ADVERTISEMENT

ವಿಕಾಸದ ಹಾದಿಯಲ್ಲಿ ಹೂವುಮುಳ್ಳು

ಪ್ರಜಾವಾಣಿ ವಿಶೇಷ
Published 3 ಮೇ 2014, 19:30 IST
Last Updated 3 ಮೇ 2014, 19:30 IST

ಮೈಸೂರು ಸಂಸ್ಥಾನದಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ರಾಜಮನೆತನದವರೇ ಅಧ್ಯಕ್ಷರಾಗಬೇಕು ಎಂಬ ತೀರ್ಮಾನ ಮಾಡಲಾಗಿತ್ತು. ಮೊದಲ ಅಧ್ಯಕ್ಷರಾದ ಎಚ್‌.ವಿ. ನಂಜುಂಡಯ್ಯ ಅವರ ನಂತರ ಯುವರಾಜ ನರಸಿಂಹರಾಜ ಒಡೆಯರ್ ಅಧ್ಯಕ್ಷರಾದರು. ರಾಜಮನೆತನದವರು ಅಧ್ಯಕ್ಷರಾದ ಅವಧಿಯಲ್ಲಿ ಸಾಹಿತಿಗಳು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬೆಳ್ಳಾವೆ ವೆಂಟಕನಾರಾಯಣಪ್ಪ, ಡಿ.ವಿ. ಗುಂಡಪ್ಪ, ಬಿ.ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಉಪಾಧ್ಯಕ್ಷರಾಗಿದ್ದರು. ಪರಿಷತ್ತಿನ ಅಧ್ಯಕ್ಷರಾಗಿದ್ದ ಎಂ.ಆರ್. ಶ್ರೀನಿವಾಸ ಮೂರ್ತಿ ಕಾಲರಾದಿಂದ ತೀರಿಕೊಂಡಾಗ ಆ ಜಾಗಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಧ್ಯಕ್ಷರಾಗಿ ಒಂದು ವರುಷ ಮುಂದುವರೆದರು.

‘ನಾನು ಅಧ್ಯಕ್ಷನಾಗಿ ಮುಂದುವರೆಯುವುದು ಸರಿಯಲ್ಲ, ಬೇರೆಯವರೂ ಅಧ್ಯಕ್ಷರಾಗಬೇಕು’ ಎಂದು 1954ರಲ್ಲಿ ಎ.ಎನ್‌. ಮೂರ್ತಿರಾಯರನ್ನು ಆ ಸ್ಥಾನಕ್ಕೆ ಕೂರಿಸಿದರು. ಅಲ್ಲಿಂದ ಮುಂದೆ ಕಥೆ ಬದಲಾಯಿತು. ಪರಿಷತ್ತಿನ ಅಧ್ಯಕ್ಷರ ಆಯ್ಕೆಗೆ ಅಲ್ಲಿಯವರೆಗೂ ಚುನಾವಣೆ ಇರಲಿಲ್ಲ. ಯಾರೂ ಸ್ಪರ್ಧೆ ಮಾಡುತ್ತಿರಲಿಲ್ಲ. ಸಂಭವನೀಯರನ್ನು ಕೇಳಿ, ಕಷ್ಟಪಟ್ಟು ಒಪ್ಪಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಕೂರಿಸಬೇಕಿತ್ತು. 

