳುತ್ತಿರುವವರು ಭಾರತೀಯರು. ಈ ನಿಲುವು ನಮ್ಮ ಬದುಕಿನ ಕ್ರಮವನ್ನೇ ನಿರ್ದೇಶಿಸಿದೆ. ಈ ಆತ್ಮವಾದವನ್ನು ನಿರಾಕರಿಸದ ಹೊರತು ನಮ್ಮ ಬಾಳುವೆಯ ಕ್ರಮ ಬದಲಾಗದು. ಬೌದ್ಧ ಧರ್ಮ ಆತ್ಮವಾದವನ್ನು ನಿರಾಕರಿಸುತ್ತದೆ. ಅಂದರೆ ಕಾಣುತ್ತಿರುವ ಎಲ್ಲದರಲ್ಲೂ ಕಾಣದ ಮತ್ಯಾವುದೋ ಒಂದು ಇದೆ, ಅದು ಎಲ್ಲವನ್ನೂ ನಿಯಂತ್ರಿಸುತ್ತದೆ ಎಂಬ ನಿಲುವನ್ನು ಬೌದ್ಧ ಧರ್ಮ ಮತ್ತು ವಿಜ್ಞಾನ ಒಪ್ಪುವುದಿಲ್ಲ. ಇದೊಂದು ಬಿಡುಗಡೆಯ ಮಾರ್ಗ. ಬುದ್ಧಗುರು ತೋರಿಸಿಕೊಟ್ಟ ಈ ಬಿಡುಗಡೆಯ ಮಾರ್ಗದ ಕೆಲವು ಅಂಶಗಳನ್ನು ಇಲ್ಲಿ ಪರಿಚಯಿಸಬಹುದು. ದ್ವೈತ–ಅದ್ವೈತ, ಇದೆ–ಇಲ್ಲ, ಹುಟ್ಟು–ಸಾವು, ಏಕ–ಅನೇಕ, ಹೆಚ್ಚು–ಕಡಿಮೆ ಮುಂತಾಗಿ ಅವಳಿ ವಿರುದ್ಧಗಳ ಮೂಲಕವೇ ಲೋಕವನ್ನು ಗ್ರಹಿಸುವ ದೋಷಪೂರ್ಣ ಕ್ರಮವನ್ನು ನಿರಾಕರಿಸಿ, ಆರಂಭ ಮತ್ತು ಅಂತ್ಯಗಳೆಂಬ ತುದಿಗಳಿಲ್ಲದ ಕೇವಲ ನಿರಂತರ ಪ್ರವಾಹವೆಂದು ಭಾವಿಸುವ ಕ್ರಮವೇ ಮಧ್ಯಮ ಮಾರ್ಗ. ಲೋಕವನ್ನು ಸ್ಥಾವರವೆಂದು ಭಾವಿಸದೆ ಜಂಗಮವೆಂದು ಭಾವಿಸಬೇಕೆಂದು ಅದು ಸೂಚಿಸುತ್ತದೆ.

ಬುದ್ಧಗುರು ಹೇಳಿದ್ದೇನು?
ಬುದ್ಧನ ಪರಿನಿರ್ವಾಣದ ಸುಮಾರು ಇನ್ನೂರು ವರ್ಷಗಳ ನಂತರ ಬಂದ ಅಥೆನ್ಸ್‌ನ ತಾತ್ವಿಕ ಹೆರಾಕ್ಲೀಟಸ್‌ನ ಮಾತೊಂದಿದೆ. ಅದೇನೆಂದರೆ ‘ಒಂದು ನದಿಗೆ ಎರಡು ಸಾರಿ ಕಾಲಿಡಲು ಸಾಧ್ಯವಿಲ್ಲ’. ನಾಗಾರ್ಜುನನ ಮಾಧ್ಯಮಿಕವಾದ ಈ ಮಾತನ್ನು ಹೀಗೆ ವಿಸ್ತರಿಸುತ್ತದೆ.
