ADVERTISEMENT

ವರಕವಿ ಮೆಚ್ಚಿದ `ಪ್ರಚಂಡ'

ಆರ್.ಡಿ.ಹೆಗಡೆ ಆಲ್ಮನೆ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ವಿದ್ವಾಂಸ, ವಿಮರ್ಶಕ, ಕವಿ ಪ್ರೊ. ಬಿ.ಎಚ್.ಶ್ರೀಧರರ ಕುರಿತು ನನಗೆ ಕುತೂಹಲ ಮೂಡಿಸಿದವರು ನನ್ನ ಅಧ್ಯಾಪಕರಾಗಿದ್ದ ಡಾ. ಕೆ. ಕೃಷ್ಣಮೂರ್ತಿಯವರು. 1972ರ ಆ ದಿನಗಳಲ್ಲಿ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಎಂ.ಎ. ವಿದ್ಯಾರ್ಥಿ.

ನಮಗೆ `ಧ್ವನ್ಯಾಲೋಕ'ವನ್ನು ಬೋಧಿಸುತ್ತಿದ್ದ ಕೃಷ್ಣಮೂರ್ತಿಯವರು ಅಪರೂಪಕ್ಕೆ ಅಂದು ಬಹಳ ಪ್ರಸನ್ನ ಮುಖಮುದ್ರೆಯಲ್ಲಿದ್ದರು. ನಾವು ವಿದ್ಯಾರ್ಥಿಗಳು ನಡೆಸಿದ ಬೇಹುಗಾರಿಕೆಯ ಪ್ರಕಾರ ಅವರು ಬರೆದಿದ್ದ ಲೇಖನ `ಜ್ಟಛಿಛಿ ಟಜ್ಚಿಛಿ ಟ್ಛ ಟಛಿಠ್ಟಿ'ಗೆ ಹಲವು ಒಳ್ಳೊಳ್ಳೆಯ ಅಭಿಪ್ರಾಯಗಳು ಬಂದಿದ್ದವಂತೆ. ಬೇರೊಂದು ಕೆಲಸಕ್ಕಾಗಿ ಅವರ ಚೇಂಬರಿಗೆ ಹೋಗಿದ್ದಾಗ ಅವರ ದೃಷ್ಟಿ ನನ್ನತ್ತ ಹೊರಳಿತು: `ನೀನು ಶಿರಸಿಯಲ್ಲಿ ಓದಿದವನು, ನಿಮ್ಮ ಪ್ರೊಫೆಸರ್ ಶ್ರೀಧರರಿಂದ ಕಾಗದ ಬಂದಿದೆ, ನನ್ನ ಲೇಖನ ಮೆಚ್ಚುಗೆಯಾಯಿತಂತೆ' ಎನ್ನುತ್ತ ಉತ್ಸಾಹಭರಿತರಾದರು.

`ಶ್ರೀಧರರಿಗೆ ಇಷ್ಟವಾದ ಮೇಲೆ ಬೇರೆ ಶಿಫಾರಸು ಬೇಡ' ಎಂದೂ ಸ್ವಗತದಲ್ಲಿ ಹೇಳಿಕೊಂಡರು.
ಶ್ರೀಧರರನ್ನು ಸರಿಯಾಗಿ ಗುರುತಿಸಲು ನನಗೆ ಅವಕಾಶ ಸಿಕ್ಕಿದ್ದು ಮತ್ತೊಬ್ಬ ಹಿರಿಯ ಲೇಖಕ ವಿ.ತಿ. ಶೀಗೇಹಳ್ಳಿಯವರ ಒಡನಾಟದಲ್ಲಿ. ಶೀಗೆಹಳ್ಳಿಯವರ ಸಂಗ್ರಹದಲ್ಲಿ ಶ್ರೀಧರರ `ಮೇಘನಾದ' ಮತ್ತು `ಅಮೃತಬಿಂದು' ಕವನ ಸಂಕಲನಗಳಿದ್ದವು. ಶ್ರೀಧರರ ಕವಿತೆಗಳನ್ನು ಕೈಯಲ್ಲಿ ಹಿಡಿದು `ಇದು ನವೋದಯ ಸ್ಫೂರ್ತಿಯಲ್ಲಿ ಬರೆದದ್ದು, ಈ ಸಾಲುಗಳ ಗಾಂಭೀರ್ಯವನ್ನು ಗಮನಿಸು, ಇದು ವಿಡಂಬನೆ' ಮುಂತಾಗಿ ಪರಿಚಯಿಸುತ್ತಿದ್ದರು ಶೀಗೆಹಳ್ಳಿಯವರು.

