ADVERTISEMENT

ಮಲೆನಾಡಿನ ರೋಮಾಂಚಕ ಕ್ಷಣಗಳು!

ದಿನೇಶ ಪಟ­ವ­ರ್ಧನ್
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಮಲೆನಾಡಿನಲ್ಲಿ ಮಂಜಿನ ಮೋಡಿ  ಚಿತ್ರಗಳು: ಲೇಖಕರವು
ಮಲೆನಾಡಿನಲ್ಲಿ ಮಂಜಿನ ಮೋಡಿ ಚಿತ್ರಗಳು: ಲೇಖಕರವು   

ಪಶ್ಚಿಮಘಟ್ಟ ಸರಣಿಯ ಮಲೆನಾಡು ವಿಸ್ಮಯಗಳ ತವರು. ಒಂದಕ್ಕೊಂದು ಬೆಸೆದು ನಿಂತ, ಮುಗಿಲು ಚುಂಬಿಸುವ ಪರ್ವತಗಳು, ಕಣಿವೆಗಳು, ಬೆಟ್ಟ ಗುಡ್ಡಗಳು. ನದಿ- ತೊರೆ, ಪ್ರಾಣಿ- ಪಕ್ಷಿಗಳ ಕಲರವ, ನೂರಾರು ಜಾತಿಯ ಗಿಡ, ಬಳ್ಳಿ, ಮರ ಹೀಗೆ ವರ್ಣನೆಗೂ ಮೀರಿದ ಸಂಪತ್ತು. ದಬ ದಬ ಎಂದು ಸುರಿವ ಮಳೆ, ಮೈನಡುಗಿಸುವ ಚಳಿ, ಮನೆಯಿಂದ ಹೊರ ಬರಲಾರದಷ್ಟು ಬಿಸಿಲು.

ಇಲ್ಲಿನ ಜನರ ಬದುಕೂ ಅಷ್ಟೇ ಕುತೂಹಲ, ಸಾಹಸ ಪ್ರವೃತ್ತಿಯದು. ಕಡಿದಾದ ಬೆಟ್ಟಗಳ ಮಧ್ಯೆ ಕಾಫಿ, ಅಡಿಕೆ, ತೆಂಗು-ಕಂಗು, ಭತ್ತ ಇನ್ನಿತರೆ ಕೃಷಿಯಲ್ಲಿ ತೊಡಗಿಸಿಕೊಂಡ ಸಾವಿರಾರು ಕುಟುಂಬಗಳನ್ನು ಇಂದೂ ನೋಡಬಹುದು. ಯಾವುದೇ ವ್ಯವಸ್ಥಿತ ಸಂಪರ್ಕ ಸಾಧನಗಳು ಇಲ್ಲದ ದಿನಗಳಲ್ಲಿ ಇಲ್ಲಿ ನೆಲೆಯೂರಿ ಕೃಷಿ ಕಾರ್ಯಗಳಲ್ಲಿ ತೊಡಗಿ ಬದುಕನ್ನು ಕಟ್ಟಿಕೊಂಡ ಪರಿ ನಿಜಕ್ಕೂ ಅಚ್ಚರಿ ತರಿಸುತ್ತದೆ. ಜನರ ಸಾಹಸ ಪ್ರವೃತ್ತಿಗೆ ಸಾಕ್ಷಿಯಾಗಿ ನಿಂತಿದೆ ಈ ಮಲೆನಾಡು.

ಮನುಷ್ಯನ ಅನ್ವೇಷಕ ಪ್ರವೃತ್ತಿ, ಧರ್ಮ, ಸಂಸ್ಕೃತಿ, ನಂಬಿಕೆಗೆ ಅನುಗುಣವಾಗಿ ಗುಡಿ- ದೇಗುಲಗಳೂ ರೂಪುಗೊಂಡಿವೆ. ಪ್ರವಾಸಿ ತಾಣಗಳಾಗಿ ಮೂಡಿವೆ. ಪ್ರಕೃತಿ ನೀಡಿದ ಅದ್ಭುತ ತಾಣಗಳು ಒಂದೆಡೆಯಾದರೆ, ಮಾನವ ನಿರ್ಮಿತ ಸ್ಥಳಗಳು ಇನ್ನೊಂದೆಡೆ.