1956ನೇ ಇಸವಿಯಲ್ಲಿ ಕರ್ನಾಟಕ ಏಕೀಕರಣವಾದಾಗ ಪರಿಷತ್ತಿಗೂ ಏಕೆ ಚುನಾವಣೆ ನಡೆಸಬಾರದು ಎನ್ನುವ ಅಭಿಪ್ರಾಯ ಮೂಡಿತು. ಅ.ನ. ಕೃಷ್ಣರಾಯರು ಮತ್ತು ಬಿ. ಶಿವಮೂರ್ತಿ ಶಾಸ್ತ್ರಿಗಳು ಸ್ಪರ್ಧೆ ಮಾಡಿದರು. ಆಗ ಸದಸ್ಯರ ಸಂಖ್ಯೆ 41. ಎಲ್ಲರೂ ಸಭೆಗೆ ಹಾಜರಿದ್ದು ಮತಚಲಾಯಿಸಿದರು. ಅದಾಗಲೇ ಸಾಕಷ್ಟು ಕೆಲಸ ಮಾಡಿ ಪ್ರಸಿದ್ಧರಾಗಿದ್ದ ಕಾದಂಬರಿಕಾರ, ನಾಟಕಕಾರರಾದ ಅ.ನ. ಕೃಷ್ಣರಾಯರನ್ನು ಶಿವಮೂರ್ತಿ ಶಾಸ್ತ್ರಿಗಳು ಒಂದೇ ಮತದಲ್ಲಿ ಸೋಲಿಸಿದ್ದು ಆಶ್ಚರ್ಯವಾಯಿತು. ಶಿವಮೂರ್ತಿ ಶಾಸ್ತ್ರಿಗಳು ಒಂಬತ್ತು ವರುಷ ಅಧ್ಯಕ್ಷರಾಗಿ ಗಟ್ಟಿಯಾಗಿ ಕುಳಿತು ಕೆಲಸ ಮಾಡಿದರು.

ಮೂರು ಬಾರಿಯೂ (ಅಧ್ಯಕ್ಷರ ಅಧಿಕಾರದ ಅವಧಿ ಮೂರು ವರುಷ) ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆಯಾದರು. ಮತ್ತೆ ಚುನಾವಣೆ ಬಂದಿತು. ‘ಏಕೀಕರಣದ ನಂತರ ಒಬ್ಬರೇ ಇಷ್ಟು ದಿನ ಅಧ್ಯಕ್ಷರಾಗಿರಬಾರದು’ ಎಂದು ನಾನು ಗಲಾಟೆ ಮಾಡಿದೆ. ನನ್ನನ್ನು ಬಲವಂತವಾಗಿ ಚುನಾವಣೆಗೆ ನಿಲ್ಲಿಸಿದರು. ಸದಸ್ಯರ ಸಂಖ್ಯೆಯೂ ಹೆಚ್ಚಾಗಿತ್ತು. ಶಿವಮೂರ್ತಿ ಶಾಸ್ತ್ರಿಗಳು ಸ್ಪರ್ಧೆಯಿಂದ ಹಿಂದೆ ಸರಿದರು. ಅವಿರೋಧವಾಗಿ ಆಯ್ಕೆಯಾದೆ. ನಾನು ಅಧ್ಯಕ್ಷನಾದ (1964–69) ಅವಧಿಯಲ್ಲಿ ಪರಿಷತ್ತು ತುಂಬಾ ಇಕ್ಕಟ್ಟಿನ ಸ್ಥಿತಿಯಲ್ಲಿತ್ತು. ಡಾ. ನಿರಂಜನ ಅವರು ನನಗೆ ಕಾರ್ಯದರ್ಶಿಯಾಗಿದ್ದರು.

ಪರಿಷತ್ತಿನ ದುಡ್ಡು ಬ್ಯಾಂಕಿನಲ್ಲಿ ಎಷ್ಟಿದೆ ಎಂದು ನೋಡಿದರೆ ಒಂದು ಕಾಸೂ ಇರಲಿಲ್ಲ. ಮುಚ್ಚುವ ಸ್ಥಿತಿಗೆ ಬಂದಿತ್ತು. ಮೊದಲನೇ ತಿಂಗಳು ಸಾಲ ಮಾಡಿ ಕ್ಲಾರ್ಕ್‌ಗಳಿಗೆ ಸಂಬಳ ಕೊಡಬೇಕಾಯಿತು. ಸರ್ಕಾರದಿಂದ ಹಣ ತರಬೇಕಾದರೆ ಏನು ಮಾಡಬೇಕು? ಹಣಕಾಸಿನ ಸ್ಥಿತಿ ಏನಾಗಿದೆ ನೋಡೋಣ ಎಂದು ಮೊದಲು ಆಡಿಟ್ ಮಾಡಿಸಿದೆ. 47 ಸಾವಿರ ರೂಪಾಯಿ ಸಾಲದ ಹೊರೆ ಇತ್ತು. ನಿಘಂಟಿಗೋಸ್ಕರ ಸರ್ಕಾರ ಕೊಡುತ್ತಿದ್ದ ದುಡ್ಡು ಬೇರೆ, ಪರಿಷತ್ತಿಗೆ ಕೊಡುತ್ತಿದ್ದ ಹಣ ಬೇರೆ. ಪರಿಷತ್ತಿನ ಖರ್ಚಿಗೋಸ್ಕರ ನಿಘಂಟಿನ ಹಣವನ್ನು ಉಪಯೋಗ ಮಾಡಿಬಿಟ್ಟಿದ್ದರು. ಆ 47 ಸಾವಿರ ರೂಪಾಯಿ ಪೂರೈಸುವ ತನಕ ಒಂದು ಕಾಸು ಕೊಡುವುದಿಲ್ಲ ಎಂದು ಪರಿಷತ್ತಿಗೆ ಸರ್ಕಾರ ಹೇಳಿತು.  

