ADVERTISEMENT

ರುಚಿಕರ ಚಹಾ ಹಿಂದಿನ ಕಹಿ ಕಥೆಗಳು

ಡಾ.ಎನ್.ಜಗದೀಶ್ ಕೊಪ್ಪ
Published 30 ಏಪ್ರಿಲ್ 2016, 19:36 IST
Last Updated 30 ಏಪ್ರಿಲ್ 2016, 19:36 IST
ರುಚಿಕರ ಚಹಾ ಹಿಂದಿನ ಕಹಿ ಕಥೆಗಳು
ರುಚಿಕರ ಚಹಾ ಹಿಂದಿನ ಕಹಿ ಕಥೆಗಳು   

‘ಚಹಾದೊಂದಿಗೆ ಚರ್ಚೆ’ ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟುಹಾಕಿರುವ ಆಕರ್ಷಕ ಪರಿಕಲ್ಪನೆ. ಸಂವಾದಕ್ಕೆ, ಸೌಹಾರ್ದಕ್ಕೆ ಹಾಗೂ ಹೊಳಹುಗಳಿಗೆ ಇದು ಉತ್ತಮ ಚರ್ಚಾ ವೇದಿಕೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ, ಚಹಾ ತೋಟದ ಕಾರ್ಮಿಕರ ಸಮಸ್ಯೆಗಳನ್ನೂ ಚರ್ಚಿಸಬೇಕಿದೆ. ಹಸಿವಿನಿಂದ ಸಾಯುವ ಕಾರ್ಮಿಕರ ಪ್ರಸಂಗಗಳು ಚಹಾದ ರುಚಿಯನ್ನು ಕಹಿಯಾಗಿಸುವಷ್ಟು ದಾರುಣವಾಗಿವೆ.

ಇದು ಹದಿನಾಲ್ಕು ವರ್ಷಗಳ ಹಿಂದಿನ ಘಟನೆ. ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾದ ನಾನು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ‘ಜಾಗತೀಕರಣ ಮತ್ತು ಗ್ರಾಮಭಾರತ’ ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿಗಾಗಿ ಅಧ್ಯಯನ ಮಾಡುತ್ತಿದ್ದೆ.

ಭಾರತದ ಕೃಷಿ ಕ್ಷೇತ್ರವೂ ಒಳಗೊಂಡಂತೆ, ಕೃಷಿ ಕೂಲಿ ಕಾರ್ಮಿಕರು ಮತ್ತು ಚಹಾ – ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರ ಮೇಲೆ ಆಗಿರುವ ಜಾಗತೀಕರಣದ ಪರಿಣಾಮಗಳನ್ನು ತಿಳಿಯಲು ಕೊಡಗಿನ ಕಾಫಿ ತೋಟಗಳು ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಕೇರಳದ ಮನ್ನಾರ್ ಪ್ರದೇಶದಲ್ಲಿರುವ ಚಹಾ ತೋಟಗಳಲ್ಲಿ ದುಡಿಯುತ್ತಿರುವ ಆದಿವಾಸಿಗಳಾದ ಕೂಲಿ ಕಾರ್ಮಿಕರ ಸ್ಥಿತಿಗತಿಯನ್ನು ಅವಲೋಕಿಸುತ್ತಿದ್ದೆ.

ಅಲ್ಲಿನ ಚಹಾ ತೋಟಗಳಲ್ಲಿ ನಾಲ್ವರು ಕೂಲಿ ಕಾರ್ಮಿಕರು ಅಸಹಜವಾಗಿ ಸಾವನ್ನಪ್ಪಿದ್ದರು. ಅವರ ಮರಣೋತ್ತರ ಪರೀಕ್ಷೆಯಲ್ಲಿ ಬಂದ ವರದಿ ನಾಗರಿಕ ಜಗತ್ತು ತಲೆ ತಗ್ಗಿಸುವಂತಿತ್ತು. ಆ ನಾಲ್ವರು ನತದೃಷ್ಟರು ಸಾಯುವ ಮುಂಚಿನ ನಾಲ್ಕು ದಿನಗಳಿಂದ ಹೊಟ್ಟೆಗೆ ಏನೂ ತಿಂದಿರಲಿಲ್ಲ. ಹಸಿವಿನಿಂದ ಮಲಗಿದ್ದಲ್ಲಿ ಮೃತಪಟ್ಟಿದ್ದರು.