ಒಂದು ನದಿಗೆ ಎರಡು ಸಾರಿ ಕಾಲಿಡಲು ಸಾಧ್ಯವಿಲ್ಲ
ಎರಡು ಸಾರಿ ಕಾಲಿಟ್ಟ ಆ ಮನುಷ್ಯ ಒಬ್ಬನೇ ಅಲ್ಲ
ಎರಡು ಸಾರಿ ಕಾಲಿಟ್ಟಾಗಿನ ಪರಿಸ್ಥಿತಿಗಳು ಒಂದೇ ಅಲ್ಲ
ಎರಡು ಸಾರಿ ಕಾಲಿಟ್ಟಾಗಿನ ಪರಿಣಾಮಗಳು ಒಂದೇ ಅಲ್ಲ
ಮತ್ತೂ ಮುಂದಕ್ಕೆ: ಎರಡು ಸಾರಿ ಕಾಲಿಟ್ಟ ಆ ನದಿ ಒಂದೇ ಅಲ್ಲ, ಬೇರೆ ಬೇರೆಯೂ ಅಲ್ಲ,
ಎರಡು ಸಾರಿ ಕಾಲಿಟ್ಟ ಮನುಷ್ಯ ಒಬ್ಬನೇ ಅಲ್ಲ, ಬೇರೆ ಬೇರೆಯೂ ಅಲ್ಲ....

ಹೆಪ್ಪಿಟ್ಟ ಹಾಲು ಮೊಸರಾಗುತ್ತದೆ. ಹಾಲು ಮತ್ತು ಮೊಸರನ್ನು ಒಂದೇ ಎಂದಾಗಲೀ, ಬೇರೆ ಬೇರೆ ಎಂದಾಗಲೀ ಹೇಳಲು ಬರುವುದಿಲ್ಲ. ಹಾಲು ಮೊಸರಾಗುವ ಪ್ರಕ್ರಿಯೆ ಇದೆ. ಹಾಲು ಮೊಸರು ಬೇರೆ ಬೇರೆ ಎಂದಾದರೆ ಮೊಸರು ಉಂಟಾಗಲು ಬೇಕಾದ, ‘ಕಾರಣ’ವಾದ ಹಾಲನ್ನೇ ನಿರಾಕರಿಸಿದಂತಾಗುತ್ತದೆ. ಅಥವಾ ಹಾಲೇ ಮೊಸರು ಎಂದಾದರೆ ‘ಮೊಸರುತನ (ದಧೀಭಾವ) ಹಾಲಿನಿಂದ ಬೇರೆಯಾಗಿ ಅಲಾಯಿದ ಉಳಿದುಬಿಡುತ್ತದೆ. ಅದನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಾಲು ಮೊಸರು ಬೇರೆ ಬೇರೆಯೂ ಅಲ್ಲ ಮತ್ತು ಒಂದೇ ಅಲ್ಲ. ಹಾಲು ಮೊಸರಾದದ್ದು  ಯಾವಾಗ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈ ಸರಣಿಯಲ್ಲಿ ಯಾವ ಹಂತವೂ ಸ್ವತಂತ್ರವಲ್ಲ ಮತ್ತು ಇಲ್ಲಿ ಪ್ರಾರಂಭವೆನ್ನುವದೂ ಇಲ್ಲ, ಅಂತ್ಯವೆನ್ನುವುದೂ ಇಲ್ಲ.

ಈ ಪ್ರಕ್ರಿಯೆಯನ್ನು ಬುದ್ಧ ಗುರು ಹೀಗೆಂದು ವಿವರಿಸಿದ್ದಾನೆ:
1. ಅನಿರೋಧ: ಈ ಲೋಕದ ಯಾವುದಕ್ಕೂ ಶಾಶ್ವತ ಅಂತ್ಯವೆಂಬುದಿಲ್ಲ. ಎಲ್ಲದಕ್ಕೂ ರೂಪಾಂತರವಿದೆಯೇ ಹೊರತು ಕೊನೆಯೆಂಬುದಿಲ್ಲ.
