ಬಡತನ ಕೆಟ್ಟದ್ದಲ್ಲ, ಬಡವರನ್ನಾಗಿ
ಉಳಿಸುವ ದೇಶವು ಕೆಟ್ಟದ್ದು;
ಸರಕಾರ ರೊಕ್ಕ ಮುದ್ರಿಸುವುದು
ತುಂಡು ರೊಟ್ಟಿಯನ್ನಲ್ಲ
-ಅಲ್ಲಾಗಿರಿರಾಜ್
ಹಸಿವು, ಎಂಬೋ ಬ್ರಹ್ಮಾಂಡ ಆ ಮನುಷ್ಯನನ್ನು ಕ್ಷಣಕ್ಷಣಕ್ಕೂ ನಿತ್ರಾಣಗೊಳಿಸತೊಡಗಿತ್ತು. ಬರೀ ನೀರು ಕುಡಿಯುತ್ತ ಅನ್ನದ ಹಂಗು ಹರಿದುಕೊಂಡಂತೆ ಇದ್ದ ಅವನ ಉದರ ಕಂಗೆಟ್ಟು ಬೆನ್ನಿಗಂಟಿಕೊಂಡು, ಆ ರೈಲು ನಿಲ್ದಾಣದ ಕಟ್ಟೆಯನ್ನು ಬಿಟ್ಟೇಳದಂತೆ ಮಾಡಿತ್ತು. ಮೊನ್ನೆಯ ದಿನದ ರಾತ್ರಿ ಅವನು ರೈಲಿನಿಂದ ಇಳಿದು, ಆ ಕಟ್ಟೆಯನ್ನು ಆಶ್ರಯಿಸಿದ್ದ. ಸಾದುಗಪ್ಪಿನ ಬಡಕಲು ದೇಹದ ಅವನಿಗೆ ನಲವತ್ತರ ಆಜುಬಾಜು ವಯಸ್ಸಿರಬೇಕು. ನೋಡಿದರೆ ಅವನು ಭಿಕ್ಷುಕನಂತೆ ಕಾಣಿಸುತ್ತಿರಲಿಲ್ಲ. ಮತ್ತು ಜನರೆದುರು ಕೈಚಾಚಿ, ಯಾಚಿಸುವ ಧ್ವನಿಯನ್ನೂ ಹೊರಡಿಸುತ್ತಿರಲಿಲ್ಲ.
ರೈಲುಗಳು ನಿಲ್ದಾಣಕ್ಕೆ ಬಂದು, ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಹೋಗುತ್ತಿದ್ದವು. ವ್ಯಾಪಾರಿ ಹುಡುಗರು ತಮ್ಮದೇ ಧಾಟಿಯಲ್ಲಿ ಗರಮಾ ಗರಂ ಚಾಯ್... ಇಡ್ಲಿ-ವಡಾ... ಪಾವ್-ಭಜೀರೇ... ಶೇಂಗಾ-ಕಡ್ಲಿ.. ಚಾಕ್ಲೇಟ್, ಬಿಸ್ಕೀಟ್, ಚೀಪ್ಸ್‌ರೇ... ಎಂದು ಕೂಗುತ್ತ ರೈಲು ಬೋಗಿ ಹತ್ತಿ ಇಳಿಯುತ್ತಿದ್ದರು. ಆ ಮನುಷ್ಯನ ಕಣ್ಣು ಅಗಲವಾಗಿ ಅತ್ತ ನೋಡುತ್ತಿದ್ದವು. ಒಡಲ ಹಸಿವು ಅವನ ಕಣ್ಣುಗಳಲ್ಲಿ ಹೆಪ್ಪುಗಟ್ಟಿದಂತೆ ಇತ್ತು. ಯಾರಾದರೂ ಅದರತ್ತ ಗಮನಹರಿಸಿ ತನಗೆ ತಿನ್ನಲು ಏನಾದರೂ ಕೊಟ್ಟಾರೆಂದು ಅವನು ಆಶಿಸುತ್ತಿದ್ದ. ಅಮ್ಮಾ, ತಾಯಿ, ಎಪ್ಪಾ ಎಂದು ಬೇಡುವ ಧ್ವನಿಗಳಿಗೆ ಕೂಡಲೇ ಸ್ಪಂದಿಸದ ಜನ, ಮೂಕ ಧ್ವನಿಯ ಸಂಕಟವನ್ನು ಅರ್ಥಮಾಡಿಕೊಳ್ಳುವುದು ವಿರಳ ಎಂಬ ಸಂಗತಿ ಆ ವ್ಯಕ್ತಿಯ ಪ್ರಜ್ಞೆಗೆ ಹೊಳೆದಿರಲಿಲ್ಲ.
ಒಂದೆರಡು ಸಲ ಅವನು ಇಡ್ಲಿ-ವಡಾ, ಚಿಪ್ಸ್, ಬಿಸ್ಕೀಟ್ ಮಾರುವ ಹುಡುಗರನ್ನು ಕೈಸನ್ನೆಯಿಂದ ಕರೆದು, ರೇಟು ಕೇಳಿದ್ದ. ಅವರು ಉತ್ಸಾಹದಿಂದ ರೇಟು ಹೇಳಿದರೆ ಅವನು ‘ನನ್ನ ಹತ್ರ ದುಡ್ಡಿಲ್ಲ’ ಎಂದು ಮುಖ ಮುದುಡಿಸಿಕೊಂಡಿದ್ದ. ಅವರು ಮಾನವೀಯತೆಯಿಂದ ತನಗೊಂದು ಇಡ್ಲಿ-ವಡಾ, ಬಿಸ್ಕೀಟು ಕೊಟ್ಟಾರೆಂಬ ನಿರೀಕ್ಷೆ ಅವನ ಮುಖದಲ್ಲಿತ್ತು. ಹುಡುಗರು, ತಮ್ಮ ವೇಳೆಯನ್ನು ವ್ಯರ್ಥಮಾಡಿದ್ದಕ್ಕಾಗಿ ಅವನನ್ನು ಬೈದುಕೊಂಡು ಹೋಗಿದ್ದರು.
ಹೋಟೆಲ್ ಎದುರು ನಿಂತು ಧಾವಂತದಲ್ಲಿ ತಿನಿಸು ತಿನ್ನುತ್ತಿದ್ದ ಪ್ರಯಾಣಿಕರ ಹತ್ತಿರ ಭಿಕಾರಿಗಳು ಕೈಯೊಡ್ಡಿ, ದೈನೇಸಿಯಿಂದ ಗೋಗರೆಯುತ್ತಿರುವುದು, ಪ್ರಯಾಣಿಕರು ಅವರನ್ನು ಕೆಕ್ಕರುಗಣ್ಣಿನಿಂದ ದಿಟ್ಟಿಸುತ್ತ, ತಿನಿಸು ಮರೆಯಾಗಿಸಿಕೊಂಡರೆ, ಕೆಲವರು ಒಂದೆರಡು ತುತ್ತುಗಳನ್ನು ಭಿಕ್ಷುಕರ ಬೊಗಸೆಗೆ ಹಾಕಿ ಜಾಗ ಬದಲಿಸುತ್ತಿದ್ದರು. ಮನುಷ್ಯನ ಹಸಿವಿನ ತಹತಹಿಕೆಗೆ ಹಿಡಿದ ಕನ್ನಡಿಯಂತಿದ್ದ ಆ ದೃಶ್ಯ ಅತ್ಯಂತ ಕರುಣಾಜನಕವಾಗಿತ್ತು.
ಹತ್ತು ನಿಮಿಷ ನಿಂತಿದ್ದ ರೈಲು ಮಾಯವಾದ ಮೇಲೆ ನಿಲ್ದಾಣ ಖಾಲಿಖಾಲಿ ಎನಿಸತೊಡಗಿತ್ತು. ಕಟ್ಟೆ ಹಿಡಿದು ಕುಳಿತಿದ್ದ ವ್ಯಕ್ತಿಯ ಗಮನ ಮತ್ತೆ ಕಳಕಳವೆನ್ನುತ್ತಿದ್ದ ಹೊಟ್ಟೆಯನ್ನೇ ಕೇಂದ್ರೀಕರಿಸಿಕೊಂಡಿತು. ಮಧ್ಯಾಹ್ನದ ಸೂರ್ಯ ಉರಿಯತೊಡಗಿದ್ದ.
ಅವನು ಕುಳಿತಲ್ಲಿಂದ ತುಸು ದೂರದ ಕಟ್ಟೆಯ ಮೇಲೆ ಗಂಡ-ಹೆಂಡತಿ ಇಬ್ಬರು ಬಂದು ಕುಳಿತರು. ಗಂಡನಿಗೆ ಹೆಂಡತಿ ಹೇಳಿದಳು– ‘ಗಾಡಿ ಬರೂದು ಇನ್ನೂ ತಡ. ಇಲ್ಲೇ ಕುಂತು ಊಟ ಮಾಡೋಣ. ನೀವು ಕುಡಿಯಾಕ ನೀರು ತಗೊಂಬರಿ’. ಅವಳ ಮಾತು ಕಿವಿಗೆ ತೂರಿಕೊಂಡದ್ದೆ ಆ ವ್ಯಕ್ತಿ ಅತ್ತ ದೃಷ್ಟಿ ಹರಿಸಿದ್ದ.
ಹೆಂಡತಿಯಿಂದ ಖಾಲಿ ಬಾಟ್ಲಿ ಇಸಿದುಕೊಂಡು ಗಂಡ ನೀರು ತರಲು ಹೊರಟ. ಆಕೆ ಬಾಸ್ಕೆಟ್‌ನಲ್ಲಿರಿಸಿದ್ದ ಬುತ್ತಿಗಂಟು ಹೊರತೆಗೆದಳು. ಅದನ್ನು ನೋಡಿದ್ದ ಆ ವ್ಯಕ್ತಿಯ ಮೈಯೊಳಗೆ ಹೊಸ ಚೈತನ್ಯವೊಂದು ಸಂಚಾರವಾದಂತಾಯಿತು. ಆಕೆ ಬುತ್ತಿ ಬಿಚ್ಚಿಟ್ಟಳು. ಹತ್ತೆಂಟು ರೊಟ್ಟಿ, ಪಲ್ಲೆ, ಚಟ್ನಿ ಅವನ ಕಣ್ಣು ತುಂಬಿದವು. ಎರಡೆರಡು ರೊಟ್ಟಿಗಳನ್ನು ತೆಗೆದು, ಅದರ ಮೇಲೆ ಪಲ್ಲೆ ಹಚ್ಚಿಟ್ಟು ಆಕೆ ಮುಖ ಮೇಲೆತ್ತಿದರೆ ಆ ವ್ಯಕ್ತಿ ಕಂಡಿದ್ದ. ಅವನ ನೋಟವೆಲ್ಲಾ ತನ್ನ ಮೇಲೆ ಹರಿದಾಡುತ್ತಿರುವುದನ್ನು ಗಮನಿಸಿದ ಆಕೆ ಅಧೀರಳಾದಳು.
ಅವನೋ ರೆಪ್ಪೆಗಳನ್ನು ಪಿಳುಕಿಸದೆ ನೋಡುತ್ತಿದ್ದಾನೆ. ಒಮ್ಮೆ ಆಕೆ ಗಂಡ ಹೋದ ದಾರಿಯತ್ತ ಕತ್ತು ಹೊರಳಿಸಿ ನೋಡಿದಳು. ಆಗಂತುಕ ವ್ಯಕ್ತಿಯ ನೋಟದಲ್ಲಿ ಬದಲಾವಣೆ ಇರಲಿಲ್ಲ. ಕೂಡಲೇ ಆಕೆಗೆ ಕಳ್ಳರ ನೆನಪಾಗಿ ತನ್ನ ಕೊರಳು ನೋಡಿಕೊಂಡಳು. ಅಲ್ಲಿದ್ದ ನಾಲ್ಕೆಳೆಯ ಚಿನ್ನದ ಸರದ ಮೇಲೇನಾದರೂ ಅವನ ಕಣ್ಣು ಬಿತ್ತೆ? ಎಂದು ಅನುಮಾನಗೊಂಡು, ಸೀರೆಯ ಸೆರಗಿನಿಂದ ಅದನ್ನು ಮುಚ್ಚಿಕೊಂಡಳು.
ಅವನ ನೋಟ ತನ್ನ ಮೇಲಿನಿಂದ ಕದಲುತ್ತಿಲ್ಲ. ಅವನು ಪಕ್ಕಾ ಕಳ್ಳನೇ ಇರಬೇಕು ಎಂದು ಭೀತಿಗೊಂಡಳು. ಎದುರಿಗಿರುವ ಕಂಬದ ಮೇಲೆ ತೂಗು ಹಾಕಿದ್ದ ‘ಸರಗಳ್ಳರಿದ್ದಾರೆ ಎಚ್ಚರಿಕೆ’ ಎನ್ನುವ ಬೋರ್ಡು ನೋಡಿದ ಮೇಲಂತೂ ಆಕೆ ಒಳಗೇ ಕಂಪಿಸತೊಡಗಿದಳು. ಎದ್ದು ಮತ್ತೊಮ್ಮೆ ಗಂಡನನ್ನು ನೋಡಿದಳು. ಜನ ಅಲ್ಲಲ್ಲಿ ಕುಳಿತಿದ್ದರು. ಕೆಲವರು ನಿಂತು ಮಾತಿಗೆ ತೊಡಗಿದ್ದರು. ಹಾಡು ಹಗಲಿದೆ. ಆ ಕಳ್ಳ ಏನೂ ಮಾಡಲಾರ ಎಂದು ಸಮಾಧಾನದಿಂದ ಕುಳಿತರೂ ತುಮುಲ ಅವಳನ್ನು ಅವನತ್ತ ನೋಡುವಂತೆ ಮಾಡಿತ್ತು. ಅವನ ದೃಷ್ಟಿ ಬೇರೆ ಕಡೆಗೆ ಹೊರಳಿಸಲು ಸಾಧ್ಯವಿಲ್ಲವೆನ್ನುವಂತಿತ್ತು.
** ** **
ಗಂಡ ಬಂದು ಕುಳಿತಾಗ ಅವಳೆದೆ ಹಗುರಗೊಂಡಿತು. ಆಕೆ ಗಂಡನ ಕೈಯಲ್ಲಿ ರೊಟ್ಟಿ ಇತ್ತು, ತಾನೂ ತೆಗೆದುಕೊಂಡಳು. ತುತ್ತು ಬಾಯಿಗಿಟ್ಟುಕೊಳ್ಳುತ್ತಿದ್ದಂತೆ ಅವಳ ಕಣ್ಣು ಆ ವ್ಯಕ್ತಿಯನ್ನು ಗಮನಿಸಿತ್ತು. ಈಗವನು ಆಸೆಗಣ್ಣುಗಳಿಂದ ನೋಡತೊಡಗಿದ್ದ. ಅವಳ ಒಡಲಲ್ಲಿ ಅನುಮಾನದ ಹುತ್ತವೆದ್ದಿತು. ಅವನು ಒಮ್ಮೆಲೆ ಎದ್ದು ನಿಂತ. ಆಕ್ರಮಣಕ್ಕೆ ಸಜ್ಜಾಗುತ್ತಿದ್ದಾನೋ ಅನಿಸಿತು ಆಕೆಗೆ.
ದಿಢೀರೆಂದು ದಾಳಿ ಮಾಡಿ, ಕೊರಳ ಸರ ಒತ್ತುಕೊಂಡು ಓಡಿದರೆ ಏನು ಮಾಡುವುದು? ಸರ ಹೋದರೆ ಹೋಗಲಿ, ಚೂರಿ, ಬ್ಲೇಡು ಹಾಕಿದರೆ ಗತಿಯೇನು? ಗಾಬರಿಯಾದ ಆಕೆಯ ಗಂಟಲಲ್ಲಿ ರೊಟ್ಟಿಯೇ ಇಳಿಯಲಿಲ್ಲ. ಮತ್ತೆ ಆಕೆ ತನ್ನ ಓರೆ ನೋಟವನ್ನು ಅವನತ್ತ ಹರಿಸಿದಳು. ಮತ್ತದೆ ಆಸೆಗಣ್ಣು! ಅವಳಿಗೆ ಸಿಟ್ಟು ತರಿಸಿದವು.
‘ಅಲ್ಲೆ ನೋಡ್ರಿ, ಆ ಮನುಷ್ಯಾ ಎಷ್ಟೊತ್ತಾತು, ನನ್ನ ಕಡೆಗೇ ನೋಡಾಕ ಹತ್ಯಾನ’ ಎಂದಳು.
‘ಯಾರಂವಾ?’ ಗಡುಸಾಗಿ ಕೇಳಿದ ಗಂಡ.
‘ಆ ಕಟ್ಟಿಮ್ಯಾಲೆ ಕುಂತಾನ ನೋಡ್ರಿ’ ಆಕೆ ಪಿಸುನುಡಿದಳು.
ಗಂಡ ಅತ್ತ ನೋಡಿದ. ಆ ವ್ಯಕ್ತಿಯ ನೋಟ ಅವನನ್ನು ತೀವ್ರವಾಗಿ ಕೆರಳಿಸಿತು. ಕೈಯಲ್ಲಿದ್ದ ರೊಟ್ಟಿಯನ್ನು ಗಬಗಬನೇ ತಿಂದು, ನೀರು ಕುಡಿದವನೇ ಆ ವ್ಯಕ್ತಿಯತ್ತ ಧಾವಿಸಿದನು ‘ಯಾವನಲೇ ನೀನು? ಬದ್ಮಾಷ್, ಅಕ್ಕ-ತಂಗೇರು ಇಲ್ಲೇನು ನಿನ್ಗ’ ಎಂದು ಕೂಗಾಡಿದ.
ಆ ವ್ಯಕ್ತಿ ‘ರೊಟ್ಟಿ’ ಎಂದ. ಅವನ ಧ್ವನಿ ತುಂಬಾ ಕ್ಷೀಣವಾಗಿತ್ತು.
‘ಜೋರಾಗಿ ಹೇಳಲೆ ಬೋಳಿಮಗನೆ, ಧ್ವನಿ ಸತ್ತವರಂಗ ಢೋಂಗಿ ಮಾಡ್ತಿಯೇನು ಮಗನ?’ ಅಂತ ಅವನ ಅಂಗಿ ಹಿಡಿದ ಗಂಡ.
‘ಪ್ರಪಂಚದಾಗ ಇಂಥ ಹಲ್ಕಾ ಜನರss ತುಂಬ್ಯಾರ’ ಹೆಂಡತಿ ಗಂಡನ ಕೋಪಾಗ್ನಿಗೆ ಎಣ್ಣೆ ಸುರಿದಳು.
ಗಂಡ-ಹೆಂಡತಿಯರ ಅಬ್ಬರಕ್ಕೆ ಜನ ಗಬೋ ಎಂದು ಕೂಡಿದರು. ಆ ವ್ಯಕ್ತಿ ತತ್ತರ ತತ್ತರಗೊಂಡ.
ಕೂಡಿದ ಜನರ ನಾಲಗೆಗಳು ಆ ವ್ಯಕ್ತಿಯನ್ನು ಕುರಿತು ಅವಾಚ್ಯ ಶಬ್ದಗಳನ್ನಾಡಿದರೆ, ಕೆಲವು ಹುಂಬ ಕೈಗಳು ಅವನ ತಲೆ, ಬೆನ್ನು ಬಲವಾಗಿ ತಿವಿದವು. ‘ನೋಡಕ ಹ್ಯಾಂಗ್ ಮೆತ್ತಗ ಕಾಣಸ್ತಾನ ನೋಡ್ರಿ ಅಣ್ಣಾರ. ನಾನು ಬಂದು ಕುಂತಾಗಿನಿಂದ್ಲೂ ನನ್ನ ಹರಿದು ತಿನ್ನುವಂಗ ನೋಡಕೊಂತ ಕುಂತಾನ ಬಾಡ್ಕೋ’ ಎಂದು ಹೆಂಡತಿ ಆರೋಪಿಸಿದಳು. ಅವಳ ಹತ್ತಿರ ಬಂದು ನಿಂತಿದ್ದ ನಾಲ್ಕಾರು ಜನ ಹೆಣ್ಣುಮಕ್ಕಳಲ್ಲಿ ಒಬ್ಬಳು ‘ಹಗಲು ಅನ್ನಂಗಿಲ್ಲ, ರಾತ್ರಿ ಅನ್ನಂಗಿಲ್ಲ, ಇಂಥ ಗಂಡಸರು ತಲಿ ತಗದ ನಿಂತುಬಿಟ್ಟಾವು. ಹೆಣ್ಣಮಕ್ಕಳು ಒಂದು ಕಡೆಗೆ ಧೈರ್ಯದಿಂದ ಅಲ್ಲಲ್ಲಿ ಕುಂದ್ರಬೇಕು, ತಿರುಗಾಡಬೇಕು ಅನ್ನುವಂಗಿಲ್ಲ’ ಎಂದು ದೂರಿದಳು. ಅವಳ ಮಾತಿನ ಎಳೆಯಲ್ಲೇ ಒಂದಿಬ್ಬರು ಹೆಣ್ಣುಮಕ್ಕಳು ಎಲ್ಲೋ ನಡೆದ ಅತ್ಯಾಚಾರದ ಪ್ರಕರಣಗಳನ್ನು ನೆನಪಿಸಿಕೊಂಡು, ಆ ವ್ಯಕ್ತಿಯನ್ನು ಬೈದಾಡಿಕೊಂಡರು.
‘ಪೋಲಿಸರು ಎಲ್ಲೆ ಅದಾರ ಕರೀರಿ. ಇಂಥ ಕಾಮುಕ ಭೋಸುಡಿ ಮಕ್ಕಳನ್ನ ಹಾಂಗ ಬಿಡಬಾರದು’ ಗುಂಪಿನಲ್ಲಿದ್ದವನೊಬ್ಬ ಆಕ್ರೋಶ ವ್ಯಕ್ತಪಡಿಸಿದ. ಅದರ ಪ್ರಭಾವಕ್ಕೊಳಗಾದ ಗಂಡ, ಆ ವ್ಯಕ್ತಿಯ ಕಪಾಳಕ್ಕೆ ರಪ್ಪನೇ ಒಂದು ಏಟು ಹಾಕಿದ. ಅದರ ಪ್ರಹಾರಕ್ಕೆ ತೀವ್ರವಾಗಿ ತತ್ತರಿಸಿದ ಆ ವ್ಯಕ್ತಿ ಕುಸಿದು ಬಿದ್ದ. ಬೀಳುವಾಗಲೂ ಅವನ ಧ್ವನಿಯಿಂದ ‘ರೊಟ್ಟಿ’ ಎನ್ನುವ ಪದವೇ ಹೊರಬಿದ್ದಿತು. ಆದರೆ ಅದು ನಿಶ್ಶಬ್ದವಾಗಿತ್ತು. ಅದನ್ನು ಕೇಳಿಸಿಕೊಳ್ಳುವ ಚುರುಕು ಕಿವಿಗಳು ಅಲ್ಲಿರಲಿಲ್ಲ.
ಬಿದ್ದ ವ್ಯಕ್ತಿ ಮಿಸುಕಾಡಲಿಲ್ಲ. ಅವನನ್ನು ಆಕ್ರಮಿಸಿಕೊಂಡಿದ್ದ ಜನ ಗಾಬರಿಯಾಗಿ ದೂರಸರಿದು ನಿಂತರು. ‘ಏನಾತು ನೋಡ್ರಿ ಆ ಮನಿಷ್ಯಾಗ?’ ಯಾವನೋ ಒಬ್ಬ ಕೂಗಿದ. ‘ಒಂದೀಟೂ ಮಿಸುಗಾಡವಲ್ಲ’ ಕಳವಳ ವ್ಯಕ್ತಪಡಿಸಿದ ಮತ್ತೊಬ್ಬ. ‘ಜೀವರ ಐತಿಲ್ಲೋ ನೋಡ್ರಿ’ ಇನ್ನೊಬ್ಬ ತಲ್ಲಣದಿಂದ ಉಸುರಿದ. ಅವನ ಮಾತು ಕೇಳಿಸಿಕೊಂಡ ಗಂಡ ಹೆಂಡತಿಯರ ಜಂಘಾಬಲವೇ ಉಡುಗಿದಂತಾಯಿತು.
ಮತ್ತೊಬ್ಬ ಆ ಮನುಷ್ಯನ ಮೂಗಿನೆದುರು ತನ್ನ ಕೈಬೆರಳಿಟ್ಟು ಪರೀಕ್ಷಿಸಿದ. ಉಸಿರಾಟ ನಿಧಾನವಾಗಿತ್ತು. ‘ಜೀವ ಐತಿ, ಕಟ್ಟಿಮ್ಯಾಲೆ ಮಲಗಿಸಿರಿ, ಗಾಳಿ ಹಾಕ್ರಿ, ಮುಖಕ್ಕ ನೀರು ಸಿಂಪಡಿಸಿರಿ, ಕೈಕಾಲು ತಿಕ್ರಿ’ ಒಬ್ಬೊಬ್ಬರು ಒಂದೊಂದು ಸಲಹೆ ಕೊಟ್ಟರು.
‘ಪಾಪ ಕಳ್ಳಿಕಟಗಿ ಹಾಂಗ ಅದಾನ ಮನಿಷ್ಯಾ. ಹೀಂಗ ಹೊಡಿಬಾರದಾಗಿತ್ತು. ಇವನ ಮುಖ ನೋಡಿದ್ರ ಕಳ್ಳನಂಗ, ಲಫಂಗನ್ಹಂಗ ಕಾಣ್ಸುದಿಲ್ಲ ಬಿಡ್ರಿ, ಅವನು ಈ ಊರವನೋ ಬ್ಯಾರೇ ಉರೋನೋ? ಮೈಯ್ಯಾಗ ಆರಾಮಿತ್ತಲ್ಲೋ? ಪಾಪ, ಬಹಳ ವೀಕ್ ಕಾಣಸ್ತಾನ’ ಜನರ ಗುಂಪಿನಿಂದ ಕರುಳಿನ ಮಾತು ಕೇಳಿ ಬಂದವು.
** ** **
ರೇಲ್ವೆ ಪೊಲೀಸರು, ಸ್ಟೇಶನ್ ಮಾಸ್ಟರ್ ಆ ಸ್ಥಳಕ್ಕೆ ಬಂದರು. ಮುಖದ ಮೇಲೆ ನೀರು ಸಿಂಪಡಿಸಿದ್ದರಿಂದ ಮೆಲ್ಲಗೆ ರೆಪ್ಪೆ ತೆರೆದ ಆ ಮನುಷ್ಯ ‘ರೊಟ್ಟಿ’ ಎಂದ. ಅವಾಜು ಇರಲಿಲ್ಲ.
‘ನಿನ್ನ ಹೆಸರೇನು?’ ಸ್ಟೇಶನ್ ಮಾಸ್ತರ್ ಕೇಳಿದರು.
ರೊಟ್ಟಿ..... ಎಂದ ಆ ಮನುಷ್ಯ. ಈಗಲೂ ಅವಾಜು ಇರಲಿಲ್ಲ.
‘ಯಾವೂರು ನಿಂದು?’ ಪೊಲೀಸ್ ಗಡುಸಾಗಿ ಕೇಳಿದ. ‘ಜೋರಾಗಿ ಮಾತಾಡು’ ಮತ್ತೊಬ್ಬ ಪೊಲೀಸ್ ಹೇಳಿದ. ಅವನ ಧ್ವನಿಗೆ ತ್ರಾಣವೇ ಇರಲಿಲ್ಲ. ಆದರೂ ‘ರೊಟ್ಟಿ’ ಎಂದ. ಯಾರೋ ಒಬ್ಬ ಅವನ ಬಾಯಿಗೆ ಕಿವಿಗೊಟ್ಟು ಆಲಿಸಿದ. ‘ರೊಟ್ಟಿ’ ಎಂಬ ಶಬ್ದಕೇಳಿತು. ‘ಇಂವಾ ರೊಟ್ಟಿ ಅಂತಾನ’ ಕೇಳಿಸಿಕೊಂಡವನು ಹೇಳಿದ.
‘ಅಯ್ಯ... ಪಾಪ, ಬಹಳ ಹಸದಾನಂತ ಕಾಣಸ್ತೈತಿ. ರೊಟ್ಟಿ ಬೇಡಾಕ ಹತ್ಯಾನ’ ಒಬ್ಬ ಹೆಂಗಸು ಮರುಕದಿಂದ ಉಲಿದಳು.
’ಹೊಟ್ಯಾಗ ಕೂಳು ಇಲ್ಲಂದ್ರ ಮಾತು ಹ್ಯಾಂಗ್ ಬರ್ತಾವು?’ ಮುದುಕಿಯೊಬ್ಬಳು ಚಡಪಡಿಸುತ್ತ ತನ್ನ ಚೀಲದಲ್ಲದ್ದ ಬುತ್ತಿಗಂಟು ಬಿಚ್ಚಿ, ಅವನ ಮುಂದೆ ಇಟ್ಟಳು. ಕಣ್ಣರಳಿಸಿದ ಅವನು. ಮುದುಕಿ ರೊಟ್ಟಿಯೊಳಗ ಪಲ್ಲೆ, ಚಟ್ನಿ ಹಚ್ಚಿ ಅವನ ಕೈಗೆ ಕೊಟ್ಟಳು. ಅವನು ಗಬಗನೇ ತಿನ್ನತೊಡಗಿದ.
ಅವನ ಅವಸರಕ್ಕೆ ಬಿಕ್ಕಳಿಕೆ ಬಂತು. ಯಾರೋ ನೀರು ಕುಡಿಸಿದರು. ಗಟಗಟನೆ ಕುಡಿದ ನೀರು ನೆತ್ತಿಗೆ ಹತ್ತಿದಂತಾಗಿ ಅವನು ಕೆಮ್ಮತೊಡಗಿದ.
‘ಮೆಲ್ಲಕ ತಮ್ಮ, ಮ್ಯಾಲೆ ನೋಡು, ಆರಾಮಾಗಿ ಊಟ ಮಾಡು’ ಎಂದಳು ಮುದುಕಿ. ಅವನು ಇನ್ನೊಂದು, ಮತ್ತೊಂದು ರೊಟ್ಟಿ ತಿಂದು, ಮುದುಕಿಯ ಕಾಲಿಗೆ ನಮಸ್ಕರಿಸಿದ.
ಮೈಯೊಳಗೆ ಹೊಸಶಕ್ತಿ ತುಂಬಿಕೊಂಡಂತೆ ಆಗಿತ್ತವನಿಗೆ. ಪೊಲೀಸರು ಅವನ ಬಗ್ಗೆ ವಿಚಾರಿಸಿದರು. ಅವರೆದುರು ಅವನು ತನ್ನ ಬಗ್ಗೆ ಹೇಳಿದ. ಆ ಪ್ರಕಾರ ಅವನು ವಿಜಾಪುರ-ಗುಲಬರ್ಗಾ ಸರಹದ್ದಿನ ಒಂದು ಹಳ್ಳಿಯ ಕೂಲಿಕಾರ. ಹೆಸರು ಫಕೀರಪ್ಪ. ಐದು ಮಕ್ಕಳ ತಂದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ವಯಸ್ಸಿಗೆ ಬಂದ ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಸಾಹುಕಾರರ ಹತ್ತಿರ ಸಾಲ ಮಾಡಿದ್ದು, ಅದರ ಬಡ್ಡಿ ಚಕ್ರಬಡ್ಡಿಯಾಗಿ ವರ್ಧಿಸಿದ್ದು, ಇದ್ದ ಮನೆಯೊಂದನ್ನು ಮಾರಿದ್ದು, ಹೆಂಡತಿ ಮನಸ್ಸಿಗೆ ಚಿಂತೆ ಹಚ್ಚಿಕೊಂಡು ಹಾಸಿಗೆ ಹಿಡಿದಿದ್ದು, ಹಳ್ಳಿಯಲ್ಲಿ ಕೂಲಿಗೆ ಬೆಲೆ ಸಿಗುವುದಿಲ್ಲವೆಂದು, ಮಂಗಳೂರಿಗೆ ದುಡಿಯಲು ಹೋದರೆ ಬದುಕಿನ ಕಷ್ಟ ದೂರಾದೀತೆಂದು, ಶಾಲಾ ಮಾಸ್ತರೊಬ್ಬರ ಹತ್ತಿರ ಸಾವಿರ ರೂಪಾಯಿ ಸಾಲ ಪಡೆದು ರೈಲು ಹತ್ತಿದ್ದು, ನಿದ್ದೆ ಆವರಿಸಿ, ಬಟ್ಟೆ-ಬರೆ, ರೊಕ್ಕ ಬುತ್ತಿ ಇದ್ದ ಬ್ಯಾಗು ಕಳ್ಳತನವಾಗಿದ್ದು ಎಲ್ಲವನ್ನು ಹೇಳಿ ಕಣ್ಣೀರು ಸುರಿಸಿದ.
‘ನಾನು ಕಳ್ಳ ಅಲ್ರಿ ಸಾಹೇಬರ. ಕೆಟ್ಟ ಮನುಷ್ಯನೂ ಅಲ್ಲ. ಪೆದ್ದೋಡಿ ನನ್ಮಗ. ರೊಕ್ಕಾನರ ನಾನು ಜ್ವಾಕ್ಯಾಗಿ ಅಂಗಿ ಕಿಸೆದಾಗ ಇಟ್ಕೊಳಿಲ್ಲ. ಬ್ಯಾಗ್ ಹತ್ರ ಇರತೈತಲ್ಲ ಅಂತ ಮೈಮರ್ತು ಮಲಗಿದ್ಯಾ. ಕಿಸೆದಾಗ ಒಂದು ದಮ್ಮಡೀನೂ ಇರಲಿಲ್ಲ. ಬುತ್ತೀನೂ ಇಲ್ಲದಂಗಾಗಿ ನಿಪ್ಪತ್ತಿಗೆ ಬಿದ್ಯಾ. ನಾನು ಈ ಸ್ಟೇಶನಕ್ಕ ಇಳಿದು ಮುಂದ ಹೋಗಾವ್ ಇದ್ಯಾ. ನನ್ನ ರೊಕ್ಕಾ ಕಳ್ಳತನ ಆಗೇತಿ, ಊಟಕ್ಕ ಕೊಡ್ರಿ ಅಂತ ಜನರಿಗೆ ಬಾಯಿ ತೆರೆದು ಕೇಳಾಕ ಮನಸ್ಸು ಬರಲಿಲ್ರಿ. ನಮ್ಮವ್ವ -ನಮ್ಮಪ್ಪ ನನ್ಗ ದುಡಿದು ತಿನ್ನೋದು ಕಲಿಸ್ಯಾರಿ, ಬೇಡಿ ತಿನ್ನೋದು ಕಲಿಸಿಲ್ಲ.
ಎಷ್ಟ ಬಡತನ ಇದ್ರೂ ಸ್ವಾಭಿಮಾನ ಕಳ್ಕೊಂಡು ಜೀವನ ಮಾಡಬಾರ್ದು ಅಂತಿದ್ದ ನಮ್ಮಪ್ಪ. ಇಲ್ಲೆ ಹೊಟೇಲ್‌ನ್ಯಾಗ ಕೇಳಿದಿನ್ರಿ. ಇಲ್ಲ ಅಂದ್ರು. ನನ್ನ ಈ ಅವಸ್ಥಾ ನೋಡಿ, ದುಡಿತಾನೋ ಇಲ್ಲೋ ಅಂತ ಅವರಿಗೂ ಅನುಮಾನ ಬಂದಿರಬಹುದು. ದೈವದಾಗ ಇದ್ದಾಂಗಾಗ್ಲಿ ಅಂತ ನೀರು ಕುಡಿದು ಈ ಕಟ್ಟಿ ಹಿಡಿದು ಕುಂತ್ಯಾ. ನನ್ಗ ರೊಟ್ಟಿ ಅಂದ್ರ ಪಂಚಪ್ರಾಣಾರಿ. ಆ ತಾಯಿ ನನ್ಮುಂದ ಬುತ್ತಿ ಬಿಚ್ಚಿದ್ಲು. ಅದರೊಳಗಿನ ರೊಟ್ಟಿ ನೋಡಿ ನಾನು ಚಡಪಡಿಸಿದ್ಯಾ. ಮನಸ್ಯಾಗ ಹೊಟ್ಟೆ ಹಸಿವು ಬಹಳ ಕೆಟ್ಟಲ್ರಿ ಸಾಹೇಬರ. ನಾನು ಆಸೆಗಣ್ಣಿನಿಂದ ನೋಡಿದ್ಯಾ. ಆ ತಾಯಿ ತಾನು ತಿನ್ನುವ ರೊಟ್ಟಿಯೊಳಗ ಒಂದು ರೊಟ್ಟಿ ಕೊಟ್ಟಾಳ ಅಂತ. ಪಾಪ, ಆ ತಾಯಿ ನಾನು ನೋಡುದನ್ನು ತಪ್ಪಾಗಿ ತಿಳಿಕೊಂಡ್ಲು’ ಎಂದು ಬಿಕ್ಕಿದ ಫಕೀರಪ್ಪ.
** ** **
ಕಥೆ ಕೇಳುತ್ತ ನಿಂತಿದ್ದವರ ಕಣ್ಣುಗಳು ಒದ್ದೆಯಾದವು. ‘ಈ ದೇಶದಾಗ ಎಲ್ಲಾ ಬಡೂರ ಕಥೀನೂ ಹೀಂಗ ಅದನೋ ಮಗನ. ಖರೆ ಬಡೂರ ಬಗ್ಗೆ ಕಾಳಜೀನ ಇಲ್ಲ. ಬಡವರ ವೇಷಾ ಹಾಕಿ, ದೈನೇಸಿ ಮುಖದಿಂದ ದೋಚು ಮಂದೀನ ಬಹಳೈತಿ’ ಎಂದು ಫಕೀರಪ್ಪನ ತಲೆಯ ಮೇಲೆ ಮೃದುವಾಗಿ ಹಸ್ತ ತೀಡಿ, ಸಮಾಧಾನ ಮಾಡಿ, ಸೆರಗಿನಿಂದ ತನ್ನ ಕಣ್ಣಂಚಿನಲ್ಲಿ ಒಡೆದ ಹನಿಗಳನ್ನೊರೆಸಿಕೊಂಡಳು ಮುದುಕಿ.
ಮತ್ತೆ ತುಂಬಿದ ಗಂಟಲಿನಿಂದ ಮಾತು ಮುಂದುವರಿಸಿದ ಆಕೆ ‘ನನ್ನ ಹಿರಿಯಾನು ಇದ್ದ ತುಂಡು ಭೂಮಿ ಮ್ಯಾಲೆ ಸಾಲಾ ತಗದು, ಅದನ್ನು ತುಂಬಲಾರದನ ಹುಳಕ ಹೊಡೆವ ಔಷಧಿ ಕುಡಿದು, ವಿಲಿವಿಲಿ ಒದ್ದಾಡಿ ಪ್ರಾಣಾ ಬಿಟ್ಟ. ಅವನ ಹೆಣದ ಮ್ಯಾಲೆ ಬಂದ ಸರಕಾರಿ ಪರಿಹಾರದ ದುಡ್ಡು ಸಾಲ ಶೂಲಕ್ಕ ಈಡು ಮಾಡಿ, ಸಣ್ಣ ಮಕ್ಕಳನ್ನು ಕರ್ಕೊಂಡು ಗೋವಾಕ ದುಡಿಯಾಕ ಹ್ವಾದ್ನಿ. ಬಡತನ ಅಂತ ಕುಂತ್ರ ಹಸಿದ ಕರುಳಿಗೆ ಪುಕ್ಕಟ ಅನ್ನ ಯಾರು ಹಾಕ್ತಾರ? ನನ್ನ ಕೂಡ ಗೋವಾಕ ನಡಿ ಮಗನ, ಕೆಲಸ ಮಾಡ್ಕೊಂತ ನನ್ನ ಕೂಡ ಇರಾಕಂತ’ ಎಂದು ಮುದುಕಿ ಫಕೀರಪ್ಪನಿಗೆ ಜೀವೋತ್ಸಾಹ ತುಂಬಿದಳು. ಕೂಡಿದ ಮಂದಿ ಮುದುಕಿಯ ಮಾತಿಗೆ ತಲೆದೂಗಿದರು. ಅವಳ ಬದುಕಿನ ಅನುಭವ ಹೊಸ ಬೆಳಕಿನಂತೆ ತೋರಿತು.
ಒಂದು ಕ್ಷಣ ಅವಳೆದುರು ದೇಶದ ರಾಜಕಾರಣಿಗಳನ್ನು ನೆನಪಿಸಿಕೊಂಡು ಆಲೋಚಿಸಿದರು. ದೇಶದಲ್ಲಿ ತುಂಬಿ ತುಳುಕುವ ಬಡವರು, ಬಡತನದ ಬಗ್ಗೆ ಧಾರಾಳವಾಗಿ ಮಾತಾಡುವ ಮಣಗಟ್ಟಲೆ ಪೊಳ್ಳು ಭರವಸೆಗಳನ್ನು ನೀಡುವ, ಅವರ ಮನಸ್ಸಿನಲ್ಲಿ ಹುಸಿಕನಸುಗಳ ಬೀಜಬಿತ್ತುವ ರಾಜಕಾರಣಿಗಳು, ಗಟ್ಟಿಮನಸ್ಸು ಮಾಡಿ, ಬಡತನವನ್ನು ಈ ದೇಶದಿಂದ ಬೇರುಸಮೇತ ನಾಶ ಮಾಡಲಿಲ್ಲ.
ಅವರ ಹಸಿದ ಹೊಟ್ಟೆ ತಣಿಸಲು ಸಾಕಷ್ಟು ಅನ್ನ, ರೊಟ್ಟಿ ಸೃಷ್ಟಿಸಲಿಲ್ಲ. ಅವರ ಬಡತನವನ್ನು ತಮ್ಮ ಓಟಿನ ಬ್ಯಾಂಕಾಗಿ ಪರಿವರ್ತಿಸಿಕೊಂಡು ಹೊಟ್ಟೆ ತುಂಬಿದವರನ್ನು ಬೆಳೆಸಿದರು. ನೋಟು ಮುದ್ರಿಸಿ ಅವರನ್ನು ಕೋಟ್ಯಧೀಶರನ್ನಾಗಿ ಮಾಡಿದರು. ರೊಟ್ಟಿ ಮುಂದ ನೋಟು ಏನೂ ಅಲ್ಲ ಎನ್ನುವ ಈ ಮುದುಕಿಗೂ, ಬಡವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ರಾಜಕಾರಣಿಗಳಿಗೂ ಅಸಾಮಾನ್ಯ ಅಂತರವಿದೆ ಎಂದುಕೊಂಡರು ಜನ.
ಫಕೀರಪ್ಪನ ಮೇಲೆ ಸಂಶಯ ಹುಟ್ಟಿಸಿಕೊಂಡು ಇಂಥ ರಾದ್ಧಾಂತಕ್ಕೆ ಕಾರಣರಾದ ಗಂಡ-ಹೆಂಡತಿ ದೂರದಲ್ಲಿ ತಲೆತಗ್ಗಿಸಿ ನಿಂತಿದ್ದರು. ಧ್ವನಿವರ್ಧಕದಲ್ಲಿ ಗಾಡಿ ಬರುವ ಸೂಚನೆಯನ್ನು ಪ್ರಕಟಿಸುತ್ತಿದ್ದಂತೆ ಜನ ಚದುರಿದರು. ಗಂಡ-ಹೆಂಡತಿ ತಮ್ಮ ಸಾಮಾನುಗಳತ್ತ ನಡೆದರು. ಕಟ್ಟೆಯ ಹತ್ತಿರ ನೆಲ ಮೂಸುತ್ತ ನಿಂತಿದ್ದ ನಾಯಿಯೊಂದು, ಕಟ್ಟೆಯ ಮೇಲಿನ ಬುತ್ತಿ ನೋಡಿ ಮೇಲೆ ಜಿಗಿದು ನಿಂತಿತು. ಗಂಡ-ಹೆಂಡತಿ ‘ಹಚ್ಯಾ... ಹಚ್ಯಾ...’ ಎನ್ನುತ್ತ ಓಡಿಬಂದರು.
ನಾಯಿ ಬುತ್ತಿಯನ್ನು ಬಾಯಲ್ಲಿ ಕಚ್ಚಿಕೊಂಡು ಓಡಿತು. ಅದರ ರಭಸಕ್ಕೆ ಗಂಟಿನೊಳಗಿನ ರೊಟ್ಟಿಗಳು ಅಲ್ಲೊಂದು ಇಲ್ಲೊಂದು ಬೀಳುತ್ತಾ ಹೋದವು. ಭಿಕ್ಷುಕ ಹುಡುಗರು ಆ ರೊಟ್ಟಿಗಳ ಮೇಲೆ ತಮ್ಮ ಹಕ್ಕು ಸಾಧಿಸುವಂತೆ ಧಾವಿಸುತ್ತಿರುವ ದೃಶ್ಯವನ್ನು ಜನ ಸುಮ್ಮನೆ ನಿಂತು ನೋಡತೊಡಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.