‘ಬಾರೆ ದಿವ್ಯ ಆಟ ಆಡಿದ್ದು ಸಾಕು. ಕತ್ತಲಾಗ್ತಿದೆ, ಮನೆಗೋಗೋಣಾ’.
‘ಇರೇ ಸ್ವಲ್ಪ, ಇನ್ನೊಂದೆರಡು ರೌಂಡ್ ಇದರಲ್ಲಿ ತಿರುಗ್ತೀನಿ. ತಿರುಗ್ಸೇ ಪ್ರಾರ್ಥನ’
‘ಬೇಡಾ ಲೇಟಾದ್ರೆ ಅಮ್ಮ ಬೈಯ್ತಾರೆ ಬಾ...’
ಎರಡು ನಿಮಿಷ ಕೂತ್ಕೊಂಡು ಹೋಗೋಣ ಎನ್ನುತ್ತಾ ದಿವ್ಯಾಳ ಕೈ ಹಿಡಿದೆಳೆಯುತ್ತಾ ಪ್ರಾರ್ಥನಾ ಪಾರ್ಕಿನ ಕಲ್ಲು ಬೆಂಚಿನ ಮೇಲೆ ಕುಳಿತಳು. ಅಷ್ಟರಲ್ಲೇ ಅಲ್ಲಿಗೆ ಟೋಪಿತಾತ ವಾಕಿಂಗ್‌ಗೆ ಬಂದರು. ಯಾವಾಗ್ಲೂ ಟೋಪಿ ಹಾಕ್ಕೊಂಡಿರ್ತಾರೆ ಅಂತ ಇವರಿಬ್ಬರು ಅವರನ್ನ ಹಾಗೇ ಕರೀತ ಇದ್ದಿದ್ದು. ಅವರನ್ನು ನೋಡಿ ಇಬ್ಬರಿಗೂ ಖುಷಿ ಆಯ್ತು. ‘ಓಹೋ ಹೋ ಡಿಂಕು ಪಿಂಕು ಬಂದ್ಬಿಟ್ಟಿದ್ದೀರಾ ಇವತ್ತು. ಯಾಕೆ ಕಾಣಿಸ್ತಾ ಇರಲಿಲ್ಲ? ಟೆಸ್ಟ್ ಇತ್ತಾ ಸ್ಕೂಲಲ್ಲಿ?’ ಎನ್ನುತ್ತಾ ವಾಕಿಂಗ್ ಸ್ಟಿಕ್ ಪಕ್ಕದಲ್ಲಿಟ್ಟುಕೊಂಡು ಕಲ್ಲುಬೆಂಚಿನ ಮೇಲೆ ಕುಳಿತರು.
‘ಇಲ್ಲಾ ತಾತ ಮಮ್ಮಿ ಆಟಕ್ಕೆ ಬಿಡಲ್ಲಾ... ನಾನಿವತ್ತು ಅತ್ತು ರಂಪಾಟ ಮಾಡಿದ್ದಕ್ಕೆ ಸ್ವಲ್ಪ ಹೊತ್ತು ಹೋಗಿಬಾ ಅಂದ್ರು’ ಎಂದು ಮುಖ ಊದಿಸಿಕೊಂಡು ಪ್ರಾರ್ಥನಾ ಹೇಳಿದಳು. ‘ನಮ್ಮ ಮಮ್ಮೀನೂ ಅಷ್ಟೇ’ ಅಂತ ದನಿ ಗೂಡಿಸಿದಳು ದಿವ್ಯಾ.
‘ಹೌದಾ..? ನೀವು ಹೋಂ ವರ್ಕೇ ಮಾಡೋಲ್ಲಾ ಅನಿಸುತ್ತೆ. ಅದಕ್ಕೆ ಅಮ್ಮ ಬಯ್ಯೋದು. ಆಟಕ್ಕೆ ಕಳಿಸೊಲ್ಲ ಅನ್ನೋದು. ಏನಿವತ್ತು ಕೊತ್ತಂಬರಿ ಕಟ್ಟು ತರಾ ಇದೆ ನಿನ್ನ ಜುಟ್ಟು’ ಎಂದು ನಗುತ್ತಾ ಅವಳ ಜುಟ್ಟನ್ನು ಅಲುಗಾಡಿಸಿದರು.
