ADVERTISEMENT

ರೈತ–ದಲಿತ ಸಮುದಾಯಗಳ ಸಾಕವ್ವ

ನಾಗತಿಹಳ್ಳಿ ಚಂದ್ರಶೇಖರ
Published 8 ಏಪ್ರಿಲ್ 2017, 19:30 IST
Last Updated 8 ಏಪ್ರಿಲ್ 2017, 19:30 IST
ರೈತ–ದಲಿತ ಸಮುದಾಯಗಳ ಸಾಕವ್ವ
ರೈತ–ದಲಿತ ಸಮುದಾಯಗಳ ಸಾಕವ್ವ   
ಸಮಾನ ಶೋಷಿತರೂ ಸಮಾನ ದುಃಖಿಗಳೂ ಆದ ರೈತ–ದಲಿತ ಸಮುದಾಯಗಳೆರಡಕ್ಕೂ ಸಾಕವ್ವನಂತಿದ್ದ ಪ್ರೊ. ಎಚ್.ಎಲ್. ಕೇಶವಮೂರ್ತಿಯವರು ಹಬ್ಬ ಮುಗಿಸಿ ಹೊರಡಲು ಅಣಿಯಾಗಿದ್ದವರಂತೆ ಯುಗಾದಿಯ ಮರುದಿನ (ಮಾರ್ಚ್ 30) ನಿರ್ಗಮಿಸಿದ್ದಾರೆ. ಅವರದು ಅನಿರೀಕ್ಷಿತ ಸಾವಲ್ಲ. ದೀರ್ಘ ಕಾಲದ ನರಳಿಕೆಯಿಂದ ಹಣ್ಣಾಗಿದ್ದರು.

ಎಪ್ಪತ್ತೆಂಟು ವರ್ಷಗಳ ಜೀವಿತಾವಧಿಯಲ್ಲಿ (1939–2017) ಅವರು ಪ್ರತಿನಿಧಿಸಿದ ಮೌಲ್ಯಗಳೆಂದರೆ – ಎಲ್ಲ ಬಗೆಯ ಶೋಷಣೆ ಮತ್ತು ಅಸಮಾನತೆಗಳ ವಿರುದ್ಧ ಪ್ರತಿಭಟನೆ, ವಿಡಂಬನೆಯ ಮೊನಚು ತುದಿಗೆ ಸಿಕ್ಕಿಸಿ ಸತ್ಯವನ್ನು ಎತ್ತಿತೋರುವ ದಿಟ್ಟತನ, ಅಸಹಾಯಕರ ಪರ ವಕಾಲತ್ತು, ಪ್ರತಿಫಲಾಪೇಕ್ಷೆಯಿಲ್ಲದ ಬಂಡಾಯ ಮತ್ತು ಸರಳತೆ ನೀಗಿಕೊಳ್ಳದ ಸ್ವಾಭಿಮಾನ. ತೀರಿಕೊಂಡವರ ಬಗ್ಗೆ ಆಡುವ ಔಪಚಾರಿಕ ಮತ್ತು ಉತ್ಪ್ರೇಕ್ಷಿತ ಪ್ರಶಂಸೆಗಳ ಹಂಗು ಎಚ್‌ಎಲ್‌ಕೆ ಅವರಿಗಿಲ್ಲ.
 
ಚಿಕ್ಕ ತೋಟ ಮತ್ತು ಸಣ್ಣ ತಿಟ್ಟು ತೆಗೆದರೆ ಹೆರಗನಹಳ್ಳಿ, ನಾಗತಿಹಳ್ಳಿಗಳನ್ನು ಒಂದೇ ಊರು ಅನ್ನಬಹುದು. ಘನವಂತ ಲೇಖಕ ಎಚ್.ಎಲ್. ನಾಗೇಗೌಡರನ್ನೂ, ಭೂಮಿ ತೂಕದ ರಾಜಕಾರಣಿ ಎಚ್.ಟಿ. ಕೃಷ್ಣಪ್ಪನವರನ್ನೂ ಪಡೆದ ಅದೃಷ್ಟಶಾಲಿ ಹಳ್ಳಿ ಈ ಹೆರಗನಹಳ್ಳಿ.
 