2. ಅನುತ್ಪಾದ: ಯಾವುದೂ ಹೊಸದಾಗಿ ಉಂಟಾಗುವುದಿಲ್ಲ. ಯಾವುದಾದರೊಂದು ‘ಜನಿಸಿತು’ ಅಂದರೆ ಅದು ರೂಪಾಂತರ ಹೊಂದಿತು ಎಂದೇ ಅರ್ಥ.
3. ಅನುಚ್ಛೇದ: ಯಾವುದನ್ನೂ ಛಿದ್ರಗೊಳಿಸಿ ನಾಶ ಮಾಡಲು ಬರುವುದಿಲ್ಲ.
4. ಅಶಾಶ್ವತ: ಯಾವುದೂ ಒಂದು ಕ್ಷಣವೂ ಸ್ಥಗಿತ ಸ್ಥಿತಿಯಲ್ಲಿರುವುದಿಲ್ಲ. ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ.
5. ಅನೇಕಾರ್ಥ: ಯಾವುದನ್ನೂ ಕಡಿಮೆಗೊಳಿಸಿ ಒಂದನ್ನಾಗಿಸಲು ಸಾಧ್ಯವಿಲ್ಲ.
6. ಅನಾನಾರ್ಥ: ಯಾವುದನ್ನೂ ಭಿನ್ನಗೊಳಿಸಿ ಅನೇಕವನ್ನಾಗಿಸಲು ಸಾಧ್ಯವಿಲ್ಲ.
7. ಅನಾಗಮ: ಲೋಕಪ್ರವಾಹಕ್ಕೆ ಹೊಸದೊಂದರ ಆಗಮನ ಸಾಧ್ಯವಿಲ್ಲ.
8. ಅನಿರ್ಗಮ: ಈ ಲೋಕಪ್ರವಾಹದಿಂದ ಯಾವುದೂ ನಿರ್ಗಮಿಸದು.

ಈ ಲೋಕದಲ್ಲಿ ಸ್ವತಂತ್ರ ವಸ್ತುಗಳೇ ಇಲ್ಲ; ಎಲ್ಲವೂ ಸದಾ ಬದಲಾಗುತ್ತಿರುವ ‘ಸಂಯೋಜನೆಗಳೇ’ ಎಂಬುದು ಲೋಕದ ಬಗೆಗಿನ ಸರಿಯಾದ ತಿಳಿವಳಿಕೆಯಾಗಿದೆ. ಆದರೆ ಎಲ್ಲವನ್ನೂ ಸ್ವತಂತ್ರ ವಸ್ತುಗಳೆಂದು ಹೆಸರಿಟ್ಟು ಕರೆದು, ಹಾಗೆಯೇ ತಿಳಿದು ವ್ಯವಹರಿಸುವುದು ನಮಗೆ ರೂಢಿಯಿಂದ ಬಂದಿದೆ. ಈ ರೂಢಿಯನ್ನು ತಡೆದು ಲೋಕವನ್ನು ಅದಿರುವಂತೆ ಸರಿಯಾಗಿ ಅರಿತುಕೊಳ್ಳುವುದೇ ಮತ್ತು ಅರಿವಿಗೆ ತಕ್ಕಂತೆ ಬಾಳುವುದೇ ಮಧ್ಯಮಮಾರ್ಗ. ಇಲ್ಲಿ ಎಚ್ಚರದಿಂದ ಗಮನಿಸಬೇಕಾದ ಅಂಶಗಳೆಂದರೆ: ಎಲ್ಲವೂ ಸಂಬಂಧದಲ್ಲಿ ಉಂಟಾಗುತ್ತವೆ ಮತ್ತು ಸಂಬಂಧ ತಪ್ಪಿದಾಗ ಭಂಗಗೊಳ್ಳುತ್ತವೆ. ಈ ಪ್ರಕ್ರಿಯೆಯು ಎಲ್ಲಿಯೂ ಎಂದೂ ನಿಲ್ಲುವುದಿಲ್ಲ. ಆದರೆ ಸಂಯೋಜನೆಗಳು ಮಾತ್ರ ನಿರಂತರವಾಗಿ ಸಾಧ್ಯವಾಗುತ್ತಿರುತ್ತವೆ. ಉದಾಹರಣೆಗೆ; ಹಣ್ಣು–ಬೀಜ–ಮೊಳಕೆ–ಸಸಿ-ಮರ-ಹೂ-ಹೀಚು-ಕಾಯಿ-ಹಣ್ಣು-ಬೀಜ-ಮೊಳಕೆ-ಸಸಿ ಇದೊಂದು ಪ್ರವಾಹ ಸರಣಿ. ಇಲ್ಲಿ ಯಾವ ಹಂತವನ್ನೂ ಸ್ಥಗಿತಗೊಳಿಸಿ ನೋಡಲು ಸಾಧ್ಯವಿಲ್ಲ. 
