ADVERTISEMENT

ಯುವ ಪೋಷಕರಿಗೆ ಒಂದು ಮಾತು...

ಡಾ.ಆಶಾ ಬೆನಕಪ್ಪ
Published 11 ನವೆಂಬರ್ 2017, 19:30 IST
Last Updated 11 ನವೆಂಬರ್ 2017, 19:30 IST
ಚಿತ್ರ: ಶಿವು.ಕೆ
ಚಿತ್ರ: ಶಿವು.ಕೆ   

ಈಗಿನ ಮಕ್ಕಳಿಗೆ ಬುದ್ಧಿ ಹೇಳುವವರು ತಾಯಿಯರು. ಅವರಿಗೆ ಬುದ್ಧಿ ಕಲಿಸಿದವರು ಆ ಮಕ್ಕಳ ಅಜ್ಜಿಯಂದಿರು. ತಂತ್ರಜ್ಞಾನ ಬದುಕನ್ನು ವಿಪರೀತವಾಗಿ ವ್ಯಾಪಿಸಿಕೊಂಡಿರುವ ದಿನಗಳಿವು. ತಾಂತ್ರಿಕತೆ, ಗ್ಯಾಜೆಟ್‍ಗಳೇ ಎಲ್ಲ ಎಂಬ ಭಾವನೆ ಗಾಢವಾಗಿಬಿಟ್ಟಿದೆ. ಆದರೆ, ಸಂಸ್ಕೃತಿಯ ಬೇರುಗಳು ಮುಖ್ಯ ಎನ್ನುವುದನ್ನು ಎಷ್ಟೋ ಜನ ಅರ್ಥಮಾಡಿಕೊಳ್ಳುತ್ತಿಲ್ಲ.

ಕಳೆದ ಮಂಗಳವಾರ ಪ್ರೌಢಾವಸ್ಥೆಯ ಮಕ್ಕಳ ದಿನಾಚರಣೆ ಮಾಡಿದೆವು. ಆ ದಿನ ನನ್ನನ್ನು ಕಾಣಲೆಂದು ತಾಯಿಯೊಬ್ಬಳು ಮಗುವನ್ನು ಕರೆದುಕೊಂಡು ಬಂದಿದ್ದಳು. ಒಂದು ವರ್ಷ ಮೂರು ತಿಂಗಳ ಮಗು ಅದು. ನನಗಾಗಿ ಹೊರಗೆ ತಾಯಿ-ಮಗು ಕಾಯುತ್ತಾ ಇದ್ದರು. ಎಲ್ಲೋ ನನಗೆ ರೈಮ್ಸ್ ಕೇಳಿಸಿದಂತಾಯಿತು. ನೋಡಿದರೆ, ಆ ಮಗುವಿನ ಕೈಯಲ್ಲಿ ಮೊಬೈಲ್. ಅದರಲ್ಲಿ ಕಾರ್ಟೂನ್‍ಗಳು ರೈಮ್ಸ್ ಹೇಳುತ್ತಿದ್ದವು. ಆ ತಾಯಿ ಲ್ಯಾಪ್‍ಟಾಪ್‍ನಲ್ಲಿ ಏನೋ ಕೆಲಸ ಮಾಡಿಕೊಳ್ಳುತ್ತಿದ್ದಳು.