ADVERTISEMENT

ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶ ಮೂಡಿಗೆರೆ ತಾಲ್ಲೂಕಿನ ಭೈರಾಪುರ, ಬೆಳ್ತಂಗಡಿ ತಾಲ್ಲೂಕಿನ ಶಿಶಿಲ. ಒಂದೆಡೆ ಬೆಟ್ಟಗಳು, ಇನ್ನೊಂದೆಡೆ ಆಳ ಕಣಿವೆ. ದಟ್ಟ ಕಾಡು- ಬೋಳುಗುಡ್ಡ, ಪ್ರಶಾಂತವಾಗಿ ಹರಿಯುವ ಕಪಿಲಾ ನದಿ. ಅಜಾನುಬಾಹು ಶಿಶಿಲ ಕುಡಿ ಗುಡ್ಡ, ಪುರಾತನ ಇತಿಹಾಸ ಪ್ರಸಿದ್ಧ ನಾಣ್ಯ ಭೈರವೇಶ್ವರ ದೇಗುಲ, ಶಿಶಿಲೇಶ್ವರ ಹಾಗೂ ಅಪರೂಪದ ಮೀನುಗಳ ಮೀನಾಗುಂಡಿ. ಬಯಲು ಗಣಪತಿ ಇರುವ ಸೌತಡ್ಕ, ಮುಂದೆ ಹೋದರೆ ಸುಬ್ರಹ್ಮಣ್ಯ, ಧರ್ಮಸ್ಥಳ ಹೀಗೆ ಸಾಗುತ್ತದೆ ಈ ಮಾರ್ಗ.

ಮೂಡಿಗೆರೆಯಿಂದ 20 ಕಿ.ಮೀ.ದೂರದಲ್ಲಿ ಇರುವ ನಾಣ್ಯ ಭೈರವೇಶ್ವರ ದೇವಾಲಯ ಅತ್ಯಂತ ಪುರಾತನವಾದುದು. ಕೆಲ ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ. ಕಲ್ಲಿನಿಂದ ನಿರ್ಮಿತವಾದ ದೇಗುಲದಲ್ಲಿ ಅನೇಕ ಕೆತ್ತನೆಗಳಿವೆ. ಪ್ರವೇಶ ದ್ವಾರದಲ್ಲಿ ಇರುವ ಸ್ತಂಭ ಅತ್ಯಾಕರ್ಷಕ. ನಾಗರ ಬನವನ್ನೂ ನಿರ್ಮಿಸಲಾಗಿದೆ. ನಿತ್ಯ ಪೂಜೆ ವ್ಯವಸ್ಥೆಯೂ ಇಲ್ಲಿದೆ.

ಕಾಫಿ ತೋಟಗಳ ಕಣಿವೆ, ಸುತ್ತಲ ಹಸಿರು ರಾಶಿಯ ಸೊಬಗನ್ನು ಸವಿಯುತ್ತಾ ಮೂಡಿಗೆರೆಯಿಂದ 20 ಕಿ.ಮೀ.ದೂರ ವಾಹನದಲ್ಲಿ ಸರಾಗವಾಗಿ ಬರಬಹುದು. ಸಕಲೇಶಪುರದಿಂದಲೂ ಇಲ್ಲಿಗೆ ಬರಲು ಅನುಕೂಲವಿದೆ. ಉತ್ತಮ ರಸ್ತೆಯೂ ಇದೆ. ದೇವಸ್ಥಾನದ ಬಳಿ ನಿಂತು ನೋಡಿದರೆ ಅಜಾನುಬಾಹು ಪರ್ವತ ನಮ್ಮನ್ನು ಸ್ವಾಗತಿಸುತ್ತದೆ. ಎತ್ತಿನ ಭುಜ, ಶಿಶಿಲ ಶೃಂಗ ಎಂದು ಕರೆಯಲಾಗುವ ಈ ಸ್ಥಳ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಸಾಹಸಿಗರಿಗೆ ಸವಾಲು ಒಡ್ಡಿ ನಿಂತಿರುವ ಈ ಗುಡ್ಡವನ್ನು ಏರಲು ರಜಾ ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯವರು ಶಿಶಿಲಕ್ಕೆ ಬಂದು ಹೊಳೆಗುಂಡಿಯಿಂದ ಕಾಲುನಡಿಗೆಯಲ್ಲಿ ಬೆಟ್ಟವನ್ನು ಏರಿದರೆ, ಸಕಲೇಶಪುರ, ಮೂಡಿಗೆರೆ ಕಡೆಯಿಂದ ಹೋಗುವವರು ನಾಣ್ಯ ಭೈರವೇಶ್ವರ ದೇಗುಲದವರೆಗೆ ವಾಹನಗಳಲ್ಲಿ ಬಂದು ಅಲ್ಲಿಂದ ಸ್ವಲ್ಪವೇ ದೂರದಲ್ಲಿ ಇರುವ ಬೆಟ್ಟವನ್ನು ಹತ್ತುತ್ತಾರೆ. ಸೂರ್ಯೋದಯ, ಸೂರ್ಯಾಸ್ತ ಸಮಯ ಪ್ರಶಸ್ತ. ಪ್ರಕೃತಿಯ ಸೌಂದರ್ಯ ಸವಿಯುವುದರ ಜೊತೆಗೆ ಚಾರಣಕ್ಕೂ ಸೂಕ್ತ ಸ್ಥಳವಿದು.