ಆಗ ವಿತ್ತ ಮಂತ್ರಿಗಳಾಗಿದ್ದವರು ರಾಮಕೃಷ್ಣ ಹೆಗಡೆ. ಹೆಗಡೆಯವರ ಬಳಿ ಹೋಗಿ ‘ಕನ್ನಡ ನಾಡಿನ ಸಾಹಿತ್ಯ– ಸಂಸ್ಕೃತಿಗೆ ಇಷ್ಟುದಿನ ಕೆಲಸ ಮಾಡಿಕೊಂಡು ಬಂದಿರುವ ಸಂಸ್ಥೆ ಈಗ ಸತ್ತುಹೋಗುತ್ತಿದೆ. ನಾನು ಮುಳುಗುವ ಹಡಗಿನ ಕ್ಯಾಪ್ಟನ್‌ನಂತೆ, ಮುಳುಗುವ ಪರಿಷತ್ತಿನ ಅಧ್ಯಕ್ಷನಾಗಿ ಬಂದಿದ್ದೇನೆ. ನಾನು ಉಪಾಧ್ಯಾಯ. ಹಣ ತೀರಿಸುವುದಕ್ಕೆ ಆಗುವುದಿಲ್ಲ. ಇಲ್ಲದೆ ಹೋದರೆ ಹಿಂಸೆ ಆಗುತ್ತದೆ. ಈ ದೃಷ್ಟಿಯಿಂದ ಪರಿಷತ್ತನ್ನು ಉಳಿಸಬೇಕು. ಪರಿಷತ್ತನ್ನು ಉಳಿಸುತ್ತಿರೋ, ಬಿಡುತ್ತೀರೋ ನಿಮ್ಮ ಕೈಯಲ್ಲಿದೆ’ ಎಂದೆ. 

ಹೆಗಡೆಯವರು ಸ್ಪಂದಿಸಿದರು. ‘ಈ ದಿನವೇ ನಿಮಗೆ ವರ್ಷ ಸರ್ಕಾರದಿಂದ 25 ಸಾವಿರ ರೂಪಾಯಿ ನೀಡುವ ಏರ್ಪಾಡು ಮಾಡುತ್ತೇನೆ. ಈ ಹಣ ಸರಿಯಾದ ರೀತಿ ಖರ್ಚಾದರೆ ಮುಂದಿನ ವರ್ಷ 50 ಸಾವಿರ ರೂಪಾಯಿ ಮಾಡುತ್ತೇನೆ’ ಎಂದರು. ನಾನು ಪರಿಷತ್ತಿಗೆ ಬರುವ ವೇಳೆಗೆ ಹಣ ನಮ್ಮ ಕೈಸೇರಿತ್ತು. ಆದರೆ 47 ಸಾವಿರ ರೂಪಾಯಿ ಸಾಲ ತೀರಿಸಬೇಕಲ್ಲ. ಇದು ಹೇಗೆ? ‘ನಿಘಂಟುವಿನ ಯೋಜನೆ ಸರ್ಕಾರದ್ದು. ಅದು ಕೆಲಸ ಮಾಡುತ್ತಿದ್ದು ಪರಿಷತ್ತಿನ ಕಟ್ಟಡದಲ್ಲಿ. ಸರ್ಕಾರದ ಯೋಜನೆಯಾಗಿರುವುದರಿಂದ ಕಟ್ಟಡಕ್ಕೆ ಬಾಡಿಗೆಯನ್ನು ಸರ್ಕಾರ ಕೊಡಬೇಕು’ ಎಂದು ಆಡಿಟರ್ ಮತ್ತು ಲಾಯರ್ ತಿಳಿಸಿಕೊಟ್ಟರು.