 
ನಿರಂತರವಾಗಿ ಹರಿಯುತ್ತಿರುವ ಪ್ರವಾಹದಲ್ಲಿ ನಿಂತಿರುವ ಬಿಂದುವೊಂದನ್ನು ಹುಡುಕಿ ತೋರಲು ಸಾಧ್ಯವಿಲ್ಲ. ಹಾಗೆ ಸ್ಥಿತವೆಂಬ ಒಂದು ಬಿಂದು ದೊರೆತರೂ ನಿರಂತರತೆಗೆ ಭಂಗ ಬರುತ್ತದೆ. ನಿರಂತರತೆ ಅನುಭವ ಗ್ರಾಹ್ಯವೇ ಹೊರತು ದಾಖಲಿಸಲು ದೊರೆಯುವುದಿಲ್ಲ. ದಾಖಲಿಸಲು ಸ್ಥಿತ ಬಿಂದು ಬೇಕೇ ಬೇಕು. ಹಾಗೆಯೇ ಮಧ್ಯಬಿಂದುವನ್ನು ಖಚಿತವಾಗಿ ಗುರುತಿಸಿಕೊಂಡರೆ ಉಳಿದೆರಡು ತುದಿಗಳೂ ಅಸ್ತಿತ್ವಕ್ಕೆ ಬಂದಂತೆಯೇ. ಹೀಗೆ ಆದಿ ಅಂತ್ಯವಿಲ್ಲದ್ದನ್ನು ‘ಶೂನ್ಯತೆ’ ಎಂದು ಬೌದ್ಧ ಮಾಧ್ಯಮಕರು ಸೂಚಿಸಿದರೆ, ‘ಬಯಲು’ ಎಂದು ವಚನಕಾರರು ಸೂಚಿಸಿದರು. ‘ಶೂನ್ಯತೆ’ ಎಂದರೆ ಏನೂ ಇಲ್ಲದ ಅವಸ್ಥೆಯಲ್ಲ. ಬದಲಿಗೆ ಎಲ್ಲವೂ ಉಂಟಾಗಿ ವಿಸರ್ಜನೆಯಾಗಬಲ್ಲ ಕ್ರಿಯಾ ಪ್ರವಾಹ. ಬಯಲೆಂಬುದು ಏನೂ ಇಲ್ಲದ ಅವಸ್ಥೆಯಲ್ಲ, ಬದಲಿಗೆ ಎಲ್ಲವನ್ನು ಧರಿಸಬಲ್ಲ ಮಾತೃಗರ್ಭ.