ಶ್ರೀಧರರಂತೆ ಯಕ್ಷಗಾನದ ಮರುಳರಾಗಿದ್ದ ಅವರ ಕಂಠ ಸಂಗೀತದ್ದಾಗಿತ್ತು. ಶ್ರೀಧರರ ಕವಿತೆಯ `ಪಾರಿವಾಳದ ಕೊರಳ ಕೊಂಕಿನಲಿ ಬಾ ಚೆಲುವೆ' ಸಾಲನ್ನು ರೋಮಾಂಚನಕಾರಿಯಾಗಿ ಹಾಡಿ ತೋರಿಸುತ್ತ ಗಹಗಹಿಸುತ್ತಿದ್ದರು. ಹೀಗೆ ಕವಿ ಶ್ರೀಧರರ ನೆಪ, ಶೀಗೆಹಳ್ಳಿಯವರ ಒಡನಾಟ ಎರಡೂ ಸೇರಿ ನನ್ನ ಕಾವ್ಯಾಸ್ವಾದದ ಬಾಲಪಾಠ ಪ್ರಾರಂಭವಾಯಿತೆನ್ನಬೇಕು.

ಹತ್ತು ಕವನ ಸಂಕಲನಗಳು, ಯಕ್ಷಗಾನ, ನಾಟಕ, ಆತ್ಮಕತೆ, ವಿನೋದ-ವಿಡಂಬನೆ, ವಿಮರ್ಶೆ, ವೈಚಾರಿಕ ಮತ್ತು ಮಕ್ಕಳ ಸಾಹಿತ್ಯ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ ಬಿ.ಎಚ್. ಶ್ರೀಧರರು ಹುಟ್ಟಿದ್ದು 24 ಏಪ್ರಿಲ್ 1918ರಂದು. ಅವರ ಸೋದರ ಸಂಬಂಧಿ, ಗೆಳೆಯ ಕವಿ ಗೋಪಾಲಕೃಷ್ಣ ಅಡಿಗರು ಕೂಡ ಅದೇ ವರ್ಷ ಜನಿಸಿದರು.

ಬದುಕಿರುವವರೆಗೂ ಅವರಿಬ್ಬರ ನಡುವಿನ ಸಂಬಂಧ ಆಕರ್ಷಣೆ-ವಿಕರ್ಷಣೆಗಳ ನಡುವೆ ತೂಗಿಕೊಂಡಿತ್ತು. ಇಬ್ಬರೂ ಬಾಲ್ಯದ ಗೆಳೆಯರು. ಆದರೆ ಬೆಳೆಯುತ್ತ ಅಭಿರುಚಿಯಲ್ಲಿ ಕವಲಾದವರು. ಅಡಿಗರು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಕಾವ್ಯದಲ್ಲಿ ಅಭಿವ್ಯಕ್ತಿಯ ಹೊಸ ವಿನ್ಯಾಸವನ್ನು ಹುಡುಕಾಡಿದರೆ, ಶ್ರೀಧರರು ಸಂಸ್ಕೃತ ಅಧ್ಯಾಪಕರಾಗಿ ತಮ್ಮ ಸಾಹಿತ್ಯ ಕೃಷಿಯನ್ನು ಪರಂಪರೆಯ ಕಾವಲಿಗೆ ಒಗ್ಗಿಸಿಕೊಂಡರು. ಶ್ರೀಧರರಿಗೆ ಪರಂಪರೆಯಲ್ಲಿ ವೈಚಾರಿಕವಾಗಿ ರೂಪಹೀನವಾದುದನ್ನು ತಿರಸ್ಕರಿಸುವ ದೃಢವಾದ ನಿಲುವು ಇತ್ತು.

