`ಮಾತು ಬೆಳ್ಳಿ; ಮೌನ ಬಂಗಾರ' ಅಂತ ಒಂದು ಮಾತಿದೆ. ಇದರೊಳಗಿರುವ ತಮಾಷೆ ಗುರುತಿಸಿದಿರಾ? ಮೌನದ ಮಹಿಮೆ ಹೇಳೋದಕ್ಕೂ ಮತ್ತೆ ನಾವು ಮಾತಿನ ಮೊರೆಯನ್ನೇ ಹೋಗಬೇಕು. ಇಂದು ಈ ಜಗವನ್ನು ಆಳುತ್ತಿರುವುದು ಮಾತೇ ಹೊರತು ಮೌನವಲ್ಲ. ಮೌನದ ಉಪಾಸಕರಾದ ಮುನಿಗಳು (ಇವತ್ತಿನ ಸಂದರ್ಭದ ಸ್ವಾಮೀಜಿಗಳು) ಕೂಡ ಇಂದು ಮಾತಿನ ಗುಲಾಮರಾಗಿದ್ದಾರೆ.
ಎಲ್ಲ ಸ್ವಾಮೀಜಿಗಳ ಮಾತುಗಳನ್ನು ದಾಖಲಿಸಲು ಅದಕ್ಕೆಂದೇ ಮೀಸಲಾದ ಅವರವರ ಶಿಷ್ಯವರ್ಗವಿದೆ. ಒಳ್ಳೊಳ್ಳೆ ಮಾತುಗಾರರಾದ ಇವರು ಇಂದು ಪ್ರಮುಖ ಶಕ್ತಿಕೇಂದ್ರಗಳಾಗಿ ಬೆಳೆದು ಆಳುವವರನ್ನೂ, ಆಳಿಸಿಕೊಳ್ಳುವವರನ್ನೂ ತಮ್ಮ ಮಾತುಗಳಿಂದ ನಿಯಂತ್ರಿಸುತ್ತಿದ್ದಾರೆ.
ಈ ಆಳುವ ವರ್ಗದಲ್ಲಿರುವ ರಾಜಕಾರಣಿಗಳ ಭವಿಷ್ಯ ಮತ್ತು ಬಂಡವಾಳ ಎರಡೂ ಅವರ ಮಾತೇ ಆಗಿದೆ ಎಂಬುದನ್ನಂತೂ ನಾವೆಲ್ಲರೂ ಒಪ್ಪಿಯೇ ಒಪ್ಪುತ್ತೇವೆ. ಈಗಿನ ಈ ಕಾವಿ-ಖಾದಿಗಳಿಗೆ ಒಂದೊಮ್ಮೆ ವಿದ್ಯೆ ಕಲಿಸಿದ ಅವರ ಗುರುಗಳೂ ಕೂಡ ಮಾತುಗಾರರೇ!
ಶಿಕ್ಷಕ ವೃತ್ತಿಯ ಮೂಲಧನವೇ ಮಾತುಗಾರಿಕೆ. ಒಂದೇ ವ್ಯತ್ಯಾಸವೆಂದರೆ ಅವರಿಗೆ ನಿರ್ದಿಷ್ಟ ವಿಷಯ ಮತ್ತು ಸಮಯಗಳ ಚೌಕಟ್ಟಿದ್ದು ತಕ್ಕ ಮಟ್ಟಿಗೆ ಅವರು ಅದನ್ನು ಪಾಲಿಸುವಂಥವರಾಗಿರುತ್ತಾರೆ. ಹಾಗಾಗಿ ಈ ಇಡೀ ಜಗತ್ತನ್ನು ಎರಡು ಭಾಗಗಳಾಗಿ ವಿಂಗಡಿಸಬಹುದಾದರೆ ಮಾತು ಬಲ್ಲವರು ಮತ್ತು ಮಾತು ಒಲ್ಲದವರು ಎಂದು ವರ್ಗೀಕರಿಸಬಹುದೇನೋ ಎನಿಸುತ್ತದೆ.
ಸಂಸ್ಕೃತದಲ್ಲಿ ಒಂದು ಮಾತಿದೆ. `ಜಿಹ್ವಾಗ್ರೇ ವಸತೇ ಲಕ್ಷ್ಮಿ; ಜಿಹ್ವಾಗ್ರೇ ವಸತೇ ಮಿತ್ರ ಬಂಧುವಾಃ; ಬಂಧನಂ ಕಾರಣಂ ಜಿಹ್ವಾಗ್ರೇ; ಜಿಹ್ವಾಗ್ರೇ ಮರಣಂ ಪ್ರಾಪ್ತೇ' ಅಂತ. ಜಿಹ್ವೆ ಎಂದರೆ ನಾಲಿಗೆ. ಜಿಹ್ವಾಗ್ರ ಎಂದರೆ ನಾಲಿಗೆಯ ತುದಿ. ನಾಲಿಗೆಯ ತುದಿಯೆಂದರೆ ಅದು ಮಾತಿನ ಉಗಮಸ್ಥಾನ. ಈ ನಾಲಿಗೆಯ ತುದಿಯೆಂಬ ಮಾತಿನ ಉಗಮಸ್ಥಾನದಲ್ಲಿ ಲಕ್ಷ್ಮಿ ವಾಸವಾಗಿದ್ದಾಳೆ.
ಅಂದರೆ ಬಹುಪಾಲು ಲಕ್ಷ್ಮೀಪುತ್ರರ ಮೇಲೆ ಮಾತಿನ ಮಾತೆಯ ಕೃಪೆಯಿದೆ ಅಂತಾಯ್ತು. ಯಾವನಿಗೆ ಅಧಿಕ ಜನ ಬಂಧು ಮಿತ್ರರು ಇರುವರೋ ಅವನ ಸ್ನೇಹಶೀಲ ನಡವಳಿಕೆಗೆ ಮೂಲ ಕಾರಣ ಅವನ ಮಾತುಗಾರಿಕೆಯೇ. ಹ
ಳ್ಳಿಗಳಲ್ಲಿ ನಾವು `ಅವನು ಬಿಡ್ರೀ ಮಾತುಗಾರ. ಕಾಡಿನೊಳಗೆ ಬಿಟ್ಟು ಬಂದ್ರೂ ಕಲ್ಲು ಮುಳ್ಳುಗಳನ್ನು ಮಾತಾಡಿಸಿ ಗೆಳೆತನ ಮಾಡಿಕೊಂಡು ಪಾರಾಗಿ ಬರ್ತಾನ' ಅಂತ ಹೇಳುವುದನ್ನು ಕೇಳಿಯೇ ಇರುತ್ತೇವೆ. ಇನ್ನು ಇದೇ ಮಾತು ನಮ್ಮ ಬಂಧನಕ್ಕೂ ಕಾರಣವಾಗುತ್ತೆ ಅನ್ನುತ್ತೆ ಈ ಮಾತು. ಮಾತಾಡಿ ಕಷ್ಟ ತಂದುಕೊಂಡವರನ್ನು ನಾವು ಹಲವರನ್ನು ಕಂಡಿದ್ದೇವೆ.