‘ಬಿಡಿ ತಾತಾ ಮುಟ್ಟಬೇಡಿ. ಮಮ್ಮಿ ಹೇಳಿದಾರೆ ಯಾವ ಗಂಡಸರಿಗೂ ಮುಟ್ಟಕ್ಕೆ ಬಿಡಬೇಡ ಅಂತ’ ಎಂದು ಹೇಳಿ ಸರ್ರನೆ ಕೂದಲು ಎಳೆದುಕೊಂಡು ದೂರ ಸರಿದಳು. ‘ಹೂಂ ನಮ್ಮಮ್ಮೀನೂ ಹೇಳಿದ್ರೂ ಗಂಡಸ್ರೆಲ್ಲಾ ಅತ್ಯಾಚಾರ ಮಾಡ್ತಾರಂತೆ. ಅದಕ್ಕೆ ಪಕ್ಕದ್ಮನೆ ಅಂಕಲ್ ತೊಡೆ ಮೇಲೆ ಹೋಗಿ ಕೂತ್ಕೋಬೇಡ... ಯಾರ ಮನೆಗೂ ಸೀದಾ ಒಳಗೆ ನುಗ್ಗಬೇಡ ಅಂತ ಏನೇನೋ ಹೇಳ್ತಾರಪ್ಪಾ... ತಾತ, ಅತ್ಯಾಚಾರ ಅಂದ್ರೆ ಏನು?’
ಗರಬಡಿದವರಂತೆ ಕುಳಿತರು ಚಂದ್ರಶೇಖರ ರಾವ್. ಮಗ, ಮಗಳು ಅಮೇರಿಕಾದಲ್ಲಿ ನೆಲೆಸಿದಂದಿನಿಂದ ಮೊಮ್ಮಕ್ಕಳ ನೆನಪಾದಾಗಲೆಲ್ಲಾ ಈ ಮಕ್ಕಳನ್ನು ನೋಡಿ ಖುಷಿ ಪಡ್ತಾ ಇದ್ದರು ಅವರು. ಇವರನ್ನು ಮುದ್ದಿಸಿ ರೇಗಿಸಿ ಮಾಡಿದರೆ ಏನೋ ನೆಮ್ಮದಿ. ದೇವರೇ ಇದಕ್ಕೂ ಸಂಚಕಾರ ಬಂತಾ? ಏನು ಕಾಲ ಬಂತಪ್ಪಾ. ಮಕ್ಕಳ ಮಾತು–ನಗು ಮನಸ್ಸಿಗೆ ಮುದ ನೀಡುತ್ತಿತ್ತು. ಮೊಮ್ಮಕ್ಕಳನ್ನು ಎತ್ತಿ ಆಡಿಸಲಾಗದ ಸಂದರ್ಭಕ್ಕೆ ದುಃಖವಾದಾಗಲೆಲ್ಲ ಈ ಮಕ್ಕಳೊಂದಿಗೆ ನಕ್ಕು ನಲಿದು ಸಮಾಧಾನಪಟ್ಟುಕೊಂಡಿದ್ದರು.
ಮಕ್ಕಳ ಮಾತಿಗೆ ಕಿವಿಕೊಟ್ಟರು ರಾವ್...