ನನಗೆ ಕಂಡಂತೆ ಅಡಿಗರು ಶ್ರೀಧರರನ್ನು ಸಾಹಿತ್ಯದಲ್ಲಾಗಲಿ, ಮಾತಿನಿಂದಾಗಲೀ ನೋಯಿಸಲಿಲ್ಲ. ಆದರೆ ಆದರ್ಶವಾದಿಯಾದ ಶ್ರೀಧರರು ದಿಕ್ಕಿಲ್ಲದ ನವ್ಯ ಸಾಹಿತ್ಯದ ವೈಚಾರಿಕ ಆಕೃತಿಯ ಟೀಕಾಕಾರರಾಗಿ `ನವ್ಯ'ವನ್ನು ನಿರಾಕರಿಸುವ ಮೂಲಕ ಅಡಿಗರನ್ನು ಪ್ರಶ್ನಿಸಿದರು. ಹಾಗೆಯೇ ಇಬ್ಬರ ಗುರಿಯೂ ಒಂದೇ ಎನ್ನುವಂತೆ ಇಬ್ಬರಿಗೂ ನೆಹರೂ ಪ್ರಣೀತ ರಾಜಕೀಯದ ಬಗ್ಗೆ ಅಸಹನೆಯಿತ್ತು. ಅದನ್ನು ಅಡಿಗರು ಕವಿತೆಗಳಲ್ಲಿ ಹೇಳಿಕೊಂಡರೆ ಶ್ರೀಧರರು `ರಾಷ್ಟ್ರಸೂತ್ರ'ದಲ್ಲಿ ವ್ಯಕ್ತಪಡಿಸಿದರು.

ಶ್ರೀಧರರು ಬಹಳ ಪ್ರಖರವಾದ ಸಾಂಸ್ಕೃತಿಕ ಪ್ರಜ್ಞೆಯ ಬರಹಗಾರರು. ಜಾತಿ ಪದ್ಧತಿ ಮತ್ತು ಕೋಮುಭಾವನೆಯನ್ನು ಸಂಸ್ಕೃತಿ ವಿಮರ್ಶೆಯಾಗಿ ಖಂಡಿಸುವಾಗ ಅವರಿಗೆ ಮೊನಚಾದ ನೋಯಿಸುವ ಮಾತುಗಳ ಪ್ರಯೋಗವೂ ತಪ್ಪೆನಿಸುತ್ತಿರಲಿಲ್ಲ. ಅವರು ತೋರುತ್ತಿದ್ದ ನೈತಿಕ ಕೆಚ್ಚಿನ ಈ ಒಳ ವಿರೋಧ ಅವರಿಗೆ ವಿಲಕ್ಷಣ ಬರಹಗಾರನ ಖ್ಯಾತಿ ತಂದಿತು. ಅವರು `ಕಾವ್ಯಸೂತ್ರ', `ಜ್ಞಾನಸೂತ್ರ' ಮತ್ತು `ರಾಷ್ಟ್ರಸೂತ್ರ'ಗಳನ್ನು ಬರೆದರು, ಅರವಿಂದರನ್ನು ಅನುವಾದಿಸಿದರು. ಬೇಂದ್ರೆಯವರ ಕುರಿತು ಎರಡು ಮಹತ್ವದ ವಿಮರ್ಶಾಕೃತಿಗಳನ್ನು ತಂದರು.

ಆದರೆ ಈ ಯಾವುದರಿಂದಲೂ ಅವರಿಗೆ ಸಹಜವಾಗಿ ಸಲ್ಲಬೇಕಾಗಿದ್ದ ಕನ್ನಡದ `ಮೇಜರ್ ಬರಹಗಾರ'ನ ಪಟ್ಟ ಸಿಗಲಿಲ್ಲ. ಸಿಗಲಿಲ್ಲ ಎನ್ನುವ ಅಸಮಾಧಾನ ಓದುಗರನ್ನು ಕಾಡಿದಷ್ಟು ಶ್ರೀಧರರನ್ನು ಕಾಡಲಿಲ್ಲ. ನಾನು ಊಹಿಸಬಲ್ಲಂತೆ ಹೀಗೆ ಕಾಡದಿರಲು ಅವರ ಸ್ನೇಹಶೀಲತೆ ಕಾರಣವಾಗಿದೆ. ಅವರು ಸರಸ ಮಾತುಗಾರರಾಗಿದ್ದರು.

