‘ಊರು ಕೆಟ್ಟು ಸೂರೆಯಾಡುವಲ್ಲಿ ಯಾರು
ಯಾರಿಗೂ ಇಲ್ಲವಯ್ಯಾ; ಬಸವಣ್ಣ ಸಂಗಮಕ್ಕೆ
ಸಂಗ ಬಸವಣ್ಣ ಉಳಿವಿಗೆ, ಪ್ರಭು ಕದಳಿಗೆ
ಮಿಕ್ಕಿದ ಪ್ರಥಮರೆಲ್ಲರೂ ತಮ್ಮ ತಮ್ಮ ಲಕ್ಷ್ಯ ಭಾವಕ್ಕೆ
ಮುಕ್ತಿಯನೈದಿಹರು. ನನಗೊಂದು ಬಟ್ಟೆಯ ತೋರಾ...’
–ಕೋಳಿಗೆ ಮಾದಯ್ಯ
ಅತ್ತ ಮೋದಿ ಸಾಹೇಬರು ಅಮೆರಿಕಾವೆಂಬ ಅಮೆರಿಕಾದ ವೈಟ್‌ಹೌಸ್‌ನಲ್ಲಿ ‘ಅಚ್ಛೇ ದಿನ್ ಆತಾ ಹೈ’ ಎಂದು ಒಬಾಮ ಸಾಹೇಬರ ಕುಟುಂಬದೊಂದಿಗೆ ನಗುತ್ತಾ ಡಿನ್ನರ್ರು ಮಾಡುತ್ತಿರುವಾಗ, ಇತ್ತ ಈ ಕಡೆ ಇಸ್ರೊ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಸಂಭ್ರಮದಿಂದ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಿರುವಾಗ, ಮತ್ತೊಂದು ಕಡೆ ಭಾರತದ ರೈತರು ಹತಾಶೆಯಿಂದ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದರೂ ಡಿಲ್ಲಿಯ ಎಕನಾಮಿಸ್ಟ್‌ಗಳು ಟೀವಿ ಚಾನೆಲ್‌ಗಳಲ್ಲಿ ಕುಳಿತು ಇಂಡಿಯಾದ ಐಟಿ–ಬಿಟಿ ಅಭಿವೃದ್ಧಿಯ ಬಗ್ಗೆ ಕಟವಾಯಿಗಳನ್ನು ಊರಗಲ ಮಾಡಿಕೊಂಡು ದೌಲು ಕೊಚ್ಚಿಕೊಳ್ಳುತ್ತಾ ಇಂಡಿಯಾದಲ್ಲೀಗ ಪ್ರತಿಯೊಬ್ಬರೂ ಸುಖ ಸಂತೋಷಗಳಿಂದ ಮೈದುಂಬಿಕೊಂಡಿರುವರೆಂದೂ, ಬಡತನವನ್ನು ಬುಡ ಸಮೇತ ಕಿತ್ತು ಹಾಕಲಾಗಿದೆಯೆಂದೂ...
ಮುಂತಾಗಿ ನೂರಾರು ದೇವತೆಗಳನ್ನು ಮೈ ಮೇಲೆ ಆವಾಹಿಸಿಕೊಂಡವರಂತೆ ಅಬ್ಬರಿಸುತ್ತಿರುವವಾಗ, ಮತ್ತೂ ಈ ನಾಡಿನ ಬಡತನ, ಕ್ರೌರ್ಯ, ಜಾತಿ, ರಾಜಕೀಯವನ್ನು ಹಿಗ್ಗಾಮುಗ್ಗಾ ಎತ್ತಾಡಿದ್ದ ಘನ ಸಾಹಿತಿ, ಚಿಂತಕ, ಬುದ್ಧಿಜೀವಿಗಳು ರಾಜಧಾನಿಯಲ್ಲಿಯೇ ಠಿಕಾಣಿ ಹೂಡಿ ಪೀಠ, ಪ್ರಶಸ್ತಿ, ಪುರಸ್ಕಾರಗಳಿಗಾಗಿ ನಾಯಿ, ನರಿ, ಹಂದಿಗಳಿಗಿಂತಲೂ ಹೆಚ್ಚಾಗಿ ಹೊಡೆದಾಡಿ, ಬಡಿದಾಡಿಕೊಳ್ಳುತ್ತಿರುವಾಗ ಈ ಪುಣ್ಯ ಭೂಮಿಯ ಲಕ್ಷಾಂತರ ಕುಗ್ರಾಮಗಳಲ್ಲಿ ಒಂದಾದ ಹಂದ್ರಾಳದಲ್ಲಿ ಕದ್ರಿನರಸಿಮ್ಮ ಉರೂಫ್ ಕೊಕ್ಲೋನು ತನ್ನ ಮನೆಯ ಹಟ್ಟಿಯ ಮುಂದೆ ಅಂಗಾತ ಮಲಗಿ ಆಕಾಶದಲ್ಲಿ ಮಿಣ ಮಿಣ ಮಿನುಗುತ್ತಿದ್ದ ಲಕ್ಷಾಂತರ ನಕ್ಷತ್ರಗಳನ್ನು ಕಣ್ತುಂಬಿಸಿಕೊಳ್ಳದೆ ಗಳಿಗೆಗೊಮ್ಮೊಮ್ಮೆ ‘ಅಮ್ಮಾ’, ‘ಅಮ್ಮಾ’ ಎಂದು ಮೂವತ್ತು ವರ್ಷಗಳ ಹಿಂದೆಯೇ ಸತ್ತು ಕ್ವಾಟಮ್ಮನ ಕುಂಟೆಯ ಹೊಲದ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ ತಾಯಿ ಕದುರಮ್ಮನನ್ನು ಕನವರಿಸಿಕೊಳ್ಳುತ್ತಿದ್ದ. ಜಗತ್ತಿನ ಯಾವ ಭಾಗದಲ್ಲಾದರೂ ಮನುಷ್ಯ ಜಾತಿಯಲ್ಲಿ ನೋವುಂಟಾದಾಗ ಬಾಯಲ್ಲಿ ಹೊರಡುವ ಮೊಟ್ಟ ಮೊದಲ ಸ್ವರ ‘ಅಮ್ಮ’ ಎಂಬುದು ಸರ್ವವಿದಿತವಾದ ಸತ್ಯ. ಅವನ ಇವೊತ್ತಿನ ನರಳುವಿಕೆಗೆ ಏಳೆಂಟು ವರ್ಷಗಳಿಂದ ತಿಕದಲ್ಲಿ ಕಾಡುತ್ತಿದ್ದ ಹುಣ್ಣೊಂದೇ ಕಾರಣವಾಗಿರಲಿಲ್ಲವಾಗಿ...
ದೇಶಕ್ಕೆ ಸ್ವಾತಂತ್ರ್ಯ ಬಂದು ಆರೇಳು ವರ್ಷಗಳಿಗೆ ಮದುವೆಯಾದ ಹಂದ್ರಾಳದ ಮಾದಿಗರಟ್ಟಿಯ ದಂಪತಿಗಳಾದ ನರಸಪ್ಪ–ಕದುರಮ್ಮ ದಂಪತಿಗಳಿಗೆ ಐದಾರು ವರ್ಷಗಳಾದರೂ ಸಂತಾನ ಭಾಗ್ಯ ಒದಗಿರಲಿಲ್ಲವಾಗಿ, ಮನೆ ದೇವರಾದ ಕದ್ರಿನರಸಿಂಹನಿಗೆ ಹರಕೆ ಹೊತ್ತುಕೊಂಡ ಎರಡೇ ವರ್ಷದಲ್ಲಿ ಹುಟ್ಟಿದ ಗಂಡು ಮಗುವಿಗೆ ಕದ್ರಿನರಸಿಮ್ಮ ಎಂದೇ ನಾಮಕರಣ ಮಾಡಿ ಸಂಭ್ರಮಿಸಿದ್ದರು.
ನಂತರ ಮತ್ತೆ ಕದುರಮ್ಮ ಗರ್ಭ ಧರಿಸಲಿಲ್ಲವಾದ ಕಾರಣ ಕದ್ರಿನರಸಿಮ್ಮನನ್ನು ತುಂಬಾ ಜತನವಾಗಿ ಸಾಕತೊಡಗಿದರು. ಕದುರಮ್ಮನಂತೂ ಅವನು ಓಡಾಡಲು ಶುರುಮಾಡಿದ ಮೇಲೆ ಕೂಲಿನಾಲಿಗೆ ಹೋದರೂ ಜೊತೆಯಲ್ಲೆ ಕರೆದುಕೊಂಡು ಹೋಗುತ್ತಿದ್ದಳು. ಮಗನನ್ನು ಇಸ್ಕೂಲಿಗಾದ್ರೂ ಹಾಕೋಣ ಎಂದು ನರಸಪ್ಪನೆಂದಾಗ ಕದುರಮ್ಮ ‘ಅಯ್ಯೋ ಇಸ್ಕೂಲ್ಗೋಗಿ ನನ್ಮಗ ದಫೆದಾರ್‍ನೊ, ಸರ್ವೆಯರ್‍ನೊ ಆಗೋದೇನೂ ಬ್ಯಾಡ. ಅವ್ರುಣ್ಣೋದೂ ಹಿಟ್ಟು ಸಾರೇ, ನಾವುಣ್ಣೋದೂ ಹಿಟ್ಟು ಸಾರೇ. ಇರೋನೊಬ್ನು ಓದಿ ಗೌರ್‍ಮೆಂಟ್ ಕೆಲ್ಸುಕ್ಕೆ ಸೇರಿದ್ರೆ, ಅಮೇಕೆ ಕಟ್ಕೊಂಡೋಳು ಮಾಯ ಮಂತ್ರ
ಮಾಡಿ ಎಗುರಿಸ್ಕೊಂಡೋದ್ರೆ ಅನುಭವಿಸೋಳ್ಯಾವೋಳು...’ ಎಂದು ತಗುಲಿಕೊಂಡು ಸುಮ್ಮನಾಗಿಸಿದ್ದಳು.