ಹೆಗಡೆಯವರಿಗೆ ಈ ವಿಚಾರ ತಿಳಿಸಿದೆ. ಅವರು ಒಪ್ಪಿಕೊಂಡು ತಿಂಗಳಿಗೆ ಮೂರೂವರೆ ಸಾವಿರ ರೂಪಾಯಿ ಬಾಡಿಗೆಯಂತೆ ಒಂದು ವರುಷದ ಹಿಂದಿನಿಂದ ಬಾಡಿಗೆ ತೆಗೆದುಕೊಳ್ಳಬಹುದು ಎಂದು ಆದೇಶ ಮಾಡಿದರು. 42 ಸಾವಿರ ರೂಪಾಯಿ ಬಂದಿತ್ತು. 

ಆಗಿನ ಕಾಲದಲ್ಲಿ ಸಮ್ಮೇಳನವನ್ನು ನಮ್ಮೂರಲ್ಲಿ ಮಾಡಬೇಕು ಎಂದು ಸ್ವಾಗತ ಸಮಿತಿ ಮಾಡಿಕೊಂಡು ನಮ್ಮನ್ನು ಆಹ್ವಾನ ಮಾಡುತ್ತಿದ್ದರು. ಸಮ್ಮೇಳನದ ಖರ್ಚೆಲ್ಲಾ ಅವರದ್ದೇ. ನಾವು ಹೋಗಿ ಸಮ್ಮೇಳನ ಮಾಡಿ ಬರುವುದಷ್ಟೇ. 1965ರಲ್ಲಿ ಕಾರವಾರದಲ್ಲಿ ಕಡೆಂಗೋಡ್ಲು ಶಂಕರ ಭಟ್ಟರ ಅಧ್ಯಕ್ಷತೆಯಲ್ಲಿ ಮತ್ತು 67ರಲ್ಲಿ ಶ್ರವಣಬೆಳಗೊಳದಲ್ಲಿ ಉಪಾಧ್ಯೆ ಅವರ ಅಧ್ಯಕ್ಷತೆಯಲ್ಲಿ ಎರಡು ಸಮ್ಮೇಳನಗಳನ್ನು ನಡೆಸಿದೆ. ಒಂದಕ್ಕೆ ಆರು ಸಾವಿರ ಮತ್ತೊಂದಕ್ಕೆ ಮೂರು ಸಾವಿರ ರೂಪಾಯಿ ವೆಚ್ಚವಾಗಿತ್ತು.

ಸಂವಿಧಾನ ರಚನೆ
ಪರಿಷತ್ತು, ಏಕೀರಣವಾದ ಕನ್ನಡ ದೇಶಕ್ಕೆ ಸಾಹಿತ್ಯ ಸಂಸ್ಥೆಯಾಗುತ್ತದೆ. ಇದಕ್ಕೆ ಬೇರೆಯದೇ ಆದ ಸಂವಿಧಾನ ರಚನೆ ಮಾಡಬೇಕು ಎಂದು ವಿಶಿಷ್ಟವಾದ ಸಾರ್ವಜನಿಕ ಸಭೆ ಸೇರಿಸಿ ಹೊಸ ಸಂವಿಧಾನವನ್ನು ಸಭೆಯ ಮುಂದಿಟ್ಟು ಅಂಗೀಕಾರ ಮಾಡಿಸಿಕೊಂಡೆ. ಅದರ ಪ್ರಕಾರ ಪ್ರತಿಯೊಂದು ಜಿಲ್ಲೆಯಿಂದ ಒಬ್ಬ ಸದಸ್ಯ ಪರಿಷತ್ತಿನ ಆಡಳಿತ ಸಮಿತಿಗೆ ಬರುತ್ತಾನೆ. ಅಲ್ಲಿಯವರೆಗೂ ಪರಿಷತ್ತಿಗೆ ಏಳು ಜನ ಮಾತ್ರ ಇದ್ದರು. ಇದರಿಂದ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ದೊರೆತಿತು.

