ಯಕ್ಷಗಾನ ಎನ್ನುವ ಪದದೊಂದಿಗೆ ತಳಕು ಹಾಕಿಕೊಂಡಿರುವ ಇನ್ನೊಂದು ಹೆಸರು ಶಿವರಾಮ ಕಾರಂತರದು. 1957ರಲ್ಲಿ ಅವರು ಹೊರತಂದ ‘ಯಕ್ಷಗಾನ ಬಯಲಾಟ’ ಕೃತಿಗೆ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿದೆ. ‘ಸ್ಟಾಕ್‌ಹೋಂನ ಇಂಟರ್‌ನ್ಯಾಷನಲ್ ಆರ್ಕೈವ್ಸ್’ನ ಕಂಚಿನ ಪದಕದ ಗೌರವ ಪಡೆಯುವ ಮೂಲಕ ಈ ಕೃತಿ ವಿಶ್ವದ ಗಮನ ಸೆಳೆಯಿತು. ಯಕ್ಷಗಾನದ ವಿಶಿಷ್ಟ ಶಕ್ತಿಯನ್ನು ಮನಗಂಡ ಕಾರಂತರು, ಕರಾವಳಿಗೆ ಸೀಮಿತವಾದ ಆ ಕಲೆಯನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವ ಕನಸು ಕಂಡರು. ಆ ಕನಸಿನ ಫಲವೇ ಯಕ್ಷಗಾನ ಬ್ಯಾಲೆ.
1962–1964ರ ಕಾಲಘಟ್ಟದಲ್ಲಿ ಯಕ್ಷಗಾನ ತಂಡವೊಂದನ್ನು ಕಟ್ಟಿ ಕಲಾವಿದರಿಗೆ ತರಬೇತಿ ನೀಡಿ ವೈವಿಧ್ಯಮಯ ಭಾವಗಳನ್ನು ಕುಣಿತ ಹಾಗೂ ಅಭಿನಯದಲ್ಲಿ ಹೇಗೆ ಮೂಡಿಸಬೇಕೆಂಬುದನ್ನು ಕಾರಂತರು ತೋರಿಸಿಕೊಟ್ಟರು. 1968ರಲ್ಲಿ ಯಕ್ಷಗಾನ ಕೇಂದ್ರವೊಂದನ್ನು ಮೊದಲು ಬ್ರಹ್ಮಾವರದಲ್ಲಿ ಪ್ರಾರಂಭಿಸಿದರು. ಅದೇ ಮುಂದೆ ಕಾರಂತರ ನೇತೃತ್ವದೊಂದಿಗೆ 1972ರಲ್ಲಿ ‘ಉಡುಪಿ ಯಕ್ಷಗಾನ ಕೇಂದ್ರ’ವಾಗಿ ಪ್ರಾರಂಭವಾಯಿತು.
ಯಕ್ಷಗಾನ ಬ್ಯಾಲೆ ಕಾರಂತರ ಕನಸಿನ ಕೂಸು. ಕನ್ನಡ ಬಾರದ ಕಲಾರಸಿಕರು ಯಕ್ಷಗಾನದ ಸವಿಯನ್ನು ಸವಿಯುತ್ತಿಲ್ಲ ಎಂಬುದನ್ನು ಕಾರಂತರು ಕಂಡುಕೊಂಡರು. ಕರ್ನಾಟಕದ ಹೊರಗೆ ಕನ್ನಡ ಬಾರದೇ ಇರುವವರಿಗೆ ಈ ಕಲೆಯ ರುಚಿ ಹತ್ತಬೇಕಾದರೆ ಗದ್ಯದಲ್ಲಿ ಆಡುವ ಸಂಭಾಷಣೆಯ ಅಗತ್ಯವಿಲ್ಲ ಅನ್ನುವುದು ಅವರ ನಂಬಿಕೆ ಆಗಿತ್ತು. ಹಾಗಾಗಿಯೇ ಮಾತಿಲ್ಲದ ಯಕ್ಷಗಾನ ಬ್ಯಾಲೆ ಪ್ರದರ್ಶನ ಬಳಕೆಗೆ ತಂದರು. ಆನೆ ನಡೆದದ್ದೇ ದಾರಿ ಎಂಬಂತೆ ಸಾಂಪ್ರದಾಯಿಕರ ವಿರೋಧವನ್ನು ಲೆಕ್ಕಿಸದೆ ಕಾರಂತರು ಮುಂದುವರೆದರು.
