ADVERTISEMENT

ರಾಜ್ಯೋತ್ಸವಕ್ಕೆ ಪ್ರಜಾವಾಣಿ’ ಬರೆದ ಮುನ್ನುಡಿ

ಪ್ರೇಮಕುಮಾರ್ ಹರಿಯಬ್ಬೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ಕನ್ನಡ ರಾಜ್ಯೋತ್ಸವ ಆಚರಣೆ ಕನ್ನಡಿಗರಿಗೆ ಭಾವನಾತ್ಮಕ ಸಂದರ್ಭ. ಅದು ನವೆಂಬರ್‌ ತಿಂಗಳ ಸಡಗರ, ಸಂಭ್ರಮ. ಕೆಲವರ ಪಾಲಿಗಂತೂ ಅದು ಅಕ್ಷರಶಃ ಸುಗ್ಗಿಕಾಲ. ವರ್ಷವಿಡೀ ಕನ್ನಡದ ಜಾಗಟೆ ಬಾರಿಸುವವರ ಪಾಲಿಗೆ ರಾಜ್ಯೋತ್ಸವ ‘ಯುಗಾದಿ’. ನವೆಂಬರ್‌ ಬಂತೆಂದರೆ ರಾಜ್ಯದ ಉದ್ದಗಲದಲ್ಲಿ ಕನ್ನಡದ ಸದ್ದುಗದ್ದಲ. ಕರ್ನಾಟಕದಲ್ಲಿ ಮಾತ್ರವಲ್ಲ, ಹೊರ ರಾಜ್ಯಗಳಲ್ಲಿ, ಕೆಲ ಹೊರದೇಶಗಳಲ್ಲೂ ಕನ್ನಡೋತ್ಸವದ ಕಲರವ ಕೇಳಿ ಬರುತ್ತದೆ.

ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುವುದು ಕನ್ನಡಾಭಿಮಾನದ ಸಂಕೇತ ಎಂದು ಭಾವಿಸುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಉತ್ಸವ ಆಚರಣೆಗಾಗಿಯೇ ಪ್ರತಿ ವರ್ಷ ಹೊಸ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ ರಾಜ್ಯೋತ್ಸವ ಆಚರಿಸುವುದು ಕೆಲವರ ದಂಧೆಯಾಗಿದೆ.

ಇಂತಹ ವಾತಾವರಣದ ನಡುವೆಯೂ ಕೆಲವು ಸಂಘಟನೆಗಳು ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿವೆ. ನಾಡುನುಡಿಗೆ ದುಡಿದವರನ್ನು ಗುರುತಿಸಿ ರಾಜ್ಯೋತ್ಸವ ವೇದಿಕೆಗಳಿಗೆ ಕರೆತಂದು ಸನ್ಮಾನಿಸುತ್ತಿವೆ. ಕನ್ನಡ ಸಂಘಟನೆಗಳು ಮಾತ್ರವೇ ಅಲ್ಲ, ಸರ್ಕಾರವೂ ದೊಡ್ಡ ಮಟ್ಟದಲ್ಲಿ ರಾಜ್ಯೋತ್ಸವ ಆಚರಿಸುತ್ತಿದೆ. ವರ್ಷದಿಂದ ವರ್ಷಕ್ಕೆ ರಾಜ್ಯೋತ್ಸವದ ಸಂಭ್ರಮ ಇಮ್ಮಡಿಗೊಳ್ಳುತ್ತಿದೆ.

ಅಂದಹಾಗೆ, ರಾಜ್ಯೋತ್ಸವ ಆಚರಿಸುವ ಪರಿಪಾಠ ಆರಂಭವಾದದ್ದು ಯಾವಾಗ? ಮೊದಲ ಆಚರಣೆ ಎಲ್ಲಿ, ಹೇಗೆ ನಡೆಯಿತು? ಆಚರಿಸಿದವರು ಯಾರು? ಇತ್ಯಾದಿ ಅನೇಕ ವಿಚಾರಗಳು ಬಹುತೇಕ ಕನ್ನಡಿಗರಿಗೆ ಗೊತ್ತೇ ಇಲ್ಲ.