ಮಾತಿನಲ್ಲಿ ಕಾಲವನ್ನೂ ತಡೆದು ನಿಲ್ಲಿಸುವ ಛಾತಿ ಅವರಿಗಿತ್ತು. ಆರಂಭದ ಅವರ ಲಲಿತ ಪದಾವಳಿಗಳ ಭಾವಗೀತೆಗಳಿಗಿಂತ, ನಂತರದ ಗಡಸು-ಮೊನಚಾದ ಗದ್ಯಕ್ಕಿಂತ, ಹರಿತವಾದ `ಕಂಟಕಾರಿ ಮಹಾಕಾವ್ಯ'ದ ವಿಡಂಬನೆಗಿಂತ ಮಿಗಿಲಾಗಿ ಅವರಿಗೆ ಸರಳವಾಗಿ, ಸ್ವಾರಸ್ಯವುಕ್ಕಿಸುತ್ತ, ಮಾತನಾಡುವುದರಲ್ಲಿ ಮಹದಾನಂದವಿತ್ತು.

ಅವರನ್ನು ಹತ್ತಿರದಿಂದ ಬಲ್ಲವರು ಅವರ ಗೆಳೆತನದ ಬಗ್ಗೆ ಇಂದಿಗೂ ಗಮನಸೆಳೆಯುತ್ತಾರೆ. ವಾದ-ವಿವಾದಗಳ ನಡುವೆ ಜ್ವಲಿಸುವ ಸಿಟ್ಟನ್ನು ದ್ವೇಷವಾಗಲು ಬಿಡುತ್ತಿರಲಿಲ್ಲ ಎಂದೂ ನೆನಪಿಸಿಕೊಳ್ಳುತ್ತಾರೆ. ಶ್ರೀಧರರ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದ ಎಲ್.ಆರ್.ಭಟ್ಟರ ಮಾತನ್ನು ಇಲ್ಲಿ ಇಡಿಯಾಗಿ ಸ್ಮರಿಸಿಕೊಳ್ಳಬಹುದು.

“ಕುಮಟಾದಲ್ಲಿ ಆಗಿನ ಕೆನರಾ ಕಾಲೇಜು ಒಂದು ವಿಶ್ವವಿದ್ಯಾಲಯವೇ ಆಗಿತ್ತು. ಕೆ.ಕೃಷ್ಣಮೂರ್ತಿ, ಗೋಪಾಲಕೃಷ್ಣ ಅಡಿಗ, ಜಿ.ಎಸ್.ಆಮೂರ, ಎಲ್. ಆರ್. ಹೆಗಡೆ, ಕೆ.ಜಿ.ಶಾಸ್ತ್ರಿ, ಹನುಮಂತರಾವ್, ಎನ್.ಆರ್.ರಾವ್, ಎಲ್.ಟಿ.ಶರ್ಮಾ ಹಾಗೂ ಬಿ.ಎಚ್.ಶ್ರೀಧರ ಇದ್ದರು. ಒಬ್ಬೊಬ್ಬರೂ ದಿಗ್ಗಜರುಗಳೇ. ಮಾನವೀಯ ಅನುಕಂಪ, ನಿರ್ಭಿಡೆ, ಸತ್ಯಸಂಧತೆ, ಸರಳಾತಿಸರಳ ಜೀವನ, ವಿಶಾಲ ಅಂತಃಕರಣ ಇವುಗಳಿಂದಾಗಿ ಶ್ರೀಧರರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು! ಸ್ವತಃ ಅಡಿಗರೂ ಕೂಡ `ಶ್ರೀಧರನೆಂದರೆ ಅವನ ವಿದ್ಯಾರ್ಥಿಗಳಿಗೆ ತುಂಬ ಅಚ್ಚುಮೆಚ್ಚು ಅಭಿಮಾನ' ಎಂದು ಇದನ್ನು ಪುಷ್ಟಿಕರಿಸುತ್ತಾರೆ”. 

ಸ್ನೇಹ ಮತ್ತು ಶೀಲ ಶ್ರೀಧರರಲ್ಲಿ ಚಿಗುರಿದ್ದು ಬೇಂದ್ರೆಯವರ ಸಂಗದಲ್ಲಿಯೇ! ಹೀಗೆ ನನಗೆ ಹೊಳೆಯುವಾಗಲೆಲ್ಲ ಒಂದು ಚಿತ್ರ ಕಣ್ಣಿಗೆ ಕಟ್ಟುತ್ತದೆ. ಕೋಟು ತೊಟ್ಟು ಮುಖದ ಮೇಲೆ ತಿಳಿನಗುವನ್ನು ಚೆಲ್ಲಿಕೊಂಡು, ಕೈಯಲ್ಲೊಂದು ಕೊಡೆ ಹಿಡಿದು ಸಾಗುತ್ತಿರುವ ಚಿತ್ರ ಇದು. ಇದರಲ್ಲಿ ಬೇಂದ್ರೆ ಕಾಣಿಸುತ್ತಾರೆ, ಶ್ರೀಧರರೂ ಕಾಣಿಸುತ್ತಾರೆ. ಹೀಗಿದ್ದರೂ ಅವರು ಭಾವದಲ್ಲಿ, ಸ್ವಭಾವದಲ್ಲಿ ಒಬ್ಬರಿಗೊಬ್ಬರು ಎರಕವಾದವರು.