‘ಅತ್ಯಾಚಾರ ಅಂದ್ರೆ ಜೋರಾಗಿ ಹೊಡೀತಾರೆ ಅನಿಸುತ್ತೆ ಕಣೆ, ಅವತ್ತು ಟೀವೀಲಿ ತೋರಿಸಿದ್ರಲ್ಲಾ... ಆ ಹುಡುಗಿಗೆ ಅವರ ಪಿ.ಟಿ. ಸಾ ಅತ್ಯಾಚಾರ ಮಾಡಿದ್ರಂತೆ. ಹಾಸ್ಪಿಟಲ್‌ಗೆ ಅಡ್ಮಿಟ್ಮಾಡಿದ್ರು, ಮತ್ತೆ ರಕ್ತ ಬಂತು ಅಂತ ಟೀವೀಲಿ ಹೇಳ್ತಾ ಇದ್ದರು. ಅವಳು ಸರಿಯಾಗಿ ಎಕ್ಸರ್‌ಸೈಜ್ ಮಾಡಿಲ್ಲ ಅನಿಸುತ್ತೆ ಅಲ್ವಾ? ಹೂ, ಅವಳ ಮುಖಾನೆ ತೋರಿಸ್ಲಿಲ್ಲ... ಅವರಮ್ಮನೂ ಅಳ್ತಾ ಇದ್ದರು. ಪಾಪ ಅಲ್ವಾ...’
‘ನಮ್ಮಮ್ಮಿ ಹೇಳಿದ್ರು, ಯಾರಾದ್ರೂ ಗಂಡಸ್ರು ನಿನ್ನ ಎಲ್ಲೆಲ್ಲಾದ್ರೂ ಮುಟ್ಟಿದರೆ ಜೋರಾಗಿ ಹೆಲ್ಪ್ ಹೆಲ್ಪ್ ಅಂತ ಕೂಗಬೇಕು ಅಂತ...,
ತಾತ, ಅತ್ಯಾಚಾರ ಯಾಕೆ ಮಾಡ್ತಾರೆ ಗಂಡಸರು?’
‘ಇಲ್ಲಮ್ಮ, ಎಲ್ಲ ಗಂಡಸರೂ ಹಾಗೆಮಾಡಲ್ಲ. ಕೆಟ್ಟವರು ಮಾತ್ರಾ ಹಾಗ್ಮಾಡ್ತಾರೆ’.
‘ಹೌದಾ ತಾತ. ಮತ್ತೆ ಮಮ್ಮಿ ಹೇಳ್ತಾಳೆ, ಗಂಡಸರು ಪ್ರೀತಿ ಮಾಡಿದ್ರೂ ಹತ್ರ ಹೋಗ್ಬಾರದಂತೆ! ಮುತ್ತು ಕೊಟ್ಟರೆ ಚಾಕಲೇಟ್ ಕೊಟ್ಟರೆ ತಗೋಬಾರದಂತೆ... ಆದರೆ ತಾತ ಮುದ್ದುಮಾಡಿದ್ರೆ ನಮಗೆ ಖುಷಿ ಆಗತ್ತೆ ಅಲ್ವಾ...’
‘ಇಲ್ಲ, ಪುಟಾಣಿಗಳ ಮುದ್ದು ಮಾಡೋವ್ರೆಲ್ಲಾ ಹಾಗೆ ಮಾಡಲ್ಲ’ ಎಂದು ತೊದಲಿದರು ರಾವ್... ಈ ಮಕ್ಕಳಿಗೆ ಅರ್ಥ ಮಾಡಿಸೋದು ಹೇಗೆ?
‘ಆದರೆ ಕೆಟ್ಟವರು ಒಳ್ಳೆಯವರು ಅಂತ ಹೇಗೆ ಗೊತ್ತಾಗುತ್ತೆ? ಮತ್ತೆ ನಂಗೆ ಎಷ್ಟೊಂದು ಸಾರಿ ಪ್ರಶಾಂತು ಮಾಮ, ಅರ್ಜುನಣ್ಣ ಎಲ್ಲ ಮುದ್ದು ಮಾಡ್ತಾರೆ, ಚಾಕಲೇಟ್ ಕೊಡಿಸ್ತಾರೆ, ಅವರಂದ್ರೆ ನಂಗಿಷ್ಟ’ ಪ್ರಾರ್ಥನಾ ಅಳು ಮುಖಮಾಡಿ ಹೇಳಿದಳು.
‘ಇಲ್ಲಮ್ಮಾ ಗೊತ್ತಿರೋರೆಲ್ಲ ಹಾಗ್ಮಾಡಲ್ಲ. ಯಾರಾದ್ರೂ ಸ್ಟ್ರೇಂಜರ್ಸ್ ಇರ್ತಾರಲ್ಲಾ...’