ಹಲವು ಆಡಳಿತ ವ್ಯವಸ್ಥೆಗಳಲ್ಲಿ ಹಂಚಿ ಹೋಗಿದ್ದ ಕನ್ನಡಿಗರು ಒಂದು ರಾಜ್ಯದ ವ್ಯಾಪ್ತಿಗೆ ಸೇರಿದ  ಸಂದರ್ಭವನ್ನು ರಾಜ್ಯೋತ್ಸವವನ್ನಾಗಿ ಆಚರಿಸುತ್ತಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕನ್ನಡಿಗರ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು 1956ರ ನವೆಂಬರ್‌ 1ರಂದು. ಭಾರತ ಸರ್ಕಾರ ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಮರುವಿಂಗಡಣೆ ಮಾಡಿದ್ದರಿಂದ ವಿಶಾಲ ಮೈಸೂರು ರಾಜ್ಯ ಉದಯವಾಯಿತು. ಮುಂದೆ ರಾಜ್ಯದ ಹೆಸರು ಕರ್ನಾಟಕ (ನವೆಂಬರ್‌ 1, 1973ರಲ್ಲಿ) ಎಂದಾಯಿತು.

ರಾಜ್ಯೋದಯದ ಸಂಕೇತವಾಗಿ 1956ರ ನವೆಂಬರ್‌ 1ರಂದು ಬೆಳಿಗ್ಗೆ 9 ಗಂಟೆಗೆ ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಎಸ್‌. ನಿಜಲಿಂಗಪ್ಪ ಹಾಗೂ ಅವರ ಸಂಪುಟದ ಸದಸ್ಯರು ಬೆಂಗಳೂರು ಅರಮನೆಯಲ್ಲಿ ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್‌ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹೊಸ ರಾಜ್ಯದ ಉದ್ಘಾಟನೆ ನಡೆದದ್ದು ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ.

ADVERTISEMENT

ಉದ್ಘಾಟಿಸಿದವರು ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌. ಅಂದು ಮಧ್ಯಾಹ್ನ ತಿರುವನಂತರಪುರದಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬಂದ ರಾಷ್ಟ್ರಪತಿಯವರು ಇಳಿಸಂಜೆ 3 ಗಂಟೆ 5 ನಿಮಿಷಕ್ಕೆ ಹೊಸ ರಾಜ್ಯವನ್ನು ಉದ್ಘಾಟಿಸಿದರು. ಸಂಜೆ ಪುರಭವನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿದ್ದರು. ಹೊಸ ರಾಜ್ಯೋದಯದ ಉದ್ಘಾಟನೆ ಸಾಂಕೇತಿಕವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ನಡೆಯಿತು. ಅದಕ್ಕಾಗಿ ಸರ್ಕಾರ ಪ್ರತಿ ಜಿಲ್ಲೆಗೂ 500 ರೂಪಾಯಿ ಮಂಜೂರು ಮಾಡಿತ್ತು. ನವೆಂಬರ್‌ 2ರಂದು ಸಾರ್ವಜನಿಕ ರಜೆಯನ್ನೂ ಸರ್ಕಾರ ಘೋಷಿಸಿತ್ತು.