ಲೋಕದ ಎಲ್ಲ ಚಟುವಟಿಕೆಗಳೂ ಅನೇಕ ಅಂಶಗಳ ನಡುವೆ ಉಂಟಾಗುವ ಸಂಬಂಧದಿಂದಾಗಿ ನಡೆಯುತ್ತವೆ. ಸಂಬಂಧ ಭಂಗಗೊಂಡಾಗ ಚಟುವಟಿಕೆ ವಿಸರ್ಜಿಸಲ್ಪಡುತ್ತದೆ. ನಾವು ಕೂಡ ಈ ಸಂಬಂಧ ಲೋಕದ ಭಾಗವೇ ಆಗಿದ್ದೇವೆ. ಎಲ್ಲವೂ ಅನೇಕ ಪ್ರತ್ಯಯಗಳ ಜೋಡಣೆಯಿಂದ ಉಂಟಾಗುವುದರಿಂದ ಲೋಕದ ನಡೆಯನ್ನು ‘ಪ್ರತೀತ್ಯ ಸಮುತ್ಪಾದ’ ಎನ್ನುತ್ತಾರೆ. ಸಮಸ್ತ ಲೋಕವು ಪರಸ್ಪರ ಸಂಬಂಧದಲ್ಲಿ ಮಾತ್ರ ರೂಪುಗೊಳ್ಳುತ್ತದೆ. ಸಂಬಂಧ ಭಂಗಗೊಂಡಾಗ ಭಂಗಗೊಳ್ಳುತ್ತದೆ ಎಂಬ ಅರಿವು ನಮ್ಮನ್ನು ಲೋಕದ ಭಾಗವಾಗಿ ಬೆಸೆಯುತ್ತದೆ. ನಮ್ಮನ್ನು ಲೋಕದಿಂದ ಭಿನ್ನವಾಗಿ ಗ್ರಹಿಸಿದಾಕ್ಷಣ ನಾನೆಂಬ ಸ್ವಾರ್ಥ, ಅಜ್ಞಾನ ಮರೆವಿನ ರೂಪದಲ್ಲಿ ಅವತರಿಸುತ್ತದೆಯಾದ್ದರಿಂದ ಈ ಸಂಬಂಧದ ಅರಿವು ಅನುಕಂಪದ ಹೊರತಾಗಿ ಉಂಟಾಗಲು ಸಾಧ್ಯವೇ ಇಲ್ಲ. ಹಾಗಾಗಿ ಬುದ್ಧನು ಲೋಕ ವಿವರಣೆಯಾದ ‘ಶೂನ್ಯತೆ’ ಮತ್ತು ‘ಕರುಣಾ ಮೈತ್ರಿ’ ಮಾರ್ಗವನ್ನು ಪರಸ್ಪರ ಸಂಬಂಧದಲ್ಲಿ ವಿವರಿಸಿದ್ದಾನೆ. ಶೂನ್ಯತೆಯ ಅರಿವು ದುಃಖದ ಬಿಡುಗಡೆಯ ಮಾರ್ಗವೂ ಆಗಿರುವುದರಿಂದ ಬೌದ್ಧ ಧರ್ಮದ ನಾಲ್ಕು ಶ್ರೇಷ್ಠ ಸತ್ಯಗಳೂ ಪ್ರತೀತ್ಯ ಸಮುತ್ಪಾದದ ಭಾಗವಾಗಿ ವಿವರಿಸಲ್ಪಟ್ಟಿವೆ.