ಇಲ್ಲಿ ಹುಟ್ಟಿದ ಕೇಶವಮೂರ್ತಿ, ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾಗಿದ್ದುಕೊಂಡು ಸಾಹಿತ್ಯ, ಪತ್ರಿಕೋದ್ಯಮ, ಚಳವಳಿ, ಹೋರಾಟಗಳಿಗೆ ಒಡ್ಡಿಕೊಂಡವರು.
 
ಮೌಢ್ಯಗಳ ವಿರುದ್ಧ ಸಂಘಟಿತರಾಗಿ ಸಿಡಿದವರು. ದೃಷ್ಟಿಹೀನವೂ ಆಲಸಿಯೂ ಮತ್ತು ಹೊಣೆಗೇಡಿಯೂ ಆಗುತ್ತಿರುವ ನಾಡಿನ ಯುವ ಸಮುದಾಯವನ್ನು ಬರವಣಿಗೆಯಿಂದ ಕೆಣಕಿ ಹೋರಾಟಕ್ಕೆ ಸಜ್ಜುಗೊಳಿಸಲು ಪ್ರಯತ್ನಿಸಿದವರು. ರೈತರನ್ನೂ ದಲಿತರನ್ನೂ ಅಪ್ಪಿಕೊಂಡವರು. ಲಾಭದಾಯಕವಲ್ಲದ, ಆದರೆ ಜೀವಪರವಾದ ಜಾಡಿನಲ್ಲಿ ಹೊರಟವರು.
 
ವೃತ್ತಿಯಿಂದ ಎಂಜಿನಿಯರ್ ಆಗಿದ್ದ ಅವರು ಹಾಗೂ ವೈದ್ಯರಾಗಿದ್ದ  ಬೆಸಗರಹಳ್ಳಿ ರಾಮಣ್ಣ ಸಾಹಿತ್ಯೇತರ ಪರಿಸರದಲ್ಲಿದ್ದುಕೊಂಡು ಬರೆಯುತ್ತಿದ್ದುದರಿಂದಲೇ ಅವರ ಭಾಷೆಗೆ ನೆಲದ ತಾಕತ್ತು, ವಿಚಿತ್ರವಾದ ಸೊಗಡು ಅಡರಿಕೊಂಡಿತ್ತು.
 
ತುಂಟನಂತೆ, ವಿಚಾರವಾದಿಯಂತೆ, ಹುಂಬನಂತೆ ಮತ್ತು ಹೊಸ ಕಾಲಕ್ಕೆ ತುಡಿಯುವ ಯುವಕನಂತೆ ಕಾಣಿಸುವ ‘ಕ್ಯಾತ’ ಎಚ್‌ಎಲ್‌ಕೆಯವರು ಸೃಷ್ಟಿಸಿದ ಪಾತ್ರ. ಇವನು ಬೀಚಿಯವರ ‘ತಿಮ್ಮ’ನ ಹಾಗೆ. ಅಥವಾ ತಿಮ್ಮನ ಅಣ್ಣನ ಹಾಗೆ. ಕೇತು ಎಂದರೆ ಧ್ವಜ. ಮಂಡ್ಯದ ಬಾಯಲ್ಲಿ ಅವನು ಕ್ಯಾತ. ಎಚ್‌ಎಲ್‌ಕೆ ಹಾರಿಸಿದ ‘ಮಂಡ್ಯದ ಬಾವುಟ’ ಅವನು. ಇವನ ಮೂಲಕ ಶಿಕ್ಷಣ, ರಾಜಕಾರಣವನ್ನು ಅವರು ಸಖತ್ತು ಲೇವಡಿ ಮಾಡುತ್ತಿದ್ದರು. 
 
ಕ್ಯಾತನ ಸಂಗಡಿಗರು ಎಂದರೆ ದೊಳ್ಳ, ಕುಂಟಸಿಂಗ್ರಿ, ಪುಕ್ಸಟ್ಟೆ, ಚಿಕ್ಕೀಸ ಇಂಥವರೇ. ಅವರಿಡುತ್ತಿದ್ದ ಶೀರ್ಷಿಕೆಗಳು: ‘ಮುಂಗಡ ಟಿಕೆಟ್ ಕೊಡಿ’, ‘ನೀನ್ಯಾಕೋ ಮಾವ ನಿನ್ನ ಹಂಗ್ಯಾಕೋ’,  ‘ಥೂ ಹಲ್ಕಾ’ ಇತ್ಯಾದಿ. ಇದರಲ್ಲಿ ‘ಕ್ಯಾತ’ ವಿಶ್ವಮಾನ್ಯ. 
 