ADVERTISEMENT

ಹಸಿವಿನಿಂದ ಒಬ್ಬ ನಾಗರಿಕ ಸಾಯುವುದು ಈ ದೇಶದ ಅಪಮಾನ ಎಂದು ಭಾವಿಸುವ ಸೂಕ್ಷ್ಮತೆಯನ್ನು ನಾವು ಕಳೆದುಕೊಂಡು ಎಷ್ಟೋ ದಶಕಗಳಾಗಿವೆ. ಒಬ್ಬ ಮನುಷ್ಯನ ಮೂಲಭೂತ ಬೇಡಿಕೆಗಳಾದ ಅನ್ನ, ನೀರು, ವಸತಿ, ವಸ್ತ್ರಗಳಿಗಿಂತ ಜಾತಿ ಮತ್ತು ಧರ್ಮಗಳು ಮುಖ್ಯವಾಗಿರುವ ಕಾಲಘಟ್ಟದಲ್ಲಿ ನಾವೀಗ ಬದುಕುತ್ತಿದ್ದೇವೆ. ಇದಕ್ಕಿಂತ ನಾಚಿಕೆಗೆಡಿನ ಸಂಗತಿ  ಇನ್ನೇನು ಬೇಕು?

ಪ್ರಥಮ ಬಾರಿಗೆ ಪ್ರಧಾನಿ ಹುದ್ದೆಗೇರಿದ ನರೇಂದ್ರ ಮೋದಿಯವರು ‘ಚಾಯ್ ಪೆ ಚರ್ಚಾ’ (ಚಹಾದೊಂದಿಗೆ ಚರ್ಚೆ) ಎಂಬ ಆಕರ್ಷಕವಾದ ಹೊಸ ಪರಿಕಲ್ಪನೆಯೊಂದನ್ನು ಹುಟ್ಟು ಹಾಕಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹ ನಿಲುವು. ಮುಕ್ತ ಮನಸ್ಸಿನ  ಚರ್ಚೆಗಳಲ್ಲಿ ಎಂತಹ ಸಮಸ್ಯೆಗಳನ್ನೂ ನಾವು ಬಗೆಹರಿಸಿಕೊಳ್ಳಬಹುದು.

ಹಾಗಾಗಿ ಈ ಚರ್ಚೆಯಲ್ಲಿ ಜಗತ್ತಿನ ಮತ್ತು ನಮ್ಮ ದೇಶದ ಎಲ್ಲ ಸಮಸ್ಯೆಗಳನ್ನು ಎತ್ತಿಕೊಳ್ಳಲಾಗುತ್ತಿದೆ. ಆದರೆ, ಸಮಸ್ಯೆಗಳ ಪರಿಹಾರೋಪಾಯಕ್ಕಾಗಿ ಮಾಧ್ಯಮವಾಗಿರುವ ಹಬೆಯಾಡುವ ಚಹಾದ ಹಿಂದಿನ ಕರುಣಾಜನಕ ಸ್ಥಿತಿ– ಅಂದರೆ, ಚಹಾ ತೋಟಗಳಲ್ಲಿ ದುಡಿಯುತ್ತಿರುವ ಕೂಲಿಕಾರ್ಮಿಕರ ಸ್ಥಿತಿಗತಿ ಮಾತ್ರ  ಚರ್ಚೆಯಾಗುತ್ತಿಲ್ಲ.

ಈ ದೇಶದಲ್ಲಿ ಕೃಷಿ ಕಾರ್ಮಿಕರ ಕನಿಷ್ಠ ಕೂಲಿದರ 200 ರೂಪಾಯಿ ಇರಬೇಕು ಎಂಬ ಕಾನೂನಿದೆ. ಆದರೆ, ಚಹಾ ತೋಟಗಳಲ್ಲಿ ದುಡಿಯುವ ಕಾರ್ಮಿಕರಿಗೆ ಇಂತಹ ಯಾವುದೇ ಕಾನೂನು ನೆರವಾಗುತ್ತಿಲ್ಲ. ಅಸ್ಸಾಂನ ಚಹಾ ತೊಟಗಳಲ್ಲಿ ದುಡಿಯುವ ಕಾರ್ಮಿಕರಿಗೆ ಅಲ್ಲಿನ ಸರ್ಕಾರ 177 ರೂಪಾಯಿ ದರ ನಿಗದಿಪಡಿಸಿದೆ. ಆದರೆ, ಅಲ್ಲಿನ ಚಹಾ ತೋಟದ ಮಾಲೀಕರು ಕೇವಲ 122 ರೂಪಾಯಿ ಪಾವತಿಸುತ್ತಿದ್ದಾರೆ.