ಕಹಿಯಾದರೂ ಸತ್ಯವನ್ನೇ `ಮಾತನಾಡಿ'ದ್ದರ ಫಲವಾಗಿ ಹರಿಶ್ಚಂದ್ರ ಸಾವಿರ ಕಷ್ಟ ಕೋಟಲೆಗಳನ್ನು ಅನುಭವಿಸಿದ್ದನ್ನು ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದಲ್ಲಿ ಸೊಗಸಾಗಿ ನಿರೂಪಿಸಿದ್ದಾನೆ. ಅಷ್ಟು ದೂರದ ಮಾತೇಕೆ ಎಪ್ಪತ್ತರ ದಶಕದಲ್ಲಿ ಮಂತ್ರಿಗಳಾಗಿದ್ದ ಬಿ. ಬಸವಲಿಂಗಪ್ಪನವರು `ಕನ್ನಡದಲ್ಲಿ ವಚನ ಸಾಹಿತ್ಯವೊಂದನ್ನುಳಿದು ಉಳಿದುದೆಲ್ಲಾ ಬೂಸಾ ಸಾಹಿತ್ಯ' ಎಂದು `ಮಾತನಾಡಿ'ಯೇ ತಮ್ಮ ಮಂತ್ರಿ ಪದವಿ ಕಳೆದುಕೊಂಡರು.
ಮಾತು ಮೃತ್ಯುವೂ ಆಗಬಹುದು. ಎಂತೆಂಥದೋ ಸಂದರ್ಭದಲ್ಲಿ ನಾಲಿಗೆ ತಪ್ಪಿಯೋ ಉದ್ದೇಶಪೂರ್ವಕವಾಗಿಯೋ ಆಡಿದ ಮಾತು ಕಾಲಾನಂತರದಲ್ಲಿ ನಮ್ಮ ಕೊರಳಿಗೆ ಉರುಲಾಗಿ ಬರುವಂಥ ಪ್ರಸಂಗಗಳನ್ನು ನಾವು ಕೇಳಿಯೇ ಇದ್ದೇವೆ. ಮೊನ್ನೆ ಮೊನ್ನೆ ಪತ್ರಿಕೆಯಲ್ಲಿ ಒಂದು ಕೊಲೆಯ ಸುದ್ದಿ ಪ್ರಕಟವಾಗಿತ್ತು. ಅದರ ವಿವರ ಹೀಗಿದೆ.
ಬಿಹಾರದಿಂದ ಬಂದ ಇಬ್ಬರು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆ ಕಾಮಗಾರಿಯಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಾರೆ. ಒಬ್ಬನಿಗೆ ಮದುವೆಯಾಗಿದೆ. ಮತ್ತೊಬ್ಬನಿಗೆ ಇಲ್ಲ. ಕೈಬಾಯಿ ಸುಟ್ಟುಕೊಂಡು ಮಾಡಿಕೊಂಡು ತಿನ್ನುತ್ತಾನೆ ಅಂತ ಕನಿಕರಿಸಿ ನಾಲ್ಕಾರು ಸಲ ಮನೆಗೆ ಕರೆಸಿ ಊಟ ಹಾಕಿದ್ದಾನೆ ಗೃಹಸ್ಥ ಗೆಳೆಯ.
ಅವನೋ ಇವನ ಮಡದಿ ಮೇಲೇ ಕಣ್ಣು ಹಾಕಿದ್ದಾನೆ. ಯಾವಾಗಲೋ ಒಮ್ಮೆ ಒಂದಿಷ್ಟು ದೊಡ್ಡ ಮೊತ್ತದ ಹಣವನ್ನು ಕೈಸಾಲ ಅಂತ ಗೃಹಸ್ಥ ಕೇಳಿದಾಗ ಅವನು ಆವೇಶದ ಭರದಲ್ಲಿ `ನಿನ್ನ ಹೆಂಡತಿಯನ್ನೊಮ್ಮೆ ನನ್ನ ಹತ್ತಿರ ಕಳಿಸಿಕೊಡು' ಅಂದಿದ್ದಾನೆ. ಅಷ್ಟಕ್ಕೇ ಸ್ನೇಹ ಕಳೆದುಕೊಳ್ಳದ ಗೃಹಸ್ಥ ಒಮ್ಮೆ ಅವನನ್ನು ಪಾರ್ಟಿಗೆ ಕರೆದೊಯ್ದು ಕಂಠಮಟ್ಟ ಕುಡಿಸಿ ಕುತ್ತಿಗೆ ಹಿಚುಕಿ ಸಾಯಿಸಿ ಗಟಾರಕ್ಕೆಸೆದು ಬಂದಿದ್ದಾನೆ. ಅದೊಂದು ಮಾತು ಅವನ ಪ್ರಾಣಕ್ಕೇ ಎರವಾಯಿತು ಅಂತ ಕೊಲೆಗಾರ ಗೃಹಸ್ಥ ಹೇಳಿಕೆ ನೀಡಿದ್ದಾನೆ.
ಅಂದರೆ ಕೊಲೆಯಾದವನು ತನ್ನ ಭಾವನೆಯನ್ನು ಮಾತಿನಲ್ಲಿ ವ್ಯಕ್ತಪಡಿಸದೆ ಅದುಮಿಕೊಂಡಿದ್ದರೆ ಬದುಕುಳಿಯುತ್ತಿದ್ದ ಅಂತಾಯಿತಲ್ಲವೇ? ಸಂಸ್ಕೃತದ ಮಾತು ಒಂದಿಷ್ಟು ದೀರ್ಘವೇ ಆಯಿತು ಎನ್ನಿಸಿದರೆ ಬನ್ನಿ ನಮ್ಮ ಕನ್ನಡದಲ್ಲಿ ಮಾತಿನ ಬಗ್ಗೆ ಒಂದು ನೇರ ಮತ್ತು ಸರಳವಾದ ಮಾತಿದೆ `ಮಾತೇ ಮುತ್ತು; ಮಾತೇ ಮೃತ್ಯು' ಅಂತ.
ಮಾತಿನ ಬಗ್ಗೆ ಇರುವ ಒಂದು ಜನಪದ ದೃಷ್ಟಾಂತ ನೆನಪಾಗ್ತಿದೆ. ಒಂದು ಊರಿಗೆ ಒಬ್ಬ ರಾಜ. ಅವನಿಗೆ ತುಂಬಾ ವರ್ಷಗಳ ನಂತರ ಮಗ ಹುಟ್ಟಿದ. ಈ ಸಂಭ್ರಮವನ್ನು ಪುರಜನರೆಲ್ಲ ಹಬ್ಬದಂತೆ ಆಚರಿಸಬೇಕೆಂದು ರಾಜಾಜ್ಞೆ ಹೊರಡಿಸಿದ. ಆದರೆ ರಾಜನ ಈ ಸಂಭ್ರಮ ಬಹಳ ದಿವಸ ಉಳಿಯಲಿಲ್ಲ. ಏಕೆಂದರೆ ಮಗ ಮೂಗನಾಗಿದ್ದ. ರಾಜ ಈ ವಿಷಯ ಕೇಳಿ ವ್ಯಾಕುಲನಾದ. ಎಲ್ಲ ದೇವರ ಚಿತ್ತ ಎಂದುಕೊಂಡು ಮೂಗ ಮಗನಿಗೆ ಎಲ್ಲ ಕ್ಷಾತ್ರ ವಿದ್ಯೆಗಳಲ್ಲೂ ತರಬೇತಿ ಕೊಡಿಸಿದ.