ಕದ್ರಿನರಸಿಮ್ಮ ಬೆಳೆಯುತ್ತಾ ದೊಡ್ಡವನಾಗುತ್ತಾ ಒಂದು ವಿಶಿಷ್ಠವಾದ ವೃತ್ತಿ ಕಲೆಯನ್ನು ಮೈಗೂಡಿಸಿಕೊಂಡ. ಊರಲ್ಲಿ ಯಾರದೇ ರಾಗಿ ಹೊಲ, ಭತ್ತದ ಗದ್ದೆಗಳನ್ನು ಕೊಯ್ದರೂ ಕದ್ರಿನರಸಿಮ್ಮನು ಗುದ್ದಲಿ, ಸನಿಕೆ, ಕೋಲು ಮತ್ತು ಚೀಲದೊಂದಿಗೆ ಹಾಜರಾಗಿಬಿಡುತ್ತಿದ್ದ. ಇಲಿ, ಹೆಗ್ಗಣಗಳ ಬಿಲಗಳನ್ನು ಅಗೆದು ಅವು ಭೂಮಿಯೊಳಗೆ ಕೂಡಿಟ್ಟಿರುತ್ತಿದ್ದ ರಾಗಿ ತೆನೆ, ಭತ್ತದ ತೆನೆಗಳನ್ನು ಚೀಲಕ್ಕೆ ತುಂಬಿಕೊಳ್ಳುತ್ತಿದ್ದ. ದಿನವೆಲ್ಲಾ ಕೂಲಿ ಮಾಡಿದವರು ತರುತ್ತಿದ್ದ ಕೂಲಿಗಿಂತಲೂ ಐದಾರು ಪಟ್ಟು ಸಂಪಾದನೆಯನ್ನು ಕದ್ರಿನರಸಿಮ್ಮನು ಗಂಟೆಯೊಂದರಲ್ಲಿ ಮಾಡುತ್ತಿದ್ದ. ಮೊದ ಮೊದಲು ಕದುರಮ್ಮ ಕದ್ರಿನರಸಿಮ್ಮನ ಈ ಕೆಲಸಕ್ಕೆ ಅಡ್ಡಗಾಲು ಹಾಕುತ್ತಿದ್ದಳು. ಮಗನು ಹಾಗೆ ಬಿಲಗಳನ್ನು ಅಗೆಯುವಾಗ ಹಾವು, ಚೇಳು, ಮಂಡರಗಪ್ಪೆ ಇತ್ಯಾದಿ ವಿಷ ಜಂತುಗಳು ಕಚ್ಚಿಗಿಚ್ಚಾವೆಂಬ ಭಯವಿತ್ತು.
ಆದರೆ ಕದ್ರಿನರಸಿಮ್ಮನ ಇಂಥ ಘನಂದಾರಿ ಕೆಲಸವನ್ನು ಊರಾದ ಊರೆಲ್ಲ ಕೊಂಡಾಡಲು ಶುರುವಾದ ಮೇಲೆ ದೇವರು ಅವನ ಹಣೇಲಿ ಅದೇ ಬರೆದಿರಬೇಕೆಂದು ಸುಮ್ಮನಾದಳು. ಭೂಮಿಯನ್ನು ಹೆಗ್ಗಣದಂತೆ ಬಗೆಯುತ್ತಿದ್ದರಿಂದ ಜನ ಕದ್ರಿನರಸಿಮ್ಮನನ್ನು ‘ಕೊಕ್ಲೋನು’ ಎಂದು ಕರೆಯತೊಡಗಿದ್ದರು. ಹೆಗ್ಗಣಕ್ಕೆ ತೆಲುಗು ಭಾಷೆಯಲ್ಲಿ ‘ಕೊಕ್ಕು’ ಎಂದು ಕರೆಯುವುದರಿಂದಲೂ ಹಂದ್ರಾಳ, ಹನುಮಂತಪುರ, ಬ್ಯಾಲ್ಯ, ಅಗ್ರಹಾರ ಮುಂತಾದ ಸುತ್ತಮುತ್ತಲ ಹಳ್ಳಿಗಳಲ್ಲಿ ಜನರು ತೆಲುಗುಗನ್ನಡ ಭಾಷೆಯನ್ನು ಉಸಿರಾಡುತ್ತಿರುವುದರಿಂದಲೂ ಕದ್ರಿನರಸಿಮ್ಮನಿಗೆ ‘ಕೊಕ್ಲೋನು’ ಎಂಬ ಅಡ್ಡ ಹೆಸರು ಬಿದ್ದು, ಅದು ಪರ್ಮನೆಂಟಾಗಿ ಅವನ ದೇಹಕ್ಕಂಟಿಕೊಂಡಿತ್ತು.
ಮದುವೆ ಮಕ್ಕಳಾದ ಮೇಲೂ ಕೊಕ್ಲೋನ ವೃತ್ತಿ ನಿರಾಯಾಸವಾಗಿ ನಡೆದಿತ್ತು. ಕದುರಮ್ಮ ಸಾಯುವ ಟೈಮಿನಲ್ಲಿ ‘ಅಪ್ಪಯ್ಯ ನರ್‍ಸಿಮ್ಮ ಬಿಲ ಅಗ್ಯೊ ಕಸ್ಬು ಬಿಟ್ಟು ಕೂಲಿನಾಲಿಗೋಗಿ ಸಂಪಾದ್ನೆ ಮಾಡ್ಕೊ, ಯಂಗೂ ನಿನ್ನೆಂಡ್ತೀನೂ ಗಟ್ಟಿಯಾಗವ್ಳೆ. ಯಾವ್ ಗಳಿಗೇಲಿ ಏನೋ...’ ಎಂದು ಹೇಳಿಯೇ ಹರಹರ ಎಂದಿದ್ದಳು. ಆದರೆ ಕದುರಮ್ಮನನ್ನು ಗುಂಡಿಗೆ ಹಾಕಿದ ಕ್ಷಣವೇ ಅವಳ ಮಾತುಗಳನ್ನು ಮರೆತುಬಿಟ್ಟಿದ್ದ. ಎಂಟು ವರ್ಷಗಳ ಹಿಂದೆ ಹನುಮಂತಪುರದ ವಡ್ಡರ ಗುರೆಪ್ಪನ ರಾಗಿ ಹೊಲ ಕೊಯ್ದಾಗ ಕೊಕ್ಲೋನು ಮಾಮೂಲಿಯಾಗಿ ಗುದ್ದಲಿ, ಸನಿಕೆ, ಕೋಲು, ಚೀಲಗಳನ್ನು ಹೆಗಲಿಗೇರಿಸಿಕೊಂಡು ಹೋಗಿದ್ದ.
ಬಿಲ ಅಗೆದವನಿಗೆ ಅರ್ಧ ಚೀಲಕ್ಕಿಂತಲೂ ಹೆಚ್ಚು ರಾಗಿ ತೆನೆ ಇರುವುದನ್ನು ಕಂಡು ಹಿರಿ ಹಿರಿ ಹಿಗ್ಗಿ ಗುಂಡಿಯಲ್ಲಿ ಕುಂತು ರಾಗಿ ತೆನೆಯನ್ನು ತುಂಬುತ್ತಿದ್ದ. ಕೂತವನ ತಿಕಕ್ಕೆ ಏನೋ ಚುಚ್ಚಿದಂತಾಗಿ ಎದ್ದು ನಿಂತ. ಕೊಳಕು ಮಂಡಲವೊಂದು ಅವನ ತಿಕವನ್ನು ಕಚ್ಚಿಕೊಂಡು ಅಂಟಿಕೊಂಡಿತ್ತು. ತನ್ನ ಜೀವಮಾನದಲ್ಲಿ ಯಾವೊತ್ತೂ ಕೊಕ್ಲೋನು ಅಷ್ಟೊಂದು ದಿಗಿಲುಗೊಂಡಿರಲಿಲ್ಲ. ದೇವರು ಮೈ ಮೇಲೆ ಬಂದವನಂತೆ ಗುಂಡಿಯಲ್ಲಿ ಕುಣಿದಾಡಿದ್ದ. ಕಡೆಗೂ ಅವನ ಒದರಾಟಕ್ಕೆ ಕೊಳಕು ಮಂಡಲ ತಿಕದಿಂದ ಉದುರಿತ್ತು. ಧೈರ್ಯ ಮಾಡಿ ಕೊಳಕು ಮಂಡಲವನ್ನು ಗುದ್ದಲಿಯಿಂದ ಬಡಿದು ಬಡಿದು ಸಾಯಿಸಿದ್ದ. ಆದರೂ ಭಯದ ಛಳಕು ಅವನೆದೆಗೆ ಇಳಿದಿತ್ತು. ಅವೊತ್ತು ಗುದ್ದಲಿ, ಸನಿಕೆ, ಚೀಲ ಮೂಲೆಗೆ ಬಿಸಾಕಿದವನು ಮತ್ತೆ ಕೈಗೆತ್ತಿಕೊಳ್ಳಲಿಲ್ಲ.