ಒಂದು ವರ್ಷ ಕಳೆಯಿತು. ಇನ್ನೊಂದು ನವೆಂಬರ್‌ ಬಂತು. ಆದರೆ ವಿಶಾಲ ಮೈಸೂರು ರಾಜ್ಯದ ಮೊದಲ ವಾರ್ಷಿಕೋತ್ಸವ ಆಚರಿಸುವ ಬಗ್ಗೆ ಯಾರೂ ಯೋಚನೆಯನ್ನೇ ಮಾಡಲಿಲ್ಲ. ಸರ್ಕಾರವಾಗಲಿ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ‘ಕನ್ನಡ ಸಾಹಿತ್ಯ ಪರಿಷತ್ತು’ ಆಗಲೀ ಈ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಆಗ ‘ಪ್ರಜಾವಾಣಿ’ ಪತ್ರಿಕೆ ರಾಜ್ಯೋದಯದ ಮೊದಲ ವಾರ್ಷಿಕ ಉತ್ಸವದ ಆಚರಣೆಗೆ ಮುಂದಾಯಿತು. ‘ಪ್ರಜಾವಾಣಿ’ ಸಂಪಾದಕ ಟಿ.ಎಸ್‌. ರಾಮಚಂದ್ರರಾವ್‌ ಅವರು ರಾಜ್ಯ ಸರ್ಕಾರ ಮತ್ತು ಸಾಹಿತ್ಯ ಪರಿಷತ್ತಿಗೆ ಆಮಂತ್ರಣ ನೀಡಿದರು.

ಪ್ರಜಾವಾಣಿ – ಡೆಕ್ಕನ್‌ಹೆರಾಲ್ಡ್‌ ಪತ್ರಿಕೆಗಳ ಮಾತೃ ಸಂಸ್ಥೆ ‘ದಿ ಪ್ರಿಂಟರ್ಸ್‌ ಮೈಸೂರು’ ರಾಜ್ಯೋದಯದ ಮೊದಲ ಹುಟ್ಟುಹಬ್ಬ ಹಮ್ಮಿಕೊಂಡಿತು. ನಿಜವಾದ ಅರ್ಥದಲ್ಲಿ ಅದು ಮೊದಲ ರಾಜ್ಯೋತ್ಸವ ಆಚರಣೆ. ಅಂದಿನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದವರು ಮೇಲ್ಮನೆಯ ಸಭಾಪತಿ ಪಾಲಹಳ್ಳಿ ಸೀತಾರಾಮಯ್ಯ. ಸಭೆಯಲ್ಲಿ ಸಾಹಿತ್ಯ ಪರಿಷತ್ತಿನ ಅಂದಿನ ಅಧ್ಯಕ್ಷ ಬಿ. ಶಿವಮೂರ್ತಿ ಶಾಸ್ತ್ರಿ, ಸಚಿವರಾದ ಎಚ್‌.ಕೆ. ವೀರಣ್ಣ ಗೌಡ, ಎಚ್‌.ಎಸ್‌.ರುದ್ರಪ್ಪ, ಮೈಸೂರು ಪ್ರದೇಶ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಫ್‌. ಪಾಟೀಲ, ಹಿರಿಯ ಪತ್ರಕರ್ತ ವೀರಕೇಸರಿ ಸೀತಾರಾಮ ಶಾಸ್ತ್ರಿ ಭಾಗವಹಿಸಿದ್ದರು.