ಬೇಂದ್ರೆಯವರು 1971ರಲ್ಲಿ ಒಮ್ಮೆ ಹೇಳಿದ್ದೂ ಇದೇ: `ನಾನು ಇಂದು ಶ್ರೀಧರರ ಕುರಿತು ಮಾತನಾಡುತ್ತ ಯಾರ ಬಗ್ಗೆ ಮಾತನಾಡಿದೆನೋ, ನನ್ನ ಬಗ್ಗೆ ಮಾತನಾಡಿಕೊಂಡೆನೋ ತಿಳಿಯಲಿಲ್ಲ. ನನ್ನ ಬಗ್ಗೆ ಮಾತನಾಡಿಕೊಂಡರೂ ಅದೆಲ್ಲ ಶ್ರೀಧರರಿಗೆ ಅಂದುಬಿಡುತ್ತೇನೆ'. ಬೇಂದ್ರೆಯವರಿಗೆ ಶ್ರೀಧರರೊಡನೆ ಏಕವಚನದ ಸಲುಗೆ. ಅವರಿಗೆ `ಪ್ರಚಂಡ' ಎಂದು ಮೆಚ್ಚುಗೆಯ ಬಿರುದು ಕೊಟ್ಟವರು ಬೇಂದ್ರೆ.

ಬೇಂದ್ರೆ ಸಾಹಿತ್ಯದ ಮೇಲೆ ಶ್ರೀಧರರ ಎರಡು ವಿಮರ್ಶಾಕೃತಿಗಳಿವೆ. ಮೊದಲನೆಯದು `ಬೇಂದ್ರೆ', ಇದು ಪ್ರಕಟವಾದದ್ದು 1956ರಲ್ಲಿ. ಬೇಂದ್ರೆ ಕಾವ್ಯದ ಕುರಿತು ಬಂದಿರುವ ಪುಸ್ತಕ ಪ್ರಮಾಣದ ವಿಮರ್ಶೆಗಳಲ್ಲೇ ಇದು ವಿಶಿಷ್ಟ ಎಂದು ಇದನ್ನು ಗುರುತಿಸುತ್ತಾರೆ ವಿಮರ್ಶಕ ಡಾ. ಎಂ.ಜಿ. ಹೆಗಡೆ. ಬೇಂದ್ರೆ ಕುರಿತ ಅವರ ಎರಡನೆಯ ವಿಮರ್ಶಾಕೃತಿ ಬಂದದ್ದು 1987ರಲ್ಲಿ, `ಪಸರಿಪ ಕನ್ನಡಕ್ಕೊಡೆಯನೀಗದರಾಂಕಿತ ಬೇಂದ್ರೆ'.

ಕಾವ್ಯ ಏನೆಲ್ಲ ಸಾಧಿಸಬಹುದೆಂದು ಶ್ರೀಧರರು ನಿರೀಕ್ಷಿಸುತ್ತಾರೆಯೋ ಅದೆಲ್ಲ ಬೇಂದ್ರೆ ಕವಿತೆಗಳಲ್ಲಿ ಸಾಕಾರಗೊಂಡಿವೆ ಎಂದು ವಿಶ್ಲೇಷಿಸಿ ಹೇಳುವವರಿಗೆ ಈ ಕೃತಿಯೇ ಪ್ರಮಾಣ. ಕನ್ನಡ ಸಾಹಿತ್ಯ ಲೋಕದಲ್ಲಿ ಬೇಂದ್ರೆ ಕುರಿತು ಬಹುವಾಗಿ ಚಲಾವಣೆಯಲ್ಲಿರುವ ಒಂದು ಮಾತಿದೆ- `ಬೆಂದರೆ ಬೇಂದ್ರೆಯಾದಾನು' ಎನ್ನುವುದು. ಇದು ಕನ್ನಡಕ್ಕೆ ಬಿ.ಎಚ್. ಶ್ರೀಧರರ ಕೊಡುಗೆಯಾಗಿದೆ. ಅಂತೆಯೇ `ಮಾಸ್ತಿ ಕನ್ನಡದ ಆಸ್ತಿ' ಎಂಬ ಮಾತು ಕೂಡ ಪ್ರಸಿದ್ಧ.