ಒಮ್ಮೆ ಯುವರಾಜ ಸೈನಿಕರು ಮತ್ತು ಮಂತ್ರಿಯೊಂದಿಗೆ ಶಿಕಾರಿಗೆ ಹೋದ. ಅರೆಪೆಟ್ಟು ತಿಂದ ಜಿಂಕೆಮರಿಯೊಂದು ಚುಚ್ಚಿಕೊಂಡ ಬಾಣದೊಂದಿಗೇ ಓಡಿಹೋಗಿ ಪೊದೆಯಲ್ಲಿ ಅಡಗಿಕೊಂಡುಬಿಟ್ಟಿತು. ಸೈನಿಕರೆಲ್ಲ ಹುಡುಕಿದರೂ ಸಿಗಲಿಲ್ಲ. ಆದರೆ ಚುಚ್ಚಿಕೊಂಡ ಬಾಣದ ನೋವು ತಾಳದ ಜಿಂಕೆಮರಿ ಆರ್ತನಾದಗೈದಾಗ ಸೈನಿಕರು ಅದರ ಜಾಡನ್ನು ಪತ್ತೆ ಹಚ್ಚುವಂತಾಯಿತು.
ಆಗ ಜಿಂಕೆಮರಿಗೆ ಯುವರಾಜ ಹೇಳಿದ `ನೀನ್ಯಾಕೆ ಮಾತಾಡಿದೆ? ನೀನು ಮಾತಾಡಿದ್ದರಿಂದಲೇ ಮೃತ್ಯು ಪಾಲಾದೆ'. ಮಂತ್ರಿಗೆ ಯುವರಾಜ ಮಾತನಾಡಿದ್ದನ್ನು ಕೇಳಿ ಸಂಭ್ರಮಾಶ್ಚರ್ಯವಾಗಿ ಬಂದು ರಾಜನಿಗೆ ಈ ವಿಷಯ ಅರುಹಿದ. ರಾಜನ ಸಂಭ್ರಮಕ್ಕೆ ಪಾರವೇ ಇಲ್ಲದಾಯಿತು. ಊರಲ್ಲಿ ಡಂಗೂರ ಸಾರಿಸಿ ಎಲ್ಲರೂ ಅರಮನೆ ಮುಂದೆ ಬಂದು ನೆರೆಯಬೇಕೆಂದೂ, ಯುವರಾಜನ ಮಾತುಗಳನ್ನು ಪುರಜನರು ಕಿವಿಯಾರೆ ಕೇಳಬೇಕೆಂದೂ ತಿಳಿಸಿದ.
ಊರಜನರೆಲ್ಲ ಬಂದರು. ಯಾರೇನು ಮಾಡಿದರೂ ಯುವರಾಜ ಮಾತಾಡಲಿಲ್ಲ. ರಾಜನಿಗೆ ಅವಮಾನವಾಯಿತು. ಇದಕ್ಕೆ ಕಾರಣನಾದ ಮಂತ್ರಿಗೆ ಮರಣದಂಡನೆ ವಿಧಿಸಿದ. ಅವನನ್ನು ಕರೆದೊಯ್ಯುತ್ತಿದ್ದಾಗ ಯುವರಾಜ ಕರೆದು ಹೇಳಿದ, `ನೀನ್ಯಾಕೆ ಮಾತಾಡಿದೆ? ನೀನು ಮಾತಾಡಿದ್ದರಿಂದಲೇ ಮೃತ್ಯು ಪಾಲಾದೆ'. ಮಂತ್ರಿ ಆಗ ಮಾರ್ಮಿಕವಾಗಿ `ಇಲ್ಲ ಯುವರಾಜ. ತಾವು ಮಾತಾಡಲೇಬೇಕಾದಾಗ ಮಾತಾಡದೆ ಇದ್ದದ್ದಕ್ಕಾಗಿ ನಾನು ಮೃತ್ಯು ಪಾಲಾದೆ' ಅಂದ.
ಅನಗತ್ಯವಾಗಿ ಮಾತಾಡುವುದು, ಅಗತ್ಯಕ್ಕೆ ತಕ್ಕಂತೆ ಮಾತಾಡುವುದು ಮತ್ತು ಅತ್ಯಗತ್ಯವಿದ್ದಾಗಲೂ ಮಾತಾಡದೆ ಇರುವುದು ಈ ಮೂರರ ಅಪಾಯವನ್ನು ಈ ಕಥೆ ತುಂಬಾ ಧ್ವನಿಪೂರ್ಣವಾಗಿ ಹಿಡಿದಿಟ್ಟಿದೆ. ಹಾಗಾಗಿ ನಾವು ಕೂಡ ಆಡಲೇಬೇಕಿರುವ ಮತ್ತು ಆಡದಿದ್ದರೂ ನಡೆಯುವ ಮಾತುಗಳ ಬಗ್ಗೆ ಖಚಿತ ನಿಲುವು ಹೊಂದಿರುವುದು ಮುಖ್ಯವಾಗಿದೆ.
ಕನ್ನಡದಲ್ಲಿ ಮಾತಿನ ಬಗ್ಗೆ ಹಲವಾರು ಕವಿಗಳು ಮಾತಾಡಿದ್ದಾರೆ. ಮಾತೆಂಬುದು ಜ್ಯೋತಿರ್ಲಿಂಗ ಎಂದು ವಚನಕಾರರು ಹೇಳಿದ್ದಾರೆ. ಬಸವಣ್ಣನಂತೂ `ನುಡಿದರೆ ಮುತ್ತಿನಹಾರದಂತಿರಬೇಕು; ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು; ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು; ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು; ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ ನಮ್ಮ ಕೂಡಲಸಂಗಮದೇವ' ಎಂದಿದ್ದಾನೆ.
`ನುಡಿದಂತೆ ನಡೆ; ಇದೇ ಜನ್ಮ ಕಡೆ' ಅಂತ ಶರಣರು ಹೇಳಿದರೆ ಅಸ್ಕಿಹಾಳದ ಗೋವಿಂದದಾಸರು `ಹೇಳುವುದರೊಳಗೆ ಕಾಲ ಕಳೆಯಿತೋ; ಮಾಡುವುದ್ಯಾವಾಗೆಲೆ ಮನವೆ' ಎಂದು ತಿವಿದಿದ್ದಾರೆ. ನಮ್ಮ ತತ್ವಪದಕಾರ ಕಡಕೋಳ ಮಡಿವಾಳಪ್ಪನವರು `ಮೂಕಾಗಿರಬೇಕೋ; ಜಗದೊಳು ಜ್ವಾಕ್ಯಾಗಿರಬೇಕೋ' ಎಂದು ಹಾಡಿದ್ದಾರೆ. ಸರ್ವಜ್ಞನ `ಮಾತಿನಿಂ ನಗೆ ನುಡಿಯು; ಮಾತಿನಿಂ ಹಗೆ ಕೊಲೆಯು; ಮಾತಿನಿಂ ಸರ್ವಸಂಪದವು ಲೋಕಕ್ಕೆ; ಮಾತೇ ಮಾಣಿಕವು ಸರ್ವಜ್ಞ' ಎಂಬ ತ್ರಿಪದಿಯಂತೂ ಜನಜನಿತವಾಗಿದೆ.
ಆಧುನಿಕ ಕನ್ನಡ ಕಾವ್ಯದಲ್ಲೂ ಮಾತಿನ ಪ್ರಸ್ತಾಪವಿಲ್ಲದೆ ಇಲ್ಲ. ಶಬ್ದಗಾರುಡಿಗರಾದ ವರಕವಿ ಬೇಂದ್ರೆಯವರು `ಮಾತು-ಮಾತು ಮಥಿಸಿ ಬಂತು ನಾದದ ನವನೀತ' ಎಂದಿದ್ದಾರೆ. ಭಾಷೆ ಮತ್ತು ಸಂಸ್ಕೃತಿಗಳ ಕುರಿತ ಚಿಂತನೆಯ ಅನಂತಮೂರ್ತಿಯವರ ಒಂದು ಲೇಖನದ ಶೀರ್ಷಿಕೆಯೇ `ಮಾತು ತಲೆಯೆತ್ತುವ ಬಗೆ' ಅಂತ ಇದೆ.