1975ರಲ್ಲಿ ಪ್ರದರ್ಶನಗೊಂಡ ‘ದಮಯಂತಿ ಕಲ್ಯಾಣ’, ‘ಕನಕಾಂಗಿ ಕಲ್ಯಾಣ’ಗಳು ಮುಂಬಯಿಯಲ್ಲಿ ಜಯಭೇರಿ ಬಾರಿಸಿದವು. ಅನೇಕ ಬದಲಾವಣೆಗಳನ್ನು ಕಾರಂತರು ತಮ್ಮ ಬ್ಯಾಲೆಯಲ್ಲಿ ಅಳವಡಿಸಿದರು. ಹಿಮ್ಮೇಳದಲ್ಲಿ ಪಿಟೀಲು, ಸ್ಯಾಕ್ಸೋಫೋನುಗಳನ್ನು ಬಳಸಿದರು. ಕೊರಿಯೋಗ್ರಫಿಯಲ್ಲಿ ವಿಭಿನ್ನತೆ ಮೆರೆದರು. ಕಾರಂತರ ಯಕ್ಷರಂಗ ದೇಶದ ಎಲ್ಲಾ ಮನೆಗಳಲ್ಲಿ ಪ್ರದರ್ಶನ ನೀಡಿರುವುದು ಉಲ್ಲೇಖನಾರ್ಹ. ಇಷ್ಟೇ ಅಲ್ಲದೆ ರೋಂ, ಇಟಲಿ, ಇಂಗ್ಲೆಂಡ್, ರಷ್ಯಾ, ಟರ್ಕಿ, ಯುಗೋಸ್ಲಾವಿಯ, ದಕ್ಷಿಣ ಅಮೆರಿಕ, ಬಲ್ಗೇರಿಯಾ, ಜಪಾನ್ ಮುಂತಾದ ದೇಶಗಳಲ್ಲೂ ಯಕ್ಷಗಾನ ಬ್ಯಾಲೆ ಪ್ರದರ್ಶನಗಳನ್ನು ನೀಡಿದೆ.
ಕಾರಂತರ ನಿಧನದ (1977) ನಂತರ ಅವರು ರೂಪಿಸಿದ ಬ್ಯಾಲೆ ಹೆಚ್ಚೂಕಡಿಮೆ ತೆರೆಮರೆಗೆ ಸರಿದಿತ್ತು. ಇಂದಿನ ಯುವಜನಾಂಗಕ್ಕೆ, ಕನ್ನಡ ಅರಿಯದ ಕಲಾಸಕ್ತರಿಗೆ, ಯಕ್ಷಗಾನ ಸಂಭಾಷಣೆಗಳ ಲಯದ ಬೆನ್ನು ಹತ್ತಲಾಗದವರಿಗೆ, ವಿದೇಶಿಯರಿಗೆ, ಯಕ್ಷಗಾನದ ಸವಿಯನ್ನು ಉಣ್ಣಿಸಲು ಇಂದು ಯಕ್ಷಗಾನ ಬ್ಯಾಲೆ ತೀರಾ ಅಗತ್ಯ. ಇದೊಂದು ಸಾಂಸ್ಕೃತಿಕ ಜರೂರಿನ ಕೆಲಸ. ಈ ಜರೂರಿಗೆ ಸ್ಪಂದಿಸುವಂತೆ ‘ಕರ್ನಾಟಕ ಕಲಾದರ್ಶಿನಿ (ರಿ)’, ಬೆಂಗಳೂರು, ಸಂಸ್ಥೆಯು ಶಿವರಾಮ ಕಾರಂತರ ಬ್ಯಾಲೆಗೆ ಮರುಜೀವ ನೀಡಿದೆ. ಶಿವರಾಮ ಕಾರಂತ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ಶ್ರೀಮತಿ ಮಾಲಿನಿ ಮಲ್ಯ ಇದರ ಸಂಚಾಲಕಿ. ವಿದ್ವಾನ್ ಸುಧೀರ್ ಕೊಡವೂರು ನಿರ್ದೇಶನ ಮತ್ತು ಶ್ರೀನಿವಾಸ ಸಾಸ್ತಾನ ಅವರ ಸಂಯೋಜನೆಯಲ್ಲಿ ‘ಅಭಿಮನ್ಯು ವಧೆ’ ಬ್ಯಾಲೆ ಬೆಂಗಳೂರಿನಲ್ಲಿ ಮೂರು ಪ್ರದರ್ಶನಗಳನ್ನು ನೀಡಿದೆ.