‘ಊಹೂ ತಾತ, ಗೊತ್ತಿರೋರ ಹತ್ರಾನೂ ಹೋಗ್ಬಾರದಂತೆ. ಪ್ರಾರ್ಥನಾ, ನಿಂಗೊತ್ತಾ..? ಸ್ಮಿತಾ ಮಮ್ಮಿ ಅವಳಿಗೆ, ಅವರ ಡ್ಯಾಡಿ ಹತ್ರ ಮಲಕ್ಕೊಳ್ಳೊಕ್ಕೆ ಬಿಡಲ್ವಂತೆ, ಪಾಪ ಅಳ್ತಾ ಇದ್ದಳು’.
‘ಹೌದಾ ನಮ್ಮಮ್ಮೀನೆ ಒಳ್ಯೋರು, ಹಾಗೆಲ್ಲಾ ಮಾಡಲ್ಲ. ಇರು ಮಮ್ಮೀನಾ ಕೇಳ್ತೀನಿ ಇವತ್ತು, ಅತ್ಯಾಚಾರ ಅಂದ್ರೆ ಏನು ಅಂತಾ’.
‘ಹೂಂಕಣೆ ಪ್ರಾರ್ಥನಾ. ನಿಮ್ಮಮ್ಮೀ ಕೈಂಡೂ... ಬಯ್ಯಲ್ಲ. ನಮ್ಮಮ್ಮಿ ಏನಾದ್ರೂ ಕೇಳಿದ್ರೆ ಅದೆಲ್ಲ ಕೇಳ್ಬಾರ್ದು, ಸುಮ್ನೆ ದೊಡ್ಡೋರು ಹೇಳಿದ್ನ ಕೇಳ್ಬೇಕು ಅಂತಾರೆ...’ ಎಂದು ದಿವ್ಯಾ ಮೂತಿ ಉದ್ದ ಮಾಡಿದಳು.
‘ಮಕ್ಕಳೇ, ಕತ್ತಲಾಗ್ತಿದೆ ಮನೆಗೆ ಹೋಗಿ’ ಎಂದರು ರಾವ್ ನಿಟ್ಟುಸಿರು ಬಿಡುತ್ತಾ...
ಪಾರ್ಕಿನಿಂದ ಮನೆಗೆ ಬಂದವಳೇ ಪ್ರಾರ್ಥನಾ ಶೂ ಎಸೆದು ತಾಯಿ ಮಡಿಲ ಸೇರಿದಳು.
‘ಮಮ್ಮಿ ಮಮ್ಮಿ ನಾನಿವತ್ತು ಟೋಪಿತಾತಂಗೆ ಜುಟ್ಟುಮುಟ್ಟಿದ್ದಕ್ಕೆ ರೇಗಿದೆ ಗೊತ್ತಾ? ನೀನೇ ಹೇಳಿದ್ದೆ ಅಲ್ವಾ, ಯಾರಿಗೂ ಮುಟ್ಟಕ್ಕೆ ಬಿಡ್ಬೇಡ ಅಂತಾ, ಗುಡ್ ಹೇಳು ಮಮ್ಮಿ...’
ಮಗಳ ಮುಖ ನೋಡುತ್ತಾ ಧಾರಿಣಿ ನಿರುತ್ತರಳಾದಳು. ಅಯ್ಯೋ ಅಂಕಲ್ ಬೇಜಾರು ಮಾಡ್ಕೋಂಡ್ರೇನೋ ಅಂತ ಒಂದು ಕ್ಷಣ ಪಿಚ್ಚೆನಿಸಿತು. ಆದರೆ ಯಾವ ಹುತ್ತದಲ್ಲಿ ಯಾವ ಹಾವೋ, ಈ ಪುಟ್ಟ ಮಕ್ಕಳಿಗೆ ಹೇಳೋದು ಹೇಗೆ, ಅದು ಎಷ್ಟರ ಮಟ್ಟಿಗೆ ಗ್ರಹಿಸಬಲ್ಲದು. ಗಂಡಸರ ಬಗ್ಗೆ ಅದಕ್ಕೆ ಯಾವ ಭಾವನೆ ಮೂಡಬಹುದು ಎಂದು ಗೊಂದಲಗೊಂಡಳು.