ಶಿಶಿಲ ಕುಡಿ ಬೆಟ್ಟದಿಂದ ಕಾಲ್ನಡಿಗೆ ಮೂಲಕ ಶಿಶಿಲವನ್ನು ಸಂಪರ್ಕಿಸಬಹುದು. ಕೇವಲ ಐದಾರು ಕಿ.ಮೀ ದೂರ. ಮಧ್ಯದಲ್ಲಿ ಸ್ವಲ್ಪ ದೂರ ಬಂಡಿಜಾಡು ರಸ್ತೆ ಇದ್ದರೆ ನಂತರದ್ದು ಕಾಲು ಹಾದಿ. ಕಾನನದ ಮಧ್ಯೆ ಹಸಿರನ್ನು ಸೀಳುತ್ತಾ ಸಾಗಿರುವ ಹಾದಿಯಲ್ಲಿ ನಡೆಯುವುದೇ ರೋಮಾಂಚಕ ಅನುಭವ.

ದಾರಿ ಮಧ್ಯೆ ಜಲಧಾರೆಯೊಂದು ಸಿಗುತ್ತದೆ. ನಂತರ ಕಪಿಲಾ ನದಿ ಎದುರಾಗುತ್ತದೆ. ಮಳೆಗಾಲ ಕಳೆದ ನಂತರ ಆರಾಮವಾಗಿ ನದಿಯನ್ನು ದಾಟಬಹುದು. ಅಲ್ಲಿಂದ ಡಾಂಬರ್ ರಸ್ತೆ ಸಿಗುತ್ತದೆ. ನಾಲ್ಕು ಕಿ.ಮೀ. ಸಾಗಿದರೆ ಸಣ್ಣ ಊರು ಶಿಶಿಲ ಸಿಗುತ್ತದೆ. ಅಲ್ಲಿಂದ 3 ಕಿ.ಮೀ ಅಂತರದಲ್ಲಿ ಶಿಶಿಲೇಶ್ವರ ದೇಗುಲ. ಕಪಿಲಾ ನದಿ ದಂಡೆಯಲ್ಲಿ ಇರುವ ಇತಿಹಾಸ ಪ್ರಸಿದ್ಧ ದೇವಸ್ಥಾನ.

ಈ ಸಣ್ಣ ಹಳ್ಳಿ ಶಿಶಿಲಕ್ಕೂ ಮೂಡಿಗೆರೆಗೂ ಅವಿನಾಭಾವ ಸಂಬಂಧ. ಒಂದು ಊರಿನಿಂದ ಇನ್ನೊಂದು ಊರಿಗೆ ವ್ಯಾಪಾರ ಉದ್ದೇಶದಿಂದ ಈ ಕಾಲುಹಾದಿಯನ್ನು ಸಂಪರ್ಕ ಕೊಂಡಿಯಾಗಿ ಅನೇಕ ವರ್ಷಗಳ ಹಿಂದೆ ಬಳಸಿಕೊಂಡಿದ್ದರು. ಶಿಶಿಲ ಸೀಮೆಯ ವಸ್ತುಗಳನ್ನು ಮೂಡಿಗೆರೆಗೆ ತಲೆಹೊರೆಯಲ್ಲಿ ಕೊಂಡೊಯ್ಯವುದು, ಅಲ್ಲಿನ ವಸ್ತುಗಳನ್ನು ಇಲ್ಲಿಗೆ ತರುವುದು ಸಾಮಾನ್ಯ ಸಂಗತಿಯಾಗಿತ್ತು.