ಅದಾದ ತಿಂಗಳಿಗೆ ಕೊಕ್ಲೋನ ಶರೀರದ ತುಂಬೆಲ್ಲಾ ಜಾಲಿ ಮರದ ಕೊರಡಿನಂತೆ ಚಕ್ಕೆ ಚಕ್ಕೆಯಾಗಿ ರೂಪಾಂತರಗೊಂಡಿತ್ತು. ದೇವರು ದಿಂಡಿರುಗಳಲ್ಲದೆ ಮಿಡ್ಗೇಶಿ, ಹಿಂದೂಪುರ, ತುಮಕೂರು ಮುಂತಾದ ಕಡೆ ತಿರುಗಿ ನಾಟಿ ವೈದ್ಯವನ್ನೂ ಮಾಡಿಸಿದ್ದಾಯಿತು. ಮೈ ಮಾಮೂಲಿ ಸ್ಥಿತಿಗೇನೋ ಬಂತು. ಆದರೆ ವರ್ಷದಲ್ಲಿ ಆರೇಳು ತಿಂಗಳು ತಿಕದಲ್ಲಿ ಕಾಡುವ ಹುಣ್ಣು ನಾಟಿ ವೈದ್ಯಕ್ಕೂ ಇಂಗ್ಲಿಷ್ ಔಷಧಿಗೂ ದೇವರು–ದಿಂಡಿರುಗಳಿಗೂ ಜಗ್ಗದಂತಾಗಿಬಿಟ್ಟಿತ್ತು. ಅದು ತನ್ನ ಕರ್ಮ ಅಂತ ತಿಳಿದ ಕೊಕ್ಲೋನು ಅದರೊಂದಿಗೇ ಕಾಲ ಹಾಕುತ್ತಿದ್ದ. ಕೆಲವೊಮ್ಮೆ ನೋವು ಎದೆಗೆ ನುಗ್ಗಿದಂತಾಗಿ ಜೋರಾಗಿ ಕೂಗಿಕೊಳ್ಳುತ್ತಿದ್ದ.
ಈ ಮಧ್ಯೆ ಕಿಬ್ಬೊಟ್ಟೆಯಲ್ಲೂ ಆಗಾಗ ತಡೆಯಲಾದರಷ್ಟು ನೋವು ಕಾಣಿಸಿಕೊಳ್ಳತೊಡಗಿತು. ಬ್ಯಾಲ್ಯದ ಗೌರ್‍ಮೆಂಟ್ ಆಸ್ಪತ್ರೇಲಿ ಕೊಟ್ಟ ಗುಳಿಗೆಗಳು ಕೆಲಸ ಮಾಡದಾದಾಗ ವಸಂತ್‌ಕುಮಾರ ಭಟ್ಟನ ಪ್ರೆವೇಟು ಶಾಪಿನೊಳಕ್ಕೆ ಕಾಲಿಟ್ಟಿದ್ದ. ಭಟ್ಟನು ಕೊಕ್ಲೋನ ಹೊಟ್ಟೆ, ಮೈ, ಎದೆ, ಬೆನ್ನಿನ ಮೇಲೆಲ್ಲ ಸ್ಟೆತೋಸ್ಕೋಪು ಆಡಿಸಿ ‘ಏನಯ್ಯ ಕಿಡ್ನಿಯಲ್ಲಿ ಕಲ್ಲಿದ್ದಂಗೈತೆ...’ ಎಂದಿದ್ದ. ‘ಕಿಡ್ನಿ’ ಎಂಬ ಪದವನ್ನು ಅದೇ ಮೊದಲ ಬಾರಿಗೆ ಕಿವಿ ತೂರಿಸಿಕೊಂಡಿದ್ದ ಕೊಕ್ಲೋನು ‘ಹಂಗಂದ್ರೇನು ಸ್ವಾಮಿ...’ ಎಂದು ಹಲ್ಲು ಗಿಂಜಿದ್ದ.
ಭಟ್ಟನು ಒಂದರ್ಧ ಗಳಿಗೆ ಕಿಡ್ನಿ ಪದಕ್ಕೆ ಕನ್ನಡದ ಪದಕೋಶವನ್ನು ಮನಸ್ಸಿನಲ್ಲಿ ತಡಕಾಡಿ ‘ಮೂತ್ರಪಿಂಡ’ ಎಂದಿದ್ದ. ‘ಅದೆಂಥ ಪಿಂಡ ಸ್ವಾಮಿ. ನಮ್ಮೂರ್ ಬ್ರಾಂಬ್ರ ಸರಸ್ವತಮ್ನೋರೂ ಮಾತ್ ಮಾತಿಗೂ ಪಿಂಡ ಪಿಂಡ ಅಂತಿರ್ತಾರೆ...’ ಎಂದು ಕೊಕ್ಲೋನು ಅಚ್ಚರಿಯ ನಗೆ ನಕ್ಕ. ಕಡೆಗೆ ಭಟ್ಟನು ‘ಉಚ್ಚೆ ಚೀಲ ಕಣಯ್ಯ...’ ಎಂದು ಕಿಬ್ಬೊಟ್ಟೆಯ ಕಡೆ ಬೆರಳು ತೋರಿಸಿದ್ದ. ‘ಅಕ್ಕಿ, ಹುರುಳಿ, ಹಲಸಂದೆ ಕಾಳ್ನಾಗೆ ಅಲ್ಲೊಂದಿಲ್ಲೊಂದು ಕಲ್ಲು ಇದ್ದೇ ಇರ್‍ತದಲ್ಲ ಸ್ವಾಮಿ’ ಎಂದಿದ್ದ ಕೊಕ್ಲೋನು ಬದಲಾಗಿ. ಕೊಕ್ಲೋನಿಂದ ಇಪ್ಪತ್ತು ರೂಪಾಯಿ ಇಸಿದುಕೊಂಡ ಭಟ್ಟನು ‘ತುಮಕೂರು ಜನರಲ್ ಆಸ್ಪತ್ರೆಗೋ, ಇಲ್ಲ ಬೆಂಗ್ಳೂರ್ ವಿಕ್ಟೋರಿಯ ಆಸ್ಪತ್ರೆಗೋ ಹೋದ್ರೆ ಸಲೀಸಾಗಿ ಪುಗ್ಸಟ್ಟೆ ಕಲ್ಲು ತೆಗೀತಾರೆ...’ ಎಂದು ಅಡ್ವೈಸ್ ಮಾಡಿ ಕಳುಹಿಸಿದ್ದ.
ಹೆಂಡತಿ ಬೈದುಕೊಂಡು ಕೊಟ್ಟ ಮುನ್ನೂರು ರೂಪಾಯಿ ಇಸ್ಕೊಂಡು ತಕ್ಕಡಿ ನಾಗನ ಮಗ ದುಬ್ಲೋನನ್ನು ಕರೆದುಕೊಂಡು ತುಮಕೂರು ಆಸ್ಪತ್ರೆಗೆ ಹೋಗಿ, ದಿನಪೂರ್ತಿ ಇದ್ದು ಕಿಡ್ನಿಯೊಳಗಿನ ಕಲ್ಲನ್ನು ತೆಗೆಸಿಕೊಂಡು ಬಂದಿದ್ದ. ಅದಾದ ನಂತರ ಸಣ್ಣ ಪುಟ್ಟ ಕೆಲಸ ಮಾಡಲು ಹೋದರೂ ಸುಸ್ತಾಗಿಬಿಡುತ್ತಿತ್ತು. ಕೊಕ್ಲೋನು ಈಗೀಗ ಕೂಲಿ ಕೆಲಸಕ್ಕೆ ಹೋಗುವುದೇ ಅಪರೂಪವಾಗಿತ್ತು. ಹೆಂಡತಿ ಮಕ್ಕಳು ಕೂಲಿಗೆ ಹೋದರೆ ಕೊಕ್ಲೋನು ಮನೆಯ ಮುಂದೆಯೇ ಕುಳಿತು, ಮಲಗಿ ಕಾಲ ಹಾಕುತ್ತಿದ್ದ. ಮನೆಯ ಮಂದಿಯೆಲ್ಲ ಅವನ ಬಗ್ಗೆ ಅಸಡ್ಡೆ ತೋರಿಸಲಾರಂಭಿಸಿದ್ದರು.
ಹಟ್ಟಿಯಲ್ಲೂ ಕೂಡ ಜನ ‘ಕೊಳಕು ಮಂಡ್ಲ ಮುಟ್ಕೊಂಡ್ ಮೇಲೆ ಅಷ್ಟೆ ಕಣಪ್ಪ, ಅದುಕ್ಕೆ ಜಗತ್ತಿನಾಗೆ ಯಾವ ಔಷ್ದೀನೂ ಇಲ್ಲ...’, ‘ಬ್ಯಾಡ ಬ್ಯಾಡ ಅಂದ್ರೂ ಕೇಳ್ತಿರ್‍ಲಿಲ್ಲ, ಮನುಷ್ಯ ವಿಷ ಜಂತುಗಳ ಜೊತೆ ಸರಸ ಆಡೋಕಾಗ್ತದ...’, ‘ಪಾಪ, ಮೂಕ ಪ್ರಾಣಿಗಳು ಕೂಡಿಟ್ಟ ಆಹಾರ ಕಸ್ಕಂಬತ್ತಿದ್ದ... ಅದೇ ಶಾಪ ಬಡೀತು ನೋಡ್ರಿ...’, ‘ಸುಮ್ನೆ ಎಲ್ರಂಗೆ ಕೂಲಿನಾಲಿ ಮಾಡ್ಕೊಂಡಿದ್ದಿದ್ರೆ ಈ ಗತಿ ಬರೋದೆ...’, ‘ನಾನೇ ಗಂಡ್ಸು ಅಂತ ಬಲು ನಿಗುರ್‍ತಿದ್ದ, ಆಗ್ಬೇಕಾದ್ದೆ...’– ಇತ್ಯಾದಿಯಾಗಿ ಅವನ ಕಿವಿಗೆ ಬೀಳುವಂತೆ ಮಾತನಾಡಿ ಹೊಟ್ಟೆ ಉರಿಸುತ್ತಿದ್ದರು.