ಶಾಲೆಯಿಂದ ವಿಮುಖರಾಗುವ, ಮಾದಕವಸ್ತುಗಳ ಚಟಕ್ಕೆ ಬೀಳುವ, ವಿಪರೀತ ಕ್ರುದ್ಧರಾಗಿ ವರ್ತಿಸುವ ಮಕ್ಕಳ ಬಗೆಗೆ ಪ್ರೌಢಾವಸ್ಥೆ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದೆವು. ನನಗೆ ಇಂಥ ಸಮಸ್ಯೆಗಳ ಮೂಲ ಇರುವುದು ತಾಯ್ತನದಲ್ಲಿ ಎನಿಸಿತು. ಮೊಬೈಲ್ ಹಿಡಿದ ಮಗು, ಲ್ಯಾಪ್‍ಟಾಪ್ ಹಿಡಿದ ಅಮ್ಮ - ಇಬ್ಬರೂ ಈ ಕಾಲದ ಪ್ರತಿಮೆಗಳು. ಮಗುವಿಗೆ ಬೇಕಿರುವುದು ಅಮ್ಮನ ಸ್ಪರ್ಶ. ಅವಳ ಎದೆಹಾಲಿನ ಪೋಷಕಾಂಶ. ಪರಸ್ಪರ ಕಣ್ಣುಗಳನ್ನು ಕೀಲಿಸುವಷ್ಟು ಮಮಕಾರ. ಇವ್ಯಾವುದೂ ಸಿಗದೇ ಇದ್ದರೆ ಮಗು ಮುಂದೆ ಮನುಷ್ಯತ್ವ ಕಳೆದುಕೊಳ್ಳುತ್ತದೆ.

ADVERTISEMENT

ಮನುಷ್ಯತ್ವದ ಬೇರುಗಳಿರುವುದು ತಾಯ್ತನದಲ್ಲಿ. ಅಜ್ಜಿ ಕೂಡ ತಾಯ್ತನದ ಕೊಂಡಿಯೇ. ಬಾಣಂತನ ಮಾಡುವ ಈಗಿನ ಅಜ್ಜಿಯಂದಿರಿಗೂ ಮಗಳಿಗೆ ಹೇಗೆ ಹಾಲು ಕುಡಿಸಬೇಕು ಎಂದು ಹೇಳಿಕೊಡುವ ಜ್ಞಾನವಿಲ್ಲ. ಮಗುವಿನ ಪೋಷಕಾಂಶಕ್ಕೆ ಯಾವ ಆಹಾರಕ್ರಮ ಸರಿ ಎಂಬ ಅರಿವಿಲ್ಲ. ಅಮ್ಮಂದಿರು ಕೆಲಸ, ಗ್ಯಾಜೆಟ್‍ಗಳ ದಾಸಿಯರಾದರೆ, ಅಜ್ಜಿಯಂದಿರು ಟಿ.ವಿ. ಧಾರಾವಾಹಿಯ ವ್ಯಸನದಲ್ಲಿ ಮುಳುಗಿದ್ದಾರೆ.

ವಾಯುವಿಹಾರಕ್ಕೆ ಹೋಗುವ ಅಜ್ಜಿ ಮೊಮ್ಮಗುವನ್ನು ಕರೆದುಕೊಂಡು ಹೋಗಬೇಕು. ಅದಕ್ಕೆ ಕಥೆ ಹೇಳಬೇಕು. ಅದರ ಜೊತೆ ಮಾತನಾಡುತ್ತಾ ಊಟ ಮಾಡಿಸಬೇಕು. ಈಗ ಯಾರು ನೋಡಿದರೂ ‘ಟೈಮ್ ಇಲ್ಲ’ ಎನ್ನುತ್ತಾರೆ. ಹಾಗಿದ್ದರೆ ಮಕ್ಕಳನ್ನು ಯಾಕೆ ಹಡೆಯಬೇಕು?

ಯಾಂತ್ರಿಕವಾಗಿರುವ ಬದುಕನ್ನು ಮರುಶೋಧಿಸಬೇಕಿದೆ. ಶ್ರೀಮಂತ ಕುಟುಂಬಗಳ ಅಮ್ಮಂದಿರು, ಅಜ್ಜಿಯರಂತೂ ‘ಗೂಗಲ್ ಮದರ್ಸ್’, ‘ಗೂಗಲ್ ಡಾಕ್ಟರ್ಸ್’ ಆಗಿಬಿಟ್ಟಿದ್ದಾರೆ. ಎಲ್ಲ ಸಮಸ್ಯೆಗಳಿಗೂ ಅವರು ಗೂಗಲ್ ಮಾಡುತ್ತಲೇ ಪರಿಹಾರ ಹುಡುಕುತ್ತಾರೆ.

