ಸ್ವಾತಂತ್ರ್ಯಪೂರ್ವದ ಒಂದು ಘಟನೆ. ಮೈಸೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ವಿಶೇಷ ಸಮಾರಂಭ. ಕಾರ್ಯಕ್ರಮದ ಮುಖ್ಯ ಅತಿಥಿ ಎಂ. ವಿಶ್ವೇಶ್ವರಯ್ಯ! ವಾತಾವರಣದ ತುಂಬೆಲ್ಲ ಸಡಗರವೋ ಸಡಗರ.
ಸಮಯಕ್ಕೆ ಸರಿಯಾಗಿ ವಿಶ್ವೇಶ್ವರಯ್ಯನವರ ಕಾರು ಕಾಲೇಜಿನ ಆವರಣದಲ್ಲಿ ಬಂದು ನಿಂತಿತು. ಒಬ್ಬ ಉತ್ಸಾಹಿ ವಿದ್ಯಾರ್ಥಿ ಓಡಿಹೋಗಿ ಕಾರಿನ ಬಾಗಿಲನ್ನು ಭಯ-ಭಕ್ತಿಯಿಂದ ತೆರೆದ. ವಿಶ್ವೇಶ್ವರಯ್ಯ ನಗುನಗುತ್ತಾ ಕೆಳಗಿಳಿದರು.
ಎಲ್ಲರಿಗೂ ಕೈಮುಗಿದು ನೇರವಾಗಿ ವೇದಿಕೆಗೆ ತೆರಳಿ ಆಸೀನರಾದರು. ಯಾವುದೋ ಕಾರ್ಯಕ್ಷೇತ್ರದಿಂದ ನೇರವಾಗಿ ಅಲ್ಲಿಗೆ ಆಗಮಿಸಿದ್ದ ಅವರು ಬಹಳ ಬಳಲಿದ್ದರು. ಉದ್ದಕ್ಕೂ ತಮ್ಮಂದಿಗೇ ಇದ್ದ ವಿದ್ಯಾರ್ಥಿಯನ್ನು, `ಮಗು,ಒಂದು ಲೋಟ ನೀರು ಕೊಡುತ್ತೀಯಾ?~ ಎಂದು ಕೇಳಿದರು.
ಆ ವಿದ್ಯಾರ್ಥಿಗೋ ಗಣ್ಯವ್ಯಕ್ತಿಯನ್ನು ಉಪಚರಿಸಲು ವಿಪರೀತ ಹುಮ್ಮಸ್ಸು! ನೀರು ಯಾಕೆ? ಎಳನೀರನ್ನೇ ಕೊಡೋಣ ಎಂದು ಕೂಡಲೇ ಒಂದು ಎಳನೀರನ್ನು ಕೆತ್ತಿಸಿಕೊಂಡು ಬಂದ. ಎಳನೀರಿನ ಲೋಟವನ್ನು ಅವರ ಮುಂದೆ ಹಿಡಿದು `ಸರ್, ಎಳನೀರು! ದಯಮಾಡಿ ತೆಗೆದುಕೊಳ್ಳಿ~ ಎಂದು ವಿನಂತಿಸಿಕೊಂಡ.
ವಿಶ್ವೇಶ್ವರಯ್ಯ ಮುಗುಳ್ನಕ್ಕರು. ಆ ವಿದ್ಯಾರ್ಥಿಯ ಭುಜ ನೇವರಿಸಿ ಹೇಳಿದರು- `ಎಳನೀರನ್ನು ಖಂಡಿತ ತೆಗೆದುಕೊಳ್ತೀನಿ. ಮೊದಲು ನೀರು ಕೊಡು ಮಗು~.
***
`ಮನುಷ್ಯ ಸುಮ್ಮನೆ ಕೂತಿರಲೇಬಾರದು ಇದರಿಂದ ಅವನಿಗೂ ಕೆಡುಕು; ದೇಶಕ್ಕೂ ಹಾನಿ!~ ಎನ್ನುವುದು ವಿಶ್ವೇಶ್ವರಯ್ಯನವರ ಜೀವನದರ್ಶನ. `ತುಕ್ಕು ಹಿಡಿದು ಹೋಗಬೇಡ; ತೇದುಹೋಗು~ ಅನ್ನುವುದು ಅವರ ಉಸಿರಿನ ಮಾತು. ಒಂದು ಸಾರಿ ಅವರ ಗೆಳೆಯರೊಬ್ಬರು ಕೇಳಿದರಂತೆ `ನಿಮ್ಮ ಜೀವನದ ಹಂಬಲ ಏನು?~
ವಿಶ್ವೇಶ್ವರಯ್ಯನವರು ಸರಾಗವಾಗಿ ಹೇಳಿದರು- `ನನ್ನ ಜೀವ ಹೊರಟುಹೋಗುವ ಕ್ಷಣದಲ್ಲಿ ಕೂಡ ನಾನು ಕೆಲಸ ಮಾಡುತ್ತಿರಬೇಕು. ಇದೇ ನನ್ನ ಹಿರಿಯಾಸೆ~.
ವಿಶ್ವೇಶ್ವರಯ್ಯನವರನ್ನು `ಜೀನಿಯಸ್~ ಅನ್ನುತ್ತೇವೆ. ಆದರೆ ಈ ಶಬ್ದಕ್ಕೆ ಸ್ವತಃ ಅವರೇ ನೀಡುವ ವ್ಯಾಖ್ಯಾನ ಸ್ವಾರಸ್ಯಕರ. ಅವರ ಪ್ರಕಾರ ಜೀನಿಯಸ್ ಅಂದರೆ `ಅಪಾರವಾಗಿ ದುಡಿಯಲು ಇರುವ ಶಕ್ತಿ!~.