ಇತ್ತ ಪಶ್ಚಿಮ ಬಂಗಾಳದ ಸಿಲಿಗುರಿ ಮತ್ತು ಡಾರ್ಜಿಲಿಂಗ್ ಪ್ರಾಂತ್ಯದಲ್ಲಿ 50ರಿಂದ 100 ರೂಪಾಯಿವರೆಗಿನ ಕೂಲಿಗೆ ನೇಪಾಳ ಮತ್ತು ಈಶಾನ್ಯ ರಾಜ್ಯಗಳ ಗುಡ್ಡಗಾಡು ಪ್ರದೇಶದಿಂದ ಬಂದ ಅನಕ್ಷರಸ್ಥ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ.

ದಕ್ಷಿಣ ಭಾರತ ಮತ್ತು ಪೂರ್ವ ಭಾರತದಲ್ಲಿ ಬ್ರಿಟಿಷರಿಂದ ಚಹಾ ತೋಟಗಳು ರೂಪುಗೊಂಡಿದ್ದು 19ನೇ ಶತಮಾನದಲ್ಲಿ. ಅಂದರೆ, 1850–1890ರ ದಶಕಗಳಲ್ಲಿ. ಸ್ವಾತಂತ್ರ್ಯಾನಂತರ ಈ ತೋಟಗಳಲ್ಲಿ ಕೆಲವು ಖಾಸಗಿ ಕಂಪೆನಿಗಳ ಪಾಲಾದರೆ, ಇನ್ನುಳಿದ ತೋಟಗಳು ಸರ್ಕಾರದ ಪಾಲಾದವು. ಸರ್ಕಾರಿ ಸ್ವಾಮ್ಯದಲ್ಲಿರುವ ಚಹಾ ತೋಟಗಳನ್ನು ಕೆಲವು ವ್ಯಕ್ತಿಗಳು 30 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದ್ದಾರೆ.

ಈ ಹಿಂದೆ ಚಹಾ ತೋಟದ ಕಾರ್ಮಿಕರಿಗೆ ಇದ್ದ ಪಿಎಫ್ (ಪ್ರಾವಿಡೆಂಟ್ ಫಂಡ್) ಸೌಲಭ್ಯ, ವೈದ್ಯಕೀಯ ನೆರವು, ನಿವೃತ್ತಿ ವೇತನ ವ್ಯವಸ್ಥೆ– ಇವುಗಳೆಲ್ಲವೂ ಕಾಣೆಯಾಗಿವೆ. ವರ್ಷದ ಆರೇಳು ತಿಂಗಳು ಮಾತ್ರ ಕೆಲಸವಿರುವ ಚಹಾ ತೋಟಗಳಲ್ಲಿ ಇನ್ನುಳಿದ ದಿನಗಳಲ್ಲಿ ಕಾರ್ಮಿಕರನ್ನು ತೋಟಗಳಲ್ಲಿ ಉಳಿಸಿಕೊಂಡು ಅವರಿಗೆ ನಿಗದಿತ ವೇತನ ಪಾವತಿ ಮಾಡುವ ಸಂಪ್ರದಾಯವೂ ದೂರವಾಗಿದೆ.

ಈಗ ಚಹಾ ಎಲೆಗಳನ್ನು ಕೀಳುವ ಸಮಯದಲ್ಲಿ ಮಾತ್ರ ಕಾರ್ಮಿಕರನ್ನು ನೇಮಕ ಮಾಡಿಕೊಂಡು, ಇನ್ನುಳಿದ ದಿನಗಳಲ್ಲಿ ಅವರನ್ನು ತೋಟಗಳಿಂದ ಹೊರಹಾಕಲಾಗುತ್ತಿದೆ.  ದುಡಿಯುವುದನ್ನು ಹೊರತುಪಡಿಸಿ ಬೇರೇನೂ ಅರಿಯದ ಈ ಮುಗ್ಧ ಜನ ಹಸಿವಿನಿಂದ ಕಂಗೆಟ್ಟು ಪ್ರಾಣ ಬಿಡುತ್ತಿದ್ದಾರೆ.