ವೈನೋದಿಕ ಬರವಣಿಗೆಯ ಜೊತೆಗೆ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಮೂಲಕ ನವಸಾಕ್ಷರರಿಗಾಗಿ ಪುಸ್ತಕ ಬರೆದರು. ಮೈಸೂರು ವಿವಿಯ ಸೆನೆಟ್ ಸದಸ್ಯರಾಗಿದ್ದರು. ಮಂಡ್ಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ವಿವಿಧ ಅಕಾಡೆಮಿಗಳ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಲಭಿಸಿತ್ತು.
 
ಇವೆಲ್ಲಕ್ಕಿಂತ ಮುಖ್ಯವಾದದ್ದು: ಅವರು ತೊಡಗಿಸಿಕೊಂಡಿದ್ದ ಕೋಮುಸೌಹಾರ್ದ ವೇದಿಕೆ ಹಾಗೂ ಮೂಢನಂಬಿಕೆಗಳ ಮತ್ತು ಜಾತೀಯತೆ ವಿರುದ್ಧದ ಹೋರಾಟ. ಕಾವೇರಿ ಕುರಿತ ಸ್ಪಷ್ಟವಾದ ನಿಲುವು, ಮಂಡ್ಯದ ಹೆಸರಾಂತ ಆದರೆ ನಿರುಪಯುಕ್ತ ರಾಜಕಾರಣಿಗಳ ವಿರುದ್ಧ ಮುಲಾಜಿಲ್ಲದೆ ಟೀಕೆ – ಎಚ್‌ಎಲ್‌ಕೆ ಇಂಥ ಮಹತ್ವದ ಕೆಲಸಗಳನ್ನು ಹೆಚ್ಚು ಅಬ್ಬರವಿಲ್ಲದೆ ಮೌನಿಯಾಗಿ ಮಾಡುತ್ತಿದ್ದುದು ವಿಶೇಷ.
 
ಹೋಲಿಸುವುದಾದರೆ ಅವರು ಪುಟ್ಟಣ್ಣಯ್ಯನಂತೆ ಏರುಸ್ಥಾಯಿಯಲ್ಲಿ ಪನ್ ಮತ್ತು ಪಂಚ್‌ಗಳ ಜತೆ ಭಾಷಣಿಸಿ ಚಪ್ಪಾಳೆ ಗಿಟ್ಟಿಸುತ್ತಿರಲಿಲ್ಲ. ಲಂಕೇಶರಂತೆ, ದೇವನೂರರಂತೆ ಮೆಲುದನಿಯಲ್ಲಿ, ಆದರೆ ಪರಿಣಾಮಕಾರಿಯಾಗಿ ಮಾತನಾಡುತ್ತಿದ್ದರು. 
 
ಮಂಡ್ಯದ ಒಕ್ಕಲಿಗರ ಜೀವನಪ್ರೀತಿಯನ್ನು ಮೆಚ್ಚಿಕೊಳ್ಳುತ್ತಲೇ ಅವರ ಹುಂಬತನ, ವಾಚಾಳಿತನವನ್ನು ಗೇಲಿ ಮಾಡುತ್ತಿದ್ದರು. ಒಕ್ಕಲಿಗ ಸಮುದಾಯ ಮುನಿಸಿಕೊಳ್ಳುತ್ತಲೇ ಮೆಚ್ಚುತ್ತಿದ್ದ ಅನೇಕ ಉದಾಹರಣೆಗಳನ್ನು ಬಲ್ಲೆ. ಊಟಿಯಲ್ಲಿ ನೆಲೆಸಿದ್ದ ಗೌಡರ ವಿಚಿತ್ರ ನಡವಳಿಕೆಗಳು, ಫೈವ್‌ಸ್ಟಾರ್ ಹೋಟೆಲ್ಲಿಗೆ ಮಸಾಲೆದೋಸೆ ತಿನ್ನಲು ಚಡ್ಡಿಯಲ್ಲಿ ಹೋಗುವ ಮಂಡ್ಯ ಗೌಡರ ಅವಾಂತರಗಳು – ಇಂಥವೆಲ್ಲ ಕಚಗುಳಿ ಇಡುತ್ತಿದ್ದವು.
 