***
ವಿಶ್ವೇಶ್ವರಯ್ಯನವರು ನಿಧನರಾಗುವ ಕೆಲವೇ ದಿನಗಳ ಮುನ್ನ ಅವರ ಸಂದರ್ಶನವೊಂದು ನಡೆಯಿತು. ಸಂದರ್ಶಕರು ಒಂದು ಪ್ರಶ್ನೆ ಕೇಳಿದರು. `ಸರ್, ತಮ್ಮ ಮುಂದಿನ ಗುರಿ ಏನು?~
ಉತ್ತರ: `ಇಂಥದ್ದೇ ಇನ್ನೂ ನೂರು ವರ್ಷಗಳನ್ನು ನಾನು ಕೆಲಸ ಮಾಡುತ್ತಾ ಕಳೆಯಬೇಕು~.
***
ಮೈಸೂರಿನ ಮಹಾರಾಜರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸಿಕೊಂಡ ಸಂದರ್ಭ. ಆಗ ಅವರು ಮಹಾರಾಜರಿಗೆ ಹೇಳಿದ ಮಾತುಗಳು-
ಮಹಾಸ್ವಾಮಿ, ತಾವು ನನಗೆ ಹೆಚ್ಚಿನ ಪದವಿಯನ್ನು ದಯಪಾಲಿಸಿದ್ದೀರಿ.
ಧನ್ಯವಾದಗಳೊಂದಿಗೆ ನಾನು ಒಂದು ಮಾತನ್ನು ಅರಿಕೆ ಮಾಡಬೇಕಾಗಿದೆ. ನನ್ನ ಈ ಮಾತನ್ನು ವಿನಯದ ನಟನೆ ಎಂದು ತಾವು ಭಾವಿಸುವುದಿಲ್ಲ ಎಂಬ ನಂಬಿಕೆ ನನಗಿದೆ. ನಾನು ಬಯಸುವುದೆಲ್ಲ ಕೆಲಸ ಮಾಡುವುದಕ್ಕೆ ಒಂದು ಅವಕಾಶ ಮಾತ್ರ.
ಮಹಾಸ್ವಾಮಿಯವರು ಕೃಪೆ ಮಾಡಿ ನನಗೆ ವಹಿಸಿರುವ ಈ ಉನ್ನತ ಸ್ಥಾನದಲ್ಲಿ ನಾನು ಅಪೇಕ್ಷಿಸಬಹುದಾದ ಎಲ್ಲ ಕಾರ್ಯಾವಕಾಶ ನನಗೆ ದೊರಕಿದೆ. ಇದರ ಹೊರತು ಬೇರೆ ಯಾವುದೇ ಪ್ರಯೋಜನವನ್ನೂ ನಾನು ಬಯಸುವುದಿಲ್ಲ. ನನ್ನ ನಾಡಿಗೆ ಮತ್ತು ನನ್ನ ಪ್ರಭುವಿಗೆ ಸೇವೆ ಸಲ್ಲಿಸುವ ಸಂತೋಷ ನನಗೆ ಸಾಕು. ಅವರ ಯೋಗಕ್ಷೇಮ ನನ್ನ ನಿರಂತರ ಚಿಂತನೆಯ ವಿಷಯವಾಗಿರುತ್ತದೆ.
***
ಸ್ವಾತಂತ್ರ್ಯಪೂರ್ವ ಸಂದರ್ಭ. ರೈಲು ನಿಲ್ದಾಣವೊಂದರಲ್ಲಿ ವಿಶ್ವೇಶ್ವರಯ್ಯನವರು ರೈಲಿಗಾಗಿ ಕಾದಿದ್ದರು. ಅವರು ಒಂದೇ ಒಂದು ಕ್ಷಣವನ್ನೂ ದುಂದು ಮಾಡುವವರು ಅಲ್ಲವಲ್ಲ! ಹಾಗಾಗಿ ಅಲ್ಲೇ ಅತ್ತಿಂದಿತ್ತ ಇತ್ತಿಂದತ್ತ ಗಂಭೀರವಾಗಿ ಸುಳಿದಾಡುತ್ತಲೇ ನಿಲ್ದಾಣದಲ್ಲಿ ಇದ್ದವರೊಂದಿಗೆ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದರು.
ಆಗ ಭಾರತ ಸ್ವತಂತ್ರವಾಗುವ ಮಾತು ಅಲ್ಲಿ ಬಂತು. ಯಾರೋ ಒಬ್ಬರು ಆತಂಕದಿಂದ ನುಡಿದರು- `ನಮ್ಮ ದೇಶ ಸ್ವತಂತ್ರವಾಗಲು ನಾವು ಇನ್ನೆಷ್ಟು ಕಾಲ ಕಾಯಬೇಕೋ?~. ವಿಶ್ವೇಶ್ವರಯ್ಯ ಥಟ್ಟನೆ ಹೇಳಿದರು- `ನಿರಾಶೆ ಯಾಕೆ? ಕಾಲವನ್ನು ನಾವು ಗಳಿಗೆಗಳಿಂದ, ಗಂಟೆಗಳಿಂದ ಅಳೆಯುವವರಲ್ಲ. ಕಲ್ಪಗಳು, ಯುಗಗಳಿಂದ ಅಳೆಯುವವರು~.
ಎಂ. ವಿಶ್ವೇಶ್ವರಯ್ಯ
(ಸೆ. 15, 1861 - ಏ. 14, 1962)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.