ಇಪ್ಪತ್ತೊಂದನೇ ಶತಮಾನದ ಮೊದಲ ದಶಕದಲ್ಲಿ (2000–2010ರ ಅವಧಿ) ಭಾರತದ ಚಹಾ ತೋಟಗಳಲ್ಲಿ 1408 ಕಾರ್ಮಿಕರು ಅನ್ನ–ನೀರು ಇಲ್ಲದೆ ಅಸುನೀಗಿದ್ದಾರೆ. 2015ರಲ್ಲಿ ಪಶ್ಚಿಮ ಬಂಗಾಳದ ತೋಟಗಳಲ್ಲಿ 80 ಮಂದಿ ಕಾರ್ಮಿಕರು ಹಸಿವಿನಿಂದ ಪ್ರಾಣಬಿಟ್ಟಿದ್ದಾರೆ.

ಈ ಕುರಿತು ಕಳೆದ ವರ್ಷ ‘ಬಿಬಿಸಿ’ ಒಂದು ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ‘ಬಿಬಿಸಿ’ ಬಳಗ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಚಹಾ ತೋಟಗಳಲ್ಲಿ ತಿರುಗಿ ಅಲ್ಲಿನ ಕಾರ್ಮಿಕರ ಶೋಚನೀಯ ಸ್ಥಿತಿ ಮತ್ತು ಅವರ ವಾಸಿಸುತ್ತಿರುವ ಹಂದಿಗೂಡಿನಂತಹ ಮನೆಗಳ ಪರಿಸ್ಥಿತಿಯನ್ನು ದಾಖಲಿಸಿದವು.

ಚಹಾ ತೋಟವೊಂದರ ಮಾಲೀಕನೊಬ್ಬ ವಾಹಿನಿಯ ವರದಿಗಾರನನ್ನು ಹೊರಗೆ ಕಳಿಸಿ ಗೇಟಿಗೆ ಬೀಗ ಹಾಕುವ ದೃಶ್ಯವನ್ನೂ ವರದಿಯಲ್ಲಿ ಅಡಕಗೊಳಿಸಲಾಗಿತ್ತು. ಈ ವಿಶೇಷ ವರದಿಯನ್ನು ಲಂಡನ್‌ನ ಪ್ರತಿಷ್ಠಿತ ನಿಯತಕಾಲಿಕೆ ‘ಟೈಮ್ಸ್ ಪತ್ರಿಕೆ’ ಪ್ರಕಟಿಸಿತು.

ಪಶ್ಚಿಮ ಬಂಗಾಳದ ಚಹಾ ತೋಟಗಳ ಕಾರ್ಮಿಕರ ಬವಣೆಗಳನ್ನು ಪರಿಹರಿಸಲು ರಾಜಕೀಯ ಪಕ್ಷಗಳಿಗಿರುವ ಅಧಿಕಾರದ ಅಮಲು  ಅಡ್ಡಗಾಲು ಹಾಕಿದೆ. ‘ಸ್ಟ್ರೀಟ್ ಪೈಟರ್’, ‘ಫೈರ್ ಬ್ರಾಂಡ್ ನಾಯಕಿ’ ಎಂದು ಪ್ರಸಿದ್ಧರಾಗಿರುವ ಹಾಗೂ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಮಮತಾ ಬ್ಯಾನರ್ಜಿ ಅವರಿಗೆ ಕೂಡ ಚಹಾ ತೋಟದ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವುದು ಮುಖ್ಯವೆನ್ನಿಸಿಲ್ಲ.

ಕಳೆದ ವರ್ಷ ಚಹಾ ತೋಟದ ಕೂಲಿ ಕಾರ್ಮಿಕರಿಗೆ ಎರಡು ರೂಪಾಯಿಗೆ ಒಂದು ಕೇಜಿ ಅಕ್ಕಿ ಮತ್ತು ಮೂರು ರೂಪಾಯಿಗೆ ಒಂದು ಕೇಜಿ ಗೋಧಿ ನೀಡುವ ವ್ಯವಸ್ಥೆಯನ್ನು ತೃಣಮೂಲ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಆದರೆ, ಯಾವುದೇ ಅಧಿಕೃತ ವಿಳಾಸದ ದಾಖಲೆಯಿಲ್ಲದ ಶೇಕಡಾ 80ರಷ್ಟು ಕಾರ್ಮಿಕ ಕುಟುಂಬಗಳು ಈ ಅವಕಾಶದಿಂದ ವಂಚಿತವಾಗಿವೆ ಎನ್ನಲಾಗಿದೆ.