ನನಗೆ ಇದಕ್ಕೆ ಅಪವಾದ ಎನ್ನುವಂಥ ಮಾದರಿಯ ಅಮ್ಮಂದಿರು ಢಾಳಾಗಿ ಕಾಣುತ್ತಲೇ ಇಲ್ಲ. ಸೆಲೆಬ್ರಿಟಿಗಳ ಕಥೆಯೂ ಅಷ್ಟೇ. ಐಶ್ವರ್ಯಾ ರೈ ಆಗಲೀ, ಕರೀನಾ ಕಪೂರ್ ಆಗಲೀ ಮಗುವಿಗೆ ಹಾಲುಣಿಸಲಿಲ್ಲ. ನಾನು 33 ವರ್ಷಗಳಿಂದ ಎದೆಹಾಲಿನ ಮಹತ್ವ ಹೇಳಿಕೊಂಡು ಬಂದವಳು. ಇವತ್ತು ಹುಟ್ಟುವ 2 ಕೋಟಿ 60 ಲಕ್ಷ ಮಕ್ಕಳಲ್ಲಿ 1 ಕೋಟಿ 40 ಲಕ್ಷ ಮಕ್ಕಳಿಗೆ ಡಬ್ಬದ ಹಾಲು ಕೊಡುತ್ತಾರೆ. ಹಾಲು ಕುಡಿಸುವುದರ ಮಹತ್ವ ಈ ಆಧುನಿಕ ಕಾಲದಲ್ಲಿಯೂ ಗೊತ್ತಿಲ್ಲದೇ ಇರುವುದು ದುರಂತ.

ಈಗ ವಿಭಕ್ತ ಕುಟುಂಬಗಳಿವೆ. ಆಹಾರ ಸಂಸ್ಕೃತಿ ಬದಲಾಗಿದೆ. ನಾವೆಲ್ಲಾ ರವೆಉಂಡೆ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ತಿನ್ನುತ್ತಿದ್ದೆವು. ಕುರುಕಲು ಈಗ ಬದಲಾಗಿದೆ. ಪಿಜ್ಜಾ ಬಂದಿದೆ. ಎಷ್ಟೋ ತಾಯಂದರಿಗೆ, ತಂದೆಯರಿಗೆ ಅಡುಗೆ ಮಾಡಲು ಬರುವುದಿಲ್ಲ. ಅಜ್ಜಿಯರೂ ಆಸಕ್ತಿ ಕಳೆದುಕೊಂಡಿದ್ದಾರೆ. ಎಷ್ಟೋ ಸರ್ಕಾರೇತರ ಸಂಸ್ಥೆಗಳು ನಮ್ಮ ಸಂಸ್ಕೃತಿಯನ್ನೇ ಮರಳಿ ತರಲು ಯತ್ನಿಸುತ್ತಿರುವುದು ಇದೇ ಕಾರಣಕ್ಕೆ.

‘ಎಬಿಸಿಡಿ’ ಎಂಬ ವ್ಯಂಗ್ಯವೊಂದಿದೆ. ಅದರ ಅರ್ಥ: ಅಮೆರಿಕನ್ ಬಾರ್ನ್ ಕನ್ಫೂಸ್ಡ್ ದೇಸೀಸ್’. ಅದನ್ನೇ ತುಸು ಬದಲಿಸಿ, ‘ಇಂಡಿಯನ್ ಬಾರ್ನ್ ಕನ್ಫೂಸ್ಡ್ ದೇಸೀಸ್’ ಎಂದು ಹೇಳಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಪಾಶ್ಚಾತ್ಯ ಸಂಸ್ಕೃತಿ ಅಳವಡಿಸಿಕೊಂಡರೆ ಎಲ್ಲವೂ ಸರಿಹೋಗುತ್ತದೆ ಎಂದು ಭಾವಿಸಿದ್ದೆವು. ಈಗ ಅದೂ ಸುಳ್ಳಾಗಿದೆ. ಗೊಂದಲಗಳು ಹೆಚ್ಚಾಗಿವೆ.