ರಾಯಚೂರು, ಬಿಜಾಪುರ, ಗುಲ್ಬರ್ಗ, ಬೀದರ್ ಜಿಲ್ಲೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಇದೇ ಎನ್ನುವುದೇ ಗೊತ್ತಿರಲಿಲ್ಲ. ಆಗ ಅಲ್ಲಿ ಪ್ರಯಾಣ ಮಾಡಿದೆ. ಹೊಸ ಸಂವಿಧಾನದ ಬಗ್ಗೆ ಹೇಳಿ, ‘ನಿಮಗೆ ಸ್ಥಾನವಿದೆ, ಭಾಗವಹಿಸಬಹುದು’ ಎಂದು ಹೇಳಿದೆ. ಆ ಸಂವಿಧಾನದಡಿಯಲ್ಲಿಯೇ ಈಗಲೂ ಪರಿಷತ್ತು ನಡೆದುಕೊಂಡು ಹೋಗುತ್ತಿದೆ. ಅಧ್ಯಕ್ಷ ಸ್ಥಾನದಿಂದ ನಾನು ನಿರ್ಗಮಿಸಿದಾಗ ಪರಿಷತ್ತಿನ ಹೆಸರಿನಲ್ಲಿ 65 ಸಾವಿರ ರೂಪಾಯಿ ಬ್ಯಾಂಕ್ ಠೇವಣಿ ಇತ್ತು. ಇಂದಿಗೂ ಪರಿಷತ್ತನ್ನು ಉಳಿಸಿದ ಸಂತೋಷ ನನ್ನ ಮನಸ್ಸಿನಲ್ಲಿದೆ.

ನಾನು ಎ.ಎನ್. ಮೂರ್ತಿರಾಯರ ಶಿಷ್ಯ. ಅವರು ಅಧ್ಯಕ್ಷರಾಗಿದ್ದಾಗ ಕಾರ್ಯದರ್ಶಿಯಾಗಿದ್ದೆ. ಆದ್ದರಿಂದ ಪರಿಷತ್ತಿನ ಅಂತರಂಗ ನನಗೆ ತಿಳಿದಿತ್ತು. ಶಂಕರೇಗೌಡರು ಶಿಕ್ಷಣ ಮಂತ್ರಿಗಳಾಗಿದ್ದಾಗ ಪರಿಷತ್ತಿಗೆ ಎರಡು ಸಲ ತಲಾ 10 ಲಕ್ಷ ರೂಪಾಯಿ ಕೊಟ್ಟರು. ಇದರಿಂದ ಹೊಸ ಕಟ್ಟಡಗಳ ನಿರ್ಮಾಣವಾಯಿತು. ಮುಂದೆ ಬಂದ ಸರ್ಕಾರಗಳು ಹಣಕಾಸಿನ ನೆರವು ನೀಡಿದ್ದರಿಂದ ಸಂಸ್ಥೆ ಸಿರಿವಂತವಾಯಿತು. ಮುಂದೆ ಬಂದ ಅಧ್ಯಕ್ಷರೂ ಅವರವರ ಸಾಮರ್ಧ್ಯದ ಪ್ರಕಾರ ಪರಿಷತ್ತನ್ನು ಎತ್ತರಕ್ಕೆ ಬೆಳೆಸಿಕೊಂಡು ಬಂದಿದ್ದಾರೆ.