ನಮ್ಮ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರು `ನೀನಾಡುವ ಮಾತು ಹೀಗಿರಲಿ ಗೆಳೆಯ; ಮೃದು ವಚನ ಮೂಲೋಕ ಗೆಲ್ಲುವುದು ತಿಳಿಯ' ಎಂದು ಬರೆದುದಷ್ಟೇ ಅಲ್ಲದೆ ತಮ್ಮ ಮೃದುವಚನದಿಂದ ಮೂಲೋಕದ ಮನಸನ್ನು ಗೆದ್ದೂ ತೋರಿದ್ದಾರೆ. ಡಿ.ಆರ್. ನಾಗರಾಜರ ಕೃತಿಯೊಂದನ್ನು ಸಂಪಾದಿಸಿದ ಅಗ್ರಹಾರ ಕೃಷ್ಣಮೂರ್ತಿಯವರು ಆ ಕೃತಿಯಲ್ಲಿನ ತಮ್ಮ ಸಂಪಾದಕೀಯ ನುಡಿಗೆ `ಮಾತಿಗೆ ಅವಕಾಶವಿದೆಯೆಂದಾದರೆ...' ಎಂಬ ತಲೆಬರಹ ನೀಡಿದ್ದಾರೆ.
ಹಿಂದಿಯಲ್ಲಿ ಒಂದು ಕಹಾವತ್ ಇದೆ. ಅದು ಮಾತಿನ ಮಹತಿಯನ್ನು ತುಂಬಾ ಕಾವ್ಯಾತ್ಮಕವಾಗಿ ಹಿಡಿದಿಟ್ಟಿದೆ. `ಬಾತ್ ಹೀರಾ ಹೈ; ಬಾತ್ ಮೋತಿ ಹೈ; ಬಾತ್ ಲಾಖೋಂ ಕಿ ಲಾಜ್ ಹೈ; ಖಾಸ್‌ಬಾತ್ ಯೆ ಹೈ, ಕಿ ಹರ್‌ಬಾತ್ ಕೊ ಬಾತ್ ನಹಿ ಕಹಾ ಜಾತಾ ಹೈ'. ಮಾತು ವಜ್ರ; ಮಾತು ಮುತ್ತು; ಮಾತು ಲಕ್ಷಾಂತರ ಜನರ ಕಣ್ಮಣಿ. ಮುಖ್ಯವಾದ ಮಾತೆಂದರೆ ಎಲ್ಲ ಮಾತನ್ನು `ಮಾತು' ಅಂತ ಕರೆಯೋಕಾಗಲ್ಲ ಅಂತ ಇದರ ತಾತ್ಪರ್ಯ. ಎಲ್ಲ ಮಾತನ್ನು ಮಾತು ಅಂತ ಕರೆಯೋಕಾಗಲ್ಲ ಅನ್ನುವ ಮಾತನ್ನು ಮತ್ತಷ್ಟು ಆಳವಾಗಿ ನೋಡೋಣ.
ನಮ್ಮ ನಡುವಿನ ಮಾತುಗಳಲ್ಲಿ ಸಮಯ ತಿನ್ನುವ ಶಿಷ್ಟಾಚಾರದ ಮಾತುಗಳಿವೆ; ಆರೋಗ್ಯ ಕೆಡಿಸುವ ಅರ್ಥಹೀನ ಮಾತುಗಳಿವೆ; ಸಮಯಸಾಧಕ ಭಟ್ಟಂಗಿ ಮಾತುಗಳಿವೆ; ಹೊಟ್ಟೆ ತುಂಬಿದವರ ಪಟ್ಟಾಂಗದ ಮಾತುಗಳಿವೆ; ಕರುಳು ಕಿವುಚುವ ಮಾತ್ಸರ್ಯದ ಈಟಿಮಾತುಗಳಿವೆ; ನಗುನಗುತ್ತಲೇ ಮಾನ ಹರಾಜು ಹಾಕುವ ಚಾಟುಮಾತುಗಳಿವೆ; ಲೋಕವೆಲ್ಲದರ ಬಗ್ಗೆ ಹಗುರವಾಗಿ ಆಡಿಕೊಳ್ಳುವ ಬಾಯ್ತುರಿಕೆಮಾತುಗಳಿವೆ; ಅಯ್ಯೋ ಎಂದು ಮರುಗುವ ತುಟಿಸಹಾನುಭೂತಿಯ ಹುಸಿಮಾತುಗಳಿವೆ.. ಇನ್ನೂ ಇಂಥ ಹಲವಾರು ಪ್ರಬೇಧಗಳಿವೆ.
ಇವೆಲ್ಲವನ್ನು `ಮಾತು' ಎಂದು ಕರೆಯಬಹುದೆ? ಯಾವುದು ಉಪಯುಕ್ತಕಾರಿಯೋ; ಯಾವುದು ಉತ್ಪಾದನಾಶೀಲವೋ ಅದು ಮಾತ್ರವೇ `ಮಾತು' ಎನ್ನಿಸಿಕೊಳ್ಳುವುದು. ಉಳಿದುದೆಲ್ಲ ಏನಿದೆ? ಅನರ್ಥವಾಗಿ ಆಯುಷ್ಯ ಕರಗಿಸುವ; ಚಾರಿತ್ರ್ಯ ನಾಶ ಮಾಡುವ ಕಾಲ ಹರಣಕಾರಿ ಕಸ ಮಾತ್ರ. ಹಾಗೆ ನೋಡಿದರೆ ನಾವಾಡುವ ಪ್ರತಿ ಮಾತು ನಮ್ಮ ವ್ಯಕ್ತಿತ್ವದ ಕಟ್ಟಡವನ್ನು ನಿರ್ಮಾಣ ಮಾಡುವಲ್ಲಿ ಬಳಕೆಯಾಗುವ ಒಂದೊಂದು ಇಟ್ಟಿಗೆಯಂತೆ.
ನಿನ್ನೆ ಆಡಿದ ಮಾತು ಒಂದು ಇಟ್ಟಿಗೆ, ಇಂದು ಆಡುವ ಮಾತು ಒಂದು ಇಟ್ಟಿಗೆ, ನಾಳೆ ಆಡಲಿರುವ ಮಾತು ಅದು ಮತ್ತೊಂದು ಇಟ್ಟಿಗೆ ಇವೆಲ್ಲ ಸೇರುತ್ತ, ಒಂದರ ಮೇಲೊಂದು ಪೇರುತ್ತ ನಮ್ಮ ವ್ಯಕ್ತಿತ್ವದ ಕಟ್ಟಡ ನಿರ್ಮಾಣಗೊಳ್ಳುತ್ತ ಸಾಗುತ್ತಿರುತ್ತದೆ. ನಿಜವಾದ ಅರ್ಥದಲ್ಲಿ `ಮಾತುಗಳೇ ಅಲ್ಲದ' ಅರ್ಥಹೀನ ಬಡಬಡಿಕೆಗಳು- ಶಿಥಿಲವಾದ, ಅರೆಬೆಂದ ಇಟ್ಟಿಗೆಗಳಂತೆ.