‘ಲಂಕೇಶ್ ಪತ್ರಿಕೆ’ಯಲ್ಲಿ ಬರೆಯಲು ಆರಂಭಿಸಿದ ತೇಜಸ್ವಿ, ಚಂಪಾ ಮುಂತಾದವರ ಬರಹಗಳು ಬೇರೆ ಬೇರೆ ಕಾರಣಕ್ಕೆ ನಿಂತುಹೋದವು. ಆದರೆ ಎಚ್‌ಎಲ್‌ಕೆ ಕೊನೆಯವರೆಗೂ ಆ ಪತ್ರಿಕೆಗೆ ಬರೆದರು. ಜತೆಗೆ ಬದ್ಧತೆಯುಳ್ಳ ಪುಟ್ಟ ಪತ್ರಿಕೆಗಳಿಗೆ ಬರೆದರು. ಲಂಕೇಶರ ಒಡನಾಡಿಯಾಗಿದ್ದ ಸರೀಕರಲ್ಲಿ ಅವರು ಕೊನೆಯ ಕಂತು. ದಲಿತ ಪ್ರತಿಭೆಗಳನ್ನು ಹಚ್ಚಿಕೊಂಡು ಅಡ್ಡಾಡುತ್ತಿದ್ದ ಅವರು ದಲಿತ ಸಂಘಟನೆಗಳ ಚೈತನ್ಯವಾಗಿದ್ದರು, ಆತ್ಮವಾಗಿದ್ದರು.
 
ವಿಮರ್ಶಕ ಡಿ.ಆರ್. ನಾಗರಾಜ್, ‘ಚಳವಳಿಗಾರರು ಮತ್ತು ಚಳವಳಿಕೋರರು’ ಎಂಬ ಎರಡು ಬಗೆಗಳನ್ನು ವಿವರಿಸುತ್ತಿದ್ದರು. ಯಾವ ಲಾಭಗಳನ್ನೂ ನಿರೀಕ್ಷಿಸದೆ ಚಳವಳಿಯಲ್ಲಿ ಪಾಲ್ಗೊಳ್ಳುವವರು ನಿಜವಾದ ಚಳವಳಿಗಾರರು. ಚಳವಳಿಕೋರರೆಂದರೆ – ಹಗಲು ಬಂಡಾಯ ಮತ್ತು ರಾತ್ರಿ ಸಂದಾಯ ಎಂಬ ನಿಲುವಿನಲ್ಲಿ ನಂಬಿಕೆ ಉಳ್ಳವರು.
 
ಡಿಆರ್ ಒಬ್ಬ ‘ಸಾಹಿತ್ಯ ರಾಜಕಾರಣಿ’ಯನ್ನು ಉಲ್ಲೇಖಿಸುತ್ತಾ ಅವರನ್ನು ‘ಪಾಂಚಾಲಿ’ ಎಂದು ಕರೆಯುತ್ತಿದ್ದರು. ತರಗತಿ ಪಾಠ ಮುಗಿದ ಕೂಡಲೇ ಕನಿಷ್ಠ ಐದು ಜನ ಮಂತ್ರಿಗಳನ್ನು, ಪ್ರತಿ ರಾತ್ರಿ ಭೇಟಿಯಾಗಿ ಸ್ಥಾನಮಾನಗಳಿಗೆ, ಪ್ರಶಸ್ತಿ ಪುರಸ್ಕಾರಗಳಿಗೆ ಪ್ರಯತ್ನಿಸುತ್ತಿದ್ದುದನ್ನು ತಮಾಷೆಯಾಗಿ ವಿವರಿಸುತ್ತಿದ್ದರು.
 