ಇವೊತ್ತಿನ ಅವನ ನರಳುವಿಕೆಗೆ ಇವೆಲ್ಲ ಗಂಜರಗೋಳುಗಳೊಂದಿಗೆ ಇನ್ನೊಂದು ಸೇರಿಕೊಂಡಿತ್ತು. ಹೊತ್ತು ಮುಳುಗುವ ಸಮಯದಲ್ಲಿ ಹೆಂಡತಿ ರಾಮಕ್ಕ ‘ಅಯ್ಯೊ ನಿನ್ ಯೋಗ್ತಿಗಿಷ್ಟು ಬೆಂಕಿ ಹಾಕ, ಊರಾದ್ ಊರಿನ ಗಂಡ್ಸ್‌ರೆಲ್ಲ ಟೀವಿ ತಂದು ಮನೆಗೆ ಬಡುದ್ರು. ಎರ್‌್ಡ ವರ್ಸ್‌ದಿಂದ ಬಡ್ಕಂಡ್ರೂ ನೀನು ಕಿವಿಗೆ ಹಾಕ್ಕಂಬ್ಲಿಲ್ಲ. ಹುಡುಗ್ರು ಹೊತ್ತು ಮುಳುಗಿದ್ರೆ ಸಾಕು ಟೀವಿ ನೋಡೋಕೆ ಅಕ್ಕಪಕ್ಕದ ಮನೆಗಳಿಗೆ ಓಡೋಗ್ತಾವೆ. ಒಂದಿನಾನೋ ಎಲ್‌್ಡ ದಿನಾನೋ, ಏನಂದ್ಕಂಬಲ್ಲ ಸರೀಕ್ರು. ನನ್ನೊಟ್ಟೆ ಉರೀತಾ ಬಿದ್ದೈತೆ. ನೀನ್ ನೋಡಿದ್ರೆ ಮೂರೊತ್ತೂ ಮುಲುಕಾಡ್ತ ಹಟ್ಟಿ ಮುಂದೆ ಬಿದ್ದಿರ್‍ತೀಯ. ಯಾವ ಜನ್ಮದಾಗೆ ಏನ್ ಕರ್ಮ ಮಾಡಿದ್ನೊ ನಾನು ನಿನ್ ಕಟ್ಕಂಬಾಕೆ...’ ಎಂದು ತಗುಲಿಕೊಂಡಿದ್ದಳು.
ಕೊಕ್ಲೋನು ನೋಡ ನೋಡುತ್ತಲೇ ಟೀವಿಯೆಂಬ ಮಾಯೆ ಇತ್ತೀಚೆಗೆ ಊರಾದ ಊರನ್ನೆಲ್ಲ ಕಬಳಿಸಿ ಕುಳಿತುಕೊಂಡುಬಿಟ್ಟಿತ್ತು. ಊರಿನ ಮೂರು ಮುಕ್ಕಾಲು ಪಾಲು ಮನೆಗಳಲ್ಲಿ ಟೀವಿಗಳು ರಾರಾಜಿಸುತ್ತಿದ್ದವು. ಕೊಕ್ಲೋನ ಮನೆಯನ್ನೂ ಸೇರಿಸಿ ಹಟ್ಟಿಯ ಏಳೆಂಟು ಮನೆಗಳಲ್ಲಿ ಮಾತ್ರ ಟೀವಿ ದೇವಿ ಕಾಲಿಟ್ಟಿರಲಿಲ್ಲ! ಇತ್ತೀಚೆಗಂತೂ ಸಂಜೆ ಹೊತ್ತು ಊರಿನ ಬೀದಿಗಳು ಸ್ಮಶಾನದಂತೆ ಬಿಕೋ ಅನ್ನಿಸತೊಡಗಿವೆ. ಮೊದ ಮೊದಲೆಲ್ಲ ಜಾತಿಭೇದವಿಲ್ಲದೆ ಊರ ಜನ ಚಾವಡಿಯ ಮುಂದೆ ಗುಂಪು ಗುಂಪುಗಳಾಗಿ ನೆರೆದು ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಕಣ್ಣಾಮುಚ್ಚಾಲೆ, ಕೋಲಾಟ, ಚಂದ್ರಮ್ಮನ ಪೂಜೆ, ನಾಟಕ ಇತ್ಯಾದಿಗಳಲ್ಲಿ ದೊಡ್ಡವರು, ಚಿಕ್ಕವರೆನ್ನದೆ ಬೆರೆತು ಊರು ಗಜಿಬಿಜಿಯಿಂದ ತುಂಬಿರುತ್ತಿತ್ತು.
ಮನೆಯ ಹಟ್ಟಿಯ ಮುಂದೆ ಮಲಗಿ ದೊಡ್ಡವರು ಚಿಕ್ಕವರಿಗೆ ಕಥೆಗಳನ್ನು ಹೇಳುತ್ತಿದ್ದರು. ಹಾಳಾದ ಟೀವಿಗಳು ಬಂದ ಮೇಲೆ ಊರಲ್ಲಿ ಹುಡುಗರು ಕಬ್ಬಡಿ, ಬಂಗ್ರಿ, ಗಿಲ್ಲಿದಾಂಡು, ಗೋಲಿ ಮುಂತಾದ ಆಟಗಳನ್ನೂ ಮರೆತುಬಿಟ್ಟಿದ್ದಾರೆ. ಹೆಂಗಸರುಗಳು ಟೀವಿಯ ಮೇಲೆ ಕಣ್ಣಾಡಿಸುತ್ತಲೇ ಮನೆಗೆಲಸಗಳಲ್ಲಿ ತೊಡಗುತ್ತಾರೆ. ಗಂಡಸರು ಸಹ ಸಂಜೆಯಾಗುತ್ತಲೆ ಹೆಂಗಸರಂತೆ ಮನೆ ಸೇರಿ ಟೀವಿಗಳ ಮುಂದೆ ಕುಳಿತುಬಿಡುತ್ತಾರೆ. ಟೀವಿಗಳು ಬಂದಾಗಿನಿಂದ ಹೆಂಗಸರುಗಳು ಒಮ್ಮೊಮ್ಮೆ ಸಾರಿಗೆ ಉಪ್ಪು, ಹುಣಿಸೆಹಣ್ಣು ಹಾಕುವುದನ್ನು ಮರೆತಿರುವ ಘಟನೆಗಳು, ಹಿಟ್ಟನ್ನು ಸರಿಯಾಗಿ ಬೇಯಿಸದೆ ಮುದ್ದೆ ಕಟ್ಟಿರುವ ಘಟನೆಗಳು ಜರುಗಿ, ಕೆಲವು ಮನೆಗಳಲ್ಲಿ ಆ ಬಗ್ಗೆ ಜಗಳ ಉಂಟಾಗಿರುವುದನ್ನೂ ಕೊಕ್ಲೋನು ನೋಡಿದ್ದಾನೆ.
ಪಕ್ಕದ ಕೇರಿಯ ಹನುಮಂತನಂತೂ ಪ್ರತಿನಿತ್ಯ ಕುಡಿದು ಬಂದು ‘ಯಾವೋನ್ ಕಂಡಿಡುದ್ನೋನಪ್ಪ ಇದುರವ್ವನ್ ಹಳೆ ಪೆಟ್ಗಿನಾ ಬಡುದ್ರು. ಗಂಡ್‌್ಸರ್‍ಗೆ ಹೊಲುದ್ ಕೆಲ್ಸ ಕೆಡಿಸ್ತು. ಹೆಂಗಸುರ್‍ಗೆ ಅಡ್ಗೆ ಕೆಲ್ಸ ಕೆಡಿಸ್ತು, ಹುಡುಗ್ರೋದ್ನ್ ಕೆಡಿಸ್ತು. ಏನ್ ಕೇಡುಗಾಲುಕ್ಕೆ ಬಂತೋ ಕಾಣೆ...’ ಎಂದು ಇಡೀ ಹಟ್ಟಿಗೆ ಕೇಳಿಸುವಂತೆ ಕೂಗುತ್ತಿದ್ದ. ಆಗ ಅವನ ಹೆಂಡತಿ ಈರಕ್ಕ ‘ಓಹೋ ಮುಚ್ಕ ಸಾಕಿನ್ನ... ಪುಗ್ಳಿ ತುಂಬಾ ಹೊಯ್ಕೊಂಡ್ ಬಂದು ಯಂಗಂದ್ರಂಗೆ ಒದುರ್‌ಬ್ಯಾಡ... ನೀವೇನೋ ಗಂಡುಸ್ರು ಪುರವರ, ಬ್ಯಾಲ್ಯ, ಮಧುಗಿರಿ ಅಂತ ಸುತ್ಕಂಬರ್‍ತೀರ. ನಾವೆಲ್ಲೋಗನ. ಮನೆ ಬಿಟ್ರೆ ಹೊಲ, ಹೊಲ ಬಿಟ್ರೆ ಮನೇಲಿ ಬಡ್ಕಂಡ್ ಬಡ್ಕಂಡ್ ಸಾಕಾಗಿರ್‍ತೈತೆ. ಯಂಗೊ ಈ ಟೀವಿಗ್ಳು ಬಂದಿತ್ತಾಗ್ಳಿಂದ ಹೆಂಗ್ಸುರ್‍ಗೆ ಆಯಾಸ ಅಂಬೋದೆ ಕಾಣಿಸ್ಕಂಬ್ತಿಲ್ಲ...’ ಎಂದು ಥೇಟ್ ಹನುಮಂತಪುರದ ಸಪ್ಲಮ್ಮ ದೇವಿಯಂತೆ ಮೇಲೆ ಬಿದ್ದಿದ್ದಳು.