ಕಾರಂತರ ಗರಡಿಯಲ್ಲಿ ಪಳಗಿರುವ ವಿದ್ವಾನ್ ಸುಧೀರ್‌ರಾವ್ ಕೊಡವೂರು ಅವರು ಕರ್ನಾಟಕ ಕಲಾದರ್ಶಿನಿ ತಂಡದ ಕಲಾವಿದರಿಗೆ ತಾವು ಕಾರಂತರಿಂದ ಪಡೆದ ತರಬೇತಿಯನ್ನು ಹಸ್ತಾಂತರಿಸುತ್ತಿದ್ದಾರೆ. ತರಬೇತಿಯೊಂದಿಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ಸುಧೀರ್‌ರಾವ್ ಅವರು ಈಗಾಗಲೇ ‘ಅಭಿಮನ್ಯು ವಧೆ’ ಪ್ರಸಂಗದ ಪ್ರದರ್ಶನ ನೀಡಿದ್ದಾರೆ. ಇದರ ಜೊತೆಗೆ ‘ಪಂಚವಟಿ’ ಬ್ಯಾಲೆಯ ಸಿದ್ಧತೆ ನಡೆದಿದೆ.
ಕಳೆದ ಆಗಸ್ಟ್ 16, 17, 18ರಂದು ಬೆಂಗಳೂರಿನ ಕಲಾಗ್ರಾಮ, ಕೆ.ಎಚ್. ಕಲಾಸೌಧ ಹಾಗೂ ಮರಾಠ ಹಾಸ್ಟೆಲ್‌ಗಳಲ್ಲಿ ಈ ತಂಡ ಮೊದಲ ಬಾರಿಗೆ ‘ಅಭಿಮನ್ಯು ವಧೆ’ಯನ್ನು ಯಕ್ಷಗಾನ ಬ್ಯಾಲೆಯಾಗಿ ಪ್ರದರ್ಶಿಸುವ ಮೂಲಕ ಕಾರಂತರ ಯಕ್ಷಗಾನ ಬ್ಯಾಲೆಯ ಮರುನಿರ್ಮಾಣಕ್ಕೆ ನಾಂದಿಹಾಡಿತು. ಒಂದೂವರೆ ತಾಸುಗಳ ಈ ಪ್ರದರ್ಶನಗಳು ಪ್ರೇಕ್ಷಕರ ಮನತಣಿಸುವಲ್ಲಿ ಯಶಸ್ವಿಯಾದವು. ಮೂರನೆಯ ದಿನದ ಪ್ರದರ್ಶನದಲ್ಲಿ ಸಾಂಪ್ರದಾಯಿಕ ಯಕ್ಷಗಾನ ಪ್ರೇಕ್ಷಕರೇ ತುಂಬಿಕೊಂಡಿದ್ದು, ಅವರು ಕೂಡ ಈ ನೂತನ ಕಲಾ ಪ್ರಕಾರವನ್ನು ಸ್ವಾಗತಿಸಿದರು.