ಎಚ್‌ಎಲ್‌ಕೆ ತಮ್ಮ ಕೊನೆಯ ದಿನಗಳಲ್ಲಿ ಅನುಭವಿಸಿದ ನೋವು ದಾರುಣವಾಗಿತ್ತು. ತಮ್ಮ ಸಂಕಟವನ್ನು ಪರಮಾಪ್ತರ ಬಳಿಯೂ ಹೇಳಿಕೊಳ್ಳದ ಸ್ವಾಭಿಮಾನಿ ಅವರು. ಯಾರಿಗೂ ಮಣೆ ಹಾಕದ, ಯಾರಿಂದ ಏನನ್ನೂ ಬೇಡದ ಅವರ ಅಂತ್ಯಕ್ರಿಯೆ ಕೂಡಾ ಅವರ ಮೌಲ್ಯನಿಷ್ಠ ಗೆಳೆಯರು ಮತ್ತು ಬಂಧುಗಳ ನಡುವೆ ಸರಳವಾಗಿ ನಡೆಯಿತು; ಅವರ ವ್ಯಕ್ತಿತ್ವದಂತೆಯೇ.
 
ಎಚ್‌ಎಲ್‌ಕೆ ಅವರಿಗಿದ್ದ ದೌರ್ಬಲ್ಯವೆಂದರೆ ಸಿಗರೇಟು. ಅದು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಿರಬಹುದು. ಇಡೀ ಅವರ ಕುಟುಂಬವೇ ನೋವಿನ ಮಹಾಮನೆ. ಮಗ ಅಕಾಲಿಕ ಮರಣಕ್ಕೆ ತುತ್ತಾದ. ಚಿಕ್ಕ ವಯಸ್ಸಿನ ಸೊಸೆಯ ಬದುಕು ಮುಗಿಯಬಾರದೆಂದು ಆಶಿಸಿದ ಎಚ್‌ಎಲ್‌ಕೆ ತಾವೇ ನಿಂತು ಮರುಮದುವೆಯ ಮೂಲಕ ಆಕೆಯ ಬದುಕನ್ನು ನೇರ್ಪುಗೊಳಿಸಿದರು.
 
ರೈತ ಮತ್ತು ದಲಿತ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಹೆಣ್ಣು ಮಕ್ಕಳು ಅವರಲ್ಲಿದ್ದ ಈ ತಾಯ್ತನವನ್ನು ನೆನೆಯುತ್ತಾರೆ. ಕಚಗುಳಿ ಇಡುವಂತೆ ನಗಿಸುತ್ತ, ನಗೆ ಹಂಚುವಂತೆ ಬರೆಯುತ್ತಿದ್ದ ಅವರ ಇಡೀ ಕುಟುಂಬ ನೋವಿನ ಕಡಲಲ್ಲಿ ಮುಳುಗಿದೆ. ಶ್ರೀಮಂತರ ಕುಟುಂಬದ ಹಿನ್ನೆಲೆಯಿಂದ ಬಂದ ಎಚ್‌ಎಲ್‌ಕೆಯವರ ಶ್ರೀಮತಿಯವರು ಕೂಡ ಅನಾರೋಗ್ಯದಿಂದ ನರಳುತ್ತಿದ್ದಾರೆ. ಆಕೆಯೂ ಎಚ್‌ಎಲ್‌ಕೆಯವರಷ್ಟೇ ಸ್ವಾಭಿಮಾನಿ.
 
ಚಿತೆ ದೇಹವನ್ನು ಸುಡುವಾಗ ಎಲ್ಲ ಮುಗಿದುಹೋಯಿತು ಅನಿಸುತ್ತದೆ. ಆದರೆ ಆದರ್ಶಗಳಿಗೆ ಸಾವಿಲ್ಲ, ವ್ಯಕ್ತಿಗೆ ಸಾವಿದೆ. ಆದರ್ಶಗಳೆಂಬ ಬೇತಾಳಗಳು ಮತ್ತೊಬ್ಬ ಆದರ್ಶವಾದಿಯ ಬೆನ್ನಿಗೆ ನೇತು ಹಾಕಿಕೊಂಡು ಮುಂದೆಸಾಗುತ್ತವೆ. ವ್ಯಕ್ತಿ ತೀರಿಕೊಂಡಾಗ ತತ್ವಗಳು ತೀರಿಕೊಂಡವು ಎನ್ನುವುದು ತಪ್ಪು. ಎಚ್.ಎಲ್. ಕೇಶವಮೂರ್ತಿಯವರು ಪ್ರತಿನಿಧಿಸಿದ ಆದರ್ಶಗಳನ್ನು ಹೊರಲು, ಮುಂದೆ ಸಾಗಲು ತರುಣ ಹೆಗಲುಗಳು ಬೇಕಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.