ಆಗ ಹನುಮಂತರಾಯನು ಪಿತ್ಥ ನೆತ್ತಿಗೇರಿದವನಂತೆ ‘ಲಮ್ಡಿಕೆ ನಂಗೆ ತಿಕ್ಕುಲ್ ರೇಗಿಸ್ಬೇಡ. ಅತ್ ಒನ್ಕ ತಗಂಡು ಈ ಪೆಟ್ಗೇನ ಪೀಸ್ ಪೀಸ್ ಮಾಡಿ ಹೊಸ್ಕೆರೆಗಾಕ್ ಬರ್ತೀನಿ....’ ಎಂದು ಮೂಲೆಯಲ್ಲಿದ್ದ ಒನಕೆಯನ್ನು ಕೈಗೆ ತೆಗೆದುಕೊಂಡಿದ್ದ. ಹೆಂಡತಿ ಮಕ್ಕಳು ಸೇರಿಕೊಂಡು ಅವನನ್ನು ಹಟ್ಟಿ ಮುಂದೆ ನಿಲ್ಲಿಸಿ ಎರಡು ಬಿಂದಿಗೆ ತಣ್ಣೀರು ಸುರಿದಿದ್ದರು. ಕುಡಿದಿದ್ದೆಲ್ಲ ಇಳಿದು ಹೋಗಿ ಹನುಮಂತರಾಯನು ಹಿಟ್ಟುಂಡು ಕಂಬಳಿ ಹೊದ್ದು ಟೀವಿಯ ಮುಂದೆ ಕಮುಕ್ ಕಿಮುಕ್ ಎನ್ನದೆ ಕೂತುಕೊಂಡಿದ್ದ. ಅವೊತ್ತಿನಿಂದ ಟೀವಿ ಬಗ್ಗೆ ತುಟಿಕ್ ಪಿಟಿಕ್ ಅನ್ನುತ್ತಿರಲಿಲ್ಲ.
ಆದರೆ ಹಟ್ಟಿಯಲ್ಲಿ ಕೆಲವು ಗಂಡಸರಿಗೆ ಟೀವಿಗಳಿಂದ ಬಹಳಾನೇ ಪ್ರಯೋಜನವಾಗಿತ್ತು. ಮಂಡಲ್ ಪಂಚಾಯ್ತಿ ಮೆಂಬರ್ ಪಿತ್ತೆನಾಗನಂತೂ ‘ಅಪ್ಪಯ್ಯ ಈ ಟೀವಿನ ಯಾ ನನ್ಮಗ ಕಂಡಿದುದ್ನೊ ಅವುನವ್ವುನ್ ಅವ್ನ ಪಾದ ಪೂಜೆ ಮಾಡ್ಬೇಕು. ಟೀವಿ ಬರೋದಕ್ಕಿಂತ ಮೊದ್ಲು ಲೇಟಾಗಿ ಬಂದ್ರೆ ಸಾಕು, ಕುಡಿದು ಬಂದ್ರೆ ಸಾಕು, ನನ್ನೆಂಡ್ತಿ ಕವ ಕವ ಅಂತ ನಾಯಿ ಬಡ್ಕಂಡಂಗೆ ಬಡ್ಕಂಡು ಮೇಲೆ ಬೀಳ್ತಿದ್ಲು. ತುಮಕೂರ್‍ಗೆ ಹೋಗಿ ಒಂದು ಟೀವಿ ತಂದೆ ಬಿಸಾಕ್ದೆ ನೋಡು.... ಈಗ ಎಷ್ಟೊತ್ಗಾದ್ರೂ ಬಾ, ಎಷ್ಟಾದ್ರೂ ಕುಡ್ಕಂಡ್ ಬಾ ಕ್ಯಾರೆ ಕೆತ್ತರೆ ಅಂಬಲ್ಲ, ಎದ್ ಬಂದು ಮುತುವರ್ಜಿಯಿಂದ ತಣಿಗೆ ಹಾಕ್ತಾಳೆ....’ ಎಂದು ಬ್ಯಾಲ್ಯದ ಶರಾಬು ಅಂಗಡಿಯಲ್ಲಿ, ಮಂಡ್ಲ್ ಪಂಚಾಯ್ತಿ ಆಫೀಸ್‌ನಲ್ಲಿ, ಪುರವರದ ಸಂತೆಯಲ್ಲಿ ಎಲ್ಲಂದರಲ್ಲಿ ಪಕಪಕ ನಗುತ್ತಾ ಕೊಚ್ಚಿಕೊಳ್ಳುತ್ತಿದ್ದ. ಊರಲ್ಲಿನ ಕೆಲವು ಗಂಡಸರಂತೂ ಹೊತ್ತು ಮುಳುಗಿದರೆ ಸಾಕು ಹೆಂಗಸರು ಮಕ್ಕಳೊಂದಿಗೆ ಟೀವಿಯ ಮುಂದೆ ಪುಸ ಪುಸ ಬೀಡಿ ಸೇದುತ್ತಾ ಕುಳಿತು ಬಿಡುತ್ತಿದ್ದರು.
ಊಟವನ್ನು ಟೀವಿಯ ಮುಂದೆಯೇ ಮಾಡುತ್ತಿದ್ದರು. ಮಕ್ಕಳಂತೂ ಟೀವಿ ನೋಡ್ತ ನೋಡ್ತಾನೆ ತೂಕಡಿಸಿ ನಿದ್ದೆಗೆ ಜಾರಿ ಬಿಡುತ್ತಿದ್ದರು. ಕೊಕ್ಲೋನಿಗೂ ಕೂಡ ತನ್ನ ಮನೆಗೊಂದು ಟೀವಿಯನ್ನು ತಂದು ಬಡಿಯಬೇಕೆಂಬ ಮನಸ್ಸಿತ್ತು. ಆದರೆ ತಾನು ಕೂಲಿನಾಲಿಗೆ ಹೋಗಲಾಗದ್ದರಿಂದ ದುಡ್ಡು ಸೆಟ್ಟಾಗಿರಲಿಲ್ಲ. ಬ್ಯಾಲ್ಯದ ಟೀವಿ ಮತ್ತು ಡಿಶ್ ಅಂಗಡಿಯ ಶೆಟ್ಟಿಯ ಹತ್ತಿರ ಹೋಗಿ ವಿಚಾರಿಸಿದ್ದ. ಕನಿಷ್ಠ ಎರಡೂವರೆ ಸಾವಿರ ಕಟ್ಟಿದರೆ ಡಿಶ್ ಸಮೇತ ಟೀವಿ ಫಿಟ್ ಮಾಡುವುದಾಗಿಯೂ, ಆಮೇಲೆ ತಿಂಗಳಿಗೆ ಇನ್ನೂರು ರೂಪಾಯಿಗಳಂತೆ ಎರಡು ವರ್ಷ ಕಂತು ಕಟ್ಟಬೇಕಾಗಿ ಬರುತ್ತದೆಂದು ಹೇಳಿದ್ದ ಶೆಟ್ಟಿ. ಮೊದಲು ಚಿಲ್ಲರೆ ಅಂಗಡಿ ಇಟ್ಟಿದ್ದ ಶೆಟ್ಟಿ ಇತ್ತೀಚೆಗೆ ಟೀವಿ ರಿಪೇರಿ ಮಾಡುವುದನ್ನು, ಡಿಶ್ ಫಿಟ್ ಮಾಡುವುದನ್ನು ಪ್ರಾರಂಭಿಸಿದ್ದ.
ಪಕ್ಕದ ಮನೆಯ ಅಂಜಿನಪ್ಪ ‘ಥೂಥೆರಿಕೆ, ಟೀವಿಗ್ಳು ಬಂದಿದೆ ಬಂದಾಟ ಶೆಟ್ಟಿ ದುಡ್ನ ಲಾಟ್ ಹಾಕ್ಬಿಟ್ಟ....’ ಎಂದು ಶೆಟ್ಟಿಯ ಬುದ್ಧಿಯನ್ನು ತಾರೀಪು ಮಾಡಿದ್ದ. ಯಂಗಾದ್ರೂ ಮಾಡಿ ಒಂದು ಟೀವಿಯನ್ನು ತಂದು ಹೆಂಡತಿಯ ಬಾಯಿ ಮುಚ್ಚಿಸಬೇಕೆಂದು ತಲೆಗೆ ತಂದುಕೊಂಡಿದ್ದ. ಸುಮಾರು ಜನರ ಹತ್ತಿರ ಸಾಲ ಕೇಳಿದ್ದ. ಆದರೆ ಅವನಿಗೆ ಸಾಲ ಕೊಡಲು ಯಾರೂ ತಯಾರಿರಲಿಲ್ಲ. ಈ ಸಾರಿ ಸುಗ್ಗಿಯಲ್ಲಿ ಮತ್ತೆ ಬಿಲ ಅಗೆಯುವ ಕಸುಬಿಗೆ ಇಳಿದು ಸಂಪಾದನೆ ಮಾಡಬೇಕೆಂದು ಅಲೋಚಿಸತೊಡಗಿದ. ಸಂಜೆ ಹೆಂಡತಿ ಹೇಳಿದ್ದ ಮಾತುಗಳು ಅವನ ಮೆದುಳನ್ನು ಗುಂಗರಿಯಂತೆ ಎಡೆಬಿಡದೆ ಕೊರೆಯುತ್ತಿದ್ದವು.