ಈಗಿನ ಸಾಹಿತ್ಯ ಸಮ್ಮೇಳನಗಳು ವೈಭವದಿಂದ, ದೊಡ್ಡ ಜಾತ್ರೆಯ ರೀತಿ ನಡೆಯುತ್ತಿವೆ. ಲಕ್ಷಾಂತರ ಜನ ಸೇರುತ್ತಾರೆ. ಜನರಿಗೆಲ್ಲ ಊಟ ಹಾಕುವ ವ್ಯವಸ್ಥೆಯೂ ಇದೆ. ಪರಿಷತ್ತು ದೊಡ್ಡದಾಗಿ ಬೆಳೆದಿದೆ. ಅದರ ಪ್ರಯೋಜನ ಪಡೆಯುವುದು ಜನರ ಕೈಯಲ್ಲಿದೆ. ಅದನ್ನು ಪ್ರೀತಿಯಿಂದ ಕಾಪಾಡಬೇಕು, ಬೆಳೆಸಬೇಕು ಎನ್ನುವುದು ನನ್ನ ಅಪೇಕ್ಷೆ.

ವಿಸ್ತಾರವಾದ ಪರಿಷತ್ತು
ಯಾವಾಗ ಏಕೀಕರಣದ ಪ್ರಭಾವ ಪರಿಷತ್ತಿನ ಮೇಲೆ ಬಂದಿತೋ ಅದಕ್ಕೆ ರಾಜಕೀಯ ಆಸಕ್ತಿ ಉಂಟಾಯಿತು. ಸಾಹಿತ್ಯದ ವಿಷಯ ಒಂದನ್ನೇ ಗಮನದಲ್ಲಿ ಇಟ್ಟುಕೊಳ್ಳಲಿಲ್ಲ. ಪರಿಷತ್ತಿನ ಉದ್ದೇಶ ಬದಲಾಗುತ್ತಾ ಹೋಯಿತು. ಪರಿಷತ್ತು ಕೇವಲ ಸಾಹಿತ್ಯ ಪರಿಷತ್ತಾಗಿಲ್ಲ. ಎಲ್ಲ ವಿಚಾರಗಳನ್ನು ಚರ್ಚಿಸುವ ಜತೆಗೆ ಉದ್ದೇಶಗಳು ಬದಲಾಯಿತು. ಪರಿಷತ್ತಿನಿಂದ ನಡೆಯುವ ಸಮ್ಮೇಳನದ ಗೋಷ್ಠಿಗಳಲ್ಲಿ ಮೀಸಲಾತಿ, ಚುನಾವಣೆ, ರಾಜಕಾರಣ– ಹೀಗೆ ಕನ್ನಡನಾಡಿನ ಬೆಳವಣಿಗೆ ಬಗ್ಗೆ ಎಲ್ಲ ದೃಷ್ಟಿಯಿಂದ ಯೋಚಿಸುವಂಥದ್ದಾಗಿದೆ.

ಒಂದು ದೃಷ್ಟಿಯಲ್ಲಿ ಪರಿಷತ್ತು ಆ ಕೆಲಸ ಮಾಡಲೇಬೇಕು. ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಚರ್ಚೆಗಳು ಇರಲಿಲ್ಲ. ಸಾಹಿತ್ಯದ ದೃಷ್ಟಿ ಏಕ ದೃಷ್ಟಿ ಆಗಿತ್ತು. ಈಗ ಆ ಸ್ಥಿತಿ ಇಲ್ಲ. ಡಬ್ಬಿಂಗ್, ಸಿನಿಮಾ, ಸಮಾಜ ಸುಧಾರಣೆ ಮತ್ತಿತರ ವಿಚಾರಗಳ ಮೇಲೂ ಚರ್ಚೆ ನಡೆಯುತ್ತದೆ. ದಲಿತ, ಬಂಡಾಯ, ಪ್ರಗತಿ ಶೀಲ ಇತ್ಯಾದಿ ಹೆಸರಿನಲ್ಲಿ ಕನ್ನಡದಲ್ಲಿ ಅನೇಕ ಅಂದೋಲಗಳು ನಡೆದಿವೆ.