ಇವುಗಳಿಂದ ನಿರ್ಮಾಣಗೊಂಡ ಕಟ್ಟಡ ಎಷ್ಟು ದಿವಸ ತಾನೇ ಗಟ್ಟಿಯಾಗಿರಲು ಸಾಧ್ಯ? ಇಂಥ ವ್ಯಕ್ತಿತ್ವದ ಕಟ್ಟಡ ಶಿಥಿಲವಾಗಿ ಕುಸಿದು ಬೀಳದೆ ಇರಲು ತಾನೆ ಹೇಗೆ ಸಾಧ್ಯ?
ಇನ್ನು ಮಾತಿನ ದೇವತೆಯರಾದ ಮಹಿಳೆಯರತ್ತ ಬರೋಣ. ಸರಸ್ವತಿಗೆ ವಾಗ್ದೇವಿ ಎಂಬ ಮತ್ತೊಂದು ಹೆಸರಿದೆ. ವಾಕ್ ಎಂದರೆ ಮಾತು, ದೇವಿ ಎಂದರೆ ಒಡತಿ, ಅಧಿಪತಿ. ಮಾತಿನ ಅಧಿದೇವತೆ ಹೆಣ್ಣೇ ಆಗಿರುವುದರಿಂದ ಇರಬೇಕು, ಎಲ್ಲ ಮಾತೆಯರೂ ಮಹಾನ್ ಮಾತುಗಾರರೇ. ಅವರಿರುವಲ್ಲೆಲ್ಲ ಮಾತು ಮಾತು ಮಾತು ಮಾತು. ಮಾತೇ ಮಾತು.
ಅದಕ್ಕೇ ಅವರನ್ನು ಅನ್ವರ್ಥಕವಾಗಿ `ಮಾತೆ' ಅಂತ ಕರೆಯುತ್ತಿರಬಹುದೆ ಅಂತ ಗಂಗಾವತಿ ಪ್ರಾಣೇಶ್ ಅನುಮಾನಿಸಿದ್ದಾರೆ. ಕೇವಲ ಅರ್ಧ ಗಂಟೆಗೇ ಫೋನಿಟ್ಟ ಹೆಂಡತಿಯನ್ನು ಗಂಡ ಆಶ್ಚರ್ಯದಿಂದ `ಏನಿವತ್ತು ಇಷ್ಟು `ಚುಟುಕಾಗಿ' ಮಾತು ಮುಗಿಸಿಬಿಟ್ಟೆ?' ಅಂದದ್ದಕ್ಕೆ `ಓಹ್ ಅದಾ? ರಾಂಗ್ ನಂಬರ್!' ಎಂದ ಹೆಂಡತಿಯ ಜೋಕು ನಿಮಗೆ ಗೊತ್ತಿಲ್ಲದೆ ಏನಿಲ್ಲ. ರಾಂಗ್ ನಂಬರ್ ಜೊತೆಗೂ ಅರ್ಧಗಂಟೆ ಮಾತಾಡಬಲ್ಲ ಶಕ್ತಿ ಮತ್ತು ಆಸಕ್ತಿ ಮಾತೆಯರಿಗಷ್ಟೇ ಇರಲು ಸಾಧ್ಯ.
ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಗಂಡಸರ ಮೆದುಳಿನಲ್ಲಿ ಮಾತಿಗೆ ಸಂಬಂಧಪಟ್ಟ ಕ್ಷೇತ್ರ ಎಡಭಾಗದಲ್ಲೋ ಬಲಭಾಗದಲ್ಲೋ ಇದೆಯಂತೆ. ಆದರೆ ಹೆಂಗಸರಿಗೆ ಮಾತ್ರ ದುರದೃಷ್ಟವಶಾತ್ ಅದು ಎರಡೂ ಕಡೆಗೂ ಇದೆಯೆಂದು ಎಲ್ಲೋ ಓದಿದ ನೆನಪು! ಅದನ್ನು ಓದಿ ತಿಳಿಯಬೇಕಾದ್ದೇನಿದೆ, ಅವರ ಮಾತು ಕೇಳಿದ್ರೆ ಗೊತ್ತಾಗಲ್ವಾ? ಅಂತ ಸ್ನೇಹಿತರೊಬ್ಬರು ಲಾ ಪಾಯಿಂಟ್ ಹಾಕಿದ್ರಲ್ಲೂ ತಥ್ಯ ಇದೆ ಅನಿಸುತ್ತೆ.
ಒಂದು ಸಮೀಕ್ಷೆ ಪ್ರಕಾರ ಗಂಡಸರು ದಿನವೊಂದಕ್ಕೆ ಆಂಗಿಕ ಸಂಜ್ಞೆಗಳು ಸೇರಿದಂತೆ ಗರಿಷ್ಠ ಎಂದರೆ ನಾಲ್ಕು ಸಾವಿರ ಪದಗಳನ್ನು ಬಳಸುತ್ತಾರಂತೆ. ಹೆಂಗಸರು ಏಳು ಸಾವಿರ! ಅಂದರೆ ಆಲ್‌ಮೋಸ್ಟ್ ಗಂಡಸರ ದುಪ್ಪಟ್ಟು. ಅದೇ ಕಾರಣಕ್ಕೇ ಇರಬೇಕು ಹೆಂಗಸರು ದನ, ಕರು, ನಾಯಿ, ಬೆಕ್ಕು, ನವಜಾತ ಶಿಶು, ಬಾಗಿಲು, ಕಿಟಕಿ ಅಷ್ಟೇಕೆ ಕಲ್ಲಿನ ಜೊತೆಗೂ ಮಾತಾಡುತ್ತಾರೆ. ಗಂಡಸರು ನೆವರ್. ಅವರು ಮನುಷ್ಯರ ಜೊತೆಗೆ ಸರಿಯಾಗಿ ಮಾತಾಡಿದರೇ ದೊಡ್ಡ ಸಾಧನೆ. ಇಲ್ಲೊಂದು ಪ್ರಸಂಗ ನೆನಪಾಗ್ತಿದೆ.
ನಾನೊಮ್ಮೆ ಯಾವುದೋ ಗಣತಿ ಕಾರ್ಯಕ್ಕೆಂದು ನಿಯೋಜಿತನಾಗಿದ್ದೆ. ನನಗೆ ಒಬ್ಬ ಅಂಗನವಾಡಿ ಮಹಿಳೆಯನ್ನು ಸಹಾಯಕಳಾಗಿ ಕೊಡಲಾಗಿತ್ತು. ಒಂದು ಕೃಷಿ ಕುಟುಂಬದ ಮನೆಯೊಳಗೆ ಹೋಗಿ ಮಾಹಿತಿ ಬರೆದುಕೊಳ್ಳುತ್ತಿದ್ದಾಗ ಗೋದಲಿಯಲ್ಲಿದ್ದ ಹಸುವೊಂದು ಹಿಂದಿನಿಂದ ಆಕೆಯ ಸೆರಗಿಗೆ ಬಾಯಿ ಹಾಕಿ ನಮುಲತೊಡಗಿತು. ಅದರ ಬಾಯಿಂದ ತನ್ನ ಸೀರೆ ಸೆರಗನ್ನು ಕಿತ್ತುಕೊಳ್ಳುತ್ತ ಆಕೆ ಆಡಿದ ಮಾತು ನನಗಿನ್ನೂ ನೆನಪಿದೆ.