ಈ ಎಲ್ಲಾ ಚಿಂತೆಗಳಿಂದಾಗಿ ಇವೊತ್ತು ಸರಿ ಹೊತ್ತಾಗಿದ್ದರೂ ಕೊಕ್ಲೋನಿಗೆ ನಿದ್ದೆ ಬಂದಿರಲಿಲ್ಲ. ಇದು ಸಾಲದೆಂಬಂತೆ ಎರಡು ಮೂರು ತಿಂಗಳ ಹಿಂದೆ ಹಟ್ಟಿಯ ಮುಂದೆ ಕಟ್ಟಿದ್ದ ಲೆಟ್ರಿನ್ ಕಡೆಯಿಂದ ಪಾಯಿಖಾನೆ ವಾಸನೆ ಉಸಿರು ಕಟ್ಟಿಸುವಂತೆ ಬರುತ್ತಿತ್ತು. ಈ ಮೂರ್‍ನಾಲ್ಕು ತಿಂಗಳಿಂದ ಊರಿನ ಎಲ್ಲರ ಮನೆಯ ಮುಂದೆಯೂ ಮಂಡಲ್ ಪಂಚಾಯ್ತಿಯವರು ಅದ್ಯಾವ್ದೊ ಗೌರ್ಮೆಂಟ್ ಸ್ಕೀಂನಲ್ಲಿ ಲೆಟ್ರಿನ್‌ಗಳನ್ನು ಕಟ್ಟಿಸತೊಡಗಿದ್ದರು. ಕೆಲವರ ಮನೆಗಳ ಮುಂದೆ ಲೆಟ್ರಿನ್ ಕಟ್ಟುವುದು ಕಂಪ್ಲೀಟ್ ಆಗಿದ್ದರೆ ಇನ್ನೂ ಕೆಲವರ ಮನೆಗಳ ಮುಂದೆ ಗ್ರ್ಯಾಂಟ್‌ಗಳು ಬರದೆ ಅರ್ಧಕ್ಕೇ ನಿಂತು ಹೋಗಿದ್ದವು. ಅಂಥವುಗಳಲ್ಲೆ ಕಮೋಡುಗಳನ್ನು ಇಟ್ಟು ಪಿಟ್‌ಗಳನ್ನು ತೋಡಿಸಿದ್ದರು. ಕೆಲವು ಮನೆಗಳ ಮುಂದಿನ ಪಿಟ್‌ಗಳನ್ನು ಮುಚ್ಚಿದ್ದರೆ, ಕಲ್ಲು ಬಂಡೆಗಳು ಸಾಲದೆ ಬಂದವೆಂದು ಇನ್ನೂ ಕೆಲವರ ಮನೆಗಳ ಮುಂದಿನ ಪಿಟ್‌ಗಳನ್ನು ಮುಚ್ಚಿರಲಿಲ್ಲ.
ಹೆಂಗಸರು ಲೆಟ್ರಿನ್‌ಗಳಲ್ಲಿ ಒಂದಷ್ಟು ದಿನ ಕೂತುಕೊಂಡು ನೋಡಿದ್ದರು. ಚರಂಡಿಗಳಿಲ್ಲದ ಕಾರಣದಿಂದಾಗಿಯೂ, ಕಮೋಡ್‌ಗಳಲ್ಲಿ ನೀರನ್ನು ಸುರಿಯದೇ ಇದ್ದುದ್ದರಿಂದಲೂ ಕಕ್ಕಸ್ಸು ವಾಸನೆ ಇಡೀ ಊರನ್ನೇ ಸುತ್ತಿಕೊಂಡು ಘಮಘಮಿಸುತ್ತಿತ್ತು. ಹೆಂಗಸರಂತೂ ‘ಅಯ್ಯಯ್ಯಮ್ಮ ಯಾವ್ ಭಂಗೀತುಕ್ಕೆ ಕಟ್ಸಿದ್ರೋನಮ್ಮ ಇವುನ್ನ. ಊರಾಗೆ ಓಡಾಡ್ದಿದ್ದಂಗೆ ಮಾಡ್ಬಿಟ್ರು.....’ ಎಂದು ಮೂಗುಗಳನ್ನು ಮುಚ್ಚಿಕೊಂಡು ಮಾಮೂಲಿಯಾಗಿ ತಿಪ್ಪೆ ಮತ್ತು ಬೇಲಿಯ ಮೊರೆ ಹೋಗಿದ್ದರು. ಮಂಡಲ್ ಪಂಚಾಯ್ತಿಯ ಈ ಕೆಲಸವನ್ನು ಎದುರು ಪಾರ್ಟಿಯ ತೋಪಯ್ಯನು ‘ಥೂ ಇವನವ್ವುನ್ ಊರೆಲ್ಲ ಪಾಯ್ಕಾನೆ ಮಾಡ್ಬಿಟ್ರು. ಒಂದೊಂದು ಲೆಟ್ರಿನ್ ಗುಂಡಿಗೆ ಮೂರ್ ಮೂರ್ ಸಾವ್ರ ಸ್ಯಾಂಕ್ಷನ್ ಆಗಿರೋದು. ಈ ನನ್ಮಕ್ಳು ಒಂದೊಂದು ಸಾವುರ್‍ದಲ್ಲಿ ಪೂರೈಸಿ ಇನ್ನೆರ್‍್ಡೆರ್‍ಡ್ ಸಾವ್ರಾನಾ ನುಂಗಾಕವ್ರೆ. ಹೇಲ್ಗೂ ನಾಲ್ಗೆ ಇಟ್ಬಿಟ್ರು. ಅಯ್ಯಯ್ಯಪ್ಪ ಊರೆಲ್ಲ ಪಾಯ್ಕಾನೆ ವಾಸ್ನೆ ಸುತ್ತಾಡೈತೆ. ಈ ವಾಸ್ನೆಗೆ ಯಾರಾದ್ರೂ ಗೊಟುಕ್‌ಗಿಟುಕ್ ಅಂತಾರೋ ಯಂಗೋ ಕಾಣೆ. ಈ ಅವ್ಯವಹಾರಾನ ಟೀವಿಲಿ ಬರಂಗೆ ಮಾಡ್ದಿದ್ರೆ ನಾನು ಸಿದ್ದಪ್ಪನ ಮಗ ತೋಪಯ್ಯನೇ ಅಲ್ಲ....’ ಎಂದು ಊರೆಲ್ಲ ಹೇಳಿಕೊಂಡು ತಿರುಗಿದ್ದ.
ಮೂರು ತಿಂಗಳ ಹಿಂದೆ ಈ ಸ್ಕೀಂ ಬಗ್ಗೆ ಊರಲ್ಲಿ ಗುಲ್ಲೆದ್ದಾಗ ಕೊಕ್ಲೋನು ಮಂಡಲ್ ಪಂಚಾಯ್ತಿ ಮೆಂಬ್ರು ಮೂರ್ತಪ್ಪನ ಹತ್ತಿರ ಹೋಗಿ ‘ಯಪ್ಪ ನಮ್ಮಟ್ಟಿ ಮುಂದುಕ್ಕೇನು ಲೆಟ್ರಿನ್ ಬ್ಯಾಡ. ನಮಗ್ಯಾರ್‍್ಗೂ ಅದ್ರಾಗೆ ಹೋಗಾಕೆ ಬರಲ್ಲ. ಅದುರ್ ಬದ್ಲು ದುಡ್ಡು ಕೊಡ್ಸೆ ಬಿಡಪ್ಪಾ, ಅತ್ತ ನಾನು ಒಂದು ಟೀವಿ ತಕಂಡ್ ಬಂದು ಮನೇಲಿ ಕುಕ್‌ತೀನಿ....’ ಎಂದು ಗೋಗರೆದಿದ್ದ. ಮೂರ್ತಪ್ಪನು ‘ಮುಚ್ಕಂಡ್ ಹೋಗಲೇ, ನೀನೇಳ್ದಂಗೆ ಕಾಯ್ದೆ ಕಾನೂನು ಮಾಡಾಕಾಗಲ್ಲ. ಗೌರ್‍ಮೆಂಟ್ ಆರ್ಡರ್ನ ತಿದ್ದೋಕಾಗಲ್ಲಣ್ಣೊ ಅಮ್ಮಣಕ್ನ ಬೋಂಡ. ಇಷ್ಟಕ್ಕು ಲೆಟ್ರಿನ್ ಕಟ್ಟಿಸ್ತಿರೋದು ಹೆಣ್ಮಕ್ಕಳಿಗೆ. ಗಂಡ್ಸರೇನು ಎಲ್ಲಂದ್ರಲ್ಲಿ ಕುಕ್ಕರ್‌ಬಡಿತಾವೆ....’ ಎಂದು ರೇಗಿ ಕಳಿಸಿದ್ದ. ಈ ಎಲ್ಲಾ ನೆನಪುಗಳನ್ನು, ನೋವುಗಳನ್ನು ನುಂಗಿ ಯಾವ ಹೊತ್ತಿನಲ್ಲಿ ನಿದ್ರಾದೇವಿ ಕೊಕ್ಲೋನನ್ನು ಆಲಂಗಿಸಿಕೊಂಡಳೋ....
