ಸುತ್ತು ಸುತ್ತೋ ಸುತ್ತು
ರಣ ಕೇಕೆಯ ನಡುವೆ ಅಯೋಮಯ
ಚತುರಂಗ ಬಲ ಸನ್ನದ್ಧ
ನಾಜೂಕು ಹತಾರುಗಳ
ಕುಶಲ ಬಳಕೆ ಹೇಗೆಂಬ
ಚಿಂತೆ ಅವರಿಗೆ
ಇನ್ನೂ ಕೈ ಕಾಲು ಮೂಡಿಲ್ಲ ಗರ್ಭಕ್ಕೆ
ಆಗಲೇ ವ್ಯೂಹ ಭೇದನದ ಛಲ
ಪಂಥಗಳ ನಡುವೆ ತಾನು ತಾನಾಗಿ
ಮೆರೆದು ನಿಲ್ಲುವ
ಜಗವ ನುಂಗುವ ಹಟ
ಕರುಳ ಕುಡಿ ಹೊತ್ತವಳಿಗೆ
ಅದೊಂದು ಕವಿತೆ
ಅವಳ ಕಂಗಳಲಿ ವೀರಾಧಿವೀರರ
ಧೀರ ಕುಲ ಉದ್ಧಾರಕರ ಕನಸು
ಹರಿಯದಿರಲಿ ಸ್ವಚ್ಛಂದ
ಎಂದು ಹಾಕಿ ಇಟ್ಟಿದ್ದಾಳೆ
ಸುಪ್ಪತ್ತಿಗೆಯ ಬೇಲಿ
ಕಟ್ಟಿ ರಂಗಾಣಿ
ಹೊಲಿಯುತ್ತ ಕುಲಾವಿ
ಜೋಗುಳಗಳ ಗುನುಗುನಿಸುತ್ತಿದ್ದಾಳೆ
ಕಾಯ ಬೇಕೆಂದರೆ ಬಲ್ಲವರು
ಗರ್ಭವೋ ಒಳಗೊಳಗೆ ಒದೆಯುತ್ತ
ನುಗ್ಗುವೆ ಎನ್ನುತ್ತಿದೆ
ಹೊತ್ತವಳ ಬದ್ಧತೆಗೆ
ಗರ್ಭದ ಪಕ್ವತೆಗೆ ಅವ
ವ್ಯೂಹ ಭೇದನದ ಕತೆಯ ಉಸುರಿದರೆ
ಅವಳಿಗೋ ನಿದ್ದೆ!
ಅವನ ಕತೆ ನಿಂತಿದೆ
ಗರ್ಭವು ವ್ಯೂಹ ಭೇದನದ ಕನಸು ಕಾಣುತ್ತಲೇ ಇದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.