ಒಂದು ವರ್ಷ ನಾನು ಶ್ರೀಧರರ ತರಗತಿಗಳಲ್ಲಿ ಕುಳಿತಿದ್ದೆನಷ್ಟೆ. ಆಮೇಲೆ 1969-70ರ ಸುಮಾರಿಗೆ ಅವರು ಪ್ರಾಚಾರ್ಯರಾಗಿ ಸಿದ್ದಾಪುರಕ್ಕೆ ನಿರ್ಗಮಿಸಿದರು. ನಡುವೆ ಒಂದೆರಡು ಬಾರಿ ಅವರನ್ನು ಅವರ ಮನೆಯಲ್ಲೇ ಕಂಡಿದ್ದೆ. ಆಗೆಲ್ಲ ಹಲವು ಸಲ, ಅವರ ಮಾತು ನಿರರ್ಗಳವಾಗಿ ಸಾಗಿರುತ್ತಿತ್ತು. ಹೊಸ ವಿಚಾರಗಳು ಅವರಿಗೆ ತಮ್ಮ ಮಾತಿನ ಓಘದಲ್ಲಿ ಫಕ್ಕನೆ ಮಿಂಚುತ್ತಿದ್ದವು ಎನ್ನುವ ಅನುಮಾನ ನನಗೆ. ಒಮ್ಮೆ ಶ್ರೀಧರರು ತನ್ನ ಮಾತೇ ತನಗೆ ಪ್ರೇರಣೆಯಾಗಿ `ಹೊಸಗನ್ನಡ ಶೈಲಿಶಾಸ್ತ್ರ' ಕೃತಿಯ ಸಂಕಲ್ಪ ಮಾಡಿದೆ ಎಂದೂ ಹೇಳಿಕೊಂಡಿದ್ದರು. ಇದು ಕನ್ನಡದಲ್ಲಿ ಶೈಲಿಶಾಸ್ತ್ರದ ಅಭ್ಯಾಸವನ್ನು ಆರಂಭಿಸಿದ ಮೊದಲನೆಯ ಕೃತಿ. ಧಾರವಾಡದ `ಪ್ರತಿಭಾ ಗ್ರಂಥಮಾಲೆ'ಯಿಂದ 1957ರಲ್ಲಿ ಪ್ರಕಟವಾಗಿದೆ.

ಶ್ರೀಧರರನ್ನು ಸರಿಯಾಗಿ ಬಲ್ಲದವರು ಹೇಳುತ್ತಾರೆ- ಅವರಿಗೆ ಮಾತು ಬೆಳೆಸಲು ತನ್ನ ಮಾತೇ ಸಾಕೆಂದು. ಅವರ ಕೋಪದ ಬಗೆಗೂ ಅದು ಅಕಾರಣ ಎನ್ನುವ ಮಾತು ಬರುತ್ತದೆ. ಆದರೆ ಇಂತಹ ಕಾರ್ಟೂನಿಸ್ಟರಿಗೆ ಶ್ರೀಧರರು ತನ್ನ ಕೋಪವನ್ನು ಆರಿಸುತ್ತಿದ್ದ ರೀತಿ ನೆನಪಿಗೆ ಬರುವುದಿಲ್ಲ.

ಅವರ ಸಂಸ್ಕೃತ ಪ್ರೀತಿಯನ್ನು ಕಂಡು `ಪ್ರತಿವಾದಿ ಭಯಂಕರ' ಎಂದು ಅಡ್ಡ ಹೆಸರಿಡುವವರಿಗೆ ಅವರ `ಸಂಸ್ಕೃತ ಕನ್ನಡಗಳ ಬಾಂಧವ್ಯ' ಕೃತಿಯ ಸಮತೂಕದ ಆಲೋಚನೆಗಳು ಮರೆತಿರುತ್ತವೆ ಅಥವಾ ಅವರದನ್ನು ಓದಿರುವುದಿಲ್ಲ. `ಕನ್ನಡದ ನೆಲದಲ್ಲಿ ಕನ್ನಡತಿ ಯಜಮಾನಿ ಮಿಕ್ಕ ಹೆಂಗಸರೆಲ್ಲ ಒಕ್ಕಲಷ್ಟೆ' ಈ ಪ್ರಸಿದ್ಧ ಉಕ್ತಿಯೂ ಶ್ರೀಧರರದ್ದೇ ತಾನೇ?