ಅಂತೂ ಸೂರ್ಯ ಪರಮಾತ್ಮನು ಎದ್ದು ಆಕಳಿಸಿ ಕೊಂಡ್ವಾಡಿ ಗುಡ್ಡಗಳ ಮಧ್ಯ ತಲೆ ತೂರಿಸಿ ಮಧುಗಿರಿ ಬೆಟ್ಟದ ಕಡೆ ಕಣ್ಣು ನೆಟ್ಟಾಗ ಕೊಕ್ಲೋನು ‘ಅಮ್ಮಾ’ ಎಂದು ಎದ್ದು ಕುಂತ. ಕಾಫಿಯೆಂಬ ಬಿಸಿನೀರನ್ನು ಕುಡಿದು ನೀರಕಡೆಗೆಂದು ಕುಂಟೆಯ ಕಡೆ ಹೊರಟವನಿಗೆ ರಾಮಕೃಷ್ಣಯ್ಯ ಎದುರಾದ. ‘ಏನಲೇ ಕೊಕ್ಲ ಯಿಂಗಾಗೋದೆ....’ ಎಂದು ವಿಚಾರಿಸಿಕೊಂಡಿದ್ದ. ಕೊಕ್ಲೋನು ಸೊಂಟದ ಮೇಲೆ ಕೈ ಇಟ್ಟುಕೊಂಡು ‘ಯಪ್ಪ ಬ್ಯಾಲ್ಯದ ಶೆಟ್ರಂಗ್ಡೀಲಿ ಒಂದು ಟೀವಿನ ಕೊಡ್ಸ್ಕೊಡಪ್ಪ ಅತ್ತ, ನಾನೂ ನನ್ನೆಂಡ್ತಿ ಕೂಲಿಗೆ ಬಂದು ತೀರಿಸ್ತೀವಿ....’ ಎಂದಿದ್ದ. ರಾಮಕೃಷ್ಣಯ್ಯನದು ಸುಮಾರಾದ ಬೇಸಾಯ ಇತ್ತು.
‘ಊನೇಳಲೇ ನೀನು ಕೂಲಿ ಮಾಡ್ದಂಗೆ ಐತೆ ಇನ್ನ. ಟೀವಿ ಅಂದಿದ್ದಕ್ಕೆ ನೆನಪಾಯ್ತು ನೋಡು. ನನ್ನ ಮಗ ಬೆಂಗ್ಳೂರಿಂದ ಹೊಸ ಕಲರ್ ಟೀವಿ ತಂದವ್ನೆ. ಹಳೇದು ಹಂಗೇ ಐತೆ. ಒಂದ್ ಕೆಲ್ಸ ಮಾಡ್ತೀಯ, ನಮ್ಮ ಮ್ಯಾಗಳ ತೋಟ ಐತಲ್ಲ ನಾಲ್ಕೆರ್ರೆ ಅದುರ್ ಬೇಲಿ ಖರಾಬೆದ್ದೋಗೈತೆ. ಯಂಗೂ ಸುತ್ಲೂ ಕಂಪಿ ಬಿಟ್ಟಿದ್ದೀವಿ. ಒಂದೆರ್‍ಡ್ ದಿನ ಹಿಡಿತೈತೆ ಭದ್ರ ಮಾಡ್ಬಿಡು. ಅತ್ತ ಹಳೆ ಟೀವಿ ನಿಂಗೆ ಕೊಟ್ಬಿಡ್ತೀನಿ....’ ಎಂದು ಹೇಳಿ ರಾಮಕೃಷ್ಣಯ್ಯ ಮನೆಯ ಕಡೆ ಹೊರಟ.
ಕೊಕ್ಲೋನಿಗೆ ಖುಷಿಯೋ ಖುಷಿಯಾಯಿತು. ನಿತ್ಯ ಕರ್ಮಗಳನ್ನು ಮುಗಿಸಿದವನು ರಾಮಕೃಷ್ಣಯ್ಯನ ಮನೆಯ ಮುಂದೆ ನಿಂತಿದ್ದ. ಅಲ್ಲೆ ರೊಟ್ಟಿ ತಿಂದು, ಅವರು ಕೊಟ್ಟ ಗಡಾರಿ, ಕುಡ್ಗೋಲು ತಗೊಂಡು ತೋಟದ ಕಡೆ ಹೊರಟ. ತಲೆಗೆ ಟವಲ್ಲು ಸುತ್ತಿಕೊಂಡು ದೇವರು ಮೈಮೇಲೆ ಬಂದವನಂತೆ ಬೇಲಿ ಹಾಕುವುದರಲ್ಲಿ ನಿರತನಾದ. ತನ್ನ ಶರೀರದಲ್ಲಿ ಇನ್ನೂ ಅಷ್ಟೊಂದು ಶಕ್ತಿ ಇದೆಯಲ್ಲ ಎಂದು ಅವನಿಗೇ ಅಚ್ಚರಿಯಾಗಿತ್ತು. ಟೀವಿಯ ಕನಸಿನ ಮುಂದೆ ಪಿರ್ರೆಯಲ್ಲಿನ ಹುಣ್ಣಾಗಲೀ, ಶರೀರದಲ್ಲಿನ ಸುಸ್ತಾಗಲೀ ಅವನನ್ನು ಸ್ವಲ್ಪವೂ ಕೆಣಕಿರಲಿಲ್ಲ. ಮೂರು ದಿನದಲ್ಲಿ ಬೇಲಿ ಹಾಕುವ ಕೆಲಸ ಮುಗಿದಿತ್ತು. ರಾಮಕೃಷ್ಣಯ್ಯ ಮಾತಿನಂತೆ ಹಳೆಯ ಟೀವಿಯನ್ನು ಕೊಕ್ಲೋನಿಗೆ ಕೊಟ್ಟಿದ್ದ.
ದೇವರನ್ನು ಹೊತ್ತು ತರುವಂತೆ ಕೊಕ್ಲೋನು ಟೀವಿಯನ್ನು ಹೆಗಲ ಮೇಲೆ ಹೊತ್ತು ತಂದು ತನ್ನ ಮನೆಯ ನಡುಮನೆಯ ಗೂಡಿನಲ್ಲಿ ಪ್ರತಿಷ್ಠಾಪಿಸಿದ್ದ. ಹೆಂಡತಿ ರಾಮಕ್ಕ ಇನ್ನೂರು ರೂಪಾಯಿ ಕೊಟ್ಟು ಲಗುಬಗೆಯಿಂದ ಬ್ಯಾಲ್ಯದ ಟೀವಿ ಅಂಗಡಿಯ ಹುಡುಗನನ್ನು ಕರೆಸಿ ಕನೆಕ್ಷನ್ ಕೊಡಿಸಿದಳು. ಅಂದು ಕೊಕ್ಲೋನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ತಾನೇ ಸಾಕಿದ್ದ ಕೋಳಿಯೊಂದನ್ನು ಕೊಯ್ದು ರಾಮಕ್ಕ ಅಕ್ಕಪಕ್ಕದವರ ಹೊಟ್ಟೆ ಉರಿಸಿದ್ದಳು. ಕೊಕ್ಲೋನು ಏಳು ಗಂಟೆಗೆಲ್ಲ ಬಿಸಿ ಬಿಸಿ ಕೋಳಿ ಸಾರಿನಲ್ಲಿ ಮುದ್ದೆ ಉಂಡ. ಮನೆ ಮಂದಿಯೆಲ್ಲ ಟೀವಿಯ ಮುಂದೆ ಕುಳಿತಿದ್ದರು.
ಟೀವಿಯ ಮುಂದೆ ಕುಳಿತಿದ್ದ ಕೊಕ್ಲೋನಿಗೆ ಮೂರು ದಿನಗಳಿಂದ ಇಲ್ಲದ ಸುಸ್ತು ಒಮ್ಮೆಲೆ ಅಮರಿಕೊಂಡಂತೆ ಚಳಿ ಜ್ವರ ಕಾಣಿಸಿಕೊಂಡಿತ್ತು. ‘ಯಾಕೊ ಸಳ ಸಳಿ ಆಗ್ತೈತೆ....’ ಎಂದು ಕಂಬಳಿಯನ್ನು ಹೊದ್ದು ಹಟ್ಟಿ ಮುಂದೆ ಈಚಲು ಚಾಪೆಯನ್ನು ಹಾಸಿಕೊಂಡು ಮಲಗಿದ್ದ. ರಾತ್ರಿ ಹತ್ತುಗಂಟೆಯಾಗಿದ್ದರೂ ಬಾಗಿಲು ಮುಚ್ಚಿಕೊಂಡು ಹೆಂಡತಿ ಮಕ್ಕಳು ಆನಂದದಿಂದ ಟೀವಿಯನ್ನು ನೋಡುತ್ತಿರುವಾಗ ಕೊಕ್ಲೋನ ಎದೆ ಮೇಲೆ ಯಾರೋ ಕುಂತಂತಾಗಿ ಉಸಿರಾಡಲು ಒದ್ದಾಡತೊಡಗಿದ. ಮೈಯ್ಯಾದ ಮೈಮೇಲೆಲ್ಲ ಸಾವಿರಾರು ಇಲಿ, ಹೆಗ್ಗಣ, ಚೇಳು, ಮಂಡರಗಪ್ಪೆಗಳು ಓಡಾಡಿದಂತಾಗಿ ಜೋರಾಗಿ ಕಿರುಚಿಕೊಂಡಿದ್ದ ಅಷ್ಟೇ. ಕೊಕ್ಲೋನ ಶರೀರದೊಳಗಿನ ಉಸಿರು ಹೊರಕ್ಕೆ ಬಂದಿತ್ತು. ಮತ್ತೆ ಆ ಉಸಿರು ಕೊಕ್ಲೋನ ಶರೀರದೊಳಕ್ಕೆ ಹೋಗಲು ಸುತಾರಾಂ ಒಪ್ಪಲಿಲ್ಲ. ಈ ಎಲ್ಲಾ ವಿದ್ಯಮಾನಗಳು ಮನೆಯ ಒಳಗೆ ಟೀವಿ ನೋಡುತ್ತಿದ್ದವರಿಗೆ ಗೊತ್ತಾಗಲೇ ಇಲ್ಲ.