ಟಿ.ಎಸ್‌. ರಾಮಚಂದ್ರರಾವ್‌ ಸ್ವಾಗತ ಭಾಷಣ, ಪ್ರಧಾನ ವರದಿಗಾರ ಎಸ್‌.ವಿ. ಜಯಶೀಲರಾವ್‌ ವಂದನಾರ್ಪಣೆ ನಡೆಯಿತು. ಸಭೆಯಲ್ಲಿ ಬೆಂಗಳೂರಿನ ಗಣ್ಯರಾದ ಮೇಯರ್‌ ಜೀನಾಭಾಯಿ ದೇವಿದಾಸ್‌, ಜಿ.ಎಸ್‌. ಶ್ರೀನಿವಾಸನ್‌, ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಿ.ಆರ್‌. ರಾಮಯ್ಯ, ಪ್ರಿಂಟರ್ಸ್‌ ಸಂಸ್ಥೆಯ ನಿರ್ದೇಶಕರುಗಳಾದ ಕೆ. ವೆಂಕಟಸ್ವಾಮಿ, ಮೂಲಾ ರಂಗಪ್ಪ, ಎಸ್‌. ಧೊಂಡುಸಾ, ‘ಮೈಸ್‌ ಇಂಡಿಯಾ’ ಸಂಪಾದಕ ಡಿ.ಎನ್‌. ಹೊಸಾಳಿ, ‘ಜನಪ್ರಗತಿ’ ಸಂಪಾದಕ ಬಿ. ಶ್ರೀನಿವಾಸಮೂರ್ತಿ, ‘ಚಿತ್ರಗುಪ್ತ’ ಸಂಪಾದಕ ಎಂ.ಎಸ್‌. ಭಾರದ್ವಾಜ್‌ ಹಾಗೂ ಪ್ರಜಾವಾಣಿ ಮತ್ತು ಡೆಕ್ಕನ್‌ಹೆರಾಲ್ಡ್‌ ಪತ್ರಿಕೆಗಳ ಸಿಬ್ಬಂದಿ ಭಾಗಹಿಸಿದ್ದರು. ಮೊದಲ ರಾಜ್ಯೋತ್ಸವ ಸಮಾರಂಭದ ವರದಿ 1957ರ ನವೆಂಬರ್‌ 2ರ ಸಂಚಿಕೆಯಲ್ಲಿ ವಿವರವಾಗಿ ವರದಿಯಾಯಿತು.

1958ರಿಂದ ಸಾರ್ವಜನಿಕವಾಗಿ ರಾಜ್ಯೋತ್ಸವವನ್ನು ಆಚರಿಸುವ ಪರಿಪಾಠ ಆರಂಭವಾಯಿತು. ಸರ್ಕಾರ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಆಚರಣೆ ಆಗುವಂತೆ ನೋಡಿಕೊಂಡಿತು. ನಂತರದ ವರ್ಷಗಳಲ್ಲಿ ತಾಲ್ಲೂಕು ಕೇಂದ್ರಗಳಲ್ಲೂ ಆರಂಭವಾಯಿತು. ನವಂಬರ್ 1ರಂದು ಸಾರ್ವಜನಿಕ ರಜೆಯನ್ನೂ ಘೋಷಿಸಿತು. 1960ರಿಂದ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜ್ಯೋತ್ಸವ ಆಚರಣೆಯನ್ನು ಕನ್ನಡ ಚಳವಳಿಗಾರರು ಆರಂಭಿಸಿದರು. ಕನ್ನಡೇತರ ದಬ್ಬಾಳಿಕೆಯನ್ನು ಕುಗ್ಗಿಸಿ, ಜನರಲ್ಲಿ ಕನ್ನಡಾಭಿಮಾನ ಬೆಳೆಸಲು ರಾಜ್ಯೋತ್ಸವ ಆಚರಣೆ ಸಹಕಾರಿಯಾಯಿತು.
ಚಿತ್ರಗಳು: ಪ್ರಜಾವಾಣಿ ಸಂಗ್ರಹ

ಕರ್ತವ್ಯಲೋಪ
ರಾಜ್ಯೋದಯದ ಮೊದಲ ವಾರ್ಷಿಕೋತ್ಸವ ಆಚರಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಪರಿಷತ್ತು ಆಲೋಚನೆಯನ್ನೇ ಮಾಡದೇ ಹೋದುದನ್ನು ಪಾಲಹಳ್ಳಿ ಸೀತಾರಾಮಯ್ಯ ಮತ್ತು ಶಿವಮೂರ್ತಿ ಶಾಸ್ತ್ರಿಯವರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಅದನ್ನು ಲೋಪ ಎಂದೇ ಭಾವಿಸಿದ್ದರು.