`ಅಯ್ಯಯ್ಯ ನನ ಕರ್ಮ. ಏನವಾ ಎವ್ವಾ ನಿನಗ ನನ ಸೀರಿನೂ ಕಡಿಮಿ ಬಿತ್ತಾ? ನೀನೇನು ಬರಗಾಲದಾಗ ಹುಟ್ಟಿದಾಕಿ ಮಾಡಿದಂಗ ಮಾಡಾಕತ್ತೀಯಲ್ಲ. ನೀನು ಸೀರಿ ತಿಂದು ಹಾಕಿದ್ರ ಹೊಸದು ಯಾರು ತಂದು ಕೊಡ್ತಾರವ ನಂಗ? ರಾಖಿ ಹುಣ್ಣಿವಿತನ ನಡಿಬೇಕಿದು ಬುಡು'. ಆ ಹಸು ಉತ್ತರ ಅಂತೂ ಕೊಡೋದಿಲ್ಲ, ಹೋಗ್ಲಿ ಈಕೆ ಹೇಳಿದ ಇಷ್ಟುದ್ದದ ರಾಮಾಯಣದಲ್ಲಿ ಒಂದು ಪದವಾದ್ರೂ ಅದಕ್ಕೆ ಅರ್ಥವಾಗುತ್ತಾ ಅಂದ್ರೆ ಅದೂ ಇಲ್ಲ. ಅದು ಆಕೆಗೆ ಗೊತ್ತಿಲ್ಲದ್ದೇನಲ್ಲ.
ಏನ್ ಮಾಡ್ತೀರಿ ಮನುಫ್ಯಾಕ್ಚರಿಂಗ್ ಡಿಫೆಕ್ಟ್! ಆ ಆಕಳಿನ ಲಿಂಗವನ್ನೂ ಗುರುತಿಸಿ ಸಂಬೋಧಿಸಿ, ಸೆರಗಿಗೆ ಬಾಯಿ ಹಾಕಿದ್ದಕ್ಕೆ ಅದು ಬರಗಾಲದಲ್ಲಿ ಹುಟ್ಟಿದೆಯೇ ಅಂತ ಅದರ ಜನ್ಮರಹಸ್ಯವನ್ನೂ ಬೆದಕಿದ ಆ `ಮಾತಾ'ಯಿ, ಕೊನೆಗೆ ತನ್ನ ಆ ಸೀರೆ ಮುಂದಿನ ರಾಖಿ ಹುಣ್ಣಿಮೆ ತನಕ ಬರಬೇಕು ಎಂದು ಹೇಳುವ ಮೂಲಕ ಸೀರೆ ತಂದು ಕೊಡಲಾಗದ ತನ್ನ ಗಂಡನ ಮೇಲಿನ ಸಿಟ್ಟನ್ನೂ, ಪ್ರತಿವರ್ಷಕ್ಕೊಂದು ತಪ್ಪದೆ ತಂದು ಕೊಡುವ ತನ್ನ ಅಣ್ಣನ ಮಮತೆಯನ್ನೂ ಬಯಲಿಗಿಟ್ಟು ಕೈತೊಳೆದುಕೊಂಡಳು. ಅಷ್ಟು ಮಾತುಗಳ ಅಗತ್ಯ ಅಲ್ಲಿತ್ತೆ? ಎಂದರೆ ಹೆಂಗಸರಿಗೆ ಅದು ಅಗತ್ಯದ ಪ್ರಶ್ನೆಯಷ್ಟೇ ಅಲ್ಲ; ಬದಲಿಗೆ ಅನಿವಾರ್ಯದ ಪ್ರಶ್ನೆ ಎಂಬ ಸತ್ಯದ ದರ್ಶನವಾಗುತ್ತದೆ.
ಹೀಗೆಲ್ಲ ಮಾತಾಡದಿದ್ದರೆ ಅವರ ಏಳುಸಾವಿರದ ಟಾರ್ಗೆಟ್ ಅನ್ನು ತಲುಪುವುದಾದರೂ ಹೇಗೆ? ಅಕಸ್ಮಾತ್ ನನ್ನ ಶರ್ಟಿಗೇನಾದರೂ ಅದು ಬಾಯಿ ಹಾಕಿದ್ದರೆ ನಾನೇನು ಮಾಡುತ್ತಿದ್ದೆ ಅಂತ ಆಮೇಲೆ ಯೋಚಿಸಿದೆ. ಅದರ ಪಕ್ಕೆಗೆ ತಿವಿದು ಸರಿಸುತ್ತಿದ್ದೆ. ಅಬ್ಬಬ್ಬಾ ಎಂದರೆ ಹಾಗೆ ಮಾಡುತ್ತಲೇ ಏಯ್ ಅಂತಲೋ ಹೋಯ್ ಅಂತಲೋ ಒಂದು ಪದ ಹೂಂಕರಿಸುತ್ತಿದ್ದೆ ಎನಿಸಿತು.
ಹೆಂಗಸರು ಎಷ್ಟೆಲ್ಲ ಮಾತಾಡ್ತಾರೆ ಅಂದ್ರೆ ಅವರು ಪ್ರತಿಯೊಂದಕ್ಕೂ ಕೊಡುವ ಸೂಕ್ಷ್ಮ ವೀಕ್ಷಕ ವಿವರಣೆ ಹಲವಾರು ಸಲ ಗಂಡಸರಿಗೆ ರೇಜಿಗೆ ಎನಿಸುತ್ತೆ. ಆದರೆ ಹಾಗಂತ ಹೇಳೋಕಾಗುತ್ಯೆ? ಹೇಳೋದು ಅಷ್ಟು ಸುಲಭದ ಮಾತೆ? ಅದಕ್ಕೆ ಒಬ್ಬ ಉತ್ತಮ ಕೇಳುಗ ಮಾತ್ರ ಉತ್ತಮ ಗಂಡನಾಗಬಲ್ಲ ಅಂತ ಅನುಭವಿಗಳು ಹೇಳಿರೋದು. ಹೊಸದರಲ್ಲಿ ಎಲ್ಲರೂ ಒಳ್ಳೇ ಕೇಳುಗರೇ. ಆಮೇಲೆ? ಸುಮ್ಮನೆ ತಲೆಯಾಡಿಸುತ್ತ ಹೋಗುತ್ತ ಇರುತ್ತಾರೆ- ಯಾವ ಒಂದು ಮಾತನ್ನೂ ತಲೆಯೊಳಗೆ ಇಳಿಸಿಕೊಳ್ಳದೆ. ಆದರೆ ಅವರ ಮಾತುಗಾರಿಕೆಯಿಂದ ಒಳ್ಳೆಯದೂ ಆಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ.
ಅವರು ನವಜಾತ ಶಿಶುಗಳೊಂದಿಗೂ ಅಷ್ಟೊಂದು ಮಾತಾಡಬಲ್ಲವರಾದ್ದರಿಂದಲೇ ಮಕ್ಕಳಿಗೆ ಬೇಗ ಮಾತು ಬರುತ್ತವೆ. ಏಕೆಂದರೆ ಭಾಷೆಯ ಕಲಿಕೆಯಲ್ಲಿ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆ ಎಂಬ ನಾಲ್ಕು ಹಂತಗಳಿದ್ದು ಈ ಪ್ರಕ್ರಿಯೆ ಶುರುವಾಗುವುದೇ ಆಲಿಸುವಿಕೆಯಿಂದ. ಹೆಂಗಸರೇನಾದರೂ ಈಗಿರುವಷ್ಟು ಮಾತುಗಾರರಾಗಿರದೆ ಇದ್ದಿದ್ದರೆ ಮಕ್ಕಳು ಮಾತಾಡುವುದನ್ನು ಕಲಿಯಲು ಹತ್ತನೇ ವರ್ಷಕ್ಕೆ ಕಾಲಿಡಬೇಕಾಗುತ್ತಿತ್ತು.