ಎಡಪಕ್ಷಗಳ ಸಂಘಟನೆಗಳ ಕೆಲ ಕಾರ್ಯಕರ್ತರು ಕಾರ್ಮಿಕರ ಹೋರಾಟವನ್ನು ಜೀವಂತವಾಗಿಟ್ಟಿದ್ದರೂ ಅವರುಗಳ ಧ್ವನಿ ಸಹ ಕ್ರಮೇಣ ಕ್ಷೀಣಿಸತೊಡಗಿದೆ. ಒಂದು ಕಾಲದಲ್ಲಿ ಭಾರತದ ನಕ್ಸಲ್ ಹೋರಾಟದ ಪಿತಾಮಹರಾದ ಚಾರುಮುಜುಂದಾರ್ ಮತ್ತು ಕನು ಸನ್ಯಾಲ್ ಅವರು ಹುಟ್ಟಿ ಬೆಳೆದ ಸಿಲಿಗುರಿ, ಡಾರ್ಜಿಲಿಂಗ್ ಪ್ರದೇಶ ಹಾಗೂ ನಕ್ಸಲ್ ಹೋರಾಟಕ್ಕೆ ತಳಹದಿಯನ್ನು ಹಾಕಿಕೊಟ್ಟ ಚಹಾ ತೋಟಗಳು ಇಂದು ಸ್ಮಶಾನ ಸದೃಶವಾಗಿವೆ.

ಸ್ವತಃ ಕನು ಸನ್ಯಾಲ್ ತನ್ನ ವೃದ್ಧಾಪ್ಯದ ದಿನಗಳಲ್ಲಿ ಬಡತನ ಮತ್ತು ಔಷಧಕ್ಕೆ ಹಣವಿಲ್ಲದೆ ಸಿಲಿಗುರಿ ಸಮೀಪದ ಹಳ್ಳಿಯ ತನ್ನ ಗುಡಿಸಲಿನಂತಹ ಮನೆಯಲ್ಲಿ ನೇಣು ಹಾಕಿಕೊಳ್ಳುವುದರ ಮೂಲಕ 2011ರಲ್ಲಿ ಸಾವಿಗೆ ಶರಣಾದರು. ಅಂದಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ, ವೈದ್ಯಕೀಯ ನೆರವು ಮತ್ತು ಮಾಸಾಶನವನ್ನು ಘೋಷಿಸಿದಾಗ ಕನು ಸನ್ಯಾಲ್ ಅದನ್ನು ನಿರಾಕರಿಸಿದ್ದರು.

‘ಯಾವ ಸರ್ಕಾರಗಳ ವಿರುದ್ಧ ಮತ್ತು ಯಾವ ವ್ಯವಸ್ಥೆಯ ವಿರುದ್ಧ ನಾನು ಅರ್ಧ ಶತಮಾನ ಹೋರಾಟ ನಡೆಸಿದೆನೋ ಅಂತಹ ಸರ್ಕಾರಗಳ ನೆರವು ಪಡೆಯುವುದಿಲ್ಲ. ಅದಕ್ಕಿಂತ ಸಾವೇ ಮೇಲು’ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.

1970ರ ದಶಕದಲ್ಲಿ ಚಾರುಮುಜುಂದಾರ್ ಮತ್ತು ಕನು ಸನ್ಯಾಲ್ ಹುಟ್ಟು ಹಾಕಿದ ಸಿ.ಪಿ.ಐ (ಮಾವೋವಾದಿ) ಸಂಘಟನೆ ಇಂದು ಹಲವು ಕವಲುಗಳಾಗಿ ಒಡೆದುಹೋಗಿದೆ. ಉತ್ತರದ ಪಶ್ಚಿಮ ಬಂಗಾಳದಲ್ಲಿ ಒಟ್ಟು 26 ಕಾರ್ಮಿಕ ಸಂಘಟನೆಗಳಿದ್ದು, ಅವುಗಳ ನಾಮಫಲಕಗಳಿಗೂ ಸಹ ನಾಯಕರಂತೆ ವಯಸ್ಸಾಗಿದೆ, ಜೀರ್ಣಾವಸ್ಥೆ ತಲುಪಿವೆ.

ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿನ ಒಟ್ಟು 294  ಕ್ಷೇತ್ರಗಳ ಪೈಕಿ 42 ವಿಧಾನಸಭಾ ಕ್ರೇತ್ರಗಳು 277 ಚಹಾ ತೋಟಗಳನ್ನು ಒಳಗೊಂಡಿರುವ ಸಿಲಿಗುರಿ ಮತ್ತು ಡಾರ್ಜಿಲಿಂಗ್ ಪ್ರಾಂತ್ಯದಲ್ಲಿವೆ. ಹಾಗಾಗಿ ಪ್ರತಿಯೊಂದು ರಾಜಕೀಯ ಪಕ್ಷಗಳು ಮೇಲುಗೈ ಸಾಧಿಸಲು  ಅಲ್ಲಿನ ತೋಟಗಳ ಮಾಲೀಕರ ಮರ್ಜಿಯಲ್ಲಿ ಉಸಿರಾಡುತ್ತಿವೆ.

ಅಂತರರಾಷ್ಟ್ರೀಯ ಮಟ್ಟದ ಚಹಾ ಬ್ರಾಂಡ್‌ಗಳಾಗಿ ಗುರುತಿಸಿಕೊಂಡಿರುವ ಕಂಪೆನಿಗಳ ಚಹಾ ಪುಡಿಗಳು ಇಲ್ಲಿನ ತೋಟಗಳಿಂದ ನಾವು ಕುಡಿಯುವ ಚಹಾ ಬಟ್ಟಲಿಗೆ ಬಂದಿಳಿಯುತ್ತಿವೆ. ಟೀವಿ ಜಾಹೀರಾತಿನಲ್ಲಿ ಕಾಣುವ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಹಸಿರು ಚಹಾ ತೋಟಗಳ ಮೇಲಿನ ಮಂಜು, ಮೋಡ, ಚಹಾ ಎಲೆಗಳ ಮೇಲಿನ ಇಬ್ಬನಿ ಮತ್ತು ತಾಜಾತನಗಳ ನಡುವೆ ಅಲ್ಲಿನ ಕಾರ್ಮಿಕರ ಕಂಬನಿ ಮತ್ತು ಬೆವರಾಗಿ ಹರಿದ ರಕ್ತದ ಕಲೆಗಳೂ ಇವೆ ಎಂಬುದನ್ನು ನಾವು ಮರೆಯುವಂತಿಲ್ಲ.

ಚಹಾ ತೋಟದ ಕಾರ್ಮಿಕರ ಬವಣೆಗಳನ್ನು ಪರಿಹರಿಸಲು ಕೇವಲ ಮಾಲೀಕರತ್ತ ಕೈ ತೋರಿಸುವುದರಿಂದ ಉಪಯೋಗವಿಲ್ಲ. ಏಕೆಂದರೆ, ಚಹಾ ಉತ್ಪಾದನೆಯ ವೆಚ್ಚ ಕಳೆದ ಐದು ವರ್ಷಗಳಲ್ಲಿ ಶೇಕಡಾ 60ರಷ್ಟು ಹೆಚ್ಚಾಗಿದೆ.

ಜೊತೆಗೆ, ಭಾರತದ ಚಹಾ ಉದ್ಯಮಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೆರೆಯ ಶ್ರೀಲಂಕಾ, ಬಾಂಗ್ಲಾ, ಇಂಡೋನೇಷ್ಯಾ , ಕೀನ್ಯಾ ದೇಶಗಳು ಬೆಲೆಯಲ್ಲಿ ಪೈಪೋಟಿ ನೀಡುತ್ತಿವೆ. ಹಾಗಾಗಿ ಬಹುತೇಕ ಚಹಾ ತೋಟಗಳ ಮಾಲೀಕರು ತೋಟಗಳನ್ನು ಸರ್ಕಾರವೇ ವಹಿಸಿಕೊಳ್ಳಲಿ ಎಂದು ಹೇಳುತ್ತಾ ಕೈ ಚೆಲ್ಲಿದ್ದಾರೆ.

ಈ ದಿಶೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು, ವಾಣಿಜ್ಯೋದ್ಯಮಿಗಳಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ನೀಡುತ್ತಿರುವ ಕೆಲವು ಅನುದಾನ ಹಾಗೂ ಹಲವು ಬಗೆಯ ವಿನಾಯಿತಿಗಳನ್ನು ಚಹಾ ತೋಟದ ಮಾಲೀಕರಿಗೂ ವಿಸ್ತರಿಸಬೇಕಿದೆ. ಈ ಮೂಲಕ ಸದ್ದು ಮಾಡದೆ – ಸುದ್ದಿಯಾಗದೆ ಸಾಯುತ್ತಿರುವ ಅಮಾಯಕ ಕಾರ್ಮಿಕರನ್ನು ಉಳಿಸುವ ಅಗತ್ಯವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.