ದುಃಖ ಕಾರಣ
ಆಸೆಯೇ ದುಃಖಕ್ಕೆ ಮೂಲಕಾರಣ ಎಂದು ಬುದ್ಧಗುರು ಎಲ್ಲೂ ಹೇಳಿಲ್ಲ. ಪಾಲಿಯ ‘ತನ್ಹಾ’ ಎಂಬ ಪದವನ್ನು ಕನ್ನಡದಲ್ಲಿ ‘ಆಸೆ’ ಎಂದು ಬೇಕೆಂದೇ ತಪ್ಪಾಗಿ ಅನುವಾದ ಮಾಡಿದುದರಿಂದ ಈ ಪ್ರಮಾದವಾಗಿದೆ. ‘ತನ್ಹಾ’ ಎನ್ನುವುದು ಇಂಗ್ಲಿಷಿನ craving ಪದಕ್ಕೆ ಸಂವಾದಿಯಾದುದು. ಹಿತಕಾರೀ ಅನುಭವಗಳು ಯಾವಾಗಲೂ ಇರಲಿ ಎಂದು ಅದಕ್ಕೇ ಅಂಟಿಕೊಳ್ಳುವುದು ಮತ್ತು ತನಗೆ ಅಹಿತವೆನ್ನಿಸುವ ಅನುಭವಗಳು ದೂರವೇ ಇರಲಿ ಎಂದು ಬಯಸುತ್ತಲೇ ಇರುವುದು. ಎರಡೂ ದುಃಖಕಾರಣಗಳೇ. ಸದಾ ಬದಲಾಗುತ್ತಲೇ ಇರುವ ಲೋಕಪ್ರವಾಹದಲ್ಲಿ ಇವೆರಡೂ ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಮತ್ತೆ ಅದಕ್ಕೇ ಹಂಬಲಿಸುವುದು ದುಃಖಕ್ಕೆ ಕಾರಣ. ಇಂದು ಜಗತ್ತು ಬುದ್ಧನೆಡೆಗೆ ನೋಡಲು ಎರಡು ಪ್ರಮುಖ ಕಾರಣಗಳಿವೆ. ಒಂದು, ಅವನು ಲೋಕವನ್ನು ಸರಿಯಾಗಿ ವಿವರಿಸಿಕೊಟ್ಟಿದ್ದಾನೆ ಮತ್ತು ಎಲ್ಲವನ್ನೂ ಅದಿರುವಂತೆ ನೋಡಲು ಕಲಿಸಿಕೊಟ್ಟಿದ್ದಾನೆ. ಎರಡನೆಯದಾಗಿ, ಈ ವಿವರಣೆಯು ನಮ್ಮನ್ನು ಲೋಕದೊಡನೆ ಕರುಣೆ–ಮೈತ್ರಿಯಿಂದ ವರ್ತಿಸುವಂತೆ ಪ್ರೇರೇಪಿಸುತ್ತದೆ. ಈ ಕರುಣಾಮೈತ್ರಿ ಮಾರ್ಗವು ಹೊರಗಿನಿಂದ ಆವಾಹಿಸಿಕೊಳ್ಳಬೇಕಾದ ಭಾವ ವಿಶೇಷವಾಗಿರದೆ, ಲೋಕ ಸಂಬಂಧದ ಸರಿಯಾದ ಅರಿವಿನಿಂದ ಮೂಡುವ ಅಂತರ್ವಾಹಿನಿಯಾಗಿದೆ. 

ಪ್ರಮಾಣಗಳನ್ನು ನಿರಾಕರಿಸಿ
ಇಂದು ಭಾರತೀಯ ಸಮಾಜಕ್ಕೆ ತಗಲಿಕೊಂಡಿರುವ ದೊಡ್ಡ ರೋಗವೆಂದರೆ ಪ್ರಮಾಣಗಳದ್ದು. ಪ್ರಮಾಣಗಳೆಂದರೆ ‘ನಾನು ಹೇಳುವುದು ಪವಿತ್ರವಾದುದರಿಂದ ನನ್ನನ್ನು ಪ್ರಶ್ನಿಸದೆ ನಾನು ಹೇಳುವುದನ್ನು ಸುಮ್ಮನೆ ಪಾಲಿಸು’ ಎಂದು ಯಾವ ದಾಖಲೆಗಳು