ಪ್ರಾಚೀನ ಜಪಾನ್‌ನಲ್ಲಿ ಒಂದು ದುಷ್ಟ ಪದ್ಧತಿ ಇತ್ತು. ವಯೋವೃದ್ಧರು ನಿಷ್ಪ್ರಯೋಜಕರೆಂದು ತಿಳಿಯಲಾಗುತ್ತಿತ್ತು. ಆದ್ದರಿಂದ ಅವರನ್ನು ನಿಷ್ಕರುಣೆಯಿಂದ ಅರಣ್ಯದಲ್ಲಿ ಬಿಟ್ಟು ಬರಲಾಗುತ್ತಿತ್ತು. ಅಲ್ಲಿ ಅವರು ಆಹಾರವಿಲ್ಲದೇ ವಿಧಿವಶರಾಗುತ್ತಿದ್ದರು. ಕಾಡು ಪ್ರಾಣಿಗಳಿಗೆ ಬಲಿಯಾಗುತ್ತಿದ್ದರು.
ಒಮ್ಮೆ ಒಬ್ಬ ಯುವಕ ತನ್ನ ವಯಸ್ಸಾದ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಅಡವಿಯಲ್ಲಿ ಬಿಡಲು ಹೋಗುತ್ತಿದ್ದ. ಆಗ ಅವನ ಅಮ್ಮ ಕೈಗೆ ನಿಲುಕಿದ ಗಿಡದ ಎಲೆಗಳನ್ನು ಹರಿದು ದಾರಿಯ ಬದಿಯಲ್ಲಿ ಎಸೆಯುತ್ತಿದ್ದಳು. ಕಾಡಿನಲ್ಲಿ ಆ ಯುವಕ ಒಂದು ದಿಬ್ಬದ ಬಳಿ ಬಂದು ಹೆಗಲ ಮೇಲಿದ್ದ ತಾಯಿಯನ್ನು ಕೆಳಗಿಳಿಸಿದ ಹಾಗೂ ಅಮ್ಮಾ ನೀನು ಗಿಡದ ಎಲೆಗಳನ್ನು ಹರಿದು ರಸ್ತೆಯ ಬದಿಯಲ್ಲಿ ಎಸೆಯುತ್ತಿದ್ದುದನ್ನು ನೋಡಿದೆ. ಅದೇಕೆ ಎಲೆಗಳನ್ನು ಬಿಸಾಡುತ್ತಿದ್ದೆ ಎಂದು ಕೇಳಿದ.
‘ನನ್ನ ಪ್ರೀತಿಯ ಮಗನೇ, ಎಲೆಗಳನ್ನು ಎಸೆಯುತ್ತಿದ್ದುದು ನಿನಗಾಗಿ. ನೀನು ನನ್ನನ್ನು ಇಲ್ಲಿ ಬಿಟ್ಟು ಮನೆಗೆ ಮರಳುವಾಗ ಈ ಘನ ಅರಣ್ಯದಲ್ಲಿ ನಿನಗೆ ಪಥ ತಪ್ಪಬಾರದು. ಸರಿಯಾದ ದಾರಿಯಲ್ಲಿ ನೀನು ಚಲಿಸಿ, ಬೇಗ ಮನೆ ತಲುಪಬೇಕು ಎಂದು ದಾರಿಗುಂಟ ಗುರುತಿಗಾಗಿ ಎಲೆಗಳನ್ನು ಚೆಲ್ಲುತ್ತಿದ್ದೆ ಎಂದು ಹೇಳಿ, ನನ್ನ ಮುದ್ದಿನ ಮಗನೇ ಬೇಗ ಮನೆಗೆ ಹೋಗು. ಕಾಡು ಪ್ರಾಣಿಗಳು ಕಂಡರೆ ನಿನಗೆ ತೊಂದರೆಯಾಗಬಹುದು. ನಿನ್ನ ಪತ್ನಿಗೆ, ನನ್ನ ಮುದ್ದಿನ ಮೊಮ್ಮಗನಿಗೆ ನನ್ನ ಶುಭಾಶಯ. ನಿಮಗೆ ದೇವರ ದಯೆ ಸದಾ ಲಭಿಸಲಿ’ ಎಂದು ನುಡಿಗಳು ತಾಯಿ.
ಮಮತೆಯ ಮಾತೆಯ ಮಾತು ಕೇಳಿದಾಗ ಮಗನಿಗೆ ಉಮ್ಮಳ ತಡೆಯಲಾಗಲಿಲ್ಲ. ಮಾತೆಯ ಪಾದಗಳಿಗೆ ವಂದಿಸಿದ, ಕ್ಷಮೆ ಯಾಚಿಸಿದ. ಅಮ್ಮಾ, ನನ್ನ ಹೆತ್ತಮ್ಮಾ, ಪ್ರೀತಿಯಿಂದ ಸಾಕಿದ, ಪೋಷಿಸಿದ ನಿನ್ನನ್ನು ಇಲ್ಲಿ ಬಿಟ್ಟು ಹೋಗಲಾರೆ ಎಂದ. ತಾಯಿಯನ್ನು ಎತ್ತಿಕೊಂಡು, ತೋಳಿನ ಮೇಲಿಟ್ಟುಕೊಂಡು ಮನೆಗೆ ಬಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.