ಕಾರಂತರು ಬಳಕೆಗೆ ತಂದಂತೆ ಇಲ್ಲೂ ಹಿಮ್ಮೇಳದಲ್ಲಿ ಸ್ಯಾಕ್ಸೋಫೋನ್ ಹಾಗೂ ವಯೊಲಿನ್‌ಗಳ ಬಳಕೆಯಿತ್ತು. ಏರುಗತಿಯ ಪದ್ಯಕ್ಕೆ, ವೀರರಸ ಪ್ರಚೋದನೆಗೆ, ಯುದ್ಧಸಂದರ್ಭಕ್ಕೆ, ಪ್ರಯಾಣದ ನಡೆಗೆ ಸ್ಯಾಕ್ಸೋಫೋನ್ ಬಳಕೆಯಿಂದಾಗಿ ರಾಗದಲ್ಲಿ ತೀವ್ರತೆಯ ಸಂಚಲನವಾಗುತ್ತಿತ್ತು. ಕೃಷ್ಣ ಅರ್ಜುನರ ಸಂಭಾಷಣೆಯಲ್ಲಿ, ಸುಭದ್ರೆಯ ಸಂಕಟದ ಸಮಯದಲ್ಲಿ ವಯೊಲಿನ್ ಬಳಕೆಯಿಂದಾಗಿ ದುಃಖಕರ ಸನ್ನಿವೇಶವನ್ನು ಭಾವನಾತ್ಮಕವಾಗಿ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿತ್ತು.
ಭಾಗವತರಾದ ಸುಧೀರ್‌ರಾವ್ ಕೊಡವೂರು ಹಾಡುಗಾರಿಕೆ ಭಾವಪೂರ್ಣವಾಗಿತ್ತು. ಅವರು ಹಾಡಿದ ‘ಗೋತ್ರಾರಿಯ ವಂದನೆಗೆ ಮೊಗವೆತ್ತಲು...’ ಎಂಬುದು ತುಂಬಾ ಸೊಗಸಾಗಿತ್ತು. ವೇಷಧಾರಿಯು ಕೂಡ ಅಷ್ಟೇ ಸೊಗಸಾಗಿ ಅಭಿನಯಿಸಿದರು. ಅನಂತಪದ್ಮನಾಭ ಪಾಠಕ್ ಅವರ ಮದ್ದಳೆಯ ಬಿಡ್ತಿಗೆಗೆ ಸರಿಯಾಗಿ ಪಾತ್ರಧಾರಿಗಳ ಪದಗತಿಯು ರಂಗದಲ್ಲಿ ಮೂಡುತ್ತಿತ್ತು. ಚೆಂಡೆಮದ್ದಳೆ ಹಾಗೂ ಪಾತ್ರಧಾರಿಗಳ ಕುಣಿತ ಮಣಿತಗಳಲ್ಲಿ ತಾಳಮೇಳವಿತ್ತು. ದುರ್ಯೋಧನ ಒಡ್ಡೋಲಗದ ಸಾಮೂಹಿಕ ನರ್ತನ, ಸಂಸಪ್ತಕ (ಗೌತಮ ಸಾಸ್ಥಾನ) ಪ್ರವೇಶ ಬಹು ಚೆನ್ನಾಗಿ ಬಂತು. ಮಾತಿಲ್ಲದೆಯೇ ನಡೆಯುವ ಈ ದೀರ್ಘಕಾಲೀನ ನರ್ತನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅಭಿನಯವೇ ಮಾತಾಗುವ ಬಗೆ ಚಕ್ರವ್ಯೂಹದ ರಚನೆಯಲ್ಲಿ ಅಡಗಿತ್ತು. ದ್ರೋಣನ ಹಿರಿತನದಲ್ಲಿ ನಡೆದ ಈ ವ್ಯೂಹರಚನೆಯ ವಿವರವನ್ನು ಅಭಿನಯದ ಮೂಲಕವೇ ಪಾತ್ರಧಾರಿಗಳು ವಿವರಿಸಿದರು. ಅದೇರೀತಿ ಅಭಿಮನ್ಯು-ಧರ್ಮರಾಯನ ಸಂವಾದದಲ್ಲಿ ಅಭಿಮನ್ಯು ಪಾತ್ರಧಾರಿ (ಸುರೇಂದ್ರಗಾಣಿಗ) ಕೃಷ್ಣನನ್ನು ನೆನೆಯುವಾಗ ಕಾಳಿಂಗ ನರ್ತವನ್ನು ಮಾಡಿ ತೋರಿಸಿದ್ದೂ ವಿಶೇಷ.