ಒತ್ತಾಯಿಸುತ್ತವೋ ಅವೆಲ್ಲ ಪ್ರಮಾಣಗಳು (ಶಬ್ದ ಪ್ರಮಾಣ). ನಮ್ಮ ಸಮಾಜವನ್ನು ಮೌಢ್ಯದ ಕೂಪವನ್ನಾಗಿಸಿರುವುದು ಈ  ಪ್ರಮಾಣವೇ. ನಮ್ಮ ಸಮಾಜವನ್ನು ಈಗಂತೂ ‘ಪ್ರಮಾಣ’ಗಳೇ ನಿಯಂತ್ರಿಸುತ್ತಿವೆ. ತಿನ್ನುವ ಅನ್ನ, ಕಟ್ಟುವ ಮನೆ, ಪೂಜಿಸುವ ದೇವರು, ತೊಡುವ ಬಟ್ಟೆ, ಮದುವೆಯಾಗುವ ಸಂಗಾತಿ ಎಲ್ಲವನ್ನೂ ‘ಪ್ರಮಾಣ’ಗಳು ನಿರ್ಧರಿಸುತ್ತಿರುವುದನ್ನು ನಾವೀಗ ನೋಡುತ್ತಿದ್ದೇವೆ. ಬುದ್ಧಗುರು ಪ್ರಮಾಣಗಳನ್ನು ಮಾನ್ಯಮಾಡುವುದಿಲ್ಲ. ಪ್ರಶ್ನಾತೀತವೆನ್ನುವುದು ಯಾವುದೂ ಜಗತ್ತಿನಲ್ಲಿ ಇಲ್ಲ; ಇದರಲ್ಲಿ ಬುದ್ಧಗುರು ತನ್ನನ್ನೂ ಸೇರಿಸಿಕೊಂಡಿದ್ದಾನೆ.

ವಿಜ್ಞಾನವು ನೀಡುವ ವಿವರಣೆಗಳನ್ನು ನಮ್ಮ ಧಾರ್ಮಿಕ ವಿವರಣೆಗಳಿಗೆ ಪ್ರತಿಯಾದ ಇನ್ನೊಂದು ವಿವರಣೆ ಎಂದು ನಾವು ಭಾವಿಸುವುದಿಲ್ಲ. ಬದಲಾಗಿ ಅದು ವಿವರಣೆ ಅಷ್ಟೆ. ಅದು ಹೇಗಿದೆಯೋ ಹಾಗೆ ಅದನ್ನು ವಿವರಿಸುವ ಕ್ರಮ. ಬೌದ್ಧ ಮಧ್ಯಮಮಾರ್ಗವು ಕೂಡ ಲೋಕವನ್ನು ಹೇಗಿದೆಯೋ ಹಾಗೆ ವಿವರಿಸುತ್ತದೆ. ಹಾಗಾಗಿ ಬೌದ್ಧ ಮಧ್ಯಮಮಾರ್ಗವು ಪರ್ಯಾಯವಾದವೂ ಅಲ್ಲ, ಪ್ರತಿವಾದವೂ ಅಲ್ಲ. ಅದು ಅನೇಕ ವಾದಗಳಲ್ಲಿ ಒಂದಲ್ಲ ಮತ್ತು ಈಗಾಗಲೇ ಹೇಳಿ ಮುಕ್ತಾಯಗೊಂಡಿರುವುದೂ ಅಲ್ಲ. ಈಗಿರುವ ತಿಳಿವಳಿಕೆಗೆ ಹೊಸ ಸೇರ್ಪಡೆಗೆ ಅದಕ್ಕೆ ಯಾವ ತಕರಾರು ಇಲ್ಲ. ಹಾಗಾಗಿ ಬೌದ್ಧ ಮಧ್ಯಮಮಾರ್ಗವು ಲೋಕವನ್ನು ಸರಿಯಾಗಿ ಅರಿತು ಬಾಳುವ ನಿಸರ್ಗವಿವೇಕವೇ ಆಗಿದೆ. ಪ್ರಜಾಸತ್ತೆಯು ಈ ನಿಸರ್ಗವಿವೇಕವನ್ನು ಆಧರಿಸಿದ ಜೀವನಕ್ರಮ ಆಗಿರುವುದರಿಂದಲೇ ಬೌದ್ಧ ಜೀವನಕ್ರಮ ಮಾತ್ರ ಪ್ರಜಾಸತ್ತಾತ್ಮಕ ಜೀವನ ಕ್ರಮ ಎಂದು ಅಂಬೇಡ್ಕರ್ ತೀರ್ಮಾನಿಸಿದರು.