ಸರಿ ಹಾಗಾದರೆ ನಮ್ಮ ಮಾತು ಹೇಗಿರಬೇಕು? ನಮ್ಮ ಕೃತಿಗಳೇ ನಮ್ಮ ಮಾತಾಗಿರಬೇಕು. ಮಾತು ಎಂದರೆ ಬಾಹ್ಯ ಅಭಿವ್ಯಕ್ತಿಯ ರೂಪ. ಒಳಗಿನ ಕಸುವೆಲ್ಲ ಸೇರಿ ಹೂರಣವಾಗಿ ಹೊರಬಂದ ಕೃತಿಯೂ ಕೂಡ ಮತ್ತೊಂದು ಅರ್ಥದಲ್ಲಿ ನಮ್ಮ ಮಾತೇ ಅಲ್ಲವೇ? ಹಾಗಾಗಿ ಸಾಧ್ಯವಾದಷ್ಟು ನಮ್ಮ ಸೃಜನಶೀಲ ಸೃಷ್ಟಿಗಳೇ ನಮ್ಮ ಮಾತಾಗಬೇಕು; ನಮ್ಮ ಮಾತಾಡಬೇಕು.
ನಮ್ಮ ಬರೆಹ, ಹಾಡು, ಚಿತ್ರ, ಶಿಲ್ಪಗಳು ಮಾತಾಡಬೇಕು. ಇಂಥ ಲಲಿತಕಲೆಗಳಲ್ಲಿ ತನ್ನನ್ನು ಪ್ರಕಟಪಡಿಸಿಕೊಳ್ಳಲಾಗದವನ ಮಾತು ಅವನ ಕೆಲಸದಲ್ಲಿ, ಉತ್ಪಾದಕತೆಯಲ್ಲಿ, ವ್ಯಕ್ತಿತ್ವದಲ್ಲಿ ಅಭಿವ್ಯಕ್ತಗೊಳ್ಳಬೇಕು. ಈ ದೃಷ್ಟಿಯಿಂದ ನೋಡಲು ಸಾಧ್ಯವಾದಾಗ ಎಲ್ಲ ಬಗೆಯ ಸೃಷ್ಟಿಯೂ ಒಂದರ್ಥದಲ್ಲಿ ಮಾತೇ ಆಗುತ್ತದೆ. ಭೈರಪ್ಪನವರು ಒಮ್ಮೆ ತಮ್ಮ ಸಂದರ್ಶನದಲ್ಲಿ ಹೇಳಿದಂತೆ `ಸೃಷ್ಟಿಗೆ ಮೌನದ ಅಗತ್ಯವಿದೆ'.
ಸೃಜನಶೀಲ ಸೃಷ್ಟಿಯ ಮಾತು ತಲೆಯೆತ್ತಬೇಕಾದರೆ ಮೌನದ ಅಗತ್ಯವಿದೆ. ಮೌನದಲ್ಲಿ ನಮ್ಮ ಶಕ್ತಿ ಸಂಚಯವಾಗುತ್ತಾ ಹೋಗುತ್ತದೆ. ಈ ಸಂಚಯಿತ ಪ್ರಚ್ಛನ್ನಶಕ್ತಿಯೇ ಮಾತಿನ ಚಲನಶಕ್ತಿಗೆ ದ್ರವ್ಯವನ್ನು ಒದಗಿಸುತ್ತದೆ. ಹಾಗಾಗಿ ಮಾತು ಮತ್ತು ಮೌನಗಳು ಒಂದೇ ನಾಣ್ಯದ ಎರಡು ಮುಖಗಳು. ಮಾತು ಎಂಬುದು `ಪ್ರಕಟಿತ ಮೌನ'ವಾದರೆ; ಮೌನವೆಂಬುದು `ಅದುಮಿಟ್ಟ ಮಾತಾ'ಗಿದೆ.
ಆದರೆ ಇಂದು ನಾವು ಬದುಕುತ್ತಿರುವ ಕಾಲ ಮಾತ್ರ ಬರಿಯ ಒಣಮಾತು, ಪ್ರದರ್ಶನಪ್ರಿಯತೆಗೆ ಸಾಕ್ಷಿಯಾಗಿ ನಿಂತಿದೆ. ಅಂತರ್ಜಾಲದಲ್ಲಿನ ಸಾಮಾಜಿಕ ತಾಣಗಳು ಈ ವಿದ್ಯಮಾನಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಸರ್ವಜ್ಞನು ಮತ್ತೊಂದು ತ್ರಿಪದಿಯಲ್ಲಿ `ಆಡದೆ ಮಾಡುವನು ರೂಢಿಯೊಳಗುತ್ತಮನು; ಆಡಿ ಮಾಡುವನು ಮಧ್ಯಮನು ಲೋಕದಲಿ; ಆಡಿಯೂ ಮಾಡದವ ಅಧಮ ಸರ್ವಜ್ಞ' ಎಂದಿದ್ದಾನೆ.
ಆಡಿ ಮಾಡುವವನು ಮತ್ತು ಆಡದೆಯೂ ಮಾಡದವನು ಇಬ್ಬರೂ ಸಾಧಕರಂತೂ ಹೌದು; ಆದರೆ ಅದನ್ನು ಆಡಿ ತೋರಿದ್ದಕ್ಕಾಗಿಯೇ ಒಬ್ಬನು ತನ್ನ ಸ್ಥಾನವನ್ನು ಮಧ್ಯಮಕ್ಕಿಳಿಸಿಕೊಂಡಿದ್ದಾನೆ. ಮತ್ತೊಬ್ಬನು ಆಡದೆ ಉತ್ತಮ ಸ್ಥಾನಕ್ಕೇರಿದ್ದಾನೆ. ಇನ್ನು ಆಡುವವರಲ್ಲೂ ಇಲ್ಲಿ ಎರಡು ವರ್ಗಗಳನ್ನು ಸರ್ವಜ್ಞ ಗುರುತಿಸಿದ್ದಾನೆ. ಆಡಿ ಮಾಡುವವನು; ಆಡಿಯೂ ಮಾಡದವನು. ಆಡಿ ತೋರಿದ ಒಂದೇ ಕಾರಣಕ್ಕಾಗಿ ಮುಂದೆ ಮಾಡಿ ತೋರಲಾಗದವನು ಅಧಮ ಎನಿಸಿಕೊಂಡಿದ್ದಾನೆ.
ಒಂದು ವೇಳೆ ಅವನು ಆಡದೆ ಇದ್ದು ಆಗ ಮಾಡಿ ತೋರಲಾಗದಿದ್ದರೆ ಅದು ಅವನ ದೋಷವೇ ಅಲ್ಲ! ಹೇಗಿದೆ ಮಾತಿನ ಮರ್ಮ? ಅದಕ್ಕೇ ಸಂಸ್ಕೃತದಲ್ಲಿ `ಮನಸಾ ಚಿಂತಿತಂ ಕಾರ್ಯಂ; ವಾಚ್ಯಂ ನೈವ ಪ್ರಕಾಶಯೇತ್' ಎನ್ನಲಾಗಿದೆ.
`ನಾಲಿಗೆ ಕುಲವನ್ನು ಹೇಳಿತು' ಎಂಬುದು ನಮ್ಮ ಜನಪದರ ಮಾತು.