..ಎದೆ ಹಿಗ್ಗು ಕಡೆ ಮಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
ಕಡಗೋಲು ಹಿಡಿಹುಟ್ಟು...

ಬೇಂದ್ರೆ ಇದನ್ನು ಶ್ರೀಧರರ ಬೆನ್ನುತಟ್ಟಿ ಹಾಡಿದರೇನೋ ಎಂದುಕೊಳ್ಳುತ್ತೇನೆ. ಬಹುಶಃ ಹಲವು ಕಷ್ಟ ಕಾರ್ಪಣ್ಯಗಳನ್ನು ಶ್ರೀಧರರು ಈ ನಂಬುಗೆಯಿಂದಲೇ ಹಾಯುತ್ತ ಬಂದರು. 1990ರಲ್ಲಿ ಅವರ ಸಾವಿಗೆ ಮುನ್ನ ಅವರ ಮೂತ್ರಪಿಂಡ ವಿಫಲವಾಗಿತ್ತು ಎಂದೂ ಕೇಳಿದೆ.

ಅವರ ಜೀವಯಾನದ ಕೊನೆಯ ದಿನಗಳಲ್ಲಿ `ಭಾರತೀಯ ಮೂರ್ತಿಶಿಲ್ಪ' ಕೃತಿ ಪ್ರಕಟವಾಗಿತ್ತು. ಇದು ಅವರ ಪಂಡಿತ ಕೃತಿ. ಕುಟುಂಬದ ನಿಕಟವರ್ತಿಗಳಿಂದ ಸಾಕಷ್ಟು ನೋವು ತಿಂದಿದ್ದರು ಶ್ರೀಧರರು. ಅಂತಹ ದುರ್ಭರ ದಿನಗಳಲ್ಲಿ ಕೂಡ ಅವರು ಸಾಹಿತ್ಯ ಕೃತಿಗಳನ್ನು ಎಡೆಬಿಡದೆ ಸಿದ್ಧಗೊಳಿಸಿದರು ಎನ್ನುವುದೇ ನನ್ನನ್ನು ಬೆರಗಿನಲ್ಲಿ ಯೋಚಿಸುವಂತೆ ಮಾಡುತ್ತದೆ.

ಶ್ರೀಧರರ ನೆನಪಿನಲ್ಲಿ...
ಬಿ.ಎಚ್. ಶ್ರೀಧರರು ಪ್ರಕಾಂಡ ಪಂಡಿತರೆಂದೇ ಪ್ರಸಿದ್ಧರಾದವರು. ಮಾಸ್ತಿ, ಬೇಂದ್ರೆ, ಕಾರಂತ, ಗೋಕಾಕ ಮುಂತಾದ ಅನೇಕ ಹಿರಿಯ ಸಾಹಿತಿಗಳ ಒಡನಾಟ ಅವರ ಬಾಳಿನ ಕ್ಷಣಗಳನ್ನು ಸೊಗಸಾಗಿಸಿತ್ತು. ಕವಿ ಬೇಂದ್ರೆಗೂ, ಶ್ರೀಧರರಿಗೂ ಅವಿನಾಭಾವ ಸಂಬಂಧವಿತ್ತು. ಏಪ್ರಿಲ್ 24ರಂದು ಶ್ರೀಧರರ 95ನೇ ಜನ್ಮದಿನ.

ಅಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಮರ್ಶಕ ಡಾ.ರಾಜೇಂದ್ರ ಚೆನ್ನಿಯವರಿಗೆ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ನಿರಂತರ 23 ವರ್ಷಗಳಿಂದ `ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿ' ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ರಾಜ್ಯದ ಶ್ರೇಷ್ಠ ಸಾಹಿತಿಗಳಿಗೆ ಶ್ರೀಧರರ ಜನ್ಮದಿನದಂದು ಪ್ರಶಸ್ತಿ ನೀಡುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.