ನಮಗೆ ನಿಸರ್ಗವಿವೇಕ ಎಂಬುದು ಹುಟ್ಟಿನಿಂದಲೇ ಬಂದಿದೆ. ನಮ್ಮ ನಿತ್ಯಬದುಕಿನ ನಡೆಯ ಸರಿ–ತಪ್ಪುಗಳನ್ನು ಒಂದು ಹಂತಕ್ಕೆ ಇದು ನಿರ್ಧರಿಸಿಕೊಡಬಲ್ಲದು. ಆದರೆ ನಮ್ಮಲ್ಲಿ ಕಿಕ್ಕಿರಿದಿರುವ ದೃಷ್ಟಿವಾದಗಳಿಂದ ಇದು ಹೇಳುವ ಸರಿ–ತಪ್ಪುಗಳನ್ನು ಕೇಳಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ನಮ್ಮ ವಿವೇಕವನ್ನು ನಾಶಮಾಡುವ ಹೊಸ ಹೊಸ ಪ್ರಮಾಣಗಳನ್ನು, ಮತೀಯ ದೃಷ್ಟಿವಾದಗಳನ್ನು ಪ್ರತಿನಿತ್ಯವೂ ಅನೇಕರು ನಮ್ಮ ಮುಂದಿಡುತ್ತಿದ್ದಾರೆ. ಇಂದು ವಿಶ್ವವೇ ಇಂತಹ ಪ್ರಮಾಣಗಳ ಕಾರಣದಿಂದಾದ ಆತಂಕವಾದದಿಂದ ತತ್ತರಿಸುತ್ತಿದೆ. ಆಧುನಿಕತೆಯು ಬಹು ಸಂಭ್ರಮದಿಂದ ಮುಂದಿಡುವ ವಸ್ತುವಾದಿ ದೃಷ್ಟಿಕೋನವೂ ವಿಕಲ್ಪಗಳ ಸೃಷ್ಟಿಯಲ್ಲಿಯೇ ತೊಡಗಿದೆ. ಬಲು ಸಂಭ್ರಮದಿಂದ ಭಕ್ತಿಯನ್ನು ಅಭಿನಯಿಸುತ್ತಾ, ವಸ್ತುಗಳ ಹಿಂದೆ ವೇಗವಾಗಿ ಓಡುತ್ತಿರುವ ಆಧುನಿಕ ವಸ್ತುವಾದಿ ಲೋಕಕ್ಕೆ, ‘ಲೋಕದಲ್ಲಿ ವಸ್ತುಗಳೆನ್ನುವುವು ಇರುವುದಿಲ್ಲ, ಅವೆಲ್ಲ ಪ್ರಕ್ರಿಯೆ ಮಾತ್ರ’ ಎನ್ನುವ ನಿರಸನವಾದ ಇಷ್ಟವಾಗದ ಸಂಗತಿ. ಲೋಕಸಮಸ್ತವನ್ನೂ ಭಿನ್ನಭಿನ್ನ ಘಟಕಗಳನ್ನಾಗಿ ನೋಡುವ ನಿಲುವಿಗೆ, ‘ಸಂಬಂಧ’ ಪಥ್ಯವಾಗುವುದಿಲ್ಲ. ಲೋಕವನ್ನು ಸಂಬಂಧಗಳ ಸರಮಾಲೆಯೆಂದು ವಿವರಿಸುವ ಮೂಲಕ ಈ ವಿವರಣೆಯ ಉದ್ಯೋಗವನ್ನು ಲೋಕದ ಸಂಕಟ ಪರಿಹಾರಕ್ಕಾಗಿಯೇ ಮಾಡಿದವರು, ಬುದ್ಧ, ನಾಗಾರ್ಜುನ, ಅಲ್ಲಮರು.  ಅವರ ವಿಚಾರಗಳಿಗೆ ಮತ್ತೆ ಜೀವ ಬರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.