ತಾಯ್ತನ ವಿಶೇಷವಾದ ಜವಾಬ್ದಾರಿ. ಮಕ್ಕಳಿಗೆ ಗುಣಮಟ್ಟದ ಸಮಯ ಕೊಡಬೇಕು. ಮನೆಯಲ್ಲಿ ಮಗುವನ್ನು ಸುಮ್ಮನೆ ಕೂರಿಸಿ, ಟಿ.ವಿ. ನೋಡುತ್ತಾ ಕಳೆದುಹೋಗುವುದಲ್ಲ. ಮಕ್ಕಳನ್ನು ಮುದ್ದು ಮಾಡಬೇಕು. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಮಾತನಾಡಿಸಬೇಕು. ಅಜ್ಜಿಯನ್ನೋ ತಾತನನ್ನೋ ಕಂಡಾಕ್ಷಣ ಮಗು ಓಡಿಹೋಗಿ ತಬ್ಬಿಕೊಳ್ಳಬೇಕು; ಅಂಥ ಕಕ್ಕುಲತೆ ಮೂಡಬೇಕು. ಎಲ್ಲ ಮಕ್ಕಳೂ ಹುಟ್ಟುವಾಗ ಒಂದೇ ತರಹ ಇರುತ್ತಾರೆ. ಅವು ಬೆಳೆಯುವ ವಾತಾವರಣ ಭವಿಷ್ಯವನ್ನು ನಿರ್ಧರಿಸುವುದಷ್ಟೆ.

ತಂದೆಯ ಜವಾಬ್ದಾರಿಯೂ ಇದರಲ್ಲಿ ಮುಖ್ಯ. ಈಗ ‘ಶೇರ್ಡ್ ಪೇರೆಂಟಿಂಗ್’ ಅಥವಾ ‘ಹಂಚಿಕೊಂಡ ಪೋಷಕತ್ವ’ ಮುಖ್ಯವಾಗಿದೆ. ಅಪ್ಪ, ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ ಎಂದಿಟ್ಟುಕೊಳ್ಳಿ. ಕೆಲಸಗಳನ್ನಷ್ಟೇ ಅಲ್ಲದೆ, ಮಗುವಿನ ಲಾಲನೆ-ಪಾಲನೆಯನ್ನೂ ಅವರು ಹಂಚಿಕೊಳ್ಳಬೇಕು. ಅಮ್ಮ ತಿಂಡಿ ತಿನಿಸಿದರೆ, ಅಪ್ಪ ಊಟ ಮಾಡಿಸಬೇಕು. ಬೇಸಿಗೆ ರಜೆ ಬಂದರೆ, ಮಗುವಿನ ಶಾಲೆಗೆ ರಜಾ. ಆಗ 15 ದಿನ ಅಪ್ಪನೂ, 15 ದಿನ ಅಮ್ಮನೂ ರಜಾ ಹಾಕಿ ಆ ಮಗುವಿನ ಜೊತೆ ಇರಬೇಕು.

‘ದಿ ಮೆನ್ ಹೂ ರೇಪ್’ ಎಂಬ ಇಂಗ್ಲಿಷ್ ಪುಸ್ತಕವೊಂದಿದೆ. ಅತ್ಯಾಚಾರಿಗಳು ಹೇಗೆ ರೂಪುಗೊಳ್ಳುತ್ತಾರೆ ಎಂಬ ವಿವರ ಅದರಲ್ಲಿದೆ. ಸಾಮಾಜಿಕ ಸಮಸ್ಯೆಗಳ ಮೂಲ ಪೋಷಕತ್ವದಲ್ಲೇ ಇದೆ ಎನ್ನುವ ಸತ್ಯ ಅದನ್ನು ಓದಿದರೆ ಅರ್ಥವಾಗುತ್ತದೆ.

ಗ್ಯಾಜೆಟ್‌ಗಳ ಹಂಗಿನಿಂದ ಕಳಚಿಕೊಂಡು, ಸಂಸ್ಕೃತಿಯ ಬೇರಿನ ಸತ್ವದತ್ತ ಚಿತ್ತ ಹರಿದರೆ ಎಷ್ಟೋ ಸಮಸ್ಯೆಗಳು ಮಂಜಿನಂತೆ ಕರಗಿಹೋಗುತ್ತವೆ. 

*


–ಡಾ.ಆಶಾ ಬೆನಕಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.