ನಮ್ಮ ಮಾತು ನಮ್ಮ ಮಟ್ಟವನ್ನು ತೋರುತ್ತದೆ. ಇದರರ್ಥ ಹೆಚ್ಚು ಮಾತನಾಡಿದರೆ ಹೆಚ್ಚಿನ ಮಟ್ಟವೆಂದಲ್ಲ. ಹೆಚ್ಚು ಹೆಚ್ಚು ಮಾತಾಡಿದಷ್ಟೂ ನಿಮ್ಮ ಮಟ್ಟ ಹೆಚ್ಚು ಸ್ಪಷ್ಟವಾಗಿ ಜನರಿಗೆ ತಿಳಿಯುತ್ತದೆ ಅಂತ. ಮಾತು ಒಂದು ಆಯುಧವಾಗಿದೆ. ಅದು ಒಂದು ಕತ್ತಿಯಾಗಿದೆ. ಅದನ್ನು ತರಕಾರಿ ಹೆಚ್ಚಲು ಮತ್ತು ಕತ್ತು ಕುಯ್ಯಲು ಎರಡಕ್ಕೂ ಬಳಸಬಹುದಾಗಿದೆ. ಆಯುಧ ಹಿಡಿದವನಿಗೆ ಅದರ ಬಳಕೆ ತಿಳಿದಿರಬೇಕು.
ಅಶ್ವಾರೋಹಿಯಾದವನಿಗೆ ಹಾದಿಯ ಅರಿವಿರಬೇಕು. ಇಲ್ಲಿ ಒಂದು ದೃಷ್ಟಾಂತದ ನೆನಪಿಗೆ ಬರುತ್ತಿದೆ. ಒಂದೂರಲ್ಲಿ ಒಬ್ಬ ಅರಸ ಇದ್ದ. ಅವನಿಗೆ ಸದಾ ಭವಿಷ್ಯದ ಬಗ್ಗೆ ಕುತೂಹಲ. ಬೇರೆ ಬೇರೆ ಜ್ಯೋತಿಷಿಗಳನ್ನು ಕರೆಯಿಸಿಕೊಂಡು ಅವರಲ್ಲಿ ತನ್ನ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಅವನ ಹತ್ತಿರ ಒಬ್ಬ ಯುವ ಜ್ಯೋತಿಷಿ ಬಂದ.
ರಾಜ ತನ್ನ ಕೈ ಮುಂದೊಡ್ಡಿ ಹಸ್ತಭವಿಷ್ಯ ಹೇಳಲು ಕೇಳಿದ. ಆಗ ಯುವ ಜ್ಯೋತಿಷಿ ರಾಜನ ಹಸ್ತರೇಖೆಗಳನ್ನು ಓದಿ `ಮಹಾರಾಜ, ನಿಮ್ಮದು ಅದ್ಭುತವಾದ ಭವಿಷ್ಯ. ನಿಮ್ಮ ಕಾಲದಲ್ಲಿ ರಾಜ್ಯವು ಸುಭಿಕ್ಷ ಪರ್ವವನ್ನು ಕಾಣಲಿದೆ ಆದರೆ' ಎಂದು ಸ್ವಲ್ಪ ಹೊತ್ತು ನಿಂತ. ಅದಕ್ಕೆ ರಾಜ ಏಕೆಂದು ಕೇಳಿದಾಗ ಆ ಜ್ಯೋತಿಷಿ `ಆದರೆ ನಿಮ್ಮದು ಅಲ್ಪಾಯುಷ್ಯ' ಎಂದ. ಇದನ್ನು ಕೇಳಿ ಕುಪಿತನಾದ ರಾಜ ಅವನನ್ನು ಬಂಧಿಸಿ ಸೆರೆಮನೆಯಲ್ಲಿಡುವಂತೆ ಆಜ್ಞಾಪಿಸಿದ.
ನಂತರ ಕೆಲದಿನಗಳ ನಂತರ ಮತ್ತೊಬ್ಬ ಅನುಭವಿ ಜ್ಯೋತಿಷಿಯು ಬಂದ. ಅವನು ರಾಜನ ಕೈಯನ್ನು ನೋಡಿ `ಮಹಾರಾಜ, ನಿಮ್ಮದು ಅದ್ಭುತವಾದ ಭವಿಷ್ಯ. ನಿಮ್ಮ ಕಾಲದಲ್ಲಿ ರಾಜ್ಯವು ಸುಭಿಕ್ಷಪರ್ವವನ್ನು ಕಾಣಲಿದೆ. ಆದರೆ' ಎಂದು ನಿಲ್ಲಿಸಿದ. ಅದಕ್ಕೆ ರಾಜ ಏಕೆಂದು ಕೇಳಿದಾಗ ಆ ಅನುಭವಿ ಜ್ಯೋತಿಷಿಯು `ಆದರೆ ನಿಮ್ಮ ಪ್ರಜೆಗಳು ದುರದೃಷ್ಟಶಾಲಿಗಳು' ಎಂದ.
ಪುನಃ ರಾಜ ಏಕೆಂದು ಕೇಳಿದಾಗ `ನಿಮ್ಮಂಥ ಜನಾನುರಾಗಿ ರಾಜರ ಕೈಯಲ್ಲಿ ಬಹುದಿನಗಳ ಕಾಲ ಆಳಿಸಿಕೊಳ್ಳುವ ಭಾಗ್ಯವನ್ನು ಅವರು ಪಡೆದುಕೊಂಡು ಬಂದಿಲ್ಲ' ಎಂದ. ಆಹಾ! ಎಂಥ ಮಾತು! ತನ್ನಿಂದ ಆಳಿಸಿಕೊಳ್ಳುವ ಭಾಗ್ಯವನ್ನು ಈ ಜನ ಪಡೆದುಕೊಂಡು ಬಂದಿಲ್ಲವೆಂದರೆ ನಾನೆಷ್ಟು ದೊಡ್ಡವನು, ನನ್ನದೆಂಥ ಹಿರಿಮೆ ಎಂದುಕೊಂಡು ರಾಜ ಆ ಜ್ಯೋತಿಷಿಗೆ ಮುತ್ತಿನ ಹಾರದ ಭಕ್ಷೀಸನ್ನು ಕೊಟ್ಟು ಕಳಿಸಿದ.
ಇಲ್ಲಿ ಇಬ್ಬರೂ ಹೇಳಿದ್ದು ಒಂದೇ ಮಾತನ್ನೇ. ಆದರೆ ಹೇಳಿದ ವಿಧಾನ ಬೇರೆ ಬೇರೆ. ಮಾತು ಒಂದು ಆಯುಧ ಹೇಗೋ ಹಾಗೇ ಅದು ಒಂದು ಕಲೆ ಕೂಡ. ಅದನ್ನು ಕಲಾತ್ಮಕವಾಗಿ ಸದುದ್ದೇಶಕ್ಕಾಗಿ ಬಳಸುವ ಕಲೆ ಗೊತ್ತಿರಬೇಕು ಎಂಬುದನ್ನಿದು ಧ್ವನಿಸುತ್ತಿದೆ.
ಇರಲಿ ಬಿಡಿ. ಎಷ್ಟು ಮಾತಾಡಿದರೂ ಈ ಮಾತಿನ ಕಥೆಗೆ ಮುಕ್ತಾಯವಿಲ್ಲ. ಮಾತು ಮನೆ ಕೆಡಿಸಿತು; ತೂತು ಗಡಿಗೆ ಒಲೆ ಕೆಡಿಸಿತು ಅನ್ನುವ ಮಾತನ್ನು ನೆನಪಿಸಿಕೊಳ್ಳುತ್ತ ಈ ಮಾತಿನ ಕುರಿತಾದ ಮಾತು-ಕತೆಗೆ ಮಂಗಳ ಹಾಡೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.