ಮಳೆಗಾಲದಲ್ಲಿ ತೆರಳಲು ತೂಗು ಸೇತುವೆ ವ್ಯವಸ್ಥೆ ಇದೆ. ಕಲ್ಲಿನಿಂದ ನಿರ್ಮಿತ ದೇವಾಲಯ ಹೆಚ್ಚು ಕೆತ್ತನೆಗಳಿಂದ ಕೂಡಿಲ್ಲದಿದ್ದರೂ ಸ್ಥಳ ಮಹಾತ್ಮೆಗೆ ವಿಶೇಷ ಮನ್ನಣೆ. ವಾರ್ಷಿಕ ಜಾತ್ರೆ, ಭೂತದ ಕೋಲವೂ ಸಡಗರ- ಸಂಭ್ರಮದಿಂದ ನಡೆಯುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆ ಅಪರೂಪದ ಮುಶೈರಾ ಮೀನುಗಳು. ವರ್ಷಪೂರ್ತಿ ಮೀನುಗಳದೇ ಜಾತ್ರೆ ಇಲ್ಲಿ.

ಸಾವಿರಾರು ಮೀನುಗಳು ಕಪಿಲಾ ನದಿಯಲ್ಲಿ ಇದ್ದು, ಇವುಗಳನ್ನು ನೋಡಲೆಂದೇ ದೂರದ ಊರುಗಳಿಂದ ಪ್ರವಾಸಿಗರು, ಭಕ್ತರು ಬರುತ್ತಾರೆ. ಅವುಗಳ ಚಲನವಲನ, ಚೆಲ್ಲಾಟಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಕೊಕ್ಕಡ ಬಳಿಯ ಸೌತಡ್ಕ ಇನ್ನೊಂದು ಮುಖ್ಯ ಪ್ರವಾಸಿ ಸ್ಥಳ.
ಬಯಲು ಗಣಪ ಇಲ್ಲಿನ ಹೆಗ್ಗಳಿಕೆ. ಆಳೆತ್ತರ ಕಲ್ಲಿನ ಗಣಪತಿ ವಿಗ್ರಹವಿದ್ದು, ಗುಡಿಯನ್ನು ಕಟ್ಟಿಲ್ಲ. ಕಟ್ಟಿದಲ್ಲಿ ಸುತ್ತಲ ಗ್ರಾಮಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಬಲವಾದ ನಂಬಿಕೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬಂದು ಹರಕೆ ಸಲ್ಲಿಸುತ್ತಾರೆ. ಹರಕೆಯ ವಸ್ತುಗಳಲ್ಲಿ ಗಂಟೆಗೆ ಮೊದಲ ಆದ್ಯತೆ. ಹರಕೆ ರೂಪದಲ್ಲಿ ಬಂದ ಗಂಟೆಗಳನ್ನು ಹರಾಜು ಹಾಕುವುದರಿಂದಲೇ ವಾರ್ಷಿಕ ಸಾವಿರಾರು ರೂಪಾಯಿ ಆದಾಯ ದೇಗುಲಕ್ಕೆ ಬರುತ್ತದೆ.

ನಿರ್ಮಲ, ಪ್ರಶಾಂತ ಸ್ಥಳದಲ್ಲಿ ರೂಪುಗೊಂಡಿರುವ ಇಲ್ಲಿನ ವಿಘ್ನೇಶ್ವರನಿಗೆ ಅಕ್ಕಿ ಹಿಟ್ಟಿನಿಂದ ಮಾಡುವ ಮೂಡಪ್ಪ ಬಲುಪ್ರಿಯ. ಹೀಗಾಗಿ ಭಕ್ತರು ಇದರ ಹರಕೆಯನ್ನೂ ಹೊರುತ್ತಾರೆ. ಮುಂದೆ ಕೊಕ್ಕಡಕ್ಕೆ ಹೋಗಿ ಎಡಕ್ಕೆ ತಿರುಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸುಬ್ರಹ್ಮಣ್ಯಕ್ಕೆ ಹೋಗಬಹುದು.
ಕೊಕ್ಕಡದಿಂದ ಸ್ವಲ್ಪ ಹಿಂದೆ ಬಂದು ಬಲಕ್ಕೆ ತಿರುಗಿ ಧರ್ಮಸ್ಥಳವನ್ನೂ ಸೇರಬಹುದು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ವಾಹನಗಳಲ್ಲಿ ಧರ್ಮಸ್ಥಳ, ಶಿಶಿಲಕ್ಕೆ ಹೋಗಲು ಚಾರ್ಮಾಡಿ ಘಾಟಿ ಸುಲಭದ ಹಾದಿ. ನೂರು ವರ್ಷ ಹಳೆಯದಾದ ಚಾರ್ಮಾಡಿ ಘಾಟಿಯ ರಮ್ಯ ನೋಟ ಪ್ರವಾಸಿಗರನ್ನು ನಿತ್ಯ ಸೆಳೆಯುತ್ತದೆ. ವಿಶಿಷ್ಟ ಅನುಭವ ನೀಡುವ ರಸ್ತೆ ಇದು.