‘ಮಮ್ಮಿ, ಹೇಳು, ಪ್ಲೀಸ ಮಮ್ಮಿ...’– ಗೋಗರೆಯತೊಡಗಿದಳು.
‘ಬಾ ಹೊರಗಡೆ, ಕಟ್ಟೆಮೇಲೆ ಕುಳಿತುಕೊಂಡು ಮಾತಾಡೋಣ’ ಎನ್ನುತ್ತ ಮಗಳನ್ನು ಕರೆದುಕೊಂಡು ಹೊರಗಡೆ ಬಂದಳು. ಹಾಗೆ ಏನೋ ನೆನಪಾದವಳಂತೆ ಮಗಳ ಪೆನ್ನನ್ನು ತಂದಳು. ಕಟ್ಟೆ ಮೇಲೆ ಕುಳಿತುಕೊಳ್ಳುತ್ತಾ, ‘ಈ ಪೆನ್ನಂದ್ರೆ ನಿಂಗಿಷ್ಟ ಅಲ್ವಾ? ಇದನ್ನು ಯಾರಾದ್ರೂ ಹೀಗೆ ನಿಬ್ಬು, ಕ್ಯಾಪು ಎಲ್ಲ ಕಿತ್ತು ಹಾಕಿ ಮುರಿದುಹಾಕಿದ್ರೆ ಏನು ಮಾಡ್ತಿ’ ಎಂದಳು.
‘ಊಂ... ಊಂ... ಕೊಡು. ನನ್ ಪೆನ್ನು ಯಾರಾದ್ರೂ ಹಾಳುಮಾಡಿದ್ರೆ ನಾನು ಹೊಡಿತೀನಿ... ಯಾರಿಗೂ ಮುಟ್ಟಕ್ಕೆ ಬಿಡಲ್ಲ’. ಕಣ್ಣಂಚಿಗೆ ಬಂದ ನೀರನ್ನು ಒಳಗೇ ಇಂಗಿಸಿಕೊಳ್ಳುತ್ತಾ, ‘ನೋಡು ಚಿನ್ನಾ ಅಮ್ಮನ ಕಣ್ಣನ್ನು. ನಿನ್ನನ್ನು ನಿಜವಾಗಿ ಪ್ರೀತಿಮಾಡ್ತಾರಲ್ಲಾ, ಅವರ ಕಣ್ಣಲ್ಲೂ ಹೀಗೆ ಅಮ್ಮನ ತರಾ ಪ್ರೀತಿ ಇರುತ್ತೆ. ಅವರು ನಿಂಗೆ ಕಿರಿಕಿರಿ ಆಗೋ ಹಾಗೆ ಮುಟ್ಟಲ್ಲ. ಅದನ್ನು ಗುಡ್ ಟಚ್ ಅಂತೀವಿ. ನೀನು ಫ್ರಾಕ್ ಹಾಕ್ಕೋಳೋವಾಗ ಯಾರಾದ್ರೂ ನೋಡಿದ್ರೆ, ನಿಂಗೆ ಪಪ್ಪಿ ಶೇಮ್ ಆಗುತ್ತಲ್ಲಾ, ಹಾಗೆ ಯಾರಾದ್ರೂ ಪಪ್ಪಿಶೇಮ್ ಆಗೋ ಹಾಗೆ ಮಾಡಿದ್ರೆ ಅದು ಬ್ಯಾಡ್ ಟಚ್. ಅಂತಹವರಿಗೆ ನೀನು ಮುಟ್ಟಕ್ಕೆ ಬಿಡಬಾರದು’.
‘ಓಹೋಹೋ... ಹಾಗಾದ್ರೆ ಪಪ್ಪ ನನ್ನ ಮುಟ್ಬೋದು ಅಲ್ವಾ?’