ಇದರಿಂದ ಬರವಣೆಗೆಯಲ್ಲಿ ತುಂಬ ಬದಲಾವಣೆಯಾಗಿವೆ. ಇದರಲ್ಲಿ ಮಹತ್ವ ವಹಿಸಿದವರಲ್ಲಿ ಸಾಹಿತಿಗಳೂ ಆಗಿದ್ದಾರೆ. ಸಾಹಿತ್ಯದಲ್ಲೂ ಗುಂಪುಗಳಾಗಿರುವುದು ಉಂಟು. ಒಟ್ಟಿನಲ್ಲಿ ಚರ್ಚೆ ಹೆಚ್ಚಾಗಿದೆ. ಯಾವ ಒಮ್ಮತವೂ ತಕ್ಷಣ ಕಂಡು ಬರುವುದಿಲ್ಲ. ಈ ಚರ್ಚೆಗಳಿಂದ ಏನಾಗುತ್ತಿದೆ ಎನ್ನುವುದು ಜನರಿಗೆ ಗೊತ್ತಾಗುತ್ತದೆ. ಜನರೂ ಕೂಡ ಚರ್ಚೆ ಮಾಡುತ್ತಿದ್ದಾರೆ, ಆಲೋಚನೆ ಹೆಚ್ಚಾಗಿದೆ.

ಪರಿಷತ್ತಿನ ಆಡಳಿತದಲ್ಲಿ ಬರೀ ಬರಹಗಾರರೇ ಇಲ್ಲ. ಅನೇಕ ರಾಜಕೀಯ ನಿಪುಣರೂ ಸೇರಿಕೊಂಡಿದ್ದಾರೆ. ಯಾವಾಗ ಸಾಹಿತ್ಯ ಅಲ್ಲದೆ ಇತರೆ ವಿಷಯಗಳು ಬಂದಿತೋ, ಅದು ಸ್ವಾಭಾವಿಕವಾಯಿತು. ಇದನ್ನು ವ್ಯತ್ಯಾಸ ಮಾಡುವುದಕ್ಕೆ ಹೋಗಬೇಕಾಗಿಲ್ಲ. ಪರಿಷತ್ತು ಬೆಳೆದುಬಂದಿದ್ದೇ ಆ ರೀತಿ. ಯಾವುದೇ ಚಳವಳಿಯ ಮುಂಭಾದಲ್ಲಿ ಇದ್ದು ಪರಿಷತ್ತು ಕೆಲಸ ಮಾಡಿಲ್ಲ.

ಅದರ ಆಲೋಚನೆ ಏನು ಎನ್ನುವುದನ್ನು ಹೇಳಿಬಿಡುತ್ತದೆ. ಅದರ ಪಾಡಿಗೆ ಅದು ಇರುತ್ತದೆ. ಪರಿಷತ್ತು ಈ ರೀತಿಯಲ್ಲಿಯೇ ಇರಬೇಕು. ಅದು ಆರೋಗ್ಯಕರವಾದದ್ದು. ಪರಿಷತ್ತಿಗೆ ಚುನಾವಣೆ ಬಂದ ನಂತರ ಸದಸ್ಯರ ಸಂಖ್ಯೆ ಹೆಚ್ಚಾಯಿತು.

ಹಣ ಇರುವುದರಿಂದ ಪರಿಷತ್ತು ಪ್ರಧಾನವಾಗಿ ಬೆಳೆಯುತ್ತಿದೆ. ಸಾಹಿತ್ಯದ ಚೌಕಟ್ಟನ್ನು ಮೀರಿ ಬೆಳೆದಿದೆ. ಇದು ಒಳ್ಳೆಯ ಬೆಳವಣಿಕೆ. ಥಿಂಕ್‌ಟ್ಯಾಂಕ್ ಎನ್ನುವ ಹಾಗೆ ಸರ್ಕಾರಕ್ಕೆ ಏನು ಕೆಲಸ ಮಾಡಬೇಕು ಎನ್ನುವುದನ್ನು ಬುದ್ಧಿವಂತಿಕೆಯಿಂದ ತಿಳಿಸುವ ಕೆಲಸವನ್ನು ಮಾಡುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಇದರ ಸಹಾಯ ಬೇಕಾಗುತ್ತದೆ. ಶಿಕ್ಷಣ ಇಲಾಖೆಗಳು ಪರಿಷತ್ತಿನ ನೆರವು ಪಡೆದುಕೊಂಡರೆ ಕನ್ನಡದ ಬೆಳವಣಿಗೆ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.