ಒಂದೆಡೆ ಬೆಟ್ಟಗುಡ್ಡ, ಇನ್ನೊಂದೆಡೆ ಪ್ರಪಾತ, ಕಣ್ಣು ಕುಕ್ಕುವ ಹಸಿರು, ಅಲ್ಲಲ್ಲಿ ಎದುರಾಗುವ ಜಲರಾಶಿ, ತಿರುವುಗಳನ್ನು ಹೊಂದಿದ ರಸ್ತೆಯಲ್ಲಿನ ಪಯಣ ನಿಜಕ್ಕೂ ಅನನ್ಯ ಅನುಭವ.

ಮಳೆಗಾಲದಲ್ಲಿ ಕಲ್ಲು, ಮಣ್ಣು, ಬಂಡೆಕಲ್ಲು ಕುಸಿತದಿಂದ ಸ್ವಲ್ಪ ಅಪಾಯಕಾರಿ ರಸ್ತೆಯೂ ಇದಾಗಿದೆ. ಸಕಲೇಶಪುರ, ಮೂಡಿಗೆರೆಯಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಶಿಶಿಲ ಇತರೆ ಪ್ರವಾಸಿ ಸ್ಥಳ, ಮಂಗಳೂರಿಗೆ ತೆರಳಲು ಭೈರಾಪುರ- ಶಿಶಿಲ ರಸ್ತೆ ನಿರ್ಮಿಸಬೇಕೆಂಬ ಕೂಗು ಮೂರು ದಶಕಗಳಷ್ಟು ಹಳೆಯದು.

ಈ ರಸ್ತೆ ನಿರ್ಮಾಣವಾದಲ್ಲಿ ಶಿರಾಡಿ ಮತ್ತು ಚಾರ್ಮಾಡಿ ಘಾಟಿಯ ಮೇಲೆ ಬೀಳುತ್ತಿರುವ ಒತ್ತಡ ಕಡಿಮೆ ಆಗುತ್ತದೆ ಎನ್ನುವ ಮಾತು ಸ್ಥಳೀಯರದು. ನಾಣ್ಯ ಭೈರವೇಶ್ವರ ದೇವಾಲಯ ಹಾಗೂ ಶಿಶಿಲದ ಹೊಳೆಗುಂಡಿವರೆಗೆ ಈಗಾಗಲೇ ಉತ್ತಮ ರಸ್ತೆ ಇದ್ದು, ಮಧ್ಯದಲ್ಲಿ 10 ಕಿ.ಮೀ. ರಸ್ತೆ ನಿರ್ಮಿಸಿದರೆ ಶಾಶ್ವತ ಪರ್ಯಾಯ ರಸ್ತೆಯೊಂದು ಸಿಗುತ್ತದೆ ಎನ್ನುವ ಬಲವಾದ ಪ್ರತಿಪಾದನೆ ಜನರದು.

ಇದಕ್ಕಾಗಿ ಅನೇಕ ವರ್ಷಗಳಿಂದ ಹಕ್ಕೊತ್ತಾಯ ಮಂಡಿಸುತ್ತಲೇ ಬಂದಿದ್ದು, ಈಗ ಇದು ಪ್ರಬಲವಾಗಿದೆ. ಸ್ಥಳೀಯ ಪಂಚಾಯಿತಿಗಳಲ್ಲಿ ನಿರ್ಣಯವೂ ಆಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳೂ ಪರಿಶೀಲನೆ ನಡೆಸಿದ್ದಾರೆ.

ಸಾಕಷ್ಟು ದೂರ ಕಚ್ಚಾ ರಸ್ತೆ ನಿರ್ಮಾಣವಾಗಿದೆ. ಮಧ್ಯದಲ್ಲಿ ನಾಲ್ಕೈದು ಕಿ.ಮೀ. ರಸ್ತೆ ನಿರ್ಮಾಣ ಮಾಡಬೇಕು. ಕಾಡಿಗೂ ಹೆಚ್ಚಿನ ಹಾನಿ ಆಗದ ರೀತಿಯಲ್ಲಿ ರಸ್ತೆ ನಿರ್ಮಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಹೊಸ ರಸ್ತೆ ಈ ಭಾಗದ ಹಳ್ಳಿಗಳ ಜನರ ಬದುಕಿನಲ್ಲಿ ಹೊಸ ಭರವಸೆಗಳಿಗೂ ನಾಂದಿಯಾಗುತ್ತದೆ. ಅನೇಕ ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸುವ ಕೊಂಡಿಯೂ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.