‘ಹೌದು. ಪಪ್ಪಾ ನಿನ್ನ ಪ್ರೀತಿ ಮಾಡ್ತಾರೆ ಅಮ್ಮನ ತರಾ.... ಆದ್ರೂ ನೀನೂ ಮುದ್ದಾದ ಗೊಂಬೆ ಕಣೆ ಚಿನ್ನೂ. ನಿನ್ನ ಬಾರ್ಬಿ ಗೊಂಬೆಯನ್ನ ಜೋಪಾನ ನೋಡಿಕೊಳ್ಳುತ್ತೀಯಲ್ಲಾ... ಹಾಗೆ ನಿನ್ನನ್ನೂ ನೀನು ಜೋಪಾನವಾಗಿ ನೋಡ್ಕೋಬೇಕು ನನ್ಕಂದಾ’.
ಅಷ್ಟರಲ್ಲೇ ಕಟ್ಟೆಯ ತುದಿಗಿದ್ದ ನಾಚಿಕೆಮುಳ್ಳಿಗೆ ಕಾಲು ತಗುಲಿ ಎಲೆಗಳನ್ನು ಮುಚ್ಚಿಕೊಂಡಿತು. ‘ನೋಡು ಪುಟ್ಟಿ, ಈ ಎಲೆಗಳನ್ನು ತನಗಿಷ್ಟ ಇಲ್ಲದವರು ಮುಟ್ಟಿದ್ರೆ ತಕ್ಷಣ ಮುಚ್ಚಿಕೊಂಡುಬಿಡುತ್ತೆ’ ಎಂದು ಹೇಳುತ್ತಾ ಎಲ್ಲ ಎಲೆಗಳನ್ನೂ ಮುಟ್ಟಿ ಮುಟ್ಟಿ ಮುಚ್ಚಿಕೊಳ್ಳುವಂತೆ ಮಾಡಿದಳು.
‘ಅದ್ಯಾಕೆ ಮುಚ್ಚಿಕೊಳ್ಳುತ್ತೆ ಗೊತ್ತಾ? ಅದರೊಳಗೂ ನಿನ್ ರೀತೀನೆ ಪುಟಾಣಿ ಮನಸಿರುತ್ತೆ. ಅದಕ್ಕೆ ಪಪ್ಪಿ ಶೇಮ್ ಆದಾಗ ಮುಚ್ಚಿಕೊಂಡುಬಿಡುತ್ತೆ. ಸ್ವಲ್ಪ ಹೊತ್ತಿಗೆ ನೋಡು. ಮತ್ತೆ ಎಲೆ ಅರಳಿಸಿಕೊಂಡು ನಿಲ್ಲುತ್ತೆ. ನಾವೂ ಹಾಗೆ. ಯಾವುದಕ್ಕೂ ಹೆದರದೆ ಮತ್ತೆ ಅರಳಬೇಕು. ಇದೆಲ್ಲಾ ನಿಂಗೆ ದೊಡ್ಡೋಳಾಗ್ತಾ ಆಗ್ತಾ ಗೊತ್ತಾಗುತ್ತೆ. ನೀನು ಜಾಣೆ ಅಲ್ವಾ ನನ್ನ ಹಾಗೆ’.
‘ಹೂಂ.. ಮಮ್ಮಿ. ನಂಗೀಗ್ಲೇ ಗೊತ್ತಾಯ್ತು. ನಾನು ನಿಂಗಿಂತ ಜಾಣೆ’ ಎಂದು ಬೀಗಿದ ಮಗಳ ಮುಖ ನೋಡಿದರೆ ಏನೋ ಎಲ್ಲವೂ ಅರ್ಥವಾದ ಭಾವ... ಹೆಣ್ಣುಮಕ್ಕಳಿಗಷ್ಟೇ ಸಾಧ್ಯವಾಗುವ ಒಂದು ಪ್ರಬುದ್ಧ ಕಳೆ ಮಿಂಚಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.