ಪ್ರಿಯ ತಥಾಗತರೇ
ಈ ನೆಲ ನೋಡಿದಾಗಲೆಲ್ಲ
ಧ್ಯಾನಸ್ಥ ನಿಮ್ಮ ಮುಖ ನೆನಪಾಗುತ್ತದೆ
ಕಾಲಿಡಲಿ ಹೇಗೆ? ಅಲ್ಲಿ
ಆಗ, ನನ್ನ ಪಾದಗಳು ಕೈಗಳೆಂದು ತಿಳಿಯುತ್ತೇನೆ
ಈ ಪಾದ, ಕೈಗಳನ್ನು ಬಿಟ್ಟು
ಕಣ್ಣುಗಳಿಂದ ಆಕಾಶವನ್ನು ದಿಟ್ಟಿಸಿದೆ.
ಮೊಗೆ ಮೊಗೆದು ಸುರಿಯುವ ಬೆಳದಿಂಗಳು
ಮಳೆಯ ಸ್ನಾನ.
ಆದರೂ ಕೊಳೆ ಹೋಗುತ್ತಿಲ್ಲ
ಎಷ್ಟೋ ಪೂರ್ಣಿಮೆಗಳು ಕಳೆದುಹೋದವು
ಪಾಚಿಗಟ್ಟಿದ ಮೆದುಳಲ್ಲಿ
ಸಾಕು ಸೂಜಿ ಮೊನೆ ಗಾತ್ರದ ಬೆಳಕು
ನೋಡುತ್ತಲೇ ಇದ್ದೇನೆ. ಮಗುವಾಗಿ
ನಿಮ್ಮ ತೊಡೆಯ ಮೇಲೆ ಮಲಗಿ
ತಾಯ ಮುಖವನ್ನು ನೋಡಿದ ಹಾಗೆ
ಮುಗುಳ್ನಗೆಯಲ್ಲಿ ಮುಳುಗಿ ಹೋಗಲು
ಇಲ್ಲೊಂದು ಅರಳಿ ಮರ ಇದೆ
ಮರದಿಂದ ಬಿದ್ದ ಎಲೆಗಳ
ಹಿಡಿದು ನೋಡುತ್ತೇನೆ, ಅದು ನಿಮ್ಮ
ಮೃದು ಹಸ್ತದಂತೆ. ಗೆರೆಗಳು ನದಿಗಳ ಹಾಗೆ
ಪಾದದ ಹಾಗೆ, ಹೃದಯದ ಹಾಗೆ,
ಹೀಗೆಲ್ಲಾ ಲೋಕವನ್ನು ಸಂತೈಸುವ
ಮಳೆಯ ಹಾಗೆ, ಎಲೆಯ ತುದಿಯ ತೊಟ್ಟಿನಲ್ಲಿ
ನೆಲಕ್ಕೆ ಬೀಳಲು ನಿಂತ ಹನಿಯ ಹಾಗೆ.
ಎಷ್ಟು ಗುಡಿಸಿದರೂ ಈ ಬೀದಿಯ ಕಸ
ಮುಗಿಯುತ್ತಿಲ್ಲ, ಈಗ ನಾನೇ ಬೀದಿಯಾಗಿದ್ದೇನೆ
ಅಲ್ಲಿ ನಿಮ್ಮ ಪಾದ ಬೆಳೆಸಬೇಕು
ನನ್ನ ದೇಹ ಹೂವಾಗಬೇಕು
ಎಷ್ಟುದಿನ ಹೀಗೆ ಕುಳಿತಿರುತ್ತೀರಿ
ಧ್ಯಾನಸ್ಥರಾಗಿ
ಬನ್ನಿ ನಮ್ಮೊಡನೆ ಮುಗಿದಿಲ್ಲ ನಿಮ್ಮ ಪ್ರಯಾಣ
ಆನಂದನನ್ನು ಕರೆಯಿರಿ
ಭಿಕ್ಷೆ ಬೇಡಲು ಹೋಗಬೇಕು
ಬರಲು ಸಿದ್ದನಿದ್ದೇನೆ ನಿಮ್ಮೊಡನೆ
ನನ್ನ ಕೈಗೆ ಪಿಂಡಪಾತ ಕೊಡಿ
ಬನ್ನಿ ಹೋಗೋಣ ಭಿಕ್ಷೆ ಬೇಡಲು
ಜೀವ ಹರಣಗಳು ನಿಲ್ಲದ
ಪ್ರೀತಿ ಇಲ್ಲದ ನಾಡಿನಲ್ಲಿ
ಮುಗುಳ್ನಗೆಯ ಜೋಳಿಗೆ ಹಿಡಿದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.