ಬೆಳಿಗ್ಗೆ ಹೊತ್ತೇರಿ ಮೂರು ಬಾರು ಆಗಿದ್ದರೂ ಕೊಕ್ಲೋನು ಕಂಬಳಿಯಲ್ಲಿ ಮಿಸುಕಾಡದಿರುವುದನ್ನು ಕಂಡ ಹೆಂಡತಿ ‘ಓಹೋ ಎದ್ದೇಳು ಸಾಕಿನ್ನು. ರಾತ್ರಿ ಕೋಳಿ ಬಾಡು ಯೇಟ್ರುವಾಗಿರ್‍ಬೇಕು. ಕಾಫಿ ಕುಡಿವೇಳು....’ ಎಂದು ಕಂಬಳಿಯನ್ನು ಎಳೆದಿದ್ದಳು. ಆದರೆ ಕೊಕ್ಲೋನು ಎದ್ದೇಳಲಿಲ್ಲ. ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ತೋಪಯ್ಯನು ಕೊಕ್ಲೋನ ಹಟ್ಟಿ ಮುಂದೆ ನಿಂತು ‘ನಾನೇಳ್ಳಿಲ್ವೆ ಈ ಪಾಯ್ಕಾನೆ ವಾಸ್ನೆ ಯಾರುನ್ನಾದ್ರೂ ಬಲಿ ತಕಂಬ್ತತೆ ಅಂತ. ಇನ್ಯಾರ್‍್ಯಾರ್‍ಗೆ ಕಾದೈತೋ....’ ಎಂದು ಟೀವಿ ಚಾನಲ್‌ನವರಿಗೆ ಮೊಬೈಲ್ ಒತ್ತಿದ. ಒಂದೂವರೆ ಗಂಟೆಯೊಳಗೆ ಮೂರ್‍ನಾಲ್ಕು ಚಾನೆಲ್‌ಗಳವರನ್ನು ಹೊತ್ತ ವ್ಯಾನು ಹಂದ್ರಾಳದಲ್ಲಿ ಬಂದು ನಿಂತಿತ್ತು.
ಊರಿನಲ್ಲಿ ಅರ್ಧಕ್ಕೇ ನಿಂತಿದ್ದ ಲೆಟ್ರಿನ್‌ಗಳನ್ನು, ಮುಚ್ಚದ ಪಿಟ್‌ಗಳನ್ನು, ಮೂಗು ಮುಚ್ಚಿಕೊಂಡು ನಿಂತಿರುವ ಹೆಂಗಸರು – ಮಕ್ಕಳನ್ನು, ಕೊಕ್ಲೋನ ಹೆಣವನ್ನು ಕ್ಲೋಸ್ ಅಪ್‌ನಲ್ಲಿ ಪದೇ ಪದೇ ತೋರಿಸುತ್ತಾ ತಮ್ಮ ತಮ್ಮ ಚಾನೆಲ್‌ಗಳಲ್ಲಿ ಬ್ರೇಕಿಂಗ್ ನ್ಯೂಸನ್ನು ಬಿತ್ತರಿಸತೊಡಗಿದರು. ಜಿಲ್ಲಾ ಪಂಚಾಯ್ತಿ ಪ್ರೆಸಿಡೆಂಟನ್ನು ಚಾನೆಲ್ಲೊಂದು ಹಿಗ್ಗಾಮುಗ್ಗಾ ಜಾಡಿಸಿತ್ತು. ಇನ್ನೊಂದು ಚಾನೆಲ್ ಸಮಾಜ ಕಲ್ಯಾಣ ಸಚಿವರನ್ನು, ಗ್ರಾಮೀಣಾಭಿವೃದ್ಧಿ ಸಚಿವರನ್ನು ಸಂಪರ್ಕಿಸಿತ್ತು. ಸಮಾಜ ಕಲ್ಯಾಣ ಸಚಿವರು ಕೊಕ್ಲೋನ ಸಾವಿಗೆ ವಿಷಾದವನ್ನು ವ್ಯಕ್ತಪಡಿಸುತ್ತಾ ಕೂಡಲೇ ಅರ್ಧಕ್ಕೆ ನಿಂತಿರುವ ಲೆಟ್ರಿನ್‌ಗಳನ್ನು ಕಂಪ್ಲೀಟ್ ಮಾಡುವುದಾಗಿಯೂ, ಸತ್ತ ಕೊಕ್ಲೋನ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿಯೂ ಘೋಷಿಸಿದ್ದರು.
ಊರಿನ ಎಲ್ಲರ ಮನೆಗಳಲ್ಲಿಯೂ ತಮ್ಮ ಊರನ್ನು, ಕೊಕ್ಲೋನ ಹೆಣವನ್ನು ಟೀವಿಗಳಲ್ಲಿ ಕಣ್ತುಂಬಿಕೊಂಡಿದ್ದರು. ಸ್ವತಃ ಕೊಕ್ಲೋನ ಹೆಂಡತಿ – ಮಕ್ಕಳು ಕೂಡ ತಮ್ಮ ಮನೆಯಲ್ಲಿನ ಟೀವಿಯಲ್ಲಿ ಕೊಕ್ಲೋನ ಹೆಣವನ್ನು, ಮಿನಿಸ್ಟ್ರುಗಳು ಮಾತನಾಡುವುದನ್ನು ನೋಡಿ ಸೋಜಿಗಪಡುತ್ತಾ, ಅಳುತ್ತಾ ಇಂಥ ಒಂದು ಅಪರೂಪದ ದೃಶ್ಯವನ್ನು ನೋಡಲು ಕೊಕ್ಲೋನೂ ಜೀವಂತವಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೋ ಎಂದು ಆಲೋಚನೆಗೆ ಬಿದ್ದಿದ್ದರು. ಊರ ಮುಂದಿನ ಮನೆಯ ರಂಗೇಗೌಡರು ಟೀವಿಯನ್ನು ನೋಡುತ್ತಾ– ‘ಹೋಗ್ಲಿ ಬಿಡು ಕೊಕ್ಲೋನು ಈ ಊರ್‍ನಲ್ಲಿ ಹುಟ್ಟಿದ್ದಕ್ಕೂ ಸಾರ್ಥಕ ಆಯ್ತು. ಸಾಯ್ತ ಸಾಯ್ತ ನಮ್ಮೂರ್‍ನ ಜಗತ್ತಿಗೇ ತೋರ್ಸಿ ಸತ್ತ....’ ಎಂದು ತಮ್ಮಲ್ಲೇ ಗೊಣಗಿಕೊಂಡಿದ್ದರು.
ಪಕ್ಕದ ಮನೆಯ ಸಣ್ಣಪ್ಪನು ಕೊಕ್ಲೋನ ಮನೆಯ ಮುಂದೆ ಬೆಂಕಿ ಕೊಳ್ಳಿಗಳನ್ನು ಹಾಕುತ್ತಾ ‘ಎಂಥಾ ಅದೃಷ್ಟವಂತ ಕೊಕ್ಲೋನು. ಸಾಯ್ತಾ ಸಾಯ್ತ ಅನಾಮತ್ತಾಗಿ ಎರಡು ಲಕ್ಷ ಸಂಪಾದ್ನೆ ಮಾಡ್ಬಿಟ್ಟ....’ ಎಂದು ಮಾತನಾಡಿದ್ದ. ಅವನ ಮಾತುಗಳನ್ನು ಕೇಳಿಸಿಕೊಂಡ ತೋಪಯ್ಯನು ‘ನಾನು ಟೀವಿಯವರನ್ನ ಫೋನ್ ಮಾಡಿ ಕರೆಸ್ದೆ ಇದ್ದಿದ್ರೆ ಕೊಕ್ಲೋನಿಗೆ ಇಂಥ ಅದೃಷ್ಟ ಎಲ್ ಬರೋದು. ಅದ್ರಾಗೆ ನಂಗೊಂದಿಪ್ಪತ್ ಸಾವ್ರ ಕೊಡು ಅಂತ ರಾಮಕ್ಕನ್ನ ಕೇಳ್ತೀನಿ....’ ಎಂದು ಬೆಂಕಿಕೊಳ್ಳಿಯಿಂದ ಗಣೇಶ ಬೀಡಿಯನ್ನು ಹಚ್ಚಿಕೊಂಡು ಪುಸ ಪುಸ ಸೇದುತ್ತಾ ಆಕಾಶಕ್ಕೆ ಊದುರವನ್ನು ಬಿಡತೊಡಗಿದ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.