ಇಡೀ ಪ್ರಸಂಗದ ಪ್ರಮುಖ ಭಾಗವೆಂದರೆ ಸುಭದ್ರ ಹಾಗೂ ಅಭಿಮನ್ಯು ನಡುವಿನ ಮಾತುಕತೆಗಳು. ಸುಭದ್ರೆಯಾಗಿ ರಾಧಾಕೃಷ್ಣ ಐತಾಳರು ಮನೋಜ್ಞ ಅಭಿನಯವನ್ನು ನೀಡಿದರು. ತಮ್ಮ ನೃತ್ಯಗತಿಯಲ್ಲಿ, ಹಾವಭಾವದಲ್ಲಿ ಪದದ ಒಳ ಅರ್ಥಗಳನ್ನು ಹೊಮ್ಮಿಸುತ್ತಿದ್ದರು. ದೇವಿದಾಸ (16ನೇ ಶತಮಾನ) ಕವಿಯ ಈ ಪದ್ಯಭಾಗವು ಕೂಡ ಬಹು ಸೊಗಸಾಗಿದೆ.
ಚಕ್ರವ್ಯೂಹದಲ್ಲಿ ಅಭಿಮನ್ಯು ಹತನಾಗುವ ಚಿತ್ರಣವೂ ಆಕರ್ಷಕವಾಗಿದೆ. ಆತ ಅವಸಾನದ ಅಂಚಿಗೆ ಹಂತ ಹಂತವಾಗಿ ಜಾರುವುದನ್ನು ನೃತ್ಯಗತಿ ಬಹು ಅಚ್ಚುಕಟ್ಟಾಗಿ ನಿರೂಪಿಸುತ್ತದೆ. ಸನ್ನಿವೇಶದ ಗಂಭೀರತೆಯನ್ನು ಎಲ್ಲ ಪಾತ್ರಧಾರಿಗಳು ಕುಣಿತದ ಮೂಲಕ, ಮುಖಾಭಿನಯದ ಮೂಲಕ ಅಭಿವ್ಯಕ್ತಿಸಿದರು.
ಪ್ರಸ್ತುತ ‘ಅಭಿಮನ್ಯು ವಧೆ’ ಜೊತೆಗೆ ‘ಪಂಚವಟಿ’ ಯಕ್ಷಗಾನ ಬ್ಯಾಲೆಯ ತಾಲೀಮು ನಡೆದಿದೆ. ಮುಂದೆ ಉಳಿದ ಕಥಾನಕಗಳು ವೇದಿಕೆಗೆ ಬರಬೇಕು. ಇಷ್ಟೇ ಅಲ್ಲದೆ, ಯಕ್ಷಗಾನ ಬ್ಯಾಲೆಯನ್ನು ಉಳಿದ ಸಮರ್ಥ ನಿರ್ದೇಶಕರು ಆರಿಸಿಕೊಂಡು ತಮ್ಮ ತಂಡಗಳ ಮೂಲಕ ಬೇರೆ ಬೇರೆ ಆಖ್ಯಾನಗಳನ್ನು ಅಭ್ಯಸಿಸಿ ತಮ್ಮ ಕಾಣ್ಕೆಯನ್ನು ಅದರಲ್ಲಿ ಸೇರಿಸಬೇಕಾಗಿದೆ. ಇಂಥ ಪ್ರಯತ್ನಗಳು ಕಾರಂತರಿಗೆ ಸಲ್ಲಿಸುವ ಅರ್ಥಪೂರ್ಣ ಶ್ರದ್ಧಾಂಜಲಿಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.