‘ರಾಜ್ಯೋದಯದ ಮೊದಲ ವಾರ್ಷಿಕೋತ್ಸವ ಮೈಸೂರು ರಾಜ್ಯದ ಎಲ್ಲೆಡೆ ಸರ್ಕಾರಿ ಸಮಾರಂಭವಾಗಿ ನಡೆಯಬೇಕಾಗಿತ್ತು ಎಂಬುದು ತಮ್ಮ ವೈಯಕ್ತಿಕ ಭಾವನೆ’ ಎಂದು ಸೀತಾರಾಮಯ್ಯ ಅವರು ತಮ್ಮ ಭಾಷಣದಲ್ಲಿ ಹೇಳಿದರೆ, ಶಿವಮೂರ್ತಿ ಶಾಸ್ತ್ರಿಯವರು ‘ಈ ವಿಷಯದಲ್ಲಿ ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕರ್ತವ್ಯಲೋಪವಾಗಿದೆ. ಮೊದಲ ವಾರ್ಷಿಕೋತ್ಸವ ರಾಜ್ಯದ ಎಲ್ಲಾ ಹಳ್ಳಿಗಳಲ್ಲೂ ವೈಭವದಿಂದ ನಡೆಯಬೇಕಾಗಿತ್ತು. ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ಸರ್ಕಾರ  ಮಾರ್ಗದರ್ಶನ ಮಾಡುತ್ತದೆಂದು’ ತಾವು ನಿರೀಕ್ಷಿಸುವುದಾಗಿ ಹೇಳಿದ್ದರು.

ವೀರಕೇಸರಿ ಸೀತಾರಾಮ ಶಾಸ್ತ್ರಿಯವರು ‘ಕರ್ನಾಟಕ ರಾಜ್ಯ ಸ್ಥಾಪನೆಯ ವಾರ್ಷಿಕೋತ್ಸವವನ್ನು ಪ್ರಜಾವಾಣಿ ಆಚರಿಸಿದ್ದು ಹೆಮ್ಮೆಯ ಕೆಲಸ. ತಪ್ಪಿತಸ್ಥರಿಗೆ ಮಾರ್ಗದರ್ಶನ ಮಾಡುವುದು ಪತ್ರಿಕೆಯವರ ಕೆಲಸ. ಈ ಕಾರ್ಯದಲ್ಲೂ ಪ್ರಜಾವಾಣಿ ನಮ್ಮೆಲ್ಲರಿಗೆ ಮಾರ್ಗದರ್ಶನ ಮಾಡಿರುವುದು ಅಭಿನಂದನಾರ್ಹ ಕಾರ್ಯ’ ಎಂದು ಪ್ರಶಂಸಿಸಿದರು. 

ಅಂದಿನ ಸಭೆಯಲ್ಲಿ ಮಾತನಾಡಿದ ಸಚಿವ ಎಚ್‌ಕೆ. ವೀರಣ್ಣ ಗೌಡರು, ಕೆ.ಎಫ್‌.ಪಾಟೀಲರು ವಿಶಾಲ ಮೈಸೂರು ರಾಜ್ಯ ರಚನೆ ನಂತರ ಸರ್ಕಾರದ ಮುಂದೆ ಇರುವ ಸವಾಲುಗಳನ್ನು ಪ್ರಸ್ತಾಪಿಸಿದ್ದರು. ಏಕೀಕರಣದ ಗುರಿ ಸಾಧನೆಗೆ ಸರ್ಕಾರ ಮತ್ತು ಕನ್ನಡ ಜನರು ಏನು ಮಾಡಬೇಕಿದೆ ಎಂಬ ಕುರಿತೂ ಗಮನ ಸೆಳೆದಿದ್ದರು. ವಿಶಾಲ ಮೈಸೂರು ಸರ್ಕಾರದ ಒಂದು ವರ್ಷದ ಸಾಧನೆ, ರಾಜ್ಯದ ಹೊರಗೆ ಉಳಿದುಹೋದ ಕನ್ನಡ ಪ್ರದೇಶಗಳ ಜನರ ಭಾವನೆಗಳು, ಏಕೀಕರಣ ಕುರಿತಂತೆ ಇದ್ದ ಭಿನ್ನಾಭಿಪ್ರಾಯಗಳ ನಿವಾರಣೆ ಇತ್ಯಾದಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.

ಮುಂದುವರಿದ ಗೊಣಗಾಟ
‘‘...ಕನ್ನಡ ಮಾತನಾಡುವ ಜನರೆಲ್ಲ ಒಂದು ಆಡಳಿತದ ವ್ಯಾಪ್ತಿಗೆ ಸೇರಬೇಕು ಎಂಬುದು ಕನ್ನಡಿಗರ ಕನಸಾಗಿತ್ತು. ಆದರೆ ಇನ್ನೂ ಕೆಲ ಕನ್ನಡ ಪ್ರದೇಶಗಳು ರಾಜ್ಯದ ಹೊರಗೇ ಉಳಿದಿವೆ. ಕನ್ನಡಿಗರ ಆಸೆ ಸಂಪೂರ್ಣ ಪೂರೈಸಿದೆ ಎಂದು ಹೇಳುವಂತಿಲ್ಲ.

ಶೇ.90–95ರಷ್ಟು ಈಡೇರಿದೆ.... ಕರ್ನಾಟಕ ಆಗಿ ಹೋಯಿತು. ಎಲ್ಲ ಮುಗಿಯಿತು ಎಂದು ಭಾವಿಸದೆ ವಾದ, ವಿವಾದಗಳನ್ನು ಬದಿಗಿಟ್ಟು, ಯಾವ ಉದ್ದೇಶದಿಂದ ಕರ್ನಾಟಕ ಬೇಕು ಎಂದು ಬಯಸಿದೆವೋ ಆ ಗುರಿಯನ್ನು ಮುಟ್ಟಲಾಗಿದೆಯೇ ಎಂದು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು’’ ಎಂದು ಸಚಿವ ಎಚ್‌.ಕೆ. ವೀರಣ ಗೌಡ ತಮ್ಮ ಭಾಷಣದಲ್ಲಿ ಹೇಳಿದ್ದರು.
‘‘... ಹೊಲ ಉಳುವ ರೈತನಾದ ನನಗೆ ಅದೃಷ್ಟ ಬಲದಿಂದ ಸಚಿವ ಸ್ಥಾನ ಸಿಕ್ಕಿದೆ.

ಸರ್ಕಾರ ಕೈ ತುಂಬ ಸಂಬಳ ಕೊಡುತ್ತದೆ. ಹೋದ ಕಡೆಯಲ್ಲ ಗೌರವ, ನಮಸ್ಕಾರಗಳು ಸಿಗುತ್ತವೆ. ನಾನು ಏನು ಸಾಧನೆ ಮಾಡಿದ್ದೇನೆ ಎಂದು ಕೇಳಿಕೊಂಡರೆ ಸಾಧಿಸಿರುವುದು ಅಲ್ಪ, ಸಾಧಿಸಬೇಕಾಗಿರುವುದು ಬಹಳ ಇದೆ ಅನಿಸುತ್ತದೆ’’ ಎಂದು ವೀರಣಗೌಡರು ತಮ್ಮ ಭಾಷಣದಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದರು.

‘‘ಅವರು ಮುಂಬೈ ಕರ್ನಾಟಕದವರು, ಇವರು ಹೈದರಾಬಾದ್‌ ಕರ್ನಾಟಕದವರು, ಹಳೆಯ ಮೈಸೂರಿನವರು ಎಂಬ ಗೊಣಗಾಟ ಜನರಲ್ಲಿ ಮತ್ತು ಸರ್ಕಾರಿ ಅಧಿಕಾರಿಗಳಲ್ಲಿ ಇದೆ... ಈ ಭಾವನೆ ಹೋಗಲು ಇನ್ನೂ ಸ್ವಲ್ಪ ಕಾಲ ಬೇಕಾದೀತೇನೋ’’ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.