ADVERTISEMENT

ಲಕ್ಷ್ಮಣ್‌ ನೆನಪು

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 23 ಮೇ 2015, 19:30 IST
Last Updated 23 ಮೇ 2015, 19:30 IST
ಲಕ್ಷ್ಮಣ್‌ ನೆನಪು
ಲಕ್ಷ್ಮಣ್‌ ನೆನಪು   

*ಆರ್‌.ಕೆ. ಲಕ್ಷ್ಮಣ್‌ ಹುಟ್ಟಿದ್ದು ಎಲ್ಲಿ, ಯಾವಾಗ?
1921ರಲ್ಲಿ ಮೈಸೂರಿನಲ್ಲಿ ಹುಟ್ಟಿದ ಲಕ್ಷ್ಮಣ್‌ ಆರು ಮಕ್ಕಳಲ್ಲಿ ಕೊನೆಯವರು. ಅವರ ಅಣ್ಣಂದಿರಲ್ಲಿ ಆರ್‌.ಕೆ. ನಾರಾಯಣ್‌ ಕೂಡ ಒಬ್ಬರು. ಇಂಗ್ಲಿಷ್‌ ಬರಹಗಾರರಲ್ಲಿ ನಾರಾಯಣ್‌ ಎದ್ದುಕಾಣುವ ಹೆಸರು.

*ಲಕ್ಷ್ಮಣ್‌ ತಮ್ಮ ವೃತ್ತಿ ಪ್ರಾರಂಭಿಸಿದ್ದು ಯಾವಾಗ?
ಚಿಕ್ಕಂದಿನಿಂದಲೂ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಹೊಂದಿದ್ದ ಲಕ್ಷ್ಮಣ್‌, ಬಹು ಬೇಗ ಕಾರ್ಟೂನ್‌ಗಳನ್ನು ಬಿಡಿಸತೊಡಗಿದರು. ಸ್ಥಳೀಯ ‍ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಅವರ ಕೆಲವು ಕಾರ್ಟೂನ್‌ಗಳು ಪ್ರಕಟವಾದವು. ಲಂಡನ್‌ನ ಹೆಸರಾಂತ ರಾಜಕೀಯ ಕಾರ್ಟೂನಿಸ್ಟ್‌ ಸರ್‌ ಡೇವಿಡ್‌ ಲೋ ಅವರಿಂದ ಪ್ರಭಾವಿತರಾದವರು ಲಕ್ಷ್ಮಣ್‌.

ಮುಂಬೈನಲ್ಲಿ ‘ಫ್ರೀ ಪ್ರೆಸ್‌ ಜರ್ನಲ್‌’ನ ರಾಜಕೀಯ ಕಾರ್ಟೂನಿಸ್ಟ್‌ ಆಗಿ ಪೂರ್ಣಪ್ರಮಾಣದ ವೃತ್ತಿಯನ್ನು ಅವರು ಪ್ರಾರಂಭಿಸಿದರು. 1950ರ ದಶಕದಲ್ಲಿ ‘ಟೈಮ್ಸ್‌ ಆಫ್‌ ಇಂಡಿಯಾ’ ಸೇರಿದ ಅವರು ಸುಮಾರು 50 ವರ್ಷ ಕಾರ್ಟೂನ್‌ಗಳನ್ನು ಬರೆದರು.

*ಅವರ ದೈನಿಕ ಕಾರ್ಟೂನ್‌ ಸ್ಟ್ರಿಪ್‌ನ ಹೆಸರೇನು?
1951ರಲ್ಲಿ ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ಕಾರ್ಟೂನ್‌ ಸ್ಟ್ರಿಪ್‌ ‘ಯು ಸೆಡ್‌ ಇಟ್‌’ ಶೀರ್ಷಿಕೆಯನ್ನು ಹೊಂದಿತ್ತು. ಪಂಚೆ ಉಟ್ಟ ಸಾಮಾನ್ಯ ಮನುಷ್ಯ ಅವರ ಕಾರ್ಟೂನ್‌ನ ಪ್ರಮುಖ ಪಾತ್ರ. ಅದು ಜನಪ್ರಿಯವಾಯಿತು. ಭಾರತದ ಪ್ರಜಾತಂತ್ರ ವ್ಯವಸ್ಥೆಯ ಭ್ರಷ್ಟಾಚಾರ, ನಾಗರಿಕ ಸಮಸ್ಯೆಗಳು ಮೊದಲಾದವುಗಳಿಗೆ ಸಾಕ್ಷಿಯಾದ ಪಾತ್ರ ಅದು. ವ್ಯಂಗ್ಯ ಹಾಗೂ ಹಾಸ್ಯಪ್ರಜ್ಞೆಯಿಂದ ಅನೇಕ ಕಾರ್ಟೂನ್‌ಗಳು ಕಾಲಾತೀತ ಎನಿಸಿಕೊಂಡವು.

ADVERTISEMENT

*ಅವರ ಇತರೆ ಕೆಲಸಗಳು ಯಾವುವು?
ಯುವಕನಾಗಿ ಲಕ್ಷ್ಮಣ್‌ ಆರ್‌.ಕೆ. ನಾರಾಯಣ್‌ ಅವರ ಕಥೆಗಳಿಗೆ ಇಲ್ಲಸ್ಟ್ರೇಷನ್‌ಗಳನ್ನು ಮಾಡಿದರು. ಅವೆಲ್ಲವೂ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದವು. ಆರ್‌.ಕೆ. ನಾರಾಯಣ್‌ ಕಥೆಗಳನ್ನು ಆಧರಿಸಿದ ಟೀವಿ ಧಾರಾವಾಹಿ ‘ಮಾಲ್ಗುಡಿ ಡೇಸ್‌’ನಲ್ಲಿಯೂ ಲಕ್ಷ್ಮಣ್‌ ಅವರ ಕಾರ್ಟೂನ್‌ಗಳು ಬಳಕೆಯಾದವು. 1954ರಲ್ಲಿ ಏಷ್ಯನ್‌ ಪೇಂಟ್ಸ್‌ ಕಂಪೆನಿಗೆ ಗುಟ್ಟು ಎಂಬ ‘ಮಸ್ಕಾಟ್‌’ ಸಿದ್ಧಪಡಿಸಿಕೊಟ್ಟಿದ್ದೂ ಅವರೇ. ‘ದಿ ಹೋಟೆಲ್‌ ರಿವಿಯೆರಾ’ ಹಾಗೂ ‘ದಿ ಮೆಸೆಂಜರ್‌’ ಎಂಬ ಕಾದಂಬರಿಗಳನ್ನೂ, ‘ಸರ್ವೆಂಟ್ಸ್‌ ಆಫ್‌ ಇಂಡಿಯಾ’ ಎಂಬ ಸಣ್ಣಕಥೆಗಳ ಸಂಕಲನವನ್ನೂ ಅವರು ಹೊರತಂದರು. ‘ದಿ ಟನಲ್‌ ಆಫ್‌ ಟೈಮ್‌’ ಅವರ ಆತ್ಮಕಥೆ.

*ಅವರ ಪ್ರತಿಭೆಗೆ ಸಿಕ್ಕ ಮನ್ನಣೆಗಳಾವುವು?
ಪದ್ಮ ವಿಭೂಷಣ ಪುರಸ್ಕಾರ ಅಲ್ಲದೆ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕಾರ ಅವರಿಗೆ ಸಂದಿದೆ. ಸಿಂಬಯಾಸಿಸ್‌ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಒಂದು ಪೀಠಕ್ಕೆ ಅವರ ಹೆಸರನ್ನು ಇಡಲಾಗಿದೆ. ‘ನನ್ನ ಸ್ಕೆಚ್‌ ಪೆನ್‌ ಕತ್ತಿ ಅಲ್ಲ, ಅದು ನನ್ನ ಸ್ನೇಹಿತ’ ಎಂದೇ ಅವರು ಹೇಳುತ್ತಿದ್ದರು. ಈ ವರ್ಷ ಜನವರಿ 26ರಂದು ಅವರು ಪುಣೆಯಲ್ಲಿ ತೀರಿಕೊಂಡಾಗ 93 ವರ್ಷ